ತಮ್ಮ ಕೆಲಸ ಕಾರ್ಯಗಳ ಮೂಲಕ ಸಂತೃಪ್ತಿ, ಸಂತೋಷ ಕಂಡುಕೊಂಡ ರಾಧಿಕಾ ಕೌತಾ ರಾವ್ ನಡೆದು ಬಂದ ಹಾದಿ

ಟೀಮ್​ ವೈ.ಎಸ್​. ಕನ್ನಡ

ತಮ್ಮ ಕೆಲಸ ಕಾರ್ಯಗಳ ಮೂಲಕ ಸಂತೃಪ್ತಿ, ಸಂತೋಷ ಕಂಡುಕೊಂಡ ರಾಧಿಕಾ ಕೌತಾ ರಾವ್ ನಡೆದು ಬಂದ ಹಾದಿ

Tuesday December 22, 2015,

6 min Read


ನೀವು ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಲೇಬೇಕೆಂದಿದ್ದರೆ ಅದಕ್ಕೆ ಯಾವುದೇ ರೀತಿಯ ಅಡೆತಡೆಗಳೂ ಎದುರಾಗುವುದಿಲ್ಲ. ನೀವು ನಿಮ್ಮ ಸಾಧನೆಯ ಕ್ಷೇತ್ರದಿಂದ 13,870 ಕಿಮೀನಷ್ಟು ದೂರವಿದ್ದರೂ ಅದರಿಂದ ನಿಮ್ಮ ಸಾಧನೆಗೆ ತೊಂದರೆಯಾಗುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ರಾಧಿಕಾ ಕೌತಾ.

ರಾಧಿಕಾ ಕೌತಾ ಕಾರ್ಪೋರೇಟ್ ವಲಯದಲ್ಲೇ ಹುಟ್ಟಿಬೆಳೆದ ವ್ಯಕ್ತಿ ಅಲ್ಲ. ಅಥವಾ ಒಬ್ಬ ಸ್ಟಾರ್ ಉದ್ಯಮಿಯೂ ಅಲ್ಲ. ಜೀವನದಲ್ಲಿ ಅವರು ಆಯ್ದುಕೊಂಡ ಮಾರ್ಗವನ್ನು ಅರ್ಥ ಮಾಡಿಕೊಳ್ಳದವರಿಗೆ ಅವರು ಒಬ್ಬ ನಿಗೂಢ ವ್ಯಕ್ತಿಯಾಗಿ ಕಾಣಿಸುತ್ತಾರೆ.

ಒಬ್ಬ ತಾಯಿ, ನೃತ್ಯಗಾತಿ, ಸೈಕ್ಲಿಸ್ಟ್, ಬ್ಲಾಗರ್ ಮತ್ತು ಮುಖ್ಯವಾಗಿ ಒಬ್ಬ ಫಿಕ್ಸರ್ ಆಗಿ ರಾಧಿಕಾ ತಮ್ಮ ಸ್ನೇಹಿತರ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. “ನಾನು ವಿಷಯಗಳನ್ನು ಒಂದಕ್ಕೊಂದು ಸೇರಿಸುತ್ತೇನೆ. ಇದು ನನ್ನನ್ನು ನಾನು ವಿವರಿಸಿಕೊಳ್ಳಲು ಹೇಳಬಹುದಾದ ಮಾತು ಅಷ್ಟೇ. ಆದರೆ ಜನ ನನ್ನನ್ನು ಆಸಕ್ತಿ ಕೊರತೆ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯಾಗಿ ನೋಡುತ್ತಾರೆ. ನಾನೇಕೆ ಒಂದೇ ಹಾದಿಯಲ್ಲಿ, ಒಂದೇ ರೀತಿಯ ಕರಿಯರ್ ಬಗ್ಗೆ ಚಿಂತಿಸುವುದಿಲ್ಲ ಎಂಬುದರ ಕುರಿತು ನನಗೇ ಆಶ್ಚರ್ಯವಾಗುತ್ತದೆ” ಎಂದು ಹೇಳಿ ನಗುತ್ತಾರೆ ರಾಧಿಕಾ.

