ಅವಘಡದಿಂದ ಬದಲಾಯ್ತು ಅದೃಷ್ಟ... ಸಮಾಜ ಸೇವಕನಾದ ಫುಟ್ಬಾಲ್ ಪ್ರೇಮಿ..!

ಟೀಮ್​​ ವೈ.ಎಸ್​​.

0

ಫ್ರಾಂಕೋ ಸಿಲ್ವಾ ನಡೆಯಲು ಕಲಿತಾಗಿನಿಂದಲೂ ಫುಟ್ಬಾಲ್ ಆಡಿದವರು. ಮೆಕ್ಸಿಕೋ ಮೂಲದ ಫ್ರಾಂಕೋ ಸಿಲ್ವಾ 8ನೇ ವಯಸ್ಸಿನಲ್ಲಿ ಹೋಸ್ಟನ್‍ಗೆ ಬಂದು ನೆಲೆಸಿದ್ರು. ಫ್ರಾಂಕೋಗೆ ಫುಟ್ಬಾಲ್ ಕ್ರೇಝ್ ಎಷ್ಟಿತ್ತೆಂದ್ರೆ ಬಾಲ್ಯದಲ್ಲೇ ಅವರು ಹತ್ತಾರು ಕ್ಲಬ್‍ಗಳ ಪರ ಆಡ್ತಾ ಇದ್ರು. ಹೈಸ್ಕೂಲ್ ಮುಗಿದ ಮೇಲೆ ಟಫ್ಟ್ಸ್ ಯೂನಿವರ್ಸಿಟಿ ಸೇರಿದ ಫ್ರಾಂಕೋ 4 ವರ್ಷಗಳ ಕಾಲ ವಿವಿ ಪರ ಆಡ್ತಿದ್ರು. ಸ್ಪೇನ್‍ಗೂ ತೆರಳಿದ ಫ್ರಾಂಕೋ ಅಲ್ಲಿ ಕೂಡ ಅಂತರಾಷ್ಟ್ರೀಯ ತಂಡಗಳೊಂದಿಗೆ ಆಡಿದ್ದಾರೆ. ಫುಟ್ಬಾಲ್ ಬಗ್ಗೆ ಅಪಾರ ಪ್ರೀತಿ ಇದ್ರೂ ಫ್ರಾಂಕೋ ಮೆಡಿಸಿನ್ ಓದಿ ಒಬ್ಬ ತಜ್ಞ ವೈದ್ಯರಾಗಬೇಕೆಂದು ಕನಸು ಕಂಡಿದ್ರು. ವೈದ್ಯರಾಗಿ ಬಡ ರೋಗಿಗಳ ಸೇವೆ ಮಾಡಬೇಕೆಂಬ ಆಸೆ ಅವರಿಗಿತ್ತು. ಇದಕ್ಕಾಗಿಯೇ ಫ್ರಾಂಕೋ ಪರಿಶ್ರಮಪಡ್ತಾ ಇದ್ರು.

ನುಚ್ಚು ನೂರಾಯ್ತು ಕನಸು...

