ದೇಶಕ್ಕಾಗಿ 36 ಸಾವಿರ ಕಿಲೋಮೀಟರ್​ ಸುತ್ತಾಟ..!

ಅಗಸ್ತ್ಯ

ದೇಶಕ್ಕಾಗಿ 36 ಸಾವಿರ ಕಿಲೋಮೀಟರ್​ ಸುತ್ತಾಟ..!

Monday April 18, 2016,

2 min Read

ಸಾಧಿಸುವ ಛಲ, ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಹಂಬಲವಿದ್ದರೆ ನಾವು ಮಾಡುವ ಕೆಲಸ ದಾಖಲೆಯಾಗುತ್ತದೆ. ಸ್ವಚ್ಛ ಭಾರತ, ಮರಗಳ ರಕ್ಷಣೆ, ರೈತರ ಸಮಸ್ಯೆ, ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಜನರಲ್ಲಿ ಅರಿವು ಮೂಡಿಸಲು `ಶಪಥ್ ಡ್ರೈವ್' ಹೆಸರಿನಲ್ಲಿ ದೇಶದ ಉದ್ದಗಲಕ್ಕೂ ಕಾರಿನಲ್ಲಿ ಸುತ್ತಾಡಿರುವ ನಾಲ್ವರು ಗೆಳೆಯರು ಇದೀಗ ಗಿನ್ನಿಸ್ ದಾಖಲೆ ನಿರ್ಮಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

image


ಬೆಂಗಳೂರು ನಿವಾಸಿಗಳಾದ ಮೋಹನರಾಜ್, ಪುರುಷೋತ್ತಮ್, ಅರುಣ್‍ಕುಮಾರ್ ಹಾಗೂ ಜಯಂತ್‍ವರ್ಮಾ ಅವರು ದೇಶದಲ್ಲಿನ ಸ್ಥಿತಿಯನ್ನು ಆಧರಿಸಿ, ಅದರಲ್ಲಿ ಏನಾದರೂ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಮಾರ್ಚ್​ 11ರಿಂದ ಏಪ್ರಿಲ್​ 15ರವರೆಗೆ ಕಾರಿನ ಮೂಲಕ ದೇಶದ ಪ್ರವಾಸ ಕೈಗೊಂಡಿದ್ದರು. ದೇಶದ ಸುಮಾರು 15ಕ್ಕೂ ಹೆಚ್ಚಿನ ರಾಜ್ಯಗಳಿಗೆ ಕಾರಿನ ಮೂಲಕವೇ ಸುತ್ತಾಡಿದ್ದಾರೆ. ಈ ವೇಳೆ ಅವರು ಕೇವಲ ಪ್ರವಾಸ ಮಾಡದೆ ದಾರಿಯಲ್ಲಿ ಸಿಗುತ್ತಿದ್ದ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಹೆಣ್ಣು ಮಕ್ಕಳ ಶಿಕ್ಷಣ, ಸ್ವಚ್ಛ ಭಾರತ, ಮರಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಅದೇ ರೀತಿ ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ.

35 ದಿನ 36 ಸಾವಿರ ಕಿಲೋಮೀಟರ್​..!

