ಬೆಂಗಳೂರು ಗ್ರಾಮಾಂತರ ಜಿಲ್ಲೆ - ಹೂಡಿಕೆಗೆ ಎಲ್ಲಿಲ್ಲದ ಅವಕಾಶ ಇಲ್ಲಿದೆ

ಟೀಮ್​ ವೈ.ಎಸ್​. ಕನ್ನಡ

0

ಬೆಂಗಳೂರು ನಗರ ಯಾವುದು ಗ್ರಾಮಾಂತರ ಯಾವುದು ಎಂದು ಲಕ್ಷ್ಮಣ ರೇಖೆ ಎಳೆಯುವುದು ಸ್ವಲ್ಪ ಕಷ್ಟ. ಆದರೂ ಕಂದಾಯ ಜಿಲ್ಲೆಯಾಗಿ ಬೆಂಗಳೂರು ಗ್ರಾಮಾಂತರವನ್ನು ಪರಿಗಣಿಸಿದರೆ ಮೊದಲು ಕಣ್ಮನ ಸೆಳೆಯುವುದು ರೇಷ್ಮೆ ಕೃಷಿ. ಇದು ಲಕ್ಷಕ್ಕೂ ಅಧಿಕ ಮಂದಿಯ ಜೀವನಾಧಾರವಾಗಿದೆ. ಬೆಂಗಳೂರು ನಗರಕ್ಕೆ ಅಗತ್ಯ ಇರುವ ತರಕಾರಿ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೂರೈಸುತ್ತಿದೆ.

ಬದಲಾಗುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ

ನಗರೀಕರಣದ ದಾಪುಗಾಲಿನ ಹೊಡೆತಕ್ಕೆ ಬೆಂಗಳೂರು ನಗರ ಅತ್ಯಂತ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ದಾಖಲಿಸುತ್ತಿದ್ದು, ಇದು ಸಹಜವಾಗಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇಲೂ ಪ್ರಭಾವ ಬೀರಿದೆ. ಮೂಲ ಭೂತ ಸೌಲಭ್ಯ ಕ್ಷೇತ್ರದಲ್ಲಿ ಮಾಡಿಕೊಂಡಿರುವ ಸಿದ್ಧತೆಗಳು, ಕೈಗಾರಿಕೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕಾಲಿಡುವಲ್ಲಿ ಯಶಸ್ವಿಯಾಗಿದೆ. ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರದದ ಸಾಧನೆ ರಾಜ್ಯದ ಸರಾಸರಿ ಸಾಧನೆಗಿಂತ ಉತ್ತಮವಾಗಿದೆ.

ಕೈಗಾರಿಕಾ ಕ್ರಾಂತಿಯ ಹೆಗ್ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ತವರೂರು. ರಾಜ್ಯ ಸರ್ಕಾರದ ನಿರಂತರ ಪ್ರಯತ್ನದಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೈಗಾರೀಕರಣದತ್ತ ಹೆಜ್ಜೆ ಇಡುತ್ತಿದೆ. ಇದರ ಪ್ರತಿಫಲ ದೊರೆಯಲಾರಂಭಿಸಿದೆ. ರಾಜ್ಯದ ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರದ ಕೊಡುಗೆ ಶೇಕಡಾ 2.5 ಆಗಿದೆ. ತೋಟಗಾರಿಕಾ ಬೆಳೆಗಳು ಇಲ್ಲಿನ ವಿಶೇಷತೆಯಾಗಿದೆ. ಮಾವಿನ ಹಣ್ಣು, ದ್ರಾಕ್ಷಿ, ರೇಷ್ಮೆ ಕೃಷಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೈಶಿಷ್ಠ್ಯ. ಜಿಲ್ಲೆಯ ಒಟ್ಟು ಭೂಮಿಯ ಪೈಕಿ ಶೇಕಡಾ 47.75ರಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತಿದೆ.

