ಭಾರತದಲ್ಲಿ ಮಾರ್ಷಿಯನ್ ರಾಬಿನ್- ಬೆಂಗಳೂರಿನಲ್ಲಿ ಪ್ರಪ್ರಥಮ ಪ್ರಾಣಿ ಕಾರ್ಖಾನೆ!

ವಿಶಾಂತ್​​


ಭಾರತದಲ್ಲಿ ಮಾರ್ಷಿಯನ್ ರಾಬಿನ್- ಬೆಂಗಳೂರಿನಲ್ಲಿ ಪ್ರಪ್ರಥಮ ಪ್ರಾಣಿ ಕಾರ್ಖಾನೆ!

Tuesday January 05, 2016,

3 min Read

image


ಈತ ಅಪರೂಪದಲ್ಲೇ ಅಪರೂಪದ ಕಲಾವಿದ. ಯಾಕಂದ್ರೆ ಈ ಕಲಾವಿದನ ಪ್ರತಿಭೆಯೇ ಅಂಥದ್ದು. ಸಾಮಾನ್ಯವಾಗಿ ಹಸಿರು, ಝರಿ, ಬೆಟ್ಟ ಗುಡ್ಡಗಳನ್ನು ಕಲಾವಿದರು ಸ್ಫೂರ್ತಿಯಾಗಿಟ್ಟುಕೊಂಡ್ರೆ ನಮ್ಮ ಇವತ್ತಿನ ಯುವರ್‍ಸ್ಟೋರಿ ನಾಯಕನಾದ ಈ ಕಲಾವಿದನ ಪ್ರೇರೇಪಣೆ ಪ್ರಾಣಿಗಳು! ಅದರಲ್ಲೂ ಹೆಚ್ಚಾಗಿ ನಾಯಿಗಳು. ಹೌದು, ಇದು ಮಾರ್ಷಿಯಲ್ ರಾಬಿನ್ ಎಂಬ ಫ್ರಾನ್ಸ್ ಮೂಲದ ಕಲಾವಿದನ ಅದ್ಭುತ ಕಲೆಯ ಕಥೆ.

ಮಾರ್ಷಿಯಲ್ ರಾಬಿನ್ ಬಗ್ಗೆ

ಮಾರ್ಷಿಯಲ್ ರಾಬಿನ್ ಅವರು ಗೌರವಾನ್ವಿತ ಫ್ರೆಂಚ್ ಕಲಾವಿದ ಪ್ರಾನ್ಕೋ ಪೆಟಾರ್ಡ್ ಅವರ ಬಳಿ ಕಲಿತಿದ್ದಾರೆ. ಈತ ತನ್ನ ಬಾಲ್ಯದಿಂದಲೂ ಚಿತ್ರಕಲೆಗಳ ಬಗ್ಗೆ ಆಸಕ್ತಿಯಿದ್ದರೂ, ಸಹ 12 ವರ್ಷಗಳಿದ್ದಾಗ ಮೊದಲ ಬಾರಿಗೆ ಪೇಂಟ್ ಬ್ರಶ್ ಅನ್ನು ಕೈಗೆ ತೆಗೆದುಕೊಂಡರು. ತಾನು ಕೇವಲ ಬಣ್ಣಗಳನ್ನು ಬಳಸುವ ಕಲಾವಿದನೆಂಬುದನ್ನು ಮಾರ್ಷಿಯಲ್ ನಂಬುವುದಿಲ್ಲ. ಬದಲಿಗೆ ತಮ್ಮ ಕಲೆಯೊಂದಿಗೆ ಬಹಳಷ್ಟು ಪ್ರಯೋಗಗಳನ್ನು ಮಾಡುತ್ತಾರೆ, ಚಾಕ್‍ಗಳು, ಪೆನ್ಸಿಲ್‍ಗಳು, ಪೇಸ್ಟೆಲ್‍ಗಳು ಹಾಗೂ ಆ್ಯಕ್ರಿಲಿಕ್‍ಗಳನ್ನು ಬಳಸಿಕೊಂಡು, ಕಾಗದದ ಮೇಲೆ ಅಥವಾ ಮರದ ಹೊದಿಕೆಗಳ ಮೇಲೆ ತಮ್ಮ ಕಲಾಕೃತಿಗಳನ್ನು ಮೂಡಿಸುತ್ತಾರೆ. ಒಂದೇ ಸಾರಿ, ಐದು ಚಿತ್ರಕಲಾಕೃತಿಗಳ ಮೇಲೆ ಇವರು ಕೆಲಸ ಮಾಡುವ ವೈಶಿಷ್ಟ್ಯತೆಯನ್ನು ಕರಗತ ಮಾಡಿಕೊಂಡಿರೋದು ರಾಬಿನ್ ಪ್ರತಿಭೆಗೆ ಹಿಡಿದ ಕೈಗನ್ನಡಿ.

