ಜನಸೇವೆ ಮಾಡಲು ತಂತ್ರಜ್ಞರಿಗೆ ಒಳ್ಳೆಯ ಅವಕಾಶ- ಉತ್ತಮ ಆಡಳಿತಕ್ಕಾಗಿ ಬೆಂಗಳೂರಲ್ಲಿ `ಹ್ಯಾಕಥಾನ್' ಸ್ಪರ್ಧೆ

ಟೀಮ್​​ ವೈ.ಎಸ್​. ಕನ್ನಡ

0

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರ ಇನ್ನಷ್ಟು ಅಭಿವೃದ್ಧಿ ಮಾಡಬಹುದಿತ್ತು ಅಂತಾ ಎಲ್ಲರೂ ಅಂದುಕೊಂಡಿರ್ತಾರೆ. ಈಗ ಆ ಅವಕಾಶ ನಿಮಗೇ ಒದಗಿ ಬಂದಿದೆ. ಮೊಬೈಲ್ ಆ್ಯಪ್ ಕ್ಷೇತ್ರದಲ್ಲಿ ನೀವು ತಂತ್ರಜ್ಞರಾಗಿದ್ದರೆ ಸಮಾಜದಲ್ಲಿರುವ ಸಮಸ್ಯೆಗಳ ಅರಿವು ನಿಮಗಿದ್ದೇ ಇರುತ್ತೆ. ಕರ್ನಾಟಕ ಸರ್ಕಾರದ ಮಾಹಿತಿ-ತಂತ್ರಜ್ಞಾನ ಇಲಾಖೆ, ಬಿಟಿ ಮತ್ತು ಎಸ್&ಟಿ, ಹಾಗೂ ಮೊಬೈಲ್ 10 ಜೊತೆಯಾಗಿ `ಆ್ಯಪ್‍ಥಾನ್' ಆಯೋಜಿಸಿವೆ. ಇದರಲ್ಲಿ ನೀವು ಕೂಡ ಪಾಲ್ಗೊಳ್ಳಬಹುದು.

ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ದೊಡ್ಡ ಕ್ರಾಂತಿಯಾಗ್ತಾ ಇದೆ. ಅದನ್ನು ಬಳಸಿಕೊಂಡು ಅಸಂಖ್ಯಾತ ಜನರು ಎದುರಿಸ್ತಾ ಇರೋ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಎಲ್ಲಾ ರಾಜ್ಯ ಸರ್ಕಾರಗಳ ಯೋಜನೆ. ಕರ್ನಾಟಕ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ರಾಜ್ಯ ಸರ್ಕಾರ ಹಾಗೂ ಮೊಬೈಲ್ 10 ಜೊತೆಯಾಗಿ `ಕ್ರೌಡ್ ಸೋರ್ಸಿಂಗ್' ಅನ್ನೋ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿವೆ. ಪ್ರತಿಭಾವಂತ ಎಂಜಿನಿಯರ್‍ಗಳನ್ನು, ತಂತ್ರಜ್ಞರನ್ನು ಒಂದೆಡೆ ಸೇರಿಸುವುದು ಈ ಕಾರ್ಯಕ್ರಮದ ಉದ್ದೇಶ. ಸದ್ಯ ದೇಶ ಎದುರಿಸ್ತಾ ಇರೋ ಪ್ರಮುಖ ಐದು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಸವಾಲು ಅವರ ಮುಂದಿದೆ. ಸರ್ಕಾರದ ನಿರೀಕ್ಷೆಗಳು ಏನು ಅನ್ನೋದನ್ನು ನೋಡೋದಾದ್ರೆ,

1. ಹೊಸ ಜಿ2ಸಿ ಸೇವೆಯನ್ನು ಪರಿಚಯಿಸಲು ವಿನೂತನ ಪರಿಕಲ್ಪನೆ ಅಥವಾ ಸದ್ಯ ಇರುವ ಸೇವೆಯನ್ನೇ ಇನ್ನಷ್ಟು ಪರಿಣಾಕಾರಿಯಾಗಿಸುವುದು.

