ಡಿಜಿಟಲ್ ಕೂಪನ್ ಬೇಡಿಕೆಗೆ ಇಂಧನವಾದ ಮೊಬೈಲ್ ವೇದಿಕೆ

ಟೀಮ್​​ ವೈ.ಎಸ್​. ಕನ್ನಡ

ಡಿಜಿಟಲ್ ಕೂಪನ್ ಬೇಡಿಕೆಗೆ ಇಂಧನವಾದ ಮೊಬೈಲ್ ವೇದಿಕೆ

Friday December 18, 2015,

3 min Read

ಭಾರತೀಯ ಮಾರುಕಟ್ಟೆಯಲ್ಲಿ ಡಿಜಿಟಲ್ ಕೂಪನ್‍ಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗ್ತಾ ಇದೆ. ಬಹುತೇಕ ಎಲ್ಲ ಉದ್ಯಮಗಳು ಕೂಡ ಗ್ರಾಹಕರಿಗೆ ತಮ್ಮ ಕೊಡುಗೆಗಳನ್ನು ಡಿಜಿಟಲ್ ಮಾರ್ಗದಲ್ಲಿ ವಿತರಿಸುತ್ತಿದ್ದಾರೆ. ಹಾಗಾದ್ರೆ ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಯ ಬೆಳವಣಿಗೆ ಹೇಗಿದೆ ಅನ್ನೋದನ್ನು ನೋಡೋಣ.

ಹೂಡಿಕೆ ಬ್ಯಾಂಕಿಂಗ್ ಸಲಹಾ ಸಂಸ್ಥೆ `ಪೆಪ್ಪರ್‍ವುಡ್ ಪಾರ್ಟನರ್ಸ್' ದಾಖಲೆಗಳ ಪ್ರಕಾರ ಭಾರತದ ಕೂಪನ್ ಮಾರ್ಕೆಟ್ ಗಣನೀಯ ಬೆಳವಣಿಗೆಯನ್ನು ಕಂಡಿದೆ. 2011ರ ವೇಳೆಗೆ ಶೇ.629ರಷ್ಟು ಬೆಳವಣಿಗೆ ದಾಖಲಿಸಿದ್ದು, ಡಿಜಿಟಲ್ ಕೂಪನ್‍ಗಳು ವೇಗವರ್ಧಕಗಳಂತೆ ಕೆಲಸ ಮಾಡಿವೆ. ಆದ್ರೂ ಭಾರತದ ಬಹುತೇಕ ಕಂಪನಿಗಳು ಮುದ್ರಣ ಮಾಧ್ಯಮದ ಜಾಹೀರಾತುಗಳನ್ನೇ ಅವಲಂಬಿಸಿವೆ. ಮಾರಾಟ ಹೆಚ್ಚಳ ಮಾಡುವ ಅಸ್ತ್ರಗಳಾಗಿರುವ ಕೂಪನ್‍ಗಳ ಮಹತ್ವದ ಬಗ್ಗೆ ಅವುಗಳಿಗೆ ಇನ್ನೂ ಅರಿವಾಗಿಲ್ಲ. ಕೂಪನ್‍ಗಳು ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತಿರುವುದರಿಂದ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಮುದ್ರಣ ಮಾಧ್ಯಮಗಳ ಪ್ರಸರಣ ಸಂಖ್ಯೆ ಕಡಿಮೆಯಾಗಿದೆ. ಅತ್ಯಂತ ಆದ್ಯತೆಯ ಆಯ್ಕೆಯಾಗಿ ಡಿಜಿಟಲ್ ಪರಿಹಾರಗಳು ಹುಟ್ಟಿಕೊಂಡಿರುವುದರಿಂದ ಭವಿಷ್ಯದಲ್ಲಿ ಮಾಧ್ಯಮ ಉದ್ಯಮಕ್ಕೆ ಅಡ್ಡಿ ಉಂಟಾಗುವುದರಲ್ಲಿ ಅನುಮಾನವಿಲ್ಲ.

