ಬಡ ಮಕ್ಕಳ ಆಶಾಕಿರಣ ಹಾಜಬ್ಬ- ಅನಕ್ಷರಸ್ಥನ ಅಕ್ಷರ ಜ್ಞಾನ

ಪೂರ್ವಿಕಾ

ಬಡ ಮಕ್ಕಳ ಆಶಾಕಿರಣ ಹಾಜಬ್ಬ- ಅನಕ್ಷರಸ್ಥನ ಅಕ್ಷರ ಜ್ಞಾನ

Sunday November 29, 2015,

3 min Read


ಶಿಕ್ಷಣ ಅನ್ನೋದು ಮನುಷ್ಯನಿಗೆ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಹಣ ಆಸ್ತಿ ಇಲ್ಲ ಅಂದ್ರು ಓಕೆ, ಆದ್ರೆ ಶಿಕ್ಷಣ ಮಾತ್ರ ಇರ್ಲೇ ಬೇಕು ಅನ್ನೋದು ಸರ್ವೆ ಸಾಮಾನ್ಯ.ಇನ್ನು ಇಂದಿನ ದಿನಗಳಲ್ಲಿ ಅದೆಷ್ಟೋ ಜನ ಈ ಶಿಕ್ಷಣವನ್ನೇ ವ್ಯಾಪಾರವನ್ನಾಗಿಸಿಕೊಂಡು ಜೀವನ ಸಾಗಿಸೋದರ ಜೊತೆಗೆ ಅದೆಷ್ಟೋ ಮಕ್ಕಳ ಜೀವನಕ್ಕೆ ಕಂಟಕವಾಗಿದ್ದಾರೆ. ಇಂದಿನ ಕಾಸ್ಟ್ಲೀ ದುನಿಯಾದಲ್ಲಿ ಒಂದು ಮಗುವಿಗೆ ಶಿಕ್ಷಣ ಕೊಡಿಸೋದೆ ತುಂಬಾ ಕಷ್ಟ. ಯಾವುದಾದ್ರು ಮಗುವಿನ ಶಿಕ್ಷಣಕ್ಕೆ ಸಹಾಯ ಮಾಡಿ ಅಂದ್ರೆ ಹಿಂದು ಮುಂದು ನೋಡುವವರೆ ಹೆಚ್ಚು. ಆದ್ರೆ ಇಲ್ಲೊಬ್ಬರಿದ್ದಾರೆ. ಈತ ಶಿಕ್ಷಣದ ಹರಿಕಾರ. ಇವರಿಂದ ಒಂದು ಊರಿನ ಮಕ್ಕಳೆಲ್ಲ ಉಚಿತ ಶಿಕ್ಷಣ ಪಡೆಯುವತಾಂಗಿದೆ. ಅಷ್ಟೂಮಕ್ಕಳ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಹರೇಕಳ ಊರಿನ ಹಾಜಬ್ಬ.

image


ಹಾಜಬ್ಬ ಮೂಲತ ಮಂಗಳೂರಿನ ಹರೇಕಳ ಊರಿನವರು. ಕಿತ್ತಳೆ ಹಣ್ಣು ಮಾರೋದು ಹಾಜಬ್ಬರ ಕೆಲಸ. ಹೀಗೆ ಹಣ್ಣು ಮಾರುವಾಗ ವಿದೇಶಿ ವ್ಯಾಪಾರಿಯೊಬ್ಬರು ಇಂಗ್ಲೀಷ್ ನಲ್ಲಿ ಹಣ್ಣಿನ ಬೆಲೆ ಕೇಳುತ್ತಾರೆ. ಶಿಕ್ಷಣ ಇಲ್ಲದ ಹಾಜಬ್ಬರಿಗೆ ಬೆಲೆ ಹೇಳಲು ಗೊತ್ತಾಗುವುದಿಲ್ಲ. ಇದರಿಂದ ಮನನೊಂದ ಹಾಜಬ್ಬಅವ್ರಿಗೆ ಶಿಕ್ಷಣ ಎಷ್ಟು ಮುಖ್ಯ ಅನ್ನೋದು ಮನದಟ್ಟು ಆಗುತ್ತೆ. ತನ್ನದೇ ಊರಿನಲ್ಲಿದ್ದ ಮಕ್ಕಳಿಗೆ ಹತ್ತಿರದಲ್ಲೇ ಇದ್ದ ಖಾಸಗಿ ಶಾಲೆಗೆ ಸೇರಿಸಲು ಊರಿನ ಜನರು ಪರದಾಡುವುದನ್ನ ನೋಡಿ ಹಾಜಬ್ಬ ನಮ್ಮ ಊರಿಗೆ ಉಚಿತ ಶಿಕ್ಷಣ ಸಿಗೋ ಶಾಲೆ ಬೇಕು ಅನ್ನೋ ನಿರ್ಧಾರಕ್ಕೆ ಬರುತ್ತಾರೆ. ಹೇಗಾದ್ರೂ ಮಾಡಿ ಶಾಲೆ ಕಟ್ಟಲೇ ಬೇಕು ಅಂತ ನಿರ್ಧಾರ ಮಾಡಿ ಶಾಲೆ ಕಟ್ಟಲು, ಜಾಗಕ್ಕಾಗಿ ಸರ್ಕಾರಿ ಕಛೇರಿಗಳನ್ನ ಅಲೆಯೋದಕ್ಕೆ ಶುರು ಮಾಡಿದ್ರು. ಮೂರು ದಿನಗಳ ನಂತ್ರ ಹಾಜಬ್ಬರ ಆಸೆಯಂತೆ ಸರ್ಕಾರದಿಂದ ಸ್ವಲ್ಪ ಜಾಗ ಸಿಕ್ತು. 

