ಸಂಸ್ಥಾಪಕ v/s ಸಂಸ್ಥಾಪಕ - ಪ್ರಜಾಪ್ರಭುತ್ವವೇ ಪರಿಹಾರವಲ್ಲ!

ಟೀಮ್​ ವೈ.ಎಸ್​.ಕನ್ನಡ

0

2014ರಲ್ಲಿ ಸ್ಟಾರ್ಟ್​ಅಪ್​ಗಳ ವೈಫಲ್ಯದ ಪ್ರಮುಖ ಕಾರಣಗಳ ಬಗ್ಗೆ ಉದ್ಯಮಿಗಳೇ ಬರೆದ ಲೇಖನ ಸಿಬಿ ಇನ್​ಸೈಟ್​ನಲ್ಲಿ ಪ್ರಕಟವಾಗಿತ್ತು. ಉದ್ಯಮಿಗಳೇ ಉಲ್ಲೇಖಿಸಿದಂತೆ ಸ್ಟಾರ್ಟ್ಅಪ್​ಗಳ ವೈಫಲ್ಯಕ್ಕೆ ಎರಡನೆಯ ಪ್ರಮುಖ ಕಾರಣ ಅಂದ್ರೆ ಸಂಸ್ಥಾಪಕರು/ತಂಡಕ್ಕೆ ಸಂಬಂಧಿಸಿದ ವಿಚಾರಗಳು. ಸಂಸ್ಥಾಪಕರ ವೈಫಲ್ಯಕ್ಕೆ ಪ್ರಮುಖ ಕಾರಣಗಳೆಂದ್ರೆ ಅವರು ಮೋಸ ಹೋಗಬಹುದು ಅಥವಾ ಉದ್ಯಮವನ್ನು ಸರಳವಾಗಿ, ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗದೇ ಅಸಮರ್ಥತೆ ಕಾಡಬಹುದು. ಮೋಸ ಅಥವಾ ಕಳವಿನಂತಹ ಸಮಸ್ಯೆಗಳು ಎದುರಾದಾಗ ಅದನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಆದ್ರೆ ಪ್ರದರ್ಶನ ಮತ್ತು ಕೊಡುಗೆಗಳಿಗೆ ಸಂಬಂಧಪಟ್ಟ ವಿಷಯಗಳೆಲ್ಲ ತಂಡದ ಕ್ರಿಯಾತ್ಮಕತೆಯನ್ನು ಅವಲಂಬಿಸಿರುತ್ತವೆ.

ನಾನು ನಿಕಟ ಸಂಪರ್ಕ ಹೊಂದಿದ್ದ ಒಂದು ಕಂಪನಿಯ ಮೂವರು ಸಂಸ್ಥಾಪಕರ ಪೈಕಿ ಇಬ್ಬರು ಒಂದು ತಿಂಗಳಲ್ಲಿ 2 ಬಾರಿ ನನ್ನನ್ನು ಸಂಪರ್ಕಿಸಿದ್ರು. ಸಂಸ್ಥೆಯನ್ನು ಬಿಟ್ಟು ಹೋಗುವುದಾಗಿ ಹೇಳಿಕೊಂಡಿದ್ರು. ಕೊನೆಗೂ ಹರಸಾಹಸಪಟ್ಟು ಅವರ ಮನವೊಲಿಸಿ, ಕಂಪನಿಯನ್ನು ಕಟ್ಟಿ ಬೆಳೆಸುವಲ್ಲಿ ನಾವು ಸಫಲರಾದೆವು. ಮುಂದಿನ ಮೂರು ವರ್ಷಗಳಲ್ಲಿ ಇಂಥದ್ದೇ ಸಂದರ್ಭಗಳು ಹಲವಾರು ಬಾರಿ ಬಂದು ಹೋಗಿವೆ. ಅವರು ಕಂಪನಿ ತ್ಯಜಿಸಲು ಮುಂದಾಗಿದ್ದಕ್ಕೆ ಪ್ರಮುಖ ಕಾರಣ ಸಂಸ್ಥಾಪಕ ಹುದ್ದೆಗೆ ತಕ್ಕಂತಹ ಜವಾಬ್ಧಾರಿ ಅಲ್ಲಿ ಸಿಗುತ್ತಿಲ್ಲ ಅನ್ನೋದು. ಸ್ಟಾರ್ಟ್ಅಪ್​ನಲ್ಲಿ ಸಹ ಸಂಸ್ಥಾಪಕರಾಗಿರುವುದಕ್ಕಿಂತ ಎಂಎನ್​ಸಿ ಸೇರಿಕೊಂಡಿದ್ದರೆ 3 ವರ್ಷಗಳಲ್ಲಿ ಇನ್ನಷ್ಟು ಕಲಿಯಬಹುದಿತ್ತು ಅನ್ನೋದು ಅವರ ಅಭಿಪ್ರಾಯ. ಅದೃಷ್ಟವಶಾತ್ ಕಾರ್ಯಾಚರಣೆಗೆ ಅಡ್ಡಿಪಡಿಸದೆ, ಆಡಳಿತ ಮಂಡಳಿ ಮತ್ತು ತಂಡದ ನೈತಿಕತೆಗೆ ಧಕ್ಕೆಯಾಗದಂತೆ ನೋಡಿಕೊಂಡು ಕಂಪನಿಯನ್ನು ತ್ಯಜಿಸದಂತೆ ಸಂಸ್ಥಾಪಕರ ಮನವೊಲಿಸುವಲ್ಲಿ ನಾವು ಯಶಸ್ವಿಯಾದೆವು. ತನ್ನೆಲ್ಲಾ ಸ್ಟೇಕ್​ ಹೋಲ್ಡರ್​ಗಳಿಗೆ ಹೆಚ್ಚಿನ ಮೌಲ್ಯ ಒದಗಿಸಲು ಕಂಪನಿ ನಿರ್ಧರಿಸಿತ್ತು.

ನೀವು ಕೂಡ ನಿಮ್ಮ ಸ್ಟಾರ್ಟ್ಅಪ್​ಗಾಗಿ ಸಹ ಸಂಸ್ಥಾಪಕರ ಹುಡುಕಾಟದಲ್ಲಿದ್ರೆ ಒಪ್ಪಂದ ಮಾಡಿಕೊಳ್ಳುವುದು ಬಹುಮುಖ್ಯ. ಒಪ್ಪಂದಗಳ ಕರಡು ಪ್ರತಿಯನ್ನು ಸಿದ್ಧಪಡಿಸುವ ಸಂದರ್ಭಗಳಲ್ಲಿ ಕೆಳಕಂಡ ಅಂಶಗಳು ನಿಮ್ಮ ಗಮನದಲ್ಲಿರಲಿ.

1. ಪಾತ್ರ ಮತ್ತು ಜವಾಬ್ಧಾರಿ

ಸಂಸ್ಥೆಯಲ್ಲಿ ಎಲ್ಲರ ಕರ್ತವ್ಯ ಮತ್ತು ಜವಾಬ್ಧಾರಿಗಳ ಬಗ್ಗೆ ಒಪ್ಪಂದದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಬೇಕು. ಸಂಸ್ಥಾಪಕರ ಅನುಭವ ಹಾಗೂ ಆಸಕ್ತಿಗಳ ಆಧಾರದ ಮೇಲೆ ಜವಾಬ್ಧಾರಿ ಹಂಚಿಕೆ ಮಾಡಬಹುದು. ಒಂದು ವೇಳೆ ಸಹ ಸಂಸ್ಥಾಪಕರ ಕಾರ್ಯನಿರ್ವಹಣೆ ತೃಪ್ತಿಕರವಾಗಿಲ್ಲ ಎಂದಾದಲ್ಲಿ ಕಂಪನಿಯ ಮಾದರಿಗೆ ತಕ್ಕಂತೆ ಕಾರ್ಯನಿರ್ವಹಿಸದೇ ಇದ್ದಲ್ಲಿ ಅವರ ಪಾತ್ರ ಮತ್ತು ಜವಾಬ್ಧಾರಿಗಳನ್ನು ಬದಲಾಯಿಸುವ ಅವಕಾಶವಿರಬೇಕು.

2. ನಿರ್ಧಾರ ತೆಗೆದುಕೊಳ್ಳುವಿಕೆ

ಎಲ್ಲ ಸಹಸಂಸ್ಥಾಪಕರು ಸಿಇಓ ಅಥವಾ ಕೋ-ಸಿಇಓ ಆಗಿರಬೇಕೆಂದೇನಿಲ್ಲ. ಸ್ಟಾರ್ಟ್ಅಪ್​ಗಳಲ್ಲಿ ಕಮಿಟಿ ಅಥವಾ ಮತದಾನದ ಮೂಲಕ ನಿರ್ಧಾರ ತೆಗೆದುಕೊಳ್ಳಲು ಮುಂದಾದ್ರೆ ಅದಕ್ಕೆ ಬಹಳಷ್ಟು ಸಮಯ ಹಿಡಿಯುತ್ತದೆ. ಇದ್ರಿಂದಾಗಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇರಬಹುದು ಅಥವಾ ಒಮ್ಮತದ ನಿರ್ಧಾರಕ್ಕೆ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಬಹುದು. ಎಲ್ಲಾ ಷೇರು ಹೋಲ್ಡರ್​ಗಳಿಗೆ ಒಳಿತಾಗುವಂತಹ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಏಕವ್ಯಕ್ತಿಯಲ್ಲಿದ್ದರೆ ಉತ್ತಮ. ಕಂಪನಿಯಲ್ಲಿ ಒಬ್ಬನೇ ನಾಯಕನನ್ನು ಗುರುತಿಸಿ ಆಯ್ಕೆ ಮಾಡುವುದು ಅತ್ಯಂತ ಪ್ರಮುಖವಾದದ್ದು. ಆದ್ರೆ ನಾಯಕನ ಆಯ್ಕೆ ಪ್ರದರ್ಶನದ ಆಧಾರದ ಮೇಲಿರಬೇಕೇ ಹೊರತು ಸರದಿ ಮೇಲಲ್ಲ. ಆದ್ರೆ ಅತ್ಯಂತ ಮಹತ್ವದ ನಿರ್ಧಾರಗಳನ್ನು ಎಲ್ಲಾ ಸಹಸಂಸ್ಥಾಪಕರು ಒಟ್ಟಾಗಿಯೇ ತೆಗೆದುಕೊಳ್ಳಬೇಕು, ಅದರರ್ಥ ಎಲ್ಲ ತೀರ್ಮಾನಗಳು ಒಮ್ಮತದಿಂದ ಕೂಡಿರಬೇಕೆಂದೇನಲ್ಲ. ಪ್ರಜಾಪ್ರಭುತ್ವ, ಸಹಯೋಗ ಮತ್ತು ಚರ್ಚೆಗಳಲ್ಲಿ ಉಪಯುಕ್ತವಾಗಿದ್ದು, ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಲ್ಲ.

3. ಈಕ್ವಿಟಿ ಹಂಚಿಕೆ ಮತ್ತು ಸ್ವಾಮ್ಯ

ಸಮೀಕ್ಷೆಯ ಪ್ರಕಾರ ಬಹುತೇಕ ಎಲ್ಲಾ ಉದ್ಯಮಗಳಲ್ಲಿ ಈಕ್ವಿಟಿ ಹಂಚಿಕೆ ಸಮನಾಗಿರುತ್ತದೆ. ಸಂಸ್ಥಾಪಕರ ತಂಡ ಒಂದೇ ತೆರನಾದ ಹಿನ್ನೆಲೆ ಮತ್ತು ಅನುಭವಗಳನ್ನು ಹೊಂದಿದ್ದರೆ ಈಕ್ವಿಟಿ ಹಂಚಿಕೆ ಕೂಡ ಸರಿಸಮನಾಗಿರುವುದು ವಾಡಿಕೆಯಂತಾಗಿದೆ. ಈಕ್ವಿಟಿ ಅಂದ್ರೆ ಉದ್ಯಮದ ಭವಿಷ್ಯದ ಮೌಲ್ಯ ಎಂದರ್ಥ, ತಂಡದ ಎಲ್ಲಾ ಸದಸ್ಯರು ಸಂಸ್ಥೆಗಾಗಿ ಒಂದೇ ತೆರನಾದ ಕೊಡುಗೆಗಳನ್ನು ಕೊಡುತ್ತಾರೆ, ಕಾರ್ಯಕ್ಷಮತೆಯ ಮಾನದಂಡದಲ್ಲೂ ಬದಲಾವಣೆಯಿರುವುದಿಲ್ಲ. ಒಂದು ವೇಳೆ ಸಹ ಸಂಸ್ಥಾಪಕರ ಅನುಭವ ಮತ್ತು ಹಿನ್ನೆಲೆ ಒಂದೇ ತೆರನಾಗಿಲ್ಲದೇ ಇದ್ದಲ್ಲಿ ಈಕ್ವಿಟಿ ಹಂಚಿಕೆ ಕೂಡ ಸಮನಾಗಿರುವುದಿಲ್ಲ. ಕಂಪನಿಯ ಸಿಇಓ ಉಳಿದೆಲ್ಲ ಸಹಸಂಸ್ಥಾಪಕರಿಗಿಂತ ಹೆಚ್ಚು ಈಕ್ವಿಟಿ ಪಾಲನ್ನು ಹೊಂದಿರುತ್ತಾನೆ.

ಈ ಸಂಭಾಷಣೆ ನಿಮಗೆ ಅಹಿತಕರ ಎನಿಸಿಬಹುದು ಆದ್ರೆ ಭವಿಷ್ಯದಲ್ಲಿ ಎದುರಾಗುವ ಅಹಿತಕರ ಘಟನೆಗಳನ್ನು ತಡೆಯಲು ಈ ಬಗ್ಗೆ ಚರ್ಚೆ ಅತ್ಯಂತ ಅವಶ್ಯಕ. ಸಂಸ್ಥಾಪಕರ ನಡುವೆ ಅಹಿತಕರ ಸಂದರ್ಭಗಳು ಅಥವಾ ಅಪಶ್ರುತಿ ಕಾಣಿಸಿಕೊಳ್ಳದಂತೆ ನೋಡಿಕೊಂಡಾಗ ಮಾತ್ರ ಕಂಪನಿ ಯಶಸ್ಸು ಗಳಿಸಲು ಸಾಧ್ಯ. ಈಕ್ವಿಟಿ ಹಂಚಿಕೆ ಮಾತ್ರವಲ್ಲಿ ಸ್ವಾಮ್ಯ ಕೂಡ ನಿರ್ಣಾಯಕ ಅಂಶ. ಸಂಸ್ಥಾಪಕರು ಮಾರುಕಟ್ಟೆ ಆಧಾರಿತ ಸ್ವಾಮ್ಯ ವೇಳಾಪಟ್ಟಿಯನ್ನೇ ಅನುಸರಿಸಬೇಕು ಮತ್ತು ಅದು ನಾಯಕತ್ವದ ಬಗೆಗಿರುವ ನಿರೀಕ್ಷೆಗೆ ತಕ್ಕಂತಿರಬೇಕು. ಒಂದು ವೇಳೆ ಸಹ ಸಂಸ್ಥಾಪಕ ಕಂಪನಿಯನ್ನು ತ್ಯಜಿಸಿದ್ರೆ ಅನ್​ವೆಸ್ಟೆಡ್​ ಷೇರುಗಳನ್ನು ಅವರಿಗೆ ಪರ್ಯಾಯವಾಗಿ ಯಾರನ್ನಾದ್ರೂ ಹುಡುಕುತ್ತಿದ್ರೆ ಅವರಿಗಾಗಿ ಬಳಸಿಕೊಳ್ಳಬಹುದು.

ಸಂಸ್ಥಾಪಕ ಮತ್ತು ತಂಡದ ನಡುವಣ ಸಂಬಂಧ ಮದುವೆಯಿದ್ದಂತೆ. ಅದು ಎಂದೆಂದಿಗೂ ಮುಗಿಯದ ಅನುಬಂಧ. ನಿಜವಾದ ಮದುವೆಯಂತೆ ಅಲ್ಲಿ ಕೂಡ ಹಲವು ಅಚ್ಚರಿಗಳು ಕಾದಿರುತ್ತವೆ. ಆಮೇಲೆ ಪಶ್ಚಾತ್ತಾಪ ಪಡುವ ಬದಲು ಮೊದಲೇ ಎಚ್ಚೆತ್ತುಕೊಳ್ಳುವುದು ಒಳಿತು.


ಲೇಖಕರು: ಭಾರತಿ ಜಾಕೋಬ್​
ಅನುವಾದಕರು: ಭಾರತಿ ಭಟ್​

Related Stories

Stories by YourStory Kannada