23ನೇ ವಯಸ್ಸಿನಲ್ಲೇ 50 ಕೋಟಿ ರೂ.ಮೌಲ್ಯದ ಕಂಪನಿಗೆ ಬಾಸ್.. ! ಇದು ಅಂಗವೈಕಲ್ಯವನ್ನೇ ಮೀರಿ ನಿಂತ ಎದೆಗಾರಿಕೆ..!

ಟೀಮ್​​ ವೈ.ಎಸ್​. ಕನ್ನಡ

23ನೇ ವಯಸ್ಸಿನಲ್ಲೇ 50 ಕೋಟಿ ರೂ.ಮೌಲ್ಯದ ಕಂಪನಿಗೆ ಬಾಸ್.. ! ಇದು ಅಂಗವೈಕಲ್ಯವನ್ನೇ ಮೀರಿ ನಿಂತ ಎದೆಗಾರಿಕೆ..!

Thursday December 24, 2015,

4 min Read

ಅವನು ಹುಟ್ಟಿದಾಗ ನೆರೆಹೊರೆಯವರು, ಗ್ರಾಮಸ್ಥರು ಅನುಕಂಪ ವ್ಯಕ್ತಪಡಿಸಿದ್ದರು. ಆ ಮಗು ಜೀವನಪೂರ್ತಿ ನರಳುತ್ತಾ ಬದುಕುವುದಕ್ಕಿಂತ ಒಂದು ನಿರ್ಧಾರಕ್ಕೆ ಬನ್ನಿ ಅಂತ ಹೆತ್ತವರಿಗೆ ಸಲಹೆ ನೀಡಿದ್ದರು. ಹುಟ್ಟು ಕುರುಡಾಗಿದ್ದ ಆ ಮಗು ಯೂಸ್ ಲೆಸ್, ಬದುಕನ್ನೇ ನೋಡಲಾಗದವನು ಬದುಕಿರುವುದೇ ವ್ಯರ್ಥ ಅಂತ ಸರ್ಟಿಫಿಕೇಟ್ ನೀಡಿದ್ದರು. ಆದ್ರೆ 23 ವರ್ಷಗಳ ನಂತ್ರ ಆ ಹುಡುಗ ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದಾನೆ. ಕೊರತೆಗಳನ್ನೆಲ್ಲಾ ಮೀರಿ ನಿಂತಿರುವ ಆತ “ ಜಗತ್ತು ಅವತ್ತು ನನ್ನತ್ತ ನೋಡಿ ನೀನು ಏನನ್ನೂ ಮಾಡಲು ಸಾಧ್ಯವಿಲ್ಲ ಅಂದಿತ್ತು. ಆದ್ರೆ ಇವತ್ತು, ನಾನು ಏನು ಬೇಕಾದರೂ ಮಾಡುತ್ತೇನೆ ಅಂತ ಆತ್ಮವಿಶ್ವಾಸದಿಂದ ತಿರುಗಿ ಜಗತ್ತಿಗೆ ಹೇಳಿದ್ದಾನೆ. ” ಇದು ಹೈದ್ರಾಬಾದ್ ಮೂಲದ ಬೊಲ್ಲಾಂಟ್ ಇಂಡಸ್ಟ್ರೀಸ್ ನ ಸಿಇಓ ಶ್ರೀಕಾಂತ್ ಬೊಲ್ಲಾ ಅವರ ಯಶೋಗಾಥೆ. ಅವಿದ್ಯಾವಂತರು, ವಿಕಲಚೇತನರಂತಹ ನೌಕರರನ್ನ ಇಟ್ಟುಕೊಂಡು ಪರಿಸರ ಸ್ನೇಹಿ ಹಾಗೂ ಮರುಬಳಕೆ ಮಾಡುವ ಪ್ಯಾಕಿಂಗ್ ಸೊಲ್ಯುಷನ್ ಗಳನ್ನ ಉತ್ಪಾದಿಸುವ ಇಂಡಸ್ಟ್ರೀಸನ್ನ ಶುರುಮಾಡಿರುವ ಶ್ರೀಕಾಂತ್, ಇವತ್ತು ಅದರಿಂದಲೇ 50 ಕೋಟಿ ರೂಪಾಯಿಯಷ್ಟು ಆದಾಯಗಳಿಸಿದ್ದಾರೆ.

