ಪತ್ನಿ ಯಶಸ್ವಿ ಉದ್ಯಮಿಯಾಗಲು ಕಾರಣವಾಯ್ತು ಪತಿಯ ದಾಂಪತ್ಯ ದ್ರೋಹ

ಟೀಮ್​ ವೈ.ಎಸ್​. ಕನ್ನಡ

0


ಕೊಲ್ಕತ್ತಾದ ಶಿಕ್ಷಕ ಕುಟುಂಬವೊಂದಲ್ಲಿ ಜನಿಸಿದ ಸುದೇಶನಾ ಬ್ಯಾನರ್ಜಿ ಎಂಜಿನಿಯರಿಂಗ್ ಕಂಪನಿಯೊಂದರ ಮುಖ್ಯಸ್ಥರಾಗಿದ್ದಾರೆ. ದೇಶದ ಅನೇಕ ಪ್ರಖ್ಯಾತ ಕಂಪನಿಗಳಿಗೆ ಅವರು ಸೇವೆ ನೀಡ್ತಾ ಇದ್ದಾರೆ. ಸಾಮಾನ್ಯ ಗೃಹಿಣಿಯಿಂದ ಶಿಕ್ಷಕಿಯಾಗಿ,ಶಿಕ್ಷಕಿಯಿಂದ ಈ ಹಂತದವರೆಗೆ ತಲುಪಿರುವ ಅವರು ಆತ್ಮಸನ್ಮಾನದೊಂದಿಗೆ ಸ್ವಾವಲಂಭಿಯಾಗಿ ಬದುಕಲು ಇಚ್ಛಿಸುವ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಶಿಕ್ಷಣ ಪೂರ್ಣಗೊಳಿಸಿದ ನಂತರ ಸುದೇಶನಾ ಪ್ರೇಮ ವಿವಾಹವಾದ್ರು. ಅವರ ಈ ನಿರ್ಧಾರವೇ ಬಹುಶಃ ಸುದೇಶನಾರ ಈ ಯಶಸ್ವಿಗೆ ಕಾರಣ. ಮದುವೆಯ ನಂತರ ಪತಿಗೆ ಬೇರೆ ಮಹಿಳೆಯರ ಜೊತೆಯೂ ಸಂಬಂಧ ಇರುವುದು ತಿಳಿಯಿತು. ಮತ್ತಷ್ಟು ಆಘಾತವನ್ನುಂಟು ಮಾಡಿದ್ದು, ಅವರ ಸ್ನೇಹಿತೆಯ ಜೊತೆ ಪತಿ ಸಂಬಂಧ ಹೊಂದಿದ್ದಾನೆ ಎಂಬುದು. ಜೊತೆಗೆ ಅವರಿಬ್ಬರಿಗೆ ಒಂದು ಮಗು ಕೂಡ ಇತ್ತು. ಗಂಡನ ಈ ಹೇಸಿಗೆ ಕೆಲಸದಿಂದ ಬೇಸತ್ತ ಸುದೇಶನಾ ಮಹತ್ವದ ನಿರ್ಧಾರಕ್ಕೆ ಬಂದರು. ಗಂಡನಿಂದ ವಿಚ್ಛೇದನ ಪಡೆದ್ರು.

ಗಂಡನಿಂದ ವಿಚ್ಛೇದನ ಪಡೆದ ನಂತರ ಸುದೇಶನಾ ಸ್ಥಳೀಯ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡರು. ವಾಸಕ್ಕೊಂದು ಸೂರು ಹೊಂದುವುದು ಅವರು ಮೊದಲ ಗುರಿಯಾಗಿತ್ತು. ಸಾಕಷ್ಟು ಕಷ್ಟ ಅನುಭವಿಸಿದ ಅವರು ಮನೆಯೊಂದನ್ನು ಬಾಡಿಗೆಗೆ ಪಡೆದರು. ಅಲ್ಲಿಂದ ಅವರ ಹೋರಾಟ ಹಾಗೂ ಕಠಿಣ ಪರಿಶ್ರಮದ ದಾರಿ ಆರಂಭವಾಯ್ತು.

ಸಮಾಜದಲ್ಲಿ ಒಂಟಿಯಾಗಿ ಬದುಕುವ ಮಹಿಳೆಗೆ ಆ ಕಾಲದಲ್ಲಿ ಬಾಡಿಗೆ ಮನೆ ಸಿಗ್ತಾ ಇರಲಿಲ್ಲ. ಅವರಿಗೆ ಶಾಲೆಯಲ್ಲಿ 10 ಸಾವಿರ ರೂಪಾಯಿ ವೇತನ ಸಿಗ್ತಾ ಇತ್ತು. ಅದ್ರಲ್ಲಿ ಬಾಡಿಗೆ ಕೊಡುವುದಕ್ಕೆ ಎಲ್ಲ ಹಣ ಖರ್ಚಾಗಿ ಹೋಗ್ತಾ ಇತ್ತು. ಎಷ್ಟೇ ಕಷ್ಟ ಬಂದ್ರೂ ಸುದೇಶನಾ ಧೈರ್ಯಗೆಡಲಿಲ್ಲ. ಆ ಸಂದರ್ಭದಲ್ಲೂ ಅವರು ಬೇರೆಯವರ ಮುಂದೆ ಕೈಯೊಡ್ಡಲಿಲ್ಲ.

