ಇಂಜೆಕ್ಷನ್​​ ಬೇಡ...ಅಡ್ಮಿಟ್​​ ಆಗೋದು ಬೇಡ.. ಅಕ್ಯುಪಂಚರ್ ಮೂಲಕ ನೆಮ್ಮದಿ ಗ್ಯಾರೆಂಟಿ..!

ಟೀಮ್​​ ವೈ.ಎಸ್​.

ಇಂಜೆಕ್ಷನ್​​ ಬೇಡ...ಅಡ್ಮಿಟ್​​ ಆಗೋದು ಬೇಡ.. ಅಕ್ಯುಪಂಚರ್ ಮೂಲಕ ನೆಮ್ಮದಿ ಗ್ಯಾರೆಂಟಿ..!

Tuesday October 13, 2015,

4 min Read

ಯೋಗ, ಆಯುರ್ವೇದಿಕ್, ಹೋಮಿಯೋಪತಿ, ಅಕ್ಯುಪೆಂಕ್ಚರ್ ಇತ್ಯಾದಿ ವಿಶೇಷ ವೈದ್ಯಕೀಯ ಪದ್ಧತಿಗಳು ಭಾರತದಾದ್ಯಂತ ವೈದ್ಯಕೀಯ ಕ್ಷೇತ್ರಕ್ಕೆ ಪ್ರತ್ಯೇಕ ಆಯಾಮವೆಂದೇ ಗುರುತಿಸಿಕೊಂಡಿವೆ. ವಿಶ್ವದ ಪಾಶ್ಚಿಮಾತ್ಯ ರಾಷ್ಟ್ರಗಳು ಈ ವಿಶೇಷ ಪರಿಣಿತಿಯನ್ನು ಪಡೆದುಕೊಳ್ಳಲು ಭಾರತದತ್ತ ನೋಡುತ್ತಿರುವ ಸಂದರ್ಭದಲ್ಲಿ ವಿಚಿತ್ರ ಎನ್ನುವಂತೆ ಭಾರತ ಮತ್ತೆ ಪಾಶ್ಚಿಮಾತ್ಯ ರಾಷ್ಟ್ರಗಳ ವೈದ್ಯಕೀಯ ಸೌಲಭ್ಯವನ್ನೇ ನಂಬಿಕೊಂಡು ಕೂತಿದೆ.

ಈ ಮಾತನ್ನು ಹೇಳಿರುವ ರಿತಿಕಾ ಅಂಚಿಲಾ, ಬೆಂಗಳೂರಿನ ಆಲ್-ಕ್ಯೂರ್ ಅಕ್ಯೂಪಂಕ್ಚರ್ ಸೆಂಟರ್​​ನ ಸಂಸ್ಥಾಪಕಿ. ರಾಜಸ್ಥಾನದ ಬಿಲಾವರ್​​ನಲ್ಲಿ ಜನಿಸಿದ ರಿತಿಕಾ ತಮ್ಮ ಶಾಲೆ ಹಾಗೂ ಕಾಲೇಜು ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿದರು. 2005ರಲ್ಲಿ ಪೂನಾಗೆ ಎಂಬಿಎ ಮಾಡಲು ತೆರಳಿದ ರಿತಿಕಾ ಬಳಿಕ ಚೋಳಮಂಡಲಂ ಡಿಬಿಎಸ್ ಲಿಮಿಟೆಡ್ ಕಂಪೆನಿಯಲ್ಲಿ ಪ್ರಾದೇಶಿಕ ನಿರ್ವಾಹಕರಾಗಿ ಒಂದು ವರ್ಷಗಳ ಕಾರ್ಯ ನಿರ್ವಹಿಸಿದರು. ರಿತಿಕಾ ಅಕ್ಯೂಪಂಕ್ಚರ್ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಕಾಲಿಟ್ಟಿದ್ದು ಆಕಸ್ಮಿಕವಾಗಿ.

