2016ರಲ್ಲಿ ಇ-ಕಾಮರ್ಸ್ ಕ್ಷೇತ್ರದ ಗೇಮ್ ಚೇಂಜರ್ `ಲಾಜಿಸ್ಟಿಕ್ಸ್'!

ಟೀಮ್​ ವೈ.ಎಸ್​. ಕನ್ನಡ

0

ಫ್ಲಿಪ್‍ಕಾರ್ಟ್ ಜೊತೆ ಪೇಟಿಮ್ ಮಿಲನ, ಸ್ನಾಪ್‍ಡೀಲ್ ಸೇರಿ 8 ಸದಸ್ಯರು ಯುನಿಕಾರ್ನ್ ಕ್ಲಬ್‍ಗೆ ಎಂಟ್ರಿ ಹೀಗೆ ಕೆಲವೊಂದು ಕ್ಷಿಪ್ರ ಬೆಳವಣಿಗೆಗಳೊಂದಿಗೆ ಕಳೆದ ಒಂದು ವರ್ಷದಲ್ಲಿ ಇ-ಕಾಮರ್ಸ್ ಉದ್ಯಮ ಸಿಕ್ಕಾಪಟ್ಟೆ ಪ್ರಚಲಿತದಲ್ಲಿದೆ. `ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಕ್​' ವರದಿಯ ಪ್ರಕಾರ 2025ರ ವೇಳೆಗೆ ಭಾರತದಲ್ಲಿ ಇ-ಕಾಮರ್ಸ್ ಉದ್ಯಮದ ಮೌಲ್ಯ 220 ಬಿಲಿಯನ್ ಡಾಲರ್‍ನಷ್ಟಾಗಲಿದೆ. ಗ್ರಾಹಕರಿಗೆ ಉತ್ಪನ್ನದ ಗುಣಮಟ್ಟ ಎಷ್ಟು ಮಹತ್ವವೋ ಅದೇ ವಿತರಣೆಯ ವೇಗ ಕೂಡ ಅತ್ಯಂತ ಮುಖ್ಯ. ಇ-ಕಾಮರ್ಸ್ ಕಂಪನಿಗಳ ಯಶಸ್ಸಿನಲ್ಲಿ ಲಾಜಿಸ್ಟಿಕ್ಸ್ ವಿಭಾಗದ ಪಾತ್ರ ನಿರ್ಣಾಯಕ ಎಂದರೆ ತಪ್ಪಾಗಲಾರದು.

ಮಾರುಕಟ್ಟೆ ಸಂಶೋಧಕ `ನೊವೊನಸ್'ನ `ಲಾಜಿಸ್ಟಿಕ್ಸ್ ಮಾರ್ಕೆಟ್ ಇನ್ ಇಂಡಿಯಾ 2015-2020' ವರದಿಯ ಪ್ರಕಾರ ಸದ್ಯ ದೇಶದ ಲಾಜಿಸ್ಟಿಕ್ಸ್ ಇಂಡಸ್ಟ್ರಿಯ ಮೌಲ್ಯ 300 ಬಿಲಿಯನ್ ಡಾಲರ್. ಕಡಿಮೆ ವೆಚ್ಚದಲ್ಲಿ ಅತ್ಯಂತ ವೇಗದ ವಿತರಣೆಗೆ ಹೆಚ್ಚು ಆದ್ಯತೆ ಇರುವುದರಿಂದ ಈ ವಲಯದಲ್ಲಿ ಹೊಸತನಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ಇದೆ. ಕಂಪನಿಗಳು ಸದ್ಯ ಇರುವ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಂಡು ಆಟೋಮೇಶನ್‍ಗಾಗಿ ಹೆಚ್ಚು ಹೂಡಿಕೆ ಮಾಡುವ ಅಗತ್ಯವಿದೆ. 2016ರಲ್ಲಿ ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳು ಲಾಜಿಸ್ಟಿಕ್ಸ್ ವಿಭಾಗದಲ್ಲಿನ ಸುಧಾರಣೆಗೆ ಏನು ಮಾಡಬೇಕು? ಇದಕ್ಕಾಗಿ ಏನೇನು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬ ಬಗ್ಗೆ `ಯುವರ್‍ಸ್ಟೋರಿ' ಬೆಳಕು ಚೆಲ್ಲಿದೆ.

