ಸಹೋದ್ಯೋಗಿಗಳ ಜೊತೆ ಡೇಟಿಂಗಾ? ಹುಷಾರು ಕಣ್ರೀ...

ಟೀಮ್ ವೈ.ಎಸ್.ಕನ್ನಡ 

ಸಹೋದ್ಯೋಗಿಗಳ ಜೊತೆ ಡೇಟಿಂಗಾ? ಹುಷಾರು ಕಣ್ರೀ...

Friday July 29, 2016,

3 min Read

ನಾವು ಕೆಲಸ ಮಾಡುವ ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಡೇಟಿಂಗ್ ನಡೆಸೋದು ಅಷ್ಟು ಸೂಕ್ತವಲ್ಲ ಅನ್ನೋದು ನಮಗೆಲ್ಲ ಗೊತ್ತೇ ಇದೆ. ಎಲ್ರಿಗೂ ತಮಗೂ ಒಬ್ಬ ಬಾಯ್​ಫ್ರೆಂಡ್ ಅಥವಾ ಗರ್ಲ್​ಫ್ರೆಂಡ್ ಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಪರಿಚಿತ ಪರಿಸರ, ಅನುಕೂಲಕರ ವಾತಾವರಣವನ್ನೇ ಎಲ್ಲರೂ ಅರಸುತ್ತಾರೆ. ಹಾಗಾಗಿ ಬಹುತೇಕ ಮಂದಿ ತ್ವರಿತ ಬಾಂಧವ್ಯ ರಚಿಸಿಕೊಳ್ತಾರೆ. ಆದ್ರೆ ಈ ನಿಕಟತೆ, ಅನ್ಯೋನ್ಯತೆ ಮತ್ತು ಒಲವು ನಿಮ್ಮ ಔದ್ಯೋಗಿಕ ಪರಿಸರದಲ್ಲಿ ಅಪಾಯಕ್ಕೆ ಕಾರಣವಾಗಬಹುದು. ಇದು ಪರ್ಫೆಕ್ಟ್ ಫೇರಿಟೇಲ್ ರೊಮ್ಯಾನ್ಸ್ ಆಗಿದ್ದರೂ ನಿಮ್ಮ ಉದ್ಯೋಗವನ್ನೇ ಪಣಕ್ಕಿಡಬೇಕಾದ ಸ್ಥಿತಿ ಬರಬಹುದು. ನಿಮ್ಮನ್ನು ನೀವು ಸಂತೈಸಿಕೊಳ್ಳಬಹುದು, ಅಥವಾ ಎಲ್ಲವೂ ಹಣೆಬರಹ, ಅದೃಷ್ಟ ಅಂದುಕೊಂಡು ಸುಮ್ಮನಾಗಬಹುದು. ನೀವು ಈ ಅಪಾಯ ಎದುರಿಸಲು ರೆಡಿಯಾಗಿದ್ರೆ, ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