image


ಶ್ರೀಕಾಂತ್ ತಮ್ಮನ್ನು ತಾವೇ ಅತ್ಯಂತ ಅದೃಷ್ಟಶಾಲಿ ಅಂತ ಹೊಗಳಿಕೊಳ್ಳುತ್ತಾರೆ. ಆದ್ರೆ ಅದು ಅವರು ಮಿಲೇನಿಯರ್ ಎಂಬುವ ಕಾರಣಕ್ಕಲ್ಲ. ಬದಲಾಗಿ ಆತನ ಅವಿದ್ಯಾವಂತ ಅಪ್ಪ ಅಮ್ಮ ತಾವು ವರ್ಷಕ್ಕೆ ಗಳಿಸುತ್ತಿದ್ದ 20 ಸಾವಿರ ರೂಪಾಯಿ ಆದಾಯದಲ್ಲೇ ತನ್ನನ್ನ ನೋಡುಕೊಂಡ ರೀತಿಗೆ. ತಾನೊಬ್ಬ ಹುಟ್ಟು ಕುರುಡನಾಗಿದ್ರೂ ಪ್ರೀತಿ ಕಾಳಾಜಿಯಲ್ಲಿ ಕಿಂಚಿತ್ತು ವ್ಯತ್ಯಾಸ ಮಾಡದ ಹೆತ್ತವರೇ ತನ್ನ ಪಾಲಿನ ಅತ್ಯಂತ ಸಿರಿವಂತರು ಅಂತ ಹೇಳಿಕೊಳ್ಳುತ್ತಾರೆ.

ಎಲೆಮರೆಕಾಯಿಯ ಸಕ್ಸಸ್ ಸ್ಟೋರಿ..

