ಖತರ್ನಾಕ್​ ಕಳ್ಳನಿಗೂ ಒಂದು ದೇವಾಲಯವಿದೆ...!

ವಿಶಾಂತ್​

0

ದೇವಸ್ಥಾನ. ದೇವರಿಗೆ ಕಟ್ಟಿಸುತ್ತೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವ ಕಂಡ ಮಹಾನ್ ಚೇತನಗಳಿಗೆ ನಿರ್ಮಿಸಿದ್ದೇವೆ. ಕೆಲ ಸಿನಿಪ್ರೇಮಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ನೆಚ್ಚಿನ ತಾರೆಗಳಿಗೆ ದೇವಾಲಯ ನಿರ್ಮಿಸಿದ್ದೂ ಆಗಿದೆ. ಆದ್ರೆ ದೇವರ ನಾಡು ಎಂದೇ ವಿಖ್ಯಾತಿ ಪಡೆದಿರುವ ಕೇರಳದಲ್ಲಿ ಒಬ್ಬ ಕಳ್ಳನ ಹೆಸರಿನಲ್ಲಿ ದೇವಸ್ಥಾನವಿದೆ. ವಿಶೇಷ ಅಂದ್ರೆ ಈ ದೇವಾಲಯಕ್ಕೆ ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವಿದೆ.

ಕೇರಳದ ರಾಬಿನ್ ಹುಡ್, ಕಾಯಂಕೂಳಂ ಕೋಚುನ್ನಿ

ಕಾಯಂಕೂಳಂ ಕೋಚುನ್ನಿ. 19ನೇ ಶತಮಾನದಲ್ಲಿ ಕೇರಳವನ್ನೇ ನಡುಗಿಸಿದ್ದ ಡಕಾಯಿತ. ಈ ಯುವರ್‍ಸ್ಟೋರಿಯ ನಾಯಕನೂ ಈತನೇ. ಹೌದು, ಮೂಲತಹ ಹುಟ್ಟಿದ್ದು, ಬೆಳೆದದ್ದು ಹಾಗೂ ತನ್ನ ದರೋಡೆ ವೃತ್ತಿಯನ್ನು ಮಾಡಿದ್ದೆಲ್ಲವೂ ಟ್ರವಂಕೂರ್‍ನಲ್ಲಿ. ಹೆದ್ದಾರಿಯಲ್ಲಿ ಸಾಗುವ ಶ್ರೀಮಂತರನ್ನು ಅಡ್ಡಗಟ್ಟಿ, ದರೋಡೆ ಮಾಡುವುದೇ ಕೋಚುನ್ನಿ ಕೆಲಸ. ನಂತರ ಅದರಿಂದ ಬಂದ ಹಣ, ಒಡವೆಗಳನ್ನು ಕೇವಲ ತಾನಷ್ಟೇ ಇಟ್ಟುಕೊಳ್ಳುತ್ತಿರಲಿಲ್ಲ. ತನ್ನ ತಂಡದವರಿಗೆ ಕೊಟ್ಟೂ ಸುಮ್ಮನಾಗುತ್ತಿರಲಿಲ್ಲ. ಬದಲಾಗಿ ಸ್ಥಳೀಯ ಹಾಗೂ ಸುತ್ತಮುತ್ತಲಿನ ಬಡ ಜನರಿಗೆ ದಾನ ಧರ್ಮ ಮಾಡುತ್ತಿದ್ದ. ಹೀಗಾಗಿಯೇ ಟ್ರಾವಂಕೂರ್ ರಾಜನಿಗೆ ದೊಡ್ಡ ವಿಲನ್‍ನಂತೆ ತಲೆನೋವಾಗಿದ್ದರೂ, ಬಡ ಜನರ ಪಾಲಿನ ಹೀರೋ ಆಗಿದ್ದ ಕೋಚುನ್ನಿ. ಬಡ ಹೆಣ್ಣುಮಕ್ಕಳ ಮದುವೆ ಮಾಡಿಸುತ್ತಿದ್ದ. ಜೊತೆಗೆ ತನ್ನ ಧರ್ಮದ ಬಗ್ಗೆ ತುಂಬಾ ನಿಷ್ಠೆ ಹೊಂದಿದ್ದ ಕೋಚುನ್ನಿ, ಪ್ರತಿದಿನ ನಮಾಜ್ ಮಾಡುವುದನ್ನು ಮರೆಯುತ್ತಿರಲಿಲ್ಲ. ಹೀಗೆ ನೂರಾರು ಮಂದಿ ಶ್ರೀಮಂತರನ್ನು ದೋಚಿ ಸಾವಿರಾರು ಜನ ಬಡಬಗ್ಗರಿಗೆ ಸಹಾಯ ಮಾಡಿದ್ದ ಕೋಚುನ್ನಿ ಅದೃಷ್ಟ ಕೈಕೊಟ್ಟಿತ್ತು. 1859ರಲ್ಲಿ ಸೈನಿಕರ ಕೈಗೆ ಸಿಕ್ಕಿಬಿದ್ದ ಆತನನ್ನು ತಿರುವನಂತಪುರಂನ ಪೂಜಾಪುರ ಜೈಲಿನಲ್ಲಿ ಗಲ್ಲಿಗೇರಿಸಲಾಯ್ತು.

