ಒಂದು ಕೈ ಇಲ್ಲದಿದ್ದರೇನಂತೆ ಬದುಕುವ ಛಲವಿದೆಯಲ್ಲ..

ಟೀಮ್ ವೈ.ಎಸ್.ಕನ್ನಡ 

0

30ರ ಹರೆಯದ ರಚಿತ್ ಕುಲಶ್ರೇಷ್ಠ ಅವರಿಗೆ 5 ವರ್ಷದವರಿದ್ದಾಗ್ಲೇ ಕ್ಯಾನ್ಸರ್ ಆವರಿಸಿತ್ತು. ರಚಿತ್ 6 ವರ್ಷದವರಿದ್ದಾಗ ವೈದ್ಯರು ಅವರ ಎಡಗೈಯ್ಯನ್ನೇ ಕತ್ತರಿಸಿ ತೆಗೆದ್ರು. ಒಂದು ಕೈಯಿಲ್ಲ ಅನ್ನೋ ಕಾರಣಕ್ಕೆ ರಚಿತ್ ಬದುಕುವ ಛಲವನ್ನು ಬಿಡಲಿಲ್ಲ. ಅಂದುಕೊಂಡಿದ್ದನ್ನು ಸಾಧಿಸಲೇಬೇಕೆಂಬ ದೃಢ ನಿರ್ಧಾರ ಮಾಡಿದ್ರು. ಒಂದು ಕೈಯಿಲ್ಲದಿದ್ರೂ ರಚಿತ್ ಈಗ ಕ್ರಿಕೆಟ್, ಚೆಸ್, ಟೇಬಲ್ ಟೆನಿಸ್ ಎಲ್ಲವನ್ನೂ ಆಡ್ತಾರೆ. ಅಷ್ಟೇ ಅಲ್ಲ 13,500 ಅಡಿ ಎತ್ತರದ ಶಿಖರವನ್ನು 2 ಬಾರಿ ಹತ್ತಿದ್ದಾರೆ.

ರಚಿತ್ ಅವರ ಬಾಲ್ಯ ನಿಜಕ್ಕೂ ಕಷ್ಟಕರವಾಗಿತ್ತು. ಒಂದು ಕೈ ಇಲ್ಲದ್ದನ್ನು ನೋಡಿ ಉಳಿದ ಮಕ್ಕಳು ಅವರನ್ನು ಅಪಹಾಸ್ಯ ಮಾಡುತ್ತಿದ್ರು. ಉಳಿದವರಿಗೆ ಸಿಕ್ಕಂತಹ ಅವಕಾಶ ರಚಿತ್ ಗೆ ಸಿಗುತ್ತಿರಲಿಲ್ಲ. ಆದ್ರೆ ಅವರ್ಯಾರಿಂದ್ಲೂ ರಚಿತ್‍ರನ್ನು ತಡೆಯಲು ಸಾಧ್ಯವಾಗಲಿಲ್ಲ, ಅದಕ್ಕೆ ಕಾರಣ ಅವರಲ್ಲಿದ್ದ ಹೋರಾಟದ ಮನೋಭಾವ. ಫೇಸ್‍ಬುಕ್‍ನ 'ಹ್ಯೂಮನ್ಸ್ ಆಫ್ ಬಾಂಬೆ' ಪೇಜ್‍ನಲ್ಲಿ ರಚಿತ್ ಅವರ ಬಗ್ಗೆ ಬರೆಯಲಾಗಿದೆ.