2015ರಲ್ಲಿ ಕಲಿತ ಪಾಠ

2015 ಭಾರತದ ಇ-ಕಾಮರ್ಸ್ ಕ್ಷೇತ್ರದ ಲಾಜಿಸ್ಟಿಕ್ಸ್ ವಿಭಾಗಕ್ಕೆ ಹೇಳಿ ಮಾಡಿಸಿದಂತಹ ವರ್ಷವಾಗಿತ್ತು ಅಂದ್ರೆ ತಪ್ಪೇನಿಲ್ಲ. ಯಾಕಂದ್ರೆ ಹಲವಾರು ಕಂಪನಿಗಳ ಎಂಟ್ರಿಯಾಗಿದ್ದು, ಬಂಡವಾಳ ಕೂಡ ಹರಿದು ಬಂದಿದೆ. ಸ್ನಾಪ್‍ಡೀಲ್, ಫ್ಲಿಪ್‍ಕಾರ್ಟ್, ಪೇಟಿಮ್‍ನಂತಹ ಕಂಪನಿಗಳು ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಣಿ ನಿರ್ವಹಣೆಯಲ್ಲಿ ಹೊಸ ರಣತಂತ್ರದ ಮೂಲಕ ಸಂಚಲನ ಸೃಷ್ಟಿಸಿವೆ. ಹೈಪರ್ ಲೋಕಲ್ ಮಾರ್ಗವನ್ನು ಆಯ್ದುಕೊಂಡ ಸ್ನಾಪ್‍ಡೀಲ್, ಉತ್ಪನ್ನಗಳನ್ನು ಆರ್ಡರ್ ಮಾಡಿ ಕೇವಲ ಒಂದು ಗಂಟೆಯೊಳಗೆ ಡೆಲಿವರಿ ಮಾಡುವ `ಸ್ನಾಪ್‍ಡೀಲ್ ಇನ್‍ಸ್ಟಂಟ್' ಅನ್ನು ಲಾಂಚ್ ಮಾಡಿದೆ. 2015ರಲ್ಲಿ 500 ಮಿಲಿಯನ್ ಬಂಡವಾಳ ಗಿಟ್ಟಿಸಿಕೊಂಡಿರುವ ಸ್ನಾಪ್‍ಡೀಲ್, ನಾಲ್ಕು ಗಂಟೆಗಳಲ್ಲಿ ಡೆಲಿವರಿ, ಕಾರ್ಡ್ ಆನ್ ಡೆಲಿವರಿ ಹಾಗೂ 90 ನಿಮಿಷಗಳ ರಿವರ್ಸ್ ಪಿಕ್‍ಅಪ್ ಯೋಜನೆಗಳನ್ನು ಜಾರಿಗೆ ತಂದಿದೆ. 2015ರ ಆರಂಭದಲ್ಲಿ ಆರ್ಡರ್‍ಗಳಲ್ಲಿ ಶೇ.7ರಷ್ಟು ಮಾತ್ರ ಸ್ನಾಪ್‍ಡೀಲ್ ಕೇಂದ್ರದಿಂದ ಪೂರೈಕೆಯಾಗ್ತಿತ್ತು, ವರ್ಷಾಂತ್ಯದ ವೇಳೆಗೆ ಈ ಪ್ರಮಾಣ ಶೇ.60ರಷ್ಟಾಗಿದೆ.

