ಚಾಯ್​​ವಾಲಾನಿಂದ ರೆಸ್ಟೋರೆಂಟ್​​ ತನಕ- ಪರಿಸರ ಸ್ನೇಹಿ ಉತ್ಪನ್ನಗಳ ಕಡೆ ರಿಯಾ ಚಿತ್ತ- ಹಸಿರು ಕ್ರಾಂತಿಯ ಹಿಂದೊಂದು ಕಾಣದ ಕೈ

ಟೀಮ್​ ವೈ.ಎಸ್​​.

ಚಾಯ್​​ವಾಲಾನಿಂದ ರೆಸ್ಟೋರೆಂಟ್​​ ತನಕ- ಪರಿಸರ ಸ್ನೇಹಿ ಉತ್ಪನ್ನಗಳ ಕಡೆ ರಿಯಾ ಚಿತ್ತ-  ಹಸಿರು ಕ್ರಾಂತಿಯ ಹಿಂದೊಂದು ಕಾಣದ ಕೈ

Wednesday October 07, 2015,

3 min Read

ಆರೋಗ್ಯಕರ ಆಹಾರ, ಜೀವನಶೈಲಿ ಮತ್ತು ಆರೋಗ್ಯ ಇವುಗಳು ಆನ್‌ಲೈನ್ ಮತ್ತು ಆಫ್‌ಲೈನ್‌ಗಳೆರಡರಲ್ಲೂ ಬಹಳಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಒಳ್ಳೆಯ ಮತ್ತು ಕೆಟ್ಟ ಆಹಾರಗಳ ಬಗ್ಗೆ ನಾವು ತುಂಬಾ ಚರ್ಚಿಸುತ್ತೇವೆ. ಆದರೆ ಆಹಾರ ಉತ್ತಮವಾಗಿರಲು ಅದರ ಪ್ಯಾಕೇಜಿಂಗ್ ಕೂಡ ಅತ್ಯಂತ ಅಗತ್ಯ ಎಂಬುದನ್ನು ಮಾತ್ರ ಆಗಾಗ ಮರೆಯುತ್ತಿರುತ್ತೇವೆ. ಆಹಾರ ಶುಚಿಯಾಗಿರದಿದ್ದರೆ, ಒಮ್ಮೆ ಬಳಸಿದ್ದ ಆಹಾರವನ್ನೇ ಮತ್ತೆ ಉಪಯೋಗಿಸುತ್ತಿದ್ದರೆ ಅಥವಾ ಆಹಾರ ಸಂಗ್ರಹಿಸಿಟ್ಟ ಕಂಟೈನರ್‌ಗಳಲ್ಲಿರುವ ರಾಸಾಯನಿಕ ಪದಾರ್ಥಗಳಿಂದ ಮಾನವನ ಆರೋಗ್ಯ ಬಹಳ ಬೇಗ ಕೆಟ್ಟುಹೋಗುತ್ತದೆ ಎನ್ನುತ್ತಾರೆ ರಿಯಾ ಸಿಂಘಾಲ್.

ಅಂದ ಹಾಗೆ 27ವರ್ಷದ ರಿಯಾ ಸಿಂಘಾಲ್, 2009ರಲ್ಲಿ ಆರಂಭವಾದ ಎಕೋವೇರ್ ಸೊಲ್ಯೂಷನ್ ಎಂಬ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಒ.

image


ಜೈವಿಕ ವಿಘಟನೆ ಹೊಂದಬಹುದಾದ ಆಹಾರದ ಸುರಕ್ಷಿತತೆ, ಆಹಾರವನ್ನು ಆರೋಗ್ಯಕರವಾಗಿಡಲು ಅವಶ್ಯಕವಿರುವ ಪ್ಯಾಕೇಜಿಂಗ್ ಇಂದಿನ ದಿನಗಳಲ್ಲಿ ಬಹುಮುಖ್ಯವಾದುದಾಗಿದೆ. ಅಲ್ಲದೇ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಲೇಬೇಕೆಂಬ ಅಗತ್ಯವೂ ಇದೆ ಎನ್ನುತ್ತಾರೆ ರಿಯಾ.

