ಗ್ರಾಮೀಣ ಕ್ರೀಡಾಪಟುಗಳ ಜೀವನ ರೂಪಿಸುವ ಸಿದ್ಧಾರ್ಥ್- ಒಂದೂವರೆ ಲಕ್ಷ ಪ್ರತಿಭೆಗಳ ಬದಕು ಕಟ್ಟಿಕೊಡುವ ಸ್ಟೈರ್ಸ್

ಟೀಮ್​ ವೈ.ಎಸ್​. ಕನ್ನಡ

1

ಕ್ರೀಡೆ ಅನ್ನುವುದು ಪ್ರತಿಯೊಬ್ಬರ ಬದುಕಿನಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ. ಮಕ್ಕಳು ದಿನಕ್ಕೊಂದು ಗಂಟೆಯಾದರೂ, ಆಟ ಆಡಬೇಕು. ಆದರೆ ಇವತ್ತಿನ ದುನಿಯಾದಲ್ಲಿ ಕ್ರೀಡೆ ಅನ್ನುವುದು ಮರೆತೇ ಹೋಗಿದೆ. ಮಕ್ಕಳು ಮೊಬೈಲ್​​ನಲ್ಲಿ ಆಟ ಆಡುವುದೇ ಆಟವಾಗಿ ಬಿಟ್ಟಿದೆ. ಆದರೆ "ಸ್ಟೈರ್ಸ್" ಅನ್ನುವ ಸಂಸ್ಥೆ ಕ್ರೀಡಾಪಟುಗಳನ್ನು ಸಿದ್ಧಮಾಡುತ್ತಿದೆ. ಪ್ರತಿಭೆ ಇದ್ದರೂ ಅದನ್ನು ತೋರಿಸಲು ಅವಕಾಶವಿಲ್ಲದವರನ್ನು ಹುಡುಕಿ, ಅವರಿಗೆ ಕ್ರೀಡೆಯಲ್ಲೇ ಮುಂದೆ ಬರಲು ಸಹಾಯ ಮಾಡುತ್ತಿದೆ. ಈ ಮೂಲಕ ಅವರು ಜೀವನ ಕಂಡುಕೊಳ್ಳಲು ಸಹಾಯ ಮಾಡುತ್ತಿದೆ.

"ಸ್ಟೈರ್ಸ್" ಅನ್ನು ಹುಟ್ಟುಹಾಕಿದ್ದು ಸಿದ್ಧಾರ್ಥ್ ಉಪಾಧ್ಯಾಯ್. ಸಿದ್ಧಾರ್ಥ್ ಗೆ ಬದುಕಿನಲ್ಲಿ ಕ್ರೀಡೆಗೆ ಇರುವ ಮಹತ್ವದ ಬಗ್ಗೆ ಅರಿವಿದೆ. ಕ್ರೀಡೆ ಮಕ್ಕಳ ಬದುಕನ್ನು ಹೇಗೆ ಬದಲಿಸಬಲ್ಲದು ಅನ್ನುವ ಬಗ್ಗೆ ಸ್ಪಷ್ಟತೆಯನ್ನೂ ಹೊಂದಿದ್ದಾರೆ. ಕ್ರೀಡೆಯಿಂದಾಗಿ ಮಕ್ಕಳಲ್ಲಿ, ಕ್ರೀಡಾಸ್ಪೂರ್ತಿ, ಶಿಸ್ತು ಮತ್ತು ಬದುಕಲು ಬೇಕಾದ ಕಲೆಗಳು ಬೆಳೆಯುತ್ತವೆ. ಇದನ್ನೇ ಉದ್ದೇಶವನ್ನಾಗಿಟ್ಟುಕೊಂಡು ಸಿದ್ಧಾರ್ಥ್ "ಸ್ಟೈರ್ಸ್" ಅನ್ನುವ ಎನ್​​ಜಿಒ ಒಂದನ್ನು ಸ್ಥಾಪನೆ ಮಾಡಿದ್ದರು, ಕ್ರೀಡೆಯ ಮೂಲಕ ಬಡ ಮತ್ತು ಗ್ರಾಮೀಣ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಆರಂಭದ ಕಥೆ

ಸಿದ್ಧಾರ್ಥ್​ಗೆ "ಸ್ಟೈರ್ಸ್" ಬಗೆಗಿನ ಕನಸುಗಳು ಹುಟ್ಟಿಕೊಂಡಿದ್ದು 2000ದಲ್ಲಿ. ಆರಂಭದ ದಿನಗಳ ಕನಸುಗಳನ್ನು ಸಿದ್ಧಾರ್ಥ್ ಮೆಲುಕು ಕೂಡ ಹಾಕುತ್ತಾರೆ.

