ಮುಂಬೈನಿಂದ ಆಸ್ಕರ್​ವರೆಗೆ ಸನ್ನಿ ಪವಾರ್ – 8 ವರ್ಷದ ಪುಟಾಣಿಯ ಸಾಧನೆಯ ಹಾದಿ  

ಟೀಮ್ ವೈ.ಎಸ್.ಕನ್ನಡ 

1

89ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮವೇನೋ ಮುಗಿದಿದೆ. ಆದ್ರೆ ಇಂಟರ್ನೆಟ್​ನಲ್ಲಿ ಮಾತ್ರ 8 ವರ್ಷದ ಪೋರ ಸನ್ನಿ ಪವಾರ್​ನದ್ದೇ ಸುದ್ದಿ. ಸನ್ನಿ ಮುಂಬೈನ ಒಬ್ಬ ಬಾಲ ಕಲಾವಿದ. ಆಸ್ಕರ್​ಗೆ ನಾಮನಿರ್ದೇಶನಗೊಂಡಿದ್ದ ದೇವ್ ಪಟೇಲ್ ಹಾಗೂ ನಿಕೋಲೆ ಕಿಡ್ಮನ್ ಅಭಿನಯದ ‘ಲಯನ್’ ಸಿನಿಮಾದಲ್ಲಿ ನಟಿಸಿದ್ದಾನೆ. ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಎಲ್ಲರ ಬಾಯಲ್ಲೂ ಸನ್ನಿಯದ್ದೇ ಮಾತು. ನಿರೂಪಕ ಜಿಮ್ಮಿ ಕಿಮ್ಮೆಲ್ ಅವರಂತೂ ಪುಟಾಣಿಯನ್ನು ಪ್ರೀತಿಯಿಂದ ಎತ್ತಿಕೊಂಡಿದ್ರು.

‘ಲಯನ್’ ಚಿತ್ರದಲ್ಲಿ ಸನ್ನಿಯದ್ದು ಸರೂ ಬ್ರಿಯರ್ಲಿ ಎಂಬ ಪಾತ್ರ. ದೇವ್ ಪಟೇಲ್ ಚಿಕ್ಕವನಿದ್ದಾಗ ಹೇಗಿದ್ದ ಎಂಬ ಪಾತ್ರಕ್ಕೆ ಸನ್ನಿ ಜೀವ ತುಂಬಿದ್ದಾನೆ. ಚಿತ್ರದ ಪರಿಚಯ ಮಾಡಿಕೊಡುವ ಸಂದರ್ಭದಲ್ಲಿ ಸ್ಲಮ್ ಡಾಗ್ ಮಿಲಿಯನೇರ್ ಹೀರೋ ಜೊತೆಗೆ ಸನ್ನಿ ಕೂಡ ಆಸ್ಕರ್ ವೇದಿಕೆ ಏರಿದ್ದು ವಿಶೇಷ. ‘ಲಯನ್’ ನೈಜ ಘಟನೆಯನ್ನಾಧಾರಿತ ಚಿತ್ರ. ಬಾಲಕನೊಬ್ಬ ಚಿಕ್ಕವನಿದ್ದಾಗಲೇ ಕುಟುಂಬದಿಂದ ದೂರವಾಗ್ತಾನೆ, ನಂತರ ಆಸ್ಟ್ರೇಲಿಯಾದ ಕುಟುಂಬವೊಂದು ಅವನನ್ನು ದತ್ತು ತೆಗೆದುಕೊಳ್ಳುತ್ತದೆ. ಆತ ದೊಡ್ಡವನಾದ್ಮೇಲೆ ತನ್ನ ಹೆತ್ತವರನ್ನು ಹುಡುಕಲು ಗೂಗಲ್ ಅರ್ತ್ ಅನ್ನು ಬಳಸಿಕೊಳ್ತಾನೆ ಅನ್ನೋದು ಈ ಚಿತ್ರದ ಕಥಾಹಂದರ.

ಸನ್ನಿಗೆ ಇಂಗ್ಲಿಷ್ ಬರುತ್ತಿರಲಿಲ್ಲ, ಹಿಂದಿಯಲ್ಲಿ ಮಾತ್ರ ಮಾತನಾಡ್ತಿದ್ದ. ಈ ಚಿತ್ರಕ್ಕಾಗಿಯೇ ಫೊನೆಟಿಕ್ಸ್ ಬಳಸಿ ಸನ್ನಿ ಇಂಗ್ಲಿಷ್ ಕಲಿತಿದ್ದಾನೆ. ಆರಂಭದಲ್ಲಿ ನಿರ್ದೇಶಕ ಗರ್ತ್ ಡೇವಿಸ್ ಅವರಿಗೆ ಕೊಂಚ ಸಮಸ್ಯೆಯಾದ್ರೂ ಸನ್ನಿಯ ಶ್ರಮದಿಂದಾಗಿ ಎಲ್ಲವೂ ಬೇಗನೆ ಪರಿಹಾರವಾಯ್ತು. ನಿರ್ದೇಶಕ ಗರ್ತ್ ಹಾಗೂ ಕಾಸ್ಟಿಂಗ್ ಡೈರೆಕ್ಟರ್ ಕ್ರಿಸ್ಟಿ ಮೆಕ್ ಗ್ರೆಗರ್ ಅವರ ಮನಸ್ಸನ್ನು ಮೊದಲ ನೋಟದಲ್ಲೇ ಸನ್ನಿ ಗೆದ್ದುಬಿಟ್ಟಿದ್ದನಂತೆ.

