ಕರಕುಶಲ ವಸ್ತುಗಳ ಮಾರಾಟಕ್ಕೆ ವೇದಿಕೆ ಕುಶಲಕರ್ಮಿಗಳಿಗೆ ಬದುಕು ಕಟ್ಟಿಕೊಟ್ಟ ` exqzt'

ಟೀಮ್​ ವೈ.ಎಸ್​. ಕನ್ನಡ

ಕರಕುಶಲ ವಸ್ತುಗಳ ಮಾರಾಟಕ್ಕೆ ವೇದಿಕೆ 
ಕುಶಲಕರ್ಮಿಗಳಿಗೆ ಬದುಕು ಕಟ್ಟಿಕೊಟ್ಟ ` exqzt'

Thursday December 17, 2015,

2 min Read


ಕೊಲ್ಹಾಪುರಿ ಚಪ್ಪಲಿ, ಚಂದೇರಿ ಕಾಟನ್, ಚನ್ನಪಟ್ಟಣದ ಆಟಿಕೆಗಳು, ಕಾಂಚೀಪುರಮ್ ಸೀರೆ ಇವೆಲ್ಲವೂ ವಿಶಿಷ್ಟವಾದ ಉತ್ಪನ್ನಗಳು, ಆಯಾ ಪ್ರದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಕೈಯಿಂದಲೇ ತಯಾರಿಸಿದ ಈ ಅನನ್ಯ ಉತ್ಪನ್ನಗಳು ಅಷ್ಟು ಸುಲಭವಾಗಿ ದೊರೆಯುವುದಿಲ್ಲ. ಇಂತಹ ಸಾವಯವ, ಸಾಂಪ್ರದಾಯಿಕ ವಸ್ತುಗಳು ಸುಲಭವಾಗಿ ಗ್ರಾಹಕರಿಗೆ ದೊರೆಯುವಂತೆ ಮಾಡಲೆಂದೇ ` exqzt' ಜನ್ಮ ತಳೆದಿದೆ. ` exqzt'ನ ಆರಂಭದ ಉದ್ದೇಶ ಕುಶಲಕರ್ಮಿಗಳನ್ನು ಪರಸ್ಪರ ಸಂಪರ್ಕಿಸುವುದು ಮಾತ್ರವಲ್ಲ, ಅವರು ಬದುಕು ಕಟ್ಟಿಕೊಳ್ಳಲು ನೆರವಾಗಬಲ್ಲ ಎನ್‍ಜಿಓಗಳು ಹಾಗೂ ಉತ್ಪಾದಕರನ್ನು ಪರಿಚಯಿಸುವುದು ಕೂಡ.

image


` exqzt’ ಪರಿಕಲ್ಪನೆಯ ಜನ್ಮ...

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುತ್ತಾಡುತ್ತಿದ್ದಾಗ ಕಣ್ಣಿಗೆ ಬಿದ್ದ ದೃಶ್ಯವೊಂದು ಅವಿನಾಶ್ ವನ್‍ಪಾಲ್ ಅವರಿಗೆ ಇಂಥದ್ದೊಂದು ವಿನೂತನ ಪರಿಕಲ್ಪನೆ ಹೊಳೆದಿತ್ತು. ಕುಶಲಕರ್ಮಿಗಳು ಸೆಣಬಿನಿಂದ ಮಾಡಿದ ಸುಂದರ ವಸ್ತುಗಳನ್ನು ಕುಟುಂಬ ಸಮೇತರಾಗಿ ಬೀದಿ ಬದಿಯಲ್ಲಿ ನಿಂತು ಮಾರಾಟ ಮಾಡುತ್ತಿದ್ರು. ಆದ್ರೆ ಯಾರೊಬ್ಬರೂ ಆ ಅನನ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮುಂದಾಗುತ್ತಿರಲಿಲ್ಲ, ಎಲ್ಲರೂ ಬೇಡ ಎಂಬಂತೆ ತಲೆಯಲ್ಲಾಡಿಸಿ ಮುಂದಕ್ಕೆ ಸಾಗುತ್ತಿದ್ರು. ಈ ಘಟನೆ ನಡೆದು ಮೂರ್ನಾಲ್ಕು ದಿನಗಳಾಗುವಷ್ಟರಲ್ಲಿ, ಅವಿನಾಶ್ ಅವರ ಸಹೋದ್ಯೋಗಿ ಒಬ್ಬರಿಗೆ ಕೊಲ್ಹಾಪುರಿ ಚಪ್ಪಲಿ ಬೇಕಿತ್ತು. ಅವಿನಾಶ್ ಅವರ ತವರು ಪುಣೆಯಿಂದ ಚಪ್ಪಲಿ ತಂದುಕೊಡುವಂತೆ ಅವರು ಮನವಿ ಮಾಡಿದ್ರು. ಇದನ್ನೆಲ್ಲ ನೋಡಿದ ಅವಿನಾಶ್ ಅವರಿಗೆ, ಕರಕುಶಲ ವಸ್ತುಗಳ ಮಾರಾಟಕ್ಕೆ ವೇದಿಕೆಯೊಂದನ್ನ ಸ್ಥಾಪಿಸುವ ಯೋಚನೆ ಬಂದಿತ್ತು.

` exqzt' ಅನುಸರಿಸುವ ಮಾದರಿ...

