ಜೀವನೋತ್ಸಾಹ ತುಂಬಿದ ತಾಯ್ತನ : ಇದು ಕಾನ್ಸರ್ ವಿರುದ್ಧ ಹೋರಾಡಿದಾಕೆಯ ಸ್ಫೂರ್ತಿಯ ಕಥೆ.. !

ಟೀಮ್​ ವೈ.ಎಸ್​. ಕನ್ನಡ

0

ಕ್ಯಾನ್ಸರ್.. ಬದುಕನ್ನೇ ಹಿಂಡಿ ಹಿಪ್ಪೆ ಮಾಡೋ ರೋಗ. ಶರೀರ ಕ್ಯಾನ್ಸರ್ ಪೀಡಿತವಾದ್ರೆ ಸಾಕು ಅದು ಕೇವಲ ದೇಹವನ್ನ ಮಾತ್ರವಲ್ಲ ಜೀವನದ ಚೈತನ್ಯವನ್ನೇ ನುಂಗಿ ಬಿಡುತ್ತೆ. ಕೊನೆಗೊಂದು ದಿನ ಬದುಕನ್ನೂ ಕೂಡ ಅದು ಆಪೋಷನ ತೆಗೆದುಕೊಂಡು ಬಿಡುತ್ತೆ. ಅದೆಷ್ಟೋ ಮಂದಿ ಕ್ಯಾನ್ಸರ್ ಪೀಡಿತರು ಇನ್ನಿಲ್ಲದ ಯಾತನೆಯನ್ನಷ್ಟೇ ಅನುಭವಿಸುತ್ತಾ ತಮ್ಮ ಬದುಕಿನ ಯಾತ್ರೆ ಮುಗಿಸಿರೋ ಉದಾಹರಣೆಗಳೇ ಹೆಚ್ಚು. ನಾವಿಲ್ಲಿ ಹೇಳ್ತಾ ಇರೋದೂ ಕೂಡ ಒಬ್ಬ ಕ್ಯಾನ್ಸರ್ ಪೇಶೆಂಟ್ ಬಗ್ಗೆ. ಆದ್ರೆ ಅವರು ತಮಗೆ ಕ್ಯಾನ್ಸರ್ ತಗುಲಿರುವುದು ಗೊತ್ತಾದ್ರೂ ಎಲ್ಲರಂತೆ ನರಳಲಿಲ್ಲ.. ಕೊರಗಲಿಲ್ಲ.. ಬದಲಾಗಿ ಆ ಕ್ಯಾನ್ಸರ್ ಗೇ ಸೆಡ್ಡು ಹೊಡೆದು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೆಸ್ರು ಮಧು ಸಿಂಗ್, ವಯಸ್ಸು 53. ಐದು ವರ್ಷಗಳ ಕ್ಯಾನ್ಸರ್ ನಿಂದ ನರಳಿದ್ರೂ ಸೋಷಿಯಲ್ ಸರ್ವೀಸ್ ಮಾಡಬೇಕು ಅನ್ನೋ ಇವರ ಹಠಕ್ಕೆ ಯಾವುದೂ ಅಡ್ಡಿಯಾಗಲಿಲ್ಲ. ನೋಯ್ಡಾದಲ್ಲಿ ಶಾಲೆಯನ್ನ ಶುರುಮಾಡಿರೋ ಮಧು ಇವತ್ತು ಇತರರಿಗೆ ಅತ್ಯುತ್ತಮ ಮಾದರಿ.

