ಡಿಜಿಟಲ್​ ಲೆಕ್ಕದಲ್ಲಿ ಹಿಂದೆ ಬಿದ್ದ ಭಾರತ- ಮೋದಿ ಕನಸಿಗೆ ಪೆಟ್ಟು ಕೊಡುತ್ತಿದೆ ಹಾರ್ಡ್​ಕ್ಯಾಶ್​..!

ಟೀಮ್​ ವೈ.ಎಸ್​. ಕನ್ನಡ

1

ಭಾರತ ಡಿಜಿಟಲ್​ ಕ್ರಾಂತಿಯತ್ತ ಮುಖ ಮಾಡಿದೆ. ಕೇಂದ್ರ ಸರ್ಕಾರವಂತೂ ಡಿಜಿಟಲೈಷನ್​ಗೆ ಭಾರೀ ಪ್ರೋತ್ಸಾಹ ನೀಡುತ್ತಿದೆ. ಅಷ್ಟು ಸಾಧ್ಯವೋ ಅಷ್ಟು ವಹಿವಾಟುಗಳು ಡಿಜಿಟಲ್​ ಮೋಡ್​ನಲ್ಲಿಯೇ ನಡೆಯಬೇಕು ಅನ್ನುವುದು ಕೇಂದ್ರ ಸರ್ಕಾರದ ಗುರಿ. ಡಿಜಿಟಲೈಷೇನ್​ ಮೂಲಕ ಕಪ್ಪು ಹಣ, ಹವಾಲಾ ಹಣಗಳಿಗೆ ಕಡಿವಾಣ ಹಾಕಬಹುದು ಅನ್ನೋದು ಮತ್ತೊಂದು ಯೋಚನೆ. ಆದ್ರೆ ಕೇಂದ್ರ ಸರಕಾರದ ಡಿಜಿಟಲ್​ ಯೋಜನೆಗೆ ಈಗ ಹೊಡೆತ ಬೀಳುತ್ತಿದೆ. ಗರಿಗರಿ ನೋಟ್​ಗಳು ಜನರ ಕೈ ಸೇರುತ್ತಾ ಇರುವಂತೆ ಡಿಜಿಟಲ್​ ಮಂತ್ರ ಮರೆತು ಹೋಗುತ್ತಿದೆ. ನೋಟ್​ ಬ್ಯಾನ್​ ಅವಧಿಯಲ್ಲಿ ಡಿಜಿಟಲ್​ ಪೇಮೆಂಟ್​ಗಳಿಗೆ ಬೆಂಬಲ ಸೂಚಿಸುತ್ತಿದ್ದ ವ್ಯಾಪಾರಾಸ್ಥರು ಈಗ ಕ್ಯಾಶ್​ನಲ್ಲೇ ವ್ಯವಹಾರ ಮಾಡಲು ಮುಂದಾಗುತ್ತಿದ್ದಾರೆ. ಗ್ರಾಹಕರು ಕೂಡ ಕಾರ್ಡ್​ ಯಾಕೆ..? ಕ್ಯಾಶ್​ ಓ.ಕೆ. ಅಲ್ವಾ ಅನ್ನುವ ಮನಸ್ಥಿತಿಗೆ ಬಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2016 ನವೆಂಬರ್​ 8ರಂದು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ನೋಟ್​ ಬ್ಯಾನ್​ ಆದಮೇಲೆ ನಗದು ರೂಪದಲ್ಲಿ ನಡೆಯುತ್ತಿದ್ದ ವ್ಯವಹಾರಗಳು ಕಡಿಮೆ ಆಗಿದ್ದವು. ವಿವಿಧ ರೀತಿಯ ಡಿಜಿಟಲ್​ ಪೇಮೆಂಟ್​ ಬಗ್ಗೆ ಭಾರೀ ಜಾಗೃತಿ ಮೂಡಿತ್ತು. ಆದ್ರೆ ಈಗ ಹೊಸ ನೋಟುಗಳು ಕೈಗೆ ಸಿಕ್ಕ ಬಳಿಕ ಜನರ ಡಿಜಿಟಲ್​ ಪೇಮೆಂಟ್​ ಆಸಕ್ತಿ ಕಡಿಮೆ ಆಗ್ತಿದೆ.