image


‘ಪ್ರಾಣಿ ಕಾರ್ಖಾನೆ’ ಅಥವಾ ಅನಿಮಲ್ ಫ್ಯಾಕ್ಟರಿ

ಮಾರ್ಷಿಯಲ್ ರಾಬಿನ್ ಅವರ ಚಿತ್ರಕಲೆಗಳು, ಸಮಕಾಲೀನ ತಿರುವಿನೊಂದಿಗೆ ಪ್ರಾಣಿಗಳ ಭಾವಗಳನ್ನು ಸೆರೆ ಹಿಡಿಯುತ್ತದೆ. ಮಾರ್ಷಿಯಲ್ ಇತರೆ ಯಾವುದೇ ವಿಷಯಕ್ಕಿಂತ ಪ್ರಾಣಿಗಳ ಭಾವನೆಗಳ ಕಡೆ ಹಚ್ಚಿನ ಗಮನ ನೀಡಲು ಪ್ರಯತ್ನಿಸುವುದರಿಂದಾಗಿ ತಮ್ಮ ಕೆಲಸವನ್ನು ಭಾವನಾತ್ಮಕವೆಂದು ವರ್ಣಿಸುತ್ತಾರೆ. ಬಹಳ ವರ್ಷಗಳಿಂದ ಕುದುರೆಗಳು ಈ ಕಲಾವಿದನ ಅಚ್ಚುಮೆಚ್ಚಿನ ಪ್ರೇರಣೆಯಾಗಿದ್ದವು. ನಂತರ ನಾಯಿಗಳ ಬಗ್ಗೆ ಇವರಿಗಿರುವ ಆಸಕ್ತಿಯಿಂದಾಗಿ ಇವರು ತಮ್ಮ ಕಲಾಕೃತಿಗಳಲ್ಲಿ ಅವುಗಳನ್ನು ಪ್ರತಿಬಿಂಬಿಸಿದರು. ರಾಬಿನ್ ತಮ್ಮ ಚಿತ್ರಕಲೆಗಳಲ್ಲಿ ಸಣ್ಣ ನಾಯಿಗಳು, ಸೈಟ್-ಹೌಂಡ್ಸ್, ಅಫ್ಘಾನ್ ಹೌಂಡ್ಸ್, ಟೆರ್ರಿಯರ್ಸ್, ಡಾಕ್‍ಶುಂಡ್ಸ್, ಹಂಟಿಂಗ್ ಡಾಗ್ಸ್ ಹಾಗೂ ದೊಡ್ಡ ನಾಯಿಗಳನ್ನು ಚಿತ್ರಿಸುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಸೈಟ್-ಹೌಂಡ್ಸ್ ಇವರ ಪ್ರಮುಖ ವಿಷಯವಸ್ತು. ಏಕೆಂದರೆ, 25 ವರ್ಷಗಳಿಂದ ಅಫ್ಘಾನ್ ಹೌಂಡ್‍ಗಳ ಖುದ್ದು ರಾಬಿನ್ ಅವರೇ ಸಾಕುತ್ತಿದ್ದಾರೆ.

image


ಎಲ್ಲೆಲ್ಲಿ ಪ್ರದರ್ಶನ ಕಂಡಿವೆ..?

