ತಾಂತ್ರಿಕ ಮೇಳ 2017: ಐಟಿ, ಬಿಟಿ ಮತ್ತು ಇತರೆ ಸಂಶೋಧನೆಗಳ ಸಮಾಗಮ

0

ಅನೇಕ ಅಧ್ಯನಗಳ ಪ್ರಕಾರ ಬೆಂಗಳೂರು ಅತ್ಯಂತ ಮುಂಚೂಣಿಯಲ್ಲಿರುವ ಸಂಶೋಧನಾ ಕೇಂದ್ರವಾಗಿದೆ. ಸುಮಾರು ಶೇ. 27ರಷ್ಟು ಸ್ಟಾರ್ಟ್‌ಅಪ್‌ಗಳು ಬೆಂಗಳೂರಿನಲ್ಲೇ ನೆಲೆಗೊಂಡಿವೆ ಎಂಡು ಕೆಲವು ಅಧ್ಯಯನಗಳ ಮೂಲಕ ತಿಳಿದು ಬಂದಿದೆ.

ಶೇ. 80 ರಷ್ಟು ಜಾಗತಿಕ ವಲಯದ ಅನೇಕ ಸಂಸ್ಥೆಗಳು ತಮ್ಮ ಸಂಶೋಧನ ಮತ್ತು ಅಭಿವೃದ್ಧಿ ಘಟಕಗಳನ್ನು ಬೆಂಗಳೂರಿನಲ್ಲೇ ಸ್ಥಾಪಿಸಿವೆ. ಕ್ಯಾಲಿಫೋರ್ನಿಯ, ಬೋಸ್ಟನ್ ಮತ್ತು ಲಂಡನ್ ನಂತರ ಬೆಂಗಳೂರೇ ನಾಲ್ಕನೇ ಅತಿ ದೊಡ್ಡ ಐಟಿ ಹಬ್ ಎಂದು ಕರೆಯಲಾಗಿದೆ ಎಂದರೆ ಎಂತಹ ಹೆಮ್ಮೆಯಾಗುವದಲ್ಲವೆ?

ಇದಕ್ಕೆಲ್ಲ ಬೆಂಗಳೂರಿನಲ್ಲಿರುವ ಮತ್ತು ಬೇರೆಕಡೆಯಿಂದ ಇಲ್ಲಿಗೆ ವಲಸೆ ಬಂದಿರುವ ಅನೇಕ ಯುವ ಪ್ರತಿಭೆಗಳು ಮತ್ತು ನಮ್ಮ ರಾಜ್ಯ ಸರ್ಕಾರದ ಅಪೂರ್ವ ಬೆಂಬಲವೇ ಕಾರಣವೆಂದರೆ ಸುಳ್ಳಾಗಲಾರದು.

ಬೆಂಗಳೂರುಐಟಿ.ಬಿಜ್ ನ 20ನೇ ಆವೃತ್ತಿ,ಬೆಂಗಳೂರು ಇಂಡಿಯ ಬಯೋದ 17 ನೇ ಆವೃತ್ತಿ ಮತ್ತು ಮೇಕರ್ ಫೇರ್‌ನ 3ನೇ ಆವೃತ್ತಿಗಳು ಒಟ್ಟೊಟ್ಟಿಗೆ ಒಂದೇ ಸೂರಿನಡಿ ಒಗ್ಗಟ್ಟಿನಿಂದ ಈ ಸಮಾವೇಶವನ್ನು ಹಮ್ಮಿಕೊಂಡಿವೆ. "ಐಡಿಯೇಟ್, ಇನ್ನೋವೇಟ್ ಮತ್ತು ಇನ್ವೆಂಟ್" ಅಂದರೆ "ಕಲ್ಪನೆ, ನಾವಿನ್ಯತೆ ಮತ್ತು ಅವಿಷ್ಕಾರ" ಎಂಬ ಮೂರು ಅಂಶಗಳ ಆಧಾರದ ಮೇಲೆ ಈ ಸಮಾವೇಶ ನಡೆಯಲಿದೆ.