ಇದನ್ನು ಓದಿ

ಸಮಾಜದಲ್ಲಿ ಕಂಡೂ ಕಾಣಿಸದ ಪ್ರತಿಭಾ ಸಂಪನ್ನರು

ಮಧು ಸಿಂಗ್ ಹುಟ್ಟಿದ್ದು ಜಾರ್ಖಂಡ್ ನ ಪುಟ್ಟ ಹಳ್ಳಿ ಜಾಪ್ಲಾದಲ್ಲಿ. ಅಲ್ಲೇ ತಮ್ಮ ಬಾಲ್ಯ ಹಾಗೂ ಶಿಕ್ಷಣವನ್ನ ಪೂರೈಸಿದ ಮಧು ಸಿಂಗ್ ಗೆ ಒಬ್ಬ ತಂಗಿ ಹಾಗೂ ಮೂವರು ಸಹೋದರರಿದ್ದಾರೆ. ತುಂಬು ಸಂಸಾರದಿಂದ ಕೂಡಿದ್ದ ಇವರದ್ದು ಕೂಡು ಕುಟುಂಬ. ಜಾರ್ಖಂಡ್ ನಲ್ಲೇ ಪದವಿ ಪೂರೈಸಿದ ಇವರು ರಾಂಚಿ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಬಗ್ಗೆ ಅಭ್ಯಾಸ ನಡೆಸಿದ್ರು. ನಂತ್ರ 1983ರಲ್ಲಿ ಯೂನಿಯನ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿದ್ದ ಅಚಲ್ ಸಿಂಗ್ ಅವರನ್ನ ಮದುವೆಯೂ ಆದ್ರು. ಬ್ಯಾಂಕ್ ಅಧಿಕಾರಿ ಅಚಲ್ ಸಿಂಗ್ ಹಾಗೂ ಮಧು ದಂಪತಿಗೆ ಅಂಕೇಶ್ ಎಂಬ ಮುದ್ದಾದ ಮಗನೂ ಜನಿಸಿದ. ಆದ್ರೆ ಬದುಕಿನಲ್ಲಿ ಅಸ್ಥಿತ್ವ ಹೊಂದುವ ಗುರಿ ಇದ್ರೂ , ಕೆಲಸದ ನಿಮಿತ್ತ ದೇಶ ಸುತ್ತುವ ಕಾರ್ಯ ಮಾತ್ರ ನಿಲ್ಲಲೇ ಇಲ್ಲ. ಕೊನೆಗೊಂದು ದಿನ ಇವರ ಪುಟ್ಟ ಸಂಸಾರ ನೆಲೆ ನಿಲ್ಲೋದಿಕ್ಕೆ ಅವಕಾಶ ಸಿಕ್ಕಿತು. ಮಧು ತಮ್ಮಿಷ್ಟದ ವೃತ್ತಿ ಬ್ಯುಟಿ ಪಾರ್ಲರನ್ನ ಆರಂಭಿಸಿದ್ರು. ಆದ್ರೆ ವಿಧಿ ಇವರ ಬದುಕಿನಲ್ಲಿ ಆಟ ಆಡೋಕೆ ಶುರು ಮಾಡಿತ್ತು ಅಂತ ಮಧು ಸಿಂಗ್ ತಮ್ಮ ಕಷ್ಟದ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ.

ಅದು 1988.. ಮಧು ಸಿಂಗ್ ಸ್ತನದಲ್ಲಿ ಚಿಕ್ಕದೊಂದು ಗೆಡ್ಡೆ ಕಾಣಿಸಿಕೊಂಡಿತ್ತು. ಅದನ್ನ ಪಾಟ್ನದಲ್ಲಿ ಚಿಕ್ಕ ಸರ್ಜರಿ ಮಾಡಿಸಿ ತೆಗೆಯಲಾಗಿತ್ತು. ಆದ್ರೆ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. ಆಪರೇಶನ್ ನಂತ್ರ ಅವರಿಗೆ ಪದೇ ಪದೇ ಗೆಡ್ಡೆಗಳು ಕಾಣಿಸಿಕೊಂಡವು. 1989 ರಿಂದ 1992ರ ಅವಧಿಯಲ್ಲಿ ಮೂರು ಆಪರೇಶನ್ ಗಳನ್ನ ಮಾಡಿಸಿಕೊಳ್ಳಬೇಕಾಯ್ತು. ಆದ್ರೆ ಅದು ವರ್ಷದಿಂದ ವರ್ಷಕ್ಕೆ ಅವರ ಬದುಕಿಗೇ ಕುತ್ತಾಯ್ತು. ಅಂತಿಮವಾಗಿ ಮುಂಬೈ ಟಾಟಾ ಮೆಮೇರಿಯಲ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಮಧು ಸಿಂಗ್ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಖಚಿತವಾಗಿತ್ತು. “ ನನಗೆ ಖಾಯಿಲೆ ಬಗ್ಗೆ ಟಾಟಾ ಆಸ್ಪತ್ರೆ ವೈದ್ಯರು ಹೇಳಿದಾಗ ಬರ ಸಿಡಿಲು ಬಡಿದ ಹಾಗಿತ್ತು. ಅದರಿಂದ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡೆ. ನನ್ನ ಚೈತನ್ಯವೇ ಉಡುಗಿ ಹೋಗುತ್ತಿದೆ ಅಂತ ಅನಿಸಲು ಪ್ರಾರಂಭವಾಯ್ತು. ಸಾವು ನನ್ನ ಸಮೀಪವಿದೆ ಅಂತ ಭಯ ಆರಂಭವಾಗಿತ್ತು. ಆದ್ರೆ ನನ್ನ 7 ವರ್ಷದ ಮಗನನ್ನ ಬಿಟ್ಟು ಸಾಯಲು ಸಾಧ್ಯವೇ ಅಂತ ಅನಿಸೋಕೆ ಶುರುವಾಗಿತ್ತು. ” ಅಂತ ಮಧು ಸಿಂಗ್ ಆ ಕ್ಷಣಗಳನ್ನ ಭಾವುಕರಾಗಿ ಹೇಳುತ್ತಾರೆ.

