ರೆಮೋ ಅನ್ನುವ ಚಿಟಪಟ ಮಾತಿನ ಸಿಂಗರ್​​...

ವಿಶ್ವಾಸ್​

0

ಶ್ರೀಮತಿ ರೇಖಾ ಮೋಹನ್.. ಥಟ್ಟನೆ ಈ ಹೆಸರನ್ನು ಹೇಳಿದರೆ ನಮ್ಮಲ್ಲಿ ಬಹುತೇಕರಿಗೆ ಇವರು ಯಾರು ಅನ್ನುವುದು ತಿಳಿಯುವುದಿಲ್ಲ. ರೆಮೋ ಅಂದರೆ ಕೂಡಲೆ ನೆನಪಾಗುತ್ತದೆ ಅದೊಂದು ಮುಖ, ಅದೊಂದು ದೇಹ, ಅದೊಂದು ಚಟುವಟಿಕೆಯ ವ್ಯಕ್ತಿತ್ವ, ಅದೊಂದು ಸುಶ್ರಾವ್ಯ ಧ್ವನಿ. ಖಾಸಗಿವಾಹಿನಿ ನಡೆಸಿ ಕೊಡುವ ಕಾರ್ಯಕ್ರಮವೊಂದರಲ್ಲಿ ಸೌಂಡ್ ಪೊಲ್ಯೂಷನ್ ಅಂತಲೇ ಫೇಮಸ್​ ಆಗಿರುವ ಮ್ಯೂಸಿಕಲ್ ಟೀಂನ ಸಾರಥಿ  ರೆಮೋ ಅಲಿಯಾಸ್ ರೇಖಾ ಮೋಹನ್. ವಾಹಿನಿಯ ಕಾರ್ಯಕ್ರಮದಲ್ಲಿ ಈ ಪ್ರತಿಭಾವಂತೆಯ ಗಾಯನ ಸುಧೆ ಆಗಾಗ ತೇಲಿಬರುತ್ತದೆ. ಅಷ್ಟರಮಟ್ಟಿಗೆ ಸುಪ್ರಸಿದ್ಧರಾಗಿರುವ ಗಾಯಕಿ ರೆಮೋ ಈ ಸಾಲಿನ ವನಿತಾ ದಿನಾಚರಣೆಯ ಪ್ರಯುಕ್ತ ಯುವರ್​ಸ್ಟೋರಿ ಅಭಿನಂದಿಸುವ ಸಾಧಕಿ.

ಗಾಯನ ಕ್ಷೇತ್ರಕ್ಕೆ ರೆಮೋ ಕಾಲಿಟ್ಟಿದ್ದು ತೀರಾ ಎಳೆಯ ವಯಸ್ಸಿನಲ್ಲಿ. ಕನ್ನಡದ ಬಹುತೇಕರಿಗೆ ತಿಳಿದಿಲ್ಲ, ಚಿನ್ನಾರಿ ಮುತ್ತ ಚಿತ್ರದ ‘ರೆಖ್ಖೆ ಇದ್ದರೆ ಸಾಕೇ’, ‘ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು’ ಅನ್ನುವ ಎವರ್​ಗ್ರೀನ್ ಗೀತೆಯನ್ನು ಹೇಳಿದ ಅಂದಿನ ಬಾಲಕಿ ರೇಖಾಳೇ ಇಂದಿನ ರೆಮೋ. ತಮ್ಮ ಮೂರನೆಯ ವಯಸ್ಸಿನಲ್ಲಿಯೇ ಹಾಡುಗಾರಿಕೆ ಆರಂಭಿಸಿದ ರೇಖಾ ಮಕ್ಕಳ ಸಾಕ್ಷಿ, ರಕ್ಷಕರೇ ಭಕ್ಷಕರು, ಹೃದಯ ಬಂಧನ ಮುಂತಾದ ಚಲನಚಿತ್ರಗಳಲ್ಲಿ ಸೋಲೋ ಹಾಡುಗಳನ್ನು ಹೇಳಿದ್ದರು. ಅವರ ಗಾಯನದ ಆಸಕ್ತಿಗೆ ನೀರೆರೆದವರು ಮಹಾನ್ ಸಂಗೀತ ಸಾಧಕರು ಎಸ್.ಜಾನಕಿ, ಎಸ್‌.ಪಿ ಬಾಲಸುಬ್ರಹ್ಮಣ್ಯಂ. ಆದರೆ ರೇಖಾ ತಮ್ಮ ಗಾಯನ ಕಲಿಕೆಯ ಪ್ರಧಾನ ಗುರು ಅಂತ ಭಾವಿಸುವುದು ಸಾಹಿತ್ಯ ಬ್ರಹ್ಮ, ಸಂಗೀತ ವಿರಾಟ ಹಂಸಲೇಖ ಅವರನ್ನು. ಪ್ರಸಿದ್ಧ ಹಿನ್ನೆಲೆ ಸಂಗೀತಗಾರ ಇಳೆಯರಾಜ, ಆರ್.ಪಿ ಪಟ್ನಾಯಕ್ ಮುಂತಾದವರೊಂದಿಗೆ ಕೋರಸ್‌ನಲ್ಲಿ ಹಾಡಿರುವ ಹೆಗ್ಗಳಿಕೆಯನ್ನು ರೇಖಾ ಹೊಂದಿದ್ದಾರೆ. ಭಾವಗೀತೆಗಳಿಗೆ ಜೀವ ತುಂಬಿದ ಗಾಯಕ ಸಿ.ಅಶ್ವಥ್ ಜೊತೆಗೆ ಹಾಡಿದ ಹತ್ತು ಹಲವು ಸಿಡಿಗಳಲ್ಲಿ ರೆಮೋರ ಸುಶ್ರಾವ್ಯ ಸ್ವರವಿದೆ.