                         ಡಿಜಿಟಲ್​ ಲೆಕ್ಕ
- ಡಿಸೆಂಬರ್​- 9 ಸಾವಿರ ಲಕ್ಷ ಡಿಜಿಟಲ್​ ವಹಿವಾಟು
- ಜನವರಿ-  8704ಲಕ್ಷ ಡಿಜಿಟಲ್​ ವಹಿವಾಟು
- ಫೆಬ್ರವರಿ-  7630 ಲಕ್ಷ- ಡಿಜಿಟಲ್​ ವಹಿವಾಟು

ನೋಟ್​ ಬ್ಯಾನ್​ ಬಳಿಕ ಕಳೆದ ಡಿಸೆಂಬರ್​ನಲ್ಲಿ ಸುಮಾರು 9ಸಾವಿರ ಲಕ್ಷಕ್ಕೂ ಹೆಚ್ಚು ಡಿಜಿಟಲ್​ ಪಾವತಿ ನಡೆದಿತ್ತು. ಇದರ ಮೌಲ್ಯ ಸುಮಾರು 104. 5 ಕೋಟಿ ರೂಪಾಯಿ ಆಗಿತ್ತು. ಆದ್ರೆ ನಿಧಾನವಾಗಿ ನೋಟುಗಳು ಜನರ ಕೈ ಸೇರ್ತಾ ಇದ್ದಂತೆ ಡಿಜಿಟಲ್​ ಪೇಮೆಂಟ್​ನತ್ತ ಜನರ ಗಮನ ಕಡಿಮೆ ಆಗಿದೆ. ಜನವರಿಯಲ್ಲಿ ಕೇವಲ 8704 ಲಕ್ಷ ಮತ್ತು ಫೆಬ್ರವರಿಯಲ್ಲಿ ಕೇವಲ 7630 ಲಕ್ಷ ಡಿಜಿಟಲ್​ ವಹಿವಾಟು ನಡೆದಿದೆ. ಇನ್ನು ಮತ್ತೊಂದೆಡೆ ಸರ್ಕಾರ ಡಿಜಿಟಲ್ ವ್ಯವಸ್ಥೆಯನ್ನ ಹೆಚ್ಚಿಸುವುದಕ್ಕಾಗಿ ಆಧಾರ್ ಪೇ ಆ್ಯಪ್ ಕೂಡ ಬಿಡುಗಡೆ ಮಾಡಿದೆ. ಹೆಬ್ಬೆಟ್ಟನ್ನು ಒತ್ತುವ ಮೂಲಕವೇ ಹಣ ಪಾವತಿ ಮಾಡಬಹುದಾಗಿದೆ.

ಏನಿದು ಆಧಾರ್​ ಫೇ ಆ್ಯಪ್​..?

ಇನ್ಮುಂದೆ ನೀವು ಶಾಪಿಂಗ್‍ಗೆ ಹೋದಾಗ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಕ್ಯಾಶ್ ಕೂಡ ತೆಗೆದುಕೊಂಡು ಹೋಗಿಲ್ಲ ಅಂದ್ರೆ ಯೋಚಿಸಬೇಡಿ. ಯಾಕಂದ್ರೆ, ಇದ್ಯಾವುದು ಇಲ್ಲದೆಯೇ ನೀವು ಆರಾಮಾಗಿ ನಿಮಗೆ ಬೇಕಾದ್ದನ್ನು ಕೊಳ್ಳಬಹುದು. ವ್ಯಾಪಾರಿಗಳಿಗೆ ಹಣವನ್ನು ಡಿಜಿಟಲ್ ರೂಪದಲ್ಲಿ ಶುಲ್ಕ ರಹಿತವಾಗಿ ಪಾವತಿಸಲು, ಡೆಬಿಟ್-ಕ್ರೆಡಿಟ್ ಕಾರ್ಡ್‍ಗಳು, ಮೊಬೈಲ್ ಫೋನ್‍ಗಳು ಇಲ್ಲದೆಯೂ ನಗದು ರಹಿತ ವಹಿವಾಟು ನಡೆಸಲು ಸಾಧ್ಯವಾಗುವ ಹೊಸ ಆ್ಯಪ್ ಸಿದ್ಧವಾಗಿದೆ. ಆಧಾರ್ ಸಂಖ್ಯೆ ಆಧರಿಸಿ ಹಣ ಪಾವತಿ ಮಾಡಲು ಕೇಂದ್ರ ಸರ್ಕಾರ ಈ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. ಈ ಆ್ಯಪ್ ಬಳಸಿ ಇದರ ಉಪಯೋಗ ಪಡೆದ್ರೆ ಅದಕ್ಕೆ ಗ್ರಾಹಕರು ಶುಲ್ಕ ಪಾವತಿಸಬೇಕಿಲ್ಲ. ಈ ಸೇವೆ ಉಚಿತವಾಗಿರೋದ್ರಿಂದ ಬಡವರು ಕೂಡ ಈ ಸೇವೆಯನ್ನು ಪಡೆಯಬಹುದು. ಕೇಂದ್ರ ಸರ್ಕಾರದ ಉದ್ದೇಶವೇ ಇದು, ಬಡವರು ಕೂಡ ಡಿಜಿಟಲ್ ಪಾವತಿ ವ್ಯವಸ್ಥೆ ವ್ಯಾಪ್ತಿಗೆ ಬರಬೇಕು, ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದ ಹಳ್ಳಿಗಳಲ್ಲೂ ಡಿಜಿಟಲ್ ಪಾವತಿ ಸಾಧ್ಯವಾಗಬೇಕು ಎಂಬುದು.

