ಜಸ್ಟ್ `ಎನ್‍ಕ್ಯಾಶ್‍ಇಟ್'.. ಸೋತು ಗೆದ್ದ ವಿಜಯ್ ಸುರಮ್..!

ಟೀಮ್ ವೈ.ಎಸ್.

0

ಶಾಪಿಂಗ್‍ಗೆ ಹೊರಟ್ರೆ ಎಲ್ಲಿ ಡಿಸ್ಕೌಂಟ್ ಇದೆ..? ಒಳ್ಳೆ ಆಫರ್ ಹಾಕಿದ್ದಾರಾ ಅನ್ನೋದನ್ನೇ ಎಲ್ರೂ ಹುಡುಕೋದು. ಅದರಲ್ಲೂ ಚೌಕಾಸಿ ಮಾಡುವವರೇ ಹೆಚ್ಚು. ಚೌಕಾಸಿ ಮಾಡೋದ್ರಲ್ಲಿ ಭಾರತೀಯರನ್ನು ಮೀರಿಸುವವರೇ ಇಲ್ಲ. ಇತ್ತೀಚೆಗೆ ಆನ್‍ಲೈನ್ ಶಾಪಿಂಗ್ ಭರಾಟೆಯೂ ಜೋರು. ಎಲ್ರೂ ಇಂಟರ್ನೆಟ್‍ನಲ್ಲಿ ಡಿಸ್ಕೌಂಟ್‍ಗಾಗಿ ತಲಾಷ್ ಮಾಡ್ತಿರ್ತಾರೆ. ಸದ್ಯ ಗ್ರೂಪ್‍ಆನ್, ಕೂಪನ್ ದುನಿಯಾ, ಮ್ಯಾಡಲ್ ಹಾಗೂ ಕೂಪನ್ ನೇಶನ್ ಆನ್‍ಲೈನ್‍ನಲ್ಲಿ ಹವಾ ಎಬ್ಬಿಸಿವೆ. ಈ ಕಂಪನಿಗಳಿಗೆ ಎನ್‍ಕ್ಯಾಶ್‍ಇಟ್ ಭಾರೀ ಪೈಪೋಟಿ ನೀಡ್ತಾ ಇದೆ.

ಎನ್‍ಕ್ಯಾಶ್‍ಇಟ್ ಸೃಷ್ಟಿ ..

