ಕ್ಯಾನ್ಸರ್​ ರೋಗಿಗಳಿಗೆ ಧೈರ್ಯ ತುಂಬುವ ಮಿಷನ್​ ಚಾಯ್​​...

ನೀಲಾ ಶಾಲು

ಕ್ಯಾನ್ಸರ್​ ರೋಗಿಗಳಿಗೆ ಧೈರ್ಯ ತುಂಬುವ ಮಿಷನ್​ ಚಾಯ್​​...

Tuesday January 05, 2016,

2 min Read

image


ಮಿಷನ್ ಚಾಯ್ ! ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಾಂತ್ವನ ಹೇಳಲು ಕೆಲ ಸ್ವಯಂಸೇವಕರು ರೂಪಿಸಿಕೊಂಡಿರುವ ಒಂದು ಕ್ಯಾಂಪೆನ್. ಈ ಕ್ಯಾಂಪೆನ್ ನಲ್ಲಿ ಯಾವುದೇ ಲಾಭ, ಪ್ರಚಾರ, ಹಣ ಮಾಡುವ ಉದ್ದೇಶವಿಲ್ಲ. ಬರೀ ಕ್ಯಾನ್ಸರ್ ರೋಗಿಗಳೊಂದಿಗೆ ಸ್ವಲ್ಪ ಕಾಲ ಕಳೆಯಬೇಕು ಎಂಬುದು ಈ ಮಿಷನ್ ಚಾಯ್​​ನ ಮೂಲ ಉದ್ದೇಶ.

ಮಿಷನ್ ಚಾಯ್ ಎಂಬ ತಂಡವನ್ನ ಪ್ರಾರಂಭ ಮಾಡಿದ್ದು ಬೆಂಗಳೂರಿನ ರಾಕೇಶ್ ನಾಯರ್. ಇಸ್ರೋ ಕೇಂದ್ರದ ಕಿರಿಯ ಎಂಜಿನಿಯರ್ ಆಗಿರುವ ರಾಕೇಶ್, ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯಿಂದ ಪ್ರೇರಣೆಗೊಂಡು ಈ ಕ್ಯಾಂಪೆನ್ ಆರಂಭ ಮಾಡಿದ್ದಾರೆ.

ಒಮ್ಮೆ ಪಂಜಾಬ್​ನ ಅಮೃತ್ ಸರ್​​ನಲ್ಲಿ ರಾಕೇಶ್ ನಾಯರ್ ಅವರ ತಂದೆ ಸಂಬಂಧಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಆ ಆಸ್ಪತ್ರೆಗೆ ಪ್ರತಿನಿತ್ಯ ವ್ಯಕ್ತಿಯೊಬ್ಬ ಬಂದು ಎಲ್ಲಾ ರೋಗಿಗಳಿಗೆ ಉಚಿತವಾಗಿ ಟೀ ನೀಡುತ್ತಿದ್ದರು. ಅವರ ಸೇವೆ ಗಮನಿಸಿದ ನಾಯರ್, ಅವರನ್ನು ಮಾತನಾಡಿಸಿ, ನೀವು ಈ ಸೇವೆ ಮಾಡುಲು ಕಾರಣ ಏನ್ನು ಎಂದು ಕೇಳಿದ್ದಾರೆ. ಅದಕ್ಕೆ ಅವರು, ಈ ರೀತಿಯ ಸಮಾಜ ಸೇವೆ ಮಾಡುವುದು ನನಗೆ ತುಂಬಾ ಇಷ್ಟ. ಹೀಗಾಗಿ ಉಚಿತವಾಗಿ ಟೀ ನೀಡುತ್ತೇನೆ ಎಂದಿದ್ದಾರೆ. ಇದರಿಂದ ಪ್ರೇರಣೆಗೊಂಡ ನಾಯರ್, ಇಂದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಪ್ರತಿನಿತ್ಯ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

image


ರಾಕೇಶ್ ನಾಯರ್ ಈ ಮಿಷನ್ ಚಾಯ್ ಸೇವೆಯನ್ನು ಪ್ರಾರಂಭ ಮಾಡಿದಾಗ ಕುಟುಂಬ ಸದಸ್ಯರು ಸೇರಿ ಈ ತಂಡದಲ್ಲಿ ಕೇವಲ 6 ಜನ ಮಾತ್ರ ಇದ್ರು. ಆದ್ರೆ ಇದೀಗ ಕೆಲ ಉದ್ಯಮಿಗಳು, ಸಾಫ್ಟ್​​ವೇರ್ ಎಂಜಿನಿಯರ್ ಗಳು ಸೇರಿದಂತೆ ಇತರೆ ಉದ್ಯೋಗದಲ್ಲಿರುವ ಸುಮಾರ 50 ಕ್ಕೂ ಹೆಚ್ಚು ಜನ ಕೈಜೋಡಿಸಿ ಈ ಕ್ಯಾಂಪೆನ್ ಗೆ ಸಾಥ್ ನೀಡಿದ್ದಾರೆ.

