ರುಚಿರುಚಿಯಾದ ಅಡುಗೆ- ಕಾರ್ಪೋರೇಟ್ ಉದ್ಯೋಗಿಗಳ ಹಸಿವು ತಣಿಸಿದ ಕಾರ್ಪೋರೇಟ್ ಡಾಬಾ..!

ಟೀಮ್​ ವೈ.ಎಸ್​​.ಕನ್ನಡ

0

ಬಾಯಿ ರುಚಿ ಕೆಟ್ಟು ಹೋಗಿದೆ. ಹೋಟೆಲ್ ಊಟ ಸಾಕಾಗಿದೆ. ಮನೆ ಅಡುಗೆ ಸಿಕ್ಕಿದ್ದರೆ ರುಚಿ ನೋಡಬಹುದಿತ್ತು. ಇದು ಮನೆಯಿಂದ ಹೊರಗಿರುವವರ ಗೋಳಿನ ಮಾತು. ಮನೆಯಿಂದ ದೂರ ಇರುವವರಿಗೆ ಗೊತ್ತು ಮನೆ ಊಟದ ಮಹತ್ವ. ಹೋಟೆಲ್, ರೆಸ್ಟೋರೆಂಟ್, ಕ್ಯಾಂಟೀನ್ ಆಹಾರ ಅದೆಷ್ಟೇ ಸ್ವಾದಿಷ್ಟವಾಗಿರಲಿ, ಮನೆಯಲ್ಲಿ ಮಾಡಿದಷ್ಟು ರುಚಿಯಾಗಿರುವುದಿಲ್ಲ. ಹೊರಗಿನ ಆಹಾರವನ್ನು ಬಹಳ ದಿನ ಸೇವಿಸಲು ಸಾಧ್ಯವೂ ಇಲ್ಲ. ಪ್ರತಿದಿನ ಹೊರಗಿನ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಸಮಯದ ಜೊತೆ ಓಡುವ ಕಾಲ. ತಮ್ಮ ಮನೆ, ಊರಿನಿಂದ ಬೇರೆ ಊರಿಗೆ ಬಂದ ಜೀವನ ನಡೆಸುತ್ತಿರುವವರ ಸಂಖ್ಯೆ ಜಾಸ್ತಿ ಇದೆ. ಅವರಿಗೆ ಮನೆಯಲ್ಲಿ ಆಹಾರ ಸಿದ್ಧಪಡಿಸಿಕೊಳ್ಳುವಷ್ಟು ಸಮಯವಿಲ್ಲ. ಮನೆಯಿಂದ ಹೊರಗೆ ಒಂಟಿಯಾಗಿ ವಾಸಿಸುವ ಮಂದಿ ದಿನಕ್ಕೆ ಎರಡು ಬಾರಿಯಾದ್ರೂ ಹೋಟೆಲ್ ಇಲ್ಲ ಕ್ಯಾಂಟೀನ್ ಮೊರೆ ಹೋಗ್ತಾರೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ.

ಮುನ್ನಿ ದೇವಿ ಬಿಹಾರದ ಆರಾದವರು. ಅವರ ಇಬ್ಬರು ಮಕ್ಕಳು ಶಿಕ್ಷಣ ಹಾಗೂ ಉದ್ಯೋಗದ ನಿಮಿತ್ತ ದೆಹಲಿಯಲ್ಲಿ ವಾಸಿಸುತ್ತಾರೆ. ಮಕ್ಕಳ ಊಟದ ಬಗ್ಗೆ ಸದಾ ಚಿಂತಿತರಾಗುತ್ತಿದ್ದ ಮುನ್ನಿ ದೇವಿ ವರ್ಷದಲ್ಲಿ ಅನೇಕ ತಿಂಗಳು ಮಕ್ಕಳ ಜೊತೆ ದೆಹಲಿಯಲ್ಲಿ ವಾಸಿಸುತ್ತಿದ್ದರು. ಒಮ್ಮೆ ದೆಹಲಿಗೆ ಬಂದಾಗ ಮಗನ ಗೆಳೆಯನ ಪತ್ನಿ ಪಲ್ಲವಿ ಪ್ರೀತಿ ಪರಿಚಯವಾಯ್ತು. ಪಲ್ಲವಿ ಕೂಡ ಬಿಹಾರದವರೆ ಆಗಿದ್ದರಿಂದ ಇಬ್ಬರು ಸಾಕಷ್ಟು ಮಾತನಾಡಿದರು. ಮನೆಯಿಂದ ದೂರ ಇರುವವರಿಗೆ ಆರೋಗ್ಯಕರ ಮತ್ತು ರುಚಿಕರ ಆಹಾರವನ್ನು ಏಕೆ ಒದಗಿಸಬಾರದು ಎನ್ನುವ ಬಗ್ಗೆ ಚರ್ಚೆ ನಡೆಸಿದರು. ನಂತರ ಅವರಿಬ್ಬರು ಈ ಬಗ್ಗೆ ಸಂಶೋಧನೆ ನಡೆಸಿದರು. ಕೆಲವೇ ದಿನಗಳಲ್ಲಿ ಅಂದ್ರೆ 2013ರಲ್ಲಿ ಕಾರ್ಪೋರೇಟ್ ಡಾಬಾಕ್ಕೆ ಅಡಿಪಾಯ ಹಾಕಿದ್ರು. ಇದೊಂದು ಆಫೀಸ್ ಟಿಫಿನ್ ಸೇವೆಯಾಗಿದ್ದು, ದೆಹಲಿಯ ಎನ್ ಸಿಆರ್ ನಲ್ಲಿದೆ.

ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆರೋಗ್ಯಕರ ಮತ್ತು ರುಚಿಯಾದ ಆಹಾರ ಒದಗಿಸುವುದು ಕಾರ್ಪೋರೇಟ್ ಡಾಬಾದ ಉದ್ದೇಶವಾಗಿದೆ. ಡಾಬಾ ಆರಂಭವಾದ ಮೊದಲ ದಿನವೇ 38 ಊಟಕ್ಕೆ ಆರ್ಡರ್ ಬಂದಿತ್ತು. ಮೊದ-ಮೊದಲು ಮುನ್ನಿ ದೇವಿ ಹಾಗೂ ಪಲ್ಲವಿ ಇಬ್ಬರು ಸೇರಿ ಊಟ ಸಿದ್ಧಪಡಿಸುತ್ತಿದ್ದರು. ಬೇಡಿಕೆ ಹೆಚ್ಚಾದಂತೆ ತಮ್ಮ ಸಹಾಯಕ್ಕೆ ಕೆಲವರನ್ನು ನೇಮಿಸಿಕೊಂಡರು.

ಬೇಡಿಕೆ ಹೆಚ್ಚಾದಂತೆ ಆಹಾರದ ಗುಣಮಟ್ಟ ಕಡಿಮೆಯಾಗುತ್ತದೆ. ಲಾಭದ ದೃಷ್ಟಿ ಇಟ್ಟುಕೊಂಡು ಬೇಡಿಕೆ ಪೂರೈಸಲು ಹೋದಾಗ ಗುಣಮಟ್ಟದ ಆಹಾರ ಪೂರೈಸಲು ಸಾಧ್ಯವಾಗುವುದಿಲ್ಲ. ಅನೇಕ ಕಂಪನಿಗಳು ಲಾಭದ ಹಿಂದೆ ಬಿದ್ದು, ಕ್ರಮೇಣ ಗ್ರಾಹಕರನ್ನು ಕಳೆದುಕೊಳ್ಳುತ್ತಾರೆ. ಆದರೆ ಕಾರ್ಪೋರೇಟ್ ಡಾಬಾ ಮಾತ್ರ ಲಾಭದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.ಲಾಭ ಕಡಿಮೆಯಾದ್ರೂ ಚಿಂತೆ ಇಲ್ಲ. ಗುಣಮಟ್ಟದ ಆಹಾರ ನೀಡುವುದು ನಮ್ಮ ಉದ್ದೇಶ ಎನ್ನುತ್ತಾರೆ ಮುನ್ನಿ ದೇವಿ. ಅವರು ಗ್ರಾಹಕರನ್ನು ಮಕ್ಕಳಂತೆ ನೋಡುತ್ತಾರಂತೆ ಮತ್ತು ಅದೇ ದೃಷ್ಟಿಯಿಂದ ಕೆಲಸ ಮಾಡುತ್ತಾರಂತೆ.

ದೆಹಲಿಯ ಎನ್ ಸಿಆರ್ ನಲ್ಲಿ ಸಾಕಷ್ಟು ಟಿಫಿನ್ ಸೆಂಟರ್ ಗಳಿವೆ. ಅವು ಸಣ್ಣಮಟ್ಟದಲ್ಲಿ ವ್ಯಾಪಾರ ನಡೆಸುತ್ತಿವೆ. ಒಬ್ಬಂಟಿಯಾಗಿರುವವರ ಮನೆಗಳಿಗೆ ಮಾತ್ರ ಊಟ ನೀಡುತ್ತಿವೆ. ಕಾರ್ಪೋರೇಟ್ ಡಾಬಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಊಟ ತಲುಪಿಸುವ ಕಾರ್ಯಕ್ಕಿಳಿದಿದೆ.

