ಸೆಲೆಬ್ರಿಟಿಗಳ ದಿಲ್ ಕದ್ದ ಹಾಜಿ ಪಾನ್ ಬೀಡಾ...

ನಿನಾದ

ಸೆಲೆಬ್ರಿಟಿಗಳ ದಿಲ್ ಕದ್ದ ಹಾಜಿ ಪಾನ್ ಬೀಡಾ...

Tuesday December 15, 2015,

2 min Read

ಬೆಂಗಳೂರಿನ ಶಿವಾಜಿನಗರದಲ್ಲಿರುವ ರಸೆಲ್ ಮಾರುಕಟ್ಟೆ ಬೆಂಗಳೂರಿಗರಿಗೆಲ್ಲಾ ಚಿರಪರಿಚಿತ. ಸುಮಾರು 50 ವರ್ಷಕ್ಕೂ ಹಳೆಯದಾದ ರಸೆಲ್ ಮಾರುಕಟ್ಟೆ ಶಿವಾಜಿನಗರದ ಕೇಂದ್ರಬಿಂದು. ಆದ್ರೆ ರಸೆಲ್ ಮಾರುಕಟ್ಟೆಗೂ ಪುರಾತನವಾದ ಹಾಗೂ ಅದಕ್ಕಿಂತಲೂ ಹಳೆ ಇತಿಹಾಸ ಹೊಂದಿರುವ ಅಂಗಡಿಯೊಂದು ರಸೆಲ್ ಮಾರ್ಕೇಟ್ ಪಕ್ಕದಲ್ಲೇ ಇದೆ. ಅದೇ ಹಾಜಿ ಬಾಬಾ ಪಾನ್ ಅಂಗಡಿ.

image


1903 ರಲ್ಲಿ ದಿವಂಗತ ಅಬ್ದುಲ್ ಖಲೀಕ್ ಅವರಿಂದ ಆರಂಭವಾದ ಹಾಜಿ ಬಾಬಾ ಪಾನ್ ಅಂಗಡಿಗೆ ಈಗ 112 ವರ್ಷಗಳ ಸಂಭ್ರಮ. ಇದೀಗ ಅಬ್ದುಲ್ ಖಲೀಕ್ ಅವರಿಂದ ಆರಂಭವಾದ ಹಾಜಿ ಬಾಬಾ ಪಾನ್ ಅಂಗಡಿಯನ್ನು ಈಗ ಅವರ ಮೊಮ್ಮಗ ಅಬ್ದುಲ್ ಬಶೀರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

image


ಇನ್ನು ಈ ಪಾನ್ ಅಂಗಡಿಯಲ್ಲಿ ದೇಶದ ಖ್ಯಾತನಾಮರು ಪಾನ್ ಸವಿದಿದ್ದಾರಂತೆ. ಮಾಜಿ ಪ್ರಧಾನಿ ದಿವಂಗತ ಜವಹಾರ್ ಲಾಲ್ ನೆಹರು, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ, ನಟರಾದ ಅಮಿತಾಬ್ ಬಚ್ಚನ್ , ಮಿಥುನ್ ಚಕ್ರವರ್ತಿ ಮುಂತಾದವರು ಇಲ್ಲಿ ಪಾನ್ ತಿಂದಿದ್ದಾರಂತೆ. ಅಲ್ಲದೇ ಸಚಿವರಾದ ರೋಷನ್ ಬೇಗ್ ಅವರಿಗೂ ಇಲ್ಲಿನ ಪಾನ್ ಅಂದ್ರೆ ತುಂಬಾ ಇಷ್ಟವಂತೆ. ಪಾನ್ ತಿನ್ನವುದಕ್ಕಾಗಿಯೇ ಇಲ್ಲಿಗೆ ಬೆಂಗಳೂರಿನ ಮೂಲೆ ಮೂಲೆಗಳಿಂದ ಜನ ಬರುತ್ತಾರೆ,