ಜಾಗ ಸಿಕ್ಕ ನಂತ್ರ ಅಧಿಕಾರಿಗಳು ಸ್ಥಳ ಕೊಟ್ಟು ಕೈ ತೊಳೆದು ಕೊಳ್ತಾರೆ. ಆದ್ರೆ ಹಾಜಬ್ಬ ಸುಮ್ಮನಾಗೋದಿಲ್ಲ. ಹಾಜಬ್ಬ ಅಂದಿನಿಂದ ಹೆಚ್ಚಿನ ಸಮಯ ಕಿತ್ತಳೆ ಹಣ್ಣು ಮಾರೋದಕ್ಕೇ ಶುರು ಮಾಡ್ತಾರೆ. ಯಾಕಂದ್ರೆ ಕಿತ್ತಳೆ ಹಣ್ಣನ್ನ ಮಾರಿ ಬಂದ ಹಣದಿಂದ ಹಾಜಬ್ಬ ತನ್ನ ಹೆಂಡತಿ ಮಕ್ಕಳನ್ನ ಸಾಕಬೇಕಿತ್ತು. ಇನ್ನು ಹಣ್ಣು ಮಾರಿ ಬಂದ ನಂತ್ರ ಹಳೆ ಬಟ್ಟೆ ತೊಟ್ಟು ಹಾಜಬ್ಬ ಶಾಲೆಗೆ ಕೊಟ್ಟ ಜಾಗವನ್ನ ಸಮತಟ್ಟು ಮಾಡೋ ಕೆಲಸ ಪ್ರಾರಂಭ ಮಾಡ್ತಾರೆ. ಇದಾದ ನಂತ್ರ ಹೆಚ್ಚುಹೊತ್ತು ಹಣ್ಣು ಮಾರಿ ಕೊಡಿಟ್ಟ ಹಣದಲ್ಲಿ ಶಾಲೆ ಕಟ್ಟಲು ಜಲ್ಲಿ ಸೀಮೆಂಟ್ ಇಟ್ಟಿಗೆಯನ್ನ ತರಿಸಿ ಶಾಲೆ ಕಟ್ಟಡ ಕಟ್ಟಲು ಶುರು ಮಾಡುತ್ತಾರೆ.

image


1999ರಲ್ಲಿ ಹರೇಕಳದಲ್ಲಿ ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಪಾಠ ಶಾಲೆ ಶುರುವಾಗುತ್ತೆ. ಶಾಲೆ ಕಟ್ಟಿ ಸುಮ್ಮನಾಗದ ಹಾಜಬ್ಬ ಶಾಲೆಯ ಕಸ ಗುಡಿಸೋದು ,ತೊಳೆಯೋ ಕೆಲಸವನ್ನ ತಾವೇ ಮಾಡುತ್ತಾರೆ.

ಇದಾದ ನಂತ್ರ ಹಾಜಬ್ಬರಿಗೆ ಮತ್ತೊಂದು ಆಸೆ ಹುಟ್ಟಿಕೊಳ್ಳುತ್ತೆ. ಐದನೆ ತರಗತಿಯವರೆಗೂ ಇರೋ ಶಾಲೆಯನ್ನ ಏಳನೇ ತರಗತಿಯವರೆಗೂ ವಿಸ್ತರಿಸೋದು. ಹಿಂದಿನಂತೆಯೇ ಮತ್ತೇ ಹಾಜಬ್ಬ ಮತ್ತೆ ಕಿತ್ತಳೆ ಹಣ್ಣನ್ನ ಮಾರೋದಕ್ಕೇ ಶುರು ಮಾಡಿ 7 ನೇ ತರಗತಿ ವರೆಗೂ ಶಾಲೆಯನ್ನ ವಿಸ್ತರಣೆ ಮಾಡುತ್ತಾರೆ.