ತನ್ನ ವಿಶೇಷ ಶೈಲಿ, ಕ್ರಿಯಾತ್ಮಕತೆ ಹಾಗೂ ಗಮನಿಸುವಿಕೆಯ ಶಕ್ತಿಗಳಿಂದಾಗಿ, ತನ್ನ ಸಮಕಾಲೀನ ಕಲಾವಿದರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿರುವ ಖ್ಯಾತ ಫ್ರೆಂಚ್ ಕಲಾವಿದ ಮಾರ್ಷಿಯಲ್ ರಾಬಿನ್ ಅವರ ಬಗ್ಗೆ ಯಾವುದೇ ಪರಿಚಯದ ಅಗತ್ಯವಿಲ್ಲ! ತಮ್ಮ ಕಲಾಕೃತಿಗಳಲ್ಲಿ ಪ್ರದರ್ಶಿಸುವ ಜಾಣ್ಮೆಗೆ ಹೆಸರುವಾಸಿಯಾಗಿರುವ ಈ ಕಲಾವಿದನ ಕಲಾಕೃತಿಗಳು, ಫ್ರಾನ್ಸ್, ಆಸ್ಟ್ರೇಲಿಯಾ, ಫಿನ್‍ಲ್ಯಾಂಡ್, ಯುಎಸ್‍ಎ ಹಾಗೂ ಸ್ಪೇನ್ ಒಳಗೊಂಡಂತೆ 5 ಖಂಡಗಳಲ್ಲಿ, 70 ರಾಷ್ಟ್ರಗಳಲ್ಲಿದೆ. ಭಾವಚಿತ್ರಗಳನ್ನು ಬಿಡಿಸುವ ಕಲಾವಿದರಾಗಿರುವ ಮಾರ್ಷಿಯಲ್‍ಗೆ ಒಂದು ನಾಯಿ, ಕೋತಿ ಅಥವಾ ಮನುಷ್ಯನ ಚಿತ್ರವನ್ನು ಬರೆಯುವಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇವರ ಮಾದರಿಗಳು ಕಲೆಯನ್ನು ಪರಿಶೋಧಿಸುತ್ತದೆ ಹಾಗೂ ಅದಕ್ಕೆ ವಿಶೇಷತೆಯನ್ನು ಒದಗಿಸುತ್ತದೆ.

ಪ್ರಥಮ ಬಾರಿಗೆ ಭಾರತದಲ್ಲಿ ಪ್ರದರ್ಶನ

ಹೀಗೆ 5 ಖಂಡಗಳ 70 ದೇಶಗಳಲ್ಲಿ ಕಲಾಕೃತಿಗಳನ್ನು ಪ್ರದರ್ಶನ ಮಾಡಿರುವ ಮಾರ್ಷಿಯಲ್ ರಾಬಿನ್ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ಅದರಲ್ಲೂ ವಿಶೇಷ ಅಂದ್ರೆ ಈ ಪ್ರದರ್ಶನಕ್ಕೆ ಅವರು ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅನಿಮಲ್ ಫ್ಯಾಕ್ಟರಿ ಅಥವಾ ಪ್ರಾಣಿ ಕಾರ್ಖಾನೆಯ ಕಲಾಕೃತಿಗಳು ಬೆಂಗಳೂರಿನ ಯುಬಿ ಸಿಟಿಯ ಸಬ್‍ಲೈಮ್ ಗಲ್ಲೇರಿಯಾದಲ್ಲಿ ನವೆಂಬರ್ 27ರಿಂದ ಪ್ರದರ್ಶಿಸುತ್ತಿದ್ದಾರೆ. ಈ ‘ಪ್ರಾಣಿ ಕಾರ್ಖಾನೆ’, ಪ್ರತಿ ದಿನ ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ, ಜನವರಿ 2016ರವರೆಗೆ ನಡೆಯುತ್ತಿದೆ.

