ಶತಾಯುಷಿ ಅಜ್ಜಿಯ ಚಿನ್ನದ ಓಟ..

ಟೀಮ್ ವೈ.ಎಸ್.ಕನ್ನಡ 

ಶತಾಯುಷಿ ಅಜ್ಜಿಯ ಚಿನ್ನದ ಓಟ..

Wednesday August 31, 2016,

2 min Read

ಆಕೆ ಶತಾಯುಷಿ. ಆಕೆಗೀಗ 100 ವರ್ಷ. ಆದ್ರೆ ವಯಸ್ಸಾಗಿರೋದು ದೇಹಕ್ಕೆ ಹೊರತು ಆಕೆಯ ಪ್ರತಿಭೆಗಾಗಲಿ, ಉತ್ಸಾಹಕ್ಕಾಗಲಿ, ಹುಮ್ಮಸ್ಸಿಗಾಗಲಿ ಅಲ್ಲ. ವಯಸ್ಸು ನೂರಾಗಿದ್ರೂ ಅವರ ಉತ್ಸಾಹ ಮಾತ್ರ 21ರ ಹರೆಯದಂತಿದೆ. ಸಾಧನೆಗಂತೂ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಹೌದು ನಾವ್ ಹೇಳ್ತಾ ಇರೋದು ಭಾರತದ ಅಥ್ಲೀಟ್ ಮನ್ ಕೌರ್ ಅವರ ಬಗ್ಗೆ. ಚಂಡೀಗಢ ಮೂಲದ 100 ವರ್ಷ ವಯಸ್ಸಿನ ಮನ್ ಕೌರ್, ಕೆನಡಾದ ವ್ಯಾಂಕೋವರ್​ನಲ್ಲಿ ನಡೆದ ಅಮೆರಿಕನ್ಸ್ ಮಾಸ್ಟರ್ಸ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದರ ಜೊತೆಜೊತೆಗೆ ವಿಶ್ವದ ಕೋಟ್ಯಂತರ ಮಂದಿಯ ಹೃದಯವನ್ನೂ ಗೆದ್ದಿದ್ದಾರೆ.

image


ಅಮೆರಿಕನ್ಸ್ ಮಾಸ್ಟರ್ಸ್ ಗೇಮ್ಸ್, ವಯೋವೃದ್ಧರಿಗಾಗಿಯೇ ನಡೆದ ರನ್ನಿಂಗ್ ರೇಸ್. ಮನ್ ಕೌರ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ರು. ಒಂದೂವರೆ ನಿಮಿಷಗಳಲ್ಲಿ 100 ಮೀಟರ್ ಓಡುವ ಮೂಲಕ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ರು. 100 ವರ್ಷ ವಯಸ್ಸಿನ ವೃದ್ಧೆ ಜಿಂಕೆಮರಿಯಂತೆ ಓಡುತ್ತಿದ್ರೆ, 70-80 ವರ್ಷ ವಯಸ್ಸಿನವರೆಲ್ಲ ಬೆರಗುಗಣ್ಣಿನಿಂದ ನೋಡುತ್ತಿದ್ರು. ಮನ್ ಕೌರ್ ಈ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಂಡ ಏಕೈಕ ಮಹಿಳಾ ಅಥ್ಲೀಟ್ ಆಗಿದ್ದರು. ಗೆಲುವು ಯಾವಾಗಲೂ ಖುಷಿ ಕೊಡುತ್ತೆ ಅನ್ನೋದು ಅವರ ಹೆಮ್ಮೆಯ ನುಡಿ.

