ಈಕೆಗೆ ಸಂಗೀತವೇ ಉಸಿರು, ಜೀವನ ಎಲ್ಲ ...ಸ್ಫೂರ್ತಿಯ ಚಿಲುಮೆ ಶಿಬಾನಿ ಯಶೋಗಾಥೆ..!

ಟೀಮ್​ ವೈ.ಎಸ್​. ಕನ್ನಡ

ಈಕೆಗೆ ಸಂಗೀತವೇ ಉಸಿರು, ಜೀವನ ಎಲ್ಲ ...ಸ್ಫೂರ್ತಿಯ ಚಿಲುಮೆ ಶಿಬಾನಿ ಯಶೋಗಾಥೆ..!

Thursday December 24, 2015,

3 min Read

ಶಿಬಾನಿ ಕಶ್ಯಪ್​​... ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ... ಖ್ಯಾತ ಹಾಡುಗಾರ್ತಿ.. ಸೂಫಿ ಗಾಯಕಿ, ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಹಾಡುಗಾರ್ತಿ.. ಹೀಗೆ ಹತ್ತು ಹಲವು ವಿಶ್ಲೇಷಣೆ ಅಡಗಿದೆ. ನಿಮ್ಮನ್ನು ಬಣ್ಣಿಸಿ ಎಂದರೆ ಶಿಬಾನಿ ಈ ರೀತಿ ಹೇಳುತ್ತಾರೆ. ನಾನೊಂದು ಪ್ರೀ ಸ್ಪಿರಿಟ್ ಅಂದರೆ ಯಾವುದೇ ಕಟ್ಟುಪಾಡಿಗೆ ಒಳಗಾಗದೆ ಇರುವ ವ್ಯಕ್ತಿ ಎಂದೇ ಹೇಳುತ್ತಾರೆ. ಆಕಾಶವಾಣಿಯಿಂದ ವೃತ್ತಿ ಜೀವನ ಆರಂಭಿಸಿದ ಶಿಬಾನಿ ಕಶ್ಯಪ್, ಇಂದು ವಿಶ್ವದಾದ್ಯಂತ ಮನೆಮಾತಾಗಿರುವ ಗಾಯಕಿ.

ಪಾಪ್ ಹಾಡಿನ ಮೂಲಕ ಸಂಗೀತ ಲೋಕಕ್ಕೆ ಎಂಟ್ರಿ ಮಾಡಿದ ಶಿಬಾನಿ ಕಶ್ಯಪ್, ಬಳಿಕ ಭಾರತೀಯ ಸಂಗೀತ ಲೋಕಕ್ಕೆ ಕಾಲಿಟ್ಟರು. ಬಳಿಕ ಹಿಂದುರುಗಿ ನೋಡಲೇ ಇಲ್ಲ.. ಸಜನಾ ಅಬಿ ಜಾ ಅವರನ್ನು ಮನೆ ಮಾತಾಗಿಸಿತು.

image


ಶಿಬಾನಿ ವ್ಯಕ್ತಿತ್ವ ಹೇಗೆ?

ಬದಲಾದ ಕಾಲದೊಂದಿಗೆ ತಾನೂ ಕೂಡ ಬದಲಾಗಿರುವುದು ಶಿಬಾನಿ ಹೆಗ್ಗಳಿಕೆ ಮತ್ತು ವೈಶಿಷ್ಠ್ಯ. ಪ್ರಸಕ್ತ ಕಾಲದ ರೀತಿ ನಿಯಮಗಳಿಗೆ , ಯುವ ಜನರ ಅಭಿರುಚಿಗಳಿಗೆ ಶಿಬಾನಿ ಸ್ಪಂದಿಸಿದ್ದಾಳೆ. ಅದೇ ರೀತಿಯಲ್ಲಿ ಹೆಜ್ಜೆ ಹಾಕಿದ್ದಾಳೆ. ನಾನು ಒಂದು ರೀತಿಯಲ್ಲಿ ಹೇಳುವುದಾದರೆ ಸ್ವಯಂ ನಿರ್ಮಾತೃ. ಎಲ್ಲದಕ್ಕೂ ನಾನೇ ಸೃಷ್ಚಿ ಕರ್ತೆ. ಅಂದರೆ ಹಾಡು ಸಿದ್ಧಪಡಿಸುವುದು, ಹಾಡುವುದು, ಸಂಗೀತ ಸಂಯೋಜನೆ ಮಾಡುವುದು. ಹೀಗೆ ಎಲ್ಲವೂ ನನ್ನ ಪರಿಶ್ರಮ ಮತ್ತು ಶ್ರದ್ಧೆ. ಹೀಗೆ ವಿವರಿಸಿ ಹೇಳುತ್ತಾರೆ ಶಿಬಾನಿ ಕಶ್ಯಪ್.

