ಫ್ರೆಶ್ ಬಾಕ್ಸ್ : ಇಲ್ಲಿ ಸಿಗೋದೆಲ್ಲಾ ಫ್ರೆಶ್ ಮಾತ್ರ.. !

ಟೀಮ್ ವೈ ಎಸ್

ಫ್ರೆಶ್ ಬಾಕ್ಸ್ : ಇಲ್ಲಿ ಸಿಗೋದೆಲ್ಲಾ ಫ್ರೆಶ್ ಮಾತ್ರ.. !

Thursday December 24, 2015,

3 min Read

ಈಗಿನ ಹೊಸ ಜಮಾನಾದಲ್ಲಿ, ಹುಟ್ಟೂರು ಬಿಟ್ಟು ಬೇರೆ ಯಾವುದೋ ಊರಿಗೆ ವೃತ್ತಿ ಅರಸಿಕೊಂಡು ಹೋಗುವುದು ಸಾಮಾನ್ಯ. ನಗರ ಜೀವನದ ಬ್ಯುಸಿ ಲೈಫ್ ನಲ್ಲಿ ಮುಳುಗಿ ಎಲ್ಲವನ್ನೂ ಮರೆತೂ, ಕುಟುಂಬ ಮತ್ತು ಆಹಾರದ ವಿಚಾರ ಬಂದಾಗ ಎಲ್ಲರೂ ಮೂಲಬೇರನ್ನೇ ಹುಡುಕಿಕೊಂಡು ಹೋಗುತ್ತಾರೆ. ತಮ್ಮ 7 ವರ್ಷಗಳ ಕಾರ್ಪೋರೇಟ್ ಜೀವನದಲ್ಲಿ ರೋಹನ್ ಕುಲಕರ್ಣಿಯವರು ನಾನಾ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಕುಟುಂಬ, ಹುಟ್ಟೂರು ಎಲ್ಲವನ್ನೂ ಮಿಸ್ ಮಾಡಿಕೊಂಡಿದ್ದಾರೆ. ಆದರೆ, ಒಂದು ಸತ್ಯವನ್ನೂ ಅರಿತುಕೊಂಡಿದ್ದಾರೆ. ಏನೆಂದರೆ, ಎಲ್ಲರಿಗೂ ಕುಟುಂಬ ಮತ್ತು ಹುಟ್ಟೂರಿನ ಆಹಾರವನ್ನು ಕೊಡಲು ಸಾಧ್ಯವಾಗದಿದ್ದರೂ, ತಾಜಾ ಹಣ್ಣು ಮತ್ತು ತರಕಾರಿಯನ್ನಂತೂ ಕೊಡಲು ಸಾಧ್ಯ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದರು.

ಇದು ಅರ್ಥವಾಗಿದ್ದೇ ತಡ, ರೋಹನ್ ಅವರು ಫ್ರೆಶ್ ಬಾಕ್ಸ್ ಆರಂಭಿಸಿದರು. ಕರ್ನಾಟಕದ ಗಂಡು ಮೆಟ್ಟಿನ ನೆಲ ಹುಬ್ಬಳ್ಳಿಯಲ್ಲಿ 2015ರ ಸೆಪ್ಟಂಬರ್ನಲ್ಲಿ ಶುರುವಾಯ್ತು ಫ್ರೆಶ್ಬಾಕ್ಸ್. ಮೆಟ್ರೋ ನಗರಗಳಲ್ಲಿ ಬಿಗ್ ಬಾಸ್ಕೆಟ್, ಗ್ರೋಫರ್ಸ್, ಮತ್ತು ಪೆಪ್ಪರ್ಟ್ಯಾಪ್ಗಳ ಅಬ್ಬರವಿದೆ. ಆದರೆ ರೋಹನ್ ತಮ್ಮ ಹುಟ್ಟೂರಿನಲ್ಲೇ ಉದ್ಯಮ ಸ್ಥಾಪಿಸಿದರು. ಇನ್ಪೋಸಿಸ್ ಮತ್ತಿತರ ಐಟಿ ಕಂಪನಿಗಳು ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಕಾರ್ಯಾರಂಭಿಸುವುದರಿಂದ ಭವಿಷ್ಯ ಇದೆ ಎನ್ನುವ ಲೆಕ್ಕಾಚಾರ ಅವರದ್ದು.

image


ಮನೆ ಬಾಗಿಲಿಗೆ ತಾಜಾ ಹಣ್ಣು, ತರಕಾರಿ

ಕೀಟನಾಶಕಗಳನ್ನು ಬಳಸಿದ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಕ್ಯಾನ್ಸರ್ ನಂತಹ ಮಾರಣಾಂತಕ ಕಾಯಿಲೆಗಳು ಬರುತ್ತವೆ ಎನ್ನುತ್ತಾರೆ ರೋಹನ್. ಹೀಗಾಗಿ, ಅವರು ತಮ್ಮ ಸಂಸ್ಥೆ ಮೂಲಕ ತಾಜಾ, ಸಾವಯವ ಹಾಗೂ ರಾಸಾಯನಿಕ ರಹಿತ ಪ್ಯಾಕ್ಡ್ ಹಣ್ಣು ಮತ್ತು ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ವೆಬ್ಸೈಟ್ ಅಥವಾ ಗ್ರಾಹಕ ಸಹಾಯವಾಣಿ ಕರೆಗಳ ಮೂಲಕ ಗ್ರಾಹಕರು ಆರ್ಡರ್ ಗಳನ್ನ ಮಾಡಬಹುದಾಗಿದೆ.