ಒಂದು ಕಾರ್ಯಸಾಧ್ಯ ಪರಿಹಾರ

ಆನ್‌ಲೈನ್ ಹಾಗೂ ಆಫ್‌ಲೈನ್‌ ಮೂಲಕ ಕಾರ್ಯನಿರತವಾಗಿರುವ ಎಕೋವೇರ್ ಸಂಸ್ಥೆ 2010ರಲ್ಲಿ ಆರಂಭವಾಯಿತು. ಇಂದು 2 ನಿರ್ಮಾಣ ವಿಭಾಗ, 100 ಜನ ಉದ್ಯೋಗಿಗಳು ಮತ್ತು 10 ಕೋಟಿ ವಾರ್ಷಿಕ ಆದಾಯವನ್ನು ಸಂಸ್ಥೆ ಹೊಂದಿದೆ. ಈ ಸಂಸ್ಥೆ ಭಾರತ, ಯುಎಇ, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ತನ್ನ ಹೆಜ್ಜೆಗುರುತನ್ನು ಮೂಡಿಸಿದೆ.

ಸಂಸ್ಥೆಯ ಉತ್ಪನ್ನಗಳನ್ನು ಸಸ್ಯ ಜೀವರಾಶಿಯ ಮೂಲಗಳಿಂದ ತಯಾರಿಸಲಾಗುತ್ತಿದ್ದು, ಅಧಿಕ ಇಳುವರಿ ನೀಡುವಂತಹ ಹಾಗೂ ನೀರು ಉತ್ಪನ್ನಗಳಿಗೆ ಸೋಕದಂತೆ ಸುಭದ್ರವಾದ ಪ್ಯಾಕೇಜಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರ ಆಹಾರ ಭದ್ರತೆ ಹಾಗೂ ಗುಣಮಟ್ಟ ಸುಧಾರಿಸುವತ್ತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ರಿಯಾ ಹೇಳಿದ್ದಾರೆ.

ಈ ಸಸ್ಯಗಳ ತಿರುಳಿನಿಂದ ತಯಾರಿಸಲ್ಪಟ್ಟ ಉತ್ಪನ್ನಗಳು ಸ್ವಾಭಾವಿಕವಾಗಿ, ಪ್ರಾಕೃತಿಕ ಮಾದರಿಯಲ್ಲಿ ಉತ್ಪಾದಿಸಲಾಗಿದ್ದು, ಹಾಗಾಗಿ ಇದು ಶೇ.100ರಷ್ಟು ಸುಭದ್ರ ಹಾಗೂ ಪ್ರಕೃತಿಯಲ್ಲಿ ಕರಗುವ ಗುಣ ಹೊಂದಿದೆ. ನಮ್ಮ ಉತ್ಪನ್ನಗಳ ವಿಶ್ವಾಸಾರ್ಹತೆಗೆ ಸಾಕ್ಷಿ ಎನ್ನುವಂತೆ ಯುಎಸ್‌ಡಿಎ(ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ಆಫ್ ಅಗ್ರಿಕಲ್ಚರ್‌) ನಿಂದ ಮಾನ್ಯತಾ ಪ್ರಮಾಣಪತ್ರವೂ ದೊರೆತಿದೆ.

ಸವಾಲುಗಳು

ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಲು ಸರಿಯಾದ ಉತ್ತಮ ಪರ್ಯಾಯ ವಸ್ತುಗಳು ದೊರೆತರೆ ಅದನ್ನು ಪ್ಲಾಸ್ಟಿಕ್‌ನ ಬದಲಾಗಿ ಬಳಸಬಹುದು.