ಇದನ್ನು ಓದಿ: ಸೀರೆಯ ಮೇಲೆ "ಮಾನಸ" ಚಿತ್ತಾರ!

ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಲ್ಲಿ ಗ್ರಾಹಕನ ಬಳಿ ಯಾವುದೇ ಕಾರ್ಡ್ ಇರಬೇಕೆಂದೇನಿಲ್ಲ. ಡಿಜಿಟಲ್ ರೂಪದಲ್ಲಿ ಹಣ ಪಾವತಿ ಮಾಡಬಹುದು. ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಿಸಿರುವ ಯಾವುದೇ ವ್ಯಕ್ತಿ ಈ ಹೊಸ ಆ್ಯಪ್ ನಲ್ಲಿ ಹಣ ಪಾವತಿಸಬಹುದು.

ಆ್ಯಪ್ ಮೂಲಕ ಪಾವತಿ ಮಾಡೋದು ಕೂಡ ಅಷ್ಟೇ ಸುಲಭ. ವ್ಯಾಪಾರಿಗಳು ಈ ಆ್ಯಪ್‍ನ್ನು ತಮ್ಮ ಸ್ಮಾರ್ಟ್ ಫೋನ್‍ನಲ್ಲಿ ಹಾಕಿಕೊಳ್ಳಬೇಕು. ನಂತ್ರ ಆ ಫೋನನ್ನು ಬಯೋಮೆಟ್ರಿಕ್ ರೀಡರ್ ಯಂತ್ರಕ್ಕೆ ಜೋಡಿಸಬೇಕು. ಹಾಗಂತ ಯಂತ್ರಕ್ಕೆ ಹೆಚ್ಚು ಬಂಡವಾಳದ ಅವಶ್ಯಕಥೆಯಿಲ್ಲ. ಬಯೋಮೆಟ್ರಿಕ್ ರೀಡರ್ ಯಂತ್ರದ ಬೆಲೆ 2 ಸಾವಿರ ರೂಪಾಯಿಯಷ್ಟೆ. ಹಣ ಪಾವತಿಸಬೇಕಾಗಿರುವ ಗ್ರಾಹಕ ಹಣದ ಮೊತ್ತದ ಜೊತೆ ತನ್ನ ಆಧಾರ್ ಸಂಖ್ಯೆಯನ್ನು ಈ ಆ್ಯಪ್​ನಲ್ಲಿ ಎಂಟ್ರಿ ಮಾಡಬೇಕು. ನಂತ್ರ ತನ್ನ ಅಕೌಂಟ್ ಇರುವ ಬ್ಯಾಂಕ್‍ನ ಹೆಸರು ಆಯ್ಕೆ ಮಾಡಿಕೊಳ್ಳಬೇಕು. ನಂತ್ರ ತನ್ನ ಬಯೋಮೆಟ್ರಿಕ್ ಮಾಹಿತಿಯನ್ನು ಬಯೋಮೆಟ್ರಿಕ್ ಯಂತ್ರದ ಮೂಲಕ ನೀಡಬೇಕು. ಯಂತ್ರಕ್ಕೆ ನೀಡುವ ಮಾಹಿತಿ ಗ್ರಾಹಕನ ಪಾಸ್‍ವರ್ಡ್ ರೀತಿ ಕೆಲಸ ಮಾಡುತ್ತೆ. ನಂತರ ಯಂತ್ರ ವ್ಯಾಪಾರಿಗೆ ಗ್ರಾಹಕ ಕೊಡಬೇಕಾಗಿರೋ ಮೊತ್ತವನ್ನ ಆತನ ಅಕೌಂಟ್‍ನಿಂದ ಕಟ್ ಮಾಡಿಕೊಳ್ಳುತ್ತದೆ. ಈ ಯಂತ್ರ ಬಳಕೆ ಮಾಡುವ ವ್ಯಾಪಾರಸ್ಥ ಪಿಓಎಸ್ ಮೆಷಿನ್ ಅಂದ್ರೆ ಸ್ವೈಪ್ ಮೆಷಿನ್ ಬಳಸೋ ಅಗತ್ಯವೂ ಇರೋದಿಲ್ಲ. ಜಸ್ಟ್​ ಹೆಬ್ಬೆಟ್ಟಿನ ಮೂಲಕ ಹಣದ ಪಾವತಿ ಮಾಡಬಹುದು. ಆಧಾರ್ ಸಂಖ್ಯೆ ಆಧರಿಸಿದ ಈ ಸೇವೆ ಎಲ್ಲಾ ಆ್ಯಂಡ್ರಾಯ್ಡ್ ಮೊಬೈಲ್ ಫೋನ್‍ನಲ್ಲಿ ಕೆಲಸ ಮಾಡುವಂತೆ ಸರ್ಕಾರ ಹಾಗೂ ಮೊಬೈಲ್ ತಯಾರಿಕಾ ಕಂಪೆನಿಗಳ ನಡುವೆ ಚರ್ಚೆ ನಡೆಯುತ್ತಿದೆ. ಸದ್ಯಕ್ಕೆ ವರ್ತಕರಷ್ಟೇ ಈ ಆ್ಯಪ್​ನ್ನು ಬಳಸಿಕೊಳ್ಳಬಹುದು.