ಚಾಣಕ್ಯ ಮ್ಯಾನೇಜ್ ಮೆಂಟ್ ಸಂಸ್ಥೆಯಿಂದ ರೋಹನ್ ಅವರು ಎಂಬಿಎ ಪದವಿ ಪಡೆದಿದ್ದರು. ಆ ಬಳಿಕ ವಿವಿಧ ಇನ್ಸೂರೆನ್ಸ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು ಎಂಸಿಎಕ್ಸ್ ಸ್ಟಾಕ್ ಎಕ್ಸ್ ಚೇಂಜ್ ಲಿಮಿಟೆಡ್ ನಲ್ಲಿ ಕೆಲಸ ಮಾಡಿದ ಬಳಿಕ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿ ಉದ್ಯಮಿಯಾದರು.

ಶುಕ್ರವಾರದವರೆಗೆ ಫ್ರೆಶ್ ಬಾಕ್ಸ್ ನಲ್ಲಿ ಗ್ರಾಹಕರು ಆರ್ಡರ್ ಮಾಡಬಹುದು. ಅದನ್ನವರು ರೈತರಿಗೆ ಕಳುಹಿಸುತ್ತಾರೆ. ಬಳಿಕ ನವ್ಯೋದ್ಯಮದ ವಾಹನಗಳು ತಾಜಾ ಹಣ್ಣು ಮತ್ತು ತರಕಾರಿಗಳನ್ನು ನೇರವಾಗಿ ಹೊಲ ಅಥವಾ ತೋಟದಿಂದ ತೆಗೆದುಕೊಂಡು ಹೋಗುತ್ತಾರೆ. ಅವುಗಳನ್ನು ತೂಕ ಮಾಡಿ, ತೊಳೆದು, ಕತ್ತರಿಸಿ ಸಂಸ್ಕರಿಸಲಾಗುತ್ತದೆ. ಸಧ್ಯಕ್ಕೆ ಉಗ್ರಾಣ ಇಲ್ಲದೇ ಇರುವ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಯ ಜಾಗದಲ್ಲಿಯೇ ಹಣ್ಣು ತರಕಾರಿಗಳನ್ನು ಸಂಗ್ರಹಿಸಿಡುತ್ತಿದ್ದಾರೆ.

image


ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಫ್ರೆಶ್ ಬಾಕ್ಸ್, ರೈತರಿಗೆ ಅತ್ಯಾಧುನಿಕ ಕೃಷಿ ವಿಧಾನಗಳನ್ನು ಪರಿಚಯಿಸುವ ಮೂಲಕ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತಿದೆ. ಸದ್ಯಕ್ಕೆ 24 ರೈತರ ಜೊತೆ ಫ್ರೆಶ್ ಬಾಕ್ಸ್ ಒಪ್ಪಂದ ಮಾಡಿಕೊಂಡಿದೆ. ಪ್ರತಿದಿನವೂ ಆರ್ಡರ್ ಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತಿರುವುದರಿಂದ ನಿಖರವಾಗಿ ಎಷ್ಟು ಹಣ್ಣು ಮತ್ತು ತರಕಾರಿ ಬೇಕಾಗುತ್ತದೆ ಎಂದು ಅಂದಾಜಿಸಲು ಕಷ್ಟವಾಗುತ್ತಿದೆ ಎನ್ನುತ್ತಾರೆ ರೋಹನ್.

ತಾವು ತಂದ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಿ ಮುಗಿಸಲು ಸಾಧ್ಯವಾಗದಿದ್ದರೆ, ತೆರೆದ ಮಾರುಕಟ್ಟೆಯಲ್ಲಿ ಅದನ್ನು ಮಾರಾಟ ಮಾಡುತ್ತಾರೆ.

ಮಧ್ಯವರ್ತಿಗಳು ಲಾಭದ ದುರಾಸೆಗೆ ಬಿದ್ದಿರುವುದರಿಂದ ರೈತರಿಗೂ ಲಾಭವಾಗುತ್ತಿಲ್ಲ. ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತಿದೆ. ನಮ್ಮ ಗ್ರಾಹಕರ ಸಂಖ್ಯೆ ಹೆಚ್ಚಾದರೆ, ನಾವು ರೈತರಿಗೆ ಕನಿಷ್ಟ ಮೂಲ ಬೆಲೆ ನಿಗದಿಪಡಿಸುವ ಭರವಸೆ ನೀಡಿದ್ದೇವೆ ಎನ್ನುತ್ತಾರೆ ರೋಹನ್.