ಕ್ಯಾಂಪೆನ್ ನ ಎಲ್ಲಾ ಕಾರ್ಯಕರ್ತರು, ಮಳೆಯೇ ಬರಲಿ, ಬಿಸಿಲೇ ಬರಲಿ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿರುವ 700ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಒಂದು ಕಪ್ ಟೀ ಹಾಗೂ ಬಿಸ್ಕತ್ ನೀಡಿ, ಮಾನಸಿಕವಾಗಿ ಧೈರ್ಯ ತುಂಬಿ ಉತ್ಸಾಹದ ನಾಲ್ಕು ಮಾತುಗಳನ್ನಾಡುತ್ತಾರೆ. ಪ್ರಾರಂಭದ ದಿನಗಳಲ್ಲಿ ವಾರದ ಮೂರು ದಿನ ಮಾತ್ರ ಈ ಸೇವೆಯನ್ನ ಮಾಡ್ತಾ ಇದ್ರು ರಾಕೇಶ್ ನಾಯರ್. ಇವರ ನಿಸ್ವಾರ್ಥ ಸೇವೆ ಕಂಡು ಸ್ಪೂರ್ತಿ ಪಡೆದ ಅವರ ಮಗಳು ಪ್ರೇರಣಾ ನಾಯರ್ ಇದನ್ನು ಫೇಸ್ ಬುಕ್ ನಲ್ಲಿ ಮಿಷನ್ ಚಾಯ್ ಎಂದು ಖಾತೆ ತೆರೆದು ಪಡಿಚಯಿಸಿದರು..

image


ಈ ಮಿಷನ್ ಚಾಯ್ ಖಾತೆ ಪ್ರಾರಂಭ ಮಾಡಿದ ಮೇಲೆ ಇದಕ್ಕೆ ಸ್ಥಳೀಯರಿಂದ ಹಿಡಿದು ದೇಶ, ವಿದೇಶಗಳಿಂದ ಉತ್ತಮ ಪ್ರತಿಕ್ರಿಯೆ ಬಂತು. ಅಷ್ಟೇ ಅಲ್ಲದೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಗುಣಮುಖರಾಗಿರುವ ಕೆಲ ವ್ಯಕ್ತಿಗಳು ಕೂಡ ಈ ಕ್ಯಾಂಪೆನ್ ನಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮುಖ್ಯ ಉದ್ದೇಶ ಕ್ಯಾನ್ಸರ್ ವಿರುದ್ಧ ಜನರಲ್ಲಿ ಹೆಚ್ಚಿನ ಜಾಗೃತಿಯನ್ನ ಮೂಡಿಸಬೇಕು. ಈ ಖಾಯಿಲೆ ನಿಯಂತ್ರಿಸುವುದು ಹಾಗೂ ಇರುವುದು ಗೊತ್ತಾಗುತ್ತಿದಂತೆ ಎಚ್ಚರ ವಹಿಸಿ ಸೂಕ್ತ ಚಿಕಿತ್ಸೆಯನ್ನ ಪಡೆಯಬೇಕು. ಅಷ್ಟೇ ಅಲ್ಲದೇ ಕ್ಯಾನ್ಸರ್ ಪೀಡಿತರ ಮನದಲ್ಲಿರುವ ಆತಂಕ ಮತ್ತು ತಪ್ಪು ತಿಳುವಳಿಕೆಯನ್ನು ಅವರ ಕುಟುಂಬದವರು ಮತ್ತು ಅವರ ಸ್ನೇಹಿತರು ಜೊತೆ ಸೇರಿ ಆ ಮನೋಭಾವನೆಯನ್ನು ದೂರಗೊಳಿಸಬೇಕು ಜೊತೆಗೆ ನಮ್ಮ ಜೊತೆ ಎನ್​​ಜಿಓಗಳು ಸಹ ಕೈಜೋಡಿಸಿ, ಇಂತಹ ಕೆಲಸಕ್ಕೆ ಪ್ರೋತ್ಸಹ ನೀಡಿದ್ರೆ ಬಹಳ ಒಳ್ಳೆಯದು ಎನ್ನುತ್ತಾರೆ ಮಿಷನ್ ಚಾಯ್ ಕಾರ್ಯಕರ್ತರು.ಇನ್ನು ಇವರು ಮಾಡುತ್ತಿರುವ ಈ ನಿಸ್ವಾರ್ಥ ಸೇವೆಗೆ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರು ಡಾ.ಲಿಂಗೇಗೌಡ ಹಾಗೂ ಸಂಶೋಧಾನಾ ಅಧಿಕಾರಿ ವೆಂಕಟೇಶ್ ಸಹಕಾರವೂ ಇದೆ.

ವೈದ್ಯರು ಚಿಕಿತ್ಸೆಯನ್ನು ಅಷ್ಟೇ ನೀಡುತ್ತಾರೆ. ಆದ್ರೆ ಮಾನಸಿಕ-ದೈಹಿಕವಾಗಿ ನೊಂದಿರುವ ರೋಗಿಗಳಿಗೆ ಮುಖ್ಯವಾಗಿ ಸಾಂತ್ವನ ಹಾಗೂ ಧೈರ್ಯ ತುಂಬುಲು ಆತ್ಮೀಯ ಗೆಳೆಯರು ಬೇಕು ಆ ಕೆಲಸವನ್ನ ಮಿಷನ್ ಚಾಯ್ ತಂಡದ ಕಾರ್ಯಕರ್ತರು ಮಾಡುತ್ತಿದ್ದಾರೆ. ಇವರು ಮಾಡುತ್ತಿರುವ ಈ ಕೆಲಸ ನಿಜಕ್ಕೂ ಹೆಮ್ಮೆಯ ಸಂಗತಿ.