ದೊಡ್ಡ ಶೈಕ್ಷಣಿಕ ಕ್ರಾಂತಿಯ ಹೊಸ್ತಿಲಲ್ಲಿ - ಖಾನ್ ಅಕಾಡೆಮಿ ಜೊತೆ ಕೈ ಜೋಡಿಸಿದ ರತನ್ ಟಾಟಾ

ಟೀಮ್​​ ವೈ.ಎಸ್. ಕನ್ನಡ

ದೊಡ್ಡ ಶೈಕ್ಷಣಿಕ ಕ್ರಾಂತಿಯ ಹೊಸ್ತಿಲಲ್ಲಿ - ಖಾನ್ ಅಕಾಡೆಮಿ ಜೊತೆ ಕೈ ಜೋಡಿಸಿದ ರತನ್ ಟಾಟಾ

Thursday December 24, 2015,

3 min Read

ತನ್ನ ಸೇವಾ ಯೋಜನೆಗಳಿಂದ ಈಗಾಗಲೇ ಮನೆ ಮಾತಾಗಿರುವ ಖಾನ್ ಅಕಾಡೆಮಿ, ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಭಾರತ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ನಂಬಿಕಾರ್ಹವಾಗಿರುವ ಟಾಟಾ ಟ್ರಸ್ಟ್ರಿ ಜೊತೆ ಕೈ ಜೋಡಿಸಿದೆ. ಲಾಭದ ಉದ್ದೇಶ ಹೊಂದಿರದ ಖಾನ್ ಅಕಾಡೆಮಿ, ಈ ಮೂಲಕ ಮಹತ್ವಾಂಕ್ಷೆಯ ಯೋಜನೆಯ ಕನಸು ಸಾಕಾರಗೊಳ್ಳುವತ್ತ ಹೆಜ್ಜೆ ಇರಿಸಿದೆ. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರೆಯುವಂತಾಗಬೇಕು. ಆನ್ ಲೈನ್ ಮಾಹಿತಿ ಯಾವುದೇ ಅಡೆ-ತಡೆಗಳಿಲ್ಲದೆ ಲಭಿಸಬೇಕು. ಈ ಮಹಾನ್ ಗುರಿ ಖಾನ್ ಅಕಾಡೆಮಿ ಹೊಂದಿದೆ. ಭಾರತೀಯ ಶಿಕ್ಷಕರ ನಿಯೋಜನೆ ಅಲ್ಲದೆ ಇತರ ಕ್ಷೇತ್ರಗಳಿಗೂ ವಿಸ್ತರವಾಗಲಿದೆ ಚಟುವಟಿಕೆ.

ಎನ್ ಸಿ ಇ ಆರ್ ಟಿ ಪಠ್ಯ ಪುಸಕ್ತದ ಮಾಹಿತಿ ಎಲ್ಲ ಭಾರತೀಯ ಭಾಷೆಗಳಲ್ಲಿ ದೊರಕಿಸಿಕೊಡುವ ಪ್ರಯತ್ನ ಕೂಡ ಇದರಲ್ಲಿ ಅಡಗಿದೆ.

ಯುವರ್ ಸ್ಟೋರಿ ಈ ಮಹಾ ಪ್ರಕ್ರಿಯೆಗೆ ಇನ್ನಿಲ್ಲದ ಮಹತ್ವ ನೀಡಿದೆ. ಯಾಕೆಂದರೆ ಇದು ಮುಂದಿನ ದಿನಗಳಲ್ಲಿ ಚಾರಿತ್ರಿಕ ಬದಲಾವಣೆಗೆ ನಾಂದಿ ಹಾಡಲಿದೆ. ಗುಣಮಟ್ಟದ ಶಿಕ್ಷಣ ಪಡೆಯಲು ಹರ ಸಾಹಸ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ. ಅದೇ ರೀತಿ ಶಿಕ್ಷಕರಿಗೂ ಕೂಡ ತಮ್ಮ ವೃತ್ತಿ ಕೌಶಲ್ಯವನ್ನು ಹೆಚ್ಚಿಸಲು ಇದು ನೆರವು ನೀಡಲಿದೆ.

ಖಾನ್ ಅಕಾಡೆಮಿಯ ಸಂಸ್ಥಾಪಕ ಸಲ್ಮಾನ್ ಖಾನ್ ತಮ್ಮ ಕನಸಿನ ಬಗ್ಗೆ ಈ ರೀತಿ ಹೇಳುತ್ತಾರೆ. ಯಾರೊಂದಿಗೂ ಕೂಡ ಕೈ ಜೋಡಿಸಲು ನಾವು ಸಿದ್ಧರಾಗಿದ್ದೇವೆ. ಶಿಕ್ಷಣ ತಂತ್ರಜ್ಞಾನ ಆಧಾರಿತ ವಿನೂತನ ಯೋಜನೆಗಳು ನಮ್ಮ ಆಸಕ್ತಿಯ ವಿಷಯಗಳಾಗಿವೆ. ಉಚಿತ, ವಿಶ್ವ ಗುಣಮಟ್ಟದ ಶಿಕ್ಷಣ ಖಾತರಿಪಡಿಸುವ ನಿಟ್ಟಿನಲ್ಲಿ ಖಾನ್ ಅಕಾಡೆಮಿ ಕಾರ್ಯೋನ್ಮುಖವಾಗಿದೆ ಎನ್ನುತ್ತಾರೆ ಸಲ್ಮಾನ್ ಖಾನ್.

image


ಕಡಿಮೆ ಖರ್ಚಿನ ಸಾಧನಗಳ ಮೂಲಕ ಆಪ್ ಲೈನ್ ಮತ್ತು ಆನ್ ಲೈನ್ ಮಾಹಿತಿ ದೊರೆಯುವಂತೆ ಮಾಡುವುದೇ ನಮ್ಮ ಆಸಕ್ತಿಯ ವಿಷಯ ಎನ್ನುತ್ತಾರೆ ಸಲ್ಮಾನ್ ಖಾನ್. ದೇಶದ ಹಲವು ಶಾಲೆಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ಇದನ್ನು ಜಾರಿ ಮಾಡಲಾಗಿದೆ. ಶಿಕ್ಷಕರಿಗೆ ಸಹಾಯ ಮಾಡುವ ಇರಾದೆಯೂ ಇದರಲ್ಲಿದೆ ಎನ್ನುತ್ತಿದೆ ಖಾನ್ ಅಕಾಡೆಮಿ. ಪ್ರೊಫೆಸರ್​​​ಗಳನ್ನು ಕೂಡ ಈ ಜಾಲದಲ್ಲಿ ಸೇರಿಸುವುದರ ಮೂಲಕ ಅವರ ಅನುಭವ ಬಳಸಿಕೊಳ್ಳಲು ಖಾನ್ ಅಕಾಡೆಮಿ ಉದ್ದೇಶಿಸಿದೆ. ಈಗಿರುವ ಶಿಕ್ಷಕರಿಗೆ ಕೊಕ್ ನೀಡುವ ಉದ್ದೇಶ ಇಲ್ಲ. ಬದಲಾಗಿ ವಿದ್ಯಾರ್ಥಿಗಳಿಗೆ ಇನ್ನಷ್ಟು ನೆರವು ನೀಡುವ ಮೂಲಕ ಶಿಕ್ಷಕರಿಗೆ ಸಮಾವಕಾಶ ನೀಡುವುದೇ ಗುರಿಯಾಗಿದೆ.

ದೇಶದ ಖ್ಯಾತ ಉದ್ಯಮಿಯಾಗಿರುವ ರತನ್ ಟಾಟಾ, ಖಾನ್ ಅಕಾಡಮಿಯ ಪ್ರಯತ್ನ ವಿಭಿನ್ನವಾದ ಪುನರುಜ್ಜೀವನ ಎಂದೇ ಬಣ್ಣಿಸಿದ್ದಾರೆ. ಅನಕ್ಷರತೆಯಿಂದ ಅಕ್ಷರತೆಯೆಡೆಗೆ ಪ್ರಯಾಣ ಬೆಳೆಸುವುದಲ್ಲದೆ, ಯಾವುದೇ ಸಂದರ್ಭದಲ್ಲಿ ಯಾರಿಗೂ ಬೇಕಾದರೂ ಶಿಕ್ಷಣ ನೀಡುವುದೇ ಇದರ ಅಂತರ್ಗತ ಭಾಗ ಎಂದು ಹೇಳಿದ್ದಾರೆ.

ಭಾರತೀಯನಾಗಿ ಮತ್ತು ವಿಶ್ವದ ಪ್ರಜೆಯಾಗಿ ಇಂತಹ ಮಹತ್ವಾಂಕ್ಷೆಯ ಯೋಜನೆಯ ಭಾಗವಾಗಿರುವುದು ನಿಜವಾಗಿಯೂ ಒದಗಿ ಬಂದ ಭಾಗ್ಯ ಎನ್ನುತ್ತಾರೆ ರತನ್ ಟಾಟಾ.

ಖಾನ್ ಅಕಾಡೆಮಿಯ ಬಗ್ಗೆ ಒಂದಿಷ್ಟು ಮಾತು

ಎಂಐಟಿ ಮತ್ತು ಹಾರ್ವಡ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಸಲ್ಮಾನ್ ಖಾನ್ , ಆಕಸ್ಮಿಕವಾಗಿಯೇ ಈ ಒಂದು ವಿನೂತನ ಪ್ರಯತ್ನಕ್ಕೆ ಮುನ್ನುಡಿ ಬರೆದರು. ನಿಧಿ ವಿಶ್ಲೇಷಣೆಕಾರರಾಗಿಯೂ ಕೆಲಸ ನಿರ್ವಹಿಸಿದ್ದರು. ಮೊದಲಿಗೆ ಸೋದರ ಸಂಬಂಧಿಯೋರ್ವನಿಗೆ ಶೈಕ್ಷಣಿಕ ಸಹಾಯ ಮಾಡಲು ವಿಡೀಯೋ ಒಂದನ್ನು ಸಿದ್ಧಪಡಿಸಿದ್ದರು. ಇದು ಕ್ಲಿಕ್ ಆಯಿತು. ಬಳಿಕ ಇತರ ಸಂಬಂಧಿಗಳು ಇದೇ ರೀತಿಯ ಬೇಡಿಕೆ ಮುಂದಿಟ್ಟರು. ಈ ಹಂತದಲ್ಲಿ ಎಲ್ಲರ ಬೇಡಿಕೆ ಈಡೇರಿಸಲು ಯಾಕೆ ಒಂದು ಅಕಾಡೆಮಿ ಸ್ಥಾಪಿಸಬಾರದು ಎಂಬ ಕನಸು ಮೊಳಕೆಯೊಡೆಯಿತು. ಈ ರೀತಿ ಅಭಿಯಾನ ಆರಂಭವಾಯಿತು ಎನ್ನುತ್ತಾರೆ ಸಲ್ಮಾನ್ ಖಾನ್.

ಖಾನ್ ಅಕಾಡೆಮಿ ಪ್ರಸಕ್ತ 2700ರಷ್ಟು ಪ್ರೀ ವಿಡಿಯೋ ಕ್ಲಿಪಿಂಗ್ ಗಳನ್ನು ಹೊಂದಿದೆ. ಪ್ರತಿಯೊಂದು ಹತ್ತು ನಿಮಿಷದ ಅವಧಿಯದ್ದಾಗಿದೆ. ಗಣಿತ, ಕಂಪ್ಯೂಟರ್ ಸೈನ್ಸ್, ವಿಜ್ಞಾನ ಹೀಗೆ ಹತ್ತು ಹಲವು ವಿಷಯಗಳ ವಿಡೀಯೋ ಮಾಹಿತಿ ಅಡಗಿದೆ. ಮುಖ್ಯವಾಗಿ ಇಂಗ್ಲೀಷ್ ನಲ್ಲಿ ಮಾಹಿತಿ ನೀಡಲಾಗುತ್ತಿದೆ. ಭಾರತದಂತಹ ದೇಶದಲ್ಲಿ ಇದು ವ್ಯಾಪಕ ಪರಿಣಾಮ ಬೀರುವಷ್ಟು ಶಕ್ತವಾಗಿದೆ ಎನ್ನುತ್ತಾರೆ ಸಲ್ಮಾನ್ ಖಾನ್. ಭಾರತದಲ್ಲಿ ನಮ್ಮ ಕುಟುಂಬದ ಮೂಲ ಇರುವುದರಿಂದ ಭಾರತ ಅತ್ಯಂತ ಮೆಚ್ಚಿನ ರಾಷ್ಟ್ರವಾಗಿದೆ ಎಂದು ಹೇಳಲು ಖಾನ್ ಮರೆಯುವುದಿಲ್ಲ. ಇತ್ತೀಚೆಗಷ್ಟೇ ಖಾನ್ ಅಕಾಡೆಮಿಯ ಹಿಂದಿ ಪೋರ್ಟಲ್ ಬಿಡುಗಡೆಯಾಗಿದ್ದರೂ ಅದು ಈಗಾಗಲೇ ಜನಮನ್ನಣೆ ಗಳಿಸುವ ಹಾದಿಯಲ್ಲಿದೆ ಎನ್ನುತ್ತಾರೆ ಸಲ್ಮಾನ್ ಖಾನ್. ಮುಂದಿನ ದಿನಗಳಲ್ಲಿ ಅಂದರೆ ನಾಲ್ಕೈದು ವರ್ಷಗಳಲ್ಲಿ ಪರಿಪೂರ್ಣ ಭಾರತೀಯ ಸಂಸ್ಥೆಯಾಗಿ ಮೂಡಿ ಬರುವ ಕನಸನ್ನು ಸಲ್ಮಾನ್ ಖಾನ್ ಹೊಂದಿದ್ದಾರೆ.

ಖಾನ್​ ಅಕಾಡೆಮಿಯ ಆದ್ಯತೆ ಯಾವುದಕ್ಕೆ ?

ಮೊದಲ ಹಂತದಲ್ಲಿ ಶೈಕ್ಷಣಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಖಾನ್ ಅಕಾಡಮಿ ಆದ್ಯತೆ ನೀಡಲಿದೆ. ಮುಖ್ಯವಾಗಿ ನಗರದಲ್ಲಿರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬದ ಮಕ್ಕಳ ಶೈಕ್ಷಣಿಕ ಬೇಡಿಕೆ ಈಡೇರಿಸುವ ಗುರಿ ಈ ಮೂಲಕ ಅಡಗಿದೆ.

ಎರಡನೇ ಹಂತವಾಗಿ ಭಾರತೀಯ ಭಾಷೆಗಳಲ್ಲಿ ಮಾಹಿತಿ ದೊರೆಯುವಂತಹ ಪ್ರಯತ್ನ ನಡೆಸಲಾಗುವುದು. ರತನ್ ಟಾಟಾ ಜೊತೆ ಕೈ ಜೋಡಿಸುವುದರ ಮೂಲಕ, ಭಾರತೀಯ ವಿದ್ಯಾರ್ಥಿಗಳಿಗೆ ಮಾಹಿತಿ ದೊರೆಯುವ ಪ್ರಯತ್ನಕ್ಕೆ ಬಲ ನೀಡಲಾಗುವುದು.

ಪ್ರತಿಯೊಬ್ಬ ಭಾರತೀಯ ತನಗೆ ಇಷ್ಟಪಟ್ಟ ಅಂದರೆ ಮಹತ್ವದೆನಿಸಿರುವ ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆ ಜೊತೆಗೆ ಅದರ ಪೂರ್ಣ ಸಾಮರ್ಥ್ಯವನ್ನು ಪಡೆಯಲು ಸಶಕ್ತನಾಗಿರಬೇಕು. ಇದು ಖಾನ್ ಅಕಾಡೆಮಿಯ ಕನಸು. ಕಂಪ್ಯೂಟರ್ ಮೂಲಕ ಅಥವಾ ಕಡಿಮೆ ಖರ್ಚಿನ ಸಾಧನಗಳ ಮೂಲಕ ಈ ಮಾಹಿತಿ ಹರಿವು ಪ್ರವಹಿಸಬೇಕು.. ಇದು ಖಾನ್ ಅಕಾಡಮಿಯ ಕನಸು.

ಜಾಗತಿಕ ಗುಣಮಟ್ಟದ ಶಿಕ್ಷಣ, ವಿಶ್ವದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಗೆ ಉಚಿತವಾಗಿ ದೊರೆಯಬೇಕು. ಇದು ನನ್ನ ಮಹದಾಸೆ ಎಂದು ದೂರದೃಷ್ಟಿ ಭಾಷಣದಲ್ಲಿ ಆಶಯ ವ್ಯಕ್ತಪಡಿಸಿದಾಗ ಇದು ನಿಜವಾಗಿಯೂ ಕಾರ್ಯರೂಪಕ್ಕೆ ಬರಬಹುದೇ ಎಂಬ ಸಂದೇಹ ಕೂಡ ನನಗಿತ್ತು ಎನ್ನುತ್ತಾರೆ ಸಲ್ಮಾನ್ ಖಾನ್. ಆದರೆ ಈ ಹೆದರಿಕೆ ಇದೀಗ ದೂರವಾಗಿದೆ. ಬದಲಾಗಿ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿದೆ ಎನ್ನುತ್ತಾರೆ ಅವರು. ರತನ್ ಟಾಟಾ ಅವರು ಕೈ ಜೋಡಿಸಿದ ಬಳಿಕ ನಿರ್ಣಾಯಕ ತಿರುವು ಪಡೆಯಿತು ಎನ್ನುತ್ತಾರೆ ಸಲ್ಮಾನ್ ಖಾನ್.

ಸಮಾನ ಸ್ನೇಹಿತರ ಮೂಲಕ ರತನ್ ಟಾಟಾ ಅವರ ಪರಿಚಯವಾಯಿತು. ಈ ಗೆಳೆತನ ಉದ್ಯಮದಲ್ಲಿ ಕೈಜೋಡಿಸಲು ನೆರವಾಯ್ತು ಎನ್ನುತ್ತಾರೆ ಖಾನ್. ಎಲ್ಲರಿಗೂ ಉಚಿತ ಶಿಕ್ಷಣ ಎಂಬ ಪರಿಕಲ್ಪನೆಗೆ ಟಾಟಾ ಕನಸು ತುಂಬಿದರು.

ಜಾಗತಿಕ ಮಟ್ಟದಲ್ಲಿ ಖಾನ್ ಅಕಾಡೆಮಿ ಮಾಡಿರುವ ಪ್ರಭಾವ ಎಲ್ಲರ ಅನುಭವಕ್ಕೆ ಬಂದಿದೆ. ತಂತ್ರಜ್ಞಾನದ ಬೆಂಬಲದಿಂದ ಇದವರೆಗೂ ನಡೆಯದ ಹಾದಿಯಲ್ಲಿ ಕ್ರಮಿಸಿ ತನ್ನದೇ ಛಾಪು ಮೂಡಿಸಿರುವ ಖಾನ್ ಅಕಾಡೆಮಿ, ಕಾರ್ಯ ವೈಖರಿಯಿಂದ ಜನ ಮನ್ನಣೆ ಗಳಿಸಿದೆ.

ಅಂಕೆ ಸಂಖ್ಯೆಗಳು ನಿರ್ಣಾಯಕವಲ್ಲ. ಬದಲಾಗಿ ಅದು ಬೀರಿದ ಪ್ರಭಾವ ಮಾತ್ರ ಮುಖ್ಯವಾಗಿರುತ್ತದೆ. ಖಾನ್ ಅಕಾಡೆಮಿಗೆ ಈ ಮಾತು ನೂರಕ್ಕೆ ನೂರು ಅನ್ವಯಿಸುತ್ತದೆ. ಬೆಳೆದು ಬಂದ ಹಾದಿ ಮತ್ತು ಮಾಡಿರುವ ಪರಿವರ್ತನೆ ಅದರ ಸಾಧನೆಗೆ ಕೈ ಗನ್ನಡಿಯಾಗಿದೆ.

ಲೇಖಕರು : ಶ್ರದ್ಧಾ ಶರ್ಮಾ

ಅನುವಾದಕರು : ಎಸ್​.ಡಿ.