ಅಮೇಝಾನ್ ಕೂಡ 8 ಪೂರೈಕೆ ಕೇಂದ್ರಗಳನ್ನು ತೆರೆದಿದೆ. ಇದರೊಂದಿಗೆ ಭಾರತದ 21 ಕೇಂದ್ರಗಳಲ್ಲಿ ಅಮೇಝಾನ್ ಸ್ವಂತ ಪೂರೈಕೆ ಸ್ಥಳಗಳನ್ನು ಹೊಂದಿದೆ. ಭಾರತದ ಇ-ಕಾಮರ್ಸ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಗ್ರಹ ಸಾಮಥ್ರ್ಯವನ್ನು ಹೊಂದಿದ್ದು, ಅತಿ ದೊಡ್ಡ ಗೋದಾಮನ್ನು ಕೂಡ ಹೊಂದಿದೆ. ಡೆಲಿವರಿ ವೆಚ್ಚ ಕಡಿತಕ್ಕೆ ಇರುವ ಏಕೈಕ ಮಂತ್ರ ಅಂದ್ರೆ ಗ್ರಾಹಕರ ಬೇಡಿಕೆ. ಇದಕ್ಕಾಗಿಯೇ ಫ್ಲಿಪ್‍ಕಾರ್ಟ್ ಪರ್ಯಾಯ ವಿತರಣಾ ಚಾನೆಲ್‍ಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಗ್ರಾಹಕರು ತಮಗೆ ಅನುಕೂಲಕರವಾದ ಸ್ಥಳದಲ್ಲಿ ಉತ್ಪನ್ನಗಳನ್ನು ಪಡೆಯುವ ಸೌಲಭ್ಯ ಕಲ್ಪಿಸಿದೆ. ಆಟೋಮೇಶನ್ ತಂತ್ರಜ್ಞಾನದ ಮೂಲಕ ಪ್ಯಾಕೇಜ್‍ಗಳನ್ನು ಪಿಕ್ ಮಾಡುವ ಜೊತೆಗೆ ನಿರ್ಧಿಷ್ಟ ಸ್ಥಳಗಳಿಗೆ ಕಳುಹಿಸಲು ಯೋಜನೆ ರೂಪಿಸಿದೆ. 2015ರಲ್ಲಿ ವೇಗವಾದ ವಿತರಣೆಗಾಗಿ ಸ್ಥಳೀಯ ನೆಟ್‍ವರ್ಕಿಂಗ್‍ಗೆ ಚಾಲನೆ ಸಿಕ್ಕಿದೆ. ಪೇಟಿಮ್ ಕೂಡ ಮೊಬೈಲ್ ಫೋನ್‍ಗಳಿಗಾಗಿ 2 ಗಂಟೆಗಳ ಡೆಲಿವರಿ ಮಾದರಿಯನ್ನು ಅಳವಡಿಸಿಕೊಂಡಿದೆ. ಇ-ಫುಲ್‍ಫಿಲ್‍ಮೆಂಟ್ ಸೆಂಟರ್‍ಗಳು, ರಿಟರ್ನ್ ಪ್ರೊಸೆಸಿಂಗ್ ಸೆಂಟರ್‍ಗಳನ್ನು ಕೂಡ ಆರಂಭಿಸಿದೆ. ಸ್ಥಳೀಯ ಡೆಲಿವರಿ ಕಂಪನಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ನಮ್ಮ ವಿತರಣಾ ಜಾಲ ವಿಸ್ತರಣೆ ಬಗ್ಗೆ 2015ರಲ್ಲಿ ಹೆಚ್ಚು ಗಮನಹರಿಸಲಾಗಿತ್ತು ಎನ್ನುತ್ತಾರೆ ಪೇಟಿಮ್‍ನ ಉಪಾಧ್ಯಕ್ಷೆ ರೇಣು ಸತ್ತಿ.

ಉತ್ತಮ ವಿತರಣಾ ಸೇವೆ ಕಲ್ಪಿಸಲು ಶಾಪ್‍ಕ್ಲೂಸ್ ಕೂಡ ಅನೇಕ ಕ್ರಮಗಳನ್ನು ಕೈಗೊಂಡಿದೆ. ವೇಗವಾದ ಡೆಲಿವರಿ ಸೇವೆಗಾಗಿ, ವ್ಯಾಪಾರಿಗಳು ಮತ್ತು ಗ್ರಾಹಕರ ನಡುವಣ ಮಾಹಿತಿ ವಿನಿಮಯಕ್ಕಾಗಿ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಇದರ ಪರಿಣಾಮ ವೇಗವಾದ ಸಾಗಣೆ, ರಿಯಲ್ ಟೈಮ್ ಅಪ್‍ಡೇಟ್‍ಗಳು ದೊರೆಯುವಂತಾಗಿದೆ ಎನ್ನುತ್ತಾರೆ ಶಾಪ್‍ಕ್ಲೂಸ್‍ನ ಉಪಾಧ್ಯಕ್ಷ ವಿಶಾಲ್ ಶರ್ಮಾ.