ಕೋಚುನ್ನಿ ಬಾಲ್ಯ

ಕೋಚುನ್ನಿ ತಂದೆಯೂ ಒಬ್ಬ ಕಳ್ಳನಾಗಿದ್ದ. ಆದ್ರೂ ಕಡುಬಡತನ. ಇದ್ರಿಂದಾಗಿ ಹೊಟ್ಟೆ ತುಂಬಿಸಿಕೊಳ್ಳಲು ಬಾಲ್ಯದಲ್ಲೇ ಕೋಚುನ್ನಿ ತನ್ನ ಕುಟುಂಬ ತೊರೆಯಬೇಕಾಯ್ತು. ಕ್ರಮೇಣ ಈ ಊರು ಸೇರಿದ ಬಾಲ ಕೋಚುನ್ನಿ ತನ್ನ ಕಷ್ಟಗಳನ್ನು ಒಬ್ಬ ಬ್ರಾಹ್ಮಣನ ಬಳಿ ಹೇಳಿಕೊಂಡ. ನಂತರ ಮುಸ್ಲಿಂ ಬಾಲಕ ಎಂಬುದನ್ನೂ ಲೆಕ್ಕಸಿದೇ ಆ ಬ್ರಾಹ್ಮಣ ಕೋಚುನ್ನಿಯನ್ನು ಕರೆತಂದು ಆತನ ಸ್ನೇಹಿತನ ದಿನಸಿ ಅಂಗಡಿಯಲ್ಲಿ ಕೆಲಸ ಕೊಡಿಸಿದ. ಕ್ರಮೇಣ ಆ ಅಂಗಡಿಯ ನಿರ್ವಹಣೆಯ ಜವಾಬ್ದಾರಿ ಪೂರ್ತಿ ಕೋಚುನ್ನಿ ಮೇಲೆಯೇ ಬಿತ್ತು. ಹೀಗೇ ಒಮ್ಮೆ ಅಂಗಡಿ ಮಾಲೀಕನೊಂದಿಗೆ ಹೆಚ್ಚಿನ ದಿನಸಿ ತರಲು ಕೋಚುನ್ನಿ ಅಳಪ್ಪುಳಗೆ ಹೋಗಬೇಕಾಯ್ತು. ದಿನಸಿ ಹೊತ್ತು ದೋಣಿಯಲ್ಲಿ ವಾಪಸ್ಸಾಗುವಾಗ ಜೋರು ಚಂಡಮಾರುತ ಪ್ರಾರಂಭವಾಯ್ತು. ಆಗ ಆತಂಕದಿಂದ ಅಂಗಡಿ ಮಾಲೀಕ ಚಡಪಡಿಸತೊಡಗಿದ. ಆದ್ರೆ ಆತನಿಗೆ ಸಮಾಧಾನ ಮಾಡಿದ ಕೋಚುನ್ನಿ ತಾನೇ ಆ ದೋಣಿಯನ್ನು ದಡ ಮುಟ್ಟಸಿದ್ದ. ಇದರಿಂದ ಕೋಚುನ್ನಿ ಮೇಲಿನ ನಂಬಿಕೆ ದುಪ್ಪಟ್ಟಾಗಿ, ಮಾಲೀಕ ಎಲ್ಲಿಗೆ ಹೋಗಬೇಕಾದ್ರೂ ಆತನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ.