4 ಸೆಪ್ಟೆಂಬರ್ 1981ರಲ್ಲಿ ಮಂಗಳಾ ಹಾಗೂ ಅಂಜನ್ ಕುಮಾರ್ ದಂಪತಿಗಳಿಗೆ ಮಗಳಾಗಿ ಹುಟ್ಟಿದ ರೇಖಾರದ್ದು, ಸಂಗೀತದ ಹಿನ್ನಲೆಯಿದ್ದ ಕುಟುಂಬ. ರೇಖಾರ ತಾಯಿ ಮಂಗಳಾ ಆ ಕಾಲದಲ್ಲಿಯೇ ಕನ್ನಡದ ಉಷಾ ಉತ್ತಪ್, ಜ್ಯೂನಿಯರ್ ಎಲ್.ಆರ್ ಈಶ್ವರಿ ಅನ್ನುವ ಶ್ರೇಯ ಹೊಂದಿದ್ದ ಗಾಯಕಿ. ಅವರು ಹಳ್ಳಿಮೇಷ್ಟ್ರು, ಚೈತ್ರದ ಪ್ರೇಮಾಂಜಲಿ ಮುಂತಾದ ಹಲವು ಸಿನಿಮಾಗಳಲ್ಲಿ ಹಾಡಿದ್ದರು. ಇನ್ನು ಇವೆಂಟ್ ಮ್ಯಾನೇಜ್​ಮೆಂಟ್​​ನಲ್ಲಿ ಸಿದ್ಧಹಸ್ತರು ರೇಖಾರ ತಂದೆ ಅಂಜನ್ ಕುಮಾರ್ ಸ್ವಂತದ್ದೊಂದು ಆರ್ಕೆಸ್ಟ್ರಾ ಇಟ್ಟುಕೊಂಡಿದ್ದರು. ತಂದೆಯ ತಾಯಿ ಅಂದರೆ ರೇಖಾರ ಅಜ್ಜಿ ಶಾರದಾದಾಸಿ, ದೇವರ ನಾಮಗಳನ್ನು ರಚಿಸಿ ಸ್ವತಃ ತಾವೇ ರಾಗ ಸಂಯೋಜಿಸಿ ಹಾಡುತ್ತಿದ್ದರು.

ಬಿಕಾಂ ಡಿಗ್ರಿ ಪಡೆದಿರುವ ರೆಮೋ ಎನ್‌ಐಟಿಯಲ್ಲಿ ಡಿಪ್ಲೊಮಾ ಪಡೆದಿದ್ದಾರೇ. ಹಂಸಲೇಖಾ ಗರಡಿಯಲ್ಲಿ ಪಳಗಿದ್ದ ಮೋಹನ್ ಜೊತೆಗೆ ಮದುವೆಯಾದರು. ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಕೆಲಕಾಲ ಉದ್ಯೋಗ ನಡೆಸಿದರು. ಕೆಲಕಾಲ ಗಾಯನ ಕ್ಷೇತ್ರದಿಂದ ದೂರವಿದ್ದ ರೆಮೋ ಹರಿಕೃಷ್ಣ ಸಂಗೀತ ನಿರ್ದೇಶನದ ಚಿತ್ರವೊಂದಕ್ಕೆ ಟ್ರ್ಯಾಕ್ ಸಿಂಗರ್ ಆಗುವ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ರು. ‘ಮಾಯದಂಥ ಮಳೆ' ಚಿತ್ರದ ಮೂಲಕ ರೆಮೋ ಸ್ವತಂತ್ರ ಸಂಗೀತ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಗೀತರಚನೆ, ಸಂಗೀತ ನಿರ್ದೇಶನ, ಗಾಯನ ಎಲ್ಲವನ್ನೂ ನಿರ್ವಹಿಸುವ ಮೂಲಕ ರೇಖಾ ಮೋಹನ್ ಗಾಯನ ಕ್ಷೇತ್ರದ ಆಲ್​ರೌಂಡರ್ ಆಗಲಿದ್ದಾರೆ. ಹೊಸ ತಲೆಮಾರಿನ ಗಾಯಕಿಯರಾದ ಅನುರಾಧಾ ಭಟ್, ಆಕಾಂಕ್ಷ ಬಾದಾಮಿ, ಅರ್ಚನಾ ರವಿ, ಲಕ್ಷ್ಮೀ, ಶಿಲ್ಪಾ ಮುಂತಾದವರು ಈ ಚಿತ್ರದಲ್ಲಿ ರೆಮೋ ಮ್ಯೂಸಿಕಲ್ ನೋಟ್ಸ್​​ಗಳಿಗೆ ಧನಿಗೂಡಿಸಿದ್ದಾರೆ. ರೆಮೋ ಅದೆಂತಹ ಚಟುವಟಿಕಾಶಿಲರು ಅನ್ನುವುದಕ್ಕ ಸಾಕ್ಷಿ ಮಹಿಳಾ ಗಾಯಕಿಯರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಅವರು ಆರಂಭಿಸಿರುವ ‘‘ರೆಮೋಸ್‌ ಮ್ಯೂಸಿಕ್‌ ಸ್ಪಾರ್ಕ್‌' ಅನ್ನುವ ಮಹಿಳಾ ಬ್ಯಾಂಡ್. ಇವರ ಈ ಬ್ಯಾಂಡ್ 2014ರ ಕೆಐಎಂಎ(ಕೀಮಾ) ಬೆಸ್ಟ್ ಮ್ಯೂಸಿಕ್ ಬ್ಯಾಂಡ್ ಪ್ರಶಸ್ತಿ ಪಡೆದುಕೊಂಡಿದೆ.