ಬ್ಲಾಕ್ ಚೈನ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎನಿಮೇಶನ್ ತಂತ್ರಜ್ಞಾನ, ಮತ್ತು ಸೈಬರ್ ಸೆಕ್ಯುರಿಟಿ ಸಂಬಂಧಿಸಿದ ವಿಷಯಗಳ ಪ್ರಸ್ತಾವನೆ ಮತ್ತು ಚರ್ಚೆ ಕೂಡ ನಡೆಯಲಿವೆ. ೨೦೧೭ರ ನವಂಬರ್ 16 ರಿಂದ 18 ರವರೆಗೆ ನಡೆಯಲಿರುವ ಈ ಸಮ್ಮೇಳನದಲ್ಲಿ ದೇಶದ ಕಿರಿಯ, ಹಿರಿಯ ಹಾಗು ಮತ್ತಿತರ ಅನೇಕ ಸಂಸ್ಥೆಗಳು ಭಾಗವಹಿಸಲಿವೆ.

ಅಂತರರಾಷ್ಟ್ರೀಯ ವಿದ್ಯಾಸಂಸ್ಥೆ ಟುರ್ಕು ವಿಶ್ವವಿದ್ಯಾಲಯ, ನಮ್ಮ ಐಐಎಸ್‌ಸಿ ಮತ್ತು ಇಸ್ರೋ ಸಂಸ್ಥೆಗಳು ಕೂಡ ಭಾಗವಹಿಸಲಿವೆ.

ಈ ಸಮಾವೇಶದಿಂದ ನಿರೀಕ್ಷಿಸಬಹುದಾದ ಅಂಶಗಳೇನೆಂದು ನೋಡೊಣ ಬನ್ನಿ...

ಐಟಿ ದಿಗ್ಗಜರ ಭೇಟಿಗೆ ಅವಕಾಶ, ರಸಪ್ರಶ್ನೆಯ ಕಾರ್ಯಕ್ರಮಗಳು, ಪ್ರಶಸ್ತಿ ಪ್ರದಾನಗಳು ಮತ್ತು ಅನೇಕ ಉದ್ಯಮಿಗಳ ಅನುಭವದ ನುಡಿಗಳಿಂದ ಭರಿತವಾದ ಕಾರ್ಯಕ್ರಮವು ಅನೇಕ ಯುವ ಉದ್ಯಮಿಗಳ ಕನಸನ್ನು ನನಸು ಮಾಡಲು ಹಾತೊರೆಯುತ್ತಿದೆ.

ದೊಡ್ಡ ಅಂತರರಾಷ್ಟ್ರೀಯ ಸಂಸ್ಥೆಗಳಾದ ಎನ್‌ವಿಡಿಯ, ಫಿಲಿಪ್ಸ್, ಜೀಈ, ಏಎನ್‌ಜೆಡ್, ಬಾಷ್, ಎನ್‌ಟಿ‌ಟಿ, ಸ್ಯಾಮ್ಸಂಗ್ ಮತ್ತು ಸ್ಯಾಪ್, ಭಾರತದ ಪ್ರವರ್ತಕರಾದ ಮಂಥನ, ಟ್ಯಾಲಿ, ಫರ್ಸ್ಟ್ ಸೋರ್ಸ್, ಸಬೆಕ್ಸ್ ಸಂಸ್ಥೆಗಳು ಮತ್ತು ಐಟಿ ದಿಗ್ಗಜ ಸಂಸ್ಥೆಗಳಾದ ಮೈಂಡ್‌ಟ್ರೀ, ಕಾಗ್ನಿಜ಼ೆಂಟ್ ಮತ್ತು ವಿಪ್ರೋ ಸಂಸ್ಥೆಗಳು ಕೂಡ ಭಾಗವಹಿಸುತ್ತಿವೆ. ಇಷ್ಟೇ ಅಲ್ಲದೆ ಅನೇಕ ಯಶಸ್ವಿ ಸ್ಟಾರ್ಟಪ್‌ಗಳಾದ ಝೋಹೊ, ಅರ್ಬನ್‌ಲ್ಯಾಡರ್, ಇನ್ಮೋಬಿ, ಇನ್‌ಸ್ಟಾಮೋಜೊ ಸಂಸ್ಥೆಗಳು ಮತ್ತು ಹಣ ಹೂಡಿಕೆದಾರರಾದ ಅವಾಂಟೋ, ಇನ್ವೆಂಟನ್ ಮತ್ತು ಯುನಿಟಸ್ ಕೂಡ ಭಾಗವಹಿಸುತ್ತಿವೆ.