image


ಎಚ್ಚರ..ಎಚ್ಚರ

ನಿಮ್ಮದೇ ಕಚೇರಿಯ ಉದ್ಯೋಗಿಯೊಂದಿಗೆ ನೀವು ಡೇಟಿಂಗ್ ನಡೆಸ್ತಾ ಇದ್ರೆ ಅದು ಬೇರೆಯವರಿಗೆ ಗೊತ್ತಾಬಾರದು ಅನ್ನೋದು ನಿಮ್ಮ ಮನಸ್ಸಿನಲ್ಲಿರುತ್ತೆ. ಇದಕ್ಕಾಗಿ ನೀವು ಸಾಕಷ್ಟು ತಯಾರಿ ಮಾಡಿಕೊಳ್ತೀರಾ. ಇತರರ ಎದುರು ಹೆಚ್ಚು ಸ್ನೇಹಪೂರ್ವಕವಾಗಿ ನಡೆದುಕೊಳ್ಳಬಾರದು, ದೈಹಿಕ ಸಾಮೀಪ್ಯ ಸಲ್ಲದು ಎಂಬ ಬಗ್ಗೆ ಹೆಚ್ಚು ಪ್ರಜ್ಞಾಪೂರ್ವಕವಾಗಿರುತ್ತೀರಾ. ಆದ್ರೆ ಎಲ್ಲವೂ ಅಂದುಕೊಂಡಂತೆ ನಡೆಯದೇ ಇದ್ರೆ? ಯಾವುದೇ ಬ್ರೇಕ್ ಅಪ್ ಬಳಿಕ ನಿಮ್ಮನ್ನು ನೀವು ಸಂಭಾಳಿಸಿಕೊಳ್ಳಬೇಕು. ಸಹೋದ್ಯೋಗಿ ಜೊತೆ ಪ್ರೇಮಪಾಶದಲ್ಲಿ ಸಿಲುಕಿ ನಂತರ ಬ್ರೇಕ್ಅಪ್ ಆಯ್ತು ಅಂತಾದ್ರೆ ಪ್ರತಿನಿತ್ಯ ನೀವು ಅವರನ್ನು ಭೇಟಿಯಾಗ್ತೀರಾ. ಒಂದೇ ಪ್ರಾಜೆಕ್ಟ್​ನಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಬೇಕಾಗಿಯೂ ಬರಬಹುದು. ನಿಮಗೆ ಇಷ್ಟವಾಗಲಿ ಬಿಡಲಿ ಕೆಲಸ ಮಾಡಬೇಕು, ಮಾತನಾಡಬೇಕಾಗಿ ಬರುತ್ತೆ. ಇದು ನೋವು ಮತ್ತು ಮುಜುಗರ ತರಬಲ್ಲದು.

ಬಾಸ್ ಜೊತೆ ಡೇಟಿಂಗ್

ಕಚೇರಿ ಹೊರತಾಗಿ ಬೇರೆ ಯಾರನ್ನಾದ್ರೂ ನೀವು ಪ್ರೀತಿಸ್ತಾ ಇದ್ರೆ ಈ ತಲೆನೋವಿಲ್ಲ. ಅಕಸ್ಮಾತ್ ಕಚೇರಿಯೊಳಗೆ ಡೇಟಿಂಗ್ ಶುರುವಾದ್ರೆ? ಈ ವಿಷಯವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ? ಉಳಿದ ಸಹೋದ್ಯೋಗಿಗಳು ರಹಸ್ಯವಾಗಿ ನಿಮ್ಮನ್ನು ಜಡ್ಜ್ ಮಾಡುತ್ತಿರಬಹುದಲ್ಲವೇ? ಅಕಸ್ಮಾತ್ ನಿಮ್ಮ ಪಾರ್ಟ್​ನರ್ ನಿಮಗಿಂತ ಮೇಲಿನ ಹುದ್ದೆಯಲ್ಲಿದ್ದರೆ, ನಿಮಗೆ ಸಿಗುವ ಪ್ರಮೋಷನ್, ಶಹಬ್ಬಾಸ್​ಗಿರಿ ಎಲ್ಲದರ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಉಳಿದವರು ನಗೆಚಟಾಕಿ ಶುರುಮಾಡ್ತಾರೆ. ಇದರಿಂದ ಕಿರಿಕಿರಿಗೊಂಡು ನೀವು ಖಾರವಾಗಿ ಪ್ರತಿಕ್ರಿಯಿಸಿದ್ರೆ, ಅದನ್ನೂ ಅವರು ತಪ್ಪು ತಿಳಿಯುವ ಸಾಧ್ಯತೆಗಳೇ ಹೆಚ್ಚು. ನಿಮ್ಮ ಕೆಲಸವನ್ನು ಅಪಮೌಲ್ಯ ಮಾಡಬಹುದು, ಎಲ್ಲವೂ ನಿಮಗೆ ಸುಲಭ ಎಂದುಕೊಳ್ಳಬಹುದು. ನಿಮ್ಮ ವೈಯಕ್ತಿಕ ಐಡೆಂಟಿಟಿಯನ್ನೇ ನೀವು ಕಳೆದುಕೊಳ್ಳಬೇಕಾಗಬಹುದು.

