ಸಾವಯವ ಕೃಷಿ ಪದ್ಧತಿಯಿಂದ ಇಳುವರಿ ಹೆಚ್ಚಿಸಿ ದಾಖಲೆ ನಿರ್ಮಿಸಿದ ಬಿಹಾರದ ಯುವ ಕೃಷಿಕ ಸುಮಂತ್ ಕುಮಾರ್

ಟೀಮ್​​ ವೈ.ಎಸ್​​.ಕನ್ನಡ

0

ಭಾರತದ ಅತ್ಯಂತ ಬಡ ರಾಜ್ಯ ಬಿಹಾರದ ನಳಂದ ಜಿಲ್ಲೆಯ ಕುಗ್ರಾಮ ದರ್ವೇಶಪುರ ಎಂಬ ಹಳ್ಳಿಯ ಯುವ ರೈತ ಸುಮಂತ್ ಕುಮಾರ್. ಈ ಯುವ ರೈತ 1 ಹೆಕ್ಟೇರ್ ಕೃಷಿ ಭೂಮಿಯಲ್ಲಿ 22.4 ಟನ್ ಭತ್ತ ಬೆಳೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಯಾವುದೇ ಸಸ್ಯನಾಶಕಗಳನ್ನು ಬಳಸದೇ ಈ ದೊಡ್ಡ ಮಟ್ಟದ ಬೆಳೆ ಬೆಳೆದಿರುವುದು ಈತನ ಹೆಗ್ಗಳಿಕೆ. ಈ ಮೂಲಕ ಸದ್ದಿಲ್ಲದೇ ಕೃಷಿ ಕ್ರಾಂತಿಯನ್ನು ಮಾಡುತ್ತಿದ್ದಾರೆ ಸುಮಂತ್ ಕುಮಾರ್. ಈ ಅಪರೂಪದ ಸಾಧನೆಯಿಂದ ಸುಮಂತ್ ಕುಮಾರ್ 1 ಹೆಕ್ಟೇರ್ ಪ್ರದೇಶದಲ್ಲಿ 19.4 ಟನ್ ಭತ್ತ ಬೆಳೆದು ಸಾಧನೆ ಮಾಡಿದ ಚೀನೀ ಕೃಷಿ ವಿಜ್ಞಾನಿ, ಫಾದರ್ ಆಫ್ ರೈಸ್ ಎಂಬ ಹೆಗ್ಗಳಿಕೆ ಪಡೆದಿರುವ ಯುವಾನ್ ಲಾಂಗ್ ಪಿಂಗ್ ಅವರ ದಾಖಲೆಯನ್ನೂ ಮೀರಿಸಿದ್ದಾರೆ. ಇಳುವರಿ ಬೆಳವಣಿಗೆಯ ವಿದ್ಯಮಾನ ಕೇವಲ ಒಂದು ಬಾರಿಯ ಅದ್ಭುತವಾಗಿದ್ದು ಅದು ಸುಮಂತ್‌ಗೆ ಮಾತ್ರ ಮೀಸಲಾಗಿದೆ. ದರ್ವೇಶಪುರದಲ್ಲಿರುವ ಸುಮಂತ್ ಅವರ ಸ್ನೇಹಿತರು 17 ಟನ್ ಬೆಳೆದಿದ್ದಾರೆ ಹಾಗೂ ಇತರರು ಸುಮಂತ್ ಮಾರ್ಗದರ್ಶನದಂತೆ ನಡೆದುಕೊಂಡು ತಮ್ಮ ಎಂದಿನ ಇಳುವರಿಯ ಎರಡರಷ್ಟು ಇಳುವರಿಯನ್ನು ಪಡೆದಿದ್ದಾರೆ. ಹೀಗೆ ನಿಧಾನವಾಗಿ ದರ್ವೇಶಪುರದ ಹಳ್ಳಿಯ ಜನ ಬಡತನದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಮತ್ತು ತಮ್ಮ ಜೀವನ ವಿಧಾನವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ.

ದ ಗಾರ್ಡಿಯನ್ ಪತ್ರಿಕೆಯ ವರದಿಯ ಪ್ರಕಾರ ದರ್ವೇಶಪುರದ ರೈತರು ನೂತನ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ಈ ಮಟ್ಟದ ಸಾಧನೆ ಮಾಡಿದ್ದಾರೆ. ರೈತರು ಸಾಂಪ್ರದಾಯಿಕವಾಗಿ ಅನುಸರಿಸುವ ನೀತಿಯನ್ನು ಬಿಟ್ಟು ಅಂದರೆ, 3 ವಾರ ಹಳೆಯ ಭತ್ತದ ಮೊಳಕೆಯನ್ನು ಗುಂಪುಗಳಾಗಿ ನೀರು ಕುಡಿದು ನಿಷ್ಪ್ರಯೋಜಕವಾಗಿರುವ ಕೃಷಿಭೂಮಿಯಲ್ಲಿ ಬೆಳೆಸುವ ಬದಲು, ಈ ರೈತರು ಹಲವಷ್ಟು ಬೀಜಗಳಲ್ಲಿ ಅರ್ಧದಷ್ಟನ್ನು ಮಾತ್ರ ಪೋಷಿಸಿ ನಂತರ ಅದನ್ನು ಹೊಲಗಳಲ್ಲಿ ಎಳೆಯ ಸಸಿಗಳನ್ನು ಒಂದಾದ ಮೇಲೊಂದರಂತೆ ಕಸಿ ಮಾಡುವ ಮೂಲಕ ಅದನ್ನು ಬೆಳೆಸುತ್ತಾರೆ. ನಂತರ ಅವುಗಳನ್ನು 25 ಸೆಂಟಿಮೀಟರ್ ಅಂತರದಲ್ಲಿ ಗ್ರಿಡ್ ಪ್ಯಾಟರ್ನ್‌ನಲ್ಲಿ ನೆಡುತ್ತಾರೆ. ಅವುಗಳ ಸುತ್ತಲಿನ ಮಣ್ಣು ಒಣಗಿರುವಂತೆ ಮಾಡುತ್ತಾರೆ ಮತ್ತು ಗಿಡದ ಸುತ್ತಲೂ ಬೆಳೆಯುವ ಕಳೆಗಳನ್ನು ತೆಗೆದು ಬೀಜಗಳ ಬೇರುಗಳಿಗೆ ಸಮರಪಕವಾಗಿ ಗಾಳಿಯಾಡುವಂತಹ ವ್ಯವಸ್ಥೆ ಮಾಡುತ್ತಾರೆ. ಹೀಗೆ ಕಡಿಮೆ ಬೀಜಗಳು, ಕಡಿಮೆ ನೀರು ಮತ್ತು ರಾಸಾಯನಿಕಗಳನ್ನು ಬಳಸದೇ ದುಪ್ಪಟ್ಟು ಇಳುವರಿಯನ್ನು ಪಡೆಯುವಲ್ಲಿ ರೈತರು ಯಶಸ್ವಿಯಾಗಿದ್ದಾರೆ.