           ಡಿಜಿಟಲ್​ ವಹಿವಾಟಯ ಯಾಕೆ ಕಡಿಮೆ..?
- ಸುಲಭವಾಗಿ ನೋಟುಗಳು ಕೈಗೆ ಸಿಗುತ್ತಿರುವುದು
- 500 ಮತ್ತು 2000 ರೂಪಾಯಿ ನೋಟುಗಳ ಬಳಕೆ
- ಎಟಿಎಂನಲ್ಲಿ ದುಡ್ಡಿದ್ರೆ, ಡಿಜಿಟಲ್​ ಪಾವತಿ ಬಗ್ಗೆ ಮನಸ್ಸಿಲ್ಲ..!

ಭಾರತದಲ್ಲಿ ಕ್ಯಾಶ್​ಲೆಸ್​ ವಹಿವಾಟು ನಡೆಯಬೇಕು ಅನ್ನುವುದು ಸರಕಾರದ ಉದ್ದೇಶ. ಆದ್ರೆ ಹಾರ್ಡ್​ಕ್ಯಾಶ್​ಗಳ ಲಭ್ಯತೆ ಈ ಯೋಜನೆಗೆ ಹಿನ್ನಡೆ ಉಂಟು ಮಾಡಿದೆ. ಎಟಿಎಂ ಮಿತಿಯನ್ನು ಆರ್​ಬಿಐ ಹಿಂಪಡೆದಿರುವುದರಿಂದ ನಗದು ಸುಲಭವಾಗಿ ಸಿಗುತ್ತಿದೆ. ಹೀಗಾಗಿ ಡಿಜಿಟಲ್​ ವಹಿವಾಟು ಮರೆತು ಹೋಗಿದೆ. ಒಟ್ಟಿನಲ್ಲಿ ಮುಂದೊಂದು ದಿನ ಭಾರತದಲ್ಲಿ ಎಲ್ಲಾ ವಹಿವಾಟುಗಳು ಕೂಡ ಡಿಜಿಟಲ್​ ರೂಪದಲ್ಲಿ ನಡೆಯುತ್ತದೆ ಅನ್ನುವುದು ಗ್ಯಾರೆಂಟಿ.

ಇದನ್ನು ಓದಿ:

1. ಕೆನಾಡ ಬಿಟ್ಟು ಬಂದ ಆ ಹುಡುಗ ಮನೆ ಮನೆಯಲ್ಲೂ ಹಸಿರು ತಂದ! 

2. ಹೃದಯದ ಡಾಕ್ಟರ್ ಅಲ್ಲ, ಆದ್ರೆ ಇವರೊಬ್ಬ 'ಹೃದಯವಂತ' ವೈದ್ಯ

3. ಇದು 60ರ ಅರಳುಮರಳಲ್ಲ- ಯುವಕರಿಗೆ ಮಾದರಿ ಆಗುವ ಸುಂದರ ಕಾರ್ಯ

Related Stories