ಎಲ್ಲೆಡೆ ಗೊಂದಲ, ಗೊಂದಲ

ಎಲ್ಲಾ ಸಂಬಂಧಗಳ ಆರಂಭ ಗೊಂದಲದಿಂದ ಕೂಡಿರುವ ಸುಂದರ ಅವಧಿ. ಎಲ್ರೂ ವಾಸ್ತವವನ್ನು ಮರೆತು ಹಗಲಲ್ಲೂ ಸ್ವಪ್ನಲೋಕದಲ್ಲಿ ವಿಹರಿಸ್ತಾರೆ. ನಿಮ್ಮ ಪಾರ್ಟ್​ನರ್ ಪಕ್ಕದ ಕಿರುಕೋಣೆಯಲ್ಲೋ ಅಥವಾ ಎದುರಿನ ಕೋಣೆಯಲ್ಲೋ ಕುಳಿತಿದ್ರೆ ಹಗಲುಗನಸು ನನಸಾಗುವುದು ಹೇಗೆ? ಅವರ ಜೊತೆ ಮೋಜಿನಲ್ಲಿ ನೀವು ಪಾಲ್ಗೊಳ್ಳಬಹುದು, ಆದ್ರೆ ನಿಮ್ಮ ಕೆಲಸ ಸರಿಯಾಗಿ ಸಾಗುವುದು ಕಷ್ಟ, ನೀವು ಗಡುವು ಮಿಸ್ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆಗ ನಿಮಗೆ ಮೇಲಧಿಕಾರಿಗಳಿಂದ ಬೈಗುಳ ಗ್ಯಾರಂಟಿ.

ಅತಿಯಾಯ್ತು ಎನಿಸುತ್ತೆ 

ನೀವು ಪ್ರೀತಿಸುತ್ತಿರುವವರ ಬಗ್ಗೆ ಯಾವುದೂ ನಿಮಗೆ ಅತಿ ಎನಿಸುವುದಿಲ್ಲ ಅನ್ನೋದು ಕಟ್ಟುಕತೆ. ಮನುಷ್ಯರಾಗಿರೋದ್ರಿಂದ ನಮಗೆ ನಾವು ಸ್ಥಳ ಕಲ್ಪಿಸಿಕೊಂಡಿರುತ್ತೇವೆ. ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೂ ನಿಮ್ಮ ಪಾರ್ಟ್​ನರ್ ಕಚೇರಿಯಲ್ಲಿ ಕೆಲಸ ಮಾಡೋದು ನೋಡಿದ್ರೆ ನಿಮಗದು ಅತಿಯಾಯ್ತು ಎನಿಸದೇ ಇರದು. ಸದಾಕಾಲ ಜೊತೆಯಾಗಿಯೇ ಇರುವುದರಿಂದ ಸುಸ್ತಾಗಿ ಹೋಗ್ತೀರಾ. ಇದ್ರಿಂದ ಆರೋಗ್ಯಕರ ಸ್ಪೇಸ್ ಅನ್ನೂ ಅಲ್ಲಗಳೆಯುವಂತಾಗುತ್ತದೆ.

ಆಕೆ ಯಾರನ್ನಾದ್ರೂ ನೋಡುತ್ತಿದ್ದಾಳಾ?

