ಕೈ ತುಂಬಾ ಸಂಬಳ ಬರೋ ಕೆಲಸಕ್ಕೆ ಗುಡ್ ಬೈ: ಹೊಟೇಲ್ ಬ್ಯುಸಿನೆಸ್ ಗೆ ಹಾಯ್ ಹಾಯ್

ಟೀಮ್ ವೈ.ಎಸ್.

1

ಅಂದುಕೊಂಡಿದ್ದನ್ನ ಸಾಧಿಸಬೇಕು ಅಂದ್ರೆ ಅದಕ್ಕೆ ತಕ್ಕ ಪರಿಶ್ರಮ ಇರಲೇಬೇಕು. ಜೀವನದಲ್ಲಿ ಒಮ್ಮೊಮ್ಮೆ ನಾವು ಅಂದುಕೊಳ್ಳೋದೇ ಒಂದು ಆಗೋದೇ ಒಂದು. ಆದ್ರೆ ಆ ಬೆಳವಣಿಗೆ ಪಾಸಿಟಿವ್ ಆಗಿರಬೇಕಷ್ಟೆ. ಮುಂಬೈ ಮೂಲದ ಗೌರಿ ದೇವಿದಯಾಳ್ ಅವರ ಬದುಕೇ ಇದಕ್ಕೆ ಸಾಕ್ಷಿ. ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದಿರೋ ಅವರು ಚಾರ್ಟರ್ಡ್ ಅಕೌಂಟಂಟ್ ಕೂಡ ಹೌದು. ಆದ್ರೀಗ ಮುಂಬೈನ ಕೊಲಾಬಾದಲ್ಲಿರೋ ದಿ ಟೇಬಲ್ ಅನ್ನೋ ಪ್ರಖ್ಯಾತ ರೆಸ್ಟೋರೆಂಟ್‍ನ ಮಾಲಕಿ. ಟ್ಯಾಕ್ಸ್ ಕನ್ಸಲ್ಟೆಂಟ್ ಆಗಿದ್ದ ಗೌರಿ 8 ವರ್ಷ ಲಂಡನ್‍ನಲ್ಲೇ ಕರ್ತವ್ಯ ನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಅವರಿಗೆ ಪರಿಚಯವಾದವರು ಜಯ್ ಯುಸೂಫ್. ಅಲ್ಲಿಂದ ಗೌರಿ ದೇವಿದಯಾಳ್ ಅವರ ಬದುಕಿಗೆ ಹೊಸ ತಿರುವೇ ಸಿಕ್ಕಿಬಿಡ್ತು. ಸ್ಯಾನ್‍ಫ್ರಾನ್ಸಿಸ್ಕೋ ಮೂಲದ ಜಯ್ ಯುಸೂಫ್‍ರನ್ನ ಗೌರಿ ಮದುವೆಯಾಗ್ತಾರೆ. ಭಾರತೀಯರಿಗೆ ಸ್ಯಾನ್‍ಫ್ರಾನ್ಸಿಸ್ಕೋದ ಖಾದ್ಯಗಳನ್ನ ಪರಿಚಯಿಸೋ ಮಹದಾಸೆ ಹೊಂದಿದ್ದ ಜಯ್, ಮುಂಬೈನಲ್ಲೊಂದು ಹೋಟೆಲ್ ತೆರೆಯಲು ಮುಂದಾಗ್ತಾರೆ. ತಮ್ಮ ಜೊತೆ ಕೈಜೋಡಿಸುವಂತೆ ಪತ್ನಿ ಗೌರಿಯ ಮನವೊಲಿಸ್ತಾರೆ. ಡಿಸೆಂಬರ್ 2010ರಲ್ಲಿ ಗೌರಿ ಹಾಗೂ ಜಯ್ ಸತಿಪತಿಗಳಾದ್ರು. ಮದುವೆಗೂ ಮೂರು ವಾರಗಳ ಮುನ್ನ ಅವರ ಕನಸಿನ ರೆಸ್ಟೋರೆಂಟ್ ದಿ ಹೋಟೆಲ್ ಕೂಡ ಆರಂಭವಾಯ್ತು.

