ಬೀದಿಯಲ್ಲಿ ದಿನಪತ್ರಿಕೆ ಮಾರುತ್ತಿದ್ದ ಶಿವಾಂಗಿ ಈಗ IIT-JEE ಉತ್ತೀರ್ಣೆ.. 

ಟೀಮ್ ವೈ.ಎಸ್.ಕನ್ನಡ 

1

ಕಳೆದ ಮಂಗಳವಾರ ಸೂಪರ್-30 ಖ್ಯಾತಿಯ ಆನಂದ್ ಕುಮಾರ್ ತಮ್ಮ ವಿದ್ಯಾರ್ಥಿನಿಯೊಬ್ಬಳ ವಿಸ್ಮಯಕಾರಿ ಮತ್ತು ಪ್ರೇರಣಾತ್ಮಕ ಕಥೆಯೊಂದನ್ನು ಹಂಚಿಕೊಂಡಿದ್ರು. ಅವಳೇ ಶಿವಾಂಗಿ, ಬೀದಿಯಲ್ಲಿ ತಂದೆಯ ಜೊತೆಗೆ ದಿನಪತ್ರಿಕೆ ಮಾರುತ್ತಿದ್ದ ಹುಡುಗಿಯೀಗ ಐಐಟಿ-ಜೆಇಇ ಪಾಸು ಮಾಡಿದ್ದಾಳೆ.

ಕಷ್ಟದ ಬದುಕಿನಲ್ಲೂ ಛಲ ಬಿಡದೆ ಸಾಧನೆ ಮಾಡಿದ ಶಿವಾಂಗಿ ಬಗ್ಗೆ ಆನಂದ್ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಶಿವಾಂಗಿಯದ್ದು ಅತ್ಯಂತ ಬಡ ಕುಟುಂಬ. ತಂದೆ ಬೀದಿಯಲ್ಲಿ ದಿನಪತ್ರಿಕೆ ಮತ್ತು ಮ್ಯಾಗಝೀನ್ ಮಾರುತ್ತಿದ್ದರು. ಶಿವಾಂಗಿಯದ್ದು ಕೂಡ ಅಪ್ಪನ ಜೊತೆಗೆ ಅದೇ ಕಾಯಕ. ಬಂದ ಪುಡಿಗಾಸಿನಲ್ಲಿ ಜೀವನ ಸಾಗಬೇಕು. ಹಾಗಂತ ಅವಳೇನೂ ಶಿಕ್ಷಣವನ್ನು ಕಡೆಗಣಿಸಲಿಲ್ಲ. ಕಷ್ಟಪಟ್ಟು ಓದುತ್ತಿದ್ಲು. ಉತ್ತರ ಪ್ರದೇಶದ ಕಾನ್ಪುರದಿಂದ 60 ಕಿಮೀ ದೂರದಲ್ಲಿರುವ ದೇಹಾ ಎಂಬ ಚಿಕ್ಕ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿವಾಂಗಿ ಮಾಧ್ಯಮಿಕ ಶಿಕ್ಷಣ ಪೂರೈಸಿದ್ಲು.

ಒಮ್ಮೆ ಶಿವಾಂಗಿ ಸೂಪರ್-30 ಬಗ್ಗೆ ಓದಿದ್ಲು, ಕೂಡಲೇ ಆನಂದ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ಲು. ಹಳ್ಳಿಯ ಈ ಪ್ರತಿಭೆಗೆ ಶೀಘ್ರದಲ್ಲೇ ಸಂಸ್ಥೆಯಲ್ಲಿ ಸ್ಥಾನ ಸಿಕ್ಕಿತ್ತು. ಇಡೀ ವಿಶ್ವದಲ್ಲೇ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆ ಎನಿಸಿಕೊಂಡಿರುವ ಐಐಟಿ-ಜೆಇಇ ಗೆ ಶಿವಾಂಗಿ ತಯಾರಿ ಶುರು ಮಾಡಿದ್ಲು. ಆನಂದ್ ಅವರ ಕುಟುಂಬದ ಜೊತೆಗೂ ಶಿವಾಂಗಿ ಚೆನ್ನಾಗಿ ಹೊಂದಿಕೊಂಡ್ಲು, ಅವರ ತಾಯಿಯನ್ನು ಅಜ್ಜಿ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಶಿವಾಂಗಿ, ಆರೋಗ್ಯ ಹದಗೆಟ್ಟಾಗಲೆಲ್ಲ ಅವರ ಪಕ್ಕದಲ್ಲೇ ಮಲಗಿಕೊಳ್ಳುತ್ತಿದ್ಲು. ಅವರಿಬ್ಬರ ಮಧ್ಯೆ ಅಷ್ಟೊಂದು ಆತ್ಮೀಯತೆ ಬೆಳೆದಿತ್ತು.