ಮಾರ್ಚ್​11ರಂದು ಬೆಂಗಳೂರಿನ ಮಾರತ್‍ಹಳ್ಳಿಯಿಂದ ಹೊರಟ ಶಪಥ್ ಡ್ರೈವ್ ತಂಡ, 35 ದಿನಗಳ ಕಾಲ 36,064 ಕಿ.ಮೀ. ಪ್ರಯಾಣ ಮಾಡಿತು. ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಅಸ್ಸಾಂ, ಮೇಘಾಲಯ, ಪಶ್ಚಿಮಬಂಗಾಳ, ಒಡಿಶಾ, ಹಿಮಾಚಲಪ್ರದೇಶ, ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳಲ್ಲಿ ಸಂಚರಿಸಿತು. ಶಾಲೆಗಳಿಗೆ ಭೇಟಿ ನೀಡಿ, ಹೆಣ್ಣುಮಕ್ಕಳ ಶಿಕ್ಷಣ, ಸ್ವಚ್ಛ ಭಾರತ ಸೇರಿ ಹಲವಾರು ಯೋಜನೆಗಳ ಬಗ್ಗೆ ಅರಿವು ಮೂಡಿಸಿತು. ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡಿತು. ಏಪ್ರಿಲ್​ 15ಕ್ಕೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ತಂಡ ತನ್ನ ಪ್ರವಾಸ ಅಂತ್ಯಗೊಳಿಸಿತು. ಈ ಪ್ರವಾಸಕ್ಕೆ ನಾಲ್ವರು ಸ್ನೇಹಿತರು ಒಟ್ಟು 6.5 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಯಾತ್ರೆಯುದ್ದಕ್ಕೂ ಸುಮಾರು 100 ಡಾಬಾ ಹಾಗೂ ಹೋಟೆಲ್‍ಗಳಲ್ಲಿ ಊಟ ಮಾಡಲಾಗಿದೆ. ವಿಭಿನ್ನ ವಿನ್ಯಾಸದ ಕಾರನ್ನು ಕಂಡು ವಿಚಾರಿಸುತ್ತಿದ್ದ ಹೋಟೆಲ್ ಸಿಬ್ಬಂದಿ, ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರಂತೆ. 50ಕ್ಕೂ ಹೆಚ್ಚು ಹೋಟೆಲ್‍ನವರು ಇವರ ಕಾರ್ಯವನ್ನು ಕೇಳಿ ಊಟದ ಹಣವನ್ನೇ ಪಡೆಯಲಿಲ್ಲ.

image


ಗಿನ್ನಿಸ್ ದಾಖಲೆ

ಈ ಮಹಾ ಪ್ರಯಾಣ ಇದೀಗ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುತ್ತಿದೆ. ಪ್ರಯಾಣಕ್ಕೂ ಮುನ್ನವೇ ಗಿನ್ನಿಸ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್‍ನ ಪದಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಹಾಗಾಗಿ ಕಾರಿಗೆ ಜಿಪಿಎಸ್ ಅಳವಡಿಸಲಾಗಿತ್ತು. ಇದರ ಮೂಲಕ ಪ್ರಯಾಣದ ಮಾಹಿತಿಯನ್ನು ಸಂಸ್ಥೆಗೆ ಕಳುಹಿಸಲಾಗುತ್ತಿತ್ತು. ಕಾರಿಗೆ ಸಿಸಿ ಕ್ಯಾಮೆರಾ ಅಳವಡಿಸಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಪ್ರತಿ ರಾಜ್ಯಗಳಿಂದಲೂ ಜನರ ಅಭಿಪ್ರಾಯ ಮತ್ತು ಸಹಿ ಸಂಗ್ರಹಿಸಿ ದಾಖಲೀಕರಿಸಲಾಗಿದೆ.

ಕಾರು ಚಲಿಸುತ್ತಿದ್ದಾಗ ತಂಡದ ಇಬ್ಬರು ಸದಸ್ಯರು ಹಿಂಬದಿ ಆಸನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಒಬ್ಬರು ಕಾರು ಚಲಾಯಿಸುತ್ತಿದ್ದರೆ, ಮತ್ತೊಬ್ಬರು ಗಿನ್ನೆಸ್ ದಾಖಲೆಗೆ ಒದಗಿಸಲು ಅಗತ್ಯವಾದ ಫೋಟೊ ಮತ್ತು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಈ ದಾಖಲೆಗಳೆಲ್ಲವನ್ನೂ ಗಿನ್ನಿಸ್ ದಾಖಲೆ ಸಂಸ್ಥೆಗೆ ಕಳುಹಿಸಲಾಗುತ್ತಿದೆ.