ಇ-ಕಾಮರ್ಸ್‍ನಲ್ಲಿ ವಾಹನಗಳ ಟ್ರ್ಯಾಕಿಂಗ್ ನಿರ್ಣಾಯಕ

ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳದ ಕಾರಣ ಭಾರತದಲ್ಲಿ ಲಾಜಿಸ್ಟಿಕ್ಸ್ ಮಾರುಕಟ್ಟೆ ಅಸಂಘಟಿತವಾಗಿದೆ. ಗ್ರಾಹಕರನ್ನು ತೃಪ್ತಿಪಡಿಸಲು ತಂತ್ರಜ್ಞಾನದ ಅಳವಡಿಕೆ ಅತ್ಯಂತ ಅವಶ್ಯಕ ಅನ್ನೋದು ಸ್ನಾಪ್‍ಡೀಲ್‍ನ ಆಶಿಶ್ ಚಿತ್ರವಂಶಿ ಅವರ ಅಭಿಪ್ರಾಯ. ಸಾಗಣೆ ಬಗ್ಗೆ ಆಗಾಗ ಮಾಹಿತಿ ಪಡೆಯುವ ಸಲುವಾಗಿ ಸ್ನಾಪ್‍ಡೀಲ್ ಥರ್ಡ್‍ಪಾರ್ಟಿ ಪಾಲುದಾರರ ಜೊತೆ ಸೇರಿ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳುತ್ತಿದೆ. ವಾಹನಗಳ ಟ್ರ್ಯಾಕಿಂಗ್‍ಗಾಗಿ ಅಮೇಝಾನ್ ತನ್ನ ಡಿವೈಸ್‍ಗಳಲ್ಲಿ ಅತ್ಯಂತ ವೇಗವಾದ ಮತ್ತು ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕವನ್ನು ಕಲ್ಪಿಸಿದೆ.

ಅತ್ಯಂತ ವೇಗದ ಡೆಲಿವರಿಗಾಗಿ ಅಗತ್ಯ ನಿಯಂತ್ರಣ ಹಾಗೂ ಮಾರ್ಗವನ್ನು ಪ್ಲಾನ್ ಮಾಡಿಕೊಳ್ಳಲು ವಾಹನ ಟ್ರ್ಯಾಕಿಂಗ್ ಅತ್ಯಂತ ಅವಶ್ಯಕ. ತಂತ್ರಜ್ಞಾನ ಸಹಿತ ಪೂರೈಕೆ ಸರಣಿ ಪರಿಸರದ ಸುಧಾರಣೆಗಾಗಿ ಪೇಟಿಮ್ ಲಾಜಿಸ್ಟಿಕ್ಸ್ ಪರಿಹಾರ ಪೂರೈಕೆದಾರ ಸಂಸ್ಥೆ `ಲಾಜಿನೆಕ್ಸ್ಟ್'ನಲ್ಲಿ ಹೂಡಿಕೆ ಮಾಡಿದೆ. ಫ್ಲಿಪ್‍ಕಾರ್ಟ್ ಕೂಡ `ಬ್ಲ್ಯಾಕ್‍ಬಕ್'ನಲ್ಲು ಹೂಡಿಕೆ ಮಾಡಿದ್ದು ಅದರ ಪ್ರಯೋಜನಗಳನ್ನು ಪಡೆಯುತ್ತಿದೆ. ಮುಂದಿನ ವರ್ಷ ಕೂಡ ಮಾಹಿತಿ ಸಂಗ್ರಹಣೆಯ ಕ್ಷಮತೆ ಹೆಚ್ಚಿಸುವ ಬಗ್ಗೆ ಹೆಚ್ಚು ಗಮನಹರಿಸುವುದಾಗಿ ಫ್ಲಿಪ್‍ಕಾರ್ಟ್ ಹೇಳಿಕೊಂಡಿತ್ತು.