ಪರಿಶುದ್ಧ ಹಾಗೂ ಉತ್ತಮ ಗುಣಮಟ್ಟದ ಆಹಾರವನ್ನ ಗ್ರಾಹಕರಿಗೆ ಪೂರೈಸುವುದು ದಿ ಟೇಬಲ್ ಹೋಟೆಲ್‍ನ ಪ್ರಮುಖ ಆದ್ಯತೆ. ಅದರ ಜೊತೆಗೆ ರೆಸ್ಟೋರೆಂಟ್‍ಗೆ ಬರುವ ಗ್ರಾಹಕರ ಮಧ್ಯೆ ಸ್ನೇಹದ ಬಾಂಧವ್ಯ ಬೆಸೆಯುವ ವ್ಯವಸ್ಥೆ ಕೂಡ ಅಲ್ಲಿತ್ತು ಅನ್ನೋದೇ ವಿಶೇಷ. ಸದ್ಯ ಮುಂಬೈನ ಪ್ರತಿಷ್ಠಿತ ಹೋಟೆಲ್‍ಗಳ ಪೈಕಿ ದಿ ಟೇಬಲ್ ಕೂಡ ಒಂದು. ಅಲ್ಲಿನ ರುಚಿಕರ ತಿನಿಸಿಗೆ ಮಾರುಹೋಗಿರುವ ಗ್ರಾಹಕರು ಸದಾ ಕಿಕ್ಕಿರಿದು ತುಂಬಿರುತ್ತಾರೆ. 10 ವರ್ಷಗಳ ಹಿಂದೆ ಅಲಿಬಾಗ್‍ನಲ್ಲಿ ಗೌರಿ ದೇವಿದಯಾಳ್ ಒಂದು ಎಕರೆ ಜಮೀನು ಕೊಂಡುಕೊಂಡಿದ್ರು. ಪಾಳು ಬಿದ್ದಿದ್ದ ಆ ಭೂಮಿಯಲ್ಲಿ ಪಾಲಕ್ ಸೊಪ್ಪು ಹೇರಳವಾಗಿ ಬೆಳೆದಿತ್ತು. ಅದನ್ನ ನೋಡುತ್ತಿದ್ದಂತೆ ಗೌರಿ ಅವರ ಮನಸ್ಸಿನಲ್ಲಿ ಕೃಷಿ ಮಾಡಬೇಕೆಂಬ ಕನಸು ಕೂಡ ಚಿಗುರೊಡೆದಿತ್ತು, ಸದ್ಯ ಅಲ್ಲಿ ಪಾಲಕ್, ಬೀಟ್‍ರೂಟ್, ಕ್ಯಾರೆಟ್, ಮೂಲಂಗಿ ಸೇರಿದಂತೆ ವಿಧವಿಧದ ಸೊಪ್ಪು ತರಕಾರಿಗಳನ್ನ ಬೆಳೆಯಲಾಗ್ತಿದೆ. ವಿಶೇಷ ಅಂದ್ರೆ ಈ ತರಕಾರಿಗಳಿಂದ್ಲೇ ಗೌರಿ ಅವರ ದಿ ಟೇಬಲ್ ಹೋಟೆಲ್‍ನಲ್ಲಿ ಪಕ್ವಾನ್ನ ಸಿದ್ಧವಾಗುತ್ತೆ.

ಫೋಟೋ ಕ್ರೆಡಿಟ್: ಎಲ್ಲೆ ಇಂಡಿಯಾ, ಪ್ರಭಾತ್ ಶೆಟ್ಟಿ
ಫೋಟೋ ಕ್ರೆಡಿಟ್: ಎಲ್ಲೆ ಇಂಡಿಯಾ, ಪ್ರಭಾತ್ ಶೆಟ್ಟಿ

ಚಾರ್ಟರ್ಡ್ ಅಕೌಂಟಂಟ್‍ನಂಥ ಉನ್ನತ ಹುದ್ದೆಯನ್ನೇ ಬಿಟ್ಟು ಬ್ಯುಸಿನೆಸ್ ಆರಂಭಿಸಿದ ಬಗ್ಗೆ ಗೌರಿ ಅವರಿಗೆ ಬೇಸರವಿಲ್ಲ. ಸ್ವಂತ ಉದ್ಯಮದಲ್ಲಿ ಅಪಾರ ಸ್ವಾತಂತ್ರ್ಯವಿರುತ್ತದೆ ಅಂತಾ ಗೌರಿ ಖುಷಿಯಿಂದ ಹೇಳಿಕೊಳ್ತಾರೆ. ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾಗಲೂ ಗೌರಿ ದೇವಿದಯಾಳ್ ತಮ್ಮ ಕೆಲಸದಲ್ಲಿ ನಿಪುಣರಾಗಿದ್ದರು. ಈಗ ಹೋಟೆಲ್ ಉದ್ಯಮಿಯಾಗಿಯೂ ಯಶಸ್ಸನ್ನು ಗಳಿಸಿದ್ದಾರೆ. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬಂತೆ ಹೊಸ ಬದುಕನ್ನೇ ಕಟ್ಟಿಕೊಂಡಿದ್ದಾರೆ. ಲಂಡನ್‍ನಲ್ಲಿ ಒಳ್ಳೆ ಸಂಬಳ, ಉನ್ನತ ಹುದ್ದೆಯನ್ನು ತೊರೆದು ಮುಂಬೈಗೆ ಮರಳುತ್ತೇನೆ ಎಂದ ಗೌರಿ ಅವರ ನಿರ್ಧಾರ ಕೇಳಿ ಕುಟುಂಬಸ್ಥರೆಲ್ಲ ಆತಂಕಗೊಂಡಿದ್ದರು. ಆದ್ರೀಗ ಮಗಳ ಸಾಧನೆ ನೋಡಿ ಹೆಮ್ಮೆಪಡುತ್ತಿದ್ದಾರೆ. ಗೌರಿ ಮೊದಲಿನಿಂದ್ಲೂ ಸೃಜನಾತ್ಮಕ ಜನರ ಮಧ್ಯೆಯೇ ಬೆಳೆದವರು. ತಂದೆ ಉದ್ಯಮಿಯಾದ್ರೆ ತಾಯಿ ಹೆಸರಾಂತ ಕಲಾವಿದೆ. ಓರ್ವ ಸಹೋದರಿ ಗ್ರಾಫಿಕ್ ಡಿಸೈನರ್, ಇನ್ನೊಬ್ಬಳು ಲೇಖಕಿ. ಇವರ ಮಧ್ಯೆ ಗೌರಿ ಕೂಡ ತಮ್ಮ ಪ್ರತಿಭೆಯಿಂದ್ಲೇ ಗುರುತಿಸಿಕೊಂಡಿದ್ದಾರೆ.