image


2010ರಲ್ಲಿ ಮದುವೆಯ ಕಾರಣದಿಂದ ಅವರು ಚೆನ್ನೈಗೆ ಬಂದರು. ಆ ಸಂದರ್ಭದಲ್ಲಿ ಕುಟುಂಬದ ಸದಸ್ಯರೊಬ್ಬರಿಗೆ ಅಕ್ಯೂಪಂಕ್ಚರ್ ಮಾಡಿಸಲು ಅನುಮತಿ ವೈದ್ಯರ ಸಂದರ್ಶನಕ್ಕೆ ಅನುಮತಿ ತೆಗೆದುಕೊಂಡಾಗಲೇ ಅವರಿಗೆ ಭಾರತದಲ್ಲಿ ಅಕ್ಯೂಪಂಕ್ಚರ್ ವಿಷಯದಲ್ಲಿ ಇರುವ ವ್ಯಾಪ್ತಿ ಹಾಗೂ ಬೇಡಿಕೆಗಳ ಅರಿವಾದದ್ದು. ಇದೇ ವೇಳೆ ಅವರು ಡಾ.ಎಂ.ಎನ್ ಸರ್ಕಾರ್​​ರನ್ನು ಭೇಟಿ ಮಾಡಿದರು. ಈ ವೈದ್ಯಕೀಯ ಶಾಸ್ತ್ರದ ಬಗ್ಗೆ ಜಾಗೃತಿ ಮೂಡಿಸಿದರೆ ಮುಂಬರುವ ದಿನಗಳಲ್ಲಿ ಇದನ್ನು ಸಮರ್ಪಕ ಉದ್ಯಮವನ್ನಾಗಿಸಬಹುದು ಎಂದುಕೊಂಡ ಅವರು ಕೂಡಲೆ ತಮ್ಮ ವೃತ್ತಿ ಬದುಕನ್ನು ಬದಲಾಯಿಸುವ ನಿರ್ಧಾರ ಮಾಡಿದರು. ಕಾರ್ಪೋರೇಟ್ ಕಂಪೆನಿಗಳ ವೃತ್ತಿಯಿಂದ ದೂರ ಸರಿದು ಅಕ್ಯುಪಂಕ್ಚರ್ ವೈದ್ಯಕೀಯ ವಿದ್ಯೆಯ ಜಾಗೃತಿ ಹಾಗೂ ಸುಲಭ ವೇದಿಕೆ ಹಾಕಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ರೋಗಿಗಳ ದೀರ್ಘಕಾಲಿಕ ನೋವುಗಳಿಗೆ ಅಕ್ಯುಪಂಕ್ಚರ್ ಥೆರಪಿಯಲ್ಲಿ ಫಲದಾಯಕ ಚಿಕಿತ್ಸೆ ಇರುವುದನ್ನು ಗಮನಿಸಿ ಪೂರ್ಣಕಾಲಿಕವಾಗಿ ಇದರ ಯೋಜನೆಯ ಸೂತ್ರ ರಚನೆಗೆ ಮುಂದಾದರು. ಜೊತೆಗೆ ಈ ವೈದ್ಯಕೀಯ ಚಿಕಿತ್ಸೆಯಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಇರುವುದು ಅವರನ್ನು ಮತ್ತಷ್ಟು ಉತ್ಸುಕರನ್ನಾಗಿಸಿತ್ತು. ಇದು ರಿತಿಕಾ ವೃತ್ತಿ ಬದುಕಿನ ಪಾಲಿನ ನಿರ್ಣಾಯಕ ಹಂತವಾಗಿತ್ತು.