ಗಾಯನ ರಂಗದ ದಣಿವರೆಯದ ರೆಮೋ ಸಾಧನೆಗೆ ಸ್ವರಸಾಧಕಿ, ಗಾನಯೋಗಿ ಪಂಚಾಕ್ಷರಿ ಗವಾಯಿ ಪ್ರಶಸ್ತಿ ಸೇರಿದಂತೆ ಅನೇಕ ಮನ್ನಣೆಗಳು ದೊರಕಿದೆ. ಫೇರ್ ಎಂಡ್ ಲವ್ಲೀ, ಡಿಬೇಟ್, ಶ್ರೀ ಸಾಯಿ, ದೇವತೆ ಮುಂತಾದ ಕನ್ನಡದ ಕೆಲವು ಸಿನಿಮಾಗಳಿಗೆ ರೆಮೋ ಸಾಹಿತ್ಯ ರಚಿಸಿದ್ದಾರೆ. ಗೆಳತಿ ಎನ್ನಲೇ, ಬೆಂಗಳೂರು ಹುಡುಗೀರು ಮುಂತಾದ ಮ್ಯೂಸಿಕಲ್ ಆಲ್ಬಂಗಳಿಗೆ ಹಾಡುಗಳನ್ನು ಬರೆದು ಧ್ವನಿಯಾಗಿದ್ದಾರೆ. ಕಿರುತೆರೆಯಲ್ಲೂ ಕಾಣಿಸಿಕೊಂಡ ರೆಮೋ ಕೆಲವು ವರ್ಷಗಳ ಹಿಂದೆ ಈ ಟಿವಿಯಲ್ಲಿ ಪ್ರಸಾರವಾದ ಹಂಸಲೇಖ ನಿರ್ದೇಶನದ ‘ಪ್ರೀತಿಗಾಗಿ' ಧಾರವಾಹಿಯ 30ಕ್ಕೂ ಹೆಚ್ಚು ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರೇಖಾ ತಮ್ಮ ಪತಿ ಮೋಹನ್​ರೊಂದಿಗೆ ತಮ್ಮ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಧಾರಾವಾಹಿಗಳು, ಶಾರ್ಟ್ ಫಿಲಂಗಳಿಗೆ ರಾಗ ಸಂಯೋಜನೆಯಲ್ಲಿ ನಿರತರಾಗಿದ್ದಾರೆ. ಕವಿತೆ ಬರೆಯುವುದು ರೆಮೋರವರ ಇನ್ನೊಂದು ಮೆಚ್ಚಿನ ಹವ್ಯಾಸ. ಇದೇ ಅವರಿಗೆ ಈಗೀಗ ಚಿತ್ರಗಳಿಗೆ ಗೀತಸಾಹಿತ್ಯ ರಚನೆಗೆ ನೆರವಾಗ್ತಿದೆ. ಸಂಗೀತ, ಗಾಯನದೊಟ್ಟಿಗೆ ಅದ್ಭುತವಾದ ಹಾಸ್ಯ ಪ್ರಜ್ಞೆ ಹೊಂದಿರುವ ರೇಖಾ ಮೋಹನ್ ಜೊತೆಗೆ ಯುವರ್​ಸ್ಟೋರಿ ನಡೆಸಿದ ಸಂದರ್ಶನ ಇಲ್ಲಿದೆ.

ಯುವರ್​ಸ್ಟೋರಿ: ಬಾಲಗಾಯಕಿಯಾಗಿ ಚಿನ್ನಾರಿ ಮತ್ತ ಚಿತ್ರದ ಮೂಲಕ ಗಾಯನ ಕ್ಷೇತ್ರಕ್ಕೆ ಬಂದವರು ತಾವು. ಈ ಕ್ಷೇತ್ರದ ಕಡೆಗೆ ಆಬ್ಸೆಷನ್ ಬೆಳೆದಿದ್ದು ಹೇಗೆ? ನೀವಾಗೇ ಇಚ್ಛೆ ಪಟ್ಟಿದ್ದೋ ಅಥವಾ ಪೋಷಕರ ಒತ್ತಾಸೆಯೋ?