ಫ್ರಾಂಕೋ ಅವರ ಪದವಿ ಪೂರ್ಣಗೊಳ್ಳಲು ಒಂದು ತಿಂಗಳಷ್ಟೇ ಬಾಕಿ ಇತ್ತು. ಆರ್ಗಾನಿಕ್ ಕೆಮೆಸ್ಟ್ರಿ ಪರೀಕ್ಷೆಯಿದ್ದಿಂದ್ರಿಂದ ಓದಲು ಗ್ರಂಥಾಲಕ್ಕೆ ಬಂದಿದ್ದ ಫ್ರಾಂಕೋ ಅವರಿಗೆ ಕರೆ ಮಾಡಿದ್ದ ಸ್ನೇಹಿತನೊಬ್ಬ ಬೋಸ್ಟನ್‍ನಲ್ಲಿ ಫುಟ್ಬಾಲ್ ಆಡಲು ಆಹ್ವಾನ ನೀಡಿದ್ದ. 15 ವರ್ಷಗಳಿಂದ ಫುಟ್ಬಾಲ್ ಆಡ್ತಿದ್ದ ಫ್ರಾಂಕೋಗೆ ಆ ದಿನ ನಿಜಕ್ಕೂ ಕರಾಳವಾಗಿತ್ತು. ಆಟದ ಭರದಲ್ಲಿ ಫ್ರಾಂಕೋ ಅವರ ಮೊಣಕಾಲಿಗೆ ಪೆಟ್ಟು ಬಿದ್ದಿತ್ತು. ಅಸಹಾಯಕತೆ ವ್ಯಕ್ತಪಡಿಸಿದ ವೈದ್ಯರು ಮಂಡಿಯನ್ನೇ ಸ್ಥಾನಪಲ್ಲಟ ಮಾಡಿದ್ರು. ಮೊಣಕಾಲಿನ ಗಾಯದ ಜೊತೆ ಮನಸ್ಸಿಗಾದ ನೋವು ಫ್ರಾಂಕೋರನ್ನ ಜರ್ಜರಿತಗೊಳಿಸಿತ್ತು. ತಮ್ಮ ಪ್ರೀತಿಯ ಫುಟ್ಬಾಲ್ ಆಟವನ್ನು ಇನ್ನು ಆಡಲು ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿತ್ತು. ಫ್ರಾಂಕೋ ಶಸ್ತ್ರಚಿಕಿತ್ಸೆಗೂ ಒಳಗಾಗಬೇಕಿದ್ದರಿಂದ ಫ್ರಾಂಕೋ ಪದವಿ ಪೂರ್ಣಗೊಳಿಸೋದು ವಿಳಂಬವಾಯ್ತು. ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆಯಲು ಇನ್ನೊಂದು ವರ್ಷ ಕಾಯಬೇಕಾಯ್ತು. 2 ತಿಂಗಳಲ್ಲಿ ಗುಣಮುಖರಾದ ಫ್ರಾಂಕೋ ಪದವಿಯನ್ನೂ ಪೂರೈಸಿದ್ರು. ಆದ್ರೆ ಮೆಡಿಕಲ್ ಅಡ್ಮಿಷನ್‍ಗೆ ಇನ್ನು ಒಂದು ವರ್ಷ ಸಮಯವಿದ್ದಿದ್ರಿಂದ ಫ್ರಾಂಕೋ ಓದಿನ ಕಡೆ ಹೆಚ್ಚು ಗಮನ ಹರಿಸಿದ್ರು. ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡ ಅವರಿಗೆ ಉದ್ಯಮದ ಮೂಲಕ ಸಮಾಜ ಸೇವೆ ಮಾಡಬೇಕೆಂಬ ಆಸೆ ಚಿಗುರಿತ್ತು.

`ಕಿಜಾಜಿ' ಜನ್ಮ...

ಜಗತ್ತಿನಲ್ಲಿ 3.5 ಬಿಲಿಯನ್ ಫುಟ್ಬಾಲ್ ಅಭಿಮಾನಿಗಳಿದ್ದಾರೆ. ಈ ಫುಟ್ಬಾಲ್ ಪ್ರೇಮವನ್ನು ಬಳಸಿಕೊಂಡು ವಿಶ್ವವನ್ನೇ ಕಾಡುತ್ತಿರುವ ಬಡತನವನ್ನು ಹೊಡೆದೋಡಿಸಲು ಫ್ರಾಂಕೋ ನಿರ್ಧರಿಸಿದ್ರು. ಫುಟ್ಬಾಲ್ ಜಗತ್ತಿನ ದಂತಕಥೆಗಳು, ಫ್ರಾಂಕೋ ಅವರಿಗೆ ಪ್ರೇರಣೆಯಾಗಿದ್ದ ಬಹುತೇಕ ಆಟಗಾರರೆಲ್ಲ ಬಡತನವನ್ನು ಕಂಡವರು. ಕಷ್ಟಪಟ್ಟು ಮೇಲೆ ಬಂದವರು. ಹಾಗಾಗಿ ತಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುತ್ತಾರೆಂಬ ವಿಶ್ವಾಸ ಫ್ರಾಂಕೋಗಿತ್ತು. ಇದಕ್ಕಾಗಿಯೇ ಕಿಜಾಜಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ರು. ಕಿಜಾಜಿ ಎಂದರೆ ಹೊಸ ತಲೆಮಾರಿನ ಫುಟ್ಬಾಲ್ ಆಟಗಾರರು ಎಂದರ್ಥ.

`ಕಿಜಾಜಿ' ಮಾದರಿ...

