ಎಲ್ಲರಿಗೂ ಮಾದರಿ ಅಕ್ಕೈ ಪದ್ಮಶಾಲಿ

ವಿಶಾಂತ್​​

0

ಸಾಧನೆಗೆ ಲಿಂಗತಾರತಮ್ಯವಿಲ್ಲ. ಗಂಡಾಗಿ ಹುಟ್ಟಿ, ಹೆಣ್ಣಾದವಳು ಈಕೆ. ಕುಟುಂಬ ಹಾಗೂ ಸಮಾಜದಿಂದ ನಾನಾ ನೋವುನ್ನ ಅನುಭವಿಸಿದ್ರೂ, ಅವೆಲ್ಲವನ್ನೂ ಮೆಟ್ಟಿ ರಾಷ್ಟ್ರಪತಿ ಭವನದ ಮೆಟ್ಟಿಲನ್ನು ತುಳಿದ ಗಟ್ಟಿಗಿತ್ತಿ. ಅಸಹಾಯಕರ ಏಳಿಗೆಗೆ ಕಂಕಣ ಬದ್ಧಳಾಗಿರುವ ಇವರ ಉತ್ಸಾಹಕ್ಕೆ ಹ್ಯಾಟ್ಸ್​​​ಆಫ್ ಹೇಳಲೇಬೇಕು.

ರಸ್ತೆಯ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಮಂಗಳಮುಖಿಯರು ಹಣಕ್ಕಾಗಿ ಕಾಡುವುದು ಸಾಮಾನ್ಯ. ಅವರನ್ನು ಕಂಡರೆ ಮುಖ ಸಿಂಡರಿಸುವ ಜನರನ್ನು ಓಲೈಸುತ್ತಲೇ ತುತ್ತಿನ ಚೀಲ ತುಂಬಿಸಬೇಕು. ಇಂತಹ ಕಟು ಚಿತ್ರಣದ ನಡುವೆಯೇ ಲೈಂಗಿಕ ಅಲ್ಪಸಂಖ್ಯಾತಳಾಗಿ ಹುಟ್ಟಿದ್ದು, ಶಾಪವಲ್ಲ, ಅದನ್ನು ವರವಾಗಿ ಪರಿವರ್ತಿಸಿಕೊಂಡ ಪದ್ಮಶಾಲಿ ಅಕ್ಕೈ ನಮ್ಮೆಲ್ಲರ ನಡುವೆ ಭಿನ್ನವಾಗಿ ನಿಲ್ಲುತ್ತಾರೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ತೃತೀಯ ಲಿಂಗಿಯಾಗಿ ರಾಜ್ಯೋತ್ಸವ ಪಡೆದ ಹೆಗ್ಗಳಿಕೆ ಇವರದು. ಇವರ ಸಾಧನೆಗೆ ಮೆಚ್ಚಿದ ಸರ್ಕಾರ 2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯ ಕಿರೀಟವನ್ನು ತೊಡಿಸಿದೆ.

ಅಕ್ಕೈ ಪದ್ಮಶಾಲಿ ಬಾಲ್ಯ ಹೇಗಿತ್ತು?

8-16ರ ವಯಸ್ಸಿನಲ್ಲಿ ದೈಹಿಕವಾಗಿ ಹುಡುಗನಾಗಿದ್ದ ಅಕ್ಕೈ ಹುಡುಗಿಯಾಗಿ ತಮ್ಮ ಗುರುತನ್ನು ಮುಚ್ಚುವುದು ಕಷ್ಟವಾಗಿತ್ತು. ನಾಲ್ಕು ಗೋಡೆ ಮಧ್ಯೆ ತಾಯಿಯ ಸೀರೆ, ಸೋದರಿಯ ಸಲ್ವಾರ್ ಧರಿಸುತ್ತಿದ್ದ ಅವರಿಗೆ ಮಹಿಳೆಯಾಗಿ ಹೊರಗೆ ಕಾಲಿರಿಸುವುದು ಯಾವಾಗ? ಎಂಬ ಪ್ರಶ್ನೆ ಕಾಡುತ್ತಿತ್ತು. ಇವರ ಈ ನಡವಳಿಕೆಯನ್ನು ಮನೆಯವರು ತಪ್ಪಾಗಿ ಗ್ರಹಿಸಿದ್ರು. ಮೈಮೇಲೆ ದೆವ್ವ ಬಂದಿದೆ ಅಂತ, ದೇವಸ್ಥಾನ ಮಂತ್ರವಾದಿ ಇತ್ಯಾದಿ ಪೂಜೆಗಳಿಗೆ ಮೊರೆ ಹೋಗಿದ್ರು. ಪದ್ಮ ತನ್ನ ತಾಯಿಗೆ ತನ್ನಲ್ಲೇ ಹೀಗೆ ಒಂದು ಮಾನಸಿಕ ಸ್ಥಿತಿ ಇದೆ ಎಂದು ಹೇಳಿದ್ರೂ ಒಪ್ತಿರಲಿಲ್ಲ. ಹುಡುಗಿಯರ ಜೊತೆ ಆಟವಾಡಿದ್ದಕ್ಕೆ ತಂದೆ, ಕಾಲಿನ ಮೇಲೆ ಬಿಸಿ ನೀರು ಸುರಿದಿದ್ರು. ಹುಡುಗರೊಂದಿಗೆ ಕ್ರಿಕೆಟ್, ಗಿಲ್ಲಿದಾಂಡು ಆಡು ಅಂತ ಹೇಳುತ್ತಿದ್ದರೂ, ಹುಡುಗರೊಂದಿಗೆ ಆಟವಾಡುವ ಮನಸ್ಸಾಗ್ತಿರಲಿಲ್ಲ.

