ಓಟ್ಸ್ ಬಗ್ಗೆ ತಿಳಿದುಕೊಂಡವರು ಧಾನ್ಯಗಳ ಬಗ್ಗೆ ಯಾಕೆ ತಿಳಿದುಕೊಂಡಿಲ್ಲ..?ಸಿರಿಧಾನ್ಯಗಳು ಇವತ್ತಿಗೂ “ವಿಶೇಷ” ಆಹಾರ..!

ಟೀಮ್​ ವೈ.ಎಸ್​. ಕನ್ನಡ

ಓಟ್ಸ್ ಬಗ್ಗೆ ತಿಳಿದುಕೊಂಡವರು ಧಾನ್ಯಗಳ ಬಗ್ಗೆ ಯಾಕೆ ತಿಳಿದುಕೊಂಡಿಲ್ಲ..?ಸಿರಿಧಾನ್ಯಗಳು ಇವತ್ತಿಗೂ “ವಿಶೇಷ” ಆಹಾರ..!

Tuesday May 02, 2017,

3 min Read

ಸಿರಿಧಾನ್ಯಗಳು ಮನುಷ್ಯನ ಆರೋಗ್ಯಕ್ಕಾಗಿ ಎಲ್ಲಾ ರೀತಿಯಿಂದಲೂ ಸಹಕಾರಿ. ಸಿರಿಧಾನ್ಯಗಳಲ್ಲಿ ಹೆಚ್ಚು ಪೋಷಕಾಂಶಗಳು, ಹೆಚ್ಚು ಫೈಬರ್ ಅಂಶಗಳು ಮತ್ತು ಕಡಿಮೆ ಪ್ರಮಾಣದ ಗ್ಲೇಮಿಕ್ ಇಂಡೆಕ್ಸ್, ಹೆಚ್ಚು ಫೈಬರ್ ಅಂಶಗಳು ಇರುವುದರಿಂದ ಇವುಗಳು ಆರೋಗ್ಯಕ್ಕೆ ಪೂರಕವಾಗಿದೆ. ಸ್ಥೂಲಕಾಯ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೈಪರ್ ಟೆನ್ಷನ್ ಮತ್ತು ಅನಿಮಿಯಾಗಳ ವಿರುದ್ಧ ಈ ಮಿಲ್ಲೆಟ್ಸ್ ಹೋರಾಡುತ್ತವೆ.

ಅನಾರೋಗ್ಯಕಾರಿ ಆಹಾರ ಪದ್ಧತಿ ಸಾಕಷ್ಟು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಭಾರತದಲ್ಲಿ ಸಕ್ಕರೆ ಕಾಯಿಲೆ, ಹೈಪರ್ ಟೆನ್ಷನ್ ಮತ್ತು ಸ್ಥೂಲಕಾಯ ಇವು ಭಾರತದಲ್ಲಿ ಕಂಡು ಬರುತ್ತಿರುವ ಪ್ರಮುಖ ಕಾಯಿಲೆಗಳಾಗಿವೆ. ಫಾಸ್ಟ್ ಫುಡ್ಸ್, ಜಂಕ್ ಫುಡ್ಸ್ ಮತ್ತು ಅಕ್ಕಿ, ರಾಗಿ ಗೋಧಿಗಳಲ್ಲಿನ ರಾಸಾಯನಿಕ ಬಳಿಕೆಯಿಂದ ಆಹಾರ ವಿಷಪೂರಿತವಾಗಿದೆ. ಪೋಷಕಾಂಶಗಳು ಮತ್ತು ಫೈಬರ್ ಅಂಶ ಆಹಾರದಲ್ಲಿ ಇಲ್ಲದೇ ಇರುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತೆ ಮಾಡಿದೆ.