ಬಡ ಮಕ್ಕಳಿಗೆ ಸಹಾಯ ಮಾಡಲು ಫುಟ್ಬಾಲ್ ಆಟಗಾರರನ್ನು ಬಳಸಿಕೊಳ್ಳುವುದು ಫ್ರಾಂಕೋ ಅವರ ಉದ್ದೇಶ. ಬಡ ಮಕ್ಕಳಿಗೆ ಫುಟ್ಬಾಲ್ ಒಂದನ್ನು ಕೊಡಲಾಗುತ್ತೆ. ಅದನ್ನು ಮಾರಾಟ ಮಾಡಿದ್ರೆ, ಇನ್ನೊಂದು ಬಾಲನ್ನು ದಾನವಾಗಿ ನೀಡಲಾಗುತ್ತೆ. ಈ ಯೋಜನೆ ಬಗ್ಗೆ ಫ್ರಾಂಕೋ ಬಹಳಷ್ಟು ಸಂಶೋಧನೆ ಮಾಡಿದ್ರು. ಆದ್ರೆ ವಿಶ್ವವನ್ನೇ ಕಾಡುತ್ತಿರುವ ಸಮಸ್ಯೆ ಬಡತನವನ್ನ ಮೂಲೋತ್ಫಾಟನೆ ಮಾಡಲು ಇದರಿಂದ ಸಾಧ್ಯವಿಲ್ಲ ಅನ್ನೋದು ಫ್ರಾಂಕೋಗೆ ಅರಿವಾಗಿತ್ತು. ಬಡತನವನ್ನು ಹೊಡೆದೋಡಿಸಲು ಮಹಮದ್ ಯೂನುಸ್ ಅವರ ಸೂಕ್ಷ್ಮ ಸಾಲ ಯೋಜನೆ ಬಹಳಷ್ಟು ಪರಿಣಾಮಕಾರಿಯೆಂದು ಫ್ರಾಂಕೋಗೆ ಅನಿಸಿತ್ತು.

ಬಡತನ ನಿರ್ಮೂಲನೆಗೆ ಹೋರಾಟ...

ಕಿಜಾಜಿ ಉತ್ಪನ್ನಗಳ ಮಾರಾಟದಿಂದ ಬಂದ ಲಾಭದಲ್ಲಿ ಒಂದು ಭಾಗವನ್ನು ಕೂಡಿಟ್ಟು ಜಗತ್ತಿನಾದ್ಯಂತ ಸೂಕ್ಷ್ಮಸಾಲವನ್ನಾಗಿ ಕೊಡಲಾಗುತ್ತಿದೆ. ಈ ಮೂಲಕ ಬಡತನವನ್ನು ಬೇರು ಸಹಿತ ಕಿತ್ತೊಗೆಯುವ ಪ್ರಯತ್ನವನ್ನು ಕಿಜಾಜಿ ಮಾಡ್ತಿದೆ. ಪ್ರತಿಬಾರಿ ಕಿಜಾಜಿ ಫಂಡ್‍ನಲ್ಲಿ ಹಣ ಸಂಗ್ರವಾದಾಗಲೆಲ್ಲ ಬೇರೆ ಬೇರೆ ವ್ಯಕ್ತಿಗಳಿಗೆ ಸಾಲ ಕೊಡಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಕಿಜಾಜಿ ಒಳ್ಳೆಯ ಬ್ರಾಂಡ್ ಅನ್ನೋ ಹೆಸರು ಸಂಪಾದಿಸಿದೆ. ಪ್ರತಿ ಬಾರಿ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದಾಗ, ಅದನ್ನು ಮಾರಾಟ ಮಾಡಿದಾಗ ಲಾಭವೂ ಬರುತ್ತಿದ್ದು ಕಿಜಾಜಿ ನಿಧಿಯನ್ನು ಸೇರುತ್ತಿದೆ. ಫಿಲಿಪೈನ್ಸ್, ಬೊಲಿವಿಯಾ, ಭಾರತ, ಕೀನ್ಯಾ, ಎಲ್ ಸಲ್ವಾಡರ್, ಮಾಲಿ ಮುಂತಾದ ದೇಶಗಳಿಗೆ ಈಗಾಗಲೇ ಮೈಕ್ರೋ ಲೋನ್ ವಿತರಿಸಲಾಗಿದೆ. ಕಿಜಾಜಿ ಕಂಪನಿ ಪ್ರಮುಖವಾಗಿ ಫುಟ್ಬಾಲ್ ತಯಾರಿಕೆಯಲ್ಲಿ ತೊಡಗಿದೆ.

ಸಾಮಾಜಿಕ ಉದ್ಯಮ ಮತ್ತು ಸವಾಲು...

