ಡಾಗ್ಸಿಚೀವ್​​ನಲ್ಲಿದೆ ನಾಯಿಗಳಿಗಾಗಿ ಸ್ಪೆಷಲ್​ ಚಿಪ್ಸ್​​..!

ಉಷಾ ಹರೀಶ್​​​

0

ಪ್ರತಿಯೊಬ್ಬರ ಮನೆಯಲ್ಲೂ ಮುದ್ದಾದ ನಾಯಿಗಳನ್ನು ಸಾಕಿರುತ್ತಾರೆ. ಈ ಸೈಬರ್ ಯುಗದಲ್ಲಿ ಮನೆಯಲ್ಲಿರುವ ಸಂಬಂಧಿಕರಿಗಿಂತ ನಾಯಿಗಳೇ ಹೆಚ್ಚು.

ಮನೆಯ ಸದಸ್ಯರಷ್ಟೇ ಪ್ರಾಮುಖ್ಯತೆಯನ್ನು ಅವುಗಳು ಪಡೆದುಕೊಂಡಿರುತ್ತವೆ. ನಾಯಿಗಳಿಗಾಗಿ ತರಾವರಿ ತಿನಿಸುಗಳು, ಅವುಗಳಿಗಾಗಿ ಶ್ಯಾಂಪೂ, ಸೋಪು ಹೀಗೆ ಮನುಷ್ಯ ಏನನ್ನು ಬಳಸುತ್ತಾನೋ ಅವೆಲ್ಲವೂ ನಾಯಿಗಳಿಗೂ ಈಗ ಮಾರುಕಟ್ಟೆಯಲ್ಲಿ ಲಭ್ಯ.

ಕೆಲವರಿಗೆ ನಾಯಿಗಳನ್ನು ಸಾಕುವುದೆಂದರೆ ಪ್ರೀತಿಯ ಜತೆಗೆ ಪ್ಯಾಶನ್ ಸಹ ಆಗಿದೆ. ಬೆಳಗ್ಗೆ ವಾಕಿಂಗ್​ಗೆ ಹೋಗಲು ಸಂಜೆ ಹೊತ್ತು ಹೊರಗಡೆ ಹೋಗಲು ತಾವು ಸಾಕಿದ ನಾಯಿಗಳು ಇರಲೇಬೇಕು. ಅದೇ ರೀತಿ ನೇಪಾಳ ಮೂಲದ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಭೂಪೇಂದ್ರ ಖನಾಲ್​​ಗೆ ನಾಯಿಗಳೆಂದರೆ ಅತೀವ ಪ್ರೀತಿ. ಈ ಪ್ರೀತಿ ಯಾವ ಮಟ್ಟದ್ದು ಎಂದರೆ ಕೆಲವೊಮ್ಮೆ ನಾಯಿಗಳ ಜತೆ ಆಟ ಆಡಿಕೊಂಡು ಕೆಲಸಕ್ಕೆ ಹೋಗುತ್ತಿರಲಿಲ್ಲ. ಮೊದಲೆಲ್ಲಾ ನಾಯಿಗಳಿಗಾಗಿ ಮಾರುಕಟ್ಟೆಯಲ್ಲಿ ಬರುತ್ತಿದ್ದ ತಿನಿಸುಗಳನ್ನು ತಂದು ತಿನ್ನಿಸುವುದು ಅವರ ದಿನಚರಿಯ ಮುಖ್ಯ ಕೆಲಸಗಳಲ್ಲಿ ಒಂದು. ರಜೆ ದಿನಗಳಲ್ಲಿ ನಾಯಿಗಳಿಗಾಗಿ ಕೆಲ ತಿನಿಸುಗಳನ್ನು ತಯಾರು ಮಾಡಲು ಪ್ರಾರಂಭ ಮಾಡಿದರು ಖನಾಲ್.

ಕ್ರಮೇಣ ರಜೆ ದಿನಗಳಲ್ಲಿ ಮಾತ್ರ ತಯಾರಿಸುತ್ತಿದ್ದ ತಿನಿಸುಗಳನ್ನು ಪ್ರತಿ ದಿನ ತಯಾರಿಸಲು ಪ್ರಾರಂಭ ಮಾಡಿದರು. ಈ ಒಂದು ಸಣ್ಣ ಪ್ರಯತ್ನ ಮುಂದೆ ಆಹಾರ ತಯಾರಿಸುವ ಪುಟ್ಟ ಉದ್ಯಮವಾಯಿತು. ಅದು ಮುಂದೆ ಡಾಗ್ಸೀ ಚೀವ್ ಕಂಪೆನಿಯಾಗಿ ಬೆಳೆಯಿತು.

