`ಟೆಸ್ಟಿಂಗ್'ನಲ್ಲಿ ಪಾಸಾದ ಪರಿಮಳಾ ಹರಿಪ್ರಸಾದ್- ಮಹಿಳೆಯರಿಗೆ ಮಾದರಿಯಾದ ಟೆಕ್ಕಿ

ಟೀಮ್​​ ವೈ.ಎಸ್​​.

0

ಸಾಫ್ಟ್​​​ವೇರ್ ಕ್ಷೇತ್ರ ಒಂದು ಸಮುದ್ರವಿದ್ದಂತೆ. ಇದರ ಆಳ ಮತ್ತು ವಿಸ್ತಾರವನ್ನು ಅಳೆಯೋದು ಕಷ್ಟ. ಆದ್ರೆ ಸಾಫ್ಟ್​​​ವೇರ್ ಕ್ಷೇತ್ರಕ್ಕೆ ಕಾಲಿಟ್ಟವರ್ಯಾರೂ ಟೆಸ್ಟರ್ ಆಗಲು ಮುಂದಾಗೊದಿಲ್ಲ. ಬಹುತೇಕ ಎಲ್ಲರೂ ಪ್ರೋಗ್ರಾಮಿಂಗನ್ನೇ ಆಯ್ದುಕೊಳ್ತಾರೆ. ಆದ್ರೆ ಟೆಕ್ಕಿ ಪರಿಮಳಾ ಹರಿಪ್ರಸಾದ್ ಮಾತ್ರ ಇವರೆಲ್ಲರಿಗಿಂತ ಭಿನ್ನ. ಅವರು ಟೆಸ್ಟರ್ ಆಗಿಯೇ ಯಶಸ್ಸು ಗಳಿಸಿದ್ದಾರೆ. ಪರಿಮಳಾ ಅವರ ಕಾರ್ಯವೈಖರಿ ಸುತ್ತಮುತ್ತಲ ಜನರ ಮೇಲೂ ಪರಿಣಾಮ ಬೀರುತ್ತದೆ ಅನ್ನೋದು ಅವರ ಸಂಸ್ಥೆ ಮೂಲ್ಯಾ ಸಾಫ್ಟ್​​ವೇರ್ ಟೆಸ್ಟಿಂಗ್‍ನ ಸಿಇಓ ಪ್ರದೀಪ್ ಸುಂದರರಾಜನ್ ಅವರ ಮೆಚ್ಚುಗೆಯ ನುಡಿ.

40 ಬಾರಿ ಸಂದರ್ಶನ ಎದುರಿಸಿ ತಿರಸ್ಕೃತರಾಗಿದ್ದ ಪರಿಮಳಾ, ಟೆಸ್ಟಿಂಗ್‍ನಲ್ಲಿ ಎಕ್ಸ್​​ಪರ್ಟ್ ಆಗಿದ್ದು ನಿಜಕ್ಕೂ ರೋಚಕ. ಸದ್ಯ ಮೂಲ್ಯಾ ಟೆಸ್ಟಿಂಗ್‍ನ ಟೆಸ್ಟ್ ಲ್ಯಾಬ್ ಹಾಗೂ ಅಕಾಡೆಮಿಯ ಮುಖ್ಯಸ್ಥರಾಗಿ ಪರಿಮಳಾ ಕಾರ್ಯನಿರ್ವಹಿಸ್ತಿದ್ದಾರೆ. ಒರಾಕಲ್‍ನಿಂದ ಹಿಡಿದು ಮೂಲ್ಯಾವರೆಗಿನ ಅವರ 11 ವರ್ಷಗಳ ಪಯಣ ಎಲ್ಲರಿಗೂ ಮಾದರಿ.