ಹಾಜಿ ಬಾಬಾ ಪಾನ್ ಅಂಗಡಿಯಲ್ಲಿ ಎಲ್ಲಾ ಪಾನ್ ಅಂಗಡಿಗಳಲ್ಲಿ ಸಿಗುವಂತೆ ವೆರೈಟಿ ವೆರೈಟಿ ಪಾನ್ ಗಳು ಸಿಗೋದಿಲ್ಲ. ಇಲ್ಲಿ ಬಶೀರ್ ಅವರು ತಯಾರಿಸೋದು ಕೇವಲ ನಾಲ್ಕೇ ರೀತಿಯ ಪಾನ್ ಗಳನ್ನು. ಸ್ವೀಟ್ ಪಾನ್, ಮಗೈ, ಸಾದಾ, ಜರ್ದಾ ಈ ನಾಲ್ಕು ವಿಧದ ಪಾನ್ ಗಳನ್ನು ಅಷ್ಟೇ ಅವರು ತಯಾರಿಸುತ್ತಾರೆ. ಹಾಗಂತ ಹಾಜಿ ಬಾಬಾ ಪಾನ್ ಅಂಗಡಿ ದಿನವಿಡೀ ತೆರೆದಿರೋದಿಲ್ಲ. ಇಲ್ಲಿ ವ್ಯಾಪಾರ ಆರಂಭವಾಗೋದೇ ರಾತ್ರಿ 8 ಗಂಟೆಯಿಂದ. ಬೆಳಗ್ಗಿನ ಜಾವ 3 ಗಂಟೆವರೆಗೂ ವ್ಯಾಪಾರ ನಡೆಯುತ್ತೆ.

image


ಇಲ್ಲಿ ತಯಾರಾದ ಪಾನ್ ಗಳು ಬೇರೆ ಬೇರೆ ಕಡೆಗೂ ಸರಬರಾಜಾಗುತ್ತೆ. ಮುಂಬೈ, ಬೆಂಗಳೂರಿನಲ್ಲಿ ನಡೆಯುವ ಸೇನೆಯ ಕಾರ್ಯಕ್ರಮಗಳಿಗೆ, ದೊಡ್ಡ ದೊಡ್ಡ ರಾಜಕೀಯ ಕಾರ್ಯಕ್ರಮಗಳಿಗೆ, ಗಣ್ಯರ ಮನೆಯ ಶುಭಕಾರ್ಯಗಳಿಗೆ ಹಾಜಿ ಬಾಬಾ ಪಾನ್ ಅಂಗಡಿಯಿಂದ ಪಾನ್ ಸಪ್ಲೈ ಆಗುತ್ತೆ. ಇನ್ನು ಪಾನ್ ತಯಾರಿಗೆ ಇವರು ಬಳಸೋದು ಕೋಲ್ಕತ್ತಾ ಹಾಗೂ ಬನಾರಸ್ ಎಲೆಯನ್ನಂತೆ. ಹಾಜಿಬಾಬಾ ಪಾನ್ ಅಂಗಡಿ ಆರಂಭವಾಗುವಾಗ ಒಂದು ಪಾನ್ ನ ಬೆಲೆ 10 ಪೈಸೆಯಿತ್ತಂತೆ. ಈಗ ಹಾಜಿ ಬಾಬಾ ಪಾನ್ ಅಂಗಡಿಯಲ್ಲಿನ ಒಂದು ಪಾನ್ ನ ಬೆಲೆ ಹತ್ತು ರೂಪಾಯಿಗಳು.