image


ಶಾಲಾ ಕಾರ್ಯಕ್ರಮಗಳು, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಶಿಕ್ಷಣಕ್ಕಾಗಿ ಸೀರೆಗಳು ಇವುಗಳು ರಾಧಿಕಾರವರು ಸ್ವಂತವಾಗಿ ರೂಪಿಸಿ, ನಡೆಸಿಕೊಂಡು ಹೋಗುತ್ತಿರುವ ಯೋಜನೆಗಳು. ಸದ್ಯಕ್ಕೆ ರಾಧಿಕಾ ಅವರು ಚೆನ್ನೈ ನೆರೆ ಪರಿಹಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ 13,870 ಕಿಮೀ ದೂರದ ವರ್ಜೀನಿಯಾದಿಂದ ಆಹಾರ ಸಂಗ್ರಹಿಸಿ ಅದನ್ನು ಭಾರತಕ್ಕೆ ಕಳುಹಿಸಲು ಶ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣವೊಂದರಲ್ಲಿ ರಾಧಿಕಾರವರ ಪೋಸ್ಟ್ ಒಂದನ್ನು ಗಮನಿಸಿದ ಅವರ ಸ್ನೇಹಿತೆ ರಾಧಿಕಾರವರು ಚೆನ್ನೈನಲ್ಲಿದ್ದಾರೆ ಎಂದು ವಿಚಾರಿಸಿದರೆ ಅದಕ್ಕೆ ಬಂದ ಉತ್ತರ ನಾನು, ನನ್ನ ಮನಸ್ಸು ಎಲ್ಲಾ ಅಲ್ಲಿಯೇ ಇದೆ ಎಂಬುದು. ಆಗ ಅವರ ಸ್ನೇಹಿತೆ ರಾಧಿಕಾ ನಿಜವಾಗಿಯೂ ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂಬುದನ್ನು ಮನಗಂಡರು.

“ಹೊಸ ಹೊಸ ದಾರಿಗಳತ್ತ ನನ್ನ ಮನಸ್ಸು ಹೊರಳಿದಾಗಲೆಲ್ಲಾ ಅದನ್ನು ಜನರಿಗೆ ವಿವರಿಸುವುದು, ನನ್ನ ಯೋಜನೆಯತ್ತ ಜನರ ಮನವೊಲಿಸುವಂತೆ ಮಾಡುವುದು ಕಷ್ಟವಾಗುತ್ತಿತ್ತು. ನನಗೆ ಹೊಸ ವಿಚಾರಗಳನ್ನು ಕಲಿಯುವುದೆಂದರೆ ಬಹಳ ಇಷ್ಟ ಮತ್ತು ವಿಭಿನ್ನ ಸಂಗತಿಗಳು ನನ್ನನ್ನು ಬಹುವಾಗಿ ಆಕರ್ಷಿಸುತ್ತವೆ. ಹೀಗಾಗಿ ನನಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಕಚೇರಿಯಲ್ಲಿ ಕುಳಿತು ಮಾಡುವ ಏಕತಾನತೆಯ ಕೆಲಸಗಳು ಇಷ್ಟವಾಗುವುದಿಲ್ಲ. ಇದಕ್ಕಾಗಿ ಜನ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಇದು ಬಹಳಷ್ಟು ವೇಳೆ ನನಗೆ ನೋವುಂಟುಮಾಡುತ್ತಿತ್ತು” ಎನ್ನುತ್ತಾರೆ ರಾಧಿಕಾ.

ಮನಸ್ಸು ತೋರಿದ ಮಾರ್ಗವನ್ನ ಅನುಸರಿಸಿದ ರಾಧಿಕಾ

ಹಲವು ವರ್ಷಗಳಿಂದ ರಾಧಿಕಾ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ತಮ್ಮ ಮಕ್ಕಳ ಶಾಲೆಯನ್ನೇ ಆರಿಸಿಕೊಂಡಿರುವ ರಾಧಿಕಾ, ಶಾಲೆ ಮುಗಿದ ಬಳಿಕ ಮಕ್ಕಳಿಗೆ ವಿಶೇಷ ತರಬೇತಿಗಳನ್ನು ನೀಡುತ್ತಾರೆ. ಈ ಮೂಲಕ ಸಮಾಜದಲ್ಲಿ ಯಾವುದಾದರೊಂದು ರೀತಿಯಲ್ಲಿ ಪರಿವರ್ತನೆ ತರಲು ರಾಧಿಕಾ ಶ್ರಮಿಸುತ್ತಿದ್ದಾರೆ.

“ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನನ್ನ ಮಕ್ಕಳಂತೆಯೇ ಎಲ್ಲಾ ಹೆಣ್ಣುಮಕ್ಕಳಿಗೂ ಸಮಾನತೆ ಮತ್ತು ಶೈಕ್ಷಣಿಕ ಹಕ್ಕು ಇದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸಬೇಕು. ಸಣ್ಣದಾದರೂ ಪರವಾಗಿಲ್ಲ. ಆದರೆ ಬದಲಾವಣೆ ಸಾಧ್ಯವಾಗಬೇಕು. ಶಾಲೆಗಳಲ್ಲಿ ಸ್ವಯಂ ಸೇವಕಳಂತೆ ಕೆಲಸ ಮಾಡುವುದು ನನಗಿಷ್ಟ. ಶಿಕ್ಷಕ ವೃತ್ತಿಯೇ ಅದ್ಭುತವಾದದ್ದು. ಅದರ ತೊಡಗಿಸಿಕೊಳ್ಳುವಿಕೆ ನೋಡಿದರೆ ನಾನೆಷ್ಟು ಚಿಕ್ಕವಳೆಂದು ಅನಿಸುತ್ತದೆ. ಆ ರೀತಿಯಾಗಿ ಶಿಕ್ಷಕರು ಮಕ್ಕಳೊಂದಿಗೆ ಬಾಂಧವ್ಯ ಬೆಳೆಸಿಕೊಂಡು ಕಾರ್ಯನಿರ್ವಹಿಸುತ್ತಾರೆ.” ಎಂದಿದ್ದಾರೆ ರಾಧಿಕಾ.

ನಿರ್ದಿಷ್ಟ ಕಾರಣಗಳಿಗಾಗಿ ಜನರ ಬೆಂಬಲ ಕೋರಿ ರ್ಯಾಲಿಗಳನ್ನೇರ್ಪಡಿಸುವುದರಿಂದ ಜನರಿಗೆ ತಾವು ಮಾಡುತ್ತಿರುವ ಕೆಲಸದ ನೇರವಾದ ಪರಿಣಾಮ ತಿಳಿಯುವುದಿಲ್ಲ. ಆದರೆ ಜನ ಯಾವುದೇ ಬದಲಾವಣೆಯಾದರೂ ತಕ್ಷಣವೇ ಬರಬೇಕೆಂದು ನಿರೀಕ್ಷಿಸುತ್ತಾರೆ. ಇದು ಅಸಾಧ್ಯವಾದ ಮಾತು. ಈ ನಿಟ್ಟಿನಲ್ಲಿ ಜನರು ಅರಿತುಕೊಳ್ಳುವಂತೆ ಮಾಡುವುದೂ ಸಹ ಒಂದು ಸವಾಲು. ಆದರೆ ಈ ಸಮಸ್ಯೆಯಿಂದ ರಾಧಿಕಾ ಹೊರ ಬಂದಿದ್ದಾರೆ. ಅವರೇನು ಕೆಲಸ ಮಾಡುತ್ತಿದ್ದಾರೆ, ಏಕಾಗಿ ಮಾಡುತ್ತಿದ್ದಾರೆ ಎಂಬ ಸಂಪೂರ್ಣ ವಿಚಾರಗಳನ್ನು ಜನರಿಗೆ ಅರ್ಥವಾಗುವಂತೆ ಅವರು ವಿವರಿಸುತ್ತಾರೆ. ಮತ್ತು ತಮ್ಮ ಕೆಲಸದಲ್ಲಿ ಪಾರದರ್ಶಕತೆಯನ್ನು ಉಳಿಸಿಕೊಳ್ಳುತ್ತಾರೆ. ರಾಧಿಕಾ ಹೇಳುವಂತೆ ಜನರಿಗೆ ನಿಮ್ಮ ದೃಷ್ಟಿಕೋನ ಏನು ಎಂಬುದು ಅರ್ಥವಾಗಬೇಕು. ನೀವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೀರಿ ಎಂಬುದು ತಿಳಿಯಬೇಕು. ಆ ರೀತಿಯಲ್ಲಿ ಕೆಲಸ ಮಾಡಬೇಕು. ಒಮ್ಮೆ ಅವರು ನಿಮ್ಮನ್ನು, ನಿಮ್ಮ ಕೆಲಸವನ್ನು ಒಪ್ಪಿಕೊಂಡರೆ ಮತ್ತುಳಿದದ್ದೆಲ್ಲಾ ಸುಲಭವಾಗಿ ನಡೆಯುತ್ತದೆ.