ಕಾಲೇಜಿಗೆ ಹೋಗುತ್ತಿದ್ದ ವೇಳೆ ಅವರು ಅಟೋಕ್ಯಾಡ್ ಕಲಿತಿದ್ದರು. ಅದು ಈಗ ಅವರ ಉಪಯೋಗಕ್ಕೆ ಬಂತು. ಶಾಲೆ ಮುಗಿದ ನಂತರ ಸ್ನೇಹಿತರೊಬ್ಬರ ಇನ್ಸ್ಟಿಟ್ಯೂಟ್ ನಲ್ಲಿ ಕಂಪ್ಯೂಟರ್ ಕಲಿಸುತ್ತ ಪಾರ್ಟ್ ಟೈಂ ಜಾಬ್ ಮಾಡ್ತಾ ಇದ್ದರು ಸುದೇಶನಾ. ಉತ್ತಮ ಕೆಲಸದ ಹಿನ್ನೆಲೆಯಲ್ಲಿ ಕೆಲ ದಿನಗಳಲ್ಲಿ ಅವರು ಸ್ನೇಹಿತರ ಇನ್ಸ್ಟಿಟ್ಯೂಟ್ ನಲ್ಲಿ ಪಾಲುದಾರಿಗೆ ಪಡೆದರು. ಇನ್ಸ್ಟಿಟ್ಯೂಟ್ ಹೆಸರನ್ನು ಕೂಡ ಬದಲಾಯಿಸಿದ್ರು. `ಡಿಜಿಟೆಕ್ ಹೆಚ್ ಆರ್’ ಎಂದು ಹೆಸರಿಟ್ಟರು. ತಮ್ಮ ಕೆಲ ಆಭರಣ ಮಾರಿ ಈ ಕೆಲಸಕ್ಕೆ ಅವಶ್ಯವಿದ್ದ ಬಂಡವಾಳವನ್ನು ಒದಗಿಸಿದ್ರು.

ಅಟೋಕ್ಯಾಡ್ ಹಾಗೂ Staypro ಟ್ರೈನಿಂಗ್ ಕೊಡುವುದು ಅವರ ಕಂಪನಿಯ ಮುಖ್ಯ ಉದ್ದೇಶವಾಗಿತ್ತು. ಈ ಕೆಲಸಕ್ಕೆ ಪೂರ್ತಿ ಸಮಯ ನೀಡುವ ಹಿನ್ನೆಲೆಯಲ್ಲಿ ಅವರು ಶಿಕ್ಷಕಿ ಕೆಲಸವನ್ನು ಬಿಟ್ಟರು. ಅವರಲ್ಲಿ ತರಬೇತಿ ಪಡೆದ ಕೆಲವರಿಂದ ಕೆಲವೊಂದು ಪ್ರಾಜೆಕ್ಟ್ ಸುದೇಶನಾ ಕೈ ಸೇರಿತು. ಕ್ಯಾಡ್ ಡ್ರಾಯಿಂಗ್ ಹಾರ್ಡ್ ಕಾಪಿಯನ್ನು ಸಾಫ್ಟ್​ ಕಾಪಿಗೆ ವರ್ಗಾಯಿಸುವ ಕೆಲಸ ಸಿಕ್ಕಿತು. ಈ ಮೂಲಕ ಡಿಜಿಟಲ್ ದುನಿಯಾಕ್ಕೆ ಎಂಟ್ರಿ ಕೊಟ್ಟರು ಸುದೇಶನಾ.

ಎಂಜಿನಿಯರಿಂಗ್ ಬಗ್ಗೆ ಪ್ರಾಥಮಿಕ ಜ್ಞಾನವಿಲ್ಲದ ಸುದೇಶನಾ ತಮ್ಮ ಇಚ್ಛಾಶಕ್ತಿ ಬಲದಿಂದ ಸಾಕಷ್ಟು ಕಲಿಯುತ್ತ ಬಂದರು. 2008ರಲ್ಲಿ ತರಬೇತಿ ನಿಮಿತ್ತ ಅವರು ರಾಯ್ಪುರಕ್ಕೆ ಹೋಗಿದ್ದರು. ಅಲ್ಲಿ ಒಂದು ಕಂಪನಿಯಿಂದ ` ಡಿಟೇಲ್ ಎಂಜಿನಿಯರಿಂಗ್ ಪ್ರಾಜೆಕ್ಟ್ ‘ ಸಿದ್ಧಪಡಿಸಿಕೊಡುವ ಕೆಲಸ ದೊರೆಯಿತು.