image


ಅಚ್ಚರಿ ಅಂದ್ರೆ ಭಾರತದಲ್ಲಿ ಸಿರಿಧಾನ್ಯಗಳನ್ನು ಜನರು ಹೆಚ್ಚಾಗಿ ಉಪಯೋಗಿಸುತ್ತಿಲ್ಲ. ಅಷ್ಟೇ ಅಲ್ಲ ಈ ಬೆಳೆಗಳನ್ನು ಪ್ರಮುಖ ಬೆಳೆಗಳನ್ನಾಗಿ ಬೆಳೆಯುವುದು ಕೂಡ ಅಪರೂಪವಾಗಿದೆ. ಆದ್ರೆ ಇತ್ತೀಚೆಗೆ ಧಾನ್ಯಗಳು ಆರೋಗ್ಯದ ಸಮತೋಲನಕ್ಕೆ ಮತ್ತು ಆಹಾರ ಪದ್ಧತಿಯ ಅನಿವಾರ್ಯ ಭಾಗವಾಗುತ್ತಿದೆ.

ಸಿರಿಧಾನ್ಯಗಳು ಅಂದ್ರೆ ಏನು..?

ಭಾರತದಲ್ಲಿ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಈ ಬಗ್ಗೆ ಕಾಳಜಿ ಹೆಚ್ಚೇ ಇದೆ. ಜಿಮ್, ಫಿಟ್ನೆಸ್ ಸೆಂಟರ್​ಗಳಲ್ಲಿ ಜನರು ಬೆವರು ಹರಿಸುತ್ತಿದ್ದಾರೆ. ಜಂಕ್ ಫುಡ್ ಮತ್ತು ಫಾಸ್ಟ್ ಫುಡ್​ಗಳ ಬದಲು ಆರೋಗ್ಯಕಾರಿ ಆಹಾರಗಳ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಓಟ್ಸ್ ಮತ್ತು ಸಿರಿಧಾನ್ಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಓಟ್ಸ್ ಮತ್ತು ಕ್ವಿನೊ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ಭಾರತೀಯರು ಕೂಡ ಅದರ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದಾರೆ ಎಂದು ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮಿಲ್ಲೆಟ್ಸ್ ರಿಸರ್ಚ್​ನ ಡೈರೆಕ್ಟರ್ ವಿಕಾಸ್ ತೊನಪಿ ಅಭಿಪ್ರಾಯ ಪಡುತ್ತಾರೆ.

ಭಾರತದಲ್ಲಿ ಓಟ್ಸ್ ಮತ್ತು ಕ್ವಿನೋಗಿಂತಲೂ ಹೆಚ್ಚು ಆರೋಗ್ಯಕಾರಿಯಾಗಿರುವ ಸಿರಿಧಾನ್ಯಗಳಿವೆ. ಆದ್ರೆ ಅವುಗಳ ಬಗ್ಗೆ ಜನರಿಗೆ ಹೆಚ್ಚು ಗೊತ್ತಿಲ್ಲ. ಹೀಗಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಆಹಾರದ ಶೈಲಿಗೆ ಹೆಚ್ಚು ಮಾರು ಹೋಗಿದ್ದಾರೆ. ಜನರಿಗೆ ಓಟ್ಸ್ ಮತ್ತು ಕ್ವಿನೋಗಳ ಬಗ್ಗೆ ಆನ್​ಲೈನ್ ಗಳಲ್ಲಿ ಹೆಚ್ಚು ಮಾಹಿತಿ ಸಿಗುತ್ತದೆ. ಆದ್ರೆ ನಮ್ಮದೇ ಆಹಾರಗಳ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದೇ ಇರುವುದು ಹಿನ್ನಡೆಗೆ ಕಾರಣವಾಗಿದೆ.