ಜೀವನದಲ್ಲಿ ತಾವು ಮಾಡುತ್ತಿರುವ ಕೆಲಸದಲ್ಲಿ, ಅಳವಡಿಸಿಕೊಂಡಿರುವ ಹಾದಿಯಲ್ಲಿ ರಾಧಿಕಾ ಅವರಿಗೆ ಯಾವುದೇ ರೀತಿಯ ಅನುಮಾನಗಳಿಲ್ಲ. “ಕೆಲವು ವರ್ಷಗಳ ಹಿಂದೆ ನಾನು ವಾಸ್ತವ ಪ್ರಪಂಚದಲ್ಲಿ ಬದುಕಲು, ಸತ್ಯವನ್ನು ಅರಗಿಸಿಕೊಳ್ಳಲು ಆರಂಭಿಸಿದೆ. ಇದರಿಂದ ನಾನು ನನ್ನಲ್ಲೇ ಬೆಳವಣಿಗೆ ಸಾಧಿಸಿದೆ. ವಿಭಿನ್ನ ವಿಚಾರಗಳನ್ನು ಕಲಿತೆ. ಯಾವುದೇ ಕ್ಷಣವನ್ನು ಸಂತಸದಿಂದ ಸ್ವೀಕರಿಸುವುದನ್ನು ಕಲಿತೆ. ಸಹಾಯ ಮಾಡುವುದರಿಂದ, ಸಮಾಜಕ್ಕೆ ಏನಾದರೂ ಹಿಂತಿರುಗಿಸುವುದರಿಂದ ಎಷ್ಟು ತೃಪ್ತಿಯಾಗುತ್ತದೆ ಎಂಬುದನ್ನು ಕಂಡುಕೊಂಡೆ. ಸುಧಾರಣೆಗಾಗಿ ನಾನು ಏನನ್ನಾದರೂ ಮಾಡಿದರೆ ಅಥವಾ ಅದಕ್ಕಾಗಿ ಅವಕಾಶಗಳನ್ನು ಒದಗಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ” ಎಂದು ಹೇಳಿಕೊಂಡಿದ್ದಾರೆ ರಾಧಿಕಾ.

ಶಿಕ್ಷಣಕ್ಕಾಗಿ ಸೀರೆ

ಈ ವರ್ಷದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ರಾಧಿಕಾರ ಕ್ಯಾಂಪೇನ್ ಎಂದರೆ ಶಿಕ್ಷಣಕ್ಕಾಗಿ ಸೀರೆ ಎಂಬ ವಿಚಾರ. 100 ಸೀರೆಗಳ ಒಪ್ಪಂದ ಕಾರ್ಯಕ್ರಮದಿಂದ ಸ್ಪೂರ್ತಿ ಪಡೆದು ರಾಧಿಕಾ ಆರಂಭಿಸದ ಕ್ಯಾಂಪೇನ್ ಸಾರೀ ಫಾರ್ ಎಜುಕೇಶನ್. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮಹಿಳೆಯರು ಸೀರೆಯನ್ನುಡುವಂತೆ ಪ್ರೋತ್ಸಾಹಿಸುವ ಮತ್ತು ಅವರ ಸೀರೆಗಳ ಹಿಂದಿರುವ ಕಥೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡುವಂತಹ ಕಾರ್ಯಕ್ರಮ ಇದು. ಇದರೊಂದಿಗೆ ರಾಧಿಕಾರಿಗೆ, ಜನಸಂಖ್ಯಾಶಾಸ್ತ್ರವನ್ನನುಸರಿಸಿ ಬಹಳಷ್ಟು ಮಂದಿಯನ್ನು ತಲುಪುವ, ಆ ಮೂಲಕ ಸೀರೆಯ ಪ್ರಾಮುಖ್ಯತೆಯನ್ನು ಪಸರಿಸುತ್ತಾ ಒಪ್ಪಂದದ ಮಹತ್ವವನ್ನು ತಿಳಿಸುವುದು ಉದ್ದೇಶವೂ ಇದೆ.