ಅಕ್ಯುಪಂಕ್ಚರ್ ಅನ್ನುವ ವೈದ್ಯಕೀಯ ವಿದ್ಯೆ ಪ್ರಾಚೀನಾ ಚೀನೀಯರ ಅಭ್ಯಾಸವಾಗಿದ್ದು, ದೇಹದ ಕೆಲವು ನಿರ್ದಿಷ್ಟ ಭಾಗಗಳಿಗೆ ಹರಿತವಾದ ಮೊನೆಯಿಂದ ಮೃದುವಾಗಿ ಚುಚ್ಚಿದರೆ ಆ ಭಾಗಗಳಲ್ಲಿ ಇರುವ ತೊಂದರೆ ಕ್ರಮೇಣ ಕಡಿಮೆಯಾಗುತ್ತದೆ. ಅಕ್ಯುಪಂಕ್ಚರ್ ಪಾಯಿಂಟ್ ಅಂತಲೇ ಕರೆಯಲ್ಪಡುವ ದೇಹದ ಕೆಲವು ಭಾಗಗಳಲ್ಲಿ ಸಣ್ಣ ಚೂಪು ಮೊನೆಯಿಂದ ಲಘುವಾಗಿ ಚುಚ್ಚುತ್ತಿದ್ದರೆ ಅಲ್ಲಿನ ಮಾಧ್ಯಮದ ಮೂಲಕ ರೋಗಿಷ್ಟವಾದ ದೇಹದ ಭಾಗ ಚೇತರಿಕೆ ಹೊಂದುತ್ತದೆ. ದೇಹದೊಳಗಿನ ಶಕ್ತಿಯ ಸಮಾನ ಹಾಗೂ ಉತ್ಸಾಹಕರ ಹರಿವಿಗಾಗಿ ಈ ಚಿಕಿತ್ಸಾ ವಿಧಾನವನ್ನು ಚೀನಿಯರು ಬಳಸುತ್ತಿದ್ದರು. ದೇಹದ ಅಂಗಗಳನ್ನು ಉತ್ತೇಜಿಸುವ ಸ್ವಾಭಾವಿಕ ಕ್ರಿಯೆ ಈ ಅಕ್ಯುಪಂಕ್ಚರ್​​ನಿಂದ ಸಾಧ್ಯವಾಗುತ್ತದೆ. ಇದನ್ನು ಚೀನಿಯರು ಕಿ ಅನ್ನುವ ವೈದ್ಯಕೀಯ ಪದ್ಧತಿ ಅನ್ನುತ್ತಾರೆ. ಈಗಾಗಲೆ ಇದರ ಮಹತ್ವವನ್ನು ಅರಿತಿರುವ ಚೀನಿಯರು ತಮ್ಮ ರಾಷ್ಟ್ರದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರಾರಂಭಿಸಿ ಜಾಗೃತಿ ನಿರ್ಮಿಸತೊಡಗಿದ್ದಾರೆ. ಚೀನಾ ಹಾಗೂ ಕೆಲವು ಪೂರ್ವ ರಾಷ್ಟ್ರಗಳಲ್ಲಿ ಅಕ್ಯೂಪಂಕ್ಚರ್ ವೈದ್ಯಕೀಯ ಪದ್ಧತಿ ಸ್ಥಿರವಾದ ಹಾಗೂ ಉತ್ತಮವಾದ ಬೆಳವಣಿಗೆ ಕಾಣುತ್ತಿದೆ ಎಂದು ರಿತಿಕಾ ಮಾಹಿತಿ ನೀಡಿದ್ದಾರೆ.