ಈಗ ಕಾರ್ಪೋರೇಟ್ ಡಾಬಾ ಪ್ರತಿದಿನ 400-500 ಕಾರ್ಪೋರೇಟ್ ಉದ್ಯೋಗಿಗಳಿಗೆ ಊಟ ಒದಗಿಸುತ್ತಿದೆ. ಕೆಲ ದಿನ ಈ ಸಂಖ್ಯೆ 600 ತಲುಪುತ್ತದೆ. ನೌಕರಿ ಡಾಟ್ ಕಾಂ,ಪಟೇಲ್ ಇಂಜಿನಿಯರಿಂಗ್,ಮೇಗನಸ್,ಯುನಿವರ್ಸಲ್ ಸಾಪ್ಟವೇರ್, Arthcon ಗ್ರೂಪ್ ,ಶಿಕ್ಷಾ ಡಾಟ್ ಕಾಂ, ಸಂಚಾರಿ ನಿಗಮ (ದೆಹಲಿ) ಸೇರಿದಂತೆ ಅನೇಕ ಕಂಪನಿಗಳಿಗೆ ಆಹಾರವನ್ನು ತಲುಪಿಸುತ್ತಿದೆ.

ಕಾರ್ಪೋರೇಟ್ ಡಾಬಾದಲ್ಲಿ ಉತ್ತಮ ಅನುಭವವುಳ್ಳ ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ದೇಶ-ವಿದೇಶದಲ್ಲಿ ಕೆಲಸ ಮಾಡಿ ಅನುಭವವಿರುವ ಬಾಣಸಿಗರು ಇಲ್ಲಿದ್ದಾರೆ. ಕಂಪನಿಯಲ್ಲಿ ಸುಮಾರು 25 ಮಂದಿ ನುರಿತ ಬಾಣಸಿಗರ ತಂಡ ಇದೆ ಎಂದು ಮುನ್ನಿ ದೇವಿ ತಿಳಿಸುತ್ತಾರೆ. ಕಾರ್ಪೋರೇಟ್ ಕಂಪನಿಗಳಿಗೊಂದೇ ಅಲ್ಲ, ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮನೆಗಳಿಗೂ ಊಟ ಒದಗಿಸುವ ಕೆಲಸ ಮಾಡುತ್ತಿದೆ ಕಾರ್ಪೋರೇಟ್ ಡಾಬಾ. ಸಾಮಾಜಿಕ ಜಾಲತಾಣಗಳ ಸಹಾಯದಿಂದ ಈ ಕಂಪನಿ ಸದ್ಯ ಕೆಲಸ ಮಾಡ್ತಾ ಇದೆ. ಗ್ರಾಹಕರಿಂದ ಗ್ರಾಹಕರಿಗೆ ತಲುಪಿ, ಬಾಯಿ ಮಾತಿನಿಂದಲೂ ಬೇಡಿಕೆ ಜಾಸ್ತಿಯಾಗ್ತಾ ಇದೆ. ಸದ್ಯ ದೆಹಲಿಯ ಎನ್ ಸಿಆರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿ ಮುಂದಿನ ದಿನಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಚಿಂತನೆ ನಡೆಸಿದೆ.

ಗುಣಮಟ್ಟದ ಆಹಾರ ನೀಡಿದರೆ ಗ್ರಾಹಕರು ಕಂಪನಿಯನ್ನು ಹುಡುಕಿಕೊಂಡು ಬರುತ್ತಾರೆ,ಆಗ ಮಾರ್ಕೆಟಿಂಗ್ ಮಾಡುವ ಅವಶ್ಯಕತೆ ಬರುವುದಿಲ್ಲ ಎಂಬ ನಂಬಿಕೆ ಕಂಪನಿಯವರದ್ದು. ಇದೊಂದು ದೊಡ್ಡ ಮಾರುಕಟ್ಟೆಯಾಗಿದ್ದು, ಮುಂಬರುವ ವರ್ಷಗಳಲ್ಲಿ ಗುಣಮಟ್ಟದ ಆಹಾರ ನೀಡುವ ಜೊತೆಗೆ ಗ್ರಾಹಕರ ಸಂಖ್ಯೆಯನ್ನು ಜಾಸ್ತಿ ಮಾಡಿಕೊಳ್ಳುವುದು ಕಾರ್ಪೋರೇಟ್ ಡಾಬಾದ ಗುರಿಯಾಗಿದೆ.

ಲೇಖಕರು: ಅಶುತೋಷ್​​​​​​​​ ಖಂಟ್ವಾಲ್​​​​
ಅನುವಾದಕರು: ರೂಪಾ ಹೆಗಡೆ

Related Stories