475 ಮಂದಿ ಯುವ ಜನತೆಯನ್ನು ನಾಳಿನ ಸಮರ್ಥ ಉದ್ಯಮಿಗಳಾಗಿ ರೂಪಿಸಲು ಜಾಗೃತಿ ಯಾತ್ರೆ- 8000 ಕಿ.ಮೀ. ಪ್ರಯಾಣದುದ್ದಕ್ಕೂ ಕಲಿಕೆಯ ಅವಕಾಶ

ಟೀಮ್​ ವೈ.ಎಸ್​. ಕನ್ನಡ

0


ಉದ್ಯಮ ಶೀಲತೆಯಿಂದ ಹೊಸ ಭಾರತವನ್ನು ಕಟ್ಟುವ ಉದ್ದೇಶದಿಂದ 475 ಜನರ ತಂಡವನ್ನು ಭಾರತದ 12 ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಿಗೆ ಕರೆದೊಯ್ದು, ಅವರಿಗೆ ಉದ್ಯಮ ಕ್ಷೇತ್ರದ ಅವಕಾಶಗಳ ಸಮಗ್ರ ಚಿತ್ರಣವನ್ನು ತೋರಿಸಿಕೊಡಲಾಯಿತು.

ಹೊಸ ಭಾರತ ನಿರ್ಮಾಣಕ್ಕಾಗಿ ಶಶಾಂಕ್ ಮಣಿ ಮತ್ತು ರಾಜ್ ಕೃಷ್ಣಮೂರ್ತಿಯವರು ಮಾಡಿದ ಚಿಂತನೆಯ ಫಲವೇ ಜಾಗೃತಿ ಯಾತ್ರಾ. ಯುವ ಜನತೆಯ ಸಹಕಾರದೊಂದಿಗೆ ಇನ್ನು 20 ವರ್ಷಗಳಲ್ಲಿ ದೇಶದಲ್ಲಿ ಬದಲಾವಣೆ ಮತ್ತು ದೇಶವನ್ನು ಮತ್ತಷ್ಟು ಸದೃಢಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ ಶಶಾಂಕ್ ಮಣಿ ಮತ್ತು ರಾಜ್ ಕೃಷ್ಣಮೂರ್ತಿ.

ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಚಳುವಳಿಗೆ ಧುಮುಕುವ ಮೊದಲು ಕೈಗೊಂಡ ಪ್ರಖ್ಯಾತ ರೈಲು ಪ್ರಯಾಣದ 100ನೇ ವರ್ಷದ ಸ್ಮರಣಾರ್ಥ ಈ ಬಾರಿಯ ಜಾಗೃತಿ ಯಾತ್ರಾ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ವಿಶೇಷ ಕೋಚ್ ಅನ್ನು ನಿರ್ಮಿಸಿ ಅದರಲ್ಲಿ ರಾಷ್ಟ್ರಪಿತನ ಯಾತ್ರೆಯ ಸ್ಮರಣೆಯನ್ನು ಮಾಡಿಕೊಳ್ಳಲಾಗ್ತಿದೆ. ಸಾಂಪ್ರದಾಯಿಕ ಉಲ್ಲೇಖಗಳನ್ನು ಹೊರತುಪಡಿಸಿ ಯಾತ್ರೆ ತನ್ನ 8ನೇ ಹಂತದ ಅಭಿಯಾನವನ್ನು ಕೈಗೊಂಡಿದೆ.

• ಇದೇ ಮೊದಲ ಬಾರಿಗೆ ಜಾಗೃತಿ ಯಾತ್ರೆಯಲ್ಲಿ ಮಹಿಳೆಯರು ಮತ್ತು ಪುರುಷರು ಸಮಾನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ತಂಡದಲ್ಲಿ ಶೇ.42ರಷ್ಟು ಮಹಿಳೆಯರೇ ಇದ್ದಾರೆ.