2. ವೆಬ್‍ಸೈಟ್ ಆಧಾರಿತ ಜಿ2ಸಿ ಸಂವಹನ ಸುಧಾರಣೆಗೆ ಮೊಬೈಲ್ ಸೌಲಭ್ಯಗಳ ಬಳಕೆ.

3. ಸಾರ್ವಜನಿಕ ಇಲಾಖೆಗಳ ಪ್ರಸಕ್ತ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳುವುದು, ಪರಿಹಾರಗಳನ್ನು ನಕಲು ಮಾಡದಂತೆ ತಡೆಯುವುದು ಮತ್ತು ಚಾಲ್ತಿಯಲ್ಲಿರುವ ವೆಬ್ ಸೇವೆಯನ್ನು ಸುಲಭವಾಗಿ ಅಳವಡಿಸಿಕೊಳ್ಳುವುದು.

4. ಆಡಳಿತ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಕೈಲಾದ ಕೊಡುಗೆ ನೀಡಲು ಸಾಮಾಜಿಕ ಕಳಕಳಿಯುಳ್ಳ ಅಸಂಖ್ಯಾತ ನಾಗರೀಕರು ಆಸಕ್ತಿ ಹೊಂದಿದ್ದಾರೆ. ನಾಗರೀಕರು ತಮ್ಮ ಸ್ವಂತ ಸಾಧನವನ್ನು ವ್ಯವಸ್ಥೆ ಸುಧಾರಣೆ ಪ್ರಕ್ರಿಯೆಯ ಭಾಗವನ್ನಾಗಿಸಲು ಪ್ರಯತ್ನಿಸಬೇಕು.

5. ಬಳಕೆ ಮತ್ತು ತ್ವರಿತ ಪರಿಹಾರ ಕಾರ್ಯಗಳನ್ನು ಪರಸ್ಪರ ಸಂಪರ್ಕಿಸುವುದರಿಂದ ಜನರನ್ನು ಉತ್ತೇಜಿಸಬಹುದು, ಇನ್ನಷ್ಟು ಮಂದಿ ಈ ಪ್ರಯತ್ನದಲ್ಲಿ ಕೈಜೋಡಿಸುವಂತೆ ಮಾಡಬಹುದು.

6. ಪರಿಹಾರದ ಪರಿಣಾಮವನ್ನು ಹೆಚ್ಚಿಸಲು ಇತ್ತೀಚಿನ ತಂತ್ರಜ್ಞಾನದ ಭಾಗಗಳನ್ನು ಬಳಕೆ ಮಾಡಿಕೊಳ್ಳಬೇಕು.

ಇದರ ಹಿಂದಿರುವ ಉದ್ದೇಶ ಏನು ಅನ್ನೋದನ್ನು ನೋಡೋದಾದ್ರೆ,

1. ಉದ್ಯೋಗದ ಹುಡುಕಾಟದಲ್ಲಿರುವವರನ್ನು ಸುಶಿಕ್ಷಿತರನ್ನಾಗಿಸುವುದು, ಅವರಿಗೆ ಮಾಹಿತಿ ನೀಡುವುದು ಮತ್ತು ಅವರನ್ನು ಎಂಗೇಜ್ ಆಗಿಡುವುದು. (ಉದ್ಯೋಗ ಮತ್ತು ತರಬೇತಿ ಇಲಾಖೆ)

2. ಸ್ವಚ್ಛ ಭಾರತಕ್ಕಾಗಿ ನಗರಗಳ ಸ್ವಚ್ಛತೆ (ನಗರಾಭಿವೃದ್ಧಿ ಇಲಾಖೆ)

3. ಅಪಘಾತ ಪ್ರಕರಣಗಳ ಎಫ್‍ಐಆರ್ ಬಗ್ಗೆ ಸುಲಭ ವರದಿ ಮಾಡುವುದು ಮತ್ತು ಪರಿಶೀಲಿಸುವುದು (ನಗರ ಭೂ ಸಾರಿಗೆ ಇಲಾಖೆ)