ಇದರ ನಡುವೆಯೇ ಆ ಊರಿಗೆ ಒಮ್ಮ ಮುಸ್ಲಿಂ ಗುರು ಕಳಾರಿಪಾಯಟ್ಟು ಸಮರ ಕಲೆ ಕಲಿಸಲು ಬಂದ. ಕೋಚುನ್ನಿ ಕೂಡ ಕಲಾರಿಪಾಯಟ್ಟು ಕಲಿಯಲು ಆ ಗುರುವಿನ ಬಳಿ ಹೋದ. ಆದ್ರೆ ಕೋಚುನ್ನಿ ತಂದೆ ಕಳ್ಳ ಎಂಬುದು ತಿಳಿದು ಆ ಗುರು, ಕೋಚುನ್ನಿಗೆ ‘ನೀನೂ ನಿನ್ನ ತಂದೆಯಂತೆಯೇ ಕಳ್ಳನಾಗುವೆ. ಹೀಗಾಗಿ ನಿನಗೆ ಸಮರ ಕಲೆಯನ್ನು ಕಲಿಸುವುದಿಲ್ಲ’ ಎಂದು ತಿರಸ್ಕರಿಸಿದ್ದ. ಆದ್ರೆ ಕೋಚುನ್ನಿ ಎದೆಗುಂದಲಿಲ್ಲ, ಆ ಗುರುವಿಗೆ ತಿಳಿಯದೆಯೇ ಕದ್ದು ಮುಚ್ಚಿ ನೋಡುತ್ತಲೇ ತಾನೂ ಕಲಾರಿಪಾಯಟ್ಟು ಕಲಿತ. ಇದರ ನಡುವೆ ವಿಧಿಲಿಖಿತ ಎಂಬಂತೆ ಆತ ಕೆಲಸ ಕಳೆದುಕೊಳ್ಳಬೇಕಾಯ್ತು. ನಂತರ ಟ್ರಾವಂಕೂರ್‍ಗೆ ಬಂದ ಕೋಚುನ್ನಿ ಕಳ್ಳತನಕ್ಕಿಳಿದಿದ್ದ. ನಂತರ ಎಲ್ಲ ಇತಿಹಾಸ...

ಕೋಚುನ್ನಿ ಸತ್ತರೂ, ಆತನ ನೆನಪು ಉಳಿಯಿತು

ಹೀಗೆ ಕೋಚುನ್ನಿ ದಯನೀಯ ಮರಣವನ್ನಪ್ಪಿದ. ಆದ್ರೆ ಅದಾಗಲೇ ತಾನೊಬ್ಬ ಮುಸ್ಲಿಂ ಆಗಿದ್ದರೂ, ಮುಸ್ಲಿಮರಿಗೆ ಮಾತ್ರವಲ್ಲ ಹಿಂದೂಗಳಿಗೂ ಸಹಾಯ ಮಾಡುವ ಮೂಲಕ ಜನರಿಗೆ ಹತ್ತಿರವಾಗಿದ್ದ. ಹೀಗಾಗಿಯೇ ಹಿಂದು, ಮುಸ್ಲಿಂ ಎಂಬ ಭೇದ ಭಾವ ಮಾಡದೇ ಜನ ಪಾತಂಥಿಟ್ಟ ಜಿಲ್ಲೆಯಲ್ಲಿ ಆತನ ಹೆಸರಿನ ದೇವಾಲಯ ನಿರ್ಮಿಸಿದ್ರು. ಕೋಳೆನ್‍ಚೆರ್ರಿಯ ಕರಮ್‍ವೇಲಿಯ ಎಡಪ್ಪರ ಮಾ¯ದೇವನಾಡ ದೇವಸ್ಥಾನದಲ್ಲೇ ಕೋಚುನ್ನಿ ಪ್ರತಿಮೆ ಪ್ರತಿಷ್ಠಾಪಿಸಿ, ಗುಡಿ ನಿರ್ಮಿಸಲಾಗಿದೆ. ಹೀಗೆ ಸುಮಾರು 150 ವರ್ಷಗಳ ಹಿಂದಿನಿಂದಲೂ, ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಹಿಂದು ಹಾಗೂ ಮುಸ್ಲಿಂ ಭಕ್ತರು ಒಂದಾಗಿ ಬಂದು ಆತನಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಕೋಚುನ್ನಿ ದೇವಾಲಯಕ್ಕೆಂದೇ ಒಬ್ಬರು ಅರ್ಚಕರಿದ್ದು, ಪ್ರತಿ ತಿಂಗಳು ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಎಲ್ಲಕಿಂತ ಅಚ್ಚರಿಯ ವಿಷಯ ಅಂದ್ರೆ ಆ ಸಂದರ್ಭದಲ್ಲಿ ಕೋಚುನ್ನಿಗೆ ಇಷ್ಟ ಎನ್ನಲಾಗುತ್ತಿದ್ದ ದೀಪ, ಅಗರಬತ್ತಿ, ಅಡಿಕೆ ಎಲೆ, ಪಾನ್ ಬೀಡ, ತಂಬಾಕು, ಮದ್ಯ ಹಾಗೂ ಗಾಂಜಾಗಳನ್ನೂ ತಂದು ದೇವಾಲಯದಲ್ಲಿ ಎಡೆ ಇಡಲಾಗುತ್ತದೆ.