ಅಗ್ರಿಕಲ್ಟರ್ ನೆಟ್‌ವರ್ಕ್‌ ಪ್ರಕಾರ, ದರ್ವೇಶಪುರದ ರೈತರು ಅನುಸರಿಸುತ್ತಿರುವ ಕೃಷಿ ರೀತಿಗೆ ದ ಸಿಸ್ಟಮ್ ಆಫ್ ರೈಸ್ ಇಂಟೆನ್ಸಿಫಿಕೇಶನ್ ಎಂದು ಹೆಸರು. ಈ ಪದ್ಧತಿ ಫ್ರೆಂಚ್ ಕ್ರೈಸ್ತ ಫಾದರ್ ಹೆನ್ರಿ ಡಿ ಲೌಲಾನಿಯವರಿಂದ 1983ರಲ್ಲಿ ಮಡಗಾಸ್ಕರ್‌ನಲ್ಲಿ ಅಭಿವೃದ್ಧಿಗೊಂಡಿತ್ತು. ಇದು 1960ರಿಂದ ಹೆನ್ರಿ ಡಿ ಲೌಲಾನಿ ರೈತರಿಗಾಗಿ ಹೆಚ್ಚುವರಿ ಆದಾಯಕ್ಕಾಗಿ ಆರಂಭಿಸಿದ್ದ ಅಕ್ಕಿಯ ಕುರಿತ ಸಂಶೋಧನೆಗಳ ಫಲವಾಗಿತ್ತು. ದ ಸಿಸ್ಟಮ್ ಆಫ್ ರೈಸ್ ಇಂಟೆನ್ಸಿಫಿಕೇಶನ್‌ ಪದ್ಧತಿಯ ಪ್ರಚಾರಕರು ಕಡಿಮೆಯಿಂದ ಹೆಚ್ಚು ಉತ್ಪಾದನೆ ಮಾಡುವ ವಿಧಾನ ಎಂದು ಹೇಳುತ್ತಾರೆ. ಇದು ಸಾವಯವ ಕೃಷಿ ಪದ್ಧತಿಯ ಮುಂದುವರಿದ ಕ್ರಾಂತಿಕಾರಿ ಹೆಜ್ಜೆ ಎಂದೇ ಹೇಳಲಾಗುತ್ತದೆ.

ರೈತರ ಈ ಹೆಜ್ಜೆಯಿಂದ ಪ್ರೇರಿತರಾಗಿ 2013ರಲ್ಲಿ ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಸ್ ಅವರು ನಳಂದಾ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಸಾವಯವ ಕೃಷಿ ಪದ್ಧತಿಯಿಂದ ಬಂದ ಇಳುವರಿಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದೇ ಅಲ್ಲದೇ ಅಲ್ಲಿನ ರೈತರನ್ನು ಯಾವುದೇ ವಿಜ್ಞಾನಿಗಳಿಗಿಂತ ಹೆಚ್ಚಿನವರು ಎಂದು ಬಣ್ಣಿಸಿದ್ದರು.

ಯಾವುದೇ ಒಬ್ಬ ವಿಜ್ಞಾನಿ ಅಥವಾ ಕಂಪನಿ ಹೆಚ್ಚು ಬೆಲೆ ತೆರದೇ ಶೇ.50ರಷ್ಟು ಇಳುವರಿ ಹೆಚ್ಚಿಸುವ ತಂತ್ರಜ್ಞಾನವನ್ನು ಕಂಡುಹಿಡಿದರೆ ಅವರಿಗೆ ನೋಬೆಲ್ ಪ್ರಶಸ್ತಿ ಲಭಿಸಬೇಕು. ಆದರೆ ಯುವ ಬಿಹಾರಿ ರೈತ ಇಂಥದ್ದೊಂದನ್ನು ಕಂಡುಹಿಡಿದರೆ ಯಾರೂ ಏನೂ ಮಾಡಲಾರರು. ಬಡ ರೈತರಿಗೆ ಸಾಕಷ್ಟು ಆಹಾರ ದೊರಕುತ್ತದೆ ಎಂಬುದೇ ಸಮಾಧಾನದ ವಿಚಾರ ಎನ್ನುತ್ತಾರೆ ಕೃಷಿ ವಿಜ್ಞಾನಿ ಅನಿಲ್ ವರ್ಮಾ.

ಅನುವಾದಕರು: ವಿಶ್ವಾಸ್​​​

Related Stories