''ನಾನು ಮೊದಲಿನಿಂದ್ಲೂ ಫುಟ್ಬಾಲ್ ಅಭಿಮಾನಿ. ಗೋಲ್ ಕೀಪರ್ ಆಗಬೇಕೆಂದು ಕಠಿಣ ತರಬೇತಿ ಕೂಡ ಪಡೆದಿದ್ದೆ. ಆ ಪರಿಶ್ರಮ ಫಲಕೊಟ್ಟಿತ್ತು, ಇಂಟರ್ ಸ್ಕೂಲ್ ಮಟ್ಟದಲ್ಲಿ ಆಡಲು ನಾನು ಆಯ್ಕೆಯಾಗಿದ್ದೆ. ಆ ಟೂರ್ನಿಯ ಮೊದಲ ಪಂದ್ಯ ನನ್ನ ಪಾಲಿಗೆ ಮರೆಯಲಾಗದಂಥದ್ದು, ನಾನು ಗೋಲ್‍ಕೀಪರ್ ಅನ್ನೋದನ್ನು ನೋಡಿದ ಎದುರಾಳಿ ತಂಡದ ತರಬೇತುದಾರ ತಮ್ಮ ಟೀಂ ಕನಿಷ್ಠ 6 ಗೋಲುಗಳಿಂದ ಗೆಲುವು ಸಾಧಿಸಲಿದೆ ಅಂತಾ ಪಂದ್ಯಕ್ಕೂ ಮುನ್ನವೇ ಘೋಷಿಸಿಬಿಟ್ಟಿದ್ದ. ಆದ್ರೆ ಆತ ಮಾಡಿದ ಅವಮಾನದಿಂದ ನಾನು ವಿಚಲಿತನಾಗಲಿಲ್ಲ. ನನ್ನ ಆಟದ ಮೇಲೆ ಗಮನಹರಿಸಿದೆ, ಕೊನೆಗೆ 4-2 ಗೋಲುಗಳಿಂದ ನಮ್ಮ ತಂಡ ವಿಜಯಶಾಲಿಯಾಯ್ತು. ನನ್ನ ಜೀವನಕ್ಕೆ ಮೌಲ್ಯ ತಂದುಕೊಟ್ಟ ದಿನವದು. ನನ್ನನ್ನು ನಾನು ಯಾವುದಕ್ಕೂ ಸೀಮಿತಗೊಳಿಸಿಲ್ಲ'' ಎನ್ನುತ್ತಾರೆ ರಚಿತ್.

ಸದಾ ಕಾಲ ಹೊಸದೇನಾದ್ರೂ ಮಾಡಬೇಕೆಂದು ರಚಿತ್ ಪ್ರಯತ್ನಿಸುತ್ತಾರೆ. ಬದುಕನ್ನು ಅವರು ಸಂಪೂರ್ಣವಾಗಿ ಅನುಭವಿಸುತ್ತಾರೆ. ವಿವಿಧ ಕಡೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಹೋಟೆಲ್ ವೇಯ್ಟರ್ ಆಗಿ, ಬಾರ್ ಅಟೆಂಡರ್, ಹೋಟೆಲ್ ಮ್ಯಾನೇಜರ್ ಹಾಗೂ ಕಾಲ್ ಸೆಂಟರ್ ಎಕ್ಸಿಕ್ಯೂಟಿವ್ ಆಗಿಯೂ ರಚಿತ್ ಕೆಲಸ ಮಾಡಿದ್ದಾರೆ. ದೇಶದ ಉದ್ದಗಲಕ್ಕೂ ಸಂಚರಿಸೋದು ರಚಿತ್ ನೆಚ್ಚಿನ ಹವ್ಯಾಸ. ಆಗಾಗ ಕವಿತೆಗಳನ್ನು ಕೂಡ ಬರೆಯುತ್ತಾರೆ. ರಚಿತ್ ಒಬ್ಬ ಯಶಸ್ವಿ ಉದ್ಯಮಿ ಕೂಡ. 'ಸೀಕ್ರೆಟ್ ಲೊಕೇಟರ್ಸ್' ಹೆಸರಿನ ಪೋಸ್ಟ್ ಪ್ರೊಡಕ್ಷನ್ ಕಂಪನಿಯೊಂದನ್ನು ಮುನ್ನಡೆಸುತ್ತಿದ್ದಾರೆ.

2014ರಲ್ಲಿ ಮಹಾಮಾರಿ ಮತ್ತೊಮ್ಮೆ ಅವರನ್ನು ಆವರಿಸಿತ್ತು, ಆಗಲೂ ರಚಿತ್ ಕ್ಯಾನ್ಸರ್ ಅನ್ನು ಗೆದ್ದಿದ್ದಾರೆ. ''ನನ್ನ ಕಾಣದ ಕೈ ಯಾವಾಗಲೂ ಕ್ಯಾನ್ಸರ್‍ನೆಡೆಗೆ ಬೆರಳು ತೋರಿಸುತ್ತದೆ'' ಎನ್ನುತ್ತಾರೆ ರಚಿತ್. ಕೈ ಇಲ್ಲದಿದ್ರೂ ಕೀಳರಿಮೆ ಬೆಳೆಸಿಕೊಳ್ಳದೆ, ಕ್ಯಾನ್ಸರ್ ವಿರುದ್ಧ ಹೋರಾಡುತ್ತ ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿರುವ ರಚಿತ್ ನಿಜಕ್ಕೂ ಒಬ್ಬ ಮಾದರಿ ವ್ಯಕ್ತಿ ಹಾಗೂ ಉದ್ಯಮಿ.

ಇದನ್ನೂ ಓದಿ..

ಆನ್​ಲೈನ್​ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..!

ಸಾಮಾಜಿಕ ಪಿಡುಗಿಗೆ ಸವಾಲೊಡ್ಡಿದ ದಿಟ್ಟೆ..