ಭಾರತೀಯ ಗಾಲ್ಫ್ ಲೋಕದ ಧ್ರುವತಾರೆ : ಅದಿತಿ ಅಶೋಕ್ ಈಗ 'ಯುರೋಪಿಯನ್ ಟೂರ್' ಚಾಂಪಿಯನ್ 

ಟೀಮ್ ವೈ.ಎಸ್.ಕನ್ನಡ 

0

ಭಾರತೀಯ ಗಾಲ್ಫ್ ಲೋಕದ ಉದಯೋನ್ಮುಖ ಆಟಗಾರ್ತಿ ಅದಿತಿ ಅಶೋಕ್ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಗುರ್​ಗಾಂವ್​ನಲ್ಲಿ ನಡೆದ 'ಹೀರೋ ವುಮನ್ಸ್ ಇಂಡಿಯನ್ ಓಪನ್' ಪ್ರಶಸ್ತಿ ಗೆಲ್ಲುವ ಮೂಲಕ ಅದಿತಿ 'ಲೇಡೀಸ್ ಯುರೋಪಿಯನ್ ಟೂರ್'ನಲ್ಲಿ ಜಯಗಳಿಸಿದ ಭಾರತದ ಮೊಟ್ಟ ಮೊದಲ ಗಾಲ್ಫ್ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಡಿಎಲ್ಎಫ್ ಗಾಲ್ಫ್ ಮತ್ತು ಕಂಟ್ರಿ ಕ್ಲಬ್​ನಲ್ಲಿ ನಡೆದ ಪಂದ್ಯದಲ್ಲಿ ಒಂಭತ್ತನೇ ಸ್ಥಾನದಲ್ಲಿದ್ದ ಅದಿತಿ 17ನೇ ಕುಳಿ (ಹೋಲ್) ಬಳಿಕ 2ನೇ ಸ್ಥಾನಕ್ಕೆ ಜಿಗಿದಿದ್ರು. ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಅನ್ನೋದನ್ನು ಊಹಿಸೋದು ಸಾಧ್ಯವಿರಲಿಲ್ಲ. ಯಾಕಂದ್ರೆ ಒಬ್ಬರಾದ ಮೇಲೊಬ್ಬರು ಮುನ್ನಡೆ ಸಾಧಿಸುತ್ತಲೇ ಇದ್ರು. ಅದಿತಿಗೆ ತೀವ್ರ ಪೈಪೋಟಿ ಒಡ್ಡಿದವರು ಅಮೆರಿಕದ ಬ್ರಿಟ್ನಿ ಲಿನ್ಸಿಕಮ್ ಮತ್ತು ಸ್ಪೇನ್​ನ ಬೆಲೆನ್ ಮೋಜೋ. ಮೊದಲ ಮತ್ತು ಮೂರನೇ ಸುತ್ತಿನಲ್ಲಿ 72 ಪಾಯಿಂಟ್ ಗಳಿಸಿದ್ದ ಅದಿತಿ ಮೂರನೇ ಸುತ್ತಿನಲ್ಲಿ 69 ಪಾಯಿಂಟ್​ಗಳನ್ನು ತಮ್ಮದಾಗಿಸಿಕೊಂಡ್ರು. ಈ ಮೂಲಕ ಯುರೋಪಿಯನ್ ಟೂರ್ ಪಂದ್ಯಾವಳಿಯನ್ನು ಗೆದ್ದುಕೊಂಡ್ರು.

ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದ ಅಮೆರಿಕದ ಬ್ರಿಟ್ನಿ ಲೆನ್ಸಿಕಮ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಐತಿಹಾಸಿಕ ಸಾಧನೆಯೊಂದಿಗೆ ಅದಿತಿ ಅಶೋಕ್ 60,000 ಡಾಲರ್ ನಗದು ಬಹುಮಾನವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ವರ್ಷದ ರೂಕಿ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

''ಈ ಹಿಂದೆ ಕೂಡ ನಾನು ಇಂಡಿಯನ್ ಓಪನ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೆ. ಆದ್ರೆ ಈ ಬಾರಿ ತವರಿನ ಪ್ರೇಕ್ಷಕರ ಎದುರು ಗೆಲುವು ಸಾಧಿಸಿರುವುದು ನಿಜಕ್ಕೂ ಅತೀವ ಸಂತೋಷ ತಂದಿದೆ. ಚಾಂಪಿಯನ್​ಶಿಪ್ ಗೆಲುವು ತುಂಬಾನೇ ಖುಷಿ ಕೊಡುತ್ತದೆ. ಈ ವರ್ಷಪೂರ್ತಿ ನನ್ನ ಪ್ರದರ್ಶನ ಉತ್ತಮವಾಗಿಯೇ ಇತ್ತು. ಆದ್ರೂ ಕೆಲವು ತಪ್ಪುಗಳನ್ನು ಮಾಡಿದ್ದರಿಂದ ಕೊಂಚ ಹಿನ್ನಡೆಯಾಗಿದೆ'' ಅಂತಾ ಅದಿತಿ ಪ್ರತಿಕ್ರಿಯಿಸಿದ್ದಾರೆ.