ಈ ನಡವಳಿಕೆಯಿಂದ ಮನೆಯವರು 3 ತಿಂಗಳು ಮನೆಯಲ್ಲೇ ಕೂಡಿ ಹಾಕಿದ್ರು. ಶಾಲೆಗೂ ಕಳಿಸದೆ, ಯಾರೊಂದಿಗೂ ಬೆರೆಯಲು ಅವಕಾಶ ಕೊಟ್ಟಿರಲಿಲ್ಲ. 15ನೇ ವಯಸ್ಸಿಗೆ ಅಕ್ಕೈ, ತನ್ನ ಸೋದರನಿಗೆ ನಾನು ಹುಡುಗನಲ್ಲ ಹುಡುಗಿ ಎಂದಾಗ ಹುಚ್ಚು ಹಿಡಿದಿದೆ, ನಿಮ್ಹಾನ್ಸ್​​​ಗೆ ಸೇರಿಸಬೇಕು ಎಂದಿದ್ರಂತೆ. ಸಮಾಜದ ಹೀಯಾಳಿಕೆಯಿಂದ ತಮ್ಮ ಕುಟುಂಬದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿರಲಿಲ್ಲ. ಭಾಗಿಯಾದ್ರೂ ಧ್ವನಿ ಕೇಳಿ ಹೀಯಾಳಿಸ್ತಾರೆ ಅಂತ ಮಾತನಾಡುತ್ತಿರಲಿಲ್ಲ. 10ನೇ ತರಗತಿಯಲ್ಲಿ ಗಣಿತದಲ್ಲಿ ಫೇಲಾದ್ರು. ಅವರನ್ನ 3 ವರ್ಷದ ಡಿಪ್ಲೊಮಾ ಕೋರ್ಸಿಗೆ ಸೇರಿಸಲಾಯ್ತು. ಆದ್ರೆ, ಅದಾಗಲೇ ಕುಟುಂಬ, ಸ್ನೇಹಿತರು, ಸಮಾಜದಿಂದ ಸಾಕಷ್ಟು ನೋವು ತಿಂದಿದ್ದ ಅಕ್ಕೈ ಓದಿನ ಕಡೆ ಗಮನ ಕಳೆದುಕೊಂಡಿದ್ದರು. ಹೀಗಾಗಿಯೇ ಅಲ್ಲಿ ಅವರು ಉಳಿದಿದ್ದು, ಮೂರೇ ತಿಂಗಳು.