ಕ್ರಿಯಾತ್ಮಕ ವ್ಯಕ್ತಿತ್ವದಿಂದ , ವೈಯಕ್ತಿಕ ವ್ಯಕ್ತಿತ್ವವನ್ನು ಬೇರ್ಪಡಿಸಿ ಕ್ರಿಯಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಬೇಕು. ನೀರೆರೆದು ಪೋಷಿಸಬೇಕು. ಹೀಗೆ ಮಾಡುವುದರಿಂದ ಬ್ರಾಂಡ್ ನಿರ್ಮಾಣ ಸಾಧ್ಯ ಎನ್ನುತ್ತಾರೆ ಕಶ್ಯಪ್. ಸಾಧನೆ ಮಾಡಬೇಕೇಂಬ ಪ್ರಾಮಾಣಿಕ ಬಯಕೆ ನಿಮ್ಮಲ್ಲಿ ಮನೆ ಮಾಡಿದ್ದರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯವಿದೆ. ಇದಕ್ಕೆ ನನ್ನ ಬದುಕೇ ನಿದರ್ಶನ. ಇದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಶಿಬಾನಿ ಕಶ್ಯಪ್.

ಸಂಗೀತದ ಮೂಲಕ ಸಂದೇಶ

ಸಂಗೀತ ಒಂದು ಸಾಮಾಜಿಕ ಬದಲಾವಣೆಯ ವಾಹಕ. ಇದು ಪರಿಣಾಮಕಾರಿ ಪಾತ್ರವಾಗಿ ಕೂಡ ಹೊರಹೊಮ್ಮುತ್ತದೆ. ಸಂಗೀತ ಜನರ ಮೇಲೆ ಪರಿಣಾಮ ಬೀರುತ್ತೆ. ಅವರನ್ನು ಚಿಂತನೆಗೆ ದೂಡುತ್ತಿದೆ ಎನ್ನುತ್ತಾರೆ ಶಿಬಾನಿ ಕಶ್ಯಪ್. ಸಂಗೀತದ ಜೊತೆ ಜೊತೆಗೆ ಸಾಮಾಜಿಕ ಕಾಳಜಿಯ ವಿಷಯಗಳಲ್ಲೂ ಶಿಬಾನಿ ಕಶ್ಯಪ್ ಕೈ ಜೋಡಿಸಿದ್ದಾರೆ. ಮಹಿಳೆಯರ ಸಬಲೀಕರಣ, ಕ್ಯಾನ್ಸರ್ ಬಗ್ಗೆ ಜನ ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾವಣೆಯಿಂದ ಉಂಟಾಗುವ ಅನಾಹುತದ ಬಗ್ಗೆ ಸಮಾಜದ ಗಮನ ಸೆಳೆದಿದ್ದಾರೆ.

image


ಕಟ್ಟುಪಾಡುಗಳಿಲ್ಲದ ಸ್ವಚ್ಛಂದ ಹಕ್ಕಿ

ಪ್ರತಿಯೊಬ್ಬ ಕಲಾವಿದನೂ ಮೊದಲು ತನ್ನನ್ನು ತಾನು ಅರ್ಥ ಮಾಡಿಕೊಳ್ಳಬೇಕು. ತಮ್ಮ ಅಭಿರುಚಿ ಏನೆಂದು ಎಂಬುದನ್ನು ತಿಳಿದುಕೊಳ್ಳಬೇಕು. ಇತರರು ಹೇರಿರುವ ಅಭಿಪ್ರಾಯಗಳಿಗೆ ಮನ ಸೋಲದೆ ಸ್ವಂತ ಅಭಿಪ್ರಾಯವನ್ನು ರೂಢಿಸಿಕೊಳ್ಳಬೇಕು. ತನ್ನ ಹಾಡಿನ ಶೈಲಿ ಜನಪದ ಎಂದು ಹೇಳುವ ಶಿಬಾನಿ ಕಶ್ಯಪ್, ಸೂಫಿ ಸಂಗೀತ ತಮ್ಮ ಮೇಲೆ ಬೀರಿರುವ ಪ್ರಭಾವ ಕಡಿಮೆಯಲ್ಲ ಎನ್ನುತ್ತಾರೆ.

ದೇಶಾದ್ಯಂತ ಸಂಗೀತ ಕಾರ್ಯಕ್ರಮ ನೀಡುವುದೇ ನನಗೆ ಸ್ಫೂರ್ತಿಯ ಚಿಲುಮೆ ಎನ್ನುವ ಶಿಬಾನಿ, ದೇಶ ಸುತ್ತುವ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಗಯಾನದಲ್ಲಿ ಅದ್ಭುತ ಕಾರ್ಯಕ್ರಮ ನೀಡಿದ ಸಂತಸದಲ್ಲಿದ್ದಾರೆ ಶಿಬಾನಿ.

ನಿರಂತರ ಕಲಿಕೆ ಶಿಬಾನಿ ಅಭಿಮತ

ಕಲಿಕೆ ಅನ್ನುವುದು ನಿರಂತರ ಪ್ರಕ್ರಿಯೆ. ಇದಕ್ಕೆ ಫುಲ್ ಸ್ಟಾಪ್ ಎಂಬುದು ಇಲ್ಲ. ಇದು ಶಿಬಾನಿ ಮಾತು. ದೆಹಲಿ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಪಾಶ್ಚಾತ್ಯ ಸಂಗೀತ ಅದೇ ರೀತಿ ಪಂಡಿತ್ ಪಿ. ಆರ್. ವರ್ಮಾ ಬಳಿ ಭಾರತೀಯ ಶಾಸ್ತ್ರೀಯ ಸಂಗೀತ ಅಧ್ಯಯನ ನಡೆಸಿರುವ ಶಿಬಾನಿ, ಈಗಲೂ ತಾನು ವಿದ್ಯಾರ್ಥಿ ಎಂದು ವಿನೀತರಾಗಿ ನುಡಿಯುತ್ತಾರೆ.

image


ಸೇನೆಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಶಿಬಾನಿ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿ. ಇದು ಅವರ ಬದುಕಿನಲ್ಲಿ ಮಹತ್ವದ ಪ್ರಭಾವ ಬೀರಿತ್ತು. ರಕ್ಷಣಾತ್ಮಕ ಪರಿಸರದಿಂದ ಹೊರ ಬಂದು ಸ್ವಂತ ಬದುಕು ಕಟ್ಟಿಕೊಳ್ಳಬೇಕೆಂಬ ಬಯಕೆ ಅವರಲ್ಲಿ ಚಿಕ್ಕಂದಿನಲ್ಲಿಯೇ ಮನೆ ಮಾಡಿತ್ತು. ಹೀಗೆ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸ ಆರಂಭಿಸಿದ ಶಿಬಾನಿ, ತನ್ನ ಸ್ವಂತ ಹಣದಿಂದಲೇ ಕಾರು ಖರೀದಿಸಿದರು.

ಸವಾಲುಗಳು ಮತ್ತು ಹೊಸ ಸಾಧನೆ

ವ್ಯಕ್ತಿಯೊಬ್ಬ ಆತ ಯಾವುದೇ ಕ್ಷೇತ್ರದಲ್ಲಿರಲಿ ಜನಪ್ರಿಯವಾಗುತ್ತಿರುವಂತೆಯೇ ಸವಾಲುಗಳು ಎದುರಾಗುತ್ತವೆ. ಯಾಕೆಂದರೆ ಈ ಹಂತದಲ್ಲಿ ಜನರ ನಿರೀಕ್ಷೆ ಹೆಚ್ಚಾಗಿರುತ್ತದೆ. ನಿರೀಕ್ಷೆಯ ಮಟ್ಟ ತಲುಪಲು ಹೆಣಗಾಡಬೇಕಾಗುತ್ತದೆ. ಇದಕ್ಕೆ ಪರಿಶ್ರಮಪಡಬೇಕಾಗುತ್ತದೆ ಎನ್ನುತ್ತಾರೆ ಶಿಬಾನಿ ಕಶ್ಯಪ್.

ಸೋಲು ಗೆಲವು ಬದುಕಿನ ಅವಿಭಾಜ್ಯ ಅಂಗ..

ಜೀವನದಲ್ಲಿ ಸೋಲು ಕೂಡ ಬದುಕಿನ ಅವಿಭಾಜ್ಯ ಅಂಗ. ವೃತಿ ಜೀವನದಲ್ಲಿ ಒಮ್ಮೆ ಸೋತು ಹೋದರೆ ತಕ್ಷಣ ಆ ವ್ಯಕ್ತಿಯ ಸಾಧನೆ ಬಗ್ಗೆ ನೆಗೆಟಿವ್ ಅಭಿಪ್ರಾಯಕ್ಕೆ ಬರುವುದು ಸೂಕ್ತ ವಲ್ಲ. ಕೆಲವೊಮ್ಮೆ ಕೆಲವು ಕಾರಣಗಳಿಂದಾಗಿ ಸೋಲಾಗಿರುತ್ತದೆ. ಇದನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು ಎನ್ನುತ್ತಾರೆ ಶಿಬಾನಿ. ತಮ್ಮದೇ ಹಾಡು ಕೆಹಲೇ ಕೆಹಲೇ ಹಾಡಿನ ಉದಾಹರಣೆ ನೀಡುತ್ತಾರೆ. ಸ್ಟೇಜ್ ಶೋ ಗಳಲ್ಲಿ ಹಾಡಿದ ಬಳಿಕ ಈ ಹಾಡು ಜನರನ್ನು ತಲುಪಿತು. ಮೊದಲು ಈ ಹಾಡಿನ ಬಗ್ಗೆ ಜನರು ಕೇಳಿಯೇ ಇರಲಿಲ್ಲ ಎನ್ನುತ್ರಾರೆ ಶಿಬಾನಿ.

ಸ್ಫೂರ್ತಿಯ ಚಿಲುಮೆ

ಜೀವನದಲ್ಲಿ ಮುಂದುವರಿಯಲು ಟೀಕೆ ಟಿಪ್ಪಣಿಗಳು ಕೂಡ ಅಗತ್ಯ. ಇದು ತಿದ್ದಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಅದೇ ರೀತಿ ನಮ್ಮನ್ನು ವೃತ್ತಿ ಜೀವನದಲ್ಲಿ ಮುಂದುವರಿಯಲು ಪ್ರೋತ್ಸಾಹಿಸುತ್ತದೆ. ತಮ್ಮ ತಾಯಿ, ಸಹೋದರ ಮತ್ತು ಪತಿ ನಿರಂತರ ಬೆನ್ನೆಲುಬು ಎಂದೇ ಶಿಬಾನಿ ಕಶ್ಯಪ್ ಹೇಳುತ್ತಾರೆ. ಪ್ರತಿಯೊಬ್ಬರೂ ಮುಕ್ತ ಮನಸ್ಸಿನಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದರಲ್ಲಿ ಕೃತಿಮತೆ ಅಡಗಿರುವುದಿಲ್ಲ. ಎಲ್ಲವೂ ಸ್ಪಷ್ಟ ಎಂದೇ ಹೇಳುತ್ತಾರೆ. ಪತಿ ರಾಜೀವ್ ರೋಡಾ ಕೂಡ ನೇರವಾಗಿ, ದಿಟ್ಟ ಅಭಿಪ್ರಾಯ ಹೇಳುತ್ತಾರೆ ಎಂದು ಹೇಳಲು ಮರೆಯುವುದಿಲ್ಲ ಶಿಬಾನಿ.

ಕ್ರಿಯಾಶೀಲತೆ ಮತ್ತು ವ್ಯಾಪಾರ

ಅತ್ಯುತ್ತಮ ಸಂಗೀತಗಾರ ಅಥವಾ ಹಾಡುಗಾರ ಹೆಚ್ಚಿನ ಸಂದರ್ಭಗಳಲ್ಲಿ ವ್ಯವಹಾರ ತಜ್ಞ ಆಗಿರುವುದಿಲ್ಲ. ಇದು ವೃತ್ತಿ ಜೀವನದ ಆರಂಭದಲ್ಲಿ ನನಗೂ ಅನುಭವಕ್ಕೆ ಬಂದಿತ್ತು . ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಪೂರ್ಣ ಭಿನ್ನವಾಗಿದೆ. ಸಂಗೀತಗಾರರು ಮತ್ತು ಹಾಡುಗಾರರಿಗೆ ತಮ್ಮನ್ನು ತಾವು ಹೇಗೆ ಮಾರ್ಕೆಟಿಂಗ್ ಮಾಡಬಹುದು ಎಂಬುದನ್ನು ಚೆನ್ನಾಗಿ ತಿಳಿದಿದ್ದಾರೆ. ನಿಮ್ಮ ಸಂಗೀತವನ್ನು ಅರ್ಥ ಮಾಡಿಕೊಳ್ಳಬಲ್ಲ. ಅದನ್ನು ಜನರಿಗೆ ತಲುಪಿಸಬಲ್ಲ ಓರ್ವ ಏಜೆಂಟನ್ನು ಗುರುತಿಸಿ ವ್ಯವಹಾರದ ಪಾಲುದಾರನನ್ನಾಗಿ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಈ ಮೂಲಕ ನೀವು ನಿಮ್ಮನ್ನು ಜನರ ಬಳಿಗೆ ಸುಲಭದಲ್ಲಿ ತಲುಪಲು ಸಾಧ್ಯವಿದೆ.

ಉದಯೋನ್ಮುಖ ಕಲಾವಿದರಿಗೆ ಸಲಹೆ

ಹೆಸರಾಂತ , ಪ್ರಸಿದ್ದ ಕಲಾವಿದರ ಅನುಕರಣೆ ಬೇಡ. ಬದಲಾಗಿ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ನಿಮ್ಮಲ್ಲಿರುವ ಪ್ರತಿಭೆಯನ್ನು ಒರೆಗೆ ಹಚ್ಚಿ. ಕಲಾ ನೈಪುಣ್ಯವನ್ನು ಬೆಳೆಸಿಕೊಳ್ಳಿ. ಹೀಗೆ ಸತತ ಪರಿಶ್ರಮ ಮತ್ತು ಸಾಧನೆಯಿಂದ ಕೀರ್ತಿ ತನ್ನಿಂದ ತಾನೆ ನಿಮ್ಮನ್ನು ಹುಡುಕಿಕೊಂಡು ಬರಲಿದೆ ಎನ್ನುತ್ತಾರೆ ಶಿಬಾನಿ ಕಶ್ಯಪ್.

ಲೇಖಕರು : ತನ್ವಿ ದುಬೆ

ಅನುವಾದಕರು : ಎಸ್​ಡಿ