ಅಂದು ಒಂದು ಹೊತ್ತಿನ ಊಟಕ್ಕೂ ಪರದಾಡುವ ದುಸ್ಥಿತಿ- ಇಂದು 2500 ಕೋಟಿ ಉದ್ಯಮದ ಒಡೆಯ

ಟೀಮ್​ ವೈ.ಎಸ್​. ಕನ್ನಡ

ಅಂದು ಒಂದು ಹೊತ್ತಿನ ಊಟಕ್ಕೂ ಪರದಾಡುವ ದುಸ್ಥಿತಿ- ಇಂದು 2500 ಕೋಟಿ ಉದ್ಯಮದ ಒಡೆಯ

Sunday January 15, 2017,

3 min Read

“ ಮನಸ್ಸಿದ್ದರೆ ಮಾರ್ಗ ”ಇದು ಯಶಸ್ಸಿನ ಮೊದಲ ಫಾರ್ಮುಲಾ. ಅದು ಉದ್ಯಮಿ ಇರಲಿ ಅಥವಾ ಇನ್ಯಾವುದೇ ಕೆಲಸ ಮಾಡುವ ವ್ಯಕ್ತಿ ಇರಬಹುದು, ಮೊದಲು ಯಶಸ್ಸಿನ ಕನಸು ಇದ್ದೇ ಇರುತ್ತದೆ. ಆದ್ರೆ ಆ ಯಶಸ್ಸನ್ನು ಕೈ ವಶ ಮಾಡಿಕೊಳ್ಳಬೇಕಾದರೆ ಮನಸ್ಸು ಗಟ್ಟಿಯಾಗಿರಬೇಕು. ಶ್ರಮ ದೊಡ್ಡದಾಗಿರಬೇಕು. ಕೆಲವೊಮ್ಮೆ ವಿಶ್ವಾಸಗಳನ್ನು ಗಟ್ಟಿ ಮಾಡಿಕೊಳ್ಳಬೇಕಾಗುತ್ತದೆ. MGM ಗ್ರೂಪ್ ಮುಖ್ಯಸ್ಥ ಎಂ.ಜಿ. ಮುತ್ತು ಅವರ ಯಶಸ್ಸಿನ ಗುಟ್ಟು ಕೂಡ ಇಷ್ಟೇ ಆಗಿದೆ. ಅವರ ಬದುಕಿನ ವಿಶ್ವಾಸ ಮತ್ತು ಗಟ್ಟಿ ಮನಸ್ಸು ಇವತ್ತು ಮುತ್ತು ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿದೆ. ಮುತ್ತು ಅವರಿಗೆ ಶಿಕ್ಷಣದ ಕೊರತೆ ಇರಬಹುದು, ಅಥವಾ ಹೈ-ಫೈ ಜೀವನದ ಬಗ್ಗೆ ಹೆಚ್ಚು ತಿಳಿಯದೇ ಇದ್ದಿರಬಹುದು, ಆದ್ರೆ ಯಶಸ್ಸಿಗಾಗಿ ಶ್ರಮಿಸುವ ಮನಸ್ಸು ಮಾತ್ರ ಯಾವತ್ತೂ ಚಂಚಲವಾಗಿರಲಿಲ್ಲ. ಕಷ್ಟ ಇದ್ರೂ ಶ್ರಮ ಮತ್ತು ಮನಸ್ಸು ಮುತ್ತು ಅವರನ್ನು ಶ್ರೇಷ್ಟರ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ.

image


ಎಂ.ಜಿ. ಮುತ್ತು ಹುಟ್ಟಿದ್ದು ಕಡು ಬಡತನದ ಕುಟುಂಬದಲ್ಲಿ. ಶಾಲೆ ಮತ್ತು ಶಿಕ್ಷಣ ಅನ್ನುವುದು ಮುತ್ತು ಪಾಲಿಗೆ ಕೇವಲ ಕನಸಾಗಿತ್ತು. ಹೀಗಾಗಿ ಮುತ್ತು 1957ರಲ್ಲಿ ಬಂದರು ಒಂದರಲ್ಲಿ ಗೂಡ್ಸ್​ಗಳನ್ನು ಹಡಗುಗಳಿಂದ ಇಳಿಸುವ ಮತ್ತು ಹಡಗುಗಳಿಗೆ ಲೋಡ್ ಮಾಡುವ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಲು ಆರಂಭಿಸಿದ್ರು. ಮುತ್ತು ಅವರ ತಂದೆ ಕೂಡ ಇದೇ ಕೆಲಸ ಮಾಡುತ್ತಿದ್ದರು. ಹೀಗಾಗಿ ಮುತ್ತು ಪಾಲಿಗೆ ಈ ಕೆಲಸವೇ ಮಹತ್ವದ್ದಾಗಿತ್ತು. ಮುತ್ತು ಅವರ ಜೀವನ ಎಷ್ಟು ಕಷ್ಟ ಇತ್ತು ಅಂದ್ರೆ, ಮುತ್ತು ಅವರ ಕುಟುಂಬ ಒಂದು ಹೊತ್ತಿನ ಊಟವನ್ನು ಕೂಡ ಮಾಡದೇ, ಹಸಿದ ಹೊಟ್ಟೆಯಲ್ಲೇ ಮಲಗಿದ ದಿನಗಳು ಅದೆಷ್ಟೊ ಇತ್ತು. ಮುತ್ತು ಅವರಿಗೆ ಅವರ ಗ್ರಾಮದ ಇತರೆ ಮಕ್ಕಳು ಶಾಲೆಗೆ ಹೋಗುವುದನ್ನು ನೋಡ್ತಾ ಇದ್ದಾಗ ಶಾಲೆ ಸೇರುವ ಮನಸ್ಸು ಕೂಡ ಆಗ್ತಿತ್ತು. ಆದ್ರೆ ಹಸಿವಿನ ವಿರುದ್ಧ ಹೋರಾಟ ಮಾಡಿಕೊಂಡು, ಶಿಕ್ಷಣವನ್ನು ಮುಂದುವರೆಸುವುದು ಮುತ್ತು ಪಾಲಿಗೆ ಕಠಿಣವಾಗುತ್ತಿತ್ತು. ಹೀಗಾಗಿ ಶಾಲೆಯನ್ನು ಮುತ್ತು ಕೈ ಬಿಟ್ರು. ತಂದೆ ಮತ್ತು ಮಗ ಬಂದರಿನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯಲು ಆರಂಭಿಸಿದ್ದರಿಂದ ಮುತ್ತು ಕುಟುಂಬದ ಹೊಟ್ಟೆ ಹಸಿವು ಕಡಿಮೆ ಆಗುತ್ತಾ ಬಂದಿತ್ತು.

ಚೆನ್ನೈ ಬಂದರಿನಲ್ಲಿ ಕಠಿಣ ಕೆಲಸಗಳನ್ನು ಮಾಡಿ, ಹಡಗುಗಳಿಗೆ ಗೂಡ್ಸ್ ತುಂಬಿಸಿ, ಬೇರೆ ಕಡೆಯಿಂದ ಹಡಗಿನಲ್ಲಿ ಬಂದ ವಸ್ತುಗಳನ್ನು ಖಾಲಿ ಮಾಡಿ ಮುತ್ತು ಕೊಂಚ ಹಣವನ್ನು ಉಳಿತಾಯ ಮಾಡಿದರು. ಈ ಉಳಿದ ಹಣದಲ್ಲಿ ಮುತ್ತು ಚಿಕ್ಕದೊಂದು ಬಿಸಿನೆಸ್ ಮಾಡುವ ಕನಸು ಕಂಡಿದ್ದರು. ಲಾಜಿಸ್ಟಿಕ್ ಉದ್ಯಮದಲ್ಲಿ ಕೆಲವು ಗೆಳೆಯರು ಇದ್ದಿದ್ದರಿಂದ ಮುತ್ತು ಈ ಉದ್ಯಮವನ್ನು ಆರಂಭಿಸಿಯೇ ಬಿಟ್ರು. ಆದ್ರೆ ಮುತ್ತು ಮೊದಲ ಉದ್ಯಮದಲ್ಲಿ ಹೆಚ್ಚು ಕೆಲಸಗಾರರು ಇಲ್ಲದೇ ಇದ್ರೂ, ಗ್ರಾಹಕರಿಗೆ ತೃಪ್ತಿ ನೀಡುವುದರಲ್ಲಿ ಮುತ್ತು ಹಿಂದೆ ಬೀಳಲಿಲ್ಲ. ಇದೇ ಕಠಿಣ ಶ್ರಮ ಮುತ್ತು ಅವರನ್ನು ಇವತ್ತು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇವತ್ತಿಗೂ ಮುತ್ತು ಅವರಿಗೆ ಗ್ರಾಹಕರ ಸಂತೃಪ್ತಿಯೇ ಮೊದಲ ಗುರಿ ಆಗಿದೆ. ಗ್ರಾಹಕರ ಬೇಡಿಕೆಗಳನ್ನು ಅವಧಿಗೂ ಮುನ್ನ ತಲುಪಿಸುವುದರ ಜೊತೆಗೆ ಉತ್ತಮ ಗ್ರಾಹಕ ಸೇವೆಯನ್ನು ಮಾಡಿ ಅವರ ಮನ ಗೆದ್ದಿದ್ದಾರೆ. ಇವತ್ತು ಇದೇ ಕಾರಣಕ್ಕಾಗಿ ಚೆನ್ನೈನಲ್ಲಿ ಇವತ್ತು ಮುತ್ತು ಹೆಸರು ಪ್ರಸಿದ್ಧಿ ಪಡೆದಿದೆ. ಉದ್ಯಮವನ್ನು ನಿಧಾನವಾಗಿ ಬೆಳೆಸಿಕೊಂಡು ಹೋದ ಮುತ್ತು ಇವತ್ತು ಎಂಜಿಎಂ ಕಂಪನಿಯ ಮಾಲೀಕ ಮತ್ತು ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುವ ಉದ್ಯಮಿಯಾಗಿ ಬೆಳೆದಿದ್ದಾರೆ.

ಇದನ್ನು ಓದಿ: ಫರ್ನಿಚರ್​ ಕೊಳ್ಳುವ ಕನಸು ಬಿಟ್ಟುಬಿಡಿ- ಬಾಡಿಗೆ ವಸ್ತುಗಳನ್ನು ಎಂಜಾಯ್​ ಮಾಡಿ..!

ಎಂಜಿಎಂ ಗ್ರೂಪ್ ಲಾಜಿಸ್ಟಿಕ್ ವಲಯದ ದೊಡ್ಡ ಹೆಸರಾಗಿ ಬೆಳೆದಿದೆ. ಅದರ ಮಾಲೀಕ ಎಂ.ಜಿ. ಮುತ್ತು ಕಾರ್ಪೋರೇಟ್ ಜಗತ್ತಿನ ನಾಯಕರ ಸಾಲಿನಲ್ಲಿ ನಿಂತಿದ್ದಾರೆ. ಇವತ್ತು ಮುತ್ತು ಉದ್ಯಮವನ್ನು ಕಲ್ಲಿದ್ದಲು, ಗಣಿಗಾರಿಕೆ, ಆಹಾರೋದ್ಯಮ ಮತ್ತು ಹೊಟೇಲ್ ಉದ್ಯಮದ ತನಕ ಬೆಳೆಸಿದ್ದಾರೆ. ಮುತ್ತು ಹೊಟೇಲ್ ಉದ್ಯಮ ವಿದೇಶದಲ್ಲೂ ಇದೆ. ಇತ್ತೀಚೆಗೆ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಧ್ಯವನ್ನು ಉತ್ಪಾದಿಸುವ ಉದ್ಯಮ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಕರ್ನಾಟಕಕ್ಕೂ ವಿಸ್ತರಿಸುವ ಕನಸಿದೆ. ಇಷ್ಟೇ ಅಲ್ಲದೆ ಮುತ್ತು ಮಲೇಷಿಯಾದಲ್ಲಿ ಮೆರಿ ಬ್ರೌನ್ ಅನ್ನುವ ಫಾಸ್ಟ್​ಫುಡ್ ಉದ್ಯಮವನ್ನು ಕೂಡ ಹೊಂದಿದ್ದಾರೆ. ಎಂಜಿಎಂ ಗ್ರೂಪ್ ಬೆಂಗಳೂರಿನ ವೈಟ್​ಫೀಲ್ಡ್​ನಲ್ಲೂ ಸೌಂದರ್ಯ ವರ್ಧಕ ಹೊಟೇಲ್ ಉದ್ಯಮವನ್ನು ಹೊಂದಿದೆ. ಬೆಂಗಳೂರಿನಲ್ಲಂತೂ ಹೆಚ್ಚು ಹೆಚ್ಚು ಹೂಡಿಕೆ ಮಾಡಲು ಎಂಜಿಎಂ ಗ್ರೂಪ್ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಮುತ್ತು ಅವರ ಜೀವನ ಕಥೆ ನಿಜಕ್ಕೂ ಸ್ಫೂರ್ತಿದಾಯಕ. ಒಂದು ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ ಮುತ್ತು ಇವತ್ತು ಅದೆಷ್ಟೋ ಜನರಿಗೆ ಅನ್ನದಾತ. ಇದಕ್ಕೆಲ್ಲಾ ಕಾರಣವಾಗಿರುವುದು ಪರಿಶ್ರಮ ಮತ್ತು ಸರಳತೆ. ಉದ್ಯಮ ಆರಂಭಿಸುವ ಕನಸು ಕಾಣುತ್ತಿರುವವರಿಗೆ ಮುತ್ತು ಅವರ ಜೀವನ ಕಥೆ ಸ್ಪೂರ್ತಿದಾಯಕನ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಸ್ಯಾಲರಿ ಸ್ಲಿಪ್​ನ ಸೀಕ್ರೆಟ್ ಕಾಯ್ದುಕೊಳ್ಳಿ- ಬುದ್ಧಿವಂತಿಕೆಯಿಂದ ಕೆಲಸಕೊಡುವವರ ಮನಸ್ಸು ಗೆಲ್ಲಿ..!

2. ಅನ್ನದಾತರಿಗೆ ಬೆನ್ನೆಲುಬಾದ ಸಾಫ್ಟ್​​ ವೇರ್ ಎಂಜಿನಿಯರ್ - ಸಾಲದ ಸುಳಿಗೆ ಸಿಲುಕಿದ್ದ ರೈತರಿಗೆ ಹೊಸ ಬದುಕು ಕಟ್ಟಿಕೊಟ್ಟ `ಆರ್ಗೆನಿಕ್ ಮಂಡ್ಯ'

3. ಕಾಫಿ ಕುಡಿದು ಫ್ರೆಶ್​ ಆಗಿ- "ಫ್ಲೈಯಿಂಗ್ ಸ್ಕ್ವಿರಲ್"ನಲ್ಲಿದೆ ಆಧುನಿಕತೆಯ ಮೋಡಿ..!