ಪ್ಲಾಸ್ಟಿಕ್‍ಗೆ ಪರ್ಯಾಯ ಇಕೋವೇರ್

ಅಗಸ್ತ್ಯ

0

ಪ್ಲಾಸ್ಟಿಕ್ ಹಾವಳಿ ಹೆಚ್ಚಿದಂತೆ ಪರಿಸರ ನಾಶವಾಗುತ್ತಿದೆ. ಅದರೊಂದಿಗೆ ತ್ಯಾಜ್ಯದ ಸಮಸ್ಯೆಯೂ ವಿಪರೀತ ಎನ್ನುವಂತಾಗಿದೆ. ಅದಕ್ಕಾಗಿಯೇ ರಾಜ್ಯ ಸರ್ಕಾರ ಪರಿಸರ ನಾಶ ತಪ್ಪಿಸುವ ಸಲುವಾಗಿ ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಷೇಧಿಸಲಾಗಿದೆ. ಅದರಿಂದ ಆಹಾರ ಪದಾರ್ಥಗಳನ್ನು ಪಾರ್ಸೆಲ್ ನೀಡುವ ಹೋಟೆಲ್ ಉದ್ಯಮಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಆದರೆ, ಈ ಸಮಸ್ಯೆ ನಿವಾರಣೆಗಾಗಿಯೇ ಪರಿಸರ ಸ್ನೇಹಿ ತಟ್ಟೆ, ಲೋಟಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೆಚ್ಚುತ್ತಿದ್ದಂತೆ ಕರ್ನಾಟಕ ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಲ್ಲೊಂದೆಂಬಂತೆ ತ್ಯಾಜ್ಯದ ಸಮಸ್ಯೆ ನಿವಾರಣೆ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದ 40 ಮೈಕ್ರಾನ್‍ಗಿಂತ ಕಡಿಮೆ ಗುಣಮಟ್ಟದ ಎಲ್ಲಾ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ನಿಷೇಧ ಹೇರಿರುವುದು. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಆದೇಶ ಇದೀಗ ಹೋಟೆಲ್ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಹೋಟೆಲ್ ಉದ್ಯಮದ ಈ ಸಮಸ್ಯೆಯನ್ನು ನೀಗಿಸಲೆಂದೆ ಇಕೋವೇರ್ ಸಂಸ್ಥೆ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದೇನೆಂದರೆ ಮರುಬಳಕೆ ಅಥವಾ ಸಂಸ್ಕರಿಸಬಹುದಾದ ತಟ್ಟೆ, ಲೋಟ, ಬಾಕ್ಸ್​ಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದಿದೆ. ಈ ಎಲ್ಲಾ ಉತ್ಪನ್ನಗಳು ಪ್ಲಾಸ್ಟಿಕ್‍ನಂತಹ ಯಾವುದೇ ವಸ್ತು ಬಳಸದೆ ಕೇವಲ ಕಬ್ಬಿನ ತ್ಯಾಜ್ಯ ಬಳಸಿ ಮಾಡಿದಂತಹ ವಸ್ತುಗಳಾಗಿವೆ. ಈ ವಸ್ತುಗಳು 30ರಿಂದ 40 ದಿನಗಳಲ್ಲಿ ಗೊಬ್ಬರವಾಗಿ ಪರಿವರ್ತನೆಗೊಳ್ಳುವುದರಿಂದ ಯಾವುದೇ ತೊಂದರೆಯಿಲ್ಲದೆ ಬಳಸಬಹುದಾಗಿದೆ. ಹಾಗೆಯೇ, ಉತ್ಪನ್ನಗಳ ತಯಾರಿಕೆ ವೇಳೆ ಯಾವುದೇ ಬಣ್ಣವನ್ನು ಬಳಸುವುದಿಲ್ಲ. ಹೀಗಾಗಿ ಆಹಾರ ತಿನ್ನುವಾಗ ಅದರಿಂದ ಅಡ್ಡಪರಿಣಾಮ ಉಂಟಾಗುತ್ತದೆ ಎಂಬ ಭಯವೂ ಇರುವುದಿಲ್ಲ.