ಮಾರಾಟಗಾರರು, ಥರ್ಡ್-ಪಾರ್ಟಿ ಲಾಜಿಸ್ಟಿಕ್ಸ್ ಪಾಲುದಾರರು ಮತ್ತು ಗ್ರಾಹಕರನ್ನು ಮ್ಯಾನ್ಯುವಲ್ ವಿಧಾನಗಳಿಗಿಂತ ತಾಂತ್ರಿಕ ಸುಧಾರಣೆಗಳು ಹೆಚ್ಚು ಪರಿಣಾಮಕಾರಿ ಎನಿಸಿವೆ. ಕಾರ್ಡ್ ಆನ್ ಡೆಲಿವರಿ, ವಿತರಣೆಯ ಎಲೆಕ್ಟ್ರಾನಿಕ್ ಪುರಾವೆ ಸಾಧ್ಯವಾಗಿರುವುದು ಕೂಡ ಇದರಿಂದ್ಲೇ. ಅತಿ ಹೆಚ್ಚು ವಿಳಂಬವಾಗುತ್ತಿರುವುದು ಎಲ್ಲಿ ಎಂಬ ಬಗ್ಗೆ ಲಾಜಿಸ್ಟಿಕ್ಸ್ ಪರಿಹಾರ ಪೂರೈಕೆ ಸಂಸ್ಥೆ `ಲಾಜಿನೆಕ್ಸ್ಟ್', ಪೇಟಿಮ್, ಮಿಂತ್ರಾ, ಅಮೇಝಾನ್ ಸೇರಿದಂತೆ ಹಲವು ಕಂಪನಿಗಳಿಗೆ ಹೀಟ್ ಮ್ಯಾಪ್ ಅನ್ನು ಒದಗಿಸುತ್ತಿದೆ.

``ಅತ್ಯಂತ ಬೇಗನೆ ಉತ್ಪನ್ನಗಳನ್ನು ತಲುಪಿಸಲು ಕೋಲ್ಡ್ ಚೈನ್ ಲಾಜಿಸ್ಟಿಕ್ಸ್ ಪೂರೈಕೆದಾರರ ಜೊತೆ ಸೇರಿ ಕಾರ್ಯನಿರ್ವಹಿಸುತ್ತಿದ್ದೇವೆ. ನಿಗದಿತ ಸಮಯಕ್ಕೆ ಉತ್ಪನ್ನಗಳ ಸಾಗಣೆ ಮತ್ತು ವೇಳಾಪಟ್ಟಿಗಳ ಬಗ್ಗೆ ಶೆಡ್ಯೂಲರ್‍ಗಳು ಮಾಹಿತಿ ಪಡೆಯುತ್ತಾರೆ. ಕೆಲವೊಂದು ಉತ್ಪನ್ನಗಳಿಗೆ ಉಷ್ಣಾಂಶದ ಹೊಂದಾಣಿಕೆಯ ಅಗತ್ಯವಿದ್ದು ಅದಕ್ಕೆ ತಕ್ಕಂತೆ ಸಾಗಣೆ ಮಾಡಲು ಡೆಲಿವರಿ ಬಾಯ್‍ಗಳು ಬಳಸುವ ಆ್ಯಪ್‍ನಲ್ಲೇ ಸೌಲಭ್ಯಗಳನ್ನು ಕಲ್ಪಿಸಿರಲಾಗುತ್ತದೆ'' ಅಂತಾ `ಲಾಜಿನೆಕ್ಸ್ಟ್'ನ ಬ್ಯುಸಿನೆಸ್ ಡೆವಲಪ್‍ಮೆಂಟ್ ಮ್ಯಾನೇಜರ್ ಮನೀಷ್ ಪೋರ್ವಲ್ ಮಾಹಿತಿ ನೀಡಿದ್ದಾರೆ. ವಾಹನಗಳ ಟ್ರ್ಯಾಕಿಂಗ್ ಸೌಲಭ್ಯವಿರುವ ಥರ್ಡ್ ಪಾರ್ಟಿ ಲಾಜಿಸ್ಟಿಕ್ಸ್ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುವುದು `ಶಾಪ್‍ಕ್ಲೂಸ್'ನ ಯೋಜನೆಗಳಲ್ಲೊಂದು. ಭಾರತದಲ್ಲಿ ವೆಹಿಕಲ್ ಟ್ರ್ಯಾಕಿಂಗ್ ಮೊಬೈಲ್ ಮೂಲಸೌಕರ್ಯಗಳನ್ನು ಅವಲಂಬಿಸಿದೆ.

