ವಿ"ಶ್ವಾಸ"ವೇ "ವಿಶ್ವಾಸ್"

ಚೈತ್ರಾ. ಎನ್​

1

"ವಿಶ್ವಾಸ" ಬದುಕಿಗೆ ಶ್ವಾಸ. ಒಂದು ಸೆಕೆಂಡ್ ಅದಿಲ್ಲದಿದ್ದರೂ ಈ ಲೈಫ್ ದಿ ಎಂಡ್ ಆಗಿಬಿಡುತ್ತೆ. ಕೆಲವೊಮ್ಮೆ ನಮ್ಮ ಲೈಫ್‍ನಲ್ಲೂ ಎಲ್ಲ ಇದ್ದೂ ಏನೋ ಮುಗಿದು ಹೋಗಿದೆ ಎನ್ನುವ ಮಟ್ಟಕ್ಕೆ ನಾವೆಲ್ಲರೂ ಬಂದುಬಿಡುತ್ತೇವೆ. ಅಂತಹ ಸಂದರ್ಭದಲ್ಲಿ ನಮ್ಮ ನಡುವೆ ಇರುವಂಥ ಕೆಲವು ಮಹಾನ್ ಚೇತನಗಳು ನಮ್ಮ ಬದುಕನ್ನೇ ಬದಲಿಸಿ ಬಿಡುತ್ತಾರೆ. ಅದಕ್ಕಾಗಿ ಅವರ ಜೀವನವೇ ಒಂದು ಭರವಸೆಯ ಪುಸ್ತಕದಂತೆ ನಮ್ಮ ಮುಂದೆ ತೆರೆದುಕೊಂಡಿರುತ್ತದೆ. ಇವರು ನಮ್ಮ ಬದುಕು ಬದಲಿಸುವ ಸಂತರು ಆಗಿಬಿಡುತ್ತಾರೆ. ಅಂತಹ ಒಂದು ಅಪರೂಪದ ವ್ಯಕ್ತಿ, ವ್ಯಕ್ತಿತ್ವ ಮತ್ತು ಶಕ್ತಿಯೇ ವಿಶ್ವಾಸ್, ಬಾಲ್ಯದಲ್ಲಿ ತಿಳಿಯದೇ ವಿದ್ಯುತ್ ತಂತಿ ಸ್ಪರ್ಶಿಸಿ, ತಮ್ಮ ಎರಡು ಕೈಗಳನ್ನು ಕಳೆದು"ಕೊಂಡರು". ಆ ನಂತರ ಅವರು ಬದುಕನ್ನು ನೋಡಿದ್ದೇ ಬೇರೆ ರೀತಿ. ಅಲ್ಲಿಂದ ನಿತ್ಯ ಶೂನ್ಯದಲ್ಲೇ ಬದುಕಿ ನಂತರದಲ್ಲಿ ಹೊಸ ಬೆಳಕನ್ನು ಕಂಡುಕೊಂಡರು. ನಟ ಉಪೇಂದ್ರ ವಿಶ್ವಾಸ್ ಸಾಧನೆ ಮೆಚ್ಚಿ ತಮ್ಮ ಮನೆಗೆ ಊಟಕ್ಕೆ ನೀಡಿದ ಆಹ್ವಾನದವರೆಗೆ ವಿಶ್ವಾಸ್ ಜೀವನ ಪ್ರತಿ ಸೆಕೆಂಡ್ ಕೂಡ ನಿಮ್ಮ ಬದುಕನ್ನು ಬದಲಿಸಿಬಿಡುತ್ತದೆ.

