ಲೋಕಲ್ ಧೋಬಿಯನ್ನೂ ಮೀರಿಸುವ ಲಾಂಡ್ರಿ... ಹೈಪರ್ ಲೋಕಲ್ ಡೆಲಿವರಿ ಸೇವೆ `ಪ್ರೆಸ್ಸೋ'

ಟೀಮ್​​ ವೈ.ಎಸ್​​. ಕನ್ನಡ

ಲೋಕಲ್ ಧೋಬಿಯನ್ನೂ ಮೀರಿಸುವ ಲಾಂಡ್ರಿ...	ಹೈಪರ್ ಲೋಕಲ್ ಡೆಲಿವರಿ ಸೇವೆ `ಪ್ರೆಸ್ಸೋ'

Sunday December 13, 2015,

3 min Read

ಬಗೆಹರಿಸಬೇಕಾದ ಸಮಸ್ಯೆ...

ಆರೋಗ್ಯಕ್ಕೆ ಸಂಬಂಧಿಸಿದ ಹತ್ತಾರು ಬಗೆಯ ಅಂಶಗಳನ್ನು ಗಮನಿಸಿದ್ದ ಅಮನ್‍ದೀಪ್ ಭಾಟಿಯಾ ಅವರಿಗೆ ಸ್ಥಳೀಯ ಲಾಂಡ್ರಿ ವಿತರಣಾ ಸೇವೆಯ ಅಗತ್ಯದ ಅರಿವಾಗಿತ್ತು. ಅಕ್ಕಪಕ್ಕದ ಮನೆಗೆ ಬರುತ್ತಿದ್ದ ಅಗಸನ ಬಳಿ ಅವರು ಬಟ್ಟೆ ಒಗೆಸುತ್ತಿದ್ರು, ಆ ಸಂದರ್ಭದಲ್ಲೇ ಈ ಕ್ಷೇತ್ರ ಹೇಗೆ ಅಸ್ತವ್ಯಸ್ತವಾಗಿದೆ ಅನ್ನೋದು ಅವರಿಗೆ ಅರ್ಥವಾಗಿತ್ತು. ಸ್ಥಳೀಯ ಮಾರಾಟಗಾರರು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ತಮ್ಮ ಅನುಕೂಲಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದಾರೆ. ಎಲ್ಲಾ ಬಟ್ಟೆಗಳನ್ನು ಒಟ್ಟಿಗೆ, ಮನಸ್ಸಿಗೆ ಬಂದಂತೆ ತೊಳೆಯುವುದು ಅವರ ಅಭ್ಯಾಸ, ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಕೆಲವೊಮ್ಮೆ ಸ್ಥಳೀಯ ಧೋಬಿಗಳು, ಚಿಕ್ಕ ಮಕ್ಕಳ ಕೈಯಲ್ಲಿ ಡೋರ್ ಡೆಲಿವರಿಗಾಗಿ ಬಟ್ಟೆಗಳನ್ನು ಕಳಿಸಿಕೊಡ್ತಾರೆ. ನಗರ ಪ್ರದೇಶದ ದಿನನಿತ್ಯದ ಬದುಕಿನಲ್ಲಿ ಲಾಂಡ್ರಿ ಅತ್ಯಂತ ಅವಶ್ಯಕ ಸೇವೆ. ಹಾಗಾಗಿ ಗ್ರಾಹಕ ಸ್ನೇಹಿಯಾಗಿರುವಂತಹ, ಹೈಪರ್ ಲೋಕಲ್ ಲಾಂಡ್ರಿ ಸೇವೆಯ ಅಗತ್ಯತೆಯನ್ನು ಅರಿತ ಅಮನ್‍ದೀಪ್ ಭಾಟಿಯಾ `ಪ್ರೆಸ್ಸೋ'ವನ್ನು ಆರಂಭಿಸಿದ್ರು.