ಅಕ್ಯೂಪಂಕ್ಚರ್ ಪದ್ಧತಿಯ ವಿಸ್ತಾರವನ್ನು ಅರಿತಿದ್ದ ರಿತಿಕಾ, 2010ರಿಂದ 2012ರವರೆಗೆ ಇಂಡಿಯನ್ ಬೋರ್ಡ್ ಆಫ್ ಆಲ್ಟರ್​​ನೇಟಿವ್ ಮೆಡಿಸಿನ್ ಅಥವಾ ಭಾರತೀಯ ಪರ್ಯಾಯ ವೈದ್ಯಶಾಸ್ತ್ರ ವಿಭಾಗದಿಂದ ಕಲಿಸಲ್ಪಡುವ ಗೌರವ ಪರ್ಯಾಯ ವೈದ್ಯಕೀಯ ಅಕಾಡೆಮಿಯಲ್ಲಿ ಪರ್ಯಾಯ ವೈದ್ಯಕೀಯ ಶಿಕ್ಷಣದ ವಿಶೇಷ ಡಿಪ್ಲಮೋ ಪದವಿ ಪಡೆದುಕೊಂಡರು. ಇದೇ ವೇಳೆ ಚೆನ್ನೈನ ಖ್ಯಾತ ಅಕ್ಯೂಪಂಕ್ಚರ್ ತಜ್ಞರಾದ ಡಾ. ಎಂ.ಎನ್ ಸರ್ಕಾರ್ ಬಳಿ ಹೈ-ಕ್ಯೂರ್ ಅಕ್ಯೂಪಂಕ್ಚರ್ ಸೆಂಟರ್​​ನಲ್ಲಿ ಕೆಲಸದ ಅನುಭವವನ್ನೂ ಗಳಿಸಿದರು.

2012ರ ಮೇನಲ್ಲಿ ಬೆಂಗಳೂರಿಗೆ ಬಂದ ರಿತಿಕಾ ಹೈ-ಕ್ಯೂರ್ ಅಕ್ಯೂಪಂಕ್ಚರ್ ಸೆಂಟರ್ ಮುಖೇನ ದೀರ್ಘಕಾಲದಿಂದ ಬಳಲುತ್ತಿರುವ ರೋಗಿಗಳಿಗೆ ಅಕ್ಯೂಪಂಕ್ಚರ್ ಚಿಕಿತ್ಸೆ ನೀಡತೊಡಗಿದರು.

ಬೆಂಗಳೂರಿನಲ್ಲಿ ನಮ್ಮ ಅಕ್ಯೂಪಂಕ್ಚರ್ ಕೇಂದ್ರಕ್ಕೆ ಬೇಕಿದ್ದ ಪ್ರಾಥಮಿಕ ಮಾಹಿತಿ ಹಾಗೂ ಉಪಕರಣಗಳ ಕುರಿತಾದ ಉಪಯುಕ್ತ ಸಹಾಯವನ್ನು ಚೆನ್ನೈನಲಿದ್ದುಕೊಂಡೇ ಎಂ.ಎನ್ ಸರ್ಕಾರ್ ನೀಡಿದರು. ಸ್ಥಳೀಯ ಹಣಕಾಸು ಸಂಸ್ಥೆಯೊಂದರಲ್ಲಿ ಸಾಲ ಪಡೆದು ಬೆಂಗಳೂರಿನ ಫ್ರೇಝರ್ ಟೌನ್​​ನಲ್ಲಿ 2012ರ ಜೂನ್​​ನಲ್ಲಿ ಅಕ್ಯೂಪಂಕ್ಚರ್ ಕೇಂದ್ರವನ್ನು ಪ್ರಾರಂಭಿಸಿದೆವು. ಪ್ರಾರಂಭಿಕ ಪ್ರಚಾರಕ್ಕಾಗಿ ಜಸ್ಟ್ ಡಯಲ್ ಹಾಗೂ ಸುಲೇಕಾ.ಕಾಂ ನೆರವು ಪಡೆದುಕೊಂಡೆವಾದರೂ ನಮ್ಮ ನಂಬಿಕೆ ಇದ್ದಿದ್ದು ಬಾಯಿ ಮಾತಿನಲ್ಲಿ ಪಡೆಯುವ ವ್ಯಾಪಕ ಪ್ರಚಾರದ ಮೇಲೆ. ನಮ್ಮ ಬಳಿ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿಗಳ ಖಾಸಗಿ ಹಾಗೂ ವೈಯಕ್ತಿಕ ಪ್ರಚಾರ ನಮ್ಮ ಸಂಸ್ಥೆಯತ್ತ ಜನರನ್ನು ಕರೆತರುತ್ತಿದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ರಿತಿಕಾ.