image


ಒಂದು ಕಂಪನಿಯಾಗಿ ನಾವು ಕೂಡ ಮೊಬೈಲ್ ಟ್ರಾಫಿಕ್‍ನಲ್ಲಿ ಅಪಾರ ಬೆಳವಣಿಗೆ ಕಾಣ್ತಾ ಇದ್ದು, ವೆಬ್‍ಸೈಟ್ ಕಡೆಗೂ ಸೆಳೆತ ಹೆಚ್ಚಾಗಿದೆ. ಈ ಟ್ರೆಂಡ್‍ನ ಫಲಿತಾಂಶ ಡಿಜಿಟಲ್ ಕೂಪನ್‍ಗಳ ಜನಪ್ರಿಯತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದು, ಬೇಡಿಕೆ ಕೂಡ ಹೆಚ್ಚಾಗಲಿದೆ. 2015ರ ಆಗಸ್ಟ್‍ನಲ್ಲಿ `ಶೊಪಿರೇಟ್ ಡಾಟ್ ಕಾಮ್' ಸಮೀಕ್ಷೆಯೊಂದನ್ನು ನಡೆಸಿದೆ. ದೆಹಲಿ ಮತ್ತು ಮುಂಬೈನಲ್ಲಿ, ವಾರ್ಷಿಕ ಕನಿಷ್ಠ 6 ಲಕ್ಷ ರೂಪಾಯಿ ವೇತನ ಪಡೆಯುವ 25-40 ವರ್ಷದೊಳಗಿನ 100 ಜನರ ಅಭಿಪ್ರಾಯ ಸಂಗ್ರಹಿಸಿದೆ. ಈ ಪೈಕಿ ಶೇ.60ರಷ್ಟು ಮಂದಿ ಯಾವುದೇ ಉತ್ಪನ್ನಗಳನ್ನು ಖರೀದಿಸುವ ಸಂದರ್ಭದಲ್ಲಿ ಕೂಪನ್‍ಗಳನ್ನು ಬಳಸಿಲ್ಲ. ಆದ್ರೆ ಉಳಿದ ಶೇ.40ರಷ್ಟು ಜನರು ಡಿಜಿಟಲ್ ಕೂಪನ್ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕೂಪನ್ ಮೂಲಕ ದೊರೆಯುವ ಉತ್ಪನ್ನ ಖರೀದಿಗೆ ಇವರಲ್ಲಿ ಅರ್ಧದಷ್ಟು ಜನರು ಮೊಬೈಲ್ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಡಿಜಿಟಲ್ ಕೂಪನ್ ಮಾರುಕಟ್ಟೆ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಗ್ರಾಹಕರು ಕೂಡ ಕೂಪನ್ ಸೌಲಭ್ಯಕ್ಕಾಗಿ ಮೊಬೈಲ್‍ಗಳ ಮೊರೆಹೋಗುತ್ತಿದ್ದಾರೆ.

ಭಾರತದ ಡಿಜಿಟಲ್ ಮಾರುಕಟ್ಟೆ ಅಮೆರಿಕದ ಮಾರುಕಟ್ಟೆಯ ಮಾರ್ಗದಲ್ಲೇ ಸಾಗುತ್ತಿದೆ. ಇ-ಮಾರ್ಕೆಟರ್ ಪ್ರಕಾರ, ಕಂಪನಿಯೊಂದು ಡಿಜಿಟಲ್ ಉದ್ಯಮದ ಬಗ್ಗೆ ಗುಪ್ತಚರ ಮತ್ತು ವಿಶ್ಲೇಷಣೆಯ ಕೊಡುಗೆ ನೀಡಿತ್ತು. 2012ರಲ್ಲಿ 92.5 ಮಿಲಿಯನ್ ಜನರು ಡಿಜಿಟಲ್ ಕೂಪನ್‍ನಿಂದ ವಿಮೋಚನೆ ಹೊಂದಿದ್ರು. ಆದ್ರೆ 2010ರಲ್ಲಿ 12.3 ಮಿಲಿಯನ್‍ನಷ್ಟಿದ್ದ ಮೊಬೈಲ್ ಕೂಪನ್ ಬಳಕೆದಾರರ ಸಂಖ್ಯೆ 2014ರ ವೇಳೆಗೆ 53.2 ಮಿಲಿಯನ್‍ನಷ್ಟಾಗಿದೆ.