“ ಆಗ ನನಗೆ ಕೇವಲ 20 ವರ್ಷ ವಯಸ್ಸು. ಆ ಸಮಯದಲ್ಲಿ ಶಿಕ್ಷಣದಲ್ಲಿ ಮಕ್ಕಳಿಗೆ ಕ್ರೀಡೆಯ ಮಹತ್ವವನ್ನು ತಿಳಿಸುವುದು ಅಪರೂಪವಾಗಿತ್ತು. ಮಕ್ಕಳನ್ನು ಮೈದಾನಕ್ಕೆ ಕಳುಹಿಸುವ ಬದಲು ಅವರನ್ನು ಟಿವಿ ಮುಂದೆ ಕುಳ್ಳಿರಿಸುವ ಪೋಷಕರ ಸಂಖ್ಯೆ ಹೆಚ್ಚಾಗಿತ್ತು. ಆದ್ರೆ ನಾನು ಕ್ರೀಡೆಯಲ್ಲಿ ಆ್ಯಕ್ಟಿವ್ ಆಗಿದ್ದೆ. ನನ್ನನ್ನು ವ್ಯಕ್ತಿಯೊಬ್ಬರು ಕ್ರೀಡೆಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ್ದರು.”
- ಸಿದ್ಧಾರ್ಥ್ ಉಪಾಧ್ಯಾಯ, ಸ್ಟೈರ್ಸ್ ಸಂಸ್ಥಾಪಕ

ಹದಿಹರೆಯದ ವಯಸ್ಸಿನಲ್ಲಿ ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು ಅನ್ನುವುದು ಸಿದ್ಧಾರ್ಥ್ ಅರಿತುಕೊಂಡಿರುವ ಸತ್ಯ. ಈ ವಯಸ್ಸಿನಲ್ಲಿ ಸಾಧನೆಯ ಕನಸು, ಹುಮ್ಮಸ್ಸು ಮತ್ತು ಛಲ ಇರುತ್ತದೆ. ಆದ್ರೆ ಅದಕ್ಕೊಂದು ಸ್ವರೂಪವನ್ನು ಕೊಟ್ಟರೆ, ಪ್ರತಿಭೆಯನ್ನು ಸುಲಭವಾಗಿ ಹೊರ ಹಾಕಬಹುದು. ಅಂದುಕೊಂಡ ಗುರಿಯನ್ನು ಸಾಧಿಸಲು ಇದು ವೇದಿಕೆ ಆಗುತ್ತದೆ. ಪ್ರತಿಯೊಂದು ಮಗು ಕೂಡ ತನ್ನಲ್ಲಿರುವ ಶಕ್ತಿ ಬಗ್ಗೆ ಮೊದಲು ಅರ್ಥ ಮಾಡಿಕೊಳ್ಳಬೇಕು. ಕ್ರೀಡೆ ಅದಕ್ಕೊಂದು ದೊಡ್ಡ ವೇದಿಕೆ. ಜೀವನದಲ್ಲಿ ಕ್ರೀಡೆ ಅನ್ನುವುದು ಒಂದು ಆ್ಯಕ್ಟಿವಿಟಿ ಅನ್ನುವುದನ್ನು 38 ವರ್ಷದ ಸಿದ್ಧಾರ್ಥ್ ಒತ್ತಿ ಹೇಳುತ್ತಾರೆ. "ಸ್ಟೈರ್ಸ್" ಅಂದರೆ ಮೆಟ್ಟಿಲು ಎಂದರ್ಥ. ಹೆಸರೇ ಹೇಳುವಂತೆ ಯುವಕರ ಪಾಲಿಗೆ "ಸ್ಟೈರ್ಸ್" ಯಸಶಸ್ಸಿನ ಮೆಟ್ಟಿಲುಗಳನ್ನು ಹತ್ತಲು ಸಹಾಯ ಮಾಡುತ್ತಿದೆ.