ಹೀಗೊಂದು ಕಥೆ!

ಕೋಚುನ್ನಿ ಎಷ್ಟೇ ಖತರ್ನಾಕ್ ಕಳ್ಳನಾಗಿದ್ದರೂ, ಆತನಿಗೆ ಈ ಭಾಗದ ಶ್ರೀಮಂತರೊಂದಿಗೆ ಸ್ನೇಹವೂ ಇತ್ತಂತೆ. ಹೀಗಾಗಿಯೇ ತನ್ನ ಗೆಳೆಯರ ಮನೆಯಲ್ಲಿ ಆತ ಯಾವುದೇ ಕಾರಣಕ್ಕೂ ಏನನ್ನೂ ಕದಿಯುತ್ತಿರಲಿಲ್ಲವಂತೆ. ಹೀಗೇ ಒಮ್ಮೆ ವರನಪಲ್ಲಿಯ ಪಣಿಕ್ಕರ್ ಕುಟುಂಬದ ಗೆಳೆಯನೊಂದಿಗೆ ಕೋಚುನ್ನಿ ಮಾತನಾಡುತ್ತಿದ್ದನಂತೆ. ಆಗ ಪಣಿಕ್ಕರ್ ತನ್ನ ಮನೆಯಲ್ಲಿ ಏನಾದ್ರೂ ಕದಿಯುವಂತೆ ಸವಾಲು ಹಾಕಿದ್ದನಂತೆ. ಆಗ ಆಯ್ತು ಅಂತ ಸವಾಲು ಸ್ವೀಕರಿಸಿದ ಕೋಚುನ್ನಿ ಅದೇ ರಾತ್ರಿ ತನ್ನ ಕೈಚಳಕ ತೋರಿಸಿದ್ದಾನೆ. ಪಣಿಕ್ಕರ್ ಮಗುವ ಕೋಣೆಯಲ್ಲಿ, ಆತನ ಮಂಚದ ಪಕ್ಕದಲ್ಲಿದ ಬಟ್ಟಲನೇ ಕದ್ದು, ಮನೆಯ ಹೊರಗೆ ಬಾಗಿಲ ಮುಂದೆ ಇಟ್ಟಿದ್ದಾನೆ. ಬೆಳಗೆದ್ದು, ಅದನ್ನೊ ನೋಡಿದ ಪಣಿಕ್ಕರ್‍ಗೆ ಆಶ್ಚರ್ಯವೋ ಆಶ್ಚರ್ಯ. ಮನೆಯ ಎಲ್ಲಾ ಬಾಗಿಲು, ಕಿಟಕಿಗಳನ್ನು ಹಾಕಿದ್ದರೂ ಕಳ್ಳತನ ಮಾಡಲು ಹೇಗೆ ಸಾಧ್ಯ ಅಂತ ಕೋಚುನ್ನಿಯನ್ನೇ ಕೇಳಿದ್ದಾನೆ. ಅದಕ್ಕೆ ಕೋಚುನ್ನಿ ನಕ್ಕು ಸುಮ್ಮನಾಗಿದ್ದಾನೆ.