`ಇಂಡಿಯಾ ಆನ್ ದಿ ಗೋ - ಮೊಬೈಲ್ ಇಂಟರ್ನೆಟ್ ವಿಷನ್ ರಿಪೋರ್ಟ್ - 2015'ರ ಪ್ರಕಾರ ಭಾರತದಲ್ಲಿ 2014ರ ವೇಳೆಗೆ 3ಜಿ ಚಂದಾದಾರರ ಸಂಖ್ಯೆ 82 ಮಿಲಿಯನ್‍ನಷ್ಟಿತ್ತು. ಸ್ಮಾರ್ಟ್ ಫೋನ್‍ಗಳು ಕೂಡ ಬಹು ಜನಪ್ರಿಯವಾಗಿದ್ವು. ಮೈಕ್ರೋಮ್ಯಾಕ್ಸ್, ಲೆನೊವೋ, ಲಾವಾದಂತಹ ಮೊಬೈಲ್ ಕಂಪನಿಗಳು ಪೈಪೋಟಿಯ ಬೆಲೆಗೆ ಸ್ಮಾರ್ಟ್ ಫೋನ್‍ಗಳನ್ನು ಮಾರುಕಟ್ಟೆಗೆ ಬಿಟ್ಟಿದ್ರಿಂದ ಗ್ರಾಹಕರು ಅದರತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ದೇಶದಲ್ಲಿ ಡಿಜಿಟಲ್ ಕೂಪನ್‍ಗಳಿಗೆ ಬೇಡಿಕೆ ಹೆಚ್ಚಿಸುವಲ್ಲಿ ಈ ಬೆಳವಣಿಗೆ ಅತ್ಯಂತ ಸಹಕಾರಿಯಾಗಿದೆ. 2016ರ ಅಂತ್ಯದ ವೇಳೆಗೆ ವಿಶ್ವದಲ್ಲಿ ಅತಿ ದೊಡ್ಡ ಸ್ಮಾರ್ಟ್‍ಫೋನ್ ಮಾರುಕಟ್ಟೆ ಹೊಂದಿದ ದೇಶಗಳಲ್ಲಿ ಎರಡನೇ ಸ್ಥಾನ ಪಡೆಯಲಿರುವ ಭಾರತ ಅಮೆರಿಕವನ್ನು ಹಿಂದಿಕ್ಕಲಿದೆ. ಸ್ಮಾರ್ಟ್ ಮೊಬೈಲ್ ಡಿವೈಸ್‍ಗಳು ಕೈಗೆಟುಕುವ ದರದಲ್ಲಿ ದೊರೆಯುತ್ತಿರುವುದೇ ಇದಕ್ಕೆ ಕಾರಣ ಅನ್ನೋದು ಜಾಗತಿಕ ಸಂಶೋಧನಾ ಸಂಸ್ಥೆ ಇ-ಮಾರ್ಕೆಟರ್ ಅಭಿಪ್ರಾಯ.

ಡಿಜಿಟಲ್ ವೇದಿಕೆಗಳಲ್ಲಿ ಶಾಪಿಂಗ್ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಒಳ್ಳೆಯ ಉದಾಹರಣೆ ಅಂದ್ರೆ ಈ ಬಾರಿ ಹಬ್ಬದ ಸಮಯದಲ್ಲಿ ಇ-ಕಾಮರ್ಸ್ ಕಂಪನಿಗಳಾದ `ಫ್ಲಿಪ್‍ಕಾರ್ಟ್' ಮತ್ತು `ಅಮೇಝಾನ್'ನಲ್ಲಾದ ಭಾರೀ ಮಾರಾಟ. ಕೊಡುಗೆಗಳನ್ನು ಲಾಂಚ್ ಮಾಡಿ ಒಂದು ಗಂಟೆಯೊಳಗೆ ಎರಡೂ ಕಂಪನಿಗಳ ಸೇಲ್ಸ್ ಆರಂಕಿ ಮುಟ್ಟಿತ್ತು. ಸೇಲ್ಸ್ ಆರಂಭವಾದ ಮೊದಲ 10 ಗಂಟೆಗಳಲ್ಲಿ ಫ್ಲಿಪ್‍ಕಾರ್ಟ್‍ನಲ್ಲಿ ಒಂದು ಮಿಲಿಯನ್ ಉತ್ಪನ್ನಗಳು ಮಾರಾಟವಾಗಿದ್ದು, 6 ಮಿಲಿಯನ್ ಗ್ರಾಹಕರು ಭೇಟಿ ಕೊಟ್ಟಿದ್ದಾರೆ. ಕಾರಣ ಈ ಕಂಪನಿಗಳ ಮೊಬೈಲ್ ಆ್ಯಪ್‍ಗಳು ಭಾರೀ ಜನಪ್ರಿಯತೆ ಪಡೆದಿವೆ.