ಶ್ರೀಕಾಂತ್ ಅವರ ಕಥೆಯನ್ನ ಕೇಳಿದ್ರೆ ಎಂಥವರೂ ಹೊಸ ಭರವಸೆಗಳನ್ನ ತುಂಬಿಕೊಂಡು ಸ್ಫೂರ್ತಿ ಪಡೆಯುವುದರಲ್ಲಿ ಅನುಮಾನವಿಲ್ಲ. ಅಷ್ಟೇ ಅಲ್ಲ, ನಾನೂ ಕೂಡ ಏನನ್ನಾದ್ರೂ ಸಾಧಿಸಬಹುದು ಅಂತ ನಿಮ್ಮ ಹೃದಯ ಹೇಳಿದ್ರೂ ಅಚ್ಚರಿಯಿಲ್ಲ. ಅಲ್ಲದೆ ಪ್ರತಿಯೊಬ್ಬರ ಮುಖದಲ್ಲೂ ನಾನೂ ಕನಸು ಕಾಣಬೇಕು, ಕಷ್ಟ ಪಟ್ಟು ಕೆಲಸ ಮಾಡಿ ಸಮಾಜದ ಕಟ್ಟುಪಾಡುಗಳನ್ನ ಮೀರಿ ಬೆಳೆಯುವ ಮನಸ್ಸು ಮೂಡುತ್ತದೆ. ಹುಟ್ಟುವಾಗ ಕಣ್ತುಂಬ ಕನಸುಗಳನ್ನ ಹೊತ್ತು ಬರುವ ಬದಲು ಕತ್ತಲನ್ನ ತುಂಬಿಕೊಂಡು ಬಂದಿದ್ದ ಶ್ರೀಕಾಂತ್ ರನ್ನ ಸಾಮಾಜದ ಒಂದು ಭಾಗ ಅಂತಷ್ಟೇ ಪರಿಗಣಿಸಲಾಗಿತ್ತು. ಶಾಲೆಯಲ್ಲಿ ಹಿಂದಿನ ಬೆಂಚ್ ಗೆ ತಳ್ಳಲ್ಪಟ್ಟಿದ್ದ ಇವರನ್ನ ಆಟ, ಪಾಠಗಳಿಂದ ದೂರ ಇಡಲಾಗಿತ್ತು. ಮಾಮೂಲಿ ಮಕ್ಕಳಂತೆ ಕಲಿಯಲು ಅವಕಾಶವಿಲ್ಲದ ಈತ 10ನೇ ತರಗತಿಯಲ್ಲಿ ಸೈನ್ಸ್ ಸಬ್ಜೆಕ್ಟನ್ನ ಆಯ್ಕೆ ಮಾಡಿಕೊಂಡರೂ ದೃಷ್ಟಿ ಸಮಸ್ಯೆ ಇದ್ದಿದ್ರಿಂದ ನಿರಾಕರಿಸಲಾಗಿತ್ತು. ಆದ್ರೆ 18ನೇ ವರ್ಷಕ್ಕೆ ಶ್ರೀಕಾಂತ್ ಬೊಲ್ಲಾ ಅದ್ಭುತವಾದುದನ್ನ ಸಾಧಿಸಿದ್ರು. ಅಮೆರಿಕಾದ ಪ್ರತಿಷ್ಠಿತ ಮಸ್ಕ್ಯೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಎಂಐಟಿ ) ಗೆ ಪ್ರವೇಶ ಪಡೆಯುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ್ರು. ಯಾಕಂದ್ರೆ ಈ ಸಂಸ್ಥೆಗೆ ಸೇರಿದ ಮೊಟ್ಟ ಮೊದಲ ಬ್ಲೈಂಡ್ ಸ್ಟುಡೆಂಟ್ ಶ್ರೀಕಾಂತ್ ಬೊಲ್ಲಾ.