image


ತಾವು ಸೀರೆಯುಟ್ಟಾಗಲೆಲ್ಲಾ ರಾಧಿಕಾ, ನಿರ್ದಿಷ್ಟ ಮೊತ್ತದ ಹಣವನ್ನು ತೆಗೆದಿರಿಸುತ್ತಾರೆ. ವರ್ಷದ ಕೊನೆಯಲ್ಲಿ ಸಂಗ್ರಹವಾದ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕೊಡುಗೆಯಾಗಿ ನೀಡುತ್ತಾರೆ. ಸಾರಿ ಫಾರ್ ಎಜುಕೇಶನ್ ಕ್ಯಾಂಪೇನ್‌ನಿಂದ ರಾಧಿಕಾ ಸಾಕಷ್ಟು ಸಮಸ್ಯೆಯನ್ನೂ ಎದುರಿಸಿದ್ದಾರೆ. “ ಕೆಲವರು ಇದೊಂದು ಪಬ್ಲಿಸಿಟಿ ಸ್ಟಂಟ್ ಎಂದು ಪರಿಗಣಿಸಿದ್ದಾರೆ. ಇದರಿಂದಲೇ ನಾನು ನನ್ನ ಹಲವು ಮಂದಿ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಬರವಣಿಗೆಯನ್ನು ನಿಲ್ಲಿಸಿದ್ದೇನೆ. ಆದರೆ ಇದರಿಂದ ನನಗೆ ತುಂಬಾ ನಷ್ಟವಾಗಿದೆ ಎಂದೇನೂ ನಾನು ಭಾವಿಸುವುದಿಲ್ಲ. ಏಕೆಂದರೆ ಇದರಿಂದ ಅನೇಕ ಮೌಲ್ಯಯುತ ದಾರಿಗಳು ನನಗೆ ಗೋಚರಿಸಿವೆ. ಹೊಸ ಹೊಸ ರೀತಿಯ ಸಂಬಂಧಗಳು ಏರ್ಪಟ್ಟಿವೆ. ಹೀಗಾಗಿ ಇದರ ಬಗ್ಗೆ ನನಗ್ಯಾವುದೇ ಪಶ್ಚಾತ್ತಾಪವಿಲ್ಲ. ಜನ ನನ್ನ ಬಗ್ಗೆ ಏನೆಂದುಕೊಂಡರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ” ಎಂದಿದ್ದಾರೆ ರಾಧಿಕಾ.

ಸೀರೆಗಳು ದೇಶೀ ಸಂಸ್ಕೃತಿಯ ಪ್ರತಿಬಿಂಬ

ಸೀರೆಗಳು ನಮ್ಮನ್ನು ಭಾರತದೊಂದಿಗೆ ಬೆಸೆಯುತ್ತವೆ. ಭಾರತದ ಸಮುದಾಯಗಳಲ್ಲಿ ನಾವು ಸೇರಿದ್ದೇವೆ ಎಂಬ ಭಾವನೆ ಉಂಟುಮಾಡುತ್ತವೆ. ಇದು ನಮ್ಮ ಬೇರುಗಳನ್ನು ಗುರುತಿಸಿಕೊಳ್ಳಬಹುದಾದ ಒಂದು ಮೂಲವಾಗಿದೆ.

ಭಾರತದಲ್ಲಿರುವ ಬಹುತೇಕ ಮಹಿಳೆಯರು ಸೀರೆಯನ್ನೇ ಪ್ರಮುಖ ಉಡುಗೆಯಾಗಿ ಆರಿಸಲು ಇಚ್ಛಿಸುವುದಿಲ್ಲ. ಆದರೆ ರಾಧಿಕಾರಿಗೆ ಸೀರೆ ಎಂದರೆ ಬಹಳ ಇಷ್ಟ. ನಮ್ಮಲ್ಲಿ ಬಹುತೇಕರಿಗೆ ಸೀರೆ ಅದ್ಭುತವಾದ ಔಟ್ ಫಿಟ್ ಎನ್ನಿಸುತ್ತದೆ. ಎಲ್ಲಾ ಸಮುದಾಯದ ಜನರಿಗೂ, ಎಲ್ಲಾ ಕಾಲದ ಮಹಿಳೆಯರಿಗೂ ಸೀರೆ ಸರಿಯಾದ ಔಟ್ ಫಿಟ್ ಹೌದು. ಅದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ರಾಜ್ಯ, ಭಾಷೆ, ದೇಶಗಳ ಎಲ್ಲೆ ಮೀರಿ ಬೆಳೆದಿದೆ ಸೀರೆ ಎಂಬುದು ರಾಧಿಕಾರ ಅಂಬೋಣ.