ರೇಖಾ ಮೋಹನ್: ನಾನು ಚಿಕ್ಕವಳಿದ್ದಾಗ ಚೆನ್ನಾಗಿ ಹಾಡುತ್ತಿದ್ದೆ ಅನ್ನೋ ಕಾರಣಕ್ಕೆ ಅಪ್ಪ ಹೆಚ್ಚು ಉತ್ತೇಜನ ಕೊಟ್ಟರು. ತಂದೆಯದ್ದೇ ಆರ್ಕೆಸ್ಟ್ರಾ ಇತ್ತು. ಅಮ್ಮನಿಗೆ ನಾನು ಓದಿಕೊಂಡಿರಬೇಕು ಅನ್ನುವ ಆಸೆ ಇತ್ತು. ಮುಖ್ಯವಾಗಿ ನನಗೆ ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಆಸಕ್ತಿಯಿತ್ತು. ನನಗೆ ಚಿಕ್ಕವಳಿದ್ದಾಗ ಹಾಡಲು ಇಷ್ಟವೇ ಇರುತ್ತಿರಲಿಲ್ಲ. ನನಗೆ ಹಾಡುವ ಆಸೆ ಹೆಚ್ಚಾಗಿದ್ದೆ 23ನೇ ವರ್ಷದಲ್ಲಿ ಅದೂ ನನ್ನ ಮದುವೆಯಾದ ನಂತರ. ನನ್ನ ಪತಿಯೂ ಗಾಯಕರಾಗಿದ್ದು ಇದಕ್ಕೆ ಕಾರಣವಿರಬಹುದು. ಬಾಲ್ಯ ಹಾಗೂ ತಾರುಣ್ಯದಲ್ಲಿ ಹಾಡುತ್ತಿದ್ದೆನಾದರೂ ಆಬ್ಸೆಷನ್ ಅನ್ನುವುದು ಹುಟ್ಟಿಕೊಂಡಿದ್ದು ಮದುವೆಯ ನಂತರ. ಮುಂದೆ ಇದೇ ವೃತ್ತಿಯಾಗಿ ಇದೇ ಬದುಕಾಯಿತು.

ಯುವರ್​ಸ್ಟೋರಿ:  ಓರ್ವ ಗೃಹಿಣಿಯಾಗಿ ನಿಮ್ಮ ದೈನಂದಿನ ಬದುಕು ಹೇಗಿರುತ್ತದೆ?

ರೆಮೋ: ನಮ್ಮ ಮನೆಯಲ್ಲಿ ಅಡುಗೆ ನಾನೇ ಮಾಡಬೇಕು. ಮನೆಕೆಲಸ ಮಾಡಲೇ ಬೇಕು. ಇಂತಹ ಅನುಭವಗಳು ನಿಜಕ್ಕೂ ಸವಾಲಿನದ್ದು. ಮನೆಗೆಲಸ ಹಾಗೂ ಹೊರಗಿನ ಕೆಲಸದ ಮಧ್ಯೆ ಬ್ಯಾಲೆನ್ಸ್ ಮಾಡುವುದು ಕಷ್ಟವೇ. ಆದರೆ ನಾವು ಹೊರಗೆ ಹೋಗಿ ಕೆಲಸ ಮಾಡುವ ಗೃಹಿಣಿಯರಿಗಿಂತ ಮನೆಯಲ್ಲಿ ಇರುವ ಹೌಸ್​ವೈಫ್​​ಗಳ ಕಷ್ಟ ದೊಡ್ಡದು ಅವರ ತ್ಯಾಗವೂ ದೊಡ್ಡದು. ನಾವು ಏನೋ ಮಾಡಿಟ್ಟು ಬಂದರೆ ಮನೆಯವರು ಬಡಿಸಿಕೊಳ್ಳುತ್ತಾರೆ. ಆದರೆ ಗೃಹಿಣಿಯರು ಮನೆಯ ಅಷ್ಟೂ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರಲ್ಲ ಅವರ ಆ ಸಹನೆ ಹಾಗೂ ಶ್ರದ್ಧೆ ಗ್ರೇಟ್..

ಯುವರ್​ಸ್ಟೋರಿ: ಓರ್ವ ತಾಯಿಯಾಗಿ ನಿಮ್ಮ ಅನುಭವದ ಬಗ್ಗೆ ಏನಾದರೂ ಹೇಳುವುದಾರೆ?

ರೆಮೋ: ತಾಯಿಯ ಅನುಭವ ಎಲ್ಲಾ ಹೆಣ್ಣಿಗೂ ಅನನ್ಯ ಅನುಭವ. ನನಗೆ ಮಗಳಿದ್ದಾಳೆ. ಹೆಣ್ಣು ಮಗುವೇ ಆಗಬೇಕೆಂದು ಹರಕೆ ಹೊತ್ತು ಹುಟ್ಟಿದ ಕೂಸದು. ಅವಳೂ ನನ್ನಂತೆಯೇ ಸ್ವಭಾವ, ಈಗಲೇ ಹಾಡುತ್ತಾಳೆ. ಬಹುತೇಕ ಎಲ್ಲಾ ಕಾಂಪಿಟೇಶನ್​​ಗಳಲ್ಲಿ ಗೆದ್ದು ಬೀಗ್ತಾಳೆ. ಅವಳನ್ನು ಎಲ್ಲರೂ ಹೈಪರ್ ಆ್ಯಕ್ಟೀವ್ ಅನ್ನುತ್ತಾರೆ. ವಿಶೇಷ ಅಂದರೆ ಅವಳಿಗೂ ಈಗ ಹಾಡಲು ಇಷ್ಟವಿಲ್ಲ. ಮಗಳೊಂದಿಗೆ ಹಾಡುವುದು, ಆಡುವುದು, ಸುತ್ತುವುದು ಇದೆ. ನಾನು ನನ್ನ 10 ವರ್ಷದ ಮಗಳಿಗೆ ಅಮ್ಮ ಅನ್ನುವುದಕ್ಕಿಂತ ಆಪ್ತ ಸ್ನೇಹಿತೆ ಅಂದರೆ ಸೂಕ್ತವಾಗುತ್ತದೆ.