ಈಶಾನ್ಯ ಭಾರತ ಹಾಗೂ ಹಿಮಾಲಯದ ಹಾಲು ಬಳಕೆ:

ನೇಪಾಳದಿಂದ ವಲಸೆ ಬಂದಿರುವ ಭೂಪೇಂದ್ರ ಖನಾಲ್ ತಾವು ಉದ್ಯಮ ಆರಂಭಿಸಿ ಈಶಾನ್ಯ ಭಾರತ ಹಾಗೂ ಹಿಮಾಲಯದ ತಪ್ಪಲಿನ ರೈತರಿಗೆ ಹೊಸ ಬದುಕು ನೀಡಿದ್ದಾರೆ. ಖನಾಲ್ ತಮ್ಮ ಕಂಪನಿಯಲ್ಲಿ ಈಶಾನ್ಯ ಭಾರತ ಮತ್ತು ಹಿಮಾಲಯದ ಯಾಕ್ ಮತ್ತು ಹಸುಗಳ ಹಾಲನ್ನು ಅಲ್ಲಿಂತ ಆಮದು ಮಾಡಿಕೊಂಡು ತಿನಿಸುಗಳನ್ನು ತಯಾರಿಸುತ್ತಾರೆ. ಇದು ಈ ಕಂಪೆನಿಯ ವೈಶಿಷ್ಟ್ಯ. ತಯಾರಿಸಿದ ಸಿದ್ಧ ಆಹಾರವನ್ನು ಶಾಪ್​​ಗಳು ಮತ್ತು ಆನ್​​ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲದೇ ಇದು ಭಾರತದ ಮೊಟ್ಟದ ಮೊದಲ ನಾಯಿ ತಿನಿಸು.

ಸಂಪೂರ್ಣ ದೇಸಿ ಫುಡ್:

ಡಾಗ್ಸೀ ಚೀವ್ ಆಹಾರ ಸಂಪೂರ್ಣ ದೇಸಿ ಆಹಾರವಾಗಿದ್ದು, ನಾಯಿಗಳಿಗೆ ಹೆಚ್ಚಿನ ಪ್ರೊಟೀನ್ ಇದರಿಂದ ಲಭ್ಯವಾಗುತ್ತದೆ. ಈ ಆಹಾರದಿಂದ ನಾಯಿಗಳ ಹಲ್ಲು ಶಕ್ತಿಯುತವಾಗುತ್ತವೆ. ಡಾಗ್ಸೀ ಸಂಪೂರ್ಣ ಆರೋಗ್ಯವಾದ ವಸ್ತುಗಳಿಂದ ತಯಾರಾಗಿದ್ದು, ನಾಯಿಗಳಿಗೆ ಸುಲಭವಾಗಿ ಜೀರ್ಣವಾಗುತ್ತದೆ. ಮತ್ತು ಅವುಗಳ ಜೀರ್ಣ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವಾಗಿಡುತ್ತವೆ. ಅಷ್ಟೇ ಅಲ್ಲದೇ ಈ ತಿನಿಸುಗಳಿಂದ ನಾಯಿಗಳ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಹತ್ತುಕೋಟಿ ರೂಪಾಯಿ ವಹಿವಾಟು ನಿರೀಕ್ಷೆ..

‘ಡಾಗ್ಸೀ ಚೀವ್’ ಕಂಪನಿಯಿಂದ ಖನಾಲ್ ಸದ್ಯಕ್ಕೆ ವಾರ್ಷಿಕ ಐವತ್ತು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲದೆ 1500 ಕ್ಕೂ ಹೆಚ್ಚು ರೈತರಿಗೆ ಆರ್ಥಿಕವಾಗಿ ಭೂಪೇಂದ್ರ ನೆರವಾಗಿದ್ದಾರೆ. ನಾಯಿಗಳ ಮೇಲಿನ ಪ್ರೀತಿಯಿಂದ ಈ ಉದ್ಯಮ ಸ್ಥಾಪನೆ ರೈತರಿಗೆ ನೆರವು ಎಲ್ಲವೂ ಸಾಧ್ಯವಾಯಿತು.ಮುಂದಿನ ದಿನಗಳಲ್ಲಿ ಈ ಡಾಗ್ಸೀ ಚೀವ್ಸ್​​ನ್ನು ವಿದೇಶಗಳಿಗೂ ರಫ್ತು ಮಾಡುವ ಯೋಜನೆ ರೂಪಿಸುತ್ತಿದ್ದಾರೆ. ಅಷ್ಟೇ ಅಲ್ಲದೇ 2016ರ ಹೊತ್ತಿಗೆ ಹತ್ತು ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಹೊಂದಿದ್ದಾರೆ ಭೂಪೇಂದ್ರ ಖನಾಲ್. ಈ ಡಾಗ್ಸೀ ಚೀವ್​​ಗಳು ಅಂಗಡಿಗಳಲ್ಲಿ ಮಾತ್ರವಲ್ಲದೇ ಆನ್​​ಲೈನ್​​ಗಳಲ್ಲೂ ಲಭ್ಯ. ಇನ್ಯಾಕೆ ತಡ ಬೇಗ ಲಾಗ್ ಇನ್ ಆಗಿ ನಿಮ್ಮ ಪ್ರೀತಿಯ ನಾಯಿಗೆ ಹಿಮಾಲಯದ ಹಸು ಹಾಲಿನಿಂದ ತಯರಾದ ತಿನಿಸುಗಳನ್ನು ಆರ್ಡರ್​​ ಮಾಡಿ.

ವೆಬ್​​ಸೈಟ್​​: dogseechew.com


Related Stories

Stories by usha harish