ಸದ್ಯ ` exqzt' ದಾಸ್ತಾನು ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಎರಡು ತಿಂಗಳುಗಳಲ್ಲಿ ಮಾರುಕಟ್ಟೆ ಸ್ಥಳದ ಮಾದರಿಯಲ್ಲಿ ` exqzt' ಕಾರ್ಯಾರಂಭ ಮಾಡಲಿದೆ. ಕರಕುಶಲತೆಯಲ್ಲಿ ವೈಶಿಷ್ಟ್ಯತೆಯುಳ್ಳ, ಅತ್ಯಂತ ಜನಪ್ರಿಯವಾದ ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಕೂಡ ಅವಿನಾಶ್ ವನ್‍ಪಾಲ್ ಯೋಜನೆ ರೂಪಿಸಿದ್ದಾರೆ. ಪೂರೈಕೆ ಸರಣಿಯಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಬಗೆಹರಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ ಅನ್ನೋದು ಅವಿನಾಶ್ ವನ್‍ಪಾಲ್ ಅವರ ಅಭಿಪ್ರಾಯ. ಕರಕುಶಲ ಉದ್ಯಮ ಭೌಗೋಳಿಕ ವೈವಿಧ್ಯತೆಯನ್ನು ಹೊಂದಿದೆ. ` exqzt' ಒಂದು ತರಬೇತಿ ಕೇಂದ್ರವಾಗಿ ಮಾರ್ಪಡಲಿದ್ದು, ಅವುಗಳ ವೈಶಿಷ್ಟ್ಯತೆ ಮತ್ತು ಜನಪ್ರಿಯತೆ ದುಪ್ಪಟ್ಟಾಗಲಿದೆ. ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಗೂ ಇದು ತರಬೇತಿ ಸ್ಥಳವಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲ. ಅದರ ಜೊತೆಗೆ ಮಾರ್ಕೆಟಿಂಗ್ ಹಾಗೂ ಉಳಿದ ಮಹತ್ವದ ವಿಷಯಗಳಿಗೂ ವೇದಿಕೆಯಾಗಲಿದೆ. ಆನ್‍ಲೈನ್‍ನಲ್ಲಿ ಉತ್ಪನ್ನಗಳ ಮಾರಾಟ ಸುಲಭವಾಗಲಿದ್ದು, ಕುಶಲ ಕರ್ಮಿಗಳಿಗೆ ಪರಿಸರ ಸ್ನೇಹಿ ಉತ್ಪನ್ನಗಳನ್ನು ಒದಗಿಸುವ ವಿಶ್ವಾಸ ಅವಿನಾಶ್ ವನ್‍ಪಾಲ್ ಅವರಿಗಿದೆ.

` exqzt' ಮುಂದಿರುವ ಸವಾಲುಗಳು ಮತ್ತು ತಂಡದ ಯೋಜನೆ

ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿರುವ ಸ್ಥಳಗಳಲ್ಲಿ, ಕುಶಲಕರ್ಮಿಗಳಿಗಾಗಿ ` exqzt' ತಂಡ ಹುಡುಕಾಟ ನಡೆಸುತ್ತಲೇ ಇದೆ. ಸ್ಥಳೀಯ ಕುಶಲಕರ್ಮಿಗಳಲ್ಲಿ ತಂತ್ರಜ್ಞಾನದ ಅರಿವು, ಡಿಜಿಟಲ್ ಅಳವಡಿಕೆಯ ಕೊರತೆಯಿದೆ. ಇದರ ಪರಿಣಾಮ ಪ್ರತಿಭೆ ಇದ್ರೂ ಅದರ ಸದುಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಪರಿಣಾಮಕಾರಿ ಕಲೆ ಅವರಿಗೆ ಗೊತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಅವನ್ನೆಲ್ಲ ಮಾರಾಟ ಮಾಡಿದರೆ, ಕುಶಲ ಕರ್ಮಿಗಳೆಲ್ಲ ಉತ್ತಮ ಜೀವನ ನಡೆಸಲು ಸಾಧ್ಯವಿದೆ. ಮಾರುಕಟ್ಟೆ ಸ್ಥಳ ಮಾದರಿಯನ್ನು ಅಳವಡಿಸಲು ಇದು ಅಡ್ಡಿಯಾಗಿದೆ ಎನ್ನುತ್ತಾರೆ ಅವಿನಾಶ್. ಹಾಗಾಗಿ ತಮ್ಮದೇ ಆದ ತಂಡವೊಂದನ್ನು ಕಟ್ಟಲು ಅವಿನಾಶ್ ಮುಂದಾಗಿದ್ದಾರೆ, ಮುಂದಿನ ತಿಂಗಳು ಈ ಪ್ರಯತ್ನವೂ ನಡೆಯಲಿದೆ. ಗ್ರಾಹಕರ ಬೆಂಬಲ, ಮಾರಾಟ ಮತ್ತು ಮಾರಾಟಗಾರರ ಜಾಲ ವಿಸ್ತರಣೆಗೆ ನೆರವಾಗಬಲ್ಲ 4-6 ಸಿಬ್ಬಂದಿಯನ್ನು ಅವಿನಾಶ್ ನೇಮಕ ಮಾಡಿಕೊಳ್ಳಲಿದ್ದಾರೆ.

ಒಟ್ನಲ್ಲಿ ಘಟನೆಯೊಂದರಿಂದ ಪ್ರೇರಣೆ ಪಡೆದು ಕುಶಲಕರ್ಮಿಗಳಿಗೆ ಬದುಕು ಕಟ್ಟಿಕೊಡಲು ಹೊರಟಿರುವ ಅವಿನಾಶ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ನಮ್ಮ ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯದ ಉಳಿವಿಗೂ ಅವರು ಈ ಮೂಲಕ ಕೊಡುಗೆ ನೀಡುತ್ತಿದ್ದಾರೆ.


ಲೇಖಕರು: ಸಿಂಧು ಕಶ್ಯಪ್​​

ಅನುವಾದಕರು: ಭಾರತಿ ಭಟ್​​