ಪರಿಸರ ಸ್ನೇಹಿ ಉತ್ಪನ್ನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ರಿಯಾರ ಮುಂದಿರುವ ದೊಡ್ಡ ಸವಾಲು. ಈಗಾಗಲೇ ಪ್ಲಾಸ್ಟಿಕ್‌ ಬಳಕೆಗೆ ಒಗ್ಗಿಹೋಗಿರುವ ವಿದ್ಯಾರ್ಥಿಗಳು, ವಿತರಕರಿಗೂ ಸಹ ಪ್ಲಾಸ್ಟಿಕ್ ಬಳಕೆಯಿಂದಾಗಬಹುದಾದ ಸಮಸ್ಯೆಗಳ ಕುರಿತು ತಿಳಿಸಬೇಕಿದೆ. ಈ ಮೂಲಕ ಪ್ಲಾಸ್ಟಿಕ್‌ಗೆ ಬದಲಿಯಾಗಿ ಬಳಸಬಹುದಾದ ವಸ್ತುವಿನ ಕಡೆಗೆ ಹೆಚ್ಚಿನ ಒಲವು ತೋರಿಸುವಂತೆ ಮಾಡಬೇಕಿದೆ. ಎಕೋವೇರ್ ಸಂಸ್ಥೆ ಈಗಾಗಲೇ ಪರಿಸರ ಸ್ನೇಹಿ ಉತ್ಪನ್ನಗಳ ಕುರಿತು ಶಾಲೆಗಳಲ್ಲಿ ಹಾಗೂ ಕ್ಯಾನ್ಸರ್ ಪೀಡಿತರ ಬೆಂಬಲಕ್ಕೆ ನಿಂತಿರುವ ಸಂಸ್ಥೆಗಳ ಮೂಲಕ ಪ್ಲಾಸ್ಟಿಕ್ ಹಾಗೂ ಸ್ಟೈರೋಫೋಮ್ ನಂತಹ ವಸ್ತುಗಳ ಬಳಕೆಯಿಂದಾಗುವ ಅಪಾಯಗಳ ಕುರಿತು ಶಿಕ್ಷಣ ನೀಡುತ್ತಿದೆ ಮತ್ತು ಜಾಗೃತಿ ಮೂಡಿಸುತ್ತಿದೆ. ಪುರುಷ ಪ್ರಧಾನ ಉದ್ಯಮಗಳೇ ಹೆಚ್ಚಿರುವ ವೇಳೆಯಲ್ಲಿ ಕಾರ್ಖಾನೆಗಳ ನೌಕರರಿಂದ ಹಿಡಿದು ವಿತರಕರು ಮತ್ತು ಖರೀದಿ ವ್ಯವಸ್ಥಾಪಕರುಗಳನ್ನು ಹಾಗೂ ಸಾಂಸ್ಥಿಕ ಬಂಡವಾಳ ಹೂಡಿಕೆದಾರರನ್ನು ಪ್ಲಾಸ್ಟಿಕ್ ಬಳಕೆ ವಿರೋಧಿಸುವಂತೆ ಮನವೊಲಿಸುವುದೇ ರಿಯಾರ ಮುಂದಿರುವ ದೊಡ್ಡ ಸವಾಲಾಗಿದೆ.

image


ದುಬೈ-ಲಂಡನ್- ದೆಹಲಿ

ಮುಂಬೈನಲ್ಲಿ ವಾಸವಾಗಿದ್ದ ರಿಯಾರ ಪೋಷಕರು 1983ರಲ್ಲಿ ಅಂದರೆ ರಿಯಾಗೆ 1 ವರ್ಷವಾಗಿದ್ದಾಗ ದುಬೈಗೆ ವಲಸೆ ಹೋದರು. ಮುಂದೆ ರಿಯಾ ಬೆಳೆದಿದ್ದು ದುಬೈ ಮತ್ತು ಲಂಡನ್‌ನಲ್ಲಿ. ಯುಕೆಯ ಬೋರ್ಡಿಂಗ್‌ ಸ್ಕೂಲ್‌ನಲ್ಲಿ ಓದುತ್ತಿದ್ದ ರಿಯಾ ಶಿಸ್ತು ಮತ್ತು ಸ್ವತಂತ್ರದ ಬಗ್ಗೆ ತಮ್ಮದೇ ಆದ ದೃಷ್ಟಿಕೋನವನ್ನು ಬೆಳೆಸಿಕೊಂಡರು. ಬಹಳ ಗಟ್ಟಿ ವ್ಯಕ್ತಿತ್ವವನ್ನು ರೂಢಿಸಿಕೊಂಡ ರಿಯಾ ತಾವು ನಂಬಿರುವ ತತ್ವಗಳ ಪರವಾಗಿ ಯಾರಿಗೂ ಹೆದರದೇ ಬದುಕುವಂತಹ ಇಚ್ಛಾಶಕ್ತಿಯನ್ನು ಹೊಂದಿದವರು.