ಯುವರ್​ಸ್ಟೋರಿ: ಮನೆಯ ಕೆಲಸ ಹೊರಗಿನ ಕಾರ್ಯಕ್ರಮ, ರೆಕಾರ್ಡಿಂಗ್ ಇತ್ಯಾಧಿ.. ಇವುಗಳ ನಡುವೆ ಬ್ಯಾಲನ್ಸ್ ಮಾಡುವುದು ಕಷ್ಟ ಅನ್ನಿಸುತ್ತಿದೆಯಾ?

ರೆಮೋ: ಬಹಳಷ್ಟು ವೇಳೆ ಅತ್ಯಂತ ಕಷ್ಟ ಅನಿಸುತ್ತದೆ. ನಮ್ಮ ಬಹುತೇಕ ಶೋಗಳೂ ಸಂಜೆ ಇಲ್ಲವೇ ರಾತ್ರಿ ಇರುತ್ತದೆ. ನಿದ್ದೆ ಸರಿಯಾಗಿ ಆಗುವುದಿಲ್ಲ. ಇದರಿಂದ ಸಹನೆ ಕಡಿಮೆ ಆಗುತ್ತದೆ. ಕೆಲವು ಬಾರಿ ಮಗಳ ಬಾಲ್ಯ ಮಿಸ್ ಮಾಡಿಕೊಂಡಂತೆ ಅನ್ನಿಸುತ್ತದೆ. ಅವಳಿಗೆ ಈಗ ಪ್ರಶ್ನೆ ಕೇಳುವ ವಯಸ್ಸು. ಆದರೆ ಅವಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ವ್ಯವಧಾನವೇ ಇಲ್ಲವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ನನ್ನ ವೈಯಕ್ತಿಕ ಬದುಕಿನಲ್ಲಿ ಏನೋ ಮಿಸ್ ಮಾಡಿಕೊಂಡಿದ್ದೇನೆ ಅನ್ನಿಸಿದ್ದೂ ಇದೆ. ಆದರೂ ಎರಡನ್ನೂ ಸಮಾನವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಯುವರ್​ಸ್ಟೋರಿ: ನಿಮ್ಮ ಸಾಧನೆಗೆ ಪತಿ ಹಾಗೂ ಮನೆಯವರ ಪ್ರೋತ್ಸಾಹ:

ರೆಮೋ: ಮೊದಲು ನನಗೆ ಹಾಡಲು ಉತ್ತೇಜಿಸಿದ್ದು ಅಪ್ಪ, ಹಾಡು ಕಲಿಸಿದ್ದು ಅಮ್ಮ. ಅವರ ಆಸೆಯಂತೆ ಹಾಡಲು ಶುರುಮಾಡಿದೆ. ಮದುವೆಯಾಗಿದ್ದು ಮೋಹನ್ ಅನ್ನುವ ಗಾಯಕನನ್ನೇ ಹಾಗಾಗಿ ಹಾಡುವ ವಾತಾವರಣ ಮನೆಯಲ್ಲಿ ಎಂದಿಗೂ ಇತ್ತು. ಅಮ್ಮನ ಪ್ರೋತ್ಸಾಹ ಹಾಗೂ ಪತಿಯ ಕಡೆಯಿಂದಲೂ ಸಾಕಷ್ಟು ಉತ್ತೇಜನ ಸಿಕ್ಕಿದ್ದು ನನ್ನ ಸಾಧನೆಗೆ ನೆರವಾಯಿತು. ಗಂಡನ ಅಕ್ಕಂದಿರು ಸಹ ನನಗೆ ಸಾಕಷ್ಟು ಸಹಾಯ ಮಾಡಿದ್ದರು. ಬಹಳಷ್ಟು ವೇಳೆ ಕಾರ್ಯಕ್ರಮದ ನಿಮಿತ್ತ ಬೇರೆ ಬೇರೆ ಊರುಗಳಿಗೆ, ಔಟ್ ಆಫ್ ಸ್ಟೇಟ್, ವಿದೇಶಗಳಿಗೆ ಹೋದಾಗ ನನ್ನ ಮಗಳನ್ನು ಅವರು ನೋಡಿಕೊಂಡರು. ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತ ಅನೇಕ ನನ್ನ ಆತ್ಮೀಯ ಮಹಿಳಾ ಗೆಳತಿಯರಿದ್ದಾರೆ. ಅವರೆಲ್ಲರ ಹಾರೈಕೆ ಹಾಗೂ ಬೆಂಬಲವೇ ನನ್ನ ಇಂದಿನ ಸಾಧನೆಗೆ ಕಾರಣ. ಇವರಿಲ್ಲದಿದ್ದರೇ ನಾನು ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಯುವರ್​ಸ್ಟೋರಿ: ನೀವು ಪ್ರತಿನಿತ್ಯ ಸ್ಮರಿಸುವ ನಿಮ್ಮ ಆದ್ಯ ಗುರು? ನಿಮಗೆ ಅವಕಾಶ ಕೊಟ್ಟವರು ಯಾರಾದರೂ ಇದ್ದರೆ ಅವರ ಬಗ್ಗೆ?