ಟೆಸ್ಟಿಂಗ್ ಲೋಕದಲ್ಲಿ ಪರಿಮಳಾ ಪಯಣ

ತಮಗೆ ಟೆಸ್ಟಿಂಗ್ ಅನ್ನೋದು ಪತ್ತೇದಾರಿ ಕಥೆಯಿದ್ದಂತೆ ಎನ್ನುತ್ತಾರೆ ಪರಿಮಳಾ. ಪರಿಮಳಾ 2003ರಲ್ಲಿ ಬೆಂಗಳೂರಿನ ಜೆಎಸ್‍ಎಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಸುಮಾರು 40 ಸಂದರ್ಶನಗಳನ್ನು ಎದುರಿಸಿದ್ದ ಅವರಿಗೆ ಕೆಲಸ ಸಿಕ್ಕಿರಲಿಲ್ಲ. ಕೊನೆಗೆ ಒರಾಕಲ್‍ಗೆ ಕ್ಯಾಂಪಸ್ ಇಂಟರ್​ವ್ಯೂ ನಲ್ಲಿ ಅವರು ಆಯ್ಕೆಯಾದ್ರು. ಟೆಸ್ಟಿಂಗ್ ಬಗ್ಗೆ ಸಹೋದ್ಯೋಗಿಗಳು ಹಾಗೂ ಐಟಿ ಕ್ಷೇತ್ರದ ಉದ್ಯೋಗಿಗಳಲ್ಲಿ ಹೇಳಿಕೊಳ್ಳುವಂಥ ಗೌರವ ಭಾವನೆಯೇನೂ ಇಲ್ಲ ಅನ್ನೋದು ಆಗ ಪರಿಮಳಾ ಅವರಿಗೆ ಅರ್ಥವಾಗಿತ್ತು. ಟೆಸ್ಟಿಂಗ್ ಆಯ್ಕೆ ಮಾಡಿಕೊಂಡ ಪರಿಮಳಾ ಅವರ ನಿರ್ಧಾರವನ್ನು ಸ್ನೇಹಿತರೆಲ್ಲ ಪ್ರಶ್ನಿಸಿದ್ರು.

ಆದ್ರೆ ಪರಿಮಳಾಗೆ ಸಾಫ್ಟ್​​ವೇರ್ ಟೆಸ್ಟಿಂಗ್ ಬಗ್ಗೆ ಅತ್ಯಂತ ಆಸಕ್ತಿ ಹಾಗೂ ಕುತೂಹಲವಿತ್ತು. ಒಂದು ಉತ್ಪನ್ನ ಸರಿಯಾಗಿದೆಯೇ ಅಥವಾ ಅದರಲ್ಲೇನಾದರೂ ಕೊರತೆ ಇದೆಯೇ ಅನ್ನೋದನ್ನು ಒಬ್ಬ ಟೆಸ್ಟರ್ ಮಾತ್ರ ಹೇಳಬಲ್ಲ. ಆದ್ರೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವರೇ ಕಡಿಮೆ ಅಂತಾರೆ ಅವರು.

ಸಾಫ್ಟ್​​ವೇರ್ ಟೆಸ್ಟಿಂಗ್ ಅನ್ನೋದು ಒಂದು ನುರಿತ ಕಲೆ. ಇದಕ್ಕೆ ಪರಿಶ್ರಮ ಬೇಕೇ ಬೇಕು. ಆಸಕ್ತಿ, ಧೈರ್ಯ ಹಾಗೂ ನೈಪುಣ್ಯತೆ ಇದ್ದರೆ ಒಳ್ಳೆಯ ಟೆಸ್ಟರ್ ಆಗಬಹುದು. ಒಂದು ಉತ್ಪನ್ನ ಅದನ್ನು ಅಭಿವೃದ್ಧಿಪಡಿಸಿದವರ ಪಾಲಿಗೆ ಮಗುವಿದ್ದಂತೆ. ಆ ಉತ್ಪನ್ನ ಸರಿಯಾಗಿದೆಯೇ ಅನ್ನೋದನ್ನು ಪರಿಶೀಲಿಸುವ ಗುರುತರ ಜವಾಬ್ದಾರಿ ಟೆಸ್ಟರ್ ಮೇಲಿರುತ್ತೆ. ಆದ್ರೆ ಜನರು ಈ ಕೆಲಸದಲ್ಲಿ ಬಹಳ ಬೇಗ ಬೇಸರಗೊಳ್ಳುತ್ತಾರೆ ಅನ್ನೋದು ಪರಿಮಳಾ ಅವರ ಅಭಿಪ್ರಾಯ.