image


`ಹನಿವೆಲ್, `ರೆನಿಶೋ', `ಕಾಗ್ನಿಝೆಂಟ್' ನಂತಹ ಎಂಎನ್‍ಸಿಗಳಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಅಮನ್‍ದೀಪ್ ಕೆಲಸ ಮಾಡಿದ್ದಾರೆ. ಆದ್ರೆ ಅವರ ಒಲವು ಮಾತ್ರ ಸ್ವಂತ ಉದ್ಯಮದ ಕಡೆಗಿತ್ತು. ಈ ವರ್ಷಾರಂಭದಲ್ಲಿ `ಪ್ರೆಸ್ಸೋ' ಕಾರ್ಯಾಚರಣೆ ಶುರುಮಾಡಿದೆ. ಸ್ಥಳೀಯ ಮಾರಾಟಗಾರರ ಒಂದು ಸಂಗ್ರಾಹಕ ವೇದಿಕೆಯಾಗಿ ಕೆಲಸ ಮಾಡುತ್ತಿದೆ. `ಪ್ರೆಸ್ಸೋ' ಆ್ಯಪ್ ಬಳಸಿ ಗ್ರಾಹಕರು ಆರ್ಡರ್ ಪ್ಲೇಸ್ ಮಾಡುತ್ತಾರೆ. ಈ ಆರ್ಡರ್‍ಗಳನ್ನು ಪೂರೈಸಲು ಹತ್ತಿರದ ಡೆಲಿವರಿ ಬಾಯ್‍ಗಳನ್ನು ನಿಯೋಜಿಸಲಾಗುತ್ತದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತಹ ಸಮಯದಲ್ಲಿ ಅವರು ಬಟ್ಟೆಗಳನ್ನು ಸಂಗ್ರಹಿಸಿ ತರುತ್ತಾರೆ. ಆ್ಯಪ್ ಮೂಲಕವೇ ಗ್ರಾಹಕರು ತಮ್ಮ ಬಟ್ಟೆ ಸಿದ್ಧವಾಗಿದೆಯೋ ಇಲ್ಲವೋ? ಯಾವಾಗ ಡೆಲಿವರಿಯಾಗಲಿದೆ ಅನ್ನೋದನ್ನೆಲ್ಲ ತಿಳಿದುಕೊಳ್ಳಬಹುದು.

ಸವಾಲುಗಳು...

ದೆಹಲಿ ಮೂಲದ `ಪ್ರೆಸ್ಸೋ' ಸಂಸ್ಥೆಗೆ ಕಾರ್ಯಾಚರಣೆಗಿಳಿದು ತಿಂಗಳೊಳಗೆ ವ್ಯವಸ್ಥೆಯ ಬಿಸಿ ತಟ್ಟಿದೆ. ಅಸ್ತವ್ಯಸ್ತ ಸಿಬ್ಬಂದಿ ವರ್ಗ, ಲೋಕಲ್ ಟ್ರೆಂಡ್ ಬಗ್ಗೆ ಜಾಗೃತಿಯ ಕೊರತೆ ಇವೆಲ್ಲದರ ಬಗ್ಗೆ ಅರಿವು ಮೂಡಿದೆ. ಗುಣಮಟ್ಟ, ಅನುಕೂಲತೆಯ ವಿಷಯದಲ್ಲಿ ಸಾಮಾನ್ಯ ಮತ್ತು ಪ್ರೀಮಿಯಂ ಸೇವೆಗಳ ಮಧ್ಯೆ ಬೃಹತ್ ಹಾಗೂ ಅಗತ್ಯ ಮಾರುಕಟ್ಟೆ ಬೇಕಿದೆ ಎನ್ನುತ್ತಾರೆ ಅಮನ್‍ದೀಪ್. ಭಾರತದುದ್ದಕ್ಕೂ ಉದ್ಯಮವನ್ನು ವಿಸ್ತರಿಸುವ ಮೂಲಕ ಈ ಸವಾಲನ್ನು ಮೆಟ್ಟಿನಿಲ್ಲುವುದು ಅಮನ್‍ದೀಪ್ ಮುಂದಿರುವ ಗುರಿ. ಮಾರಾಟಗಾರರು ಹಾಗೂ ಗ್ರಾಹಕರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವುದು, ಜೊತೆಗೆ ಗುಣಮಟ್ಟ, ವೆಚ್ಚ ಹಾಗೂ ಅನುಕೂಲಗಳ ಬಗ್ಗೆ ಭರವಸೆ ಮೂಡಿಸುವತ್ತ ಅವರು ಗಮನಹರಿಸಿದ್ದಾರೆ. ವಿವಿಧ ಬಗೆಯ ಸೇವೆಗಳಿಗಾಗಿ ಚಿಕ್ಕ ಹಾಗೂ ದೊಡ್ಡ ಮಟ್ಟದ ಮಾರಾಟಗಾರರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಅಮನ್‍ದೀಪ್ ಮುಂದಾಗಿದ್ದಾರೆ. ಮಾರಾಟಗಾರರ ನಿರ್ವಹಣಾ ತಂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕ ಆ್ಯಪ್, ಕಾರ್ಯಾಚರಣೆ ಮತ್ತು ಡೆಲಿವರಿ ಸೌಲಭ್ಯಗಳ ಮಾದರಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಲಿದೆ.