• 27 ರಾಜ್ಯಗಳ 6 ಕೇಂದ್ರಾಡಳಿತ ಪ್ರದೇಶಗಳ ಜನರು ಮಾತ್ರವಲ್ಲದೇ ಪ್ರಪಂಚದಾದ್ಯಂತದ 23 ದೇಶಗಳ ಜನರು ಭಾಗಿಯಾಗಿದ್ದಾರೆ. ಇದರಲ್ಲಿ ಲಕ್ಷದ್ವೀಪದಿಂದ ಮಾತ್ರ ಯಾವುದೇ ಸದಸ್ಯರಿಲ್ಲ. ಮುಂದಿನ ವರ್ಷದಲ್ಲಿ ಲಕ್ಷದ್ವೀಪದ ಜನರೂ ಸಹ ಭಾಗಿಯಾಗುವ ಸಾಧ್ಯತೆಗಳಿವೆ.

• ಶೇ.33ರಷ್ಟು ಜನರು ಗ್ರಾಮೀಣ ಹಿನ್ನೆಲೆ ಹೊಂದಿದ್ದಾರೆ. ಶೇ.36ರಷ್ಟು ಜನ ಉಪಪಟ್ಟಣಗಳ ಹಿನ್ನಲೆ ಹೊಂದಿದ್ದು, ಶೇ. 31ರಷ್ಟು ಜನರು ನಗರಗಳ ಹಿನ್ನೆಲೆಯಿಂದ ಬಂದವರಾಗಿದ್ದಾರೆ.

• 17,000ಕ್ಕೂ ಹೆಚ್ಚು ಮಂದಿ ಈ ಯಾತ್ರೆಯಲ್ಲಿ ಭಾಗಿಯಾಗುವ ಇಚ್ಛೆ ಹೊಂದಿದ್ದರು. ಆ ಪೈಕಿ ಕೇವಲ 475 ಮಂದಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ.

ಮಧ್ಯ ಭಾರತದಾದ್ಯಂತ ಈ ಪ್ರವಾಸ ಕೈಗೊಳ್ಳಲಾಗಿತ್ತು. ಶಶಾಂಕ್ ಅವರು ಹೇಳುವ ಪ್ರಕಾರ, ಬಡ ಗ್ರಾಮೀಣ ಪ್ರದೇಶಗಳಿಗೆ, 4ನೇ ಶ್ರೇಣಿಯ ಹಳ್ಳಿಗಳಿಗೆ ಉಪಕಾರವಾಗುವಂತಹ ಹಲವು ಯತ್ನಗಳನ್ನು ಮಾಡಲಾಯಿತು. ಆದರೆ ನಿಜವಾದ ಭಾರತದ ಸ್ಥಿತಿಗತಿಗಳನ್ನು ಹೊಂದಿರುವ 3ನೇ ಶ್ರೇಣಿಯ ನಗರಗಳಲ್ಲಿ ಮಾತ್ರ ಸಣ್ಣ ಮಟ್ಟದ ಪ್ರಯತ್ನಗಳು ಯಶಸ್ವಿಯಾಗಿವೆ. ಮಧ್ಯ ಭಾರತ ಭಾಗದಲ್ಲಿ ಭಾರತದ ಶೇ.42.3ರಷ್ಟು ಜನಸಂಖ್ಯೆ ಅಂದರೆ 550 ಮಿಲಿಯನ್ ಜನರಿದ್ದಾರೆ.

ಪ್ರವಾಸದ ಲಯ

ಈ ಪ್ರವಾಸವು 12 ನಗರಗಳು ಮತ್ತು ಪಟ್ಟಣಗಳಲ್ಲಿ(ಮುಂಬೈ, ಹುಬ್ಬಳ್ಳಿ, ಬೆಂಗಳೂರು, ಮಧುರೈ, ಚೆನ್ನೈ, ವಿಶಾಖಪಟ್ಟಣಂ, ಭುಬನೇಶ್ವರ್, ಪಾಟ್ನಾ, ಡಿಯೋರಿಯಾ, ದೆಹಲಿ, ತಿಲೋನಿಯಾ ಮತ್ತು ಅಹಮದಾಬಾದ್‌) ಕೈಗೊಳ್ಳಲಾಗಿತ್ತು. ಈ ಪ್ರದೇಶಗಳಲ್ಲಿ ಯಾತ್ರಿಗಳಿಗೆ ಕಲಿಯಲು ಸಾಕಷ್ಟು ಅವಕಾಶಗಳಿತ್ತು.