ರೆಮೋ: ನನ್ನ ತಾಯಿ ಮಂಗಳ. ಅವರೇ ನನ್ನ ಗುರು. ನನಗೆ ಹಾಡಲು ಕಲಿಸಿದ್ದೇ ಅವರು. ನನಗೆ ಅವಕಾಶ ಕೊಟ್ಟವರು ಬಹಳಷ್ಟು ಮಂದಿ. ಹಾಗಂತ ನನಗೆ ಸುಲಭವಾಗಿ ಅವಕಾಶ ಸಿಗಲಿಲ್ಲ. ಮಹಿಳೆ ಏನಾದರೂ ಮಾಡುತ್ತಾಳೆಂದರೆ ಅದನ್ನು ಸಹಿಸದವರು ಅನೇಕರಿರುತ್ತಾರೆ. ಬದುಕಿನಲ್ಲಿ ಸಾಕಷ್ಟು ಸೋಲು, ನಿರಾಸೆ, ಅವಮಾನಗಳನ್ನು ನೋಡಿಯೇ ಬೆಳೆದವಳು ನಾನು.

ಯುವರ್​ಸ್ಟೋರಿ: ರೆಮೋ ಅಂದರೆ ಹಾಸ್ಯಪ್ರಜ್ಞೆ ಚಟುವಟಿಕೆಯವರು ಅನ್ನುವ ಮಾತಿದೆ. ನಿಮ್ಮ ಬಿಡುವಿನ ವೇಳೆ ಏನು ಮಾಡುತ್ತೀರಿ?

ರೆಮೋ: ನಾನು ಮಕ್ಕಳೊಂದಿಗೆ ಬೆರೆಯಲು ಹೆಚ್ಚು ಇಷ್ಟಪಡ್ತೀನಿ. ನಮ್ಮ ಏರಿಯಾದ ಮಕ್ಕಳಿಗೆ ನನ್ನ ಕಂಡರೆ ಅಕ್ಕರೆ. ನಾನು ಅವರೊಂದಿಗೆ ಕ್ರಿಕೆಟ್, ಬುಗುರಿ, ಶಟಲ್ಕಾಕ್ ಆಡುತ್ತೇನೆ. ಮಗಳೊಂದಿಗೆ ಹಾಗೂ ಆಕೆಯ ಗೆಳೆಯರೊಂದಿಗೆ ಸುತ್ತಲು ನನಗಿಷ್ಟ. ಬಿಡುವಿನ ಸಮಯದಲ್ಲಿ ಸಿನಿಮಾ ನೋಡುತ್ತೇನೆ. ನನಗೆ ಸಿನಿಮಾಗಳಂದರೆ ಪ್ರಾಣ. ರಿಲೀಸ್ ಆಗುವ ಯಾವ ಸಿನಿಮಾಗಳನ್ನು ಬಿಡುವಿದಿಲ್ಲ. ಯಾರ ಬರದಿದ್ದರೇ ಒಬ್ಬಳೇ ಹೋಗಿ ಸಿನಿಮಾ ನೋಡಿ ಬರುತ್ತೇನೆ. ಪ್ರತಿದಿನ ಹಂಸಲೇಖಾರವರ ಕನಿಷ್ಠ 20 ಹಾಡನ್ನಾದರೂ ಕೇಳುತ್ತೇನೆ.

ಯುವರ್​ಸ್ಟೋರಿ: ಮಹಿಳಾ ಗಾಯಕಿಯಾಗಿ ತೆರೆಮರೆಯಲ್ಲಿರುವ ಅಪರೂಪದ ಮಹಿಳಾ ಗಾಯಕಿ/ಸಾಧಕಿಯರನ್ನು ಬೆಳಕಿಗೆ ತರಲು ಈವರೆಗಿನ ನಿಮ್ಮ ಪ್ರಯತ್ನದ ಬಗ್ಗೆ ಹೇಳ್ತೀರಾ?