“ ಸಿರಿಧಾನ್ಯಗಳ ಬಗ್ಗೆ ನನಗೆ ಗೊತ್ತಿದೆ. ನನ್ನ ತಾತ ಮತ್ತು ಅಜ್ಜಿ ಅದನ್ನು ಆಹಾರವನ್ನಾಗಿ ಬಳಸುತ್ತಿದ್ದರು. ಆದ್ರೆ ಸೂಪರ್ ಮಾರ್ಕೆಟ್​ಗಳಲ್ಲಿ ಅವುಗಳ ಲಭ್ಯತೆ ಕಡಿಮೆ ಇದೆ. ಶಾಪಿಂಗ್ ವೇಳೆಯಲ್ಲಿ ಅದು ಸಿಗುವುದು ಅಪರೂಪ ”

ಇದು ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ ಒಬ್ಬರ ಅಭಿಪ್ರಾಯ. ಸೂಪರ್ ಮಾರ್ಕೆಟ್​ಗಳಲ್ಲಿ ಎಲ್ಲವೂ ಒಂದೇ ಬಾರಿಗೆ ಸಿಗುತ್ತದೆ. ಆದ್ರೆ ಸಿರಿಧಾನ್ಯಗಳು ಮಾತ್ರ ಅಲ್ಲಿ ಅಪರೂಪವಾಗಿದೆ. ಹೀಗಾಗಿ ಜನರು ಸಿರಿಧಾನ್ಯಗಳ ಬಗ್ಗೆ ಕಡಿಮೆ ಜ್ಞಾನ ಹೊಂದಿದ್ದಾರೆ. ಆದ್ರೆ ದುಬಾರಿ ಆಗಿರುವ ಓಟ್ಸ್ ಮತ್ತು ಕ್ವಿನೋಗಳು ಟ್ರೆಂಡ್ ಆಗಿರುವುದರಿಂದ ಜನರು ಅದನ್ನು ಖರೀದಿ ಮಾಡುತ್ತಿದ್ದಾರೆ.

ಬೆಳೆ ಸಮಸ್ಯೆಗಳ ನಡುವೆ

1960ರಲ್ಲಿ ಭಾರತದಲ್ಲಿ ಆದ ಹಸಿರು ಕ್ರಾಂತಿ ದೇಶದಲ್ಲಿ ಕೃಷಿಯ ಆಯಾಮವನ್ನೇ ಬದಲಿಸಿತ್ತು. ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡುವ ಕೃಷಿಗೆ ಬುನಾಧಿ ಹಾಕಿತ್ತು. ಗುಣಮಟ್ಟದ ಕೃಷಿ ಬೀಜಗಳ ಬಳಕೆ ರೈತರು ಕೃಷಿ ಬಗ್ಗೆ ಯೋಚನೆ ಮಾಡುತ್ತಿದ್ದ ದಿಕ್ಕುಗಳನ್ನು ಬದಲಿಸಿತ್ತು. ಭತ್ತ, ಗೋದಿ ಮತ್ತು ಇತರೆ ಬೆಳೆಗಳು ಆಧುನಿಕ ಕೃಷಿಕ್ರಾಂತಿಯಿಂದ ಹೆಚ್ಚು ಇಳುವರಿ ನೀಡಲಾರಂಭಿಸಿದವು. ಹಸಿರು ಕ್ರಾಂತಿ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿತ್ತು. ಮತ್ತೊಂದು ಕಡೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಏರು-ಪೇರಿಗೂ ಕಾರಣವಾಗಿತ್ತು. ಇದೆಲ್ಲದರ ಜೊತೆಗೆ ಅತಿಯಾದ ರಸಗೊಬ್ಬರ ಹಾಗೂರಾಸಾಯನಿಕಗಳ ಬಳಕೆ ನಿಧಾನವಾಗಿ ಮಣ್ಣಿನಲ್ಲಿದ್ದ ನೈಸರ್ಗಿಕ ಅಂಶಗಳನ್ನು ಕಡಿಮೆ ಆಗುವಂತೆ ಮಾಡಿತ್ತು.