ನಿಂತೆಬಿಟ್ಟಿತ್ತು ಬಾಲ್ಯ

ಹೌದು ವಿಶ್ವಾಸ್ ಬಾಲ್ಯದಿಂದಲೂ ಬಹಳ ಹೈಪರ್ ಆ್ಯಕ್ಟೀವ್ ಆಗಿದ್ದವರು. ಒಮ್ಮೆಲೆ ಎರಗಿ ಬಂದ ಈ ಆಘಾತದಿಂದ ವಿಶ್ವಾಸ್ ಬೆಚ್ಚಿಬಿದ್ದರು. ಕೈಗಳನ್ನು ಕಳೆದುಕೊಂಡರು, ಅದೇ ಸಮಯ ಅವರನ್ನು ಕಾಪಾಡಲು ಬಂದ ತಂದೆಯನ್ನು ಕಳೆದುಕೊಂಡರು, ಒಟ್ಟಿನಲ್ಲಿ ಆ ಎಳೆ ಮನಸಿನ ಮೇಲೆ ಬಿದ್ದ ಬರೆ ವಿಶ್ವಾಸ್‍ನನ್ನು ಕತ್ತಲಿಗೆ ದೂಡಿತು. ಸದಾ ಕಾಲ ಹಾಸಿಗೆಯಲ್ಲೇ ಮಲಗಿರಬೇಕಾದ ಪರಿಸ್ಥಿತಿ ಬಂದೊದಗಿತು. ದಿನನಿತ್ಯದ ಎಲ್ಲ ಕೆಲಸಗಳಿಗೂ ಅಮ್ಮ ಆಸರೆಯಾಗಿ ನಿಂತರು. ಸ್ನೇಹಿತರು ಪ್ರತಿಯೊಬ್ಬರು ವಿಶ್ವಾಸ್‍ಗೆ ಬೆಂಬಲವಾಗಿ ನಿಂತರೂ ಹಾಗೂ ಹೀಗೂ ವಿಶ್ವಾಸ್ ಬಿ.ಕಾಂ. ಪದವಿ ಮುಗಿಸಿದರು.

ಏಕಾಂಗಿ ಸಂಚಾರಿ

ಈ ನಡುವೆ ಗೆಳೆಯರು ಕೆಲಸಕ್ಕೆ ಸೇರಿಕೊಂಡ ಮೇಲೆ ವಿಶ್ವಾಸ್ ಒಂಟಿಯಾದರು. ಪ್ರತಿದಿನ ಸೂರ್ಯೊದಯ ಮತ್ತು ಸೂರ್ಯಸ್ತ ಎರಡನ್ನು ಹಾಸಿಗೆ ಮೇಲೆಯೇ ನೋಡುತ್ತಿದ್ದರು. ಎಲ್ಲರು ಕನಿಕರ ತೋರಿಸುತ್ತಿದ್ದರೇ ವಿನಃ ಯಾರೊಬ್ಬರು ಕರೆದು ಕೆಲಸ ನೀಡಲಿಲ್ಲ. ಈ ಹಂತದಲ್ಲಿ ಬದುಕಿನ ಬಗ್ಗೆಯೇ ಆಸಕ್ತಿ ಕಳೆದುಕೊಂಡಿದ್ದರು ವಿಶ್ವಾಸ್. ಎಷ್ಟೋ ಬಾರಿ ಆತ್ಮಹತ್ಯೆಯ ಬಗ್ಗೆಯೂ ಯೋಚಿಸಿದ್ದರು. ಆದರೆ ಬದುಕು ಹೀಗೆ ಇರಲಿಲ್ಲ. ವಿಶ್ವಾಸ್‍ರೊಳಗಿದ್ದ ನಿರಂತರ ಹುಡುಕಾಟ, ಆತ್ಮ"ವಿಶ್ವಾಸ", ಹಠ, ಛಲ, ಮನಶಕ್ತಿಯನ್ನು ಒಗ್ಗೂಡಿಸಿದರು. ಅದೇ ಸಮಯ ಇವರ ಗೆಳೆಯರೊಬ್ಬರು "ಸುಮ್ಮನೇ ಮನೆಯಲ್ಲೇಕೆ ಕೂರುತ್ತೀಯಾ , ಬಾ ನನ್ನ ಜೊತೆಗೆ" ಎಂದು ಡ್ಯಾನ್ಸ್ ಕ್ಲಾಸ್‍ಗೆ ಕರೆದುಕೊಂಡು ಹೋದರು. ಆದರೆ ಅಲ್ಲಿ ನಡೆದದ್ದೇ ಬೇರೆ!