ಮನ್ ಕೌರ್ ಹುಟ್ಟಾ ಅಥ್ಲೀಟ್ ಅಲ್ಲ, ಚಿಕ್ಕ ವಯಸ್ಸಿನಲ್ಲೇ ಕ್ರೀಡೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರಲಿಲ್ಲ. ಅವರು ಮೊದಲು ರನ್ನಿಂಗ್ ರೇಸ್ನಲ್ಲಿ ಪಾಲ್ಗೊಂಡಿದ್ದು 93ರ ಹರೆಯದಲ್ಲಿ. ಹೌದು 93 ವರ್ಷ ವಯಸ್ಸಾಗಿದ್ದಾಗ ಮನ್ ಕೌರ್ ಅವರ ಪುತ್ರ ಗುರುದೇವ್ ಸಿಂಗ್ ರನ್ನಿಂಗ್ ರೇಸ್ನಲ್ಲಿ ಪಾಲ್ಗೊಳ್ಳುವಂತೆ ತಾಯಿಗೆ ಪ್ರೋತ್ಸಾಹ ನೀಡಿದ್ರು. ನಿಮಗೆ ಕಾಲು ನೋವಿಲ್ಲ, ಹೃದಯ ಸಮಸ್ಯೆಯಿಲ್ಲ, ಯಾವುದೇ ಖಾಯಿಲೆ ಇಲ್ಲದೇ ಇರೋದ್ರಿಂದ ಆರಾಮಾಗಿ ಓಡಬಹುದೆಂದು ಧೈರ್ಯ ತುಂಬಿದ್ದರು. ಅಸಲಿಗೆ ಗುರುದೇವ್ ಸಿಂಗ್ ಕೂಡ ಒಬ್ಬರು ಅಥ್ಲೀಟ್. ಇದೀಗ 78 ವರ್ಷದ ಗುರುದೇವ್ ಸಿಂಗ್ ಅವರಿಗೂ ತಾಯಿ ಮನ್ ಕೌರ್ ಹೆಮ್ಮೆ ತಂದಿದ್ದಾಳೆ. ಭಾರತಕ್ಕೆ ಮರಳಿ ತಾವು ಪ್ರಶಸ್ತಿ ಗೆದ್ದ ಸಂತಸ ಹಂಚಿಕೊಳ್ಳುವ ಕಾತರ ಅವರಲ್ಲಿದೆ ಎನ್ನುತ್ತಾರೆ ಗುರುದೇವ್ ಸಿಂಗ್.

ಮನ್ ಕೌರ್ ಚಿನ್ನದ ಪದಕ ಗೆದ್ದಿರುವುದು 100 ಮೀಟರ್ ಓಟದಲ್ಲಿ ಮಾತ್ರವಲ್ಲ. ಜಾವಲಿನ್ ಥ್ರೋ ಮತ್ತು ಶಾಟ್ಪುಟ್ನಲ್ಲಿ ಕೂಡ ಚಿನ್ನದ ಪದಕ ಗೆದ್ದಿದ್ದಾರೆ. ಮಾಸ್ಟರ್ಸ್ ಗೇಮ್ಸ್​ನಲ್ಲಿ 20ಕ್ಕೂ ಹೆಚ್ಚು ಪದಕ ಗೆಲ್ಲುವತ್ತ ಮನ್ ಕೌರ್ ಮುಂದಡಿ ಇಟ್ಟಿದ್ದಾರೆ. ಮನ್ ಕೌರ್ ಅವರ ಆರೋಗ್ಯದ ಗುಟ್ಟು ಸರಿಯಾದ ಡಯಟ್ ಮತ್ತು ವ್ಯಾಯಾಮ. ಹಾಗಾಗಿಯೇ 100ನೇ ವಯಸ್ಸಿನಲ್ಲೂ ಮನ್ ಕೌರ್ ಗಟ್ಟಿಮುಟ್ಟಾಗಿದ್ದಾರೆ. ಸಾಧನೆಗೆ ವಯಸ್ಸು ಅಡ್ಡಿಯಲ್ಲ ಅನ್ನೋದನ್ನು ಮನ್ ಕೌರ್ ಯುವ ಪೀಳಿಗೆಗೆ ಸಾರಿ ಹೇಳಿದ್ದಾರೆ. 

ಇದನ್ನೂ ಓದಿ...

ಆರೋಗ್ಯದ ಹಿಂದಿದೆ ಮೇಕೆ ಹಾಲಿನ ರಹಸ್ಯ..!

ಭಾರತದಲ್ಲಿ ನೀರಿನ ಸಮಸ್ಯೆ ಯಾರಿಗೆ ಶಾಪ..?


    Share on
    close