ಸಿದ್ಧಾರ್ಥ್ "ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್" ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಫೀಫಾ ಅಂಡರ್ 17 ವಿಶ್ವಕಪ್​​ನ ಸ್ಟೀರಿಂಗ್ ಕಮಿಟಿಯ ಸದಸ್ಯರಾಗಿದ್ದರು. ಬ್ರಿಕ್ಸ್ ಅಂಡರ್ 17 ಟೂರ್ನಮೆಂಟ್, ಮಿಷನ್ XI ಮಿಲಿಯನ್ ಪ್ರೋಗ್ರಾಂ, ಕೇಂದ್ರ ಸರಕಾರದ ಕ್ರೀಡಾ ಮತ್ತು ಯುವಜನಸೇವಾ ಇಲಾಖೆ ಮತ್ತು ಸುಬ್ರತೋ ಮುಖರ್ಜಿ ಸ್ಪೋರ್ಟ್ಸ್ ಎಜುಕೇಷನ್ ಸೊಸೈಟಿಯಲ್ಲಿ ಸಾಕಷ್ಟು ಕಾಲ ಕಳೆದಿದ್ದಾರೆ. ಇತ್ತೀಚೆಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಗವರ್ನಿಂಗ್ ಬಾಡಿಯ ಸದಸ್ಯನಾಗಿ ನೇಮಕವಾಗಿದ್ದಾರೆ.

ಇದನ್ನು ಓದಿ: ಮಹಿಳಾ ಕ್ರಿಕೆಟ್​ನ ಸಚಿನ್ ತೆಂಡುಲ್ಕರ್- ವಿಶ್ವಕಪ್ ಎತ್ತುವ ಕನಸು ಕಾಣ್ತಿದ್ದಾರೆ ಮಿಥಾಲಿ ರಾಜ್

ಸ್ಟೈರ್ಸ್ ಸಾಧನೆಗಳು

"ಸ್ಟೈರ್ಸ್" ಅನ್ನುವ ಸಂಸ್ಥೆ ಕ್ರೀಡಾಪಟುಗಳನ್ನು ಸಿದ್ಧಮಾಡುತ್ತಿದೆ. ಪ್ರತಿಭೆ ಇದ್ದರೂ ಅದನ್ನು ತೋರಿಸಲು ಅವಕಾಶವಿಲ್ಲದವರನ್ನು ಹುಡುಕಿ, ಅವರಿಗೆ ಕ್ರೀಡೆಯಲ್ಲೇ ಮುಂದೆ ಬರಲು ಸಹಾಯ ಮಾಡುತ್ತಿದೆ. ಈ ಮೂಲಕ ಅವರು ಜೀವನ ಕಂಡುಕೊಳ್ಳಲು ಸಹಾಯ ಮಾಡುತ್ತಿದೆ. ಈ ವೇಳೆಯಲ್ಲಿ ಮಕ್ಕಳಿಗೆ ವೈಯಕ್ತಿಕ ಬೆಳವಣಿಗೆಯ ಪಾಠಗಳನ್ನು ಮತ್ತು ಪರ್ಸನಾಲಿಟಿ ಬಿಲ್ಡಿಂಗ್ ಸಂಬಂಧಿತ ಪಾಠಗಳನ್ನು ಹೇಳಿಕೊಡಲಾಗುತ್ತದೆ.