ಮನಸಿದ್ದರೇ ಮಾರ್ಗ

ಯಸ್. ವಿಶ್ವಾಸ್ ಬಹಳ ಆಸೆಪಟ್ಟು ಡ್ಯಾನ್ಸ್‍ಕ್ಲಾಸ್‍ಗೆ ಹೋದರು. ಆದರೆ ಡ್ಯಾನ್ಸ್ ಮಾಸ್ಟರ್ ವಿಶ್ವಾಸ್‍ರನ್ನು ನೋಡಿ. " ಇಲ್ಲ ಇವರಿಗೆ ಡ್ಯಾನ್ಸ್ ಕಲಿಸೋದು ಕಷ್ಟ " ಎಂದು ಬಿಟ್ಟರು. ಒಮ್ಮೆಲೆ ಪಾತಾಳಕೆ ಬಿದ್ದ ವಿಶ್ವಾಸ್ ಕಡೆಗೂ ಅವರನ್ನು ಒಪ್ಪಿಸಿದರು. ವಿಶ್ವಾಸ್ ಮಾತಿನಲ್ಲಿದ್ದ ವಿಶ್ವಾಸ, ಅವರ ಆತ್ಮಸ್ಥೈರ್ಯ ಮೆಚ್ಚಿ ಮಾಸ್ಟರ್ ಕ್ಲಾಸ್‍ಗೆ ಸೇರಿಸಿಕೊಂಡರು. ಮೊದ ಮೊದಲು ವಿಶ್ವಾಸ್‍ಗೆ ಡ್ಯಾನ್ಸ್ ಮಾಡೊದು ಅಷ್ಟು ಸುಲಭವಾಗಿರಲಿಲ್ಲ. ನಿರಂತರ ಪರಿಶ್ರಮ ಮತ್ತು ಏಕಾಗ್ರತೆ, ಸಾಧಿಸಲೇಬೇಕೆಂಬ ಹಠದಿಂದ ಮುನ್ನುಗಿದರು. ಎಷ್ಟೋ ಬಾರಿ ಎದ್ದು ಬಿದ್ದು ನೋವು ಮಾಡಿಕೊಂಡು ಕಡೆ ಕಡೆ ಕಡೆಗೆ ಒಂದು ಹಂತಕ್ಕೆ ತಲುಪಿ ಡ್ಯಾನ್ಸ್‍ನ ರಿದಂ ಹಿಡಿದೇ ಬಿಟ್ಟರು ನೋಡಿ ಅಲ್ಲಿಂದ ವಿಶ್ವಾಸ್ ಬದುಕೇ ಬದಲಿಸಿಬಿಟ್ಟಿತ್ತು. ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದ್ದಲ್ಲದೇ 2015 ರಲ್ಲಿ "ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು" ತಮ್ಮದಾಗಿಸಿಕೊಂಡರು. ಆ ಮೂಲಕ ವಿಶ್ವಾಸ್ ತಮ್ಮ ಬಾಳಿಗಷ್ಟೇ ಅಲ್ಲದೇ ಸ್ಪೂರ್ತಿ ರೂಪದಲ್ಲಿ ಹಲವಾರು ವಿಶೇಷ ಚೇತನ ಮನಸುಗಳಿಗೆ ದಾರಿದೀಪವಾದರು.

