ಬೆಳ್ಳಿತೆರೆಯಿಂದ ಬ್ಯುಸಿನೆಸ್‍ವರೆಗೂ...

ವಿಶಾಂತ್​​

0

ನೀವು ಉಪೇಂದ್ರ ಅವರ ‘ಸೂಪರ್’ ಮತ್ತು ‘ಆರಕ್ಷಕ’ ಚಿತ್ರಗಳನ್ನು ನೋಡಿದ್ರೆ ಈ ಸುಂದರಿಯನ್ನು ಗಮನಿಸಿಯೇ ಇರುತ್ತೀರಿ. ಹೌದು, ಅವರೇ ಶ್ವೇತಾ ಸಂಜೀವುಲು. ಅದ್ಭುತ ಡ್ಯಾನ್ಸರ್, ಮಾಜಿ ಏರ್ ಹಾಸ್ಟೆಸ್, ಹಾಲಿ ನಟಿ ಹಾಗೂ ಈಗ ಉದಯೋನ್ಮುಖ ವಾಣಿಜ್ಯೋದ್ಯಮಿ.

ಶ್ವೇತಾ ಹಿನ್ನೆಲೆ

ಶ್ವೇತಾ ಸಂಜೀವುಲು ಪೋಷಕರು ಮೂಲತಃ ಆಂಧ್ರಪ್ರದೇಶದವರು. ಅವರ ತಂದೆ- ತಾಯಿ ಮದುವೆಯಾದ ಬಳಿಕ ಬೆಂಗಳೂರಿಗೆ ಬಂದು ಸೆಟಲ್ ಆದರು. ಅವರ ತಂದೆ ಇಲ್ಲಿಯೇ ಬ್ಯುಸಿನೆಸ್ ಮಾಡತೊಡಗಿದರು. ಸಂಜೀವುಲು ದಂಪತಿಗೆ ಮೂವರು ಹೆಣ್ಣುಮಕ್ಕಳು. ಅವರಲ್ಲಿ ಕೊನೆಯವರೇ ಶ್ವೇತಾ. ಕೊನೆಯ ಮಗಳಾದ ಕಾರಣ ಪೋಷಕರಿಗೂ ಹೆಚ್ಚು ಪ್ರೀತಿ, ಅಕ್ಕಂದಿರಿಗೂ ಅಚ್ಚುಮೆಚ್ಚು.

ಬಾಲ್ಯದಿಂದಲೂ ಶ್ವೇತಾ ಅವರಿಗೆ ಡ್ಯಾನ್ಸ್ ಅಂದ್ರೆ ಪ್ರಾಣ. ಹೀಗಾಗಿಯೇ ಭರತನಾಟ್ಯ, ಕಾಂಟೆಂಪರರಿ, ಬ್ರೇಕ್ ಡ್ಯಾನ್ಸ್, ಸಾಲ್ಸಾ, ಜಾಜ್ó. ಹೀಗೆ ಹಲವು ವಿಧಧ ಡ್ಯಾನ್ಸ್​​​ಗಳನ್ನು ಕಲಿಯತೊಡಗಿದರು. ಅದರೊಂದಿಗೆ ಓದಿನ ಜೊತೆಯಲ್ಲೇ ದೇಶ-ವಿದೇಶಗಳಲ್ಲಿ ಸ್ಟೇಜ್ ಶೋಸ್ ಕೊಡತೊಡಗಿದರು. ಇದುವರೆಗೂ 900ಕ್ಕೂ ಹೆಚ್ಚು ಡ್ಯಾನ್ಸ್ ಶೋಗಳಲ್ಲಿ ಪರ್ಫಾರ್ಮ್ ಮಾಡಿರುವ ಹೆಗ್ಗಳಿಕೆ ಶ್ವೇತಾ ಅವರದು. ಹಾಗೇ ಬಾಲನಟಿಯಾಗಿ ‘ಪರ್ವ’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು.

ಬಿ.ಕಾಂ ಮೊದಲ ವರ್ಷದಲ್ಲಿರುವಾಗಲೇ ಜೆಟ್ ಏರ್‍ವೇಸ್‍ನಲ್ಲಿ ಗಗನಸಖಿಯಾಗಿ ಕೆಲಸ ಗಿಟ್ಟಿಸಿಕೊಂಡ್ರು. ಕೆಲ ವರ್ಷಗಳ ಕಾಲ ಶ್ರಮ ವಹಿಸಿ ಕೆಲಸ ಮಾಡಿ ಹಲವು ಪ್ರಮೋಷನ್‍ಗಳನ್ನು ಪಡೆದು, ಕೈತುಂಬಾ ಸಂಬಳ ಎಣಿಸಿಕೊಳ್ಳತೊಡಗಿದರು. ‘ಅದರ ಜೊತೆಗೆ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಬಹುತೇಕ ಅರ್ಧ ಭೂಮಿಯನ್ನೇ ಸುತ್ತಿದ್ದೀನಿ. ತಿಂಗಳಲ್ಲಿ 15 ಅವರು ಬೆಂಗಳೂರಿನಲ್ಲಿರುತ್ತಿದ್ದರೆ, ಉಳಿದ 15 ದಿನ ವಿದೇಶಗಳಲ್ಲಿ ಇರುತ್ತಿದ್ದೆ’ ಅಂತ ತಮ್ಮ ಅನುಭವ ಹಂಚಿಕೊಳ್ತಾರೆ ಶ್ವೇತಾ. ಇದೇ ಸಮಯದಲ್ಲಿ ಅವರು ಮಾಡೆಲಿಂಗ್‍ ಅನ್ನೂ ಮಾಡುತ್ತಿದ್ದುದು ವಿಶೇಷ.