ಸವಾಲಿನ ಬದುಕು

ರಾಧಿಕಾರ ಅಮೆರಿಕಾ ಜೀವನ ಅವರನ್ನು ಸ್ವಾವಲಂಬಿ ಮತ್ತು ಸ್ವತಂತ್ರರನ್ನಾಗಿಸಿದೆ. ಇದರಿಂದ ಅವರು ಎಂತಹ ಸವಾಲುಗಳನ್ನು ಎದುರಿಸಲೂ ಹಿಂಜರಿಯದಂತಹ ಮನಸ್ಥಿತಿಯನ್ನು ರೂಢಿಸಿಕೊಂಡಿದ್ದಾರೆ. ಅಮೇರಿಕಾದ ಬದುಕು ಸ್ವತಂತ್ರ ಮತ್ತು ಜವಾಬ್ದಾರಿಯುತವಾಗಿದೆ. ವಲಸಿಗರು ಇಲ್ಲಿ ಬೆಳೆಯಬಹುದು ಮತ್ತು ಸಮರ್ಥವಾಗಿ ತಮ್ಮ ಕಾರ್ಯವನ್ನು ಸಾಧಿಸಬಹುದು. ಒಬ್ಬರ ಮೇಲೊಬ್ಬರು ಅವಲಂಬಿತರಾಗುವ ಕ್ಷಣಗಳು ತೀರಾ ಕಡಿಮೆಯಾಗಿರುವ ಕಾರಣ ಗೆಲುವಿಗೂ, ಸೋಲಿಗೂ ಅವರವರೇ ಹೊಣೆಯಾಗಿರುತ್ತಾರೆ. ಇಲ್ಲಿ ಯಾವುದೇ ಕೆಲಸಗಾರರು ದೊರಕುವುದಿಲ್ಲ. ದೊಡ್ಡ ಕುಟುಂಬ ಇಲ್ಲಿರುವುದಿಲ್ಲ. ಹೀಗಾಗಿ ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಮೂಡುವುದೇ ಇಲ್ಲ. ಜೀವನ ಬಹಳ ಕಷ್ಟ ಎನಿಸುತ್ತಿರುತ್ತದೆ. ಮಹಿಳೆಯರು ತಮ್ಮ ಕೆಲಸದ ಜಾಗ ಮತ್ತು ಮನೆಯಲ್ಲಿ ನಿಜಕ್ಕೂ ಕಷ್ಟಪಟ್ಟು ಕೆಲಸ ಮಾಡಬೇಕು. ಹೀಗಾಗಿ ಎರಡರ ಮಧ್ಯೆ ಹೊಂದಾಣಿಕೆ ಸಾಧಿಸುವುದನ್ನು ಕಲಿತುಬಿಡುತ್ತೇವೆ. ಇದು ನಮ್ಮನ್ನು ಉತ್ತಮ ನಿರ್ವಹಣೆಕಾರರನ್ನಾಗಿ ರೂಪಿಸುತ್ತದೆ. ಹಲವು ಕೆಲಸಗಳನ್ನು ಸಮರ್ಥವಾಗಿ ಮಾಡುವಂತೆ ಮಾಡುತ್ತದೆ. ಪ್ರತಿಯೊಬ್ಬರೂ ಸ್ವತಂತ್ರರು ಎಂಬ ಅಭಿಪ್ರಾಯ ಮೂಡಿಸುತ್ತದೆ.

ರಾಧಿಕಾ ಬೆಳೆದಿದ್ದು ಚೆನ್ನೈನಲ್ಲಿ. ಚೆನ್ನೈನ ಶಂಕರ ನೇತ್ರಾಲಯದಲ್ಲಿ ದೃಷ್ಟಿಮಾಪನದ ಕುರಿತಾಗಿ ಅಧ್ಯಯನ ಮಾಡಿದರು. ಅವರಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂಬ ಇಚ್ಛೆ ಇತ್ತು. ಆದರೆ ಅವರು ಸಲ್ಲಿಸಿದ್ದ 3 ವೀಸಾ ಅರ್ಜಿಗಳು ತಿರಸ್ಕೃತಗೊಂಡ ಕಾರಣ ಅವರು ಭಾರತದಲ್ಲೇ ವಿದ್ಯಾಭ್ಯಾಸ ಮುಂದುವರೆಸುವ ನಿರ್ಧಾರ ಮಾಡಿದರು. ನಂತರ ಬ್ರಸೆಲ್ಸ್‌ ಗೆ ಹೋದ ಅವರು ತಮಗೆ 2 ಮಕ್ಕಳಾದ 3 ವರ್ಷದ ಬಳಿಕ ಅಂದರೆ 1997ರಲ್ಲಿ ಅಮೆರಿಕಾಗೆ ಹೋಗಿ ನೆಲೆಸಿದರು.