ಕಾಲೇಜಿನಲ್ಲಿ ಪದ್ಮಾರ ಹೆಣ್ತನವನ್ನ ಒಪ್ಪಲಿಲ್ಲ. ಅಲ್ಲಿ ಸ್ನೇಹಿತರೇ ಲೈಂಗಿಕ ದೌರ್ಜನ್ಯ ನಡೆಸಿದ್ರು. ಈ ಕುರಿತು ಪ್ರಾಂಶುಪಾಲರಿಗೆ ದೂರು ನೀಡಿದಾಗ, ನೀನು ಹುಡುಗಿಯ ವರ್ತನೆ ಬಿಡು ಎಂದಿದ್ರು. ಮನೆಯಲ್ಲೂ ವಿಷಯ ಹೇಳಲಿಲ್ಲ. ಹೇಳಿದ್ರೆ, ಅವರಿಂದ ಬರುವ ಉತ್ತರ ಏನು ಅನ್ನೋದು ಅಕ್ಕೈಗೆ ಗೊತ್ತಿತ್ತು. ಹೀಗಾಗಿಯೇ ಓದನ್ನು ತೊರೆದು, ಸೆರಾಮಿಕ್ಸ್ ಒಂದರಲ್ಲಿ ಕೆಲಸಕ್ಕೆ ಸೇರಿದ್ರು ಅಕ್ಕೈ. ಅಲ್ಲೂ ಮತ್ತೆ ಲೈಂಗಿಕ ದೌರ್ಜನ್ಯ ಮುಂದುವರಿದಿತ್ತು. ಆಗ ಮುಖ್ಯವಾಹಿನಿ ಕೆಲಸಗಳಿಂದ ದೂರ ಉಳಿಯುವ ನಿರ್ಧಾರ ಮಾಡಿದ್ರು ಅಕೈ.

ಅನಿವಾರ್ಯವಾಗಿ ಲೈಂಗಿಕ ವೃತ್ತಿ ಪ್ರಾರಂಭ

ಜನರು ತನ್ನನ್ನ ಲೈಂಗಿಕ ದೃಷ್ಟಿಯಿಂದಲೇ ನೋಡುತ್ತಾರೆ. ಅದನ್ನೇ ವೃತ್ತಿಯನ್ನಾಗಿಸಿಕೊಳ್ಳುವ ನಿರ್ಧಾರಕ್ಕೆ ಬಂದ್ರು ಅಕೈ. ಒಂದು ದಿನ ಮೈಸೂರು ರಸ್ತೆಯಿಂದ ಇಂದಿರಾ ನಗರಕ್ಕೆ ಪ್ರಯಾಣಿಸುತ್ತಿರುವಾಗ ಕಾರ್ಪೊರೇಷನ್ ವೃತ್ತದ ಬಳಿ ತೃತೀಯ ಲಿಂಗಿಗಳನ್ನ ನೋಡಿದ್ರು. ಅವರನ್ನು ನೋಡಿದ್ದೇ ಸಂತಸದ ಕ್ಷಣದಲ್ಲಿ ಕಣ್ಣು ಹನಿಗೂಡಿತ್ತು, ತಕ್ಷಣ ಬಸ್ ಇಳಿದು ಅವರನ್ನ ಮಾತಾಡಿಸಿ, ನಾನು ನಿಮ್ಮಂತೆ ಆಗಬೇಕು ಅಂದ್ರು. ಬೇಡ ತೃತೀಯ ಲಿಂಗಿಗಳ ಸಮಾಜ ಸೇರಿದ್ರೆ, ಭಿಕ್ಷೆ ಬೇಡಬೇಕು, ಇಲ್ಲ ಲೈಂಗಿಕ ವೃತ್ತಿ ಮಾಡಬೇಕು. ಅದರ ಬದಲು ಓದಿ ನಿನ್ನ ಕುಟುಂಬಕ್ಕೆ ಸಹಾಯ ಮಾಡು, ನಮ್ಮಂತಾಗಿ ಸಮಾಜದ ತಾರತಮ್ಯಕ್ಕೆ ಒಳಗಾಗಬೇಡ ಅಂದ್ರು ಆ ಮಂಗಳಮುಖಿಯರು. ಆದ್ರೂ ಅದಾಗಲೇ ಸಾಕಷ್ಟು ನೋವುಂಡಿದ್ದ ಪದ್ಮ, ಅವರೊಂದಿಗೆ ಸೇರಿಕೊಂಡ್ರು. ಹೀಗೆ ಲೈಂಗಿಕ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು 4 ವರ್ಷ ಮಾಡಿದ್ದನ್ನು ನೆನೆದು ಈಗಲೂ ಕಂಬನಿ ಮಿಡಿಯುತ್ತಾರೆ.