ರೆಮೋ: ಸಂಸೈ ಅನ್ನುವ ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದೇವೆ. ಹೀಗಂದರೇ ಸಂಸಾರಕ್ಕೂ ಸೈ, ಸಂಗೀತಕ್ಕೂ ಸೈ ಅಂತರ್ಥ. ಈ ಟ್ರಸ್ಟ್ ಮೂಲಕ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದೇವೆ. ಶಾಲೆಯ ಫೀಸ್ ಕಟ್ಟುವುದು, ಪುಸ್ತಕಗಳನ್ನು ವಿತರಿಸುವುದು, ಆಸಕ್ತ ಹೆಣ್ಣುಮಕ್ಕಳಿಗೆ ಉಚಿತವಾಗಿ ಸಂಗೀತ ಕಲಿಸುವುದು ಮುಂತಾದ ಜನಪರ ಕೆಲಸಗಳನ್ನು ಮಾಡ್ತಿದ್ದೇವೆ. ಆಗಾಗ ಟ್ಯಾಲೆಂಟ್ ಹಂಟ್ ಮಾಡುತ್ತಿದ್ದೇವೆ. ಸಂಗೀತ ಹಾಡುವ ಹಾಗೂ ಉಪಕರಣಗಳನ್ನು ನುಡಿಸುವ ಎಲೆಮರೆಯ ಪ್ರತಿಭೆಗಳನ್ನು ಹುಡುಕಿ ಮುಖ್ಯವಾಹಿನಿಗೆ ಕರೆತರುತ್ತಿದ್ದೇವೆ. ಈ ವರ್ಷ ನಮಗೆ ಇಬ್ಬರು ಹೊಸ ಪ್ರತಿಭೆಗಳು ಸೇರಿಕೊಂಡಿದ್ದಾರೆ. ಒಬ್ಬರು ಡ್ರಮ್ಮರ್ ಇನ್ನೊಬ್ಬರು ಗಿಟಾರ್ ವಾದಕರು. ಇವರಿಗೆ ತರಬೇತಿ ನೀಡಿ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ.

ಯುವರ್​ಸ್ಟೋರಿ: ನಿಮ್ಮ ಬಹುನಿರೀಕ್ಷಿತ ಹಾಗೂ ಯಶಸ್ವೀ ಮಹಿಳಾ ಮ್ಯೂಸಿಕಲ್ ಬ್ಯಾಂಡ್ ‘ರೆಮೋಸ್ ಮ್ಯೂಸಿಕ್ ಸ್ಪಾರ್ಕ್’ ಬಗ್ಗೆ ಹೇಳುವುದಾದರೇ?

ರೆಮೋ: 2013ರಲ್ಲಿ ರೆಮೋಸ್ ಮ್ಯೂಸಿಕ್ ಸ್ಪಾರ್ಕ್ಸ್ ಆರಂಭಿಸಿದೆವು. ಈ ಯೋಚನೆ ಬಂದಿದ್ದು ನಾನು ಕಾಲೇಜು ಕಲಿಯುತ್ತಿದ್ದಾಗ. ಆಗ ಬಾಯ್ಸ್ ಅನ್ನುವ ಸಿನಿಮಾ ಬಂದಿತ್ತು. ನಾನು ಅದಕ್ಕೆ ಗರ್ಲ್ಸ್ ಯೂನಿಯನ್ ಮಾಡಲು ಇಷ್ಟಪಟ್ಟಿದ್ದೆ. ಇಂತದ್ದೊಂದು ಪ್ರಯತ್ನ ಯಶಸ್ವಿಯಾಗುತ್ತದೆ ಅನ್ನುವ ನಂಬಿಕೆ ನಮ್ಮ ತಂಡದ ಸದಸ್ಯರಿಗಿರಲೇ ಇಲ್ಲ. ನಮ್ಮ ಮ್ಯೂಸಿಕಲ್ ಆಲ್ಬಂ ರಿಲೀಸ್ ಸಿನವೇ ಆತುರಾತುರದಲ್ಲಿ ಈ ಬ್ಯಾಂಡ್ ಲಾಂಚ್ ಮಾಡಿದೆವು. ಆದರೆ ಮಾರನೆಯ ದಿನದ ಪತ್ರಿಕೆಗಳಲ್ಲಿ ಇದರ ಬಗ್ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. 2014ರಲ್ಲಿ ಕೀಮಾ ಅವಾರ್ಡ್ಸ್ನಲ್ಲಿ 5 ಪ್ರಮುಖ ಬ್ಯಾಂಡ್ಗಳ ಜೊತೆ ನಮ್ಮ ಬ್ಯಾಂಡ್ ಪೈಪೋಟಿ ನೀಡಿತ್ತು. ರಘು ದೀಕ್ಷಿತ್, ವಿ.ಮನೋಹರ್, ಪ್ರವೀಣ್ ಗೋಡ್ಕಿಂಡಿ, ಪ್ರವೀಣ್ ಡಿ ರಾವ್ ತೀರ್ಪುಗಾರರಾಗಿದ್ದ ಆ ಲೈಫ್ ಪರ್ಫಾಮೆನ್ಸ್ ಸ್ಫರ್ಧೆಯಲ್ಲಿ ನಮ್ಮ ತಂಡಕ್ಕೆ ಮೊದಲ ಸ್ಥಾನ ಲಭಿಸಿತ್ತು. ಇದು ನಮ್ಮೆಲ್ಲರಲ್ಲೂ ಆತ್ಮವಿಶ್ವಾಸ ತುಂಬಿತು.