ಬ್ರಿಸ್ಟಲ್ ಯೂನಿವರ್ಸಿಟಿಯಲ್ಲಿ ಫಾರ್ಮಕಾಲಜಿ ಕುರಿತು ಅಧ್ಯಯನ ನಡೆಸಿದ ರಿಯಾ ನಂತರ ಲಂಡನ್‌ನ ಫೈಜರ್ ಇಂಕ್ ಸಂಸ್ಥೆಯಲ್ಲಿ ಸೀನಿಯರ್ ಮಾರ್ಕೆಟಿಂಗ್ ಮತ್ತು ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ಕಾರ್ಯನಿರ್ವಹಿಸಿದರು. ಫೈಜರ್‌ನಲ್ಲಿ ಕಾರ್ಯನಿರ್ವಹಿಸಿದ 5 ವರ್ಷಗಳಲ್ಲಿ ರಿಯಾರನ್ನು ಉದ್ಯಮ ಕ್ಷೇತ್ರದತ್ತ ಗಮನ ಹರಿಸುವಂತೆ ಮಾಡಿತು. ಅಲ್ಲದೇ ಪಠ್ಯಪುಸ್ತಕಗಳಲ್ಲಿ ದೊರಕುವ ಜ್ಞಾನಕ್ಕಿಂತ ಹೆಚ್ಚಿನ ಜ್ಞಾನವನ್ನು ಒದಗಿಸಿಕೊಟ್ಟಿತು. ಬಲಾವಣೆ ಮಾತ್ರ ಶಾಶ್ವತ ಎಂಬ ವಿಚಾರದ ಅರಿವೂ ಆಯಿತು.

2009ರಲ್ಲಿ ಫೈಜರ್ ಸಂಸ್ಥೆಯಿಂದ ಹೊರಬಂದ ರಿಯಾ ತಮ್ಮ ಪತಿಯೊಂದಿಗೆ ದೆಹಲಿಗೆ ಬಂದರು.

ರಿಯಾ ಹೊಸ ಉದ್ಯಮವೊಂದನ್ನು ಆರಂಭಿಸಲು ಸರಿಯಾದ ಸಮಯಕ್ಕಾಗಿ ನಿರೀಕ್ಷಿಸುತ್ತಿದ್ದ ರಿಯಾಗೆ ಆರೋಗ್ಯ ಮತ್ತು ಆಹಾರ ಭದ್ರತೆ ಬಗ್ಗೆ ಮಾತನಾಡುವ ಜನರು ಅದರ ಪ್ಯಾಕೇಜಿಂಗ್ ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯವಹಿಸಿರುವುದನ್ನು ಗಮನಿಸಿದರು ರಿಯಾ. ಹೀಗಾಗಿ ಪರಿಸರ ಸ್ನೇಹಿ ಉತ್ಪನ್ನಗಳ ನಿರ್ಮಾಣ ಘಟಕ ಸ್ಥಾಪಿಸುವ ಯೋಜನೆ ರೂಪಿಸಿದರು.

ಎಕೋವೇರ್‌ನ ಸಹ ಸಂಸ್ಥಾಪಕರಾದ ಬಾಳಸಂಗಾತಿ

2010ರಲ್ಲಿ ಸ್ಥಾಪನೆಯಾದ ಎಕೋವೇರ್‌ ಸಂಸ್ಥೆ ಈಗ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ. ರಿಯಾರ ಪತಿ ತಾವು ಕೆಲಸ ಮಾಡುತ್ತಿದ್ದ ಕಂಪನಿಯನ್ನು ಬಿಟ್ಟು ಎಕೋವೇರ್‌ಗೆ ಸೇರಿ ಅದರ ಸಹ ಸಂಸ್ಥಾಪಕರಾದರು.

ಸದ್ಯಕ್ಕೆ ರಿಯಾ ಉದ್ಯಮದ ಅಭಿವೃದ್ಧಿ, ಮಾರಾಟ, ಮಾರ್ಕೆಟಿಂಗ್ ಮತ್ತು ತಮ್ಮ ಬ್ರಾಂಡ್‌ಗೆ ಸಂಬಂಧಿಸಿದ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಪತಿಯೊಂದಿಗೆ ಕೆಲಸ ಮಾಡುತ್ತಿರುವ ಅನುಭವವನ್ನು ಹಂಚಿಕೊಳ್ಳುವ ರಿಯಾ ತಾವಿಬ್ಬರೂ ಪರಸ್ಪರರ ವಿಭಾಗದ ಕಾರ್ಯಚಟುವಟಿಕೆಗಳನ್ನು ಗಮನಿಸುತ್ತೇವೆ. ಆದರೆ ಅಗತ್ಯವಿರದ ಪಕ್ಷದಲ್ಲಿ ಪರಸ್ಪರರ ತಂಡಗಳನ್ನು ನಿಭಾಯಿಸುವುದಿಲ್ಲ ಹಾಗೂ ಅನಾವಶ್ಯಕ ಕಾರ್ಯಗಳಲ್ಲಿ ತಲೆಹಾಕುವುದಿಲ್ಲ. ಕೇವಲ ಆಫೀಸ್ ವೇಳೆಯಲ್ಲಿ ಮಾತ್ರ ಆಫೀಸ್ ಕೆಲಸದ ಬಗ್ಗೆ ಮಾತನಾಡುತ್ತೇವೆ. ಆಫೀಸ್ ಕೆಲಸಗಳನ್ನು ಮನೆಗೆ ಒಯ್ಯದಿರಲು ಪ್ರಯತ್ನಿಸುತ್ತೇವೆ ಎನ್ನುತ್ತಾರೆ.