ಕಲಿಕೆ ಬರೀ ಪ್ರಮಾಣಪತ್ರಕ್ಕಾಗಿಯಲ್ಲ...ಜೀವಮಾನ ಪ್ರಕ್ರಿಯೆ

ಟೆಸ್ಟಿಂಗ್ ಬಗ್ಗೆ ಇನ್ನಷ್ಟು ಕಲಿಯಬೇಕಿತ್ತು ಅನ್ನೋ ಹಂಬಲ ಅವರಿಗಿದೆ. ಪ್ರೋಗ್ರಾಮಿಂಗ್‍ನಲ್ಲಿ ನುರಿತಿದ್ರೆ ಟೆಸ್ಟಿಂಗ್ ಕೂಡ ಬಲು ಸರಳ. 2008ರಿಂದೀಚೆಗೆ ಪರಿಮಳಾ ಹತ್ತಾರು ಕಾನ್ಫರೆನ್ಸ್​​​ಗಳಲ್ಲಿ ಭಾಗಿಯಾಗಿದ್ದಾರೆ. ಟೆಸ್ಟಿಂಗ್ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಸಂಬಂಧ ಬ್ಲಾಗ್ ಒಂದನ್ನು ಆರಂಭಿಸಿದ್ದಾರೆ. ಟೆಸ್ಟಿಂಗ್ ಬಗ್ಗೆ ಆಸಕ್ತರಿಗೆ ಪಾಠ ಹೇಳಿಕೊಡ್ತಿದ್ದಾರೆ.

ಸಲಹೆಗಾರರು ಹಾಗೂ ಸಹೋದ್ಯೋಗಿಗಳಿಂದ ಪ್ರಾಮಾಣಿಕ ಪ್ರತಿಕ್ರಿಯೆ ಪಡೆಯೋದೇ ಬಹುದೊಡ್ಡ ಸವಾಲು ಎನ್ನುತ್ತಾರೆ ಪರಿಮಳಾ. ಆದ್ರೆ ಮೂಲ್ಯಾದಲ್ಲಿ ತಮಗೆ ಪ್ರೋತ್ಸಾಹ ಸಿಕ್ಕಿದೆ ಅನ್ನೋದನ್ನು ಸಂತೋಷದಿಂದ ಹೇಳಿಕೊಂಡಿದ್ದಾರೆ. 15 ವರ್ಷಗಳಿಂದ ಅವರಲ್ಲಿ ಕಡಿಮೆಯಾಗದ ಏಕೈಕ ವಿಚಾರ ಅಂದ್ರೆ ಕುತೂಹಲ. ಟೆಸ್ಟಿಂಗ್ ಎಂಜಿನಿಯರ್ ಆಗಿದ್ರೂ ಮತ್ತಷ್ಟು ತಿಳಿದುಕೊಳ್ಳಬೇಕೆಂಬ ಕುತೂಹಲ ಅವರಲ್ಲಿ ಜಾಸ್ತಿಯಾಗಿದೆ. ಕಲಿಕೆ ಅನ್ನೋದು ಬರೀ ಪ್ರಮಾಣಪತ್ರಕ್ಕಾಗಿಯಲ್ಲ, ಅಜೀವ ಪ್ರಕ್ರಿಯೆ ಅನ್ನೋದು ಅವರ ಅಭಿಮತ.

ಟೆಸ್ಟಿಂಗ್ ಮೀರಿದ ಬದುಕು..!

ನಾವು ನಮ್ಮ ಅನುಕೂಲಕ್ಕಾಗಿ ಬಳಸುತ್ತಿರುವ ಪ್ರತಿಯೊಂದು ವಸ್ತುವೂ ಬೇರೊಬ್ಬರಿಂದ ಪರೀಕ್ಷಿಸಲ್ಪಟ್ಟಿರುತ್ತದೆ. ಮುಂದಿನ ಪೀಳಿಗೆಗಾಗಿ ತಾವು ಕೂಡ ಕೈಲಾದಷ್ಟು ಕೊಡುಗೆ ನೀಡ್ತಿರೋದಾಗಿ ಪರಿಮಳಾ ಹೇಳಿಕೊಳ್ತಾರೆ. ಪರಿಮಳಾ ಅವರ ಬಗ್ಗೆ ವಿವರಿಸಲು ಇರುವ ಪದಗಳೆಂದ್ರೆ ನಾಯಕತ್ವ, ಪ್ರಾಮಾಣಿಕತೆ, ಸತ್ಯನಿಷ್ಠೆ ಮತ್ತು ಪರಿಶ್ರಮ. ಟೆಸ್ಟಿಂಗ್ ಹೊರತುಪಡಿಸಿದ್ರೆ ಪ್ರಯಾಣ ಹಾಗೂ ರುಚಿಕರ ತಿನಿಸುಗಳನ್ನು ಟೇಸ್ಟ್ ಮಾಡೋದು ಅವರ ನೆಚ್ಚಿನ ಹವ್ಯಾಸ. ಇತ್ತೀಚೆಗೆ ಯೋಗಾಭ್ಯಾಸವನ್ನೂ ಅವರು ಮಾಡ್ತಿದ್ದಾರೆ. ಮಕ್ಕಳು ಹಾಗೂ ಕುಟುಂಬದವರಿಂದಲೂ ಪರಿಮಳಾ ಅವ್ರಿಗೆ ಪ್ರೋತ್ಸಾ ಸಿಕ್ತಿದೆ.