ಇದನ್ನು ಓದಿ: ಮಣ್ಣಿನ ಗುಣಮಟ್ಟ ಕಾಪಾಡಲು ಬೇಕು ಸಾವಯವ ಕೃಷಿ - ಸಿರಿಧಾನ್ಯಗಳಲ್ಲಿದೆ ಉತ್ತಮ ಆರೋಗ್ಯದ ಸೀಕ್ರೆಟ್

ಸಿರಿಧಾನ್ಯಗಳನ್ನು ಬಡವರು ಮತ್ತು ಕೂಲಿ ಕಾರ್ಮಿಕರು ಸೇವಿಸುತ್ತಾರೆ ಅನ್ನುವ ಮಾತಿತ್ತು. ಆದ್ರೆ ಇವತ್ತು ಸಿರಿಧಾನ್ಯಗಳಲ್ಲಿರುವ ಪೋಷಕಾಂಶಗಳ ಅರಿವು ಬಂದಿದೆ. ಹೀಗಾಗಿ ಅದನ್ನು ಎಲ್ಲರೂ ಆಹಾರ ಕ್ರಮದಲ್ಲಿ ಸೇರಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಿರಿಧಾನ್ಯಗಳ ಬೇಡಿಕೆ ಹೆಚ್ಚುತ್ತಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಧಾನ್ಯಗಳಿಗೆ ಬೇಡಿಕೆ ನಿಧಾನವಾಗಿ ಹೆಚ್ಚುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸಾವಯವ ಪದ್ಧತಿಯಿಂದ ಬೆಳೆದ ಆಹಾರಗಳನ್ನು ಹೊಟೇಲ್​ಗಳಲ್ಲೂ ಕಾಣಬಹುದು. ಸಾವಯವ ಮತ್ತು ಕೃಷಿ ಉತ್ಪನ್ನಗಳನ್ನು ಮಾರಾಟಮಾಡುವ ಅಂಗಡಿಗಳನ್ನು ಕೂಡ ಕಾಣಬಹುದು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು ಟ್ರೆಂಡ್ ಆಗಿವೆ.

ಇವತ್ತು ಗ್ರಾಹಕರು ರೆಡಿ ಟು ಈಟ್ ವ್ಯವಸ್ಥೆಗಳನ್ನು ಕೂಡ ಹೊಂದಿದ್ದಾರೆ. ಆನ್​ಲೈನ್ ಮಾರುಕಟ್ಟೆಗಳಲ್ಲಿ ಮತ್ತು ಈಸೀ ಪ್ಯಾಕ್​ಗಳಲ್ಲಿ ಸಿರಿಧಾನ್ಯಗಳಿಂದ ತಯಾರಾದ ಆಹಾರ ಉತ್ಪನ್ನಗಳನ್ನು ಪಡೆಯುವಂತಹ ವ್ಯವಸ್ಥೆ ಕೂಡ ಇದೆ. ರಾಗಿ ಮತ್ತು ಜೋಳದಿಂದ ತಯಾರಿಸಿದ ಆಹಾರಗಳು ಕೂಡ ಬೆಂಗಳೂರಿನಲ್ಲಿ ಲಭ್ಯವಿದೆ.

ಕಟ್ಟಕಡೆಯ ಚಾಲೆಂಜ್

ಇತ್ತಿಚಿನ ದಿನಗಳಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗಿರುವುದು ನಿಜ. ಆದರೆ ಅದರ ಬಳಕೆಯ ಬಗ್ಗೆ ಎಲ್ಲರಿಗೂ ತಿಳಿಯಬೇಕು. ಯಾಕಂದ್ರೆ ಇವತ್ತು ನಗರ ಪ್ರದೇಶದ ಜನರು ಸಿರಧಾನ್ಯಗಳ ಬದಲು ಓಟ್ಸ್​ನಂತಹ ಆಹಾರಗಳ ಕಡೆಗೆ ಗಮನ ಕೊಡುತ್ತಿದ್ದಾರೆ. ಹಳ್ಳಿ ಪ್ರದೇಶಗಳಲ್ಲಿ ಅಕ್ಕಿ ಮತ್ತು ಗೋಧಿ ಹೆಚ್ಚು ಬಳಕೆಯಲ್ಲಿದೆ. ಅಷ್ಟೇ ಅಲ್ಲ ಸಿರಿಧಾನ್ಯಗಳ ಲಭ್ಯತೆ ಎಲ್ಲಾ ಕಡೆಯೂ ಇರುವಂತೆ ಮಾಡಬೇಕಿದೆ. ರೈತರು ಮತ್ತು ಗ್ರಾಹಕರ ನಡುವಿನ ಅಂತರ ಇನ್ನಷ್ಟು ಕಡಿಮೆ ಆಗಬೇಕಿದೆ.