ಎರಡು ಚಿಕ್ಕಮಕ್ಕಳು ಮತ್ತು ಡೇ ಕೇರ್ ಸೆಂಟರ್‌ಗಳಲ್ಲಿ ಮಕ್ಕಳನ್ನು ಇರಿಸುವ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಆದರೂ ಸಮಸ್ಯೆಗಳಿಗೆ ಜಗ್ಗದ ರಾಧಿಕಾ ಅವರು ಮೆಡಿಸಿನ್ ಅಧ್ಯಯನ ಮಾಡುವ ಬದಲಾಗಿ ಮಾಹಿತಿ ತಂತ್ರಜ್ಞಾನದ ಕುರಿತು ಎಂಎಸ್ ಮಾಡುವ ನಿರ್ಧಾರಕ್ಕೆ ಬಂದರು. ಇದರ ಬಗ್ಗೆ ರಾಧಿಕಾರಿಗೆ ಕೊಂಚ ಬೇಸರವಿದೆ. ರಾಧಿಕಾ ಮೆಡಿಸಿನ್ ಅಧ್ಯಯನ ಮಾಡಬೇಕೆಂಬುದು ಅವರ ತಂದೆಯ ಇಚ್ಛೆಯಾಗಿತ್ತು. ಆದರೆ ಅದನ್ನು ಮಾಡಲಾಗಲಿಲ್ಲವಲ್ಲ ಎಂಬ ಬೇಸರ ರಾಧಿಕಾರಿಗಿದೆ. ಆದರೆ ತಂದೆಯ ಇಚ್ಛೆಗಿಂತಲೂ ಮೀರಿ ಬೆಳೆದದ್ದರ ಕುರಿತು ಅವರಿಗೆ ಇಂದು ಸಂತಸವೂ ಇದೆ.

ರಾಧಿಕಾ ಅವರು ಡಾಟಾ ಅನಾಲಿಸ್ಟ್/ ಡಿಬಿಎ ಆಗಿ ಕೆಲ ಕಾಲ ಕಾರ್ಯ ನಿರ್ವಹಿಸಿದರು. ಮೂರನೇ ಬಾರಿಗೆ ಗರ್ಭಿಣಿಯಾದಾಗ ಕೆಲಸಕ್ಕೆ ರಾಜೀನಾಮೆ ನೀಡಿ ಬ್ಲಾಗಿಂಗ್ ಮಾಡಲಾರಂಭಿಸಿದರು. ರಾಧಿಕಾ ಬ್ಲಾಗಿಂಗ್ ಮಾಡಲಾರಂಭಿಸಿ 9 ವರ್ಷಗಳು ಕಳೆದಿವೆ. ಈ 9 ವರ್ಷಗಳಲ್ಲಿ ಅವರು ಇತರ ಮಹಿಳೆಯರಿಂದ ಸಾಕಷ್ಟು ಕಲಿತಿದ್ದಾರೆ.

ಬಿಟ್ಟು ಕೊಡಬೇಡಿ

2009ರಲ್ಲಿ ಅವರ ಮೊಣಕಾಲಿನ ಮೃದ್ವಸ್ಥಿಗಳು ಮುರಿದ ಕಾರಣ ರಾಧಿಕಾ ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಬೇರೆಯವರನ್ನು ಅವಲಂಬಿಸಬೇಕಾಯಿತು. ಇದರಿಂದ ರಾಧಿಕಾ ಮಾನಸಿಕವಾಗಿ ಜರ್ಜರಿತರಾಗಿದ್ದರು. ಇದರಿಂದ ಹೊರಬರಲು ರಾಧಿಕಾ ಸಾಕಷ್ಟು ಶ್ರಮಿಸಬೇಕಾಯಿತು. ಛಲಬಿಡದೆ ಮತ್ತೆ ತಮ್ಮ ಆತ್ಮವಿಶ್ವಾಸವನ್ನು ಒಗ್ಗೂಡಿಸಿಕೊಂಡು ಮತ್ತೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರು ರಾಧಿಕಾ. ಇದು ರಾಧಿಕಾ ತಮ್ಮ ಜೀವನದಲ್ಲಿ ಎದುರಿಸಿದ ಕಠಿಣವಾದ ಸವಾಲಾಗಿತ್ತು.