ತಂತ್ರಜ್ಞಾನದಲ್ಲಿ ಮಹಿಳೆಯ ಸಾಧನೆ..

ಇಡೀ ಕುಟುಂಬದಲ್ಲಿ ಉನ್ನತ ಶಿಕ್ಷಣ ಪಡೆದವರಂದ್ರೆ ಪರಿಮಳಾ ಒಬ್ಬರೇ. ಎಲ್ಲರಿಗೂ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿತ್ತು. 26 ವರ್ಷಗಳವರೆಗೆ ವಿವಾಹ ಬಂಧನಕ್ಕೆ ಒಳಗಾಗದೇ ಇದ್ದ ಪರಿಮಳಾ ಅವರಿಗೆ ಮಹಿಳಾ ಸ್ವಾತಂತ್ರ್ಯದ ಅರಿವಿದೆ. ಮದುವೆಯಾಗಿ ಅಡುಗೆ ಮನೆ ಸೇರಿದ ಮೇಲೆ ಹೊರಗೆ ಹೋಗಿ ದುಡಿಯುವ ಮಹಿಳೆಯರ ಸಂಖ್ಯೆ ಕಡಿಮೆ. ಅಂದುಕೊಂಡಿದ್ದನ್ನು ಸಾಧಿಸಲು ಸಂಸಾರ ಹಾಗೂ ವೃತ್ತಿ ಎರಡನ್ನೂ ತೂಗಿಸಿಕೊಂಡು ಹೋಗುವುದು ದೊಡ್ಡ ಸವಾಲು. ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಿದ್ರೂ ಈ ಪರಿಸ್ಥಿತಿ ಬದಲಾಗೋದಿಲ್ಲ. ಪಕ್ಷಪಾತ ಧೋರಣೆಯನ್ನು ಕೈಬಿಟ್ಟಾಗ ಮಾತ್ರ ಸ್ತ್ರೀ ಸ್ವಾತಂತ್ರ್ಯಕ್ಕೊಂದು ಅರ್ಥ ಬರುತ್ತೆ ಅಂತಾ ಪರಿಮಳಾ ಪ್ರತಿಪಾದಿಸಿದ್ದಾರೆ.

ಪರಿಮಳಾ ಮೂಲ್ಯಾ ಟೆಸ್ಟಿಂಗ್‍ನ ಮೊದಲ ಮಹಿಳಾ ಉದ್ಯೋಗಿಯೂ ಹೌದು.

ಪರೀಕ್ಷೆ ಮುಗೀತು...

ನೀವು ಏನು ಮಾಡ್ತಿದ್ದೀರಾ? ಯಾತಕ್ಕಾಗಿ ಮಾಡ್ತಿದ್ದೀರಾ ಅನ್ನೋದನ್ನು ಅರಿತುಕೊಳ್ಳಬೇಕು. ಹಣಕ್ಕಾಗಿ ದುಡಿಯುತ್ತೀದ್ದೀರೋ ಅಥವಾ ಸಾಮಾಜಿಕ ಕಾಳಜಿಯಿಂದ ಕೆಲಸ ಮಾಡುತ್ತದ್ದೀರೋ ಅನ್ನೋದರ ಬಗ್ಗೆ ಸ್ಪಷ್ಟತೆಯಿರಲಿ ಎನ್ನುತ್ತಾರೆ ಪರಿಮಳಾ. ಗುರಿ ಸ್ಪಷ್ಟವಾಗಿದ್ರೆ ಸಾಧನೆ ಕಠಿಣವಲ್ಲ ಅನ್ನೋದು ಅವರ ಬದುಕಿನ ಸೂತ್ರ.

Related Stories