ಇದರ ಸಂಘಟನೆಯನ್ನೂ ಸಹ ಅಚ್ಚುಕಟ್ಟಾಗಿ ಮಾಡಲಾಗಿತ್ತು. 3 ಹಂತಗಳ ವ್ಯವಸ್ಥೆ ಏರ್ಪಟ್ಟಿತ್ತು. ಮೊದಲ ಹಂತವನ್ನು ಪರಿಶೋಧನಾ ಹಂತ ಎನ್ನಬಹುದು(ಮುಂಬೈನಿಂದ ಚೆನ್ನೈವರೆಗೆ) ಇಲ್ಲಿ ಯಾತ್ರಿಗಳು ಮಾದರಿ ವ್ಯಕ್ತಿಗಳು, ಪ್ಯಾನಲಿಸ್ಟ್‌ ಗಳು ಮತ್ತು ಇತರ ಯಾತ್ರಿಗಳೊಂದಿಗೆ ಚರ್ಚೆ ನಡೆಸುವುದರ ಮೂಲಕ ಕಲಿಯುವ ಅವಕಾಶವನ್ನು ಒದಗಿಸಿಕೊಡಲಾಗಿತ್ತು. ಕ್ರಿಯೇಷನ್ ಎಂಬ 2ನೇ ಹಂತದಲ್ಲಿ ಚೆನ್ನೈನಿಂದ ದೆಹಲಿವರೆಗೆ ಪ್ರವಾಸ ಕೈಗೊಳ್ಳಲಾಗಿತ್ತು. ಇಲ್ಲಿ ಯಾತ್ರಿಗಳಲ್ಲಿ ಅಂತರ್ಮುಖಿಯಾಗಿರುವವರಿಗೆ ಮಾತನಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಅವಕಾಶ ಮತ್ತು ಬಹಿರ್ಮುಖಿಗಳಿಗೆ ಬೇರೆಯವರ ಮಾತುಗಳನ್ನು, ಅಭಿಪ್ರಾಯಗಳನ್ನು ಅರಿತುಕೊಳ್ಳುವ ಅವಕಾಶ ಮಾಡಿಕೊಡಲಾಯಿತು. ಅಂತಿಮವಾಗಿ ದೆಹಲಿಯಿಂದ ಮುಂಬೈವರೆಗೆ ಕೈಗೊಂಡಿದ್ದ ಯಾತ್ರೆಯ ಮೂರನೇ ಹಂತವನ್ನು ಏಕೀಕರಣ ಎಂದು ಹೆಸರಿಸಲಾಗಿದ್ದು ಇಲ್ಲಿ ಕಲಿತಿದ್ದನ್ನು ಗ್ರಹಿಸುವ ಮತ್ತು ಅದರ ನಿಜವಾದ ಅಂತರಾರ್ಥ ಅರಿಯುವ ಅವಕಾಶವನ್ನು ಯಾತ್ರಿಗಳಿಗೆ ಕಲ್ಪಿಸಲಾಗಿತ್ತು.

ಈ ಯಾತ್ರೆಯ ಮೂಲಕ ಯಾತ್ರಿಗಳಿಗೆ ತಮ್ಮನ್ನು ತಾವು ಪ್ರತಿನಿಧಿಸಿಕೊಳ್ಳಲು, ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಮತ್ತೆ ಹೊಸದಾಗಿ ಸಂಶೋಧಿಸಲು ಅವಕಾಶ ದೊರಕಿಸಿಕೊಡಲಾಗಿತ್ತು. ಇದರಿಂದ ತಮ್ಮದೇ ನಂಬಿಕೆಗಳ ಬಗ್ಗೆ ಪುನರವಲೋಕನ ಮಾಡಿಕೊಳ್ಳುವ ಅವಕಾಶವನ್ನು ಪ್ರಯಾಣದುದ್ದಕ್ಕೂ ಕಲ್ಪಿಸಿಕೊಡಲಾಗಿತ್ತು.