ಸದ್ಯ ಮತ್ತೊಂದು ಜವಾಬ್ಧಾರಿ ಕೂಡ ಗೌರಿ ದೇವಿದಯಾಳ್ ಅವರ ಹೆಗಲೇರಿದೆ. ಅವರೀಗ ಪ್ರೀತಿಯ ಅಮ್ಮನೂ ಹೌದು. ಗೌರಿ ಹಾಗೂ ಜಯ್ ದಂಪತಿಗೆ 2 ವರ್ಷದ ಮಗಳಿದ್ದಾಳೆ. ಮಗಳ ಲಾಲನೆ ಪಾಲನೆ ಜೊತೆಗೆ ರೆಸ್ಟೋರೆಂಟ್‍ನ ಜವಾಬ್ಧಾರಿ ನಿಜಕ್ಕೂ ಸವಾಲಿನ ಕೆಲಸ ಅಂತಾರೆ ಗೌರಿ. ಹಾಗಂತ ಅವರೇನೂ ಅಸಹಾಯಕರಾಗಿ ಕೈಕಟ್ಟಿ ಕುಳಿತಿಲ್ಲ. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸ್ವಂತ ಉದ್ಯಮ ಆಗಿರೋದ್ರಿಂದ ಅನಿವಾರ್ಯವಾದಲ್ಲಿ ಮನೆಯಿಂದಲೇ ಕೆಲಸ ಮಾಡುವಂಥ ಅವಕಾಶವೂ ಗೌರಿ ಅವರಿಗಿದೆ. ಪತಿಯೂ ಜೊತೆಯಾಗಿರೋದ್ರಿಂದ ಯಾವುದೂ ಕಷ್ಟವಲ್ಲ ಅನ್ನೋದು ಗೌರಿ ದೇವಿದಯಾಳ್ ಅವರ ಬಿಚ್ಚುನುಡಿ. ವಿದೇಶದಲ್ಲಿ ಕೈತುಂಬ ಸಂಬಳ ಒಳ್ಳೆ ಕೆಲಸವಿದ್ರೂ ಅದಕ್ಕೆಲ್ಲ ಗುಡ್‍ಬೈ ಹೇಳಿ ಅಂದುಕೊಂಡಿದ್ದನ್ನ ಸಾಧಿಸಿದ ಗೌರಿ ಅವರ ಬದುಕಿನ ಯಶೋಗಾಥೆ ನಿಜಕ್ಕೂ ರೋಚಕ. ಸವಾಲನ್ನು ಸ್ವೀಕರಿಸಿ ಎದುರಿಸುವ ಛಾತಿಯುಳ್ಳವರಿಗೆಲ್ಲ ಗೌರಿ ಅವರೇ ಪ್ರೇರಣೆಯಾಗ್ತಾರೆ. ನಮ್ಮ ಪಾಲಿಗೆ ಇಷ್ಟೇ ಎಂದು ಹಣೆಬರಹವನ್ನು ಹಳಿಯುವುದನ್ನು ಬಿಟ್ಟು ಹೊಸ ಕನಸು ಕಾಣುತ್ತ ಅದನ್ನು ಸಾಕಾರಗೊಳಿಸು ಪ್ರಯತ್ನಿಸಿ ಅನ್ನೋ ಸಂದೇಶವನ್ನು ಗೌರಿ ಸಾರಿ ಹೇಳಿದ್ದಾರೆ.

Related Stories

Stories by YourStory Kannada