ಬಿಸಿನೆಸ್ ಮಂತ್ರ

ಬದಲಾವಣೆಗೆ ತೆರೆದುಕೊಂಡು ಉದ್ಯಮವನ್ನು ದೊಡ್ಡದಾಗಿ ಕಲ್ಪಿಸಿಕೊಳ್ಳುವುದೇ ರಿಯಾರ ಬಿಸಿನೆಸ್ ಮಂತ್ರ. ಸಮಸ್ಯೆಗಳಿಗೆ ಕ್ಷಿಪ್ರಗತಿಯಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳುವುದು ಹಾಗೂ ಎಲ್ಲಾ ಸಂಸ್ಕೃತಿಗಳನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಸಹ ರಿಯಾರ ಯಶಸ್ಸಿಗೆ ಕಾರಣ.

ಜೈವಿಕ ವಿಘಟನೆ ಹೊಂದಲ್ಪಡುವ, ಬಳಸಿ ಎಸೆದರೂ ಪರಿಸರಕ್ಕೆ ಮಾರಕವಾಗದಂತಹ ಪ್ಯಾಕೇಜಿಂಗ್ ಮತ್ತು ಫೈನ್ ಡೈನ್ ರೆಸ್ಟೋರೆಂಟ್ ನಿಂದ ಹಿಡಿದು ರಸ್ತೆಯ ಬದಿಯ ಚಾಯ್ ವಾಲಾಗಳೂ ಸಹ ಬಳಸಬಹುದಾದ ಉತ್ಪನ್ನಗಳನ್ನು ಒಂದೇ ಸೂರಿನಡಿಯಲ್ಲಿ ತರುವ ಯೋಜನೆಯನ್ನು ರಿಯಾ ಹಾಕಿಕೊಂಡಿದ್ದಾರೆ.

ಡೆಟಾಲ್ ಎಂದರೆ ನೈರ್ಮಲ್ಯ ಮತ್ತು ಗೂಗಲ್ ಎಂದರೆ ಆನ್‌ಲೈನ್ ಹುಡುಕಾಟ ಎಂಬಂತೆ ಎಕೋವೇರ್‌ ಉತ್ಪನ್ನಗಳನ್ನು ಗೃಹೋಪಯೋಗಿ ಬ್ರಾಂಡ್ ಆಗಿ ಮಾಡುವತ್ತ ರಿಯಾ ಚಿಂತಿಸುತ್ತಿದ್ದಾರೆ.

ಕೇವಲ ಉದ್ಯಮಿ ಮಾತ್ರವಲ್ಲದೇ 2 ಮಕ್ಕಳ ತಾಯಿಯಾಗಿ ಸಮಾಜಕ್ಕೆ ಜವಾಬ್ದಾರಿಯುತ ಜೀವನಶೈಲಿಯನ್ನು ಬೋಧಿಸುವುದು ರಿಯಾರ ಗುರಿ. ನಮ್ಮ ಕುಟುಂಬ ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಮತ್ತು ಸುರಕ್ಷಿತ ಪರಿಸರವನ್ನು ಒದಗಿಸುವುದು ನಮ್ಮ ಕರ್ತವ್ಯ ಎನ್ನುವುದು ರಿಯಾರ ಘೋಷವಾಕ್ಯ.

ಆಹಾರ ತಂತ್ರಜ್ಞಾನಗಳ ಬೆಳವಣಿಗೆಗೆ ವಿಸ್ತೃತ ಮತ್ತು ಪರಿಸರಸ್ನೇಹಿ ಸರಕುಗಳಿಗೆ ರಿಯಾರ ಉತ್ಪನ್ನಗಳು ಪರಿಹಾರ ರೂಪದಲ್ಲಿ ಕಂಡುಬಂದಿದೆ.