ಇನ್ನು ಬಶೀರ್ ಅವರು ಹೇಳುವ ಪ್ರಕಾರ ನಮ್ಮ ಅಂಗಡಿಯಲ್ಲಿ ಕೇವಲ ನಾಲ್ಕೇ ವಿಧದ ಪಾನ್ ಗಳು ತಯಾರಾದ್ರೂ ಕೂಡ ಜನ ಅದನ್ನು ಇಷ್ಟಪಡಲು ಕಾರಣ ಅದರ ರುಚಿ ಅಂತಾರೆ. ನಾವು ಅದಕ್ಕೆ ಬಳಸುವ ವಸ್ತುಗಳು ಹಾಗೂ ಪಾನ್ ಮಾಡುವ ವಿಧಾನ ಬೇರೆ ಪಾನ್ ಶಾಪ್ ಗಳಿಗಿಂತ ಭಿನ್ನವಾಗಿದೆ. ಇನ್ನು ಪಾನ್ ಗೆ ಬಳಸುವ ಅಡಿಕೆಯನ್ನು ನಾವು ಕತ್ತರಿಸುವ ರೀತಿ ಕರ್ನಾಟಕದಲ್ಲಿ ಬೇರೆ ಯಾವ ಶಾಪ್ ನಲ್ಲೂ ಕತ್ತರಿಸಲ್ಲ ಅಂತಾ ಖುಷಿಯಿಂದ ಹೇಳುತ್ತಾರೆ ಬಶೀರ್. ಇನ್ನು ಪಾನ್ ಗೆ ನಾವು ಏಲಕ್ಕಿ ಹಾಗೂ ಲವಂಗವನ್ನು ಬಳಸೋದರಿಂದ ಪಾನ್ ಇನ್ನೂ ರುಚಿಕರವಾಗಿರುತ್ತೆ ಅನ್ನೋದು ಬಶೀರ್ ಅನುಭವ.

ಬಶೀರ್ ಅವರು ಸಂಜೆ ತಮ್ಮ ವ್ಯಾಪಾರ ಆರಂಭಿಸಿದ್ರೂ ಅವರ ಪಾನ್ ಅಂಗಡಿಯಲ್ಲಿ ದಿವೊಂದಕ್ಕೆ ಮೂರು ಸಾವಿರದವರೆಗೂ ಪಾನ್ ಸೇಲಾಗುತ್ತಂತೆ. ಬೆಂಗಳೂರಿನಲ್ಲಿ ಹಾಜಿ ಬಾಬಾ ಪಾನ್ ಅಂಗಡಿಯಲ್ಲಿ ಸಿಗುವಷ್ಟು ಚೆನ್ನಾಗಿರುವ ಪಾನ್ ಬೇರೆಲ್ಲೂ ಸಿಗಲ್ಲ. ಹಾಗಾಗಿ ನಾನು ದೂರವಾದ್ರೂ ಇಲ್ಲಿಯೇ ಬಂದು ಪಾನ್ ತಿನ್ನುತ್ತೇನೆ ಅಂತಾರೆ ಶಾಂತಿನಗರದ ನಿವಾಸಿ ರಿಯಾಜ್.

image


ಅಜ್ಜನಿಂದ ಆರಂಭವಾದ ಪಾನ್ ಅಂಗಡಿಯನ್ನು ತಂದೆ, ಅಣ್ಣನ ಬಳಿಕ ಇದೀಗ ಬಶೀರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹಿರಿಯರ ವೃತ್ತಿ ಹಾಗೇ ಮುಂದುವರೆಯಲಿ ಅನ್ನುವ ಕಾರಣಕಷ್ಟೇ ಅವರು ಈ ಕೆಲಸವನ್ನು ಮಾಡುತ್ತಿದ್ದಾರಂತೆ.ಆದ್ರೆ ಬಶೀರ್ ಬಳಿಕ ಈ ಅಂಗಡಿಯನ್ನು ನಡೆಸಿಕೊಂಡು ಹೋಗೋದಕ್ಕೆ ಯಾರು ಇಲ್ಲವಂತೆ. ಹಾಗಾಗಿ ನಾನು ಇದ್ದಷ್ಟು ದಿನ ಅಂಗಡಿಯನ್ನು ಮುನ್ನಡೆಸುತ್ತೇನೆ. ಉಳಿದದ್ದು ದೇವರಿಚ್ಛೆ ಅನ್ನುತ್ತಾ ನಗು ಬೀರುತ್ತಾರೆ ಬಶೀರ್.