image


ಹೀಗೆ ದಿನ ಕಳೆದಂತೆ ಮತ್ತೆ ಹಾಜಬ್ಬಣ್ಣ ಅವ್ರಿಗೆ ಅರಿವಾಗೋದು ಮಕ್ಕಳಿಗೆ 7 ನೇ ತರಗತಿ ವರೆಗೂ ಶಿಕ್ಷಣ ಸಾಲದು ಕನಿಷ್ಟ 10 ನೇ ತರಗತಿ ವರೆಗಾದ್ರೂ ಶಿಕ್ಷಣ ಬೇಕೆ ಬೇಕು ಅಂತ ನಿರ್ಧಾರ ಮಾಡಿದ್ರು. ಅಷ್ಟರಲ್ಲೇ ಆಗಲೇ ಹಾಜಬ್ಬ ಸಾಧನೆಯನ್ನ ಗುರುತಿಸಿದ ಹಲವಾರು ಸಂಘ ಸಂಸ್ತೆಗಳು ಹಾಜಬ್ಬ ಅವ್ರನ್ನ ಕರೆದು ಸನ್ಮಾನ ಮಾಡಲು ಶುರು ಮಾಡಿರುತ್ತೆ.

ಸನ್ಮಾನದ ಜೊತೆಯಲ್ಲಿ ಸಂಘ ಸಂಸ್ಥೆಗಳು ಒಂದಿಷ್ಟು ಹಣವನ್ನು ನೀಡಿದ್ದರು. ಆ ಹಣವನ್ನ ಉಪಯೋಗಿಸಿಕೊಂಡು ಹಾಜಬ್ಬ ಅವ್ರು 10 ನೇ ತರಗತಿಯವರೆಗೂ ಶಾಲೆಯನ್ನ ವಿಸ್ತರಿಸಿದ್ರು. ಒಂದು ಸರ್ಕಾರ ಮಾಡದ ಕೆಲಸವನ್ನ ಹಾಜಬ್ಬ ಕಿತ್ತಳೆ ಹಣ್ಣು ಮಾರಿ ಸಾಧಿಸಿ ತೋರಿಸಿದ್ದಾರೆ. ಇನ್ನು ಶಾಲೆಯ ಬಗ್ಗೆ ಕೇಳಿದ ಅದೆಷ್ಟೋ ಜನ ಶಾಲೆಗೆ ಬೇಟಿ ನೀಡಿ ಒಂದಿಷ್ಟು ಹಣ ನೀಡಿ ತಮ್ಮ ಹೆಸರನ್ನ ದಾನಿಗಳ ಹೆಸರಿನಲ್ಲಿ ಹಾಕಿಸಿಕೊಂಡಿದ್ದಾರೆ. ಆದ್ರೆ ಇಡೀ ಶಾಲೆಯನ್ನ ಹುಡುಕಿದ್ರು ಕೂಡ ನಿಮಗೆ ಇಂದಿಗೂ ಹಾಜಬ್ಬರ ಒಂದು ಫೋಟೋ ಅಥವಾ ಹೆಸರು ಎಲ್ಲೂ ಕಾಣ ಸಿಗಲ್ಲ. ಇದೇ ಹಾಜಬ್ಬರ ದೊಡ್ಡ ಗುಣ. ಇಂದಿಗೂ ಹಾಜಬ್ಬ ಅವ್ರ ಮನೆ ಮಳೆ ಬಂದ್ರೆ ಸೋರುತ್ತೆ. ಆದ್ರೆ ಶಾಲೆ ಮಾತ್ರ ಸೋರೋದಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಶ್ರಮವನ್ನ ಖಾಸಗಿ ಶಾಲೆ ಮಾಡಿದ್ರೆ ಹಾಜಬ್ಬ ಅವ್ರು ಇವತ್ತು ಕೋಟಿ ಕೋಟಿ ಸಂಪಾದನೆ ಮಾಡಿಕೊಳ್ಳಬಹುದಿತ್ತು. ಆದ್ರೆ ಹಾಜಬ್ಬ ಅವ್ರು ಯಾವತ್ತೂ ಈ ರೀತಿ ಯೋಚನೆಯನ್ನೂ ಮಾಡಲಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ಕೆಲಸ ಮಾಡಿದ ಹಾಜಬ್ಬರ ಶ್ರಮ ಇಂದು ಅದೆಷ್ಟೋ ಮಕ್ಕಳ ಜೀವನಕ್ಕೇ ಆಶಾ ಕಿರಣವಾಗಿದೆ. ಇಂತಹವೊಬ್ಬವ್ಯಕ್ತಿ ನಮ್ಮ ಮಧ್ಯೆ ಇನ್ನೂ ಇದ್ದಾರೆ ಅಂದ್ರೆ ಅದು ನಮ್ಮ ಪಣ್ಯವೇ ಸರಿ.