ಸಾಮಾಜಿಕ ಉದ್ಯಮ ದುರ್ಬಲ ಮನಸ್ಸಿನವರಿಗೆ ಹೇಳಿ ಮಾಡಿಸಿದಂಥದ್ದಲ್ಲ. ಇದಕ್ಕೆ ಪರಿಶ್ರಮ ಹಾಗೂ ಆತ್ಮವಿಶ್ವಾಸ ಬೇಕು. ಗ್ರಾಹಕರಿಗೆ ಸಾಮಾಜಿಕ ಕಳಕಳಿಯ ಬಗ್ಗೆ ಮನವರಿಕೆ ಮಾಡಿಕೊಡುವುದು ಕೂಡ ಬಹುದೊಡ್ಡ ಸವಾಲು. ಅಷ್ಟೇ ಅಲ್ಲ ಹಣಕಾಸು ವಹಿವಾಟು ಕೂಡ ಸುಲಭವಲ್ಲ ಎನ್ನುತ್ತಾರೆ ಫ್ರಾಂಕೋ. ಹೆಚ್ಚುತ್ತಿರುವ ಲಾಭ ಹಾಗೂ ಹೆಚ್ಚುತ್ತಿರುವ ಪರಿಣಾಮದ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು ಕೂಡ ಸುಲಭದ ಮಾತಲ್ಲ. ಆದ್ರೆ ತಾವು ಪರಿಣಾಮವನ್ನು ಹೆಚ್ಚಿಸುವತ್ತ ಗಮನಹರಿಸಿದ್ರಿಂದ ಕಿಜಾಜಿಯನ್ನು ಕಟ್ಟಿ ಬೆಳೆಸಲು ಸಾಧ್ಯವಾಯ್ತು ಅನ್ನೋದು ಫ್ರಾಂಕೋ ಅವರ ಅಭಿಪ್ರಾಯ.

ಕಣ್ತೆರೆದು ಕಂಡ ಕನಸು...

ಅನುಕಂಪ ಹಾಗೂ ನೆರವು ಗಿಟ್ಟಿಸಿಕೊಳ್ಳುವಂತೆ ಬಿಂಬಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ ಎಂದು ಫ್ರಾಂಕೋ ಸ್ಪಷ್ಟಪಡಿಸಿದ್ದಾರೆ. ಬದಲಿಗೆ ಒಂದು ಬ್ರಾಂಡ್ ಸ್ಥಾಪಿಸುವುದು ಫ್ರಾಂಕೋ ಅವರ ಗುರಿಯಾಗಿತ್ತು. ಕಿಜಾಜಿ ಉತ್ಪನ್ನಗಳನ್ನು ಖರೀದಿಸಿದ ಆಟಗಾರರು ತಮ್ಮ ಆಟವನ್ನು ಎಂಜಾಯ್ ಮಾಡುವ ಜೊತೆಗೆ ಬಡಜನತೆಗೆ ಸಹಾಯ ಮಾಡಿದ ತೃಪ್ತಿಯೂ ಅವರಲ್ಲಿರಬೇಕು. ನಾವು ಚೆಂಡನ್ನು ಮಾರುತ್ತಿಲ್ಲ ಬದಲಾಗಿ ಒಂದು ಬ್ರಾಂಡನ್ನು ಮಾರಾಟ ಮಾಡ್ತಿದ್ದೀವಿ ಅಂತಾ ಫ್ರಾಂಕೋ ಹೆಮ್ಮೆಯಿಂದ ಹೇಳಿಕೊಲ್ತಾರೆ. ಕಿಜಾಜಿ ಮೂಲಕ ಫ್ರಾಂಕೋ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ.

ಫುಟ್ಬಾಲ್ ಆಡುವ ಸಂದರ್ಭದಲ್ಲಾದ ಅವಘಡದಿಂದ ಬದುಕೇ ಬರಡಾಯ್ತು ಎಂದುಕೊಂಡಿದ್ದ ಫ್ರಾಂಕೋ ಅವರ ಜೀವನ ಈಗ ಹಸನಾಗಿದೆ. ಕೇವಲ ಅವರ ಬದುಕು ಮಾತ್ರವಲ್ಲ ಜಗತ್ತಿನಾದ್ಯಂತ ಇರುವ ಬಡವರ ಬದುಕನ್ನೂ ಹಸನು ಮಾಡುವತ್ತ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

Related Stories