ಮನೆ ಪೀಠೋಪಕರಣ ಬಾಡಿಗೆಗೆ ಬೇಕಾ? JUSTonRENT.Com ಗೆ ಲಾಗ್ ಇನ್ ಆಗಿ

ಟೀಮ್​ ವೈ.ಎಸ್​. ಕನ್ನಡ

0

ಈ ಕಾಲದಲ್ಲಿ ಒಂದೇ ಊರಿನಲ್ಲಿ ನೆಲೆ ನಿಲ್ಲಲು ಸಾಧ್ಯವಿಲ್ಲ. ಅಭ್ಯಾಸದ ವೇಳೆ ಅಥವಾ ಕೆಲಸಕ್ಕಾಗಿ ಮನುಷ್ಯ ತವರು ತೊರೆದು ಬೇರೆ ಊರುಗಳಿಗೆ ಗಂಟುಮೂಟೆ ಕಟ್ಟಲೇಬೇಕು. ಮತ್ತೊಂದು ಊರಿನಲ್ಲಿ ಮನೆ ಮಾಡುವುದು ಸುಲಭದ ಕೆಲಸವಲ್ಲ. ಮನೆಯನ್ನು ಬಾಡಿಗೆಗೆ ಪಡೆದ್ರೆ ಮುಗಿಯಲಿಲ್ಲ. ಮನೆಗೆ ಅವಶ್ಯಕವಿರುವ ಕೆಲ ವಸ್ತುಗಳನ್ನು ಅನಿವಾರ್ಯವಾಗಿ ಕೊಂಡುಕೊಳ್ಳಬೇಕಾಗುತ್ತದೆ. ಹಣ ಇದ್ದವರಿಗೆ ಸಾಮಾನುಗಳನ್ನು ಕೊಂಡುಕೊಳ್ಳುವುದು ದೊಡ್ಡ ವಿಷಯವಾಗುವುದಿಲ್ಲ. ಆದ್ರೆ ಪೀಠೋಪಕರಣಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದು ತಲೆನೋವಿನ ಕೆಲಸ.ಹಳೆ ಪೀಠೋಪಕರಣ ಗಳನ್ನು ಮಾರುವುದು ಕಷ್ಟ. ಬೇರೆ ಕಡೆ ತೆಗೆದುಕೊಂಡು ಹೋಗುವುದೂ ಕಷ್ಟ. ಮುಂಬೈ ನಿವಾಸಿ ರಾಹುಲ್ ಕೂಡ ಈ ಸಮಸ್ಯೆ ಎದುರಿಸಬೇಕಾಯ್ತು. ಮುಂಬೈನಿಂದ ಕೊಲ್ಕತ್ತಾಗೆ ಶಿಫ್ಟ್ ಆಗಬೇಕಾದ ಪರಿಸ್ಥಿತಿ ಬಂದಿತ್ತು. ಕೊಲ್ಕತ್ತಾಗೆ ಹೋದ ರಾಹುಲ್ ಪೀಠೋಪಕರಣಗಳನ್ನು ಖರೀದಿಸಿದ್ದರು. ಆದ್ರೆ ಕೆಲ ದಿನಗಳ ನಂತ್ರ ರಾಹುಲ್ ಗೆ ಮತ್ತೆ ಮುಂಬೈಗೆ ಟ್ರಾನ್ಸ್ ಫರ್ ಆಯ್ತು. ಆಗ ರಾಹುಲ್ ಕಾಡಿದ್ದು ಇದೇ ಹಳೆ ಪೀಠೋಪಕರಣಗಳು. ಅದನ್ನು ಕಡಿಮೆ ಬೆಲೆಗೆ ಮಾರಿ ರಾಹುಲ್ ಮುಂಬೈಗೆ ಬಂದ್ರು.ಆದ್ರೆ ಈ ವಿಷಯ ಅವರ ತಲೆಯಲ್ಲಿತ್ತು. ತನ್ನ ಸ್ನೇಹಿತರ ಜೊತೆ ಈ ವಿಚಾರವನ್ನು ಮಾತನಾಡಿದ್ರು. ಬಾಡಿಗೆಗೆ ಪೀಠೋಪಕರಣಗಳು ದೊರೆತಿದ್ರೆ ಎಷ್ಟು ಒಳ್ಳೆಯದಿತ್ತು ಎಂದು ಚಿಂತಿಸಿದ್ರು. ಇದೇ ಸಮಸ್ಯೆ ಎದುರಿಸಿದ್ದ ಕೆಲ ಸ್ನೇಹಿತರು ರಾಹುಲ್ ಜೊತೆ ಕೈ ಜೋಡಿಸಿದ್ರು. 2015ರಲ್ಲಿ ಸ್ನೇಹಿತರೆಲ್ಲ ಸೇರಿ JUSTonRENT.Com ಆರಂಭಿಸಿದ್ರು.