ಪ್ರಯತ್ನಶೀಲರ ಬಳಿ ಸೋಲು ಸುಳಿಯುವುದಿಲ್ಲ

ಈ ಮಾತು ವಿಶ್ವಾಸ್‍ರನ್ನೇ ನೋಡಿ ಹೇಳಿದ್ದಿರಬೇಕು. ಡ್ಯಾನ್ಸ್ ಕಲಿಕೆಯ ಜೊತೆ ಜೊತೆಯಲ್ಲಿಯೇ ವಿಶ್ವಾಸ್. ಸ್ವಿಮ್ಮಿಂಗ್ ಕಲಿಯಲು ಪಣತೊಟ್ಟರು. ವಿಜಯನಗರದ ಸ್ವಿಮ್ಮಿಂಗ್‍ಪೂಲ್‍ನಲ್ಲಿ ವಿಚಾರಿಸಲು ತೆರಳಿದರು. " ಏನು ನೀವು ಸ್ವಿಮ್ ಮಾಡ್ತೀರಾ? ಇದು ಸಾಧ್ಯಾವಾ" ? ಎಂದು ಕೇಳಿದವರಿಗೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಇದು ಡ್ಯಾನ್ಸ್​​ಗಿಂತಲೂ ಬಹಳ ಕಷ್ಟಕರವಾಗಿತ್ತು. ಆದರೆ ಉತ್ತಮ ಗುರುವಿಗೆ ಶಿಷ್ಯ ಹೇಗಿದ್ದರೂ ಸರಿ, ಅವನೊಳಗೆ ಕಲಿಯುವ ಹುಮ್ಮಸಿದ್ದರೇ ಅಷ್ಟೇ ಸಾಕು ಶಿಷ್ಯನ ಬಾಳು ಬೆಳಗುತ್ತದೆ. ಅಂತೆಯೇ ವಿಶ್ವಾಸ್ ಲೈಫ್‍ನಲ್ಲೂ ಕೂಡ ಸಖತ್ ಬದಲಾವಣೆಗಳಾದವು. ಸ್ವಿಮ್ಮಿಂಗ್‍ನಲ್ಲಿ 4 ಸ್ಟ್ರೋಕ್‍ಗಳನ್ನು ಮಾಡುವಷ್ಟು ಚಾಣಾಕ್ಷತೆ ಮತ್ತು ಪ್ರತಿಭೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಜೊತೆಗೆ 5 ಬೆಳ್ಳಿ ಪದಕಗಳನ್ನು ತಮ್ಮ ಮನೆಯ ಶೋಕೆಸ್‍ನಲ್ಲಿ ಜೋಡಿಸಿಕೊಂಡಿದ್ದಾರೆ. ಇದಲ್ಲವೇ ನಿಜವಾದ ಸ್ಪೂರ್ತಿ, ನಿಮಗೂ ವಿಶ್ವಾಸ್‍ರಂತೆ ಸ್ವಿಮ್ ಮಾಡೋ ಹುಮ್ಮಸ್ಸು ಮೂಡಿ ಬರ್ತಿದ್ರೆ, ಚಲೋ ಚಲೋ ಟೈಮ್ ವೇಸ್ಟ್ ಮಾಡ್ಬೇಡಿ!

ಯಾ... ಹೂ... ಇದು ಕಂಗ್ಫು

ಆಶ್ಚರ್ಯನಾ! ವಿಶ್ವಾಸ್ ಡ್ಯಾನ್ಸ್ ಮತ್ತು ಸ್ವಿಮ್ಮಿಂಗ್ ಏಕಕಾಲದಲ್ಲೇ ಕಲಿತರು. ನಂತರ ಇನ್ನೇನೋ ಮಾಡಬೇಕು ಎಂದು ಮನಸು ಪರಿತಪಿಸುತ್ತಿತ್ತು. ಆಗಲೇ ಅವರು ಕಲಿತದ್ದು ಕರಾಟೆ, ಕಂಗ್ಫು, ತಂಟೆಕೋರರಿಗೆ ವಿಶ್ವಾಸ್ ಕರಾಟೆಯಲ್ಲಿನ 5 ಬೆಲ್ಟ್ಸ್ ತೋರಿಸುವಷ್ಟು ನೈಪುಣ್ಯತೆ ಪಡೆದುಕೊಂಡಿದ್ದಾರೆ. ಇಲ್ಲೂ ಅಷ್ಟೇ ಆರಂಭದ ದಿನಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು ಸಹ ಡ್ಯಾನ್ಸ್, ಸ್ವಿಮ್ಮಿಂಗ್ ಕಲಿತ ಧೈರ್ಯ ಮತ್ತು ಆತ್ಮವಿಶ್ವಾಸ ಇವರನ್ನು ಹೊಸ ಲೋಕಕ್ಕೆ ಕರೆದೊಯ್ಯಿತು. ಇಷ್ಟು ಓದಿದ ಮೇಲೆ ಕರಾಟೆ ಕಲಿಯಲೇಬೇಕು ಅನ್ಸಿದ್ರೆ ನೋ ಸೆಕೆಂಡ್ ಥಾಟ್ ಪ್ಲೀಸ್!