ವೇಶ್ಯಾವೃತ್ತಿಯಲ್ಲಿ ತೊಡಗಿದ್ದರೂ, ಮನೆಯಲ್ಲಿ ಮಾತ್ರ ಕಂಪನಿಯೊಂದರಲ್ಲಿ ಆಫೀಸ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಸುತ್ತಿರುವುದಾಗಿ ಹೇಳಿದ್ದರು ಪದ್ಮ. ಲೈಂಗಿಕ ವೃತ್ತಿಯಲ್ಲಿ ಬಂದ ಹಣವನ್ನ ಪೋಷಕರಿಗೆ ನೀಡ್ತಿದ್ರು. ಇದ್ರ ಜತೆ ಬಾಡಿ ಮಸಾಜ್ ಸಹ ಮಾಡ್ತಿದ್ರು. ಈ ಎಲ್ಲಾ ಚಟುವಟಿಕೆಗಳು ಮರದ ಹಿಂದೆಯೋ ಅಥವಾ ಯಾವುದೋ ಪೊದೆಯಲ್ಲಿ ನಡೆಯುತ್ತಿತು. ಕೆಲವೊಮ್ಮೆ ಆ ಸ್ಥಳಗಳಲ್ಲಿ ಹಾವು, ಕಪ್ಪೆ, ಇರುವೆ ಇರ್ತಿತ್ತು. ಎಚ್‍ಐವಿಯಿಂದ ಸುರಕ್ಷಿತ ಲೈಂಗಿಕ ವೃತ್ತಿಯ ಅರಿವೂ ಅವರಿಗಿರಲಿಲ್ಲ. ಜೊತೆಗೆ ಲೈಂಗಿಕ ಕಾರ್ಯಕರ್ತರು ಪೊಲೀಸರು, ಸ್ಥಳೀಯ ಗೂಂಡಾಗಳಿಂದ ಕಿರುಕುಳ ಅನುಭವಿಸಬೇಕಿತ್ತು. ಇವರು ದುಡ್ಡು ನೀಡದಿದ್ದಾಗ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಗದ್ಗದಿತರಾಗ್ತಾರೆ ಅಕ್ಕೈ.

ದಾರಿ ಬದಲಾಯ್ತು, ಬದುಕು ಹಸನಾಯ್ತು

ತನ್ನ ಮನಸ್ಸಿಗೆ ವಿರುದ್ಧವಾಗಿ ವೇಶ್ಯಾವೃತ್ತಿ ಮಾಡುತ್ತಾ ಕಷ್ಟಪಟ್ಟು ಸಂಪಾದಿಸಿದ ಹಣವೂ ಕಂಡವರ ಪಾಲಾಗತೊಡಗಿದಾಗ ಅಕ್ಕೈ ಈ ವೃತ್ತಿಯನ್ನು ತೊರೆಯುವ ನಿರ್ಧಾರ ಮಾಡಿದ್ರು. ಮುಖ್ಯವಾಹಿನಿಗೆ ಬರುವಂತಹ ಕೆಲಸವನ್ನು ಹುಡುಕತೊಡಗಿದ್ರು ಅಕ್ಕೈ. ಆಗ ಅದೃಷ್ಟವೆಂಬಂತೆ ಅವರಿಗೆ ಪರಿಚಯವಾಗಿದ್ದೇ ಸಂಗಮ ಸಂಸ್ಥೆ. ಅದು ಲೈಂಗಿಕ ಅಲ್ಪಸಂಖ್ಯಾತರ ಏಳಿಗೆಗೆ ದುಡಿಯುತ್ತಿತ್ತು. ಅವರು ತೃತೀಯ ಲಿಂಗಿಗಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿದ್ರು. ಆ ಸಂಸ್ಥೆಯಲ್ಲಿ ತನ್ನಂತೆಯೇ ದೌರ್ಜನ್ಯಕ್ಕೊಳಗಾದ ನೂರಾರು ಮಂದಿ ಇರುವುದನ್ನು ನೋಡಿ, ಅಲ್ಲಿ ಕೆಲಸ ನಿರ್ವಹಿಸಿ ನಿರ್ಲಕ್ಷ್ಯಕ್ಕೊಳಗಾದ ಈ ಸಮುದಾಯಕ್ಕಾಗಿ ಕಾರ್ಯ ನಿರ್ವಹಿಸಲು ನಿರ್ಧರಿಸಿದ್ರು.