ಪಂದ್ಯದ ಕೊನೆಯ ಸುತ್ತು ತುಂಬಾನೇ ರೋಚಕವಾಗಿತ್ತು, ಎರಡು ಶಾಟ್ ಬಾಕಿ ಉಳಿಸಿಕೊಂಡಿದ್ದ ಅದಿತಿಗೆ ಬೆಲೆನ್ ಮೋಜೋ ಕಡೆಯಿಂದ ಪೈಪೋಟಿ ಎದುರಾಗಿತ್ತು. ಈಗಾಗ್ಲೇ ಎರಡು ಪ್ರಮುಖ ಚಾಂಪಿಯನ್​ಶಿಪ್ ಗೆದ್ದಿರುವ ಬ್ರಿಟ್ನಿ ಕೂಡ ಸುಲಭಕ್ಕೆ ಚಾನ್ಸ್ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಎರಡೇ ಕುಳಿಗಳ ಆಟ ಬಾಕಿಯಿತ್ತು, ಅದಿತಿ ಹಾಗೂ ಬೆಲೆನ್ 17ನೇ ಕುಳಿಯ ಯಶಸ್ಸಿನ ಬಳಿಕ ಸಮಬಲ ಕಾಯ್ದುಕೊಂಡ್ರು. ನಿರ್ಣಾಯಕವಾಗಿದ್ದ 18ನೇ ಕುಳಿಗೆ ಒಂದೂವರೆ ಅಡಿ ದೂರದವರೆಗೂ ಅದಿತಿಯ ಶಾಟ್ ಸಾಗಿತ್ತು. ಆದ್ರೆ ಬೆಲೆನ್ ಪ್ರಯತ್ನ ವ್ಯರ್ಥವಾಯ್ತು. ಶಾಂತವಾಗಿ ತದೇಕಚಿತ್ತದಿಂದ ಆಡಿದ ಅದಿತಿ ಚೆಂಡನ್ನು ಯಶಸ್ವಿಯಾಗಿ ಕುಳಿಯೊಳಕ್ಕೆ ಹಾಕುವ ಮೂಲಕ ಚಾಂಪಿಯನ್ ಪಟ್ಟ ಏರಿದ್ರು. ನೆರೆದಿದ್ದ ಪ್ರೇಕ್ಷಕರ ಹರ್ಷೋದ್ಘಾರ ಮತ್ತು ಚಪ್ಪಾಳೆ ಅದಿತಿ ಅವರ ಜಯದ ಖುಷಿಯನ್ನು ಇಮ್ಮಡಿಗೊಳಿಸಿತ್ತು.

''ಇನ್ನೆರಡು ವಾರಗಳು ಕಳೆದ್ರೆ ನನಗೆ ಮತ್ತಷ್ಟು ಪಂದ್ಯಾವಳಿಗಳು ಎದುರಾಗಲಿವೆ. ಕತಾರ್ ಮತ್ತು ದುಬೈನಲ್ಲಿ ನಾನು ಆಡಲಿದ್ದೇನೆ. ಅಲ್ಲಿ ಕೂಡ ಉತ್ತಮ ಪ್ರದರ್ಶನ ತೋರಿ 'ರೂಕಿ ಆಫ್ ದಿ ಇಯರ್' ಪ್ರಶಸ್ತಿ ಗೆಲ್ಲಬೇಕೆಂಬುದೇ ನನ್ನ ಆಸೆ'' ಅಂತಾ ಅದಿತಿ ತಿಳಿಸಿದ್ದಾರೆ. 18ರ ಹರೆಯದ ಅದಿತಿ ಅಶೋಕ್, ರಿಯೋ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಮತ್ತು ಏಕೈಕ ಗಾಲ್ಫರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇನ್ನು 215 ಅಂಕಗಳೊಂದಿಗೆ ಥೈಲ್ಯಾಂಡ್​ನ ಕನ್ಫಣಿತ್ನನ್ ಮೌಂಗ್​ಮ್ಸಾಕುಲ್ ನಾಲ್ಕನೇ ಸ್ಥಾನ ಪಡೆದ್ರೆ, ಇಂಗ್ಲೆಂಡ್​ನ ಫ್ಲೊರೆಂಟಿನಾ ಪಾರ್ಕರ್ 216 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಎಮಿಲಿ ಪೆಡೆರ್ಸನ್ ಹಾಗೂ ಕಿರಣ್ ಮಾಥರು 9ನೇ ಸ್ಥಾನ ಪಡೆದ್ರೆ, ಕ್ರಿಸ್ಟೈಲ್ ವೋಲ್ಫ್ 11ನೇ ಸ್ಥಾನ ತಮ್ಮದಾಗಿಸಿಕೊಂಡ್ರು.

ಇದನ್ನೂ ಓದಿ...

ನಿಮ್ಮ ಕೈಯಲ್ಲಿರುವ 2000 ರೂಪಾಯಿ ನೋಟಿನ ಬಗ್ಗೆ ನಿಮಗೆಷ್ಟು ಗೊತ್ತು..?

ವೈಜ್ಞಾನಿಕ ಲೋಕದಲ್ಲಿ ಅಚ್ಚರಿಯ ಸಂಶೋಧನೆ- ಇಂಧನಕ್ಕಾಗಿ ಕಾರ್ಬನ್ ಡೈ ಆಕ್ಸೈಡ್ ಬಳಕೆ..!

Related Stories

Stories by YourStory Kannada