4. ಕರ್ನಾಟಕವನ್ನು ಬಾಲ ಕಾರ್ಮಿಕ ಮುಕ್ತ ರಾಜ್ಯವನ್ನಾಗಿಸುವುದು (ಕಾರ್ಮಿಕ ಇಲಾಖೆ)

5. ಸುಲಭವಾಗಿ ದೂರುಗಳ ವರದಿ ಮತ್ತು ನಿವಾರಣಾ ವ್ಯವಸ್ಥೆ (ನಗರಾಭಿವೃದ್ಧಿ ಇಲಾಖೆ)

ನೀವು ಮಾಡಬೇಕಾಗಿರುವುದೇನು?

ನಿಮ್ಮ ಪರಿಹಾರ ನಾವೀನ್ಯತೆಯಿಂದ ಕೂಡಿರಬೇಕು, ಸುಲಭವಾಗಿ ಅಳವಡಿಸುವಂತಿರಬೇಕು. ವಿನೂತನ `ಗವರ್ನ್‍ಮೆಂಟ್ 2 ಕನ್ಸ್ಯೂಮರ್' ಸೇವೆಯನ್ನು ಸುಲಭವಾಗಿ ಪರಿಚಯಿಸುವ ಪರಿಕಲ್ಪನೆ ನಿಮ್ಮದಾಗಿರಬೇಕು. ಅಥವಾ ಅಸ್ತಿತ್ವದಲ್ಲಿರುವುದಕ್ಕಿಂತ ನಿಮ್ಮ ಪರಿಕಲ್ಪನೆ ಉತ್ತಮವಾಗಿರಬೇಕು. ವೆಬ್‍ಸೈಟ್ ಆಧಾರಿತ ಜಿ2ಸಿ ಸಂವಹನ ಸುಧಾರಣೆಗೆ ಮೊಬೈಲ್ ಸೌಲಭ್ಯಗಳ ಬಳಕೆ ಮಾಡುವಂತಿರಬೇಕು. ನೀವು ಸೂಚಿಸುವ ಪರಿಹಾರ ಜನರನ್ನು ಸುಧಾರಣೆಯತ್ತ ಕೊಂಡೊಯ್ಯಲು ಸಾಮಾಜಿಕ ಕಾಳಜಿ ಮೂಡಿಸುವಂತಿರಬೇಕು. ಒಂದು ಬಟನ್ ಒತ್ತುವ ಮೂಲಕ ವಂಚನೆ ಹಾಗೂ ತಪ್ಪಾದ ದೂರುಗಳನ್ನು ಪತ್ತೆ ಮಾಡುವಂತಹ ಆ್ಯಪ್‍ನ್ನು ಅಭಿವೃದ್ಧಿಪಡಿಸಬೇಕು. ಸ್ಥಳ ಆಧಾರಿತ ಸೇವೆ, ಶಾಖ ನಕ್ಷೆಗಳು, ಜಿಯೋ ಟ್ಯಾಗ್ ಫೋಟೋಗಳು, ಮೊಬೈಲ್ ಆಧಾರಿತ ರಿಜಿಸ್ಟ್ರೇಶನ್, ಪುಶ್ ಸರ್ವೀಸ್‍ನಂತಹ ಸವಾಲುಗಳಿಗೆ ಪರಿಹಾರ ಒದಗಿಸಬೇಕು. ಈ `ಹ್ಯಾಕಥಾನ್' ಈವೆಂಟ್ ಅನ್ನು ಬೆಂಗಳೂರಿನ `ಟೆಕ್ನಾಲಜಿ ಸ್ಪೇಸ್ ಐಟಿಇ.ಬಿಝ್' ನಲ್ಲಿ ಇದೇ ಡಿಸೆಂಬರ್ 9 ಮತ್ತು 10ರಂದು ಆಯೋಜಿಸಲಾಗಿದೆ.

ಅದರಲ್ಲಿ ನಿಮಗೇನು ಸಿಗಲಿದೆ?