ಸಂಗಮ ಸೇರಿದಾಗ ಅಕ್ಕೈ ಅವರಿಗೆ ಇಂಗ್ಲಿಷನ್ನು ಸರಿಯಾಗಿ ಓದಲು, ಬರೆಯಲು ಬರ್ತಿರಲಿಲ್ಲ. ಅಲ್ಲಿ ಈ ಭಾಷೆಯ ಮೇಲೆ ಹಿಡಿತ ಸಿಕ್ತು. ಜನರ ಜೊತೆ ಬೆರೆಯುವುದನ್ನು ಕಲಿತರು. ಲಿಂಗ, ಲೈಂಗಿಕತೆ, ಲೈಂಗಿಕ ವೃತ್ತಿ ಬಗ್ಗೆ ಮಾತನಾಡುವಂತಾದ್ರು. 2004ರಲ್ಲಿ ಸಂಗಮದಲ್ಲಿ ಅವರು ಅರೆಕಾಲಿಕ ವೃತ್ತಿಗೆ ಸೇರಿದ್ರು. 6 ತಿಂಗಳಿನಲ್ಲಿ ಪೂರ್ಣಾವಧಿ ವೃತ್ತಿಗೆ ಬಡ್ತಿ ಪಡೆದ್ರು ಅಕ್ಕೈ. ಮೊದಲ ನಾಲ್ಕು ವರ್ಷ ತೃತೀಯ ಲಿಂಗಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಸುಶಿಕ್ಷಿತರನ್ನಾಗಿ ಮಾಡುವುದು ಅವರ ಉದ್ದೇಶವಾಗಿತ್ತು. ನಂತರ ನಾಲ್ಕು ವರ್ಷಗಳ ಕಾಲ ನ್ಯಾಯಾಂಗದೊಂದಿಗೆ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದ್ದು.

ನಂತರ, ಅಕ್ಕೈ ಅವರನ್ನ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಹಲವು ರಾಜಕೀಯ ನಾಯಕರು ಹಾಗೂ ನ್ಯಾಯಾಧೀಶರನ್ನ ಭೇಟಿಯಾಗಿದ್ರು. ಇದರ ನಡುವೆ ಕರ್ನಾಟಕ ಹೈಕೋರ್ಟ್ ಪ್ರಥಮ ಬಾರಿಗೆ ತೃತೀಯ ಲಿಂಗಿ ಅನುಗೆ ಕೆಲಸ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸ್ತಾರೆ ಅಕ್ಕೈ. ಮುಂದೆ ಕೇವಲ ತೃತೀಯ ಲಿಂಗಿಗಳಲ್ಲದೆ ಎಲ್ಲ ವರ್ಗದ ಅಸಹಾಯಕ ಜನರ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸುವುದಾಗಿ ಹೇಳ್ತಾರೆ ಅಕ್ಕೈ.

2004ರಲ್ಲಿ ಸ್ತ್ರೀತನವನ್ನ ತಿರಸ್ಕರಿಸಿದ್ದ ಅಕ್ಕೈ ಕುಟುಂಬ, 2012ರಲ್ಲಿ ಅವರ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಪ್ಪಿತು. ಹೀಗೆ ರಾಜ್ಯದಲ್ಲಿ ಕಾನೂನುಬದ್ಧವಾಗಿ ಶಸ್ತ್ರಚಿಕಿತ್ಸೆ ಮಾಡಿಕೊಂಡವರಲ್ಲಿ ಪ್ರಥಮರು ಅಕ್ಕೈ. ಇಂದು ಅಕ್ಕೈ ಕುಟುಂಬ ತೃತೀಯ ಲಿಂಗಿಗಳನ್ನು ಬೆಂಬಲಿಸುತ್ತದೆ. ಈಗ ಅಕ್ಕೈ, ವೇಣುಗೋಪಾಲ್ ಅವರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ. ಇಂತಹ ಅಕ್ಕೈ ಅವರ ಇಷ್ಟು ವರ್ಷಗಳ ಸೇವೆಯನ್ನು ಗುರುತಿಸಿ ಇದೇ ವರ್ಷ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಲೈಂಗಿಕ ಅಲ್ಪಸಂಖ್ಯಾತರು, ಸಮಾಜದಿಂದ ದೂರ ತಳ್ಳಲ್ಪಟ್ಟವರು ಎಂಬ ಹಣೆಪಟ್ಟಿ ಕಳಚಿಕೊಂಡವರು ಪದ್ಮಶಾಲಿ ಅಕ್ಕೈ. ಈಗ ಕೇವಲ ಆ ಸಮುದಾಯಕ್ಕೆ ಸೀಮಿತಗೊಳ್ಳದೆ ಇನ್ನಿತರೆ ಕ್ಷೇತ್ರಗಳಿಗೆ ವಿಸ್ತರಿಕೊಂಡಿದ್ದಾರೆ. ಆದ್ರೆ ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ಕರೆತರಲು ಇನ್ನಷ್ಟು ಜನ ಮುಂದೆ ಬರಬೇಕೆಂಬುದು ಅಕ್ಕೈ ಆಶಯ. ಅವರ ಹೋರಾಟಕ್ಕೆ ಜಯ ಸಿಗಲಿ...