ಭಾರತದಲ್ಲಿ ತಮ್ಮ ಚೊಚ್ಚಲ ಪ್ರದರ್ಶನದ ಬಗ್ಗೆ ಮಾತನಾಡಿದ ಮಾರ್ಷಿಯಲ್ ರಾಬಿನ್ ಅವರು,

“ನನ್ನ ಕಲೆ, ನನ್ನನ್ನು ಅನೇಕ ರಾಷ್ಟ್ರಗಳಿಗೆ ಕೊಂಡೊಯ್ದಿದೆ, ಅದರಲ್ಲಿಯೂ ಬಹುಪಾಲು ಯೂರೋಪ್ ಹಾಗೂ ಅಮೇರಿಕಾದ ಖಂಡಗಳಿಗೆ ಹಲವು ಬಾರಿ ಭೇಟಿ ನೀಡಿದ್ದೇನೆ. ಆದರೆ ಈ ಹಿಂದೆ ನನಗೆ ಏಷ್ಯಾದ ರಾಷ್ಟ್ರಗಳಿಗೆ ಭೇಟಿ ನೀಡುವ ಅವಕಾಶ ದೊರೆತಿರಲಿಲ್ಲ. ಆದ್ದರಿಂದ, ನನ್ನ ಕಲಾಕೃತಿಗಳನ್ನು ಪ್ರದರ್ಶಿಸುವಂತೆ ಸಬ್‍ಲೈಂ ಗಲ್ಲೇರಿಯಾದಿಂದ ಆಹ್ವಾನ ಬಂದ ಕೂಡಲೇ ನಾನು ಒಂದು ಕ್ಷಣವೂ ಯೋಚಿಸಿದೆ ಒಪ್ಪಿಕೊಂಡೆ. ನನ್ನ ಕಲಾಕೃತಿಗಳನ್ನು ಭಾರತದಲ್ಲಿ ಪ್ರದರ್ಶಿಸಲು ನನಗೆ ಅತ್ಯಂತ ರೋಮಾಂಚನ ಹಾಗೂ ಸಂತಸವುಂಟಾಗುತ್ತಿದೆ. ಭಾರತ ಒಂದು ದೇಶವಾಗಿ, ಅದರ ಬಲಿಷ್ಠ ಚರಿತ್ರೆ ಹಾಗೂ ಕಲಾತ್ಮಕ ಸಂಸ್ಕೃತಿಯಿಂದಾಗಿ, ಯೂರೋಪ್ ಖಂಡದ ಜನರನ್ನು ಬಹಳಷ್ಟು ಆಕರ್ಷಿಸುತ್ತಿದೆ. ಇಂತಹ ಅದ್ಭುತ ಹಾಗೂ ಪ್ರಖ್ಯಾತ ಗ್ಯಾಲರಿಯಲ್ಲಿ ನನ್ನ ಚಿತ್ರಕಲೆಗಳನ್ನು ಪ್ರದರ್ಶಿಸಲು ಅವಕಾಶ ದೊರೆತಿರುವುದು, ನನಗೆ ಮತ್ತೊಂದು ‘ಪ್ರಪಂಚ’ವನ್ನು ತಲುಪುವ ಅವಕಾಶವಿದ್ದಂತೆ. ನನ್ನ ಸಂಗ್ರಹದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಒದಗಿಸುವಂತಹ, ಭಾರತೀಯ ಕಲಾ ಪ್ರಿಯರನ್ನು ಭೇಟಿಯಾಗಲು ನಾನು ಕಾತುರನಾಗಿದ್ದೇನೆ,”.

ಹೀಗೆ ಹೇಳುತ್ತಾ ಮಾತು ಮುಗಿಸಿ ಹೊಸ ಉತ್ಸಾಹದಿಂದ ತನ್ನ ಕಾಯಕದತ್ತ ಮುಖ ಮಾಡಿದ್ರು ರಾಬಿನ್​