image


ಫಿಜಿಕಲ್ ಥೆರಪಿಗಳು ಅವರಿಗೆ ಸಾಕಷ್ಟು ಕಠಿಣವಾಗಿತ್ತು. ಅಲ್ಲದೇ ಆಗ ಚಳಿಗಾಲ ಬೇರೆ. ಇದು ರಾಧಿಕಾರಿಗೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಿತ್ತು. 3 ತಿಂಗಳುಗಳ ಕಾಲ ಬೇರೆಯವರ ಮೇಲೆ ಅವಲಂಬಿತರಾಗಿದ್ದದು ಅವರಿಗೆ ಅತ್ಯಂತ ಅಸಹನೀಯ ಸಮಯವಾಗಿತ್ತು. ಶೀಘ್ರವಾಗಿ ಗುಣಮುಖರಾಗಲು ಸೈಕ್ಲಿಂಗ್ ಮಾಡಲು ನಿರ್ಧರಿಸಿದರು ರಾಧಿಕಾ. ವಾಶಿಂಗ್ಟನ್ ಏರಿಯಾ ಬೈಸೈಕ್ಲಿಸ್ಟ್ ಅಸೋಸಿಯೇಷನ್‌ ನ ಮಹಿಳೆಯರ ಶಾಖೆಯನ್ನು ಸಂಪರ್ಕಿಸಿದ ರಾಧಿಕಾ ತಮ್ಮನ್ನು ತಾವು ಅದರಲ್ಲಿ ತೊಡಗಿಸಿಕೊಂಡರು.

ಕಳೆದ ಚಳಿಗಾಲದಲ್ಲಿ 50 ಮೈಲಿಗಳ ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿದಾಗ ಅದರಿಂದಾದ ಅನುಭೂತಿ ವರ್ಣನೆಗೆ ನಿಲುಕದ್ದು. ಇದು ರಾಧಿಕಾ ಹೆಮ್ಮೆಯನ್ನುನುಭವಿಸಿದ ಕ್ಷಣವೂ ಹೌದು. “ಕೇವಲ 10 ಮೈಲಿಗಳಷ್ಟು ಮಾತ್ರ ನಡೆಯಲು ನನಗೆ ಸಾಧ್ಯವಾಗುತ್ತಿತ್ತು. ಆದರೆ ಸೈಕ್ಲಿಂಗ್ ನನ್ನ ಮೊಣಕಾಲು ನೋವಿನ ಸಮಸ್ಯೆಯನ್ನು ಇಲ್ಲವಾಗಿಸಿತು” ಎಂದು ನೆನಪಿಸಿಕೊಳ್ಳುತ್ತಾರೆ ರಾಧಿಕಾ.

ಏನೇ ಮಾಡಿದರೂ ಅದನ್ನು ಸಮರ್ಥವಾಗಿ ಮಾಡಿ ಎಂಬ ಮಾತಿನಲ್ಲಿ ರಾಧಿಕಾ ನಂಬಿಕೆಯಿಟ್ಟಿದ್ದಾರೆ. ಒಮ್ಮೆ ನೀವು ನಡೆಯುತ್ತಿರುವ ದಾರಿ ಸರಿಯಿದೆ ಎಂಬ ನಂಬಿಕೆ ಬಂದರೆ ಜನ ನಿಮ್ಮ ದೃಷ್ಟಿಕೋನಕ್ಕೆ ಹೊಂದಿಕೊಳ್ಳುತ್ತಾರೆ. ಜನರ ಒಪ್ಪಿಗೆ ನಿಮಗೆ ಬೇಕಿಲ್ಲ. ಆದರೆ ಅದರಿಂದ ನಿಮ್ಮ ಗುರಿ ಸೇರುವುದು ನಿಮಗೆ ಸುಲಭವಾಗುತ್ತದೆ. ಇದು ನಿಮ್ಮ ಸಾಧನೆಯ ಹಾದಿಯನ್ನು ಸಂತೋಷದಾಯಕವನ್ನಾಗಿಸುತ್ತದೆ ಎನ್ನುತ್ತಾ ಮಾತು ಮುಗಿಸುತ್ತಾರೆ ರಾಧಿಕಾ.


ಲೇಖಕರು: ತನ್ವಿ ದುಬೆ

ಅನುವಾದಕರು: ವಿಶ್ವಾಸ್​​