ಈ ಮೇಳದ ಬಗ್ಗೆ ಕಿರಣ್ ಮಜುಂದಾರ್‌ರವರು "ಜೈವಿಕ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಜೊತೆ ಜೊತೆಯಾಗಿ ಹೆಜ್ಜೆ ಹಾಕಿ ನಡೆದರೆ ಚಮತ್ಕಾರವನ್ನೇ ಸೃಷ್ಟಿಸಬಹುದು. ಜಗತ್ತಿನಲ್ಲೇ ಮೊದಲ ಬಾರಿಗೆ ಒಟ್ಟೊಟ್ಟಿಗೆ ಐಟಿ, ಬಿಟಿ ಸಮಾವೇಶ ನಡೆಯುತ್ತಿದೆ" ಎಂದು ಹೇಳಿದರು.

ವರ್ಕ್ ಬೆಂಚ್ ಕಂಪನಿಯ ಕೋ-ಫೌಂಡರ್ ಆಗಿರುವ ಪವನ್ ಕುಮಾರ್‌ರವರು ’ಮೇಕರ್ ಫೇರ್’ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಈ ಮುಖಾಂತರ ಅವರು ಉದ್ಯಮಿಗಳು, ಕುಶಲಕರ್ಮಿಗಳು, ಹವ್ಯಾಸಿಗಳನ್ನು ಒಟ್ಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.

ಅತ್ಯಂತ ದೊಡ್ಡ ರಿಯಲ್ ಎಸ್ಟೇಟ್ ಕಂಪನಿಯ ಚೇರ್ಮನ್ ಮತ್ತು ಎಂಡಿ ಆಗಿರುವ ಶ್ರೀ ಬಿ ಪಿ ಕುಮಾರ್ ಬಾಬುರವರು ಮೇಕರ್ ಫೇರ್‌ಗೆ ತಮ್ಮ ಬೆಂಬಲವನ್ನು ಸೂಚಿಸುತ್ತ,"ಈ ಯುವ ಕುಶಲ ಕರ್ಮಿಗಳು ಮತ್ತು ಹವ್ಯಾಸಿಗಳಿಂದಲೇ ನಮ್ಮ ದೇಶದ ಭವಿಷ್ಯ ನಿರ್ಧರಿಸಲ್ಪಡುತ್ತದೆ" ಎಂದು ಹೇಳಿಕೆ ಕೊಟ್ಟರು.

’ಎನ್ ಐ ಟಿ ಐ - ಆಯೋಗಾದ ಸಿಈಓ ಅಮಿತಾಭ್ ಕಾಂತ್, ಮೇಕರ್ ಮೀಡಿಯದ ಸಿಈಓ, ಅಷ್ಟೇ ಅಲ್ಲ ಎಲೆ ಮರೆಯ ಕಾಯಿಯಂತಿರುವ ಉತ್ತರ ಕರ್ನಾಟಕದ ಕಲಬುರ್ಗಿಯ ಪ್ರಸನ್ನರವರು ಕೂಡ ಈ ಫೇರ್‌ನಲ್ಲಿ ಭಾಗವಹಿಸುವರಿದ್ದಾರೆ ಎಂದು ವರ್ಕ್ ಬೆಂಚ್ ಸಂಸ್ಥೆಯ ಪವನ್‌ಕುಮಾರ್‌ವರು ಹೇಳಿದ್ದಾರೆ.

ಇಷ್ಟೆಲ್ಲ ಮೂಲಭೂತ ಸೌಕರ್ಯ, ಸರ್ಕಾರದ ಅಪಾರ ಬೆಂಬಲ, ಅನೇಕ ತರಹದ ಕುಶಲಕರ್ಮಿಗಳಿರುವ ನಮ್ಮ ಈ ನಾಡು ಐಟಿ ಬಿಟಿ ಲೋಕದಲ್ಲಿ ಮಿನುಗುವ ತಾರೆಯಾಗಬಹುದೆ? ನಾವು ಇನ್ನೂ ಏನೇನು ಪ್ರಯತ್ನಗಳನ್ನು ಮಾಡಬೇಕು? ಹೇಗೆ ನಮ್ಮ ಕನಸುಗಳನ್ನು ಸಾಕಾರಗೊಳಿಸಬೇಕು ಎಂದು ತಿಳಿಯಲು ತಪ್ಪದೇ ಈ ತಾಂತ್ರಿಕ ಮೇಳಕ್ಕೆ ಭೇಟಿ ನೀಡಿ!!