ವಿಜಯ್ ಸುರಮ್ ಹಾಗೂ ಅಮ್ಸಿ ಮಗಂತಿ ಎನ್‍ಕ್ಯಾಶ್‍ಇಟ್ ವೆಬ್‍ಸೈಟ್‍ನ ಸೃಷ್ಟಿಕರ್ತರು. ವಿಜಯ್ ಹಾಗೂ ಅಮ್ಸಿ ಆನ್‍ಲೈನ್ ಕೂಪನ್ ಮತ್ತು ಕ್ಯಾಶ್‍ಬ್ಯಾಕ್ ಆಫರ್‍ಗಳ ಮೂಲಕ ಶಾಪಿಂಗ್ ಪ್ರಿಯರ ಮನಗೆದ್ದಿದ್ದಾರೆ. ಕಳೆದ 45 ದಿನಗಳಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಎನ್‍ಕ್ಯಾಶ್ ಇಟ್ ಆ್ಯಪ್‍ನ್ನು ಡೌನ್‍ಲೋಡ್ ಮಾಡಿದ್ದಾರೆ. ಪ್ರತಿ ದಿನ 800-1000 ಜನರು ಎನ್‍ಕ್ಯಾಶ್‍ಇಟ್ ಆ್ಯಪ್‍ನ್ನು ಇನ್‍ಸ್ಟಾಲ್ ಮಾಡಿಕೊಳ್ಳುತ್ತಿದ್ದಾರೆ. 2011ರಲ್ಲಿ ವಿಜಯ್ ಎಂಜಿನಿಯರಿಂಗ್ ಮುಗಿಸಿದ್ರು. ಆಗಷ್ಟೇ ಭಾರತದಲ್ಲಿ ಇ-ಕಾಮರ್ಸ್ ಚಿಗುರೊಡೆಯಲಾರಂಭಿಸಿತ್ತು. ಆಗ ಕೆಲ ಪ್ರತಿಷ್ಠಿತ ಕಂಪನಿಗಳೊಂದಿಗೆ ಪಾಲುದಾರರಾಗಲು ವಿಜಯ್ ನೆರವಾಗಿದ್ದರು. ಕೆಲ ತಿಂಗಳುಗಳು ಕಳೆಯುವಷ್ಟರಲ್ಲಿ ಈ ಕೂಪನ್ ಆಫರ್ ಸರ್ವೇಸಾಮಾನ್ಯವಾಗಿಹೋಯ್ತು. ಗ್ರಾಹಕರಿಗೆ ಉಪಯೋಗವಾಗುವಂಥದ್ದನ್ನೇನಾದ್ರೂ ಮಾಡಬೇಕು ಅನ್ನೋ ಕನಸು ವಿಜಯ್ ಅವರಿಗಿತ್ತು. ಇದಕ್ಕಾಗಿಯೇ 2012ರಲ್ಲಿ ವಿಜಯ್ ಕ್ಯಾಶ್‍ಬ್ಯಾಕ್ 365 ಡಾಟ್ ಕಾಮ್ ಅನ್ನು ಲಾಂಚ್ ಮಾಡಿದ್ರು. ಇದಕ್ಕೂ ಮೊದಲೇ 2011ರಲ್ಲಿ ವಿಜಯ್ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮೊಬೈಲ್ ರೀಚಾರ್ಜ್ ವ್ಯವಸ್ಥೆಯನ್ನು ಅಳವಡಿಸಿದ್ರು. ಆದ್ರೆ ಈ ಪ್ರಯತ್ನದಲ್ಲಿ ವಿಜಯ್ ಯಶ ಕಾಣಲಿಲ್ಲ. ಭಾರೀ ನಷ್ಟ ಅನುಭವಿಸಿದ್ರು. ಉದ್ಯಮದ ಕನಸಿಗೆ ಎಳ್ಳುನೀರು ಬಿಟ್ಟ ವಿಜಯ್ ಕಾಗ್ನಿಜೆಂಟ್ ಸಾಫ್ಟ್‍ವೇರ್ ಕಂಪನಿಯನ್ನು ಸೇರಿಕೊಂಡ್ರು. ಸುಮಾರು ಎರಡೂವರೆ ವರ್ಷ ಅಲ್ಲೇ ಕರ್ತವ್ಯ ನಿರ್ವಹಿಸಿದ್ರೂ ವಿಜಯ್‍ಗೆ ಆ ಕೆಲಸ ತೃಪ್ತಿ ತಂದಿರಲಿಲ್ಲ. ಈ ಸಂದರ್ಭದಲ್ಲಿ ಅವರನ್ನು ಸೆಳೆದಿದ್ದು ಇ-ಕಾಮರ್ಸ್ ಉದ್ಯಮ. ಮತ್ತೊಮ್ಮೆ ಒಂದು ಟೀಂ ಕಟ್ಟಿಕೊಂಡು ಅಖಾಡಕ್ಕುಳಿದ್ರು. ಕೂಪನ್ ಹಾಗೂ ಕ್ಯಾಶ್‍ಬ್ಯಾಕ್‍ಗಾಗಿ ಒಳ್ಳೆಯ ಮೊಬೈಲ್ ಪ್ರಾಡಕ್ಟ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ರು. ಅವರ ಕನಸಿನ ಕಂಪನಿಯ ಹೆಸರೇ ಎನ್‍ಕ್ಯಾಶ್‍ಇಟ್. 2015ರ ಜೂನ್‍ನಲ್ಲಿ ಎನ್‍ಕ್ಯಾಶ್‍ಇಟ್ ವೆಬ್‍ಸೈಟ್ ಆರಂಭವಾಗಿದೆ.

ಎನ್‍ಕ್ಯಾಶ್‍ಇಟ್ ಕಮಾಲ್..!

ಎನ್‍ಕ್ಯಾಶ್‍ಇಟ್ ಆ್ಯಪ್‍ನಲ್ಲಿ ಪ್ರತಿದಿನ ಸುಮಾರು 500ಕ್ಕೂ ಹೆಚ್ಚು ವಹಿವಾಟು ನಡೆಯುತ್ತೆ. ವೆಬ್‍ಸೈಟ್ ಬಳಕೆದಾರರ ಸಂಖ್ಯೆಯಲ್ಲಿ ಶೇಕಡಾ 60ರಷ್ಟು ಕಡಿಮೆಯಾದ್ರೆ, ಆ್ಯಪ್ ಬಳಕೆದಾರರ ಸಂಖ್ಯೆ ವಾರಕ್ಕೆ ಶೇಕಡಾ 300ರಷ್ಟು ಅಧಿಕವಾಗಿದೆ. ಎನ್‍ಕ್ಯಾಶ್‍ಇಟ್ ಫ್ಲಿಪ್‍ಕಾರ್ಟ್ ಮತ್ತು ಶಾಪ್‍ಕ್ಲೂಸ್‍ನಿಂದ ಕ್ಯಾಶ್‍ಬ್ಯಾಕ್ ಮತ್ತು ಕೂಪನ್ ಆಫರ್ ಪಡೆಯಲು ಗ್ರಾಹಕರಿಗೆ ನೆರವಾಗುತ್ತದೆ. ಜಬಾಂಗ್, ಮಿಂತ್ರಾ, ಸ್ನಾಪ್‍ಡೀಲ್, ಪೆಪ್ಪರ್‍ಫ್ರೈನಂತಹ ಕಂಪನಿಗಳ ಆ್ಯಪ್ ಜೊತೆಗೂ ಪಾಲುದಾರರಾಗಲು ವಿಜಯ್ ಮುಂದಾಗಿದ್ದಾರೆ. ಕ್ಯಾಶ್‍ಬ್ಯಾಕ್ ಅನ್ನೋ ಕಾನ್ಸೆಪ್ಟ್ ಹೊಸದು, ಈ ಬಗ್ಗೆ ಅರಿವು ಮೂಡಿಸುವುದೇ ಬಹುದೊಡ್ಡ ಸವಾಲಾಗಿತ್ತು ಎನ್ನುತ್ತಾರೆ ವಿಜಯ್. 60-90 ದಿನಗಳವರೆಗೆ ಕ್ಯಾಶ್‍ಬ್ಯಾಕ್‍ಗಾಗಿ ಕಾಯುವ ಸಹನೆ ಕೂಡ ಇರೋದಿಲ್ಲ. ಹಾಗಾಗಿ ಜನರು ಕೇವಲ ರಿಯಾಯಿತಿ ಬಗ್ಗೆ ಮಾತ್ರ ಆಸಕ್ತರಾಗಿರ್ತಾರೆ ಅನ್ನೋದು ವಿಜಯ್ ಅಭಿಪ್ರಾಯ.