''ಸನ್ನಿ ಈ ಚಿತ್ರದ ಪ್ರಮುಖ ಆಕರ್ಷಣೆ. ಆತ ಒಮ್ಮೆಯೂ ವಿಮಾನ ಹತ್ತಿರಲಿಲ್ಲ, ಹಾಲಿವುಡ್ ಚಿತ್ರವನ್ನು ನೋಡಿರಲಿಲ್ಲ. ಈಗ ಹಾಲಿವುಡ್ ಚಿತ್ರವೊಂದರ ಪ್ರಮುಖ ಪಾತ್ರಧಾರಿ. ಸನ್ನಿ ತುಂಬಾ ಮುಗ್ಧ ಹುಡುಗ, ಹಾಗಾಗಿಯೇ ಆತ ಅದ್ಭುತವಾಗಿ ಅಭಿನಯಿಸಿದ್ದಾನೆ. ಅದನ್ನು ಖುದ್ದು ಆತ ಎಂಜಾಯ್ ಮಾಡಿದ್ದಾನೆ'' ಎನ್ನುತ್ತಾರೆ ದೇವ್ ಪಟೇಲ್.

ಒಬ್ಬ ಅದ್ಭುತ ನಟನಾಗಿ ಮುಂದುವರಿಯುವ ಎಲ್ಲ ಸಾಧ್ಯತೆಗಳು ಸನ್ನಿಯಲ್ಲಿವೆ, ಆದ್ರೆ ಈ ಪುಟಾಣಿಗೆ ಐಪಿಎಸ್ ಅಧಿಕಾರಿಯಾಗಿ ಜನಸೇವೆ ಮಾಡಬೇಕೆಂಬ ಆಸೆ. ಅಷ್ಟೇ ಅಲ್ಲ ಮುಂಬೈ ಪೊಲೀಸ್ ಇಲಾಖೆ ಸೇರುವ ಕನಸು ಅವನಲ್ಲಿದೆ. WWE ಅಂದ್ರೆ ಸನ್ನಿಗೆ ಪಂಚಪ್ರಾಣ, ಒಮ್ಮೆಯಾದ್ರೂ ಲೈವ್ ಆಗಿ ಪಂದ್ಯ ನೋಡಬೇಕೆಂಬ ಆಸೆ ಅವನಿಗಿದೆ. ಅದನ್ನು ಬಿಟ್ರೆ ತಿನ್ನೋದು ಮಲಗೋದು ಅವನಿಗೆ ಇಷ್ಟವಂತೆ.

ಹೃತಿಕ್ ರೋಶನ್ ಅಭಿನಯದ ‘ಕ್ರಿಶ್’ ಸನ್ನಿಯ ಫೇವರಿಟ್ ಸಿನಿಮಾ. ಭವಿಷ್ಯದಲ್ಲಿ ಸೂಪರ್ ಹೀರೋ ಪಾತ್ರ ಮಾಡುವ ಆಸೆ ಅವನಿಗಿದೆ. ಸೂಪರ್ ಹೀರೋ ಪಾತ್ರ ಮಾಡುವ ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ, ಆದ್ರೆ ಭಾರತದ ಪುಟ್ಟ ಕಲಾವಿದನೊಬ್ಬ ಆಸ್ಕರ್ ನಂತಹ ದೊಡ್ಡ ವೇದಿಕೆ ಮೇಲೆ ತನ್ನ ಹೆಜ್ಜೆಗುರುತು ಮೂಡಿಸಿರುವುದು ನಿಜಕ್ಕೂ ದೊಡ್ಡ ಸಾಧನೆ. 

ಇದನ್ನೂ ಓದಿ..

ಉದ್ಯಮ ಯಾವುದು ಅನ್ನುವುದು ಮುಖ್ಯವಲ್ಲ- ಇಂಟರ್​ನೆಟ್​​ಗೆ ಮೊದಲ ಸ್ಥಾನ..!

ಮೆಡಿಕಲ್ ಉದ್ಯಮಕ್ಕೂ ಒಂದು ನಿಯಮ ಬೇಕು- ಕಿರಣ್ ಮಜುಂದಾರ್ ಶಾ