ಸುದೇಶನಾ ತಮ್ಮೆಲ್ಲ ಪರಿಶ್ರಮದಿಂದ ಈ ಪ್ರಾಜೆಕ್ಟ್ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಸುದೇಶನಾ ಕೆಲಸವನ್ನು ಕಂಪನಿ ಮೆಚ್ಚಿಕೊಂಡಿತು. ಜಿಂದಾಲ್ ಸ್ಟೀಲ್ ಸೇರಿದಂತೆ ಅನೇಕ ದೊಡ್ಡ ಕಂಪನಿಗಳು ತರಬೇತಿ, ವಿಚಾರಗೋಷ್ಠಿಗಳನ್ನು ನಡೆಸಲು ಸುದೇಶನಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡವು.

2011ರಲ್ಲಿ ಸುದೇಶನಾ ವೃತ್ತಿ ಜೀವನದಲ್ಲಿ ಮತ್ತೊಂದು ತಿರುವು ಸಿಗ್ತು. ತಮ್ಮ ಕಂಪನಿಯನ್ನು ಖಾಸಗಿ ಕಂಪನಿಯಾಗಿ ಬದಲಾಯಿಸಿದ್ರು.`ಪಿಎಸ್ ಡಿಜಿಟೆಕ್ ಹೆಚ್ ಆರ್’ ಎಂದು ಹೆಸರು ಬದಲಾಯಿಸಿದ್ರು. ಪಿಎಸ್ ಎಂದರೆ ಪ್ರೊಜೆಕ್ಟ್ ಸೊಲೂಷನ್ ಎಂದರ್ಥ.

ಸುದೇಶನಾ ಅಲ್ಲಿಗೆ ನಿಲ್ಲಲಿಲ್ಲ. ಕಂಪನಿಯನ್ನು ವಿಸ್ತಾರಗೊಳಿಸಲು ವಿದೇಶಕ್ಕೆ ಹೋಗಿದ್ದರು. ಆಸ್ಟ್ರೇಲಿಯಾ ಮತ್ತು ದುಬೈನಲ್ಲಿ ಪ್ರೊಜೆಕ್ಟ್ ಮಾಡಿದ್ರು. ಇದರ ಜೊತೆಗೆ ಶ್ರೀಲಂಕಾದಲ್ಲಿ ಸುನಾಮಿ ಬಂದು ಹಾಳಾಗಿದ್ದ ರೈಲ್ವೆ ಲೈನನ್ನು ಮರು ಸ್ಥಾಪಿಸುವ ಯೋಜನೆ ಕೈಗೆತ್ತಿಕೊಂಡು ಅದರಲ್ಲೂ ಯಶಸ್ವಿಯಾದ್ರು.

ತಿಂಗಳಲ್ಲಿ 20 ದಿನ ಅವರು ಹೊರಗಡೆ ಓಡಾಡ್ತಾರೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷೆಯಾಗಿರುವ ಅವರು ಕಂಪನಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ.ಮಾರ್ಚ್ 2012ರಲ್ಲಿ ಕಂಪನಿಯ ವಾರ್ಷಿಕ ಆದಾಯ ಸುಮಾರು ಒಂದೂವರೆ ಕೋಟಿ ಇತ್ತು. ಭವಿಷ್ಯದಲ್ಲಿ ವಾರ್ಷಿಕ ವಹಿವಾಟನ್ನು 60 ಕೋಟಿಗೆ ತಂದು ನಿಲ್ಲಿಸುವ ಕನಸು ಕಂಡಿದ್ದಾರೆ ಸುದೇಶನಾ.

ಅವರ ಯಶಸ್ಸಿನ ಹಿಂದಿನ ರಹಸ್ಯ ಅವರ ಪತಿಯಂತೆ. ಒಬ್ಬ ಏಕಾಂಗಿ ಮಹಿಳೆ ಕೂಡ ಸಾಧಿಸಬಲ್ಲಳು, ವಿಶ್ವವನ್ನು ಗೆಲ್ಲಬಲ್ಲಳು ಎಂಬುದನ್ನು ಆತನಿಗೆ ತೋರಿಸಲು ಬಯಸುತ್ತಾರಂತೆ. ಜೀವನದಲ್ಲಿ ಬಂದ ಕಷ್ಟ ಅವರನ್ನು ಮುಂದೆ ಹೋಗಲು ಪ್ರೇರೇಪಣೆ ನೀಡಿದ್ದಲ್ಲದೇ ಒಂದು ಉತ್ತಮ ವ್ಯಕ್ತಿಯನ್ನಾಗಿ ಮಾಡಿದೆಯಂತೆ.


ಲೇಖಕರು: ನಿಶಾಂತ್ ಗೋಯೆಲ್

ಅನುವಾದಕರು: ರೂಪಾ ಹೆಗಡೆ