ಯುವರ್ ಸ್ಟೋರಿ ಜೊತೆ ಮಾತನಾಡಿದ ರಾಹುಲ್ ಹೀಗೆ ಹೇಳ್ತಾರೆ..

``2012ರಲ್ಲಿ ನಾನು ಕೊಲ್ಕತ್ತಾದ ಕಾಗ್ನಿಜೆಂಟ್ನಲ್ಲಿ ಕೆಲಸ ಮಾಡ್ತಾ ಇದ್ದೆ. ಅಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದೆ. ಅವಶ್ಯಕತೆ ಇದ್ದಿದ್ದರಿಂದ ಕೆಲ ಪೀಠೋಪಕರಣಗಳನ್ನು ಖರೀದಿಸಿದ್ದೆ. ಆದ್ರೆ ಕೆಲವೇ ದಿನಗಳಲ್ಲಿ ನನಗೆ ಮುಂಬೈಗೆ ವರ್ಗವಾಯ್ತು. ಈ ಪಿಠೋಪಕರಣಗಳನ್ನೆಲ್ಲ ತೆಗೆದುಕೊಂಡು ಮುಂಬೈಗೆ ಬರುವ ಸ್ಥಿತಿಯಲ್ಲಿ ನಾನಿರಲಿಲ್ಲ. ಹಾಗಾಗಿ ಅತಿ ಕಡಿಮೆ ಬೆಲೆಗೆ ಪೀಠೋಪಕರಣಗಳನ್ನು ಮಾರಬೇಕಾಯ್ತು. ಕಡಿಮೆ ಬೆಲೆಯ ಪೀಠೋಪಕರಣಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸುವುದು ಕಷ್ಟ. ಅವಶ್ಯಕತೆಗೆ ಅನುಗುಣವಾಗಿ ಅವು ಬಾಡಿಗೆಗೆ ಸಿಕ್ಕರೆ ಎಷ್ಟು ಚೆನ್ನಾಗಿತ್ತು ಎನ್ನಿಸಿತು. ನನ್ನ ಹಾಗೆ ಸಮಸ್ಯೆ ಎದುರಿಸಿದ ಸ್ನೇಹಿತರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದೆ.ಪುಣೆಯ ಕೆಲ ಸ್ಟಾರ್ಟ್ –ಅಪ್ ಜೊತೆ ಕೆಲಸ ಮಾಡಿದೆ ಹಾಗೂ JUSTonRENT.Com ಶುರುಮಾಡಿದೆ.

ಇದನ್ನು ಓದಿ: ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..

ಆರಂಭದ ಸಮಸ್ಯೆ:

ಮೊದಲಿನಿಂದಲೂ ಉದ್ಯಮಿಯಾಗುವ ಕನಸು ಕಂಡಿದ್ದರು ರಾಹುಲ್. ಆದ್ರೆ ಮಧ್ಯಮವರ್ಗದವರಾಗಿದ್ದ ಕಾರಣ ಕೆಲಸ ಬಿಟ್ಟು ಉದ್ಯಮ ಆರಂಭಿಸುವುದು ಸುಲಭವಾಗಿರಲಿಲ್ಲ. ಪ್ರತಿ ತಿಂಗಳು ಇಷ್ಟು ಹಣ ಕೈಸೇರುವುದಿಲ್ಲ. ಉದ್ಯಮ ಆರಂಭಿಸಿದ ಕೆಲ ತಿಂಗಳುಗಳ ಕಾಲ ಖರ್ಚು ಜಾಸ್ತಿ,ಆದಾಯ ಕಡಿಮೆ ಇರುತ್ತದೆ ಎಂಬ ಚಿಂತೆ ಅವರನ್ನು ಕಾಡಿತ್ತು. ಆದ್ರೂ ರಾಹುಲ್ ಧೈರ್ಯಗೆಡಲಿಲ್ಲ. ಉದ್ಯಮಲೋಕಕ್ಕೆ ಕಾಲಿಟ್ಟರು. ಅವರಿಗೆ ಬೆಂಬಲವಾಗಿ ನಿಂತಿದ್ದು ಅವರ ಪತ್ನಿ. ಕಷ್ಟದ ಸಮಯದಲ್ಲಿ ಕಾಗ್ನಿಜೆಂಟ್ ನಲ್ಲಿ ಕೆಲಸ ಮಾಡುವ ಪತ್ನಿ ಸಹಾಯ ಮಾಡಿದ್ರು. ಮೊದಲು ರಾಹುಲ್ ತಂದೆ-ತಾಯಿ ಕೂಡ ಒಪ್ಪಿಗೆ ನೀಡಿರಲಿಲ್ಲವಂತೆ. ಈಗ ಅವರು ಖುಷಿಯಾಗಿದ್ದಾರೆ.

ರಾಹುಲ್ ಹೀಗೆ ಹೇಳ್ತಾರೆ,

``ನಾನು ಹಾಗೂ ನನ್ನ ಪತ್ನಿ ಇಬ್ಬರೂ ಕೆಲಸ ಮಾಡುತ್ತಿದ್ದೆವು. ಅದರಲ್ಲಿಯೇ ನಮ್ಮ ಜೀವನ ಸುಂದರವಾಗಿ ಸಾಗುತ್ತಿತ್ತು. ಆದ್ರೆ ನಾನು ನೌಕರಿ ಬಿಟ್ಟ ನಂತರ ಪ್ರತಿ ತಿಂಗಳು ಬರುತ್ತಿದ್ದ ಸಂಬಳ ಕೈತಪ್ಪಿತು. ನಮ್ಮ ಲೈಫ್ ಸ್ಟೈಲ್ ಬದಲಾಯ್ತು. ಪತ್ನಿ ನನ್ನ ನೆರವಿಗೆ ನಿಂತಿದ್ದಾಳೆ. ಆಕೆಗೆ ಬರುವ ಸಂಬಳದಿಂದ ಮನೆ ನಡೆಸುತ್ತಿದ್ದಾಳೆ. ನನ್ನ ಉದ್ಯಮದಲ್ಲಿ ಬರುವ ಆದಾಯವನ್ನು ಮತ್ತೆ ಅದಕ್ಕೆ ಹಾಕುತ್ತಿದ್ದೇನೆ.’

ಈಗ ರಾಹುಲ್ ಸ್ವಂತ ಪ್ರಾಯೋಜಕತ್ವದಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಅವಶ್ಯಕತೆ ಬಿದ್ದರೆ ಮಾತ್ರ ಸ್ನೇಹಿತರ ನೆರವು ಪಡೆಯುತ್ತಾರೆ. ವೃತ್ತಿಯಲ್ಲಿ ರಾಹುಲ್ ಎಂಜಿನಿಯರ್ ಆಗಿದ್ದು, ಎಂಬಿಎ ಕೂಡ ಮಾಡಿದ್ದಾರೆ. ಮಾರಾಟ, ಮಾರುಕಟ್ಟೆ ಹಾಗೂ ಹಣಕಾಸು ಎಲ್ಲ ವ್ಯವಹಾರವನ್ನು ರಾಹುಲ್ ಒಬ್ಬರೆ ನೋಡಿಕೊಳ್ಳುತ್ತಾರೆ. ಅತಿ ಬೇಗ ಉದ್ಯಮದಲ್ಲಿ ನೆಲೆ ನಿಲ್ಲಲು ಸಹಾಯವಾದ ಇ-ಕಾಮರ್ಸ್ ಗೆ ಧನ್ಯವಾದ ಹೇಳ್ತಾರೆ ರಾಹುಲ್. JUSTonRENT.Com ಸದ್ಯ ಪುಣೆಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ದೇಶ ಹಾಗೂ ವಿದೇಶಗಳಿಗೂ ಇದನ್ನು ವಿಸ್ತರಿಸುವ ಯೋಚನೆಯಲ್ಲಿದ್ದಾರೆ ರಾಹುಲ್.