ಅಂದು ಹೊಸ ಕನಸುಗಳೊಂದಿಗೆ ಎಂಐಟಿಗೆ ಸೇರಿಕೊಂಡ ಶ್ರೀಕಾಂತ್ ಬಳಿಕ ಅದ್ಭುತಗಳನ್ನ ಸಾಧಿಸಿದ್ರು. ಪರಿಸರ ಸ್ನೇಹಿ ಹಾಗೂ ಮರುಬಳಕೆ ಮಾಡುವ ಪ್ಯಾಕಿಂಗ್ ಸೊಲ್ಯುಷನ್ ಉತ್ಪಾದಕ ಘಟಕ ಸ್ಥಾಪಿಸಿದ್ರು. ಇವತ್ತು ಶ್ರೀಕಾಂತ್ ನಾಲ್ಕು ಜಾಗದಲ್ಲಿ ಪ್ಲಾಂಟ್ ಗಳನ್ನ ಹೊಂದಿದ್ದಾರೆ. ಕರ್ನಾಟಕದ ಹುಬ್ಬಳ್ಳಿ, ತೆಲಂಗಾಣದ ನಿಜಾಮಾಬಾದ್, ಹಾಗೂ ಹೈದ್ರಾಬಾದ್ ನಲ್ಲಿ ಎರಡು ಘಟಕಗಳನ್ನ ಹೊಂದಿದ್ದಾರೆ. ಇದೀಗ ಆಂಧ್ರಪ್ರದೇಶ ಹಾಗೂ ಚೆನ್ನೈಗೆ ಸಮೀಪದಲ್ಲಿರುವ ಶ್ರೀಸಿಟಿನಲ್ಲಿ ಮತ್ತೊಂದು ಘಟಕ ಶುರುಮಾಡುವ ಲೆಕ್ಕಾಚಾರದಲ್ಲಿದ್ದಾರೆ. ವಿಶೇಷ ಅಂದ್ರೆ ಈ ಘಟಕ ಸೋಲಾರ್ ನಿಂದ ನಿರ್ವಹಿಸಲ್ಪಡಲಿದೆ. ಶ್ರೀಕಾಂತ್ ಇದೀಗ ಹಲವು ಹೊಸ ಬ್ಯುಸಿನೆಸ್ ಪರ್ಸನ್ ಗಳಿಗೆ ಮೆಂಟರ್ ಆಗಿ ಬೆಳೆದಿದ್ದಾರೆ ಅನ್ನೋದು ವಿಶೇಷ. “ ಹೈದ್ರಾಬಾದ್ ನಲ್ಲಿ ತಗಡಿನ ಶೀಟ್ ನ ಅಡಿಯಲ್ಲಿ ಒಂದು ಚಿಕ್ಕ ಉತ್ಪಾದಕ ಘಟಕ ಶುರುವಾಗಿತ್ತು. ಕೇವಲ 8 ಮಂದಿ ನೌಕರರು ಅಲ್ಲಿದ್ದ ಮೂರು ಮಷೀನ್ ಗಳಲ್ಲಿ ಕೆಲಸ ಮಾಡುತ್ತಿದ್ರು. ಆದ್ರೆ ಇವಿಷ್ಟರಿಂದಲೇ ಮಾರ್ಕೆಟ್ ತಲುಪಲು ಸಾಧ್ಯನಾ ಅಂತ ನಾನು ಹಲವು ಬಾರಿ ಯೋಚಿಸಿದ್ದೆ. ಆದ್ರೆ ಅವರಿಗಿದ್ದ ಬ್ಯುಸಿನೆಸ್ ಬಗೆಗಿನ ಮಾಹಿತಿ ಹಾಗೂ ಟೆಕ್ನಾಲಜಿ ಬಗ್ಗೆ ಇದ್ದ ಜ್ಞಾನ ನನಗೆ ಅಚ್ಚರಿ ಮೂಡಿಸಿತ್ತು ” ಅಂತ ಶ್ರೀಕಾಂತ್ ಅವರನ್ನ ಹತ್ತಿರದಿಂದ ಕಂಡಿರುವ ರವಿ ವಿವರಿಸುತ್ತಾರೆ. ವಿಶೇಷ ಅಂದ್ರೆ ಕೇವಲ ಹೈದ್ರಾಬಾದ್ ಘಟಕವೊಂದರಲ್ಲೇ ಶ್ರೀಕಾಂತ್ ಗಳಿಸಿರುವ ಲಾಭ 13 ಕೋಟಿ ರೂಪಾಯಿ.

ಹುಟ್ಟಿನಿಂದಲೇ ಕಾಡಿದ್ದ ಒಂಟಿತನ..