"ಸ್ಟೈರ್ಸ್"  ವಿವಿಧ ಸಮುದಾಯಗಳನ್ನು ತನ್ನ ಕಾರ್ಯಕ್ರಮದಲ್ಲಿ ಸೇರಿಸಿಕೊಳ್ಳುತ್ತಿದೆ. "ಸ್ಟೈರ್ಸ್"  ಸ್ಥಳೀಯ ನಾಯಕರ ಸಹಾಯದಿಂದ ವಿವಿಧ ಸ್ಥಳಗಳಿಂದ ಪ್ರತಿಭೆಗಳನ್ನು ಹುಡುಕುತ್ತಿದೆ. "ಸ್ಟೈರ್ಸ್" ಅಂತಹ ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ಅಗತ್ಯವಿರುವ ತರಬೇತಿಗಳನ್ನು ನೀಡುತ್ತದೆ.

ಸಿದ್ಧಾರ್ಥ್ 2005ರಲ್ಲಿ "ಖೇಲೋ ದೆಹಲಿ" ಪ್ರೋಗ್ರಾಂ ಮೂಲಕ ತನ್ನ ಕೆಲಸವನ್ನು ಆರಂಭಿಸಿದ್ದರು. ಇಲ್ಲಿ ಫುಟ್ಬಾಲ್, ವಾಲಿಬಾಲ್, ಕ್ರಿಕೆಟ್ ಮತ್ತು ಸೆಪಕ್ ಟ್ರಾಕ್ ಬಗ್ಗೆ ಕೋಚಿಂಗ್ ನೀಡಲಾಗುತ್ತಿತ್ತು. ಈಗ ಈ ಯೋಜನೆಯನ್ನು "ಯು ಫ್ಲೆಕ್ಸ್ ಖೇಲೋ ಡೆಲ್ಲಿ" ಅನ್ನುವ ಹೆಸರಿನಿಂದ ಕರೆಯಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ವಿವಿಧ ಸ್ಥರದ ನಾಯಕರ ಜೊತೆಗಿನ ಸಂಪರ್ಕದಿಂದ ಪ್ರತಿಭೆಗಳನ್ನು ಹುಡುಕಿದ ಮೇಲೆ ಅವರ ಮನಸ್ಥಿತಿಗಳನ್ನು ಬದಲಿಸಲು ಕೌನ್ಸೆಲಿಂಗ್ ಗಳನ್ನು ಮಾಡಲಾಗುತ್ತದೆ. ಈ ಮೂಲಕ ಕ್ರೀಡೆಯ ಬಗ್ಗೆ ಇರುವ ಮನಸ್ಥಿತಿಯನ್ನು ಬದಲಿಸಲು ಪ್ರಯತ್ನಿಸಲಾಗುತ್ತದೆ. ಇದು ಮಕ್ಕಳ ಆಸಕ್ತಿದಾಯಕ ಫೀಲ್ಡ್ ಗಳನ್ನು ಆಯ್ಕೆ ಮಾಡಲು ನೆರವು ನೀಡುತ್ತದೆ. "ಸ್ಟೈರ್ಸ್"  ಕ್ರೀಡಾಕೂಟಗಳನ್ನು ಆಯೋಜಿಸಿ ವಿವಿಧ ಭಾಗಗಳಿಂದ ಬಂದ ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಅವಕಾಶ ನೀಡುತ್ತದೆ. ಅಷ್ಟೇ ಅಲ್ಲ ವಿವಿಧ ತಂಡಗಳಲ್ಲಿ ಸ್ಥಾನ ಪಡೆಯಲು ನೆರವು ನೀಡುತ್ತದೆ.

ಸ್ಟೈರ್ಸ್ ಬಾಹುಬಂಧ

"ಸ್ಟೈರ್ಸ್"  ಸದ್ಯಕ್ಕೆ ದೇಶದ 6 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ದೆಹಲಿ- ಎನ್ ಸಿಆರ್, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಓರಿಸ್ಸಾಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಹೊಸ ಸೆಂಟರ್ ಗಳನ್ನು ಆರಂಭಿಸುವ ಯೋಜನೆ ಕೂಡ ನಡೆಯುತ್ತಿದೆ. ಕೋಚ್ ಗಳು ಮತ್ತು ಸ್ಥಳೀಯ ಸ್ವಯಂ ಸೇವಕರು ಸ್ಟೈರ್ಸ್ ಅಂದುಕೊಂಡಿದ್ದನ್ನು ಸಾಧಿಸಲು ನೆರವು ನೀಡುತ್ತಿದ್ದಾರೆ.