15 ದಿನಗಳ ಯಾತ್ರೆಯಲ್ಲಿ ಯಾತ್ರಿಗಳನ್ನು 6 ಗುಂಪುಗಳಾಗಿ ವಿಂಗಡಿಸಲಾಗಿತ್ತು. ಈ ಎಲ್ಲಾ ಗುಂಪುಗಳಿಗೆ ಒಬ್ಬ ಆಯೋಜಕರನ್ನು ನೇಮಿಸಲಾಗಿತ್ತು. ಒಂದೇ ರೀತಿಯ 7 ಹೋಲಿಕೆಯ ಆಸಕ್ತಿಗಳನ್ನು ಹೊಂದಿದ್ದ ಜನರನ್ನು ಒಂದು ಗುಂಪಾಗಿ ಮಾಡಲಾಗಿತ್ತು. ಇಲ್ಲಿ 7 ಆಸಕ್ತಿಯ ಕ್ಷೇತ್ರಗಳೆಂದರೆ ಕೃಷಿ, ಹೆಲ್ತ್ ಕೇರ್, ಎನರ್ಜಿ, ಶಿಕ್ಷಣ, ಜಲ ನಿರ್ಮಲೀಕರಣ, ಕಲೆ ಮತ್ತು ಸಂಸ್ಕೃತಿಗಳು. ಇದರೊಂದಿಗೆ ಉತ್ಪಾದನಾ ವಿಭಾಗವನ್ನು ಗಮನಿಸಿ ಗುಂಪುಗಳನ್ನು ಮಾಡಲಾಗಿತ್ತು. ಬಿಝ್ ಗ್ಯಾನ್ ಟ್ರೀ ಎಂಬ ಸ್ಪರ್ಧೆಯ ಮೂಲಕ ಈ ಗುಂಪುಗಳು ಅತ್ಯುತ್ತಮವಾದ ಉದ್ಯಮ ಯೋಜನೆಗಳನ್ನು ಪ್ರಸ್ತುತ ಪಡಿಸಲು ಸಾಧ್ಯವಾಗಿತ್ತು. ಈ ಯಾತ್ರೆಯಲ್ಲಿ ಏರ್ಪಡಿಸಿದ್ದ ಎಲ್ಲಾ ಚಟುವಟಿಕೆಗಳು ನಾವೀನ್ಯತೆ, ಸಹಯೋಗ, ರೂಪಾಂತರದಂತಹ ಉದ್ಯಮದ ಯಶಸ್ಸಿಗೆ ಸಹಕಾರಿ ಅಂಶಗಳನ್ನು ಒಳಗೊಂಡಿತ್ತು.

ಜಾಗೃತಿ ಯಾತ್ರೆಯ ಹಳೆಯ ಯಾತ್ರಿಗಳು

2012ರಲ್ಲಿ ಈ ಜಾಗೃತಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಡಾಲಾದ ಸವಿತಾ ಮುಂಡೆ, ಯಾತ್ರೆ ಮುಗಿದ ಬಳಿಕ ತಮ್ಮ ಹಳ್ಳಿಯ ಸಬಲೀಕರಣಕ್ಕಾಗಿ ರಾಜಲಕ್ಷ್ಮಿ ಸೋಯಾ ಫುಡ್ ಎಂಬ ಸಂಸ್ಥೆಯನ್ನು ಆರಂಭಿಸಿದರು. ಇದಕ್ಕಾಗಿ ಅವರು 1 ಕೋಟಿಗೂ ಹೆಚ್ಚು ಹೂಡಿಕೆಯನ್ನು ಹೊಂಚುವಲ್ಲಿ ಯಶಸ್ವಿಯಾಗಿದ್ದರು. ಇವರು ತಮ್ಮ 21ನೇ ವಯಸ್ಸಿನಲ್ಲೇ ಗ್ರಾಮಪ್ರಧಾನ ಹುದ್ದೆಯನ್ನು ಅಲಂಕರಿಸಿದ್ದರು. ಇದರ ಎಲ್ಲಾ ಕ್ರೆಡಿಟ್‌ಗಳೂ ಯಾತ್ರೆಗೆ ಸಲ್ಲಬೇಕೆನ್ನುತ್ತಾರೆ ಸವಿತಾ ಮುಂಡೆ.