ಟೈರ್-2, ಟೈರ್-3 ನಗರಗಳ ಮಹತ್ವ

3ಜಿ, 4ಜಿ ಸ್ಮಾರ್ಟ್‍ಫೋನ್ ಖರೀದಿಸುವ ಸಾಮಥ್ರ್ಯ ಹೆಚ್ಚಳದಿಂದಾಗಿ ಟೈರ್2 ಮತ್ತು ಟೈರ್ 3 ನಗರಗಳಲ್ಲಿ ಅಧಿಕ ಆರ್ಡರ್‍ಗಳು ಸಿಗುತ್ತಿವೆ. ಸ್ನಾಪ್‍ಡೀಲ್ ಶೇ.60-70ರಷ್ಟು ಆರ್ಡರ್‍ಗಳನ್ನು ಟೈರ್2, ಟೈರ್3 ಸಿಟಿಗಳಿಂದಲೇ ಸಿಗುತ್ತಿದೆ. ಆದ್ರೆ ಫ್ಲಿಪ್‍ಕಾರ್ಟ್‍ಗೆ ಕೇವಲ ಶೇ.20ರಷ್ಟು ಆರ್ಡರ್‍ಗಳು ದೊರೆಯುತ್ತಿವೆ. ಈಶಾನ್ಯ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸ್ನಾಪ್‍ಡೀಲ್ ಪೂರೈಕೆ ಸರಣಿಯನ್ನು ನಿರ್ಮಿಸಿದೆ. ಅತ್ಯಂತ ವಿಸ್ತಾರವಾದ ಪೂರೈಕೆ ಸರಣಿ ಇರುವುದರಿಂದ್ಲೇ ಟೈರ್2, ಟೈರ್ 3 ಸಿಟಿಗಳಿಂದ ಹೆಚ್ಚು ಆರ್ಡರ್‍ಗಳು ಸಿಗುತ್ತಿವೆ.