ಬ್ರೇಕ್ಅಪ್ ನಂತರ ಒಂದು ತಿಂಗಳ ಅವಧಿಯಂತು ನಿಜಕ್ಕೂ ಮುಜುಗರ ತರುವಂಥದ್ದು. ಅವರ ಕುಟುಂಬದ ಬಗ್ಗೆ ಕೂಡ ನೀವು ತಿಳಿದುಕೊಂಡಿರ್ತೀರಾ, ಆಗ ಆತ ಹಳೆಯದನ್ನೆಲ್ಲ ಮರೆತು ಆರಾಮವಾಗಿದ್ದು, ನಿಮ್ಮಿಂದ ಅದು ಸಾಧ್ಯವಾಗದೇ ಇದ್ರೆ ಮಾನಸಿಕವಾಗಿ ಕುಗ್ಗಿ ಹೋಗಬಹುದು. ಅಕಸ್ಮಾತ್ ನಿಮ್ಮದೇ ಕಚೇರಿಯ ಇನ್ನೊಬ್ಬಳೊಂದಿಗೆ ಆತ ಡೇಟಿಂಗ್ ಶುರು ಮಾಡಿದ್ರೆ ನಿಮಗೆ ಅದಕ್ಕಿಂತ ಮುಜುಗರ ತರುವ ಸಂಗತಿ ಇನ್ನೊಂದಿಲ್ಲ.

ಎರಡು ಜಗತ್ತನ್ನು ಬೆರೆಸಬೇಡಿ

ಸಹೋದ್ಯೋಗಿಯನ್ನು ಪ್ರೀತಿಸಿದ್ರೆ ನಿಮ್ಮ ಮಧ್ಯೆ ಮಾತಿಗೇನೂ ಬರವಿಲ್ಲ. ನಿಮ್ಮ ಕೆಲಸ, ಕಚೇರಿ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗಿರುತ್ತೆ. ನಿಮ್ಮ ಜೊತೆಗೆ ಅವರು ಹೆಚ್ಚು ಸಮಯ ಕಳೆಯುತ್ತಾರೆ. ಇದು ಪ್ಲಸ್ ಪಾಯಿಂಟ್ ಎನಿಸಿದ್ರೂ, ಬೇರೆ ವಿಷಯಗಳ ಬಗ್ಗೆ ಮಾತನಾಡುವ ಅವಕಾಶ ಕಡಿಮೆಯಾಗಬಹುದು, ಹೊಸದನ್ನು ಕಲಿಯಲು ಸಾಧ್ಯವಾಗದೇ ಇರಬಹುದು. ಕಚೇರಿಯಿಂದ ಹೊರಗಿರುವ ಬದುಕು ನಿಮಗೆ ತಿಳಿದಿರುವುದಿಲ್ಲ. ದಿನದ 24 ಗಂಟೆಗಳಲ್ಲಿ 8 ಗಂಟೆಗಳನ್ನು ಹೇಗೆ ಕಳೆದಿರುತ್ತೀರೋ, ಅದೇ ರೀತಿ ಉಳಿದ 13 ಗಂಟೆಗಳನ್ನು ಕಳೆಯುತ್ತೀರಾ.

ಹಾಗಂತ ಈಗಾಗ್ಲೇ ನಿಮ್ಮ ಸಹೋದ್ಯೋಗಿಗಳನ್ನು ಪ್ರೀತಿಸ್ತಾ ಇದ್ರೆ, ಅಥವಾ ಮದುವೆ ಆಗಿದ್ರೆ ಅವರನ್ನು ದ್ವೇಷಿಸಬೇಡಿ. ನಾವು ಮೇಲೆ ವಿವರಿಸಿದ ಲೆಕ್ಕಾಚಾರಗಳನ್ನೆಲ್ಲ ಸುಳ್ಳಾಗಿಸಿದ್ರೆ ಸಾಕು, ಸಂತಸದ ಬದುಕು ನಿಮ್ಮದಾಗುತ್ತೆ. 

ಇದನ್ನೂ ಓದಿ...

24x7 ಆರೋಗ್ಯಕ್ಕಾಗಿ 24x7 ಸೇವೆ ನೀಡುವ ಆ್ಯಪ್..!

ರೈತರ ಆತ್ಮಹತ್ಯೆ ತಡೆಗೆ ಜಲಜಾಗೃತಿ ಅಭಿಯಾನ : 17 ನದಿಗಳಿಗೆ ಮರುಜೀವ ಕೊಟ್ಟ ಮುಂಬೈ ಯುವಕರು  

    Share on
    close