ಹೊಸ ಹೆಸರೇ ಯಾಕೆ..?

ಕ್ಯಾಶ್‍ಬ್ಯಾಕ್365 ಡಾಟ್ ಕಾಮ್ ಅನ್ನೋ ಹೆಸರನ್ನು ಬಿಟ್ಟು ಹೊಸ ಹೆಸರಲ್ಲಿ ವಿಜಯ್ ಕಂಪನಿ ಆರಂಭಿಸಿದ್ದಾರೆ. ಯಾಕಂದ್ರೆ ಕ್ಯಾಶ್‍ಬ್ಯಾಕ್ 365 ಡಾಟ್ ಕಾಮ್ ಹೆಸರಿನ ಹಲವು ಕಂಪನಿಗಳು ವಿದೇಶಗಳಲ್ಲಿ ಅಸ್ತಿತ್ವದಲ್ಲಿವೆ. ಹಾಗಾಗಿ ವಿಜಯ್ ತಮ್ಮ ಕಂಪನಿಯ ಹೆಸರನ್ನು ಎನ್‍ಕ್ಯಾಶ್‍ಇಟ್ ಎಂದು ಬದಲಾಯಿಸಿದ್ದಾರೆ.

ಎನ್‍ಕ್ಯಾಶ್‍ಇಟ್ ಮುಂದೇನು..?

2016ರ ಮಾರ್ಚ್ ವೇಳೆಗೆ ಗೂಗಲ್ ಪ್ಲೇಸ್ಟೋರ್‍ನಲ್ಲಿ 5 ಲಕ್ಷ ಡೌನ್‍ಲೋಡ್ ಗುರಿಯನ್ನು ಎನ್‍ಕ್ಯಾಶ್‍ಇಟ್ ಸಂಸ್ಥೆ ಹೊಂದಿದೆ. ಪ್ರತಿದಿನ ಸುಮಾರು 3000 ವಹಿವಾಟು ನಡೆಯಬಹುದೆಂಬ ನಿರೀಕ್ಷೆ ಇದೆ. ಮುಂದಿನ ತ್ರೈಮಾಸಿಕದಲ್ಲಿ ಐಓಎಸ್ ಮತ್ತು ವಿಂಡೋಸ್ ಆ್ಯಪ್‍ನ್ನು ಬಿಡುಗಡೆ ಮಾಡಲಿದೆ. ಮುಂದಿನ ಆವೃತ್ತಿಯಲ್ಲಿ ಕ್ಯಾಶ್‍ಬ್ಯಾಕ್ ಜೊತೆಗೆ ದರ ಹೋಲಿಕೆಯ ಸೌಲಭ್ಯವನ್ನೂ ಗ್ರಾಹಕರಿಗೆ ಕಲ್ಪಿಸಿಕೊಡಲಿದೆ.

ಭಾರತದಲ್ಲಿ ಡೀಲ್ ಮತ್ತು ಕೂಪನ್ ಉದ್ಯಮದ ಕಾಲ ಮುಗಿದೇ ಹೋಯ್ತು ಅಂತೆಲ್ಲಾ ತಜ್ಞರು ಭವಿಷ್ಯ ನುಡಿದಿದ್ದರು. ಆದ್ರೆ ಗ್ರೂಪ್‍ಆನ್, ಮ್ಯಾಡಲ್, ಕೂಪನ್ ದುನಿಯಾ, ಕ್ಯಾಶ್‍ಕರೋ, ಪೆನ್ನಿಫುಲ್ ಮತ್ತು ಎನ್‍ಕ್ಯಾಶ್‍ಇಟ್‍ನಂತಹ ಹಲವು ಕಂಪನಿಗಳು ತಜ್ಞರ ವಾದವನ್ನು ಸುಳ್ಳಾಗಿಸಿವೆ. ಮಾರುಕಟ್ಟೆಯ ಲೆಕ್ಕಾಚಾರದ ಪ್ರಕಾರ ಇನ್ನೆರಡು ವರ್ಷಗಳಲ್ಲಿ ಆನ್‍ಲೈನ್ ಉದ್ಯಮ ಶೇಕಡಾ 500ರಷ್ಟು ಪ್ರಗತಿ ಕಾಣಲಿದೆ.

Related Stories