ಛಲ ಬಿಡದೆ ಕಷ್ಟಪಟ್ಟು ಓದಿದ ಶಿವಾಂಗಿ ಐಐಟಿ-ಜೆಇಇ ಪಾಸು ಮಾಡಿದ್ದಾಳೆ. ಐಐಟಿ ರೂರ್ಕೀಗೆ ಶಿವಾಂಗಿ ಹೊರಟು ನಿಂತಾಗ ಆನಂದ್ ಅವರ ಇಡೀ ಕುಟುಂಬ ಕಣ್ಣೀರು ಹಾಕಿತ್ತು. ತಮ್ಮ ಸ್ವಂತ ಮಗಳು ದೂರ ಹೋಗುತ್ತಿದ್ದಾಳೋ ಎಂಬಂತಹ ನೋವು ಅವರಿಗೆ. ಇವತ್ತಿಗೂ ಶಿವಾಂಗಿ ಆನಂದ್ ಮತ್ತವರ ಕುಟುಂಬದವರನ್ನು ಮರೆತಿಲ್ಲ. ಆಗಾಗ ಕರೆ ಮಾಡಿ ಮಾತನಾಡ್ತಾಳೆ. ''ಶಿವಾಂಗಿ ತನಗೆ ಉದ್ಯೋಗ ದೊರೆತಿದೆ ಎಂದಾಗ ನಮ್ಮ ಇಡೀ ಕುಟುಂಬ ಖುಷಿಪಟ್ಟಿದೆ, ಸಂಭ್ರಮಾಚರಣೆ ಮಾಡಿದೆ'' ಎನ್ನುತ್ತಾರೆ ಆನಂದ್.

ಶಿವಾಂಗಿಯಂತಹ ಅದೆಷ್ಟೋ ಪ್ರತಿಭಾವಂತ ಮಕ್ಕಳು ನಮ್ಮಲ್ಲಿದ್ದಾರೆ. ಅವರಿಗೆ ಸೂಕ್ತ ಪ್ರೋತ್ಸಾಹ ದೊರೆಯದೆ ಎಲೆಮರೆ ಕಾಯಿಗಳಂತಿದ್ದಾರೆ. ಇನ್ನು ಕೆಲವರು ಬಡತನದಿಂದಾಗಿ ಸರಿಯಾದ ಶಿಕ್ಷಣ ಸಿಗದೆ ಒದ್ದಾಡುತ್ತಿದ್ದಾರೆ. ಅಂಥವರನ್ನು ಗುರುತಿಸಿ ಸರಿಯಾದ ವೇದಿಕೆ ಕಲ್ಪಿಸಿಕೊಟ್ಟರೆ ನಮ್ಮ ರಾಷ್ಟ್ರಕ್ಕೆ ಅವರು ಗೌರವ ತರುವುದರಲ್ಲಿ ಅನುಮಾನವಿಲ್ಲ. 

ಇದನ್ನೂ ಓದಿ.. 

ಕಾರ್​ ಮೈಲೇಜ್​ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ- ಎಂಜಿನಿಯರಿಂಗ್​ ವಿದ್ಯಾರ್ಥಿಗಳ ಸಂಶೋಧನೆ ಬಗ್ಗೆ ಓದಿ..!

ಆಸ್ಟ್ರೇಲಿಯಾದ ವರ್ಷದ ಉದ್ಯಮಿ ಭಾರತದ ಈ 'ಚಾಯ್​ವಾಲಿ'