ಅಟೋ ಮೊಬೈಲ್ ಮತ್ತು ಏರೋಸ್ಪೇಸ್ ಪಾರ್ಕ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಖ್ಯವಾಗಿ ಗುರುತಿಸಿಕೊಳ್ಳುವುದು ಅದರಲ್ಲೂ ಮುಖ್ಯವಾಗಿ ಅಟೋ ಮೊಬೈಲ್ ಮತ್ತು ಏರೋ ಸ್ಪೇಸ್ ಗೆ ಸಂಬಂಧಿಸಿದ್ದಾಗಿದೆ. ಈ ಎರಡು ಪ್ರಮುಖ ವಲಯಗಳು ಅಚ್ಚರಿ ಮೂಡಿಸುವಷ್ಟು ಬೆಳೆದಿವೆ. ಅಲ್ಲದೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯದ ಮುನ್ಸೂಚನೆ ನೀಡಿವೆ.

ಆರು ಕೈಗಾರಿಕಾ ಪ್ರದೇಶಗಳು ಮತ್ತು ಎರಡು ಕೈಗಾರಿಕಾ ಎಸ್ಟೇಟ್ ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಂದಿದೆ. ಮುಖ್ಯವಾಗಿ ಏರೋಸ್ಪೇಸ್ ಆಧಾರಿತ ಉದ್ದಿಮೆಗಳು , ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಭದ್ರವಾಗಿ ನೆಲೆ ಊರಲು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಇನ್ನಷ್ಟು ಬೆಳವಣಿಗೆಯ ಮುನ್ಸೂಚನೆ ನೀಡಿದೆ.

ಆಹಾರ ಪಾರ್ಕ್ ಪರಿಕಲ್ಪನೆ

ಸುಮಾರು ನೂರು ಎಕರೆ ಪ್ರದೇಶದಲ್ಲಿ ಆಹಾರ ಪಾರ್ಕ್ ಎಂಬ ಕಲ್ಪನೆ ಗರಿಗೆದರಿದ್ದು, ಇದು ಕಾರ್ಯಗತಗೊಳ್ಳುವ ಹಾದಿಯಲ್ಲಿದೆ. ಇದು ಗ್ರಾಮಾಂತರ ಬೆಂಗಳೂರಿನ ಕೈಗಾರಿಕಾ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆ ನಿಚ್ಚಳವಾಗಿದೆ.

ಹೂಡಿಕೆದಾರರು ಎಲ್ಲಿ ಗಮನ ಹರಿಸಬೇಕು?

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಗರ ಜಿಲ್ಲೆಗೆ ಪೈಪೋಟಿ ನೀಡುವ ಹಂತಕ್ಕೆ ಬಂದಿರುವುದು ಅತ್ಯುತ್ತಮ ಬೆಳವಣಿಗೆಯಾಗಿದೆ. ಇದು ಜಿಲ್ಲೆಯಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸಲಿದೆ. ಜೊತೆಗೆ ವಸತಿ ಸೇರಿದಂತೆ ಇನ್ನಿತರ ಸಂಬಂಧಿತ ವಲಯಗಳ ಬೆಳವಣಿಗೆಗೆ ಕೂಡ ಪೂರಕವಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿನ ಹೂಡಿಕೆ ಸಮಾವೇಶವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೂಡ ಬೆರಗುಗಣ್ಣಿನಿಂದ ನೋಡುತ್ತಿದ್ದು, ಕೋಟಿಗಟ್ಟಲೇ ಬಂಡವಾಳ ಹರಿವು ಜಿಲ್ಲೆಗೆ ಹರಿದು ಬರಲಿದೆ ಎಂಬ ವಿಶ್ವಾಸ ಎಲ್ಲರಲ್ಲಿ ಮನೆ ಮಾಡಿದೆ.

ರಾಜಧಾನಿ ಬೆಂಗಳೂರಿಗೆ ಅತ್ಯಂತ ಸನಿಹದಲ್ಲಿರುವ ಬೆಂಗಳೂರು ಗ್ರಾಮಾಂತರ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯುತ್ತಿದೆ. ದೀರ್ಘ ಕಾಲದ ಹೂಡಿಕೆಗೆ ಜಿಲ್ಲೆ , ಅಚ್ಚು ಮೆಚ್ಚಿನ ಸ್ಥಳವಾಗಿದ್ದು, ಹೂಡಿಕೆದಾರರನ್ನು ಎಂದೂ ನಿರಾಶೆಗೊಳಿಸಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

Related Stories