ಇಷ್ಟೆಲ್ಲಾ ಸಾಧ್ಯತೆಗಳ ನಡುವೆ ವಿಶ್ವಾಸ್ ಉತ್ಸಾಹ ಇನ್ನೂ ಅಕ್ಷಯವಾಗುತ್ತಲೇ ಇದೆ. ಇದೀಗ ಜಿಮ್‍ನಲ್ಲಿ ಹೊಸ ರೀತಿಯ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ಇಷ್ಟೆಲ್ಲಾ ಪ್ರತಿಭೆ ಇರುವ ವಿಶ್ವಾಸ್‍ಗೆ ಪ್ರೋತ್ಸಾಹಕರ ಕೊರತೆ ಇದೆ. ತನಗೆ ಸರ್ಕಾರಿ ಕೆಲಸ ಬೇಡ. ನಾನು ಡ್ಯಾನ್ಸ್ ಶಾಲೆ ತೆರಯಬೇಕು. ತನ್ನಂತೆಯೇ ಬದುಕಲ್ಲಿ ನೊಂದವರಿಗೆ ಬದುಕುವ ಧೈರ್ಯ ಸ್ಥೈರ್ಯ ತುಂಬಬೇಕು ಎನ್ನುವ ಕನಸಿಟ್ಟುಕೊಂಡಿದ್ದಾರೆ. ವಿಶ್ವಾಸ್ ಕನಸಿಗೆ ಆರ್ಥಿಕ ಪ್ರೋತ್ಸಾಹ ನೀಡುವವರು ಮುಂದೆ ಬಂದರೇ ವಿಶ್ವಾಸ್ ಮತ್ತು ವಿಶ್ವಾಸ್‍ರಂತ ಎಷ್ಟೋ ಪ್ರತಿಭೆಗಳು ಬೆಳಕಿಗೆ ಬರುತ್ತಾರೆ.

ಲೈಫ್‍ನಲ್ಲಿ ಕೆಲವೊಮ್ಮೆ ಇಂಥ ಘಟನೆಗಳು ನಡೆದಾಗ ನಾವು ವಿಚಲಿತರಾಗೋದು ಸಹಜ, ಆದರೆ ನಮ್ಮ ಮುಂದಿನ ಕೆಲಸಗಳ ಬಗ್ಗೆ ಯೋಚಿಸಿವುದು ಇದೆಲ್ಲದ್ದಕ್ಕೂ ಇರುವ ಏಕೈಕ ಮಾರ್ಗ. ಬದುಕು ಬೇಡ ಎನಿಸಿದಾಗ ಬದುಕಿನಲ್ಲಿ ಪ್ರೀತಿಸುವ ಅಂಶಗಳ ಕಡೆ ಗಮನ ಕೊಡಿ. ಬದುಕಿನ ಸೌಂದರ್ಯವೇ ಬೇರೆ ಅಂತಾರೆ ವಿಶ್ವಾಸ್.

ಅಷ್ಟೇ ಅಲ್ಲ. ಯಾರೊಬ್ಬರ ಮೇಲೂ ಯಾವ ರೀತಿಯಲ್ಲೂ ಡಿಪೆಂಡ್ ಆಗಬೇಡಿ. ಇಂಡಿಪೆಂಡೆಂಟ್ ಆಗದೇ ಇರುವುದೇ ನಿಜವಾದ ಸ್ವಾತಂತ್ರ್ಯ ಮತ್ತು ಶಕ್ತಿ. ಅದನ್ನು ಅಭ್ಯಾಸ ಮಾಡಿಕೊಳ್ಳಿ. ಬದುಕು ಬ್ಯೂಟಿಫುಲ್ ಅನ್ನೊದು ವಿಶ್ವಾಸ್‍ರ ಬಂಗಾರದ ಮಾತುಗಳು.

ಏಳು ಬೀಳು ಏನೇ ಇರಲಿ, ಏಳಿನಲಿ ಬಾಗುತ್ತಾ ನಡಿ. ಬೀಳೀನಲಿ ಏಳಿಗೆಗಾಗಿ ನಡಿ. ಅದುವೇ ಬದುಕಿನ "ಹ್ಯಾಪಿ ಜರ್ನಿ"!

Related Stories