ಅವರು ಮಾಡೆಲಿಂಗ್ ಫೋಟೋಸ್ ನೋಡಿದ್ದ ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ‘ಸೂಪರ್’ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆ ಮಾಡಿಕೊಂಡರು. ಬಳಿಕ ‘ಆರಕ್ಷಕ’ ಚಿತ್ರದಲ್ಲೂ ಶ್ವೇತಾ ಮೂವರು ನಾಯಕಿಯರಲ್ಲೊಬ್ಬರಾಗಿ ಮಿಂಚಿದ್ದರು. ಕ್ರಮೇಣ ಕನ್ನಡದ ‘ಕೇಡಿಗಳು’ ಚಿತ್ರ ಸೇರಿದಂತೆ ತೆಲುಗಿನಲ್ಲೂ ನಾಯಕಿಯಾಗಿ ನಟಿಸಿದ್ರು. ಹೀಗೆ ಚಿತ್ರರಂಗದಲ್ಲೇ ಅವಕಾಶಗಳು ಅರಸಿ ಬರತೊಡಗಿದವು. ಕೆಲಸ ಮಾಡಿಕೊಂಡು ಸಿನಿಮಾಗಳಲ್ಲಿ ನಟಿಸೋದು ಕಷ್ಟ ಅಂತ ಗೊತ್ತಾಗಿ, ಜೆಟ್ ಏರ್‍ವೇಸ್ ಕೆಲಸ ಬಿಟ್ಟು ಸ್ಯಾಂಡಲ್‍ವುಡ್‍ಗೆ ಬಂದೇಬಿಟ್ರು ಶ್ವೇತಾ.

ಆದ್ರೆ ದುರಾದೃಷ್ಟವಶಾತ್ ಅದೇ ಸಮಯದಲ್ಲಿ ಅವರಿಗೆ ಅವಕಾಶಗಳು ಕಡಿಮೆಯಾಗತೊಡಗಿದವು. ಕೆಲವು ಆಫರ್‍ಗಳು ಬಂದ್ರೂ ಶ್ವೇತಾ ಅವರಿಗೆ ಕಥೆ ಇಷ್ಟವಾಗಲಿಲ್ಲ. ಆಗಲೇ ಶ್ವೇತಾ ಏನಾದ್ರೂ ಮಾಡಬೇಕು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಅಂತ ದೃಢ ನಿರ್ಧಾರ ಮಾಡಿದ್ರು.

ಪ್ರಾರಂಭವಾಯ್ತು ಶ್ವೆನ್ಸ್...

ಹೀಗೆ ಯೋಚಿಸುತ್ತಿರುವಾಗಲೇ ಶ್ವೇತಾ ಬಾಲ್ಯದ ಗೆಳೆಯರಾದ ಶೆಂಥಿಲ್ ಮತ್ತು ವಿನಯ್ ಅವರ ಬೆಂಬಲಕ್ಕೆ ನಿಂತರು. ಮೂವರೂ ಸೇರಿ ಒಂದು ಕಾಫಿ ಪಾಯಿಂಟ್ ಮಾಡುವ ತೀರ್ಮಾನಕ್ಕೆ ಬಂದ್ರು. ತಂದೆ ಉದ್ಯಮದಲ್ಲಿದ್ದ ಕಾರಣ, ಮನೆಯಿಂದಲೂ ಒಳ್ಳೆ ಸಪೋರ್ಟ್ ಸಿಕ್ತು. ಹೀಗಾಗಿಯೇ ತಡ ಮಾಡದೇ ಮೂವರೂ ಸೇರಿ ಒಂದು ಪ್ರಾಜೆಕ್ಟ್ ಸಿದ್ಧಪಡಿಸಿಕೊಂಡರು. ‘ಐಟಿ ಕಂಪನಿಗಳು ಮತ್ತು ಕಾಲೇಜ್ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ನಾವು ಒಂದು ಪ್ರಾಜೆಕ್ಟ್ ಸಿದ್ಧಪಡಿಸಿಕೊಂಡು ರಾಮಮೂರ್ತಿ ನಗರದ ಬಾಗ್‍ಮನೆ ಟೆಕ್‍ಪಾರ್ಕ್‍ನಲ್ಲಿರುವ ಪ್ರತಿಷ್ಠಿತ ಮಲ್ಟಿನ್ಯಾಷನಲ್ ಕಂಪನಿಯೊಂದಕ್ಕೆ ಸಲ್ಲಿಸಿದೆವು. ಅವರಿಗೂ ನಮ್ಮ ಥೀಮ್ ಇಷ್ಟವಾಯ್ತು. ಸೋ, ಗ್ರೀನ್ ಸಿಗ್ನಲ್ ಕೊಟ್ರು. ಈ ಮೂಲಕ ನಮ್ಮ ಮೊದಲ ಕಾಫಿ ಪಾಯಿಂಟ್ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾಯ್ತು.’ ಅಂತ ಹೇಳ್ತಾರೆ ಶ್ವೇತಾ.