ರಾಹುಲ್ ಹೇಳ್ತಾರೆ,

``ಹಣಕಾಸಿನ ಬಗ್ಗೆ ಮಾತುಕತೆಯಾಗ್ತಾ ಇದೆ. ಒಮ್ಮೆ ಫಂಡ್ ಸಿಕ್ಕರೆ ಬೇರೆ ನಗರಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸಲಿದ್ದೇವೆ. ಜೊತೆಗೆ ಟೆಕ್ನಿಕ್,ಮಾರ್ಕೆಟಿಂಗ್ ಹಾಗೂ ಸಪ್ಲೈನಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲು ಸಹಾಯವಾಗುತ್ತದೆ. ಸದ್ಯ ನಾವು ಅವಶ್ಯವಿರುವ ಪೀಠೋಪಕರಣಗಳನ್ನು ಮಾತ್ರ ಬಾಡಿಗೆಗೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಕಚೇರಿ ಪಿಠೋಪಕರಣಗಳು,ಗೃಹಬಳಕೆ ವಸ್ತುಗಳು ಸೇರಿದಂತೆ ಅನೇಕ ವಸ್ತುಗಳನ್ನು ಬಾಡಿಗೆಗೆ ನೀಡುವ ಯೋಚನೆ ಇದೆ. ‘’

JUSTonRENT.Com ಪುಣೆಯ ಅನೇಕ ವಿದ್ಯಾರ್ಥಿಗಳು ಹಾಗೂ ನೌಕರರ ಸಮಸ್ಯೆಯನ್ನು ಬಗೆಹರಿಸಿದೆ. ಪೀಠೋಪಕರಣಗಳು ಬಹಳ ಸುಲಭವಾಗಿ ಸಿಗುತ್ತಿವೆ. ಅವಶ್ಯಕತೆ ಮುಗಿದ ನಂತ್ರ ಪೀಠೋಪಕರಣಗಳನ್ನು ಗ್ರಾಹಕ ವಾಪಸ್ ಮಾಡ್ತಿದ್ದಾನೆ. JUSTonRENT.Com ಸೇವೆ ಉತ್ತಮವಾಗಿರುವುದರಿಂದ ಧನಾತ್ಮಕ ಪ್ರಚಾರ ಸಿಗುತ್ತಿದೆ. ಒಂದು ಒಳ್ಳೆಯ ಟೀಂ ಕಟ್ಟುವ ಯೋಜನೆಯಲ್ಲಿದ್ದಾರೆ ರಾಹುಲ್. ಜನರಿಗೆ JUSTonRENT.Com ಮೂಲಕ ನೆರವು ನೀಡಬೇಕೆನ್ನುವುದು ಅವರ ಮೂಲ ಉದ್ದೇಶವಾಗಿದೆ..

ಲೇಖಕರು : ಶಿಖಾ ಚೌಹಾಣ್

ಅನುವಾದಕರು: ರೂಪಾ ಹೆಗಡೆ

ಇದನ್ನು ಓದಿ: 

1. ಒಂದೇ ಕ್ಲಿಕ್​ನಲ್ಲಿ ಬರುತ್ತೆ ನಿಮ್ಮ ಮನೆಗೆ ತರಕಾರಿ..!

2. ಬೆಂಗಾಡಿಗೆ ಭಾಗೀರತಿಯಾದ ಅಮಲಾ ರೂಯಿಯಾ...

3. ಚಾಯ್ವಾಲಾ ಆಗಿದ್ದವ ''ಮಿಸ್ಟರ್ ದೆಹಲಿ''ಯಾದ ಯಶೋಗಾಥೆ

Related Stories