ಮಾರ್ಗಗಳ ಬಗ್ಗೆ ಸರಿಯಾದ ಚಿತ್ರಣ ಗೊತ್ತಿದ್ದು, ಲೆಕ್ಕಾಚಾರಗಳು ಸರಿಯಾಗಿದ್ರೆ ಅತ್ಯಂತ ವೇಗವಾಗಿ ಡೆಲಿವರಿ ಮತ್ತು ಪಿಕ್ ಅಪ್ ಮಾಡಬಹುದು ಅನ್ನೋ ಅಭಿಪ್ರಾಯ ಫ್ಲಿಪ್‍ಕಾರ್ಟ್‍ನದ್ದು. `ಮ್ಯಾಪ್ ಮೈ ಇಂಡಿಯಾ'ದಲ್ಲಿನ ಹೂಡಿಕೆಯಿಂದ ಕೂಡ ಫ್ಲಿಪ್‍ಕಾರ್ಟ್‍ಗೆ ಪ್ರಯೋಜನವಾಗಿದೆ. ಜೊತೆಗೆ ನಿಖರವಾದ ವಿಳಾಸದ ಅಂಕಿ ಅಂಶಗಳನ್ನಿಟ್ಟುಕೊಳ್ಳುವುದು ಕೂಡ ಅತ್ಯಂತ ಅವಶ್ಯಕ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಮೇಝಾನ್, ಟೈರ್3 ಮತ್ತು ಟೈರ್4 ನಗರಗಳಲ್ಲಿ ನೆಟ್‍ವರ್ಕ್ ವಿಸ್ತರಿಸಲು ಎನ್‍ಜಿಓಗಳ ಜೊತೆ ಸೇರಿ ಪೈಲಟ್ ಪ್ರಾಜೆಕ್ಟ್ ಒಂದನ್ನು ಕೈಗೆತ್ತಿಕೊಂಡಿದೆ. `ಬೇಸಿಕ್ಸ್' ಗ್ರೂಪ್‍ನ ಲಾಜಿಸ್ಟಿಕ್ಸ್ ಸಂಸ್ಥೆ `ಕನೆಕ್ಟ್ ಇಂಡಿಯಾ ಇ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್' ಮೂಲಕ ಈ ಯೋಜನೆಯನ್ನು ಜಾರಿ ಮಾಡ್ತಾ ಇದೆ. ಅಮೇಝಾನ್ ಇಂಡಿಯಾದ ಟ್ರಾನ್ಸ್‍ಪೋರ್ಟೇಶನ್ ಡೈರೆಕ್ಟರ್ ಸ್ಯಾಮ್ಯುಯೆಲ್ ಥಾಮಸ್ ಅವರ ಪ್ರಕಾರ 2015ರಲ್ಲಿ ಶೇ. 65ರಷ್ಟು ಆರ್ಡರ್‍ಗಳು ಟೈರ್2, ಟೈರ್3 ನಗರಗಳಿಂದ್ಲೇ ಸಿಕ್ಕಿವೆ. ಗ್ರಾಮೀಣ ಭಾರತದಲ್ಲಿ ವಿತರಣಾ ಕೇಂದ್ರಗಳನ್ನು ತೆರೆಯಲು ಮುಂದಾಗಿರುವ ಅಮೇಝಾನ್ ಇಂಡಿಯಾ, ಪ್ಯಾಕೇಜಿಂಗ್, ಸಾಗಣೆ ಪರಿಶೀಲನೆ, ಡೆಲಿವರಿಗಳ ಟ್ರ್ಯಾಕಿಂಗ್, ಹಾಗೂ ಸರಿಯಾದ ಸಮಯಕ್ಕೆ ಡೆಲಿವರಿ ಮಾಡಲು ರೂಟ್ ಪ್ಲಾನ್ ಮಾಡೋದು ಹೇಗೆ ಅನ್ನೋದನ್ನು ಮೊಬೈಲ್ ಆ್ಯಪ್‍ಗಳ ಮೂಲಕ ತಿಳಿದುಕೊಳ್ಳಲು ಸಿಬ್ಬಂದಿಗೆ ತರಬೇತಿ ನೀಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೂ ಉತ್ಪನ್ನಗಳ ಡೆಲಿವರಿಗಾಗಿ ಅಮೇಝಾನ್ `ಸರ್ವೀಸ್ ಪಾರ್ಟ್‍ನರ್' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 100ಕ್ಕೂ ಹೆಚ್ಚು ಸ್ಯಾಟಲೈಟ್ ಪಟ್ಟಣಗಳು, ಟೈರ್2, ಟೈರ್3 ನಗರಗಳು ಹಾಗೂ ಹಳ್ಳಿಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

2016ರ ಯೋಜನೆಗಳು...

ಈ ವರ್ಷ ಲಾಜಿಸ್ಟಿಕ್ಸ್ ವಿಭಾಗದ ಸುಧಾರಣೆಗಾಗಿ ಹಣದ ಹೊಳೆಯೇ ಹರಿದುಬರಲಿದೆ. ಈಗಾಗ್ಲೇ ಬ್ಲಾಕ್‍ಬಕ್‍ನಲ್ಲಿ ಹೂಡಿಕೆ ಮಾಡಿರುವ ಫ್ಲಿಪ್‍ಕಾರ್ಟ್, ಮುಂದಿನ 5 ವರ್ಷಗಳಲ್ಲಿ ಲಾಜಿಸ್ಟಿಕ್ಸ್‍ಗಾಗಿ 2.5 ಬಿಲಿಯನ್ ಡಾಲರ್ ಹಣ ವ್ಯಯಿಸುವುದಾಗಿ ಹೇಳಿದೆ. `ಗೋಜಾವಾಸ್' ಮತ್ತು ಸ್ನಾಪ್‍ಡೀಲ್ ಕೂಡ ಇದೇ ಹಾದಿಯಲ್ಲಿವೆ. ಸಾರಿಗೆ ತಜ್ಞ ಜಸ್ಪಾಲ್ ಸಿಂಗ್ ಅವರ ಪ್ರಕಾರ, ಭಾರತದಲ್ಲಿ ಲಾಜಿಸ್ಟಿಕ್ಸ್ ವಿಭಾಗ ಇನ್ನೂ ಹಿಂದುಳಿದಿದೆ. ಡೆಲಿವರಿ ಲೋಡ್‍ಗಳನ್ನು ಹಂಚಲು ಲಾಜಿಸ್ಟಿಕ್ಸ್ ಪ್ಲೇಯರ್‍ಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಚಿಂತನೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