ಆದ್ರೆ ತಮ್ಮ ಐಡಿಯಾಗೆ ಒಂದು ಹೆಸರಿಡಬೇಕಲ್ಲಾ? ಅದಕ್ಕೂ ಒಂದು ಪ್ಲ್ಯಾನ್ ಮಾಡಿದ ಶ್ವೇತಾ, ವಿನಯ್ ಮತ್ತು ಶೆಂಥಿಲ್, ತಮ್ಮ ಹೆಸರುಗಳನ್ನೇ ಸೇರಿಸಿ ಶ್ವಿನ್ಸ್ (SVINS) ಕೆಫೆ ಅಂತಲೇ ನಾಮಕರಣ ಮಾಡಿದ್ರು. ‘ಸಾಮಾನ್ಯವಾಗಿ ಐಟಿ ಕಂಪನಿಗಳಲ್ಲಿ ಮೆಷಿನ್ ಕಾಫಿ, ಪೌಡರ್ ಚಹಾ ದೊರೆಯುತ್ತದೆ. ಆದ್ರೆ ಶ್ವಿನ್ಸ್​​​ನಲ್ಲಿ ನಾವೇ ತಯಾರಿಸುವ ಬಿಸಿಬಿಸಿ ಫಿಲ್ಟರ್ ಕಾಫಿ ದೊರೆಯುತ್ತದೆ. ಜೊತೆಗೆ ಟೀ, ಜ್ಯೂಸ್, ಫ್ರೂಟ್ ಸಲಾಡ್, ಸಮೋಸಾ, ಕಚೋರಿ ಸ್ನ್ಯಾಕ್ಸ್, ಬಿಸ್ಕೆಟ್‍ಗಳೂ ಸಿಗುತ್ತವೆ. ನಾನೇ ಮನೆಯಲ್ಲಿ ಚಾಕ್‍ಲೇಟ್ ಮಾಡಿ ಅವುಗಳನ್ನೂ ಇಲ್ಲೇ ಮಾರಾಟಕ್ಕೆ ಇಡ್ತೀನಿ’ ಅಂತ ನಗುತ್ತಾರೆ ಶ್ವೇತಾ. ಹೀಗೆ ಚಿಕ್ಕದಾದ- ಚೊಕ್ಕದಾದ ಶ್ವಿನ್ಸ್​​ನಲ್ಲಿ ಹತ್ತು ಹಲವು ತಿಂಡಿ-ತಿನಿಸು ಪಾನೀಯಗಳು ದೊರೆಯುವ ಕಾರಣ ಐಟಿ ಉದ್ಯೋಗಿಗಳಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಶನಿವಾರ, ಭಾನುವಾರ ಐಟಿ ಕಂಪನಿಗಳಿಗೆ ರಜೆ ಇರುವ ಕಾರಣ, ಇವರಿಗೂ ಆ ರಜೆಯ ಮಜ ಸವಿಯುವ ಅವಕಾಶ.