ಜನವರಿ-2015ರಲ್ಲಿ ಬೆಂಗಳೂರಿನ ಜಯನಗರದಲ್ಲಿ ಆಲ್-ಕ್ಯೂರ್ ಅಕ್ಯೂಪಂಕ್ಚರ್ ಕೇಂದ್ರವನ್ನು ಏಕಾಂಗಿಯಾಗಿ ಆರಂಭಿಸುವ ಮೂಲಕ ರಿತಿಕಾ ಇನ್ನೊಂದು ಮೈಲಿಗಲ್ಲನ್ನು ಸ್ಥಾಪಿಸಿದರು. ಕೇವಲ ಸಂಸ್ಥಾಪಕಿ ಮಾತ್ರವಲ್ಲದೆ ಅಕ್ಯೂಪಂಕ್ಚರ್ ಚಿಕಿತ್ಸೆ ನೀಡುವ ಥೆರಪಿಸ್ಟ್ ಆಗಿಯೂ ರಿತಿಕಾ ಪರಿಣಿತಿಯನ್ನು ಹೊಂದಿದ್ದರಿಂದ ಅವರಿಗೆ ಈ ಉದ್ಯಮದಲ್ಲಿ ನೆಲೆ ನಿಲ್ಲಲು ಬೇಕಿದ್ದ ಹೆಚ್ಚಿನ ಆತ್ಮವಿಶ್ವಾಸ ತಂದಕೊಟ್ಟಿತು.

ರಿತಿಕಾ ಉದ್ಯಮವನ್ನು ಆರಂಭಿಸುವಾಗ ಸಾಕಷ್ಟು ಸವಾಲುಗಳು ಸಣ್ಣ ಪುಟ್ಟ ಬಿಕ್ಕಟ್ಟುಗಳಿದ್ದವು. ಆದರೆ ಎಲ್ಲವನ್ನೂ ಎದುರಿಸಿ ನಿಂತು ಕೇವಲ ಅತ್ಯುತ್ತಮ ಚಿಕಿತ್ಸಾ ಪದ್ಧತಿ ಹಾಗೂ ಗುಣಮಟ್ಟದ ಸೇವೆಯಿಂದ ಜನರ ಮನಸನ್ನು ಗೆಲ್ಲುವ ಮೂಲಕ ರಿತಿಕಾ ಈಗ ಒಬ್ಬರು ಯಶಸ್ವಿ ಉದ್ಯಮಿಯಾಗಿ ಹೆಜ್ಜೆ ಇಟ್ಟು ನಿಂತಿದ್ದಾರೆ.

ಇಂದಿನ ವೇಗದ ಪ್ರಪಂಚದಲ್ಲಿ ದಿಢೀರ್ ಕಾಫಿ, ವೈಫೈ, ವೀಡಿಯೋ ಕಾನ್ಫರನ್ಸ್​​ ನಂತೆಯೇ ಜನರು ತಮ್ಮ ದೀರ್ಘಕಾಲಿಕ ರೋಗಗಳಿಗೂ ಕ್ಷಿಪ್ರಗತಿಯ ಚಿಕಿತ್ಸೆ ಬಯಸುತ್ತಾರೆ. ಆದರೆ ಈ ಅಕ್ಯೂಪಂಕ್ಚರ್ ಚಿಕಿತ್ಸಾ ವಿಧಾನಕ್ಕೆ ಸಮಯಾವಕಾಶ ಬೇಕು. ತಾಳ್ಮೆ ಇದ್ದಾಗ ಮಾತ್ರ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಎಂತಹ ರೋಗವನ್ನಾದರೂ ಅಕ್ಯೂಪಂಕ್ಚರ್ ವಾಸಿ ಮಾಡುತ್ತದೆ. ರಿತಿಕಾರ ಬಳಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ರೋಗಿಗಳು ಅವರ ಕಾರ್ಯವಿಧಾನವನ್ನು ಮೆಚ್ಚಿಕೊಳ್ಳುತ್ತಾರೆ. 11 ತಿಂಗಳ ಮಗುವೊಂದು ಹುಟ್ಟುವಾಗಲೇ ಅಂದತೆಯ ಸಮಸ್ಯೆಯಿಂದ ಬಳಲುತ್ತಿತ್ತು. ಎರಡೂ ಕಣ್ಣು ಕಾಣಿಸದಿದ್ದ ಆ ಗಂಡು ಮಗುವಿನ ಸ್ಥಿತಿ ಮನಕಲಕುವಂತಿತ್ತು. ರಿತಿಕಾ ಆ ಮಗುವಿನ ಮೇಲೆ ಅಕ್ಯೂಪಂಕ್ಚರ್ ಪದ್ಧತಿಯ ಚಿಕಿತ್ಸೆ ಆರಂಭಿಸಿದ ನಂತರ ಇದೀಗ ಅದರ ಒಂದು ಕಣ್ಣು ಕಾಣಿಸುತ್ತಿದೆ ಹಾಗೂ ಇನ್ನೊಂದು ಕಣ್ಣಿನಲ್ಲಿ ದೃಷ್ಟಿ ನಿಧಾನವಾಗಿ ತೆರೆದುಕೊಳ್ಳತೊಡಗಿದೆ.

