ಹೂಡಿಕೆದಾರ ಆನ್‍ಲೈನ್ ಕಿರಾಣಿ ಅಂಗಡಿ ತೆರೆದಿದ್ದೇಕೆ?

ಟೀಮ್​ ವೈ.ಎಸ್​. ಕನ್ನಡ

ಹೂಡಿಕೆದಾರ ಆನ್‍ಲೈನ್ ಕಿರಾಣಿ ಅಂಗಡಿ ತೆರೆದಿದ್ದೇಕೆ?

Tuesday January 26, 2016,

3 min Read

ಕಿಶೋರ್ ಗಂಜಿ ಒಬ್ಬ ಎಲೆಕ್ಟ್ರಿಕಲ್ ಎಂಜಿನಿಯರ್. ಅವರು ಎಂಬಿಎ ಕೂಡ ಮಾಡಿದ್ದಾರೆ. ಅಮೆರಿಕದಲ್ಲಿ ಐಟಿ ಸರ್ವೀಸ್ ಕಂಪನಿಯೊಂದನ್ನು ಆರಂಭಿಸುವ ಮೂಲಕ ತಮ್ಮ ಉದ್ಯಮ ಪಯಣವನ್ನು ಶುರು ಮಾಡಿದ್ರು. ನ್ಯೂ ಜೆರ್ಸಿ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಕಿಶೋರ್ ಗಂಜಿ ಅವರ ಸಂಸ್ಥೆಯಿತ್ತು. ತಮ್ಮ ಸ್ವಪ್ರಯತ್ನದಿಂದ ಕಿಶೋರ್ ಕಂಪನಿಯ ಮೌಲ್ಯವನ್ನು 40 ಮಿಲಿಯನ್ ಡಾಲರ್‍ಗೆ ಹೆಚ್ಚಿಸಿದ್ರು, 300 ಉದ್ಯೋಗಿಗಳನ್ನೂ ಸಂಪಾದಿಸಿದ್ರು.

ಕಳೆದ ಕೆಲ ವರ್ಷಗಳಿಂದ ಕಿಶೋರ್ ಗಂಜಿ, ಉದ್ಯಮಗಳಲ್ಲಿ ಹೂಡಿಕೆ ಮಾಡುವುದರಲ್ಲಿ ಕ್ರಿಯಾಶೀಲರಾಗಿದ್ದಾರೆ. ಇಂದೇ ಸಂದರ್ಭದಲ್ಲಿ ಅವರು ಆನ್‍ಲೈನ್‍ನಲ್ಲಿ ಕಿರಾಣಿ ಸಾಮಾಗ್ರಿಗಳಿಗಿರುವ ಬೇಡಿಕೆಯನ್ನು ಮನಗಂಡಿದ್ದಾರೆ. ಉಳಿದ ಉದ್ಯಮಕ್ಕೆ ಹೋಲಿಸಿದರೆ ಈ ಕ್ಷೇತ್ರದಲ್ಲಿ ಪೈಪೋಟಿ ಕೂಡ ಕಡಿಮೆ. ಹಾಗಾಗಿ ಸಹಜವಾಗಿಯೇ ಆನ್‍ಲೈನ್ ದಿನಸಿ ವಹಿವಾಟನ್ನು ಆರಂಭಿಸಲು ಕಿಶೋರ್ ನಿರ್ಧರಿಸಿದ್ರು. 2014ರ ಡಿಸೆಂಬರ್‍ನಲ್ಲಿ ಕಿಶೋರ್ `ಝಿಪ್'ಅನ್ನು ಆರಂಭಿಸಿದ್ದಾರೆ. ಇದೊಂದು ಹೊಸತನವುಳ್ಳ ಸೂಪರ್ ಮಾರ್ಕೆಟ್. ಹೈದ್ರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ `ಝಿಪ್'ನ ವೇದಿಕೆಗಳಿವೆ. ಒಳ್ಳೆಯ ಗುಣಮಟ್ಟದ ದಿನಸಿ ಸಾಮಾಗ್ರಿಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಝಿಪ್ ಡೆಲಿವರಿ ಮಾಡುತ್ತಿದೆ.

image


ತಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಕಿರಾಣಿ ಸಾಮಾಗ್ರಿಗಳ ಖರೀದಿಯಲ್ಲಿ , ಗುಣಮಟ್ಟ, ಹಣ ಮತ್ತು ಸಮಯದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಗ್ರಾಹಕರಿಗೆ ನೆರವಾಗುವುದು ಕಿಶೋರ್ ಅವರ ಉದ್ದೇಶ. ಝಿಪ್ ಮೂಲಕ ದಿನಸಿ ಖರೀದಿಸಿದ್ರೆ, ಗ್ರಾಹಕರು ಸ್ಥಳೀಯ ಸೂಪರ್ ಮಾರ್ಕೆಟ್‍ಗಳನ್ನು ಹುಡುಕಿಕೊಂಡು ಅಲೆದಾಡುವ ತಲೆನೋವಿರುವುದಿಲ್ಲ. ಮಾರಾಟಗಾರರ ಜೊತೆ ಚೌಕಾಸಿ ಮಾಡುವ ಅನಿವಾರ್ಯತೆ ಎದುರಾಗುವುದಿಲ್ಲ. ಬಿಲ್ಲಿಂಗ್ ಸಮಸ್ಯೆ, ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಇವೆಲ್ಲದರಿಂದ್ಲೂ ಮುಕ್ತಿ ಪಡೆಯಬಹುದು ಎನ್ನುತ್ತಾರೆ ಝಿಪ್ ಸಂಸ್ಥೆಯ ಸಿಇಓ ಹಾಗೂ ಸಂಸ್ಥಾಪಕ, 40ರ ಹರೆಯದ ಕಿಶೋರ್ ಗಂಜಿ.

ಝಿಪ್ ಆನ್‍ಲೈನ್ ವೇದಿಕೆಯಲ್ಲಿ 8,500ಕ್ಕೂ ಹೆಚ್ಚು ಉತ್ಪನ್ನಗಳಿವೆ. ರಿಯಾಯಿತಿ ಮಾರಾಟ, ವಿಶೇಷ ಆಫರ್‍ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಗ್ರಾಹಕರ ಮನೆಮನೆಗೆ ತಲುಪಿಸಲಾಗುತ್ತಿದೆ. ಒಮ್ಮೆ ಝಿಪ್‍ನಲ್ಲಿ ದಿನಸಿ ಕೊಂಡುಕೊಂಡ್ರೆ ಗ್ರಾಹಕರಿಗೆ ಎಂದೂ ಮರೆಯಲಾಗದಂತಹ ಉತ್ತಮ ಅನುಭವವಾಗಬೇಕು ಅನ್ನೋದು ಕಿಶೋರ್ ಅವರ ಉದ್ದೇಶ. ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವುದೇ ಅವರ ಗುರಿ.

ಉದ್ಯಮ ಮಾದರಿ...

ಮಧ್ಯಾಹ್ನ 1 ಗಂಟೆಯೊಳಗೆ ಆರ್ಡರ್ ಮಾಡಿದ್ರೆ ಆ ಉತ್ಪನ್ನಗಳನ್ನೆಲ್ಲ ಅದೇ ದಿನ ಡೆಲಿವರಿ ಮಾಡಲಾಗುತ್ತದೆ. ಒಟ್ಟಿಗೆ ಡೆಲಿವರಿ ಮಾಡುವುದರಿಂದ ವೆಚ್ಚವನ್ನು ಕಡಿಮೆ ಮಾಡಬಹುದು, ಉತ್ಪನ್ನಗಳನ್ನು ಸಂಗ್ರಹಿಸಲು ಸಮಯ ಸಿಗುವುದರಿಂದ ಹೆಚ್ಹೆಚ್ಚು ರಿಯಾಯಿತಿ ಮತ್ತು ಆಫರ್‍ಗಳನ್ನು ಕೊಡಬಹುದು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸಂಪಾದಿಸಬಹುದು ಎನ್ನುತ್ತಾರೆ ಕಿಶೋರ್. ಆರ್ಡರ್ ಮೌಲ್ಯ ಅಧಿಕವಾಗಿದ್ದಲ್ಲಿ, ಲಾಭ ಕೂಡ ಹೆಚ್ಚೇ ಸಿಗುತ್ತದೆ. ಚೆನ್ನಾಗಿ ಆದಾಯ ಗಳಿಸಿದ್ರೆ ಉದ್ಯಮವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಬಹುದು, ಇನ್ನಷ್ಟು ವಿಸ್ತರಿಸಬಹುದು ಅನ್ನೋದು ಅವರ ಲೆಕ್ಕಾಚಾರ. ವಿಶೇಷ ಅಂದ್ರೆ ಝಿಪ್ ವೇದಿಕೆಗೆ ಪ್ರತಿದಿನ 200 ಆರ್ಡರ್‍ಗಳು ಸಿಗುತ್ತಿವೆ, ಇದನ್ನು 1000ದವರೆಗೆ ಹೆಚ್ಚಿಸುವುದು ಕಿಶೋರ್ ಅವರ ಮುಂದಿರುವ ಗುರಿ.

ತೊಂದರೆ ಮತ್ತು ಸವಾಲು...

ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವಲ್ಲಿ ಕಿಶೋರ್ ಅವರಿಗೆ ತೊಂದರೆ ಎದುರಾಗಿತ್ತು. ಯಾಕಂದ್ರೆ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ತಾಂತ್ರಿಕ ವ್ಯವಸ್ಥೆಗಳ ಬಗ್ಗೆ ವ್ಯಾಪಾರಿಗಳಿಗೆ ಗೊತ್ತಿರಲಿಲ್ಲ. ತಮ್ಮ ಆದಾಯವನ್ನು ಝಿಪ್ ವೇದಿಕೆ ಉಳಿಸಿಕೊಡುತ್ತೆ ಅನ್ನೋ ವಿಶ್ವಾಸ ಕೂಡ ಅವರಲ್ಲಿ ಇರಲಿಲ್ಲ. ಇನ್ನೊಂದು ದೊಡ್ಡ ಸವಾಲು ಅಂದ್ರೆ ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳುವುದು ಮತ್ತು ಡೆಲಿವರಿ ಸೇವೆಯನ್ನು ಸರಿಯಾಗಿ ಮಾಡುವುದು. ಉತ್ಪನ್ನಗಳನ್ನೆಲ್ಲ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವುದರಿಂದ ಗುಣಮಟ್ಟದ ಬಗ್ಗೆ ಗಮನಹರಿಸಲೇಬೇಕು. ಗ್ರಾಹಕರಿಗೆ ತೃಪ್ತಿಯಾಗುವಂತೆ, ಅವರು ಡೆಲಿವರಿ ಬಾಯ್‍ಗಳ ವಿರುದ್ಧ ಹರಿಹಾಯದಂತೆ ನೋಡಿಕೊಳ್ಳುವುದು ಕೂಡ ಸವಾಲಿನ ಕೆಲಸ. ಅದಕ್ಕಾಗಿಯೇ ಝಿಪ್ ಡಾಟ್ ಇನ್, ತನ್ನದೇ ಆದ ಲಾಜಿಸ್ಟಿಕ್ಸ್ ತಂಡವನ್ನು ಹೊಂದಿದೆ, ಟ್ರಕ್‍ಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ಡೆಲಿವರಿ ಮಾಡುತ್ತಿದೆ.

ವಿಸ್ತರಣಾ ಯೋಜನೆ...

ಈ ವರ್ಷಾಂತ್ಯದೊಳಗೆ ಇನ್ನೆರಡು ನಗರಗಳಲ್ಲಿ ಝಿಪ್ ಡಾಟ್ ಇನ್ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯನ್ನು ಕಿಶೋರ್ ಹಾಕಿಕೊಂಡಿದ್ದಾರೆ. ಭವಿಷ್ಯದಲ್ಲಿ 8000-12000 ಉತ್ಪನ್ನಗಳನ್ನು ಝಿಪ್ ವೇದಿಕೆ ಮೂಲಕ ಮಾರಾಟ ಮಾಡುವ ಇರಾದೆಯನ್ನು ಕಿಶೋರ್ ಹೊಂದಿದ್ದಾರೆ.

ಮಾರುಕಟ್ಟೆ ಪೈಪೋಟಿ...

ಆಹಾರ ಎಲ್ಲರ ಮೂಲಭೂತ ಅಗತ್ಯಗಳಲ್ಲೊಂದು. ಭಾರತದ ಚಿಲ್ಲರೆ ಮಾರುಕಟ್ಟೆ ವಹಿವಾಟಿನಲ್ಲಿ ಶೇ.60ರಷ್ಟು ಪಾಲು ದಿನಸಿ ಉತ್ಪನ್ನಗಳಿಗೆ ಮೀಸಲಾಗಿದೆ. `ಟೆಕ್ನೋಪಾಕ್' ಸಂಸ್ಥೆಯ ಅಧ್ಯಯನದ ಪ್ರಕಾರ ಭಾರತದಲ್ಲಿ ಆಹಾರ ಮತ್ತು ಕಿರಾಣಿ ಇಂಡಸ್ಟ್ರಿಯ ಮೌಲ್ಯ ಬರೋಬ್ಬರಿ 383 ಬಿಲಿಯನ್ ಡಾಲರ್. 2020ರ ವೇಳೆಗೆ ಈ ಮೌಲ್ಯ 1 ಟ್ರಿಲಿಯನ್ ಡಾಲರ್‍ಗೆ ತಲುಪುವ ನಿರೀಕ್ಷೆಯಿದೆ. `ಬಿಗ್ ಬಾಸ್ಕೆಟ್', `ಝೊಪ್‍ನೌ', `ಗ್ರೊಫರ್ಸ್', `ಪೆಪ್ಪರ್‍ಟ್ಯಾಪ್' ಮತ್ತು `ಜುಗ್ನೂ' ಕಂಪನಿಗಳು ಈ ವಲಯದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿವೆ. ಈ ವರ್ಷ ಭಾರತದಲ್ಲಿ 5 ಆನ್‍ಲೈನ್ ಕಿರಾಣಿ ಕಂಪನಿಗಳು ತಮ್ಮ ಮೌಲ್ಯವನ್ನು 173 ಮಿಲಿಯನ್ ಡಾಲರ್‍ಗೆ ಹೆಚ್ಚಿಸಿಕೊಂಡಿವೆ. `ಬಿಗ್ ಬಾಸ್ಕೆಟ್' ಮತ್ತು `ಗ್ರೊಫರ್ಸ್' ಮೌಲ್ಯ ಕೂಡ ತಲಾ 85.8 ಮಿಲಿಯನ್ ಡಾಲರ್ ಹಾಗೂ 45.5 ಮಿಲಿಯನ್ ಡಾಲರ್‍ಗೆ ಏರಿಕೆಯಾಗಿದೆ. ತೀವ್ರ ಪೈಪೋಟಿ ಇದ್ರೂ ಅತ್ಯುತ್ತಮ ಉದ್ಯಮ ಮಾದರಿಯನ್ನು ಅಳವಡಿಸಿಕೊಂಡಿರುವುದರಿಂದ ಸಂಸ್ಥೆ ವಿಫಲವಾಗುವ ಭಯವಿಲ್ಲ ಅನ್ನೋದು ಕಿಶೋರ್ ಅವರ ವಿಶ್ವಾಸದ ನುಡಿ.

`ಯುವರ್‍ಸ್ಟೋರಿ' ಮಾಹಿತಿ

ಕಳೆದ 2 ವರ್ಷಗಳಲ್ಲಿ ಹೈಪರ್‍ಲೋಕಲ್ ವಿಭಾಗದಲ್ಲಿ ಹೆಚ್ಚು ಉದ್ಯಮಗಳು ಅಸ್ತಿತ್ವಕ್ಕೆ ಬಂದಿವೆ. ಅದರಲ್ಲೂ ಆನ್‍ಲೈನ್ ಕಿರಾಣಿ ವಲಯ ಹೆಚ್ಚು ಗಮನ ಸೆಳೆದಿದೆ. ಹತ್ತಾರು ವೇದಿಕೆಗಳು ತಮ್ಮನ್ನು ಯುನಿಕಾರ್ನ್‍ಗಳೆಂದು ಕರೆದುಕೊಂಡಿವೆ. ಮಾರುಕಟ್ಟೆಯಲ್ಲಿ ಉಳಿದುಕೊಳ್ಳುವ ವಿಶ್ವಾಸದಲ್ಲಿವೆ. ಆದ್ರೆ ಕೆಲವೇ ಕೆಲವು ಆನ್‍ಲೈನ್ ವೇದಿಕೆಗಳಿಂದ 1.2 ಬಿಲಿಯನ್ ಜನರ ದೈನಂದಿನ ಅಗತ್ಯಗಳನ್ನು ಪೂರೈಸುವುದು ಸುಲಭದ ಕೆಲಸವಲ್ಲ. ಹಾಗಾಗಿಯೇ ಸಣ್ಣಪುಟ್ಟ ಪ್ಲೇಯರ್‍ಗಳು ಕೂಡ ಹುಟ್ಟಿಕೊಂಡಿವೆ. ಭವಿಷ್ಯದಲ್ಲಿ ಮಾರುಕಟ್ಟೆ ಇದಕ್ಕೆ ಹೇಗೆ ಸ್ಪಂದಿಸುತ್ತೆ ಅನ್ನೋದು ಸದ್ಯದ ಕುತೂಹಲ. ಕಾಲವೇ ಇದಕ್ಕೆ ಉತ್ತರಿಸಬೇಕು.

ಲೇಖಕರು : ತೌಸಿಫ್ ಅಲಮ್

ಅನುವಾದಕರು : ಭಾರತಿ ಭಟ್