ಹೆಚ್ಚಿನ ಜನರು ಸಿರಿಧಾನ್ಯಗಳನ್ನು ವಿಶೇಷ ಆಹಾರವೆಂದು ಪರಿಗಣಿಸುತ್ತಾರೆ. ಅಚ್ಚರಿ ಅಂದರೆ ಅದನ್ನು ದಿನನಿತ್ಯದ ಆಹಾರಗಳಲ್ಲೂ ಬಳಸಬಹುದು. ಅಷ್ಟೇ ಅಲ್ಲ ಇವುಗಳಿಂದ ಸಾಕಷ್ಟು ವಿಭಿನ್ನ ರೀತಿಯ ಆಹಾರಗಳನ್ನು ಕೂಡ ತಯಾರಿಸಬಹುದು. ದೋಸೆ, ಇಡ್ಲಿ, ಖಾರಾಭಾತ್ ಸೇರಿದಂತೆ ಐಸ್ ಕ್ರೀಮ್, ಪಾಸ್ತಾಗಳಲ್ಲೂ ಸಿರಿಧಾನ್ಯಗಳನ್ನು ಬಳಸಿಕೊಳ್ಳಬಹುದು.

 ಸಿರಿಧಾನ್ಯಗಳು ಕೇವಲ ಬಡವರ ಆಹಾರವಾಗಿ ಉಳಿದಿಲ್ಲ. ಅವುಗಳು ಅತೀ ಹೆಚ್ಚು ಪೋಷಕಾಂಶಗಳನ್ನು ಮತ್ತು ಆರೋಗ್ಯಕ್ಕೆ ಅಗತ್ಯವಾಗಿರುವ ಅಂಶಗಳನ್ನು ಹೊಂದಿವೆ. ಜೈವಿಕ ಹಾಗೂ ಸಾವಯವ ಕೃಷಿ ಮೂಲಕ ಸಿರಿಧಾನ್ಯಗಳನ್ನು ಬೆಳೆಯುವುದು ಪರಿಸರಕ್ಕೂ ಪೂರಕವಾಗಿದೆ. ಕಡಿಮೆ ನೀರಿನಲ್ಲೂ ಸಿರಿಧಾನ್ಯಗಳು ಬೆಳೆಯುವುದರಿಂದ ನಷ್ಟದ ಯೋಚನೆ ಹತ್ತಿರವೂ ಸುಳಿಯುವುದಿಲ್ಲ. 

ಇದನ್ನು ಓದಿ:

1. ಕೃಷಿ ಆಧಾರಿತ ಸ್ಟಾರ್ಟ್ ಅಪ್​ಗಳಿಗೆ ಸರಕಾರದಿಂದ ಪ್ರೋತ್ಸಾಹ- 10 ಕೋಟಿ ರೂಪಾಯಿಗಳ ನಿಧಿಯನ್ನು ಮೀಸಲಿಟ್ಟ ರಾಜ್ಯ ಸರಕಾರ

2. ಸಿರಿಧಾನ್ಯ ಮೇಳಗಳಲ್ಲಿ ಮಿಂಚಿದ “ಕನಸಿನ ಮರ”- ಗ್ರಾಹಕರ ಅಭಿಮತಗಳೇ ಸರಕಾರಕ್ಕೆ ವರ..!

3. ರೈತರಿಗೆ ಎಲ್ಲವೂ ಗೊತ್ತು..ಆದ್ರೆ..?