ಸವಾಲುಗಳು

‘ಇಂತಹ ಕೆಫೆ ಕೇಂದ್ರಗಳನ್ನು ಪ್ರಾರಂಭಿಸೋದು ಅಷ್ಟೇನೂ ರಿಸ್ಕಿಯಲ್ಲ. ಆದ್ರೆ ಪ್ಲ್ಯಾನಿಂಗ್ ಸರಿಯಿರಬೇಕು. ನಾವೂ ಮೂರು ಜನ ಸುಮಾರು 2, 3 ತಿಂಗಳು ಸಾಕಷ್ಟು ಸಿದ್ಧತೆ ಮಾಡಿಕೊಂಡು, ಅತಿ ಕಡಿಮೆ ಬಜೆಟ್‍ನಲ್ಲೇ ಶ್ವಿನ್ಸ್ ಕೆಫೆ ಶುರು ಮಾಡಿದೆವು. ಮೊದಲು ಕಷ್ಟವಾಯ್ತು. ಐಟಿ ಉದ್ಯೋಗಿಗಳು ಏನನ್ನು ಹೆಚ್ಚು ಇಷ್ಟಪಡ್ತಾರೆ. ಪ್ರತಿದಿನ ಯಾವ ತಿಂಡಿ ಹೆಚ್ಚು ಮಾರಾಟವಾಗುತ್ತೆ ಅಂತ ಗೊತ್ತಿಲ್ಲದ ಕಾರಣ. ಒಂದೆರಡು ತಿಂಗಳು ತಿಂಡಿ- ತಿನಿಸುಗಳು ವೇಸ್ಟ್ ಆದ್ವು. ಆದ್ರೆ ಕ್ರಮೇಣ ನಮಗೆ ದಿನಕ್ಕೆ ಏನು ಎಷ್ಟು ಮಾರಾಟವಾಗುತ್ತೆ ಅಂತ ಗೊತ್ತಾಗುತ್ತಾ ಬಂತು. ಸೋ, ಈಗ ನಾವು ಎಚ್ಚೆತ್ತುಕೊಂಡಿದ್ದೀವಿ’ ಅಂತ ಪ್ರಾರಂಭದಲ್ಲಿ ತಾವು ಎದುರಿಸಿದ ಸವಾಲುಗಳ ಬಗ್ಗೆ ಹೇಳ್ತಾರೆ ಶ್ವೇತಾ.

ವಿಶೇಷ ಅಂದ್ರೆ ಶ್ವಿನ್ಸ್ ಮೊದಲ ಬ್ರಾಂಚ್ ಪ್ರಾರಂಭವಾದ ಕೇವಲ 8 ತಿಂಗಳಲ್ಲಿ ಹಾಕಿದ್ದ ಬಂಡವಾಳ ವಾಪಸ್ಸು ಪಡೆದಿದ್ದಾರಂತೆ. ಜೊತೆಗೆ ಈಗ್ಗೆ 10 ತಿಂಗಳ ಹಿಂದೆ ಆಡುಗೋಡಿಯಲ್ಲಿ ಎರಡನೇ ಬ್ರಾಂಚ್‍ ಅನ್ನೂ ಪ್ರಾರಂಭಿಸಿದೆ ಈ ಶ್ವಿನ್ಸ್ ಟೀಮ್. ಸದ್ಯ ಈ ಎರಡೂ ಕೇಂದ್ರಗಳಲ್ಲಿ ಒಟ್ಟು 10 ಮಂದಿ ಕೆಲಸ ಮಾಡುತ್ತಿದ್ದಾರೆ.

ಭವಿಷ್ಯದ ಯೋಜನೆಗಳು

ಈಗಾಗಲೇ 2 ಶ್ವಿನ್ಸ್ ಬ್ರ್ಯಾಂಚ್‍ಗಳಿವೆ. ಅದರ ಜೊತೆಗೆ ಮೂರನೇ ಬ್ರಾಂಚ್ ಪ್ರಾರಂಭಿಸಲು ಸಿದ್ಧತೆ ನಡೆದಿದೆ. ‘ಮುಂದಿನ ವರ್ಷಾಂತ್ಯಕ್ಕೆ ಕಡಿಮೆ ಅಂದ್ರೂ ಇನ್ನೂ ಮೂರು ಬ್ರ್ಯಾಂಚ್‍ಗಳನ್ನು ಶುರು ಮಾಡೋದು ನಮ್ಮ ಐಡಿಯಾ. ಜೊತೆಗೆ ಇನ್ನು ಆರು ತಿಂಗಳಲ್ಲಿ ಒಂದು ಪಬ್ ಮಾಡಬೇಕು ಅಂತಲೂ ಇದ್ದೇವೆ. ಶ್ವಿನ್ಸ್ ಕೆಫೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿರುತ್ತೆ. ಆದ್ರೆ ಪಬ್‍ಅನ್ನು ಬೇರೆ ಬೇರೆ ಮೆಟ್ರೋಪಾಲಿಟನ್ ನಗರಗಳಿಗೆ ವಿಸ್ತರಿಸುವ ಪ್ಲ್ಯಾನ್ ಇದೆ.’ ಅಂತ ಭವಿಷ್ಯದ ಯೋಜನೆಗಳನ್ನು ಬಿಚ್ಚಿಡ್ತಾರೆ ಶ್ವೇತಾ.

ಎನಿವೇಸ್, ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಈ ಸ್ಟಾರ್ ಉದ್ಯಮಿಗೆ ನಾವೂ ಆಲ್ ದಿ ಬೆಸ್ಟ್ ಹೇಳೋಣ...

Related Stories