“ ಹುಟ್ಟಿನಿಂದಲೇ ದೇಹಚೈತನ್ಯ ಕಳೆದುಕೊಂಡವರಿಗೆ ಒಂಟಿತನ ಕಾಡುವುದು ಸಹಜ. ಒಬ್ಬರ ಬದುಕಿನುದ್ದಕ್ಕೂ ಸಂಗಾತಿಯನ್ನ ನಿರೀಕ್ಷಿಸುವುದು ಅಸಾಧ್ಯ, ಒಂದು ವೇಳೆ ಇದ್ದರೂ ಸಕ್ಸಸ್ ರೀಚ್ ಆಗುವ ತನಕ ನಿರೀಕ್ಷಿಸುವುದು ಸಾಧ್ಯವಿಲ್ಲ. ಶ್ರೀಮಂತಿಕೆ ಕೇವಲ ಹಣದಿಂದ ಬರುವುದಿಲ್ಲ, ಅದು ಸಂತೋಷದಿಂದ ಬರುತ್ತೆ ” ಅಂತ ಹೇಳುವ ಶ್ರೀಕಾಂತ್ ತಮ್ಮ ಹಳೆಯ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ. ಬಾಲ್ಯದಲ್ಲಿ ರೈತನಾಗಿದ್ದ ಶ್ರೀಕಾಂತ್ ತಂದೆ, ಇವರನ್ನ ಕೃಷಿ ಭೂಮಿಗೆ ಕರೆದುಕೊಂಡು ಹೋಗುತ್ತಿದ್ರು. ಆದ್ರೆ ಆ ಬದುಕು ಎಷ್ಟು ಕಷ್ಟ ಅಂತ ಅರಿತ ಇವರ ತಂದೆ ತನ್ನ ಮಗನನ್ನ ಓದಿಸಬೇಕು ಅಂತ ಪಣತೊಟ್ರು. ಆದ್ರೆ ಈತ ಓದುವುದು ಅಷ್ಟು ಸುಲಭವಾಗಿರಲಿಲ್ಲ. ಸ್ಪಷ್ಟವಾಗಿ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವನನ್ನ ಹೈದ್ರಾಬಾದ್ ನಲ್ಲಿರುವ ಸ್ಪೆಷಲ್ ಸ್ಕೂಲ್ ಗೆ ಸೇರಿಸಲಾಯ್ತು. ಅಲ್ಲಿ ಓದಿನ ಜೊತೆಗೆ ಚೆಸ್ ಹಾಗೂ ಕ್ರಿಕೆಟ್ ನಲ್ಲಿ ಶ್ರೀಕಾಂತ್ ತೊಡಗಿಸಿಕೊಳ್ಳುತ್ತಿದ್ರು. ಹೀಗೆ ಶಾಲೆಯಲ್ಲಿ ಟಾಪರ್ ಆಗಿ ಗುರುತಿಸಿಕೊಂಡಿದ್ದ ಶ್ರೀಕಾಂತ್ ದಿವಂಗತ ಮಾಜಿ ರಾಷ್ಟ್ರಪತಿ ಎ ಪಿಜೆ ಅಬ್ದುಲ್ ಕಲಾಂ ಅವರ ಕನಸಿನ ಲೀಡ್ ಇಂಡಿಯಾ ಪ್ರಾಜೆಕ್ಟ್ ನಲ್ಲೂ ಕೆಲಸ ಮಾಡಿದ್ರು. ತನ್ನ ದೃಷ್ಟಿಹೀನತೆಗೆ ಹಾಗೂ ತನ್ನನ್ನ ಕಡೆಗಣಿಸಿದವರಿಗೆ ಸೂಕ್ತ ಉತ್ತರ ನೀಡಬೇಕು ಅಂತ ಅವರು ಕಾದಿದ್ರು. ಹೀಗಾಗಿ ಅವರಿಗೆ ಹತ್ತನೇ ಕ್ಲಾಸ್ ನಲ್ಲಿ ಸೈನ್ಸ್ ಗೆ ಪ್ರವೇಶ ನಿರಾಕರಿಸಿದ್ದನ್ನ ಮರೆತಿರಲಿಲ್ಲ. ಆಂಧ್ರಪ್ರದೇಶದ ಸ್ಕೂಲ್ ನಲ್ಲಿ ಸ್ಟೇಟ್ ಬೋರ್ಡ್ ಎಕ್ಸಾಮ್ ನಲ್ಲಿ ಶೇಕಡಾ 90ರಷ್ಟು ಅಂಕ ಪಡೆದು ಸರಿಯಾಗೇ ಉತ್ತರಕೊಟ್ರು.

image


ಕೈ ಹಿಡಿದ ಅದೃಷ್ಟ ಹಾಗೂ ಮನೋಸ್ಥೈರ್ಯ..