ಹ್ಯಾಕಥಾನ್‍ನಲ್ಲಿ ಸ್ಪರ್ಧಿಸಿದ್ರೆ ಭಾರತದ ಪ್ರತಿಭಾವಂತ ತಂತ್ರಜ್ಞಾನ ತಜ್ಞರ ಜೊತೆ ಮಾತನಾಡುವ ಸೌಭಾಗ್ಯ ನಿಮ್ಮದಾಗಲಿದೆ. ಅವರಲ್ಲಿ ಕೆಲವರು ನಿಮ್ಮ ಪ್ರತಿಸ್ಪರ್ಧಿಗಳು ಕೂಡ ಆಗಿರಬಹುದು. ಸರ್ಕಾರ ಮತ್ತು ಕಾರ್ಪೊರೇಟ್ ಕಟ್ಟಾಳುಗಳನ್ನು ಒಳಗೊಂಡ ತೀರ್ಪುಗಾರರ ತಂಡವೇ ಅಲ್ಲಿರಲಿದೆ. ದೇಶದ ಮೂಲೆ ಮೂಲೆಯಿಂದ ಬಂದ ತಂತ್ರಜ್ಞಾನ ಉತ್ಸಾಹಿಗಳು, ಸಾಹಸೋದ್ಯಮ ನಿಧಿ ಹೂಡಿಕೆದಾರರು, ನೇಮಕಾತಿ ಎಕ್ಸ್‍ಪರ್ಟ್‍ಗಳು, ಸರ್ಕಾರದ ಹಿರಿಯ ಅಧಿಕಾರಿಗಳ ಸಮಾಗಮವೇ ಈ ಕಾರ್ಯಕ್ರಮದಲ್ಲಿ ಆಗಲಿದೆ. ಡಿಸೆಂಬರ್ 3ರೊಳಗೆ ಸಲ್ಲಿಸಿದ ಮೂಲ ಮಾದರಿಗಳ ಆಧಾರದ ಮೇಲೆ 25 ಆ್ಯಪ್ ಡೆವಲಪರ್‍ಗಳ ತಂಡವನ್ನು ಮೊದಲ ಹಂತದ ಸ್ಕ್ರೀನಿಂಗ್ ಮೂಲಕ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಈ ಅಭ್ಯರ್ಥಿಗಳು ಡಿಸೆಂಬರ್ 9ರಂದು ನಡೆಯಲಿರುವ 8 ಗಂಟೆಗಳ ಸವಾಲಿನಲ್ಲಿ ತಮ್ಮ ಹ್ಯಾಕಿಂಗ್ ಪ್ರತಿಭೆಯನ್ನು ಪ್ರದರ್ಶಿಸಬೇಕು. ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದ್ದು, ಡಿಸೆಂಬರ್ 10ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಸೃಜನಶೀಲತೆ, ವಿವರದ ಕಡೆಗಿರುವ ಗಮನ, ಪರಿಹಾರಗಳಲ್ಲಿರುವ ಆಳ ಮತ್ತು ಬಳಕೆಯ ರೀತಿಯನ್ನು ಗಮನದಲ್ಲಿರಿಸಿಕೊಂಡು ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಹ್ಯಾಕಥಾನ್‍ನಲ್ಲಿ ಗೆದ್ದವರಿಗೆ 3.5 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಜೊತೆಗೆ ಸರ್ಕಾರದ ಜೊತೆ ಕಾರ್ಯನಿರ್ವಹಿಸುವ ಅವಕಾಶ ಕೂಡ ಲಭ್ಯವಾಗಲಿದೆ. ನಿಮ್ಮ ಪ್ರತಿಭೆಯನ್ನು ಬಳಸಿಕೊಂಡು ಜನರ ಸೇವೆ ಮಾಡಲು ಇದೊಂದು ಉತ್ತಮ ಅವಕಾಶ.

ಅನುವಾದಕರು: ಭಾರತಿ ಭಟ್​​​

Related Stories

Stories by YourStory Kannada