"ಸ್ಟೈರ್ಸ್"  ತನ್ನಂತೆಯೇ ಕೆಲಸ ಮಾಡುವ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತಿದೆ. ಯುಫ್ಲೆಕ್ಸ್, ಖೇಲೋ ಡೆಲ್ಲಿ ಅನ್ನುವ ಪ್ರಾಜೆಕ್ಟ್ ಗೆ "ಸ್ಟೈರ್ಸ್"   ಜೊತೆಗೆ ಕೈ ಜೋಡಿಸಿದೆ. ಯುಫ್ಲೆಕ್ಸ್ ಭಾರತದ ಅತೀ ದೊಡ್ಡ ಪ್ಯಾಕೇಜಿಂಗ್ ಕಂಪನಿ ಅನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. "ಸ್ಟೈರ್ಸ್"  ಕ್ರೀಡಾಪಟುಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ಮತ್ತು ಬೇಸಿಕ್ ಗಳನ್ನು ಉಚಿತವಾಗಿ ನೀಡುತ್ತಿದೆ. ಸದ್ಯಕ್ಕೆ ದೆಹಲಿಯಲ್ಲಿರುವ 29 ಯುಫ್ಲೆಕ್ಸ್ ಸ್ಟೈರ್ಸ್ ಸೆಂಟರ್​ಗಳಲ್ಲಿ ಸುಮಾರು 5000ಕ್ಕೂ ಅಧಿಕ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದೆ. ಇದರಲ್ಲಿ ಫುಟ್ಬಾಲ್ ಅತೀ ದೊಡ್ಡ ಆಟದ ಭಾಗವಾಗಿದೆ. 7000 ಗ್ರಾಮಗಳ ಸುಮಾರು 3ಲಕ್ಷ ಮಕ್ಕಳು "ಸ್ಟೈರ್ಸ್"ನ ಈ ಪ್ರೋಗ್ರಾಂನಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿದ್ದಾರೆ.

"ಸ್ಟೈರ್ಸ್"   ಭಾರತದ ಕುಗ್ರಾಮಗಳಿಗೂ ವಿಸ್ತರಣೆ ಮಾಡುವ ಕನಸಿನಲ್ಲಿದೆ. ಹಿಮಾಚಲ ಪ್ರದೇಶದಲ್ಲಿರುವ 15 ಸೆಂಟರ್ ಗಳ ಮೂಲಕ 100ಕ್ಕೂ ಅಧಿಕ ಗ್ರಾಮಗಳನ್ನು ಕವರ್ ಮಾಡುತ್ತಿದೆ. ವಾಲಿಬಾಲ್, ಫುಟ್ಬಾಲ್, ಹಾಕಿ, ಕಬಡ್ಡಿ, ಬಾಸ್ಕೆಟ್ ಬಾಲ್ ಮತ್ತು ಹ್ಯಾಂಡ್ ಬಾಲ್ ಗಳಿಗೆ ಇಲ್ಲಿ ಕೋಚಿಂಗ್ ನೀಡಲಾಗುತ್ತಿದೆ. ಉನಾ ಈ ಪ್ರೋಗ್ರಾಂನ ಪ್ರಮುಖ ಸ್ಥಳವಾಗಿದೆ. ಹರ್ಯಾಣದಲ್ಲಿ 250 ಸೆಂಟರ್ ಗಳನ್ನು ಆರಂಭಿಸಲಾಗಿದೆ. ಇಲ್ಲಿ ಕ್ರಿಕೆಟ್, ಕಬಡ್ಡಿ, ಹಾಕಿ ಮತ್ತು ಫುಟ್ಬಾಲ್ ಬಗ್ಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ.