ಯುವರ್​ಸ್ಟೋರಿ: ಸಂಸೈ ಟ್ರಸ್ಟ್ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮ ಮಾಡುತ್ತಿದ್ದೀರಾ ಇದರ ಬಗ್ಗೆ ಮಾಹಿತಿ ನೀಡಿ;

ರೆಮೋ: ಸಂಸೈ ಟ್ರಸ್ಟ್ ಇರುವುದೇ ಪ್ರತಿಭೆಗಳ ಅನ್ವೇಷಣೆಗಾಗಿ. ಪ್ರತೀವರ್ಷ ನಾವು ಸಾಧಕರನ್ನು ಹುಡುಕಿ ಸಾಧಕ ಅನ್ನುವ ಹೆಸರಿನಲ್ಲಿಯೇ ಪ್ರಶಸ್ತಿ ನೀಡುತ್ತೇವೆ. ಈ ಬಾರಿಯ ಕಾರ್ಯಕ್ರಮದಲ್ಲಿ ಸುಮಾರಾಣಿ ಅನ್ನುವ ಮ್ಯಾಂಡಲೀನ್ ವಾದಕಿ, ವೀಣಾ ಮೋಹನ್ ಹಾಗೂ ಪೂಜಾ ಚೆನ್ನೂರ್ರವರಿಗೆ ಪ್ರಶಸ್ತಿ ನೀಡುತ್ತಿದ್ದೇವೆ. ಈ ಸಲ ನಾಲ್ಕು ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ ಸಹಾಯಧನ, ಪುಸ್ತಕ ಹಾಗೂ ಇನ್ನಿತರೆ ಶಿಕ್ಷಣಕ್ಕೆ ಸಂಬಂಧಿಸಿದ ಸ್ಟೇಷನರೀಸ್ ನೀಡುತ್ತಿದ್ದೇವೆ.

ಯುವರ್​ಸ್ಟೋರಿ: ನಿಮ್ಮ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆನ್ನುತಟ್ಟಿ ಹೆಮ್ಮೆಪಟ್ಟುಕೊಳ್ಳುವ ಅನೇಕರಿದ್ದಾರಲ್ಲ, ಅವರಿಗೆ ನಮ್ಮ ಯುವರ್ ಸ್ಟೋರಿ ಮೂಲಕ ಏನು ಹೇಳಲು ಇಷ್ಟಪಡುತ್ತೀರಿ?

ರೆಮೋ: ಅವರ ಈ ಪ್ರೀತಿ-ಬೆಂಬಲಕ್ಕೆ ನಾನು ಸದಾ ಋಣಿ. ಅವರು ಕೊಟ್ಟ ಈ ಸಪೋರ್ಟ್ ಕೇವಲ ನನಗೆ ಮಾತ್ರವಲ್ಲದೇ ಸಾಧನೆಗೆ ತುಡಿಯುವ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಅನ್ನುವುದು ನನ್ನಾಸೆ.

ಯುವರ್​ಸ್ಟೋರಿ: ನಿಮ್ಮ ಪ್ರಕಾರ ಬದುಕು ಅಂದರೆ ಸಂಕ್ಷಿಪ್ತ ವ್ಯಾಖ್ಯಾನ?

ರೆಮೋ: ಖುಷಿ ಹಾಗೂ ಸವಾಲುಗಳು. ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗೆದ್ದಾಗ ಸಹಜವಾಗಿ ಸಿಗುವ ಖುಷಿಯೇ ಬದುಕು.

ಯುವರ್​ಸ್ಟೋರಿ: ಈ ಮಹಿಳಾದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ನೀವು ಹೇಳುವ ಸಂದೇಶ ಏನು?

ರೆಮೋ: ನನ್ ಪ್ರಕಾರಪ್ರತೀ ದಿನವೂ ಮಹಿಳೆಯರ ದಿನಾಚರಣೆಯೇ. ಇನ್ನೊಂದರ್ಥದಲ್ಲಿ ಮಹಿಳೆಯರಿಗೆ ಪ್ರತ್ಯೇಕ ದಿನಾಚರಣೆ ಅಂತ ವರ್ಷಕ್ಕೆ ಒಂದು ಬಾರಿ ಆಚರಿಸುವ ಸಂಪ್ರದಾಯಕ್ಕೆ ನನ್ನ ವಿರೋಧವಿದೆ. ನಿತ್ಯವೂ ದುಡಿಯುವ ಮಹಿಳೆಯರೂ ನಿತ್ಯವೂ ಖುಷಿಯಲ್ಲಿ ಬದುಕಿದರೇ ನಿತ್ಯವೂ ಮಹಿಳಾ ದಿನಾಚರಣೆಯೇ ಅಲ್ಲವೇ..

ಲೇಖನ ಹಾಗೂ ಸಂದರ್ಶನ

ವಿಶ್ವಾಸ್ ಭಾರದ್ವಾಜ್. 

ಇದನ್ನು ಓದಿ

1. ಉದ್ಯಮಿಗಳ ಯಶಸ್ಸಿನ ಕಹಾನಿಗೆ ನಾಂದಿ ಹಾಡಿದ ಶ್ರೀನಿವಾಸ್ …

2. ಏನಾದರು ದಾಖಲೆ ಮಾಡಬೇಕು... ಜಗತ್ತೇ ತಿರುಗಿ ನೋಡಬೇಕು..!

3. ಬ್ರೇಕ್‍ನ ನಂತರ ಮತ್ತೆ ಕೆಲಸಕ್ಕೆ - ಮಹಿಳೆಯರಿಗೆ ನೆರವಾಗುತ್ತಿರುವ 4 ಸಂಸ್ಥೆಗಳು

Related Stories