ಸರಿಯಾದ ಸಮಯದಲ್ಲಿ, ಸೂಕ್ತ ಸ್ಥಳದಲ್ಲಿ, ಬಳಕೆದಾರರ ವರ್ತನೆಗೆ ತಕ್ಕಂತಹ ಅನುಕೂಲಕರ ಡೀಲ್‍ಗಳನ್ನು ಮೊಬೈಲ್ ವೇದಿಕೆಗಳು ಒದಗಿಸುತ್ತವೆ. ಇದು ಡಿಜಿಟಲ್ ಕೂಪನ್‍ಗಳ ಬೆಳವಣಿಗೆ ಬಗ್ಗೆ ಆಶಾವಾದ ಮೂಡಿಸುತ್ತಿದೆ. `ಶಾಪಿರೇಟ್ ಡಾಟ್ ಇನ್', `ಹ್ಯಾಪಿ ಚೆಕ್‍ಔಟ್ ಡಾಟ್ ಕಾಮ್', `ಕೂಪನ್ಸ್ ದುನಿಯಾ ಡಾಟ್ ಕಾಮ್'ನಂತಹ ವೇದಿಕೆಗಳು ವೇಗವರ್ಧಕಗಳಂತೆ ಕಾರ್ಯನಿರ್ವಹಿಸುತ್ತಿವೆ. ಎಸ್‍ಎಂಎಸ್, ಪ್ರಮೋಷನ್, ಮೊಬೈಲ್ ಆ್ಯಪ್ ಮತ್ತು ಮೊಬೈಲ್ ಬಾರ್ ಕೋಡ್‍ಗಳ ಮೂಲಕ ಡಿಜಿಟಲ್ ಕೂಪನ್‍ಗಳನ್ನು ಗ್ರಾಹಕರಿಗೆ ತಲುಪಿಸುತ್ತಿವೆ. ಆನ್‍ಲೈನ್ ಉಪಸ್ಥಿತಿಯಿಲ್ಲದೆ, ಇ-ಕಾಮರ್ಸ್ ವೇದಿಕೆಗಳ ಜೊತೆ ಪೈಪೋಟಿ ನಡೆಸುವ ಅವಕಾಶವನ್ನು ಕೂಡ ಡಿಜಿಟಲ್ ಕೂಪನ್ ಕಂಪನಿಗಳಿಗೆ ಕಲ್ಪಿಸಿಕೊಟ್ಟಿದೆ. ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ಅವರು ಮಾರಾಟದಲ್ಲಿ ಹೆಚ್ಚಳ ಮಾಡಿಕೊಳ್ಳಬಹುದು.

ಡಿಜಿಟಲ್ ಕೂಪನ್‍ಗಳ ಲಭ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಅವುಗಳ ಪ್ರಯೋಜನಗಳ ಬಗ್ಗೆ ಕೂಡ ತಿಳಿಹೇಳಬೇಕಿದೆ. ಡಿಜಿಟಲ್ ಕೂಪನ್‍ಗಳ ನಿಜವಾದ ಸಾಮಥ್ರ್ಯದ ಬಗ್ಗೆ ಅರಿವು ಮೂಡಿಸಲು ಪರಿಣಾಮಕಾರಿ ಮಾರ್ಕೆಟಿಂಗ್ ಪ್ರಯತ್ನಗಳು ಬೇಕು. ಇನ್ನು ಕೆಲವೇ ವರ್ಷಗಳೊಳಗೆ ಭಾರತದ ಬಹುತೇಕ ಎಲ್ಲ ಕಂಪನಿಗಳು ಹಾಗೂ ಗ್ರಾಹಕರು ಡಿಜಿಟಲ್ ಕೂಪನ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಲ್ಲಿ ಅನುಮಾನವಿಲ್ಲ.

ಅನುವಾದಕರು: ಭಾರತಿ ಭಟ್​