ಯಾರಾದರೂ ಅಕ್ಯೂಪಂಕ್ಚರ್ ಚಿಕಿತ್ಸಾ ವಿಧಾನವನ್ನು ನಂಬದಿದ್ದರೆ, ಬಿಬಿಸಿ ಈ ಪರ್ಯಾಯ ಚಿಕಿತ್ಸೆಯ ವ್ಯಾಪ್ತಿ ಹಾಗೂ ಯಶಸ್ವಿ ಪರಿಣಾಮಗಳ ಮೇಲೆ ಮಾಡಿರುವ ಡಾಕ್ಯುಮೆಂಟರಿ ನೋಡಲು ಹಾಗೂ ಆನ್ಲೈನಲ್ಲಿ ಲಭ್ಯವಿರುವ ಅಕ್ಯೂಪಂಕ್ಚರ್ ಚಿಕಿತ್ಸಾ ಮಾದರಿಯ ಮಾಹಿತಿಯನ್ನು ಓದುವಂತೆ ರಿತಿಕಾ ಸೂಚಿಸುತ್ತಾರೆ.

ಈ ಪದ್ಧತಿಯಿಂದಾಗುವ ಪ್ರಯೋಜನವೆಂದರೆ ರೋಗಿಗಳಿಗೆ ಚಿಕಿತ್ಸೆ ನೀಡಿದ ನಂತರ ಅವರು ಗುಣಮುಖರಾದರೆ ಅವರೇ ಈ ವಿಧಾನದ ಬಗ್ಗೆ ಪ್ರಚಾರ ಮಾಡುತ್ತಾರೆ. ಹೀಗೆ ಬಾಯಿ ಮಾತಿನಿಂದ ಗುಣವಾದ ರೋಗಿಗಳೇ ಮಾಡಿದ ಪ್ರಚಾರ ಆಲ್-ಕ್ಯೂರ್ ಅಕ್ಯೂಪಂಕ್ಚರ್ ವಿಧಾನವನ್ನು ಜನಪ್ರಿಯಗೊಳಿಸುತ್ತಿದೆ ಅಂತಾರೆ ರಿತಿಕಾ.

ಸಮಾಜಕ್ಕೆ ಅತ್ಯುತ್ತಮವಾಗಿದ್ದನ್ನು ನೀಡಬೇಕು. ಕೊನೆಗೆ ರೋಗಿಗಳ ಮುಖದಲ್ಲಿ ನೋವನ್ನು ಮರೆಸಿ ನಗು ಮೂಡಿಸಬೇಕು ಅನ್ನುವುದು ರಿತಿಕಾರ ಅಭಿಮತ.