ತಂತ್ರಜ್ಞಾನ ಬಳಕೆ :

ಫ್ರೆಶ್ ಬಾಕ್ಸ್ ಸಂಸ್ಥೆಯು ಓಝೋನ್ ತಂತ್ರಜ್ಞಾನವನ್ನು ಬಳಸಿ ಹಣ್ಣು ಮತ್ತು ತರಕಾರಿಗಳಲ್ಲಿನ ರಾಸಾಯನಿಕ ಮತ್ತು ಕೀಟನಾಶಕಗಳನ್ನು ಬೇರ್ಪಡಿಸುತ್ತಿದೆ. ಈ ತಂತ್ರಜ್ಞಾನದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಓಝೋನ್ ಮಿಶ್ರಿತ ನೀರಿನಲ್ಲಿ ಇಡಲಾಗುತ್ತದೆ. ಓಝೋನ್ ಅತ್ಯುತ್ತಮ, ಶಕ್ತಿಶಾಲಿ ಆಕ್ಸಿಡೈಜಿಂಗ್ ಏಜೆಂಟ್ ಆಗಿದ್ದು, ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.

ಫ್ರೆಶ್ ಬಾಕ್ಸ್ ಉದ್ಯಮವು ಸ್ಥಾಪನೆಯಾಗಿದ್ದು ಕೇವಲ 3 ಲಕ್ಷ ರೂಪಾಯಿ ವೆಚ್ಚದಲ್ಲಿ. ದಕ್ಷ ಕೆಲಸಗಾರರು ಹಾಗೂ, ಸಹಪಾಲುದಾರರನ್ನು ಪಡೆಯಲು ರೋಹನ್ ಆರಂಭದಲ್ಲಿ ಬಹಳ ಕಷ್ಟಪಟ್ಟಿದ್ದರು. ಸದ್ಯ ಫ್ರೆಶ್ ಬಾಕ್ಸ್ ತಂಡದಲ್ಲಿ 7 ಮಂದಿ ಕೆಲಸ ಮಾಡುತ್ತಿದ್ದಾರೆ. ಒಬ್ಬರು ಬಿಲ್ಲಿಂಗ್ ನೋಡಿಕೊಳ್ಳುತ್ತಿದ್ದರೆ, ಮತ್ತೊಬ್ಬರ ಆರ್ಡರ್ ನೋಡಿಕೊಳ್ಳುತ್ತಿದ್ದಾರೆ.

ಆರಂಭಿಸಿದ ಕೇವಲ 45 ದಿನಗಳಲ್ಲೇ ತಮ್ಮ ಸಂಸ್ಥೆ ವಾರದಿಂದ ವಾರಕ್ಕೆ 100 % ಬೆಳವಣಿಗೆ ಕಾಣುತ್ತಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ 120 ಗ್ರಾಹಕರು ಇದ್ದಾರೆ. ಪ್ರತಿ ತಿಂಗಳು 400 ಆರ್ಡರ್ ಗಳನ್ನ ಪಡೆಯುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಧಾರವಾಡ, ಬೆಳಗಾವಿ ಮತ್ತು ಗೋವಾಗಳಲ್ಲಿ ಫ್ರಾಂಚೈಸಿ ಮಾದರಿಯಲ್ಲಿ ಉದ್ಯಮ ಬೆಳೆಸಲು ಚಿಂತನೆ ನಡೆಸುತ್ತಿದ್ದಾರೆ. ಮುಂದಿನ ವಿತ್ತೀಯ ವರ್ಷದಲ್ಲಿ ಗ್ರಾಹಕರ ಸಂಖ್ಯೆಯನ್ನು 4000ಕ್ಕೆ ಏರಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ. ಆದಾಯದ ಬಗ್ಗೆ ಮಾತನಾಡುವುದಾದರೆ, 5.76 ಕೋಟಿ ಆದಾಯದ ಗುರಿ ಹಾಕಿಕೊಂಡಿದ್ದಾರೆ.

ಮುಂದಿನ ವರ್ಷ ಸಾವಯವ ಹಣ್ಣು-ತರಕಾರಿಗಳನ್ನು ಗ್ರಾಹಕರಿಗೆ ತಲುಪಿಸುವ ಯೋಜನೆ ಸಂಸ್ಥೆಗಿದೆ. ಹೋಂಮೇಡ್ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲಾಗಳನ್ನು ಮಾರಾಟ ಮಾಡುವ ಯೋಚನೆಯೂ ಇದೆ.

ಇತ್ತೀಚೆಗಷ್ಟೇ ದೇಶಪಾಂಡೆ ಫೌಂಡೇಶನ್ ಆಯೋಜಿಸಿದ್ದ ಸ್ಯಾಂಡ್ಬಾಕ್ಸ್ ಸ್ಟಾರ್ಟಪ್ ಚಾಲೆಂಜ್ ನಲ್ಲಿ ಫ್ರೆಶ್ ಬಾಕ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. 72 ಸ್ಪರ್ಧಿಗಳ ಪೈಕಿ ಫ್ರೆಶ್ ಬಾಕ್ಸ್ 1 ಲಕ್ಷ ರೂಪಾಯಿಗಳ ಬಹುಮಾನ ತನ್ನದಾಗಿಸಿಕೊಂಡಿದೆ.

ಲೇಖಕರು -

ಅನುವಾದಕರು -