ಮಧು ಉಳಿದುಕೊಳ್ಳಬೇಕಾದ್ರೆ ಅವರು ರಾಡಿಕಲ್ ಮೆಸ್ಟ್ಕೋಮಿ ಸರ್ಜರಿಗೆ ಒಳಗಾಗಲೇ ಬೇಕಿತ್ತು. ಅಂದ್ರೆ ಸಂಪೂರ್ಣವಾಗಿ ಅವರ ಸ್ತನವನ್ನೇ ತೆಗೆದುಬಿಡುವ ಆಪರೇಷನ್ ಅದು. ಹೆಣ್ಣಿನ ಸಿರಿತನವನ್ನೇ ಕಸಿಯುವ ಆ ಚಿಕಿತ್ಸೆ ಬಗ್ಗೆ ಕೇಳಿದಾಗ ಮಧು ಸಿಂಗ್ ದಂಗಾಗಿದ್ರು. ಅಲ್ಲದೆ ಇತರೆ ಸ್ತನ ಕ್ಯಾನ್ಸರ್ ರೋಗಿಗಳನ್ನ ನೋಡಿದಾಗ ಅವರು ಇನ್ನಷ್ಟು ಕುಸಿದುಹೋಗಿದ್ರು. ಆದ್ರೆ ಸೋಲನ್ನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಮಧು ಸಿದ್ಧರಿಲಿಲ್ಲ. “ ಪ್ರತೀ ಬಾರಿ ನಾನು ನನ್ನ ಮಗ ಹಾಗೂ ಗಂಡನನ್ನ ನೋಡಿದಾಗ ಅವರಿಗಾಗಿ ನಾನು ಬದುಕಲೇ ಬೇಕು ಅಂತ ಭಾವಿಸುತ್ತಿದ್ದೆ. ಆದ್ರೆ ಬದುಕಬೇಕಾದ್ರೆ ಆಪರೇಷನ್ ಗೆ ಒಳಗಾಗಲೇ ಬೇಕಾಗಿದ್ದ ಅನಿವಾರ್ಯತೆ ಇತ್ತು. ಕೊನೆಗೆ ನನ್ನ ಗಂಡ ಹಾಗೂ ಸಹೋದರ ನನ್ನ ಮನವೋಲಿಸಿದರು ” ಅಂತ ಮಧು ತಾನು ಸರ್ಜರಿ ಮಾಡಿಸಿಕೊಂಡ ಕ್ಷಣವನ್ನ ನೆನಪಿಸಿಕೊಳ್ಳುತ್ತಾರೆ. ಹೀಗೆ ಆಪರೇಶನ್ ಗೆ ಒಳಗಾದ ಮಧು ಆರೋಗ್ಯದಲ್ಲಿ ಚೇತರಿಕೆ ಕಾಣಲು ತಗುಲಿದ್ದು ಸುಮಾರು 7 ವರ್ಷಗಳು. ಆದ್ರೆ ಈ ಅವಧಿಯಲ್ಲಿ ಅವರು ಟಿಬಿ, ಅಸ್ತಮಾದಂತಹ ಮಾರಕ ರೋಗಗಳಿಂದ ಬಳಲಿದ್ರು. ಶರೀರ ತೂಕವನ್ನ ಕಳೆದುಕೊಂಡು ಕೃಶವಾಗಿತ್ತು. ದೆಹಲಿಯ ಆಸ್ಪತ್ರೆಯಲ್ಲೇ ಹೆಚ್ಚು ಕಮ್ಮಿ ದಿನಗಳನ್ನ ಸವೆಸುವಂತಾಯ್ತು. ಆದ್ರೆ ಬದುಕಿನ ಇಷ್ಟು ಸುಧೀರ್ಘ ಹೋರಾಟದಲ್ಲಿ ಕೊನೆಗೂ ಗೆಲುವಿನ ನಗು ಬೀರಿದ್ದು ಮಧು ಸಿಂಗ್..