2015ರ ಬಹುತೇಕ ಟ್ರೆಂಡ್‍ಗಳು 2016ರಲ್ಲೂ ಮುಂದುವರಿಯುವ ಸಾಧ್ಯತೆಗಳಿವೆ. ಟೈರ್2, ಟೈರ್3 ನಗರಗಳಲ್ಲಿ ತಂತ್ರಜ್ಞಾನ ಸಹಿತ ಪೂರೈಕೆ ಸರಪಣಿ ಹೆಚ್ಚಿನ ಪರಿಣಾಮ ಉಂಟುಮಾಡಬಲ್ಲದು. ಅಷ್ಟೇ ಅಲ್ಲ ಹೆಚ್ಚು ವೈಯಕ್ತಿಕ ಮತ್ತು ವಿಶೇಷ ಸೇವೆಗಳ ಅಗತ್ಯವಿದೆ ಅಂತಾ ಇ-ಕಾರ್ಟ್ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ. 2016ರಲ್ಲಿ ಇ-ಕಾರ್ಟ್‍ನ ಕಾರ್ಗೊ ಡೆಲಿವರಿ ಸೇವೆ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ರಸ್ತೆಗಳು ಪ್ರಮುಖ ಸಾರಿಗೆ ವಿಧಾನ ಅನ್ನೋದ್ರಲ್ಲಿ ಅನುಮಾನವಿಲ್ಲ, ಆದ್ರೆ ಅದರಲ್ಲೂ ಸುಧಾರಣೆಯ ಅಗತ್ಯವಿದೆ. 1 ಟ್ರಿಲಿಯನ್ ಡಾಲರ್ ಹಣದಲ್ಲಿ ಶೇ.20ರಷ್ಟನ್ನು ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಸರ್ಕಾರ ಮೀಸಲಿಟ್ಟಿದ್ದು, ಉದ್ಯಮಿಗಳಲ್ಲಿ ಹೊಸ ನಿರೀಕ್ಷೆಗಳು ಗರಿಗೆದರಿವೆ. ಮಾನವ ಶಕ್ತಿಯ ವೆಚ್ಚ ಹೆಚ್ಚಾಗುತ್ತಿರುವುದರಿಂದ ವಿತರಣಾ ಸಮಯವನ್ನು ಕಡಿಮೆ ಮಾಡಲು ಲಾಜಿಸ್ಟಿಕ್ಸ್ ಕಂಪನಿಗಳು ಸಂಪನ್ಮೂಲಗಳ ಹಂಚಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ಜಸ್ಪಾಲ್.

`ಲಾಜಿನೆಕ್ಸ್ಟ್'-`ಗ್ರೇ ಆರೇಂಜ್' ಬಳಿಕ `ರೋಡ್ ರನ್ನರ್' ಮತ್ತು `ಡೆಲ್ಲಿವರಿ' ಕೂಡ ಟೈಅಪ್‍ಗೆ ಸಜ್ಜಾಗಿವೆ. ಅಮೇಝಾನ್, ಫ್ಲಿಪ್‍ಕಾರ್ಟ್, ಸ್ನಾಪ್‍ಡೀಲ್ ಹಾಗೂ ಪೇಟಿಮ್ ಎಲ್ಲಾ ಇ-ಕಾಮರ್ಸ್ ದಿಗ್ಗಜರನ್ನು ಹಿಂದಿಕ್ಕಲು ಸಜ್ಜಾಗಿವೆ. ಲಾಜಿಸ್ಟಿಕ್ಸ್ ವಿಭಾಗದ ಮೇಲೆ ಹೆಚ್ಚು ನಂಬಿಕೆ ಇಟ್ರೆ ಈ ಪ್ರಯತ್ನ ಸಫಲವಾಗಬಹುದು.

ಲೇಖಕರು: ಅಥಿರಾ ಎ ನಾಯರ್​
ಅನುವಾದಕರು: ಭಾರತಿ ಭಟ್​

Related Stories