ಕೆಲವರು ಹಠ ಕಟ್ಟಿ ಸ್ಪರ್ಧೆಗಿಳಿದಾಗ ಕೆಲವೊಮ್ಮೆ ಅದೃಷ್ಟವೂ ಕೈಕೊಡುತ್ತವೆ. ಹಾಗೇ ಶ್ರೀಕಾಂತ್ ಗೂ ಅದೃಷದ ಸಾಥ್ ಸಿಗಲಿಲ್ಲ. ಐಐಟಿ ಹಾಗೂ ಅತ್ಯುನ್ನತ ಎಂಜಿನಿಯರಿಂಗ್ ಕಾಲೇಜ್ ಗಳಲ್ಲಿ ಒಂದಾದ ಬಿಐಟಿಎಸ್ ಪಿಲಿನಿ ಎಕ್ಸಾಮ್ ಗೆ ಹಾಲ್ ಟಿಕೆಟ್ ಸಿಗಲಿಲ್ಲ. ನಂತ್ರ ಸಿಕ್ಕಿದ್ರೂ ನಾನೊಬ್ಬ ಬ್ಲೈಂಡ್ ಅನ್ನೋ ಕಾರಣಕ್ಕೆ ಪರೀಕ್ಷೆ ನಿರಾಕರಿಸಲಾಯ್ತು. ಹೀಗಾಗಿ ಐಐಟಿಗೇ ನಾನು ಬೇಡವೆಂದಾದ ಮೇಲೆ ಐಐಟಿನೂ ತನಗೆ ಬೇಕಾಗಿಲ್ಲ ಅಂತ ಶ್ರೀಕಾಂತ್ ನಿರ್ಧಾರಕ್ಕೆ ಬಂದ್ರು. ಆದ್ರೆ ಹಲವು ಹೋರಾಟ, ಪ್ರಯತ್ನಗಳ ಬಳಿಕ ಎಂಐಟಿಗೆ ಪ್ರವೇಶ ಪಡೆದು ಎಲ್ಲವಕ್ಕೂ ಉತ್ತರ ನೀಡಿದ್ರು. “ ಭಾರತದಲ್ಲಿ ವಿಕಲಚೇತನ ಮಕ್ಕಳನ್ನ ಹಿಂದಕ್ಕೆ ಎಳೆಯುತ್ತಾರೆ. ಭಾರತದ ಜನಸಂಖ್ಯೆಲ್ಲಿ ಶೇಕಡಾ 10ರಷ್ಟು ಜನ ವಿಕಲಚೇತನರಿದ್ದು ಅವರು ಅನುತ್ಪಾದಕರು ಅಂತ ಭಾವಿಸಲಾಗಿದೆ. ಆದ್ರೆ ಅದನ್ನ ಬದಲಾಯಿಸಲು ಸಾಧ್ಯವಿದೆ ” ಅನ್ನೋದು ಶ್ರೀಕಾಂತ್ ಬೊಲ್ಲಾ ಅವರ ನಂಬಿಕೆ. ಒಬ್ಬರ ಮನಸ್ಸಿಗೆ ಹತ್ತಿರವಾಗಿ ಮಾನಸಿಕವಾಗಿ ಶ್ರೀಮಂತರಾಗಿ, ಗೆಳೆತನ ಬೆಳೆಸುತ್ತಾ ಒಂಟಿತನ ನೀಗಿಸಿಕೊಳ್ಳಿ ಕೊನೆಯಾಗಿ ಒಳ್ಳೆತನಕ್ಕೆ ಬೆಲೆ ಕೊಡಿ ಅನ್ನುವುದು ಶ್ರೀಕಾಂತ್ ಬೊಲ್ಲರವರ ಮಾತು.

ಲೇಖಕರು - ದೀಪ್ತಿ ನಾಯರ್

ಅನುವಾದ – ಬಿ ಆರ್ ಪಿ, ಉಜಿರೆ