ಸಂಸ್ಕರಿಸಬಹುದಾದ ವಸ್ತುಗಳು

ಇಕೋವೇರ್ ತಯಾರಿಸಿರುವ ಪ್ರತಿ ವಸ್ತುವೂ ಮರುಬಳಕೆ ಅಥವಾ ಹಸಿ ತ್ಯಾಜ್ಯದ ರೀತಿ ಸಂಸ್ಕರಿಸಬಹುದಾಗಿದೆ. ಹೋಟೆಲ್ ಉದ್ಯಮಕ್ಕೆ ಅವಶ್ಯವಿರುವ ವಿವಿಧ ಅಳತೆಯ ತಟ್ಟೆ, ಲೋಟ, ಬಾಕ್ಸ್​​ಗಳನ್ನು ತಯಾರಿಸಲಾಗಿದೆ. ಯಾವುದೇ ರಾಸಾಯನಿಕ ಬಳಸದೆ ಸಾವಯವ ರೀತಿಯಲ್ಲಿ ಉತ್ಪನ್ನಗಳನ್ನು ತಯಾರಿಸಲಾಗಿದೆ. ಅಷ್ಟೇ ಅಲ್ಲದೆ ಈ ವಸ್ತುಗಳ ತಯಾರಿಕೆಗೆ ಪೇಪರ್ ಕೂಡ ಬಳಸಲಾಗುತ್ತಿಲ್ಲ. ಅದರಿಂದಾಗಿ ಪರಿಸರ ನಾಶದ ಭಯವಿಲ್ಲದೆ ಅರಾಮಾಗಿ ಇಕೋವೇರ್ ಪರಿಸರ ಸ್ನೇಹಿ ತಟ್ಟೆ, ಲೋಟಗಳನ್ನು ಬಳಸಬಹುದಾಗಿದೆ. ಇನ್ನು ಮೈನಸ್ 20 ಡಿಗ್ರಿ ಸೆಲ್ಷಿಯಸ್ ತಣ್ಣನೆಯ ಮತ್ತು 140 ಡಿಗ್ರಿ ಸೆಲ್ಷಿಯಸ್ ಬಿಸಿಯ ಆಹಾರವನ್ನು ಈ ಉತ್ಪನ್ನದ ಮೇಲೆ ಹಾಕಿದರೆ ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೆ ಪ್ಲಾಸ್ಟಿಕ್ ನಿಷೇಧವಿರುವ ಕೊಲ್ಕತ್ತಾ ಸೇರಿದಂತೆ ಮತ್ತಿತರ ನಗರಗಳಲ್ಲಿ ಈ ಉತ್ಪನ್ನಗಳು ಈಗಾಗಲೆ ಬಳಕೆಯಾಗುತ್ತಿವೆ. ಅದನ್ನು ಈಗ ಬೆಂಗಳೂರಿನ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ಇದನ್ನು ಓದಿ: ಶುದ್ಧ ನೀರು ನೀಡುವ `ಅಮೃತ್' ಎಂಬ ಸಂಜೀವಿನಿ

ಮರದ ವಸ್ತುಗಳು ಲಭ್ಯ

ಮರುಬಳಕೆ ಮಾಡುವುದಷ್ಟೇ ಅಲ್ಲದೆ, ಮನೆಗಳಲ್ಲಿ ದೀರ್ಘ ಬಾಳಿಕೆ ಬರುವಂತಹ ವಸ್ತುಗಳು ಇಕೋವೇರ್‍ನಲ್ಲಿ ಲಭ್ಯವಿದೆ. ಅದರಂತೆ ಮರಗಳಿಂದ ತಯಾರಿಸಲಾದ ತಟ್ಟೆ, ಲೋಟಗಳು ಮಾರಾಟ ಮಾಡಲಾಗುತ್ತಿದೆ. ಎಲ್ಲಾ ವಿಧದ ಉತ್ಪನ್ನಗಳು ವಿವಿಧ ಅಳತೆಯಲ್ಲಿ ಲಭ್ಯವಿದೆ. ಇಷ್ಟೇ ಅಲ್ಲದೆ, ಪರಿಸರ ಸ್ನೇಹಿ ಗಾರ್ಬೇಜ್ ಕವರ್‍ಗಳು ಕೂಡ ಇಕೋವೇರ್ ಸಿದ್ಧಪಡಿಸಿದೆ. ಅದು ಸಣ್ಣ, ಮಧ್ಯಮ ಮತ್ತು ದೊಡ್ಡ ಅಳತೆಯಲ್ಲಿ ದೊರೆಯುತ್ತಿದೆ.

ಮೇಕ್ ಇನ್ ಇಂಡಿಯಾ

ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಆಧರಿಸಿ ಇಕೋವೇರ್ ಸಂಸ್ಥೆ ಹುಟ್ಟುಹಾಕಲಾಗಿದೆ. ದೆಹಲಿ ಮೂಲದ ಸಂಸ್ಥೆ ಈಗಾಗಲೆ ದೇಶದ ಹಲವು ನಗರಗಳಿಗೆ ವ್ಯಾಪಿಸಿದೆ. ಅಲ್ಲದೆ ಅಮೇಜಾನ್, ಸ್ನಾಪ್‍ಡೀಲ್‍ನಂತಹ ಆನ್‍ಲೈನ್ ಮಾರುಕಟ್ಟೆಯಲ್ಲೂ ಇಕೋವೇರ್ ಉತ್ಪನ್ನಗಳು ಲಭ್ಯವಿದೆ.

ಇದನ್ನು ಓದಿ:

1. ಯೋಧರ ರಕ್ಷಣೆಗೆ ಸ್ಪೇಸ್ ಸ್ಯೂಟ್ ..!

2. ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ "ಆಸ್ಕ್ ಮಿ ಬಜಾರ್''

3. ಬ್ಯಾಲೆ ನೃತ್ಯ ಪ್ರಪಂಚದಲ್ಲಿ ಸಾಹಸೀ ‘ ಯಾನ..!’

Related Stories