ಸವಿತಾ ತಮ್ಮ ಉದ್ಯಮದಲ್ಲಿ ಯಶಸ್ವಿಯಾದಂತೆಯೇ, ಕವೀಶ್ ಮತ್ತು ನೇಹಾ ಕೂಡ ವಿಭಿನ್ನವಾದ ಉದ್ಯಮ ಯಾನವನ್ನು ಕೈಗೊಂಡಿದ್ದಾರೆ. ಜಾಗೃತಿ ಯಾತ್ರೆಯಲ್ಲಿ ಭೇಟಿಯಾದ ಇವರಿಬ್ಬರೂ ಅನೇಕ ಚರ್ಚೆಗಳನ್ನು ನಡೆಸಿ ತಮ್ಮದೇ ಆದ ಜುಬಾನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಇದು ಸ್ವತಂತ್ರ ಕಲಾವಿದರನ್ನು ದೇಶದ ಪ್ರಮುಖ ಪ್ರದೇಶಗಳಿಗೆ ಪರಿಚಯಿಸುವ ಒಂದು ಉದ್ಯಮ. ಇದಕ್ಕಾಗಿ ಸಾರ್ವಜನಿಕ ಪ್ರದರ್ಶನಗಳನ್ನು ಏರ್ಪಡಿಸುವ ಮುಖಾಂತರ ಕಲಾವಿದರಿಗೆ ವೇದಿಕೆ ಒದಗಿಸುತ್ತಿದೆ ಜುಬಾನ್.

ಈ ಯಾತ್ರೆಯಲ್ಲಿ ಇಲ್ಲಿವರೆಗೆ ಪಾಲ್ಗೊಂಡವರು ಸುಮಾರು 350 ಉದ್ಯಮಗಳನ್ನು ಆರಂಭಿಸಿದ್ದಾರೆ. ಈ ಪೈಕಿ ಶೇ.49ರಷ್ಟು ಜನ ದೇಶಕಟ್ಟುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

“ನಕ್ಸಲೈಟ್‌ಗಳು ಇರುವ ಪ್ರದೇಶಗಳಿಗೆ ಮತ್ತು ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಪ್ರದೇಶಗಳಿಗೆ ಭೇಟಿಕೊಡುತ್ತೇವೆ. ಅಲ್ಲಿಯೂ ಕಾರ್ಯನಿರ್ವಹಿಸುತ್ತೇವೆ. ಇದು ನಮ್ಮ ದೇಶ. ನಾವಲ್ಲದೇ ಇನ್ಯಾರು ಇಲ್ಲಿಗೆ ಭೇಟಿ ನೀಡಬೇಕು” ಎಂಬುದು ಶಶಾಂಕ್ ಅವರ ಮಾತು.

ಇಂದಿನ ಯುವ ಜನಾಂಗವನ್ನು ನಾಳಿನ ಪ್ರಬಲ ಉದ್ಯಮಿಯಾಗಿಸಬೇಕೆಂಬುದು ಈ ಜಾಗೃತಿಯ ಯಾತ್ರೆಯ ಉದ್ದೇಶ. ಅದಕ್ಕಾಗಿ ಇಲ್ಲಿ ಕಲಿಕೆಗೆ, ಅನುಭವಗಳಿಗೆ ಮತ್ತು ದೇಶಪ್ರೇಮ ಮೂಡಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಮೂಲಕ ದೇಶಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುವಂತಹ ತರಬೇತಿ ನೀಡಲಾಗುತ್ತದೆ.


ಲೇಖಕರು: ತರುಷ್​​ ಭಲ್ಲ

ಅನುವಾದಕರು: ವಿಶ್ವಾಸ್​

Related Stories

Stories by YourStory Kannada