ಅನಾರೋಗ್ಯದಿಂದ ನರಳುತ್ತಿದ್ದ ಮಧು ಸಿಂಗ್ ಕೊನೆಗೂ ಪುನರ್ಜನ್ಮ ಕಂಡುಕೊಂಡ್ರು. ಆದ್ರೆ ತಮ್ಮ ಮುಂದಿನ ಬದುಕಿನ ದಾರಿ ವಿಭಿನ್ನವಾಗಿರಬೇಕು ಅಂತ ನಿರ್ಧರಿಸಿದ್ದ ಮಧು ಅಶಕ್ತರಿಗೆ ನೆರವು ನೀಡುವ ನಿರ್ಧಾರಕ್ಕೆ ಬಂದ್ರು. ತಾವು ಹಾಸಿಗೆಯಲ್ಲಿ ಮಲಗಿದ್ದ ವೇಳೆ ತಮ್ಮ ತಾಯ್ತನದ ಸುಖ ಹಾಗೂ ಜವಾಬ್ದಾರಿಗಳನ್ನ ಅನುಭವಿಸುವುದರಲ್ಲಿ ಮಧು ಕಳೆದುಕೊಂಡಿದ್ರು. ತನ್ನ ಮಗನನ್ನ ಶಾಲೆಗೆ ಬಿಡುವುದರಿಂದ ಹಿಡಿದು ಅವನ ಲಾಲಾನೆ ಪಾಲನೆಗಳನ್ನ ಮಾಡಲಾಗಲಿಲ್ಲ ಅನ್ನೋ ಕೊರಗು ಕಾಡುತ್ತಿತ್ತು. ಆದ್ರೆ ಕಳೆದುಕೊಂಡಿದ್ದ ಕ್ಷಣಗಳನ್ನ ಪಡೆಯಲು ಸಾಧ್ಯವಾಗದ ಅನುಭವಗಳನ್ನ ಮತ್ತೆ ಮರಳಿ ಪಡೆಯಲು ಇವರು ಆಶಿಸಿದ್ರು. ಇದ್ರ ಪರಿಣಾಮ ಶುರುವಾಗಿದ್ದು ಪ್ಲೇ ಸ್ಕೂಲ್..

ಹೊಸ ಕನಸುಗಳೊಂದಿಗೆ 2006ರ ಫೆಬ್ರವರಿಯಲ್ಲಿ ಮಧು ತಮ್ಮ ಕನಸಿನ ಶಾಲೆಯನ್ನ ಆರಂಭಿಸಿದ್ರು. ಶುರುವಾದಾಗ ಶಾಲೆಯಲ್ಲಿ ಇದ್ದಿದ್ದೇ ಕೇವಲ 7 ಮಂದಿ ಮಕ್ಕಳು ಮಾತ್ರ. ಆದ್ರೆ ಇತರೆ ಸಿಬ್ಬಂದಿಗಳಿಗೆ ವೇತನ ನೀಡುವುದರಿಂದ ಹಿಡಿದು ಹಲವು ರೀತಿಯ ಹಣಕಾಸಿನ ಸಮಸ್ಯೆಗಳನ್ನ ಮಧು ಎದುರಿಸಬೇಕಾಯ್ತು. ಆದ್ರೆ ಮೂರು ವರ್ಷಗಳ ನಂತ್ರ ಎಲ್ಲವನ್ನೂ ಸರಿದಾರಿಗೆ ತಂದ ಮಧು ಇದೀಗ ಯಶಸ್ವಿಯಾಗಿ ಶಾಲೆಯನ್ನ ನಡೆಸುತ್ತಿದ್ದಾರೆ. ಸುಮಾರು 150 ಪುಟ್ಟ ಮಕ್ಕಳು ಇಲ್ಲಿದ್ದು, ಸಾವಿನೊಂದಿಗೇ ಸೆಣೆಸಿರುವ ಮಧು ಸಿಂಗ್ ಮತ್ತೆ ತಮ್ಮ ಬದುಕಿನ ಅನುಭವಗಳನ್ನ ಕಂಡುಕೊಂಡಿದ್ದಾರೆ.

ಲೇಖಕರು – ಬಿಂಜಾಲ್ ಷಾ

ಅನುವಾದ – ಸ್ವಾತಿ, ಉಜಿರೆ

ಇದನ್ನು ಓದಿ

1. ಛಾವಣಿ ಮೇಲೆ ಹಾರಿತು ಹತ್ತಿ ತುಣುಕು

2. ಮೆಟ್ರೋ ಸಿಟಿಯಲ್ಲಿ ಗುಬ್ಬಚ್ಚಿಗಳಿಗೆ ಬೆಚ್ಚನೆ ಗೂಡು

3. ಸೂರ್ಯಶಕ್ತಿಯಿಂದ ಉದ್ಯೋಗ ಸೃಷ್ಟಿ, ಕುಗ್ರಾಮಗಳ ಅಭಿವೃದ್ಧಿ

Related Stories