ಅಮನ್‍ದೀಪ್ ಅವರ ಪ್ರಕಾರ, ಭಾರತದ ನಗರಗಳ ಸಮುದಾಯವನ್ನು ನಿರೂಪಿಸುವುದಕ್ಕೆ 2 ಅಂಶಗಳು ಕತ್ತರಿ ಹಾಕಿವೆ. ಅವು ಯಾವುವು ಅಂದ್ರೆ, ಬಳಸಿ ಬಿಸಾಡಬಹುದಾದ ಆದಾಯದಲ್ಲಿ ಹೆಚ್ಚಳ ಮತ್ತು ಕಡಿಮೆ ಸಮಯ. ಅದರ ಜೊತೆಗೆ ಗುಣಮಟ್ಟದ ಸೇವೆಗೂ ಅತ್ಯಂತ ಬೇಡಿಕೆಯಿದೆ. ಈ ಮಾರುಕಟ್ಟೆಯನ್ನು ವ್ಯವಸ್ಥಿತಗೊಳಿಸುವ ವ್ಯಾಪ್ತಿ ಮತ್ತು ಅಗತ್ಯ ಅನಿಯಮಿತವಾಗಿದೆ. ಕಾರ್ಯಾರಂಭ ಮಾಡಿ ಮೂರು ತಿಂಗಳೊಳಗೆ `ಪ್ರೆಸ್ಸೋ'ಗೆ 5000ಕ್ಕೂ ಹೆಚ್ಚು ಆರ್ಡರ್‍ಗಳು ಬಂದಿದ್ದವು. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ.

`ಸನ್‍ಸ್ಟೋನ್ ಕ್ಯಾಪಿಟಲ್'ನಿಂದ ಪಡೆದ ಹಣಕಾಸು ನೆರವು, ವೇಗವಾಗಿ ಪ್ರಗತಿ ಹೊಂದಲು ಮತ್ತು ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡಿದೆ ಎನ್ನುತ್ತಾರೆ ಅಮನ್‍ದೀಪ್. ಅಮನ್‍ದೀಪ್ ಭಾಟಿಯಾ ಮತ್ತು ಸುಭಾಶಿಷ್ ಪಟ್ನಾಯಕ್ ಜೊತೆಯಾಗಿ `ಪ್ರೆಸ್ಸೋ' ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇಬ್ಬರ ಬಳಿಯೂ ಇರುವ ಪೂರಕ ಸಾಮರ್ಥ್ಯ ಸಂಸ್ಥೆಯ ಅಭಿವೃದ್ಧಿಗೆ ನಾಂದಿ ಹಾಡಿದೆ ಅನ್ನೋದು ಅಮನ್‍ದೀಪ್ ಅವರ ಅಭಿಪ್ರಾಯ.

ಅತ್ಯಂತ ವೇಗವಾಗಿ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಅವನ್ನು ಕಾರ್ಯರೂಪಕ್ಕೆ ತರುವುದು, ಇವೆರಡೂ ಉದ್ಯಮ ಆರಂಭದ ಅವಶ್ಯಕ ಭಾಗ ಅನ್ನೋದು ಅಮನ್‍ದೀಪ್ ಅವರ ಅನುಭವದ ಮಾತು. ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ನಿಧಾನವಾಗುತ್ತದೆ, ಅದರ ಕುರಿತಾದ ಚರ್ಚೆಯಲ್ಲೇ ಬಹಳಷ್ಟು ಸಮಯ ಕಳೆದು ಹೋಗುತ್ತದೆ. ಮೊದಲಿನಿಂದ್ಲೂ ಅಮನ್‍ದೀಪ್‍ಗೆ ನೇರ ಉತ್ಪನ್ನದ ಮನಸ್ಥಿತಿ ಇತ್ತು, `ಪ್ರೆಸ್ಸೋ' ಮೂಲಕ ಅದನ್ನು ಕಾರ್ಯರೂಪಕ್ಕೆ ತರುವ ಅವಕಾಶ ದೊರೆತಿದೆ. ಕಂಪನಿಯನ್ನು ಹೂಡಿಕೆದಾರರಿಗಾಗಿ ಅಲ್ಲ, ಗ್ರಾಹಕರಿಗಾಗಿ ಕಟ್ಟಿ ಅನ್ನೋದು ತಮಗೆ ಸಿಕ್ಕ ಅತ್ಯಮೂಲ್ಯ ಸಲಹೆ ಎನುತ್ತಾರೆ ಅವರು.

ನೇರವಾಗಿ ಉಳಿಯಿರಿ...

ಭಾರತದ ಆರ್ಥಿಕತೆಯನ್ನು ಗಮನಿಸಿದ್ರೆ ಉದ್ಯಮಗಳ ಭವಿಷ್ಯ ಉಜ್ವಲವಾಗಿದೆ ಅನ್ನೋದು ಅಮನ್‍ದೀಪ್ ಅವರ ಅನಿಸಿಕೆ. ಹೈಪರ್ ಲೋಕಲ್ ಏರಿಯಾಗಳ ಬಗ್ಗೆ ಆಳವಾಗಿ ಅರ್ಥಮಾಡಿಕೊಳ್ಳುವುದರಿಂದ ಹೊಸ ಸೇವೆಯನ್ನು ಪರಿಚಯಿಸಿ, ಅದನ್ನು ಯಶಸ್ವಿಯಾಗಿ ಮುನ್ನಡೆಸಬಹುದು. ``ನಿಮ್ಮ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವಂತಹ, ನಿಮ್ಮ ಕೌಶಲ್ಯವನ್ನು ಮೆಚ್ಚುವಂತಹ ಸಹ ಸಂಸ್ಥಾಪಕರನ್ನು ಸ್ವಾಗತಿಸಿ. ಗ್ರಾಹಕರ ನಿಜವಾದ ಸಮಸ್ಯೆ ಏನು ಅನ್ನೋದನ್ನು ಅರ್ಥಮಾಡಿಕೊಳ್ಳಿ, ಅವರಿಗೇನು ಬೇಕು ಎಂಬುದರ ಕಡೆಗೆ ಗಮನ ಕೊಡಿ, ನೇರವಾಗಿರಿ'' ಅನ್ನೋದು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಅಮನ್‍ದೀಪ್ ಅವರ ಅಮೂಲ್ಯ ಸಲಹೆ.

ಲೇಖಕರು: ರಾಖಿ ಚಕ್ರಬೊರ್ತಿ

ಅನುವಾದಕರು: ಭಾರತಿ ಭಟ್​​​​​