2013ರಲ್ಲಿ "ಸ್ಟೈರ್ಸ್"   ಉತ್ತರ ಪ್ರದೇಶದಲ್ಲಿ ಕಾರ್ಯ ಆರಂಭಿಸಿತ್ತು. ಚಕ್ ಚಿಂತಾಮಣಿ, ಪಿಪ್ರಾ ಖುರ್ದ್, ಹರ್ಪುರ್ ಮಾಫಿ ಮತ್ತು ಪಕರಿಯರನ್ ಬಝಾರ್ ಮತ್ತು ಖುಷಿ ನಗರ್ ಗಳನ್ನು ಕಾರ್ಯಾರಂಭಿಸಿದೆ. ಖುಷಿನಗರದಲ್ಲಿ ವಿಶೇಷ ಚೇತನರಿಗಾಗಿ ಕ್ರಿಕೆಟ್ ಅಕಾಡೆಮಿಯನ್ನು ಕೂಡ ಆರಂಭಿಸಿದೆ.

ಪರಿಣಾಮಗಳು

ದೇಶದಾದ್ಯಂತ ಸುಮಾರು ಒಂದೂವರೆ ಲಕ್ಷ ಪ್ರತಿಭೆಗಳು "ಸ್ಟೈರ್ಸ್​ನ" ವಿವಿಧ ಸೆಂಟರ್ ಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಪೈಕಿ 50,000 ಪ್ರತಿಭೆಗಳನ್ನು 2013ರಲ್ಲೇ ಪತ್ತೆ ಮಾಡಲಾಗಿದೆ. "ಸ್ಟೈರ್ಸ್" ಸುಮಾರು 200 ರಾಷ್ಟ್ರೀಯ ಕ್ರೀಡಾಪಟುಗಳನ್ನು ತಯಾರು ಮಾಡಿದ ಹೆಗ್ಗಳಿಕೆಯನ್ನು ಹೊಂದಿದೆ. 2011ರಲ್ಲಿ ಆರಂಭವಾದ ಯುಫ್ಲೆಕ್ಸ್ ಖೇಲೋ ದಿಲ್ಲಿ ಸಾಕಷ್ಟು ಕ್ರೀಡಾಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಯುಫ್ಲೆಕ್ಸ್ ಸೆಂಟರ್ ಗಳಲ್ಲಿ ಸುಮಾರು 15000 ಬಡ ಮಕ್ಕಳ ಕ್ರೀಡಾಜೀವನವನ್ನು ಉತ್ತಮ ಪಡಿಸಿಕೊಳ್ಳುತ್ತಿದ್ದಾರೆ.

"ಸ್ಟೈರ್ಸ್" ಮುಂದಿನ ದಿನಗಳಲ್ಲಿ ಓಡಿಶಾದಲ್ಲಿ ಫುಟ್ಬಾಲ್, ಹಾಕಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ನಿರ್ಧಾರ ಮಾಡಿದೆ. ಮುಂದಿನ ದಿನಗಳಲ್ಲಿ ಖೋಖೋ, ಕಬಡ್ಡಿ ಮತ್ತು ಕ್ರಿಕೆಟ್ ಮತ್ತು ಸೆಪಕ್ ಟ್ರಾಕ್ ಗಳಿಗೆ ಪ್ರೋತ್ಸಾಹ ನೀಡಲಿದೆ. ಒಟ್ಟಿನಲ್ಲಿ "ಸ್ಟೈರ್ಸ್" ಭಾರತದ ಕ್ರೀಡಾಪಟುಗಳ ಜೀವನಕ್ಕೆ ತಿರುವು ನೀಡಬಲ್ಲ ಕೆಲಸವನ್ನು ಮಾಡುತ್ತಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. 

ಇದನ್ನು ಓದಿ:

1. ತೆಂಗಿನ ಕೊಯ್ಲಿನ ಚಿಂತೆ ಬಿಟ್ಟುಬಿಡಿ- ಅಪ್ಪಚ್ಚನ್​ ಅನ್ವೇಷಣೆಯ ಬಗ್ಗೆ ತಿಳಿದುಕೊಳ್ಳಿ

2. ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟ ರಾಜಕೀಯ ನಾಯಕರು ಇವರು..!

3. ಡಿಸೈನರ್ "ಬೋಟಿಕ್ " ! ಮಹಿತಾ ಪ್ರಸಾದ್ ಡಿಸೈನ್ಸ್

Related Stories