ಹೋರಾಡಿ ಗೌರವ ಪಡೆದ ಉದಯನ್ ಶಾಲಿನಿ

ಟೀಮ್​ ವೈ.ಎಸ್​​.

0

ಅಲಿಯಾ ತಬಸ್ಸುಮ್ ಅವರದ್ದು ಬಡತನದ ಕುಟುಂಬ ಮತ್ತು ಬದುಕಲು ತುಂಬಾ ಕಷ್ಟ ಪಡುತ್ತಿತ್ತು. ಅಲಿಯಾ, ತಮ್ಮ ಕುಟುಂಬದ ಸಂಕಷ್ಟವನ್ನು ಹೋರಾಟವನ್ನು ಕಣ್ಣಾರೆ ಕಂಡು ಬೆಳೆದಿದ್ದರು. ಅವರ ಉನ್ನತ ಶಿಕ್ಷಣಕ್ಕೆ ಪೋಷಕರು ವ್ಯವಸ್ಥೆ ಮಾಡಲು ಸಾಧ್ಯವಾಗದೇ ಹೋದರು. ಕೊನೆಗೆ ಬೇರೆ ದಾರಿ ಕಾಣದೆ 2007ರಲ್ಲಿ ಅಲಿಯಾರನ್ನು ಉದಯನ್ ಶಾಲಿನಿಗೆ ಸೇರಿಸಿದರು. ಉದಯನ್ ನೆರವಿನೊಂದಿಗೆ ಅಲಿಯಾ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದರು. ಅವರ ಕುಟುಂಬದಲ್ಲೇ ಪದವಿ ಪಡೆದ ಮೊದಲ ಕುಡಿ ಎಂಬ ಹೆಮ್ಮೆಯೂ ಅಲಿಯಾರದ್ದಾಗಿತ್ತು. ಉದಯನ್ ಶಾಲಿನಿಯ ಸಂಪೂರ್ಣ ಸಹಕಾರದಿಂದಾಗಿ ಅಲಿಯಾ ಈಗ ಕಾಗ್ನಿಜೆಂಟ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕೆಲಸಗಿಟ್ಟಿಸಿಕೊಂಡಿದ್ದಾರೆ. ಕೋಲ್ಕತ್ತಾದಲ್ಲಿನ ಈ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ವಾರ್ಷಿಕ 2 ಲಕ್ಷ ವೇತನ ಪಡೆಯುತ್ತಿದ್ದಾರೆ. ಉದಯನ್ ಕೇವಲ ಆರ್ಥಿಕವಾಗಿ ಸಹಾಯ ಮಾಡಲಿಲ್ಲ, ಮಾರುಕಟ್ಟೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಷ್ಟ ಸಾಮರ್ಥ್ಯ ತುಂಬಿಸಿತ್ತು.

ರೀನಾ ಬರ್ಮನ್ ತಂದೆ ಬೀಡಿ ಕಾರ್ಮಿಕರಾಗಿದ್ದರು. ಮಾಸಿಕ ಕನಿಷ್ಟ ವೇತನ ಪಡೆಯುತ್ತಿದ್ದರು. ಇಬ್ಬರು ಮಕ್ಕಳನ್ನೂ ಬೆಳೆಸಬೇಕಾಗಿದ್ದರಿಂದ ಪ್ರತಿದಿನವೂ ಊಟಕ್ಕೆ ಕಷ್ಟಪಡಬೇಕಾಗಿತ್ತು. ಇಂತಹ ಸ್ಥಿತಿಯಲ್ಲಿ ರೀನಾ ಉನ್ನತ ಶಿಕ್ಷಣ ಪಡೆಯುವ ಕನಸನ್ನೂ ಕಾಣಲು ಸಾಧ್ಯವಿರಲಿಲ್ಲ. ಆದರೆ, ಯಾರೋ ಅವರಿಗೆ ಕೋಲ್ಕತ್ತಾದಲ್ಲಿನ ಉದಯನ್ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು. ಉದಯನ್ ಕೇರ್ 2007ರಲ್ಲಿ ಪಾಲ್ಗೊಂಡು ಪರೀಕ್ಷೆ ಪಾಸ್ ಮಾಡಿ ಆಯ್ಕೆಯಾದರು. ಉದಯನ್ ಸಹಾಯದಿಂದ ರೀನಾ ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅದೂ ಪ್ರಥಮ ದರ್ಜೆಯಲ್ಲಿ. ಅವರು ಉಪನ್ಯಾಸಕರಾಗುವ ಆಸಕ್ತಿ ಹೊಂದಿದ್ಧಾರೆ. ಈಗ ಆಕೆಯ ಪೋಷಕರು, ಕುಟುಂಬ ಮತ್ತು ಸಮುದಾಯ ರೀನಾ ಬಗ್ಗೆ ಹೆಮ್ಮೆ ಪಡುತ್ತಿದೆ. ಸ್ನಾತಕೋತ್ತರ ಪದವಿ ಪಡೆದ ಆ ಹಳ್ಳಿಯ ಪ್ರಥಮ ಹುಡುಗಿಯಾಗಿದ್ದ ರೀನಾ ಈಗ ಇಡೀ ಹಳ್ಳಿಗೆ ಸ್ಫೂರ್ತಿಯಾಗಿದ್ದಾಳೆ.

ಆರಂಭದ ಹಿಂದಿನ ಐಡಿಯಾ

ಉದಯನ್ ಕೇರ್ ಕೋಲ್ಕತ್ತಾ ಸಂಸ್ಥೆಯು ಕಳೆದ 9 ವರ್ಷಗಳಿಂದಲೂ ಪ್ರತಿಭಾನ್ವಿಯ ಹುಡುಗಿಯರಿಗೆ ಶಿಕ್ಷಣ ಮುಂದುವರಿಸಲು ಸಹಾಯ ನೀಡುತ್ತಿದೆ. ಕುಸುಮ್ ಭಂಡಾರಿಯವರು ಈ ಸಂಸ್ಥೆ ಸ್ಥಾಪಿಸಿದ್ದು, ಈವರೆಗೆ 700ಕ್ಕೂ ಹೆಚ್ಚು ಯುವತಿಯರ ಬಾಳು ಬೆಳಗಿದ್ದಾರೆ. “ಪ್ರತಿಯೊಂದು ತಾಯಿಯೂ ತನ್ನ ಮಗಳ ಓದಬೇಕು, ಒಳ್ಳೆಯ ಭವಿಷ್ಯ ರೂಪಿಸಬೇಕು ಎಂದು ಕನಸು ಕಾಣುತ್ತಾರೆ. ಆದರೆ ಬಡತನದಿಂದಾಗಿ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯೇ ಉದಯನ್ ಶಾಲಿನಿ ಫೆಲೋಶಿಪ್ ಪ್ರೋಗ್ರಾಂ ಆರಂಭಿಸಲು ಕಾರಣ. ಭಾರತದಲ್ಲಿ ಕೇವಲ ಶೇಕಡಾ 16ರಷ್ಟು ಮಹಿಳೆಯರು ಮಾತ್ರ ಹತ್ತನೇ ತರಗತಿವರೆಗೆ ಓದುತ್ತಾರೆ. 100 ಕಾಲೇಜು ವಿದ್ಯಾರ್ಥಿಗಳ ಪೈಕಿ ಒಬ್ಬಳೇ ವಿದ್ಯಾರ್ಥಿನಿ ಇರುತ್ತಾಳೆ. ಭಾರತದ ಪದವೀಧರರ ಪೈಕಿ ಶೇಕಡಾ 4.5 ರಷ್ಟು ಮಾತ್ರ ಮಹಿಳೆಯರಿದ್ದಾರೆ. ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲು ತಮ್ಮ ಸ್ನೇಹಿತರೊಬ್ಬರು ದೆಹಲಿಯಲ್ಲಿ 2002ರಲ್ಲೇ ಉದಯನ್ ಶಾಲಿನಿ ಫೆಲೋಶಿಪ್ ಕಾರ್ಯಕ್ರಮ ಆರಂಭಿಸಿದ್ದರು,” ಎನ್ನುತ್ತಾರೆ ಕುಸುಮ್. ಕುಸುಮ್ ಅವರು ಶಿಕ್ಷಣ ತಜ್ಱರಾಗಿದ್ದು, ಕೋಲ್ಕತ್ತಾದ ಅತ್ಯಂತ ಹಳೆಯ ಮಾಂಟೆಸ್ಸರಿ ಬಾಲ್ ನಿಲಯದ ಮುಖ್ಯಸ್ಥರೂ ಆಗಿದ್ದಾರೆ.

ಯುವತಿಯರನ್ನು ಹುಡುಕುವ ಉದಯ್ ಕೇರ್, ಅವರಲ್ಲಿ ಪ್ರಪಂಚವನ್ನು ಎದುರಿಸಿ ಪ್ರಸಕ್ತ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುವಂತೆ ಬೆಳೆಸುತ್ತದೆ. ನ್ಯಾಟ್ ಪರೀಕ್ಷೆಯ ಮೂಲಕ 9ನೇ ತರಗತಿಯಲ್ಲಿರುವ ಹುಡುಗಿಯರನ್ನು ಆರಿಸಿಕೊಳ್ಳಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹುಡುಗಿಯರಿಗೆ ಸಂದರ್ಶನ ಏರ್ಪಡಿಸಲಾಗುತ್ತದೆ. ಅದರಲ್ಲಿ ಉತ್ತೀರ್ಣಗೊಂಡರೆ, ಮನೆಗೆ ಭೇಟಿ ನೀಡಿ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಆಯ್ಕೆಯಾದ ಬಳಿಕ ಅವರು ಉದಯನ್ ಶಾಲಿನಿ ಫೆಲೋಶಿಪ್​​ನ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ತಮ್ಮಂತೆಯೇ ಇರುವ ಇತರ ಹುಡುಗಿಯರಿಗೆ ಸಹಾಯ ಮಾಡುವ ಪ್ರಮಾಣವನ್ನು ಮಾಡಬೇಕಾಗುತ್ತದೆ. ಅವರಿಗೆ 5-6 ವರ್ಷಗಳ ಕಾಲ ಪದವಿ ಪಡೆಯಲು ಅಥವಾ ವಿಶೇಷ ತರಬೇತಿ ಪಡೆಯಲು ಸಂಪೂರ್ಣ ಸಹಾಯ ನೀಡಲಾಗುತ್ತದೆ.

ವಿಶೇಷತೆಗಳು

ಉದಯನ್ ಶಾಲಿನಿ ಫೆಲೋಶಿಪ್ ಕೇವಲ ಸ್ಕಾಲರ್​ಶಿಪ್ ಮಾತ್ರವಲ್ಲ, ಧನಸಹಾಯ ಮಾತ್ರವಲ್ಲ. “ಇದೊಂದು ರೀತಿಯಲ್ಲಿ ಪಿರಮಿಡಲ್ ಮೆಂಟರಿಂಗ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಹುಡುಗಿಯರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತದೆ. ಯುವ ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ತಜ್ಞರು ಹಿರಿಯ ಮೆಂಟರ್​​ಗಳಾಗಿ, ಈ ಮಕ್ಕಳ ಗುಂಪಿನ ಜೊತೆ ಕೆಲಸ ಮಾಡುತ್ತಾರೆ. ಪ್ರತಿ ಗುಂಪಿಗೂ ಅಲುಮ್​​ನ ಶಾಲಿನಿ ಎಂಬ ಹಿರಿಯಕ್ಕನಿದ್ದು, ಈ ಪುಟ್ಟ ಶಾಲಿನಿಗಳಿಗೆ ಸಹಾಯ ಮಾಡುತ್ತಾರೆ. ಇವರು ಉದ್ಯೋಗಕ್ಕೆ ಸೇರಿಕೊಂಡ ಬಳಿಕ ಇತರರಿಗೆ ನೆರವಾಗುವಂತೆಯೂ ಪ್ರೋತ್ಸಾಹಿಸಲಾಗುತ್ತದೆ.

ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿನಿಯರಿಗೆ ವಿವಿಧ ಅವಕಾಶಗಳನ್ನು ಒದಗಿಸಲಾಗುತ್ತದೆ. ಈ ವಿಭಿನ್ನ ಕಲಿಕೆ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ಸ್ವ ಸಾಮರ್ಥ್ಯ, ಆತ್ಮವಿಶ್ವಾಸಗಳನ್ನು ಬೆಳೆಸಲು ಕಾರ್ಯಗಾರಗಳನ್ನು ಆಯೋಜಿಸಲಾಗುತ್ತದೆ . ಮಾಧ್ಯಮ, ಮಾರ್ಕೆಟಿಂಗ್, ಮಾಹಿತಿ ತಂತ್ರಜ್ಞಾನ, ಫ್ಯಾಷನ್ ಉಡುಪುಗಳು, ಸಮೂಹ ಸಂವಹನ, ಔಷಧ ಮೊದಲಾದ ವಿಚಾರಗಳಿಗೆ ಸಂಬಂಧಿಸಿ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಉದ್ಯೋಗವಕಾಶಗಳ ಮಾಹಿತಿಯನ್ನೂ ನೀಡಲಾಗುತ್ತದೆ. ಕಲೆ, ಸಂಗೀತ, ಕ್ರೀಡೆ, ಇತಿಹಾಸ ಮೊದಲಾದ ವಿಚಾರಗಳ ಬಗ್ಗೆಯೂ ಇಲ್ಲಿ ಕಲಿಸಲಾಗುತ್ತದೆ ಎನ್ನುತ್ತಾರೆ ಕುಸುಮ್ ಭಂಡಾರಿ.

ಆರ್ಥಿಕ ಸ್ವಾವಲಂಬನೆಯ ಅಗತ್ಯತೆಯನ್ನು ಅವರಲ್ಲಿ ಮನದಟ್ಟು ಮಾಡಲೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರತಿವರ್ಷವೂ ಎಲ್ಲಾ ಶಾಲಿನಿಯರೂ ಕನಿಷ್ಟ 50 ಗಂಟೆಗಳ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಮಹಿಳಾ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಬೆಳೆಸುವ ಮೂಲಕ ಅವರವರ ಕುಟುಂಬಗಳಿಗೂ ಆರ್ಥಿಕ ಶಕ್ತಿಯನ್ನಾಗಿ ಈ ಮಕ್ಕಳನ್ನು ರೂಪಿಸಲಾಗುತ್ತದೆ. 2017ರ ವೇಳೆಗೆ ಕನಿಷ್ಟ 1000 ಶಾಲಿನಿಯರನ್ನು ಬೆಳೆಸಲು ಉದಯನ್ ಕೋಲ್ಕತ್ತಾ ಗುರಿ ಹಾಕಿಕೊಂಡಿದೆ.

ಪರಿಣಾಮ

ಉದಯನ್ ಸಹಾಯ ಪಡೆದ ಹಲವು ಶಾಲಿನಿಯರು ಈಗ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸಗಿಟ್ಟಿಸಿಕೊಂಡಿದ್ದಾರೆ. ಐಐಟಿಗಳಲ್ಲಿ ಅವಕಾಶ ಪಡೆದಿದ್ದಾರೆ. ಶಾಲಿನಿ ಅಂದರೆ ಗೌರವಾನ್ವಿತ ಮಹಿಳೆ ಎಂದರ್ಥ. ಈ ಶಾಲಿನಿಯರು, ಶೈಕ್ಷಣಿಕವಷ್ಟೇ ಅಲ್ಲ, ಉತ್ತಮ ಜವಾಬ್ದಾರಿಯುತ ನಾಗರಿಕರಾಗಿಯೂ ಹೊರಹೊಮ್ಮುತ್ತಿದ್ದಾರೆ. ಇವರಲ್ಲಿ ಬಹುತೇಕರು ಮೊದಲ ತಲೆಮಾರಿನ ವಿದ್ಯಾವಂತರಾಗಿದ್ದು, ತಮ್ಮ ತಮ್ಮ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎನ್ನುತ್ತಾರೆ ಕುಸುಮ್ ಭಂಡಾರಿ.