ಉದ್ಯಮಗಳಿಗೆ `007' ಸಂಕೇತ...

ಟೀಮ್​​ ವೈ.ಎಸ್​​. ಕನ್ನಡ

ಉದ್ಯಮಗಳಿಗೆ `007' ಸಂಕೇತ...

Sunday December 13, 2015,

3 min Read

ಈಗ ಮತ್ತೊಮ್ಮೆ ಬಾಂಡ್ ಹವಾ ಶುರುವಾಗಿದೆ. ಅಭಿಮಾನಿಗಳ ಪ್ರೀತಿಯ ಗೂಢಚಾರ ಜೇಮ್ಸ್ ಬಾಂಡ್ ಜಾಗತಿಕ ಬಾಕ್ಸ್ ಆಫೀಸನ್ನೇ ಕೊಳ್ಳೆ ಹೊಡೆಯಲು ಲಗ್ಗೆ ಇಟ್ಟಿದ್ದಾನೆ. ಎದುರಾಳಿಗಳ ಕ್ಯಾಂಪ್‍ನಲ್ಲಿ ಬಾಂಡ್ ಕಿಚ್ಚು ಹಚ್ತಾ ಇದ್ರೆ, ಆತನ ಸಾಹಸಗಳು ಉದ್ಯಮ ಪಯಣವನ್ನು ಆರಂಭಿಸುವ ಹುಮ್ಮಸ್ಸಿನಲ್ಲಿರುವವರ ಎದೆಯಲ್ಲಿ ಸ್ಪೂರ್ತಿಯ ಕಿಡಿ ಹೊತ್ತಿಸಿವೆ. ಅಂತಿಮವಾಗಿ ಜಾಕ್‍ಪಾಟ್ ಹೊಡೆದು ಮಾರುಕಟ್ಟೆಯ `ಕ್ಯಾಸಿನೋ ರಾಯಲ್' ಆಗಬೇಕೆಂಬ ಕನಸನ್ನು ಎಲ್ಲರೂ ಕಾಣುತ್ತಿದ್ದಾರೆ.

ಮರೆಯಲಾಗದಂತಹ ಪ್ರವೇಶ

`ಫಸ್ಟ್ ಇಂಪ್ರೆಶನ್ ಈಸ್ ಬೆಸ್ಟ್ ಇಂಪ್ರೆಶನ್' ಅನ್ನೋ ಮಾತಿದೆ. ಫಸ್ಟ್ ಇಂಪ್ರೆಶನ್ ಮೂಡಿಸಲು ನಿಮಗೆ ಸೆಕೆಂಡ್ ಚಾನ್ಸ್ ಸಿಗುವುದಿಲ್ಲ. ಬಾಂಡ್ ಸಿನಿಮಾಗಳು ಹೃದಯವನ್ನೇ ತೆಗೆದುಕೊಂಡಂತೆ ಕಾಣುತ್ತೆ ಅನ್ನೋ ಹಳೆಯ ಗಾದೆಯೇ ಇದೆ. ಜೇಮ್ಸ್ ಬಾಂಡ್ ಸರಣಿಯ ಪ್ರತಿಯೊಂದು ಚಿತ್ರವೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತೆ, ರಿಲೀಸ್‍ಗೆ ಮುನ್ನವೇ ಥಿಯೇಟರ್‍ಗಳು ಹೌಸ್‍ಫುಲ್ ಆಗಿರುತ್ತವೆ. ಶರವೇಗದ ಚೇಸಿಂಗ್, ರಾಕ್‍ಸ್ಟಾರ್‍ಗಳ ಕಂಚಿನ ಕಂಠದಲ್ಲಿ ಮೂಡಿಬಂದ ಓಪನಿಂಗ್ ಹಾಡು, ಕಲಾತ್ಮಕವಾಗಿ, ಸೃಜನಶೀಲತೆಯ ಪ್ರತೀಕವಾಗಿ ಮೂಡಿಬರುವ ಸಾಲುಗಳು, ರಹಸ್ಯ ಏಜೆಂಟ್‍ನ ಪರಿಚಯ, `ಮೈ ನೇಮ್ ಈಸ್ ಬಾಂಡ್' ಅನ್ನೋ ಪದಗಳನ್ನು ಕೇಳಿದ ಪ್ರೇಕ್ಷಕರು ರೋಮಾಂಚನಗೊಳ್ತಾರೆ. ಬಾಂಡ್ ಸಿನಿಮಾದ ಯಶಸ್ಸಿಗೆ ಇನ್ನೇನೂ ಬೇಕಿಲ್ಲ.

image


ಸಂಸ್ಕೃತಿ ಮತ್ತು ಮಾರುಕಟ್ಟೆ ಸ್ಥಳವನ್ನು ಗಮನದಲ್ಲಿರಿಸಿಕೊಂಡು ಮನತಟ್ಟುವಂತಹ ಮೊದಲ ಹೆಜ್ಜೆಯನ್ನಿಡುವುದು ಪ್ರತಿಯೊಂದು ಉದ್ಯಮದ ಯಶಸ್ಸಿಗೂ ಅತ್ಯಂತ ಅವಶ್ಯಕ. ನಿಮ್ಮ ಹೊಸ ಕಂಪನಿಯ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸುವುದು ಕೂಡ ಅತ್ಯಂತ ಮಹತ್ವದ ಘಟ್ಟ. ಹೊಸ ಕಲ್ಪನೆಗಳಿಗೆ ಇಡೀ ವಿಶ್ವವನ್ನು ಜಾಗೃತಗೊಳಿಸುವುದು ಕೂಡ ಕಡ್ಡಾಯ. ಇದು ಉದ್ಯಮಗಳ ಪಾಲಿಗೂ ಎಚ್ಚರಿಕೆಯ ಕರೆಗಂಟೆಯಾಗಬೇಕು. ಹೊಸ ಕಂಪನಿಯ ಆಗಮನವಾದ ಬಳಿಕ ಸ್ಥಿತಿ ಹೇಗೆ ಬದಲಾಗುತ್ತೆ ಅನ್ನೋದಕ್ಕೆ `ಆ್ಯಪಲ್' ಅತ್ಯುತ್ತಮ ಉದಾಹರಣೆ. ಬಾಂಡ್ ಸಿನಿಮಾಗಳನ್ನು ಆಸ್ಥೆಯಿಂದ ಕುಳಿತು ನೋಡುವುದನ್ನು ಬಿಟ್ರೆ, ಅಭಿಮಾನಿಗಳಿಗೆ ಬೇರೆ ಆಯ್ಕೆಗಳಿಲ್ಲ.`ಆ್ಯಪಲ್' ವಿಷಯದಲ್ಲೂ ಗ್ರಾಹಕರ ಮನಸ್ಥಿತಿ ಇದೇ ರೀತಿ ಇದೆ.

ಕಲೆ-ತಂತ್ರಜ್ಞಾನದ ಪ್ರಯೋಗ

ಬಾಂಡ್ ಸಿನಿಮಾದ ಕುತೂಹಲಕಾರಿ ಘಟ್ಟ ಅಂದ್ರೆ ಆತ `ಕ್ಯೂ'ನನ್ನು ಭೇಟಿಯಾಗಿ, ಸಮಗ್ರ ಶ್ರೇಣಿಯ ಹೊಸ ಆಟಿಕೆಗಳನ್ನು ಪ್ರದರ್ಶಿಸುವುದು. ಅದೃಶ್ಯವಾಗಿರುವ ಕಾರ್‍ಗಳು, ವಾಚ್ ಕಮ್ ಟ್ರಾನ್ಸ್​​​​ ಮೀಟರ್‍ಗಳು, ಗನ್ ಆಕಾರದಲ್ಲಿರುವ ಪೆನ್‍ಗಳು, ಪೆನ್ ಆಕಾರದ ಗನ್‍ಗಳು ಬಾಂಡ್ ಕೈಯಲ್ಲಿ ಪ್ರತ್ಯಕ್ಷವಾಗುತ್ತವೆ. ಆದ್ರೆ ಇವೆಲ್ಲವೂ ಜೇಮ್ಸ್ ಬಾಂಡ್ ನೆರವಿಗೆ ಬರುವುದು ಸಿನಿಮಾದ ಕುತೂಹಲಕಾರಿ ಕ್ಲೈಮ್ಯಾಕ್ಸ್​​​ನಲ್ಲಿ ಅನ್ನೋದು ವಿಶೇಷ. ರಹಸ್ಯ ಏಜೆಂಟ್ ಮತ್ತವನ ಸಿಲಿಕಾನ್ ಚಿಪ್ ಯಾವತ್ತೂ ಬೇರೆ ಬೇರೆಯಾಗೋದಿಲ್ಲ ಅನ್ನೋ ಮಾತೇ ಇದೆ.

ಯಾವ ತಂತ್ರಜ್ಞಾನದ ಅಳವಡಿಕೆ ಸೂಕ್ತ ಅನ್ನೋದನ್ನು ಕಂಪನಿಗಳು ಇತ್ತೀಚೆಗೆ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿವೆ. ಡಾಟಾಬೇಸ್ ಅನ್ನು ಹೊಸತನದೊಂದಿಗೆ ಬಳಸುವುದು, ಉತ್ಪನ್ನ ಗ್ರಾಹಕರ ಕೈತಲುಪಿದೆಯೋ ಇಲ್ಲವೋ ಅನ್ನೋದನ್ನು ಪರಿಶೀಲಿಸುವುದು, ಇಡೀ ಪ್ರಕ್ರಿಯೆಯ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಸಂಸ್ಥೆಗಳು ಗ್ರಾಹಕರ ಜೊತ್ತೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುತ್ತಿವೆ. ವೈರಾಣುವಿನಂತೆ ಹರಡಿರುವ ಸಾಮಾಜಿಕ ಮಾಧ್ಯಮಗಳ ಮೇಲೆ ಸವಾರಿ ಮಾಡುತ್ತಿವೆ. ಸಂಸ್ಥೆಯೊಳಗೆ ವೇದಿಕೆಯೊಂದನ್ನು ಸೃಷ್ಟಿಸಲಾಗಿದೆ. ಪರಸ್ಪರ ಪರಿಕಲ್ಪನೆಗಳನ್ನು ಹಂಚಿಕೊಳ್ಳಲು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇದು ಸಹಕಾರಿಯಾಗಿದೆ. ತಂತ್ರಜ್ಞಾನ ಅನ್ನೋದು ಉದ್ಯಮದ ಅತ್ಯಾಪ್ತ ಮಿತ್ರನಿದ್ದಂತೆ.

ಮೇವರಿಕ್‍ಗಳ ವರ್ಣನೆ...

ಪ್ರತಿಯೊಂದು ಬಾಂಡ್ ಸಿನಿಮಾಗಳಲ್ಲೂ, ವ್ಯವಸ್ಥೆಯ ವಿರುದ್ಧ ಅವನು ಸಿಡಿದೇಳ್ತಾನೆ. ರಾಡಾರ್ ಅಡಿಯಲ್ಲಿ ನುಸುಳಿ, ತನ್ನ ಕಾರ್ಯಸೂಚಿಯನ್ನು ಮುಂದುವರಿಸುವಂತೆ ಭಾಸವಾಗುತ್ತದೆ. ಜೇಮ್ಸ್ ಬಾಂಡ್ ಮನಸ್ಸಿಗೆ ಬಂದಿದ್ದನ್ನೆಲ್ಲಾ ಮಾಡಲು ಅವಕಾಶ ಕೊಡುವ ಆತನ ಬಾಸ್‍ಗಿರುವ ಪರಿಪಕ್ವತೆಯನ್ನು ಮೆಚ್ಚಲೇಬೇಕು. ಆದ್ರೆ ಉದ್ಯಮಗಳು ಈ ಪ್ರಯತ್ನದಲ್ಲಿ ಸೋತಿವೆ. ಮುಕ್ತ ಅವಕಾಶದ ಬಾಗಿಲು ತೆರೆದರೆ ಮಾತ್ರ ವ್ಯಕ್ತಿಯ ಮಹತ್ವಾಕಾಂಕ್ಷೆ ಮತ್ತು ನಿರ್ಣಯಗಳು ಯಶಸ್ಸು ಕಾಣಬಹುದು. ಯಾವ ನಿರ್ದಿಷ್ಟ ಕ್ಷಣದಲ್ಲಿ ಜೇಮ್ಸ್ ಬಾಂಡ್‍ನನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು, ಮತ್ಯಾವಾಗ ಅವನನ್ನು ಸಾಮೂಹಿಕ ಹೋರಾಟದಲ್ಲಿ ತೊಡಗಿಸಬೇಕು ಅನ್ನೋದು ಆತನ ಬಾಸ್‍ಗೆ ಚೆನ್ನಾಗಿ ತಿಳಿದಿದೆ.

ಪ್ರತಿಯೊಂದು ಸಂಸ್ಥೆಯಲ್ಲೂ ವಿಭಿನ್ನವಾಗಿ ಯೋಚಿಸಬಲ್ಲವರಿರುತ್ತಾರೆ. ಅವಕಾಶಗಳು ಕೈತಪ್ಪದಂತೆ, ಕಂಪನಿಯ ಬೆಳವಣಿಗೆ ದಿಕ್ಕಿನಲ್ಲಿ ಯೋಚಿಸಲು ಅವರಿಗೆ ವ್ಯವಸ್ಥಿತ ತರಬೇತಿ ನೀಡಬೇಕು. ಪ್ರತಿಯೊಂದು ಉದ್ಯಮಕ್ಕೂ ಆಸಕ್ತಿ ಮತ್ತು ಹುರುಪಿನ ಅಗತ್ಯವಿದೆ. ಹೊಸದಾದ ಮತ್ತು ಸಂಪ್ರದಾಯಬದ್ಧವಲ್ಲದ ಅನ್ವೇಷಣೆಗೆ ಕಾತರ ಇರಬೇಕು. ತೀವ್ರಗತಿಯಲ್ಲಿ ಪರಿಕಲ್ಪನೆಗಳನ್ನು ಶೋಧಿಸುವ ಮನಸ್ಸಿರಬೇಕು. ಒಮ್ಮೆ ಮೌಲ್ಯವನ್ನು ಕಂಡುಕೊಂಡ್ರೆ ಅದು ಸಂಸ್ಥೆಯ ಯಶಸ್ಸಿಗೆ ಹೊಸ ದಾರಿ ಮಾಡಿಕೊಡುತ್ತದೆ.

ಊಹಿಸಬಹುದಾದ ಶಕ್ತಿ

ಜೇಮ್ಸ್ ಬಾಂಡ್ ಸರಣಿಯ ಎಲ್ಲಾ ಸಿನಿಮಾಗಳಲ್ಲೂ ಭವಿಷ್ಯವನ್ನು ಊಹಿಸಬಲ್ಲ ಅದ್ಭುತ ವಿಚಾರಗಳಿವೆ. ಆ ಮಗ್ಗುಲನ್ನು ಬದಲಾಯಿಸಬೇಕಾಗಿಲ್ಲ, ಯಾಕಂದ್ರೆ ಅದೇ ಕಾರಣಕ್ಕೆ ಪ್ರೇಕ್ಷಕರು ಬಾಂಡ್‍ಗೆ ಫಿದಾ ಆಗಿರೋದು, ಬಾಂಡ್ ಚಿತ್ರ ವೀಕ್ಷಣೆಗೆ ಥಿಯೇಟರ್‍ಗಳಿಗೆ ಲಗ್ಗೆ ಇಡೋದು. ಬಾಂಡ್ ಜಗತ್ತನ್ನೇ ಉಳಿಸಲು ಮುನ್ನುಗ್ತಾನೆ, ತನ್ನ ಪ್ರೇಯಸಿಯನ್ನು ಮರಳಿ ಪಡೆಯುತ್ತಾನೆ. ಆತ ಖಂಡಿತವಾಗಿ`ಒI6’ ಮೂಲಕ ಮರುಸ್ಥಾಪಿತನಾಗ್ತಾನೆ. `ಕ್ಯೂ' ಕೊಟ್ಟ ಎಲ್ಲವನ್ನೂ ಬಳಸಿ ಅವನನ್ನು ಕೊನೆಗಾಣಿಸಬಲ್ಲ ಸಾಹಸಿ ಜೇಮ್ಸ್ ಬಾಂಡ್. ಆಟದ ಆರಂಭದಲ್ಲೇ ವಿಲನ್‍ಗೆ ಮಣ್ಣು ಮುಕ್ಕಿಸುವ ಬಾಂಡ್, ಕೊನೆಯಲ್ಲಿ ಮತ್ತೊಮ್ಮೆ ಪಂಚಿಂಗ್ ಲೈನ್ ಜೊತೆಗೆ ಅವನನ್ನು ಮಣಿಸುತ್ತಾನೆ. ಈ ಸೂತ್ರದ ಪುನರಾವರ್ತನೆ ನಿರಂತರ ಭರವಸೆಯಿದ್ದಂತೆ.

ಜೀವನ ಮತ್ತು ಮಾರುಕಟ್ಟೆಯ ಅನುಭವಗಳು ಕೂಡ ಅಭಿಪ್ರಾಯದೆಡೆಗೆ ಒಲವು ತೋರುತ್ತವೆ. ಇದೇ ನಮ್ಮನ್ನು ಸದಾ ಮುನ್ನಡೆಸುತ್ತದೆ. `ಫ್ಲಿಫ್​​​ಕಾರ್ಟ್' ಪೈಪೋಟಿಯ ದರವುಳ್ಳ, ವ್ಯಾಪಕವಾದ ಉತ್ಪನ್ನಗಳನ್ನು ಒದಗಿಸಬೇಕೆಂದು ನಾವು ಬಯಸುತ್ತೇವೆ. ಸ್ಥಳೀಯ ಉಡುಪಿ ಹೋಟೆಲ್‍ಗೆ ಹೋಗಿ, ನಾವು ಕೊಟ್ಟ ಹಣಕ್ಕೆ ತಕ್ಕಂತಹ ತಿನಿಸುಗಳನ್ನು ನಿರೀಕ್ಷಿಸುತ್ತೇವೆ. ಕಲಿಕೆ ಸುಲಭವಾಗಬಹುದು ಅನ್ನೋ ನಿರೀಕ್ಷೆಯಲ್ಲೇ `ಎಜುರೇಕಾ'ಗೆ ಲಾಗ್ ಆನ್ ಆಗುತ್ತೇವೆ. ಇಂತಹ ಆಹ್ಲಾದಕರ ಭವಿಷ್ಯವೇ ಉದ್ಯಮದ ಮೌಲ್ಯವನ್ನು ಹೆಚ್ಚಿಸುತ್ತೆ. ಥ್ರಿಲ್ಲರ್ ಸಿನಿಮಾದಲ್ಲಿ ಅನಿರೀಕ್ಷಿತ ಟ್ವಿಸ್ಟ್​​​ಗಳನ್ನು ಸ್ವಾಗತಿಸಿದಂತೆ, ಗ್ರಾಹಕರಿಂದ ನಿರೀಕ್ಷಿಸುವುದು ಅಸಾಧ್ಯ.

ಸಿಬ್ಬಂದಿ ಬದಲಾವಣೆಗೆ ಸಿದ್ಧತೆ

ಬಾಂಡ್ ಫ್ರಾಂಚೈಸಿ, ಯಾವುದೇ ಒಬ್ಬ ವ್ಯಕ್ತಿಯನ್ನು ಅವಲಂಬಿಸಿಲ್ಲ. ಸೀನ್ ಕೊನೆರಿ ಹೊರನಡೆದಾಗ, ಬಾಂಡ್ ಸರಣಿ ಮುಗಿದೇ ಹೋಯ್ತು ಅಂತಾನೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ ರೋಜರ್ ಮೂರೆ ಬಾಂಡ್ ಅವತಾರದಲ್ಲಿ ಮಿಂಚಿದ್ರು. ಅದಾದ್ಮೇಲೆ ಪ್ರಿಯರ್ಸ್ ಬ್ರಾನ್ಸನ್ ಜಾಗಕ್ಕೆ ಡೇನಿಯಲ್ ಕ್ರೇಗ್ ಬಂದ್ರು. ಇವರೆಲ್ಲರೂ ಬಾಂಡ್ ಅವತಾರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವ್ಯಕ್ತಿಗಳು ಬದಲಾದ್ರೂ ಬಾಂಡ್ ಪಾತ್ರ ಮಾತ್ರ ಇವತ್ತಿಗೂ ಸಿನಿ ದುನಿಯಾವನ್ನು ಆಳುತ್ತಿದೆ.

ಇದರಲ್ಲಿ ಉದ್ಯಮಿಗಳಿಗೂ ಒಂದು ಪಾಠವಿದೆ. ಸಾಮಾನ್ಯವಾಗಿ ಇಡೀ ಉದ್ಯಮದ ಇಮೇಜ್ ಸಂಸ್ಥಾಪಕನ ಜೊತೆಗಿರುತ್ತದೆ. ದೀರ್ಘಾವಧಿಯಲ್ಲಿ ಇಂತಹ ಇಮೇಜ್ ಸೃಷ್ಟಿಕರ್ತರ ಸಂಖ್ಯೆ ಹೆಚ್ಚಾಗಬೇಕು. ಭಾರವನ್ನು ಎಲ್ಲರೂ ಜೊತೆಗೂಡಿ ಹೊರುವುದು ಸುಲಭ. ಅದು ಸಂಸ್ಥೆಗೆ ರಕ್ಷಣಾ ಕವಚವೂ ಆಗಿರುತ್ತದೆ. 5 ವರ್ಷಗಳಲ್ಲಿ ಯಶಸ್ವಿಯಾಗಬೇಕೆಂಬ ಗುರಿ ನಿಮ್ಮಲ್ಲಿದ್ರೆ ಅದಕ್ಕೆ ತಕ್ಕಂತಹ ದೀರ್ಘಾವಧಿ ತಂತ್ರಗಳನ್ನು ಕೂಡ ರೂಪಿಸಬೇಕು. ಅಂತಿಮವಾಗಿ ಜೇಮ್ಸ್ ಬಾಂಡ್ ಪ್ರಭಾವವನ್ನು ಕೇವಲ ಮನರಂಜನೆಗಷ್ಟೇ ಸೀಮಿತವಾಗಿಟ್ಟರೆ, ಸೀಕ್ರೆಟ್ ಏಜೆಂಟ್‍ಗೆ ಸಿಕ್ಕಂತಹ ಗೆಲುವು ನಿಮಗೆ ಸಿಗಲು ಸಾಧ್ಯವಿಲ್ಲ.

ಲೇಖಕರು: ವಿನಯ್​​ ಕಾಂಚನ